ದೇಹಾಲಯ ಮತ್ತು ದೇಗುಲ
ಗಿರಿಜಾ ಎಂ ಆರ್
ಮೊನ್ನೆ ಮೊನ್ನೆ ಥಾಯ್ಲ್ಯಾಂಡಿನ ಚಿಯಾಂಗ್ಮಯಿಗೆ ಕೆಲಸದ ನಿಮಿತ್ತ ಹೋಗಿ ಸ್ವಲ್ಪ ದಿನ ಇರಬೇಕಾಗಿ ಬಂತು. ಆ ಊರ ತುಂಬಾ ದೇವಸ್ಥಾನಗಳೋ ದೇವಸ್ಥಾನಗಳು. ತಲೆ ಎತ್ತಿದರೆ ಒಂದಲ್ಲಾ ಒಂದು ಬೌದ್ಧ ದೇವಾಲಯದ ಗೋಪುರ ಕಂಡೇ ಕಾಣುತ್ತೆ. ದಿನಾ ಒಂದೊಂದು ದೇವಾಲಯ ನೋಡೋಕೆ ಹೋಗ್ತಾ ಇದ್ದೆ. ವಾಟ್ ಇಂತಕಾನ್ ಅನ್ನೋ ದೇವಾಲಯಕ್ಕೆ ಹೋದಾಗ ಅಲ್ಲೊಂದು ಬೋರ್ಡ್ ಇತ್ತು. ‘ಹೆಂಗಸರಿಗೆ ಪ್ರವೇಶವಿಲ್ಲಾ’ ಅಂತ. ಗಂಡಸರೆಲ್ಲಾ ನನ್ನ ಮುಂದೆಯೇ ಒಳ ಹೋಗ್ತಾ ಇದ್ರೆ, ನಾನು ಎತ್ತಿದ ಕಾಲನ್ನು ಅಲ್ಲೇ ವಾಪಸ್ ಇಟ್ಟು ಬೆರಗಿನಿಂದ ಮತ್ತೆ ಬೋರ್ಡ್ ನೋಡಿದೆ. ಸರಿಯಾಗೇ ಓದಿದ್ದೆ. ಅಯ್ಯೋ ದೇವ್ರೇ, ನಮ್ಮ ದೇಶದ ರಾಮ, ಸೀತೆ, ಪಾರ್ವತಿ, ಗಣೇಶ ಬರಿ ಇವರೇ ಇಂಥ ಅನ್ಯಾಯ ಮಾಡ್ತಾರೆ ಅಂದ್ರೆ ಇದೇನು ನಮ್ಮ ಬುದ್ಧ ಕೂಡ ಹೀಗೆ ಪಕ್ಷಪಾತ ಮಾಡಬಹುದಾ ಅಂತ ಮತ್ತೆ ತಣ್ಣನೆಯ ವಿಷಾದದಿಂದ ಬೋಡರ್್ ನೋಡಿದೆ. ಇಂಥದರಲ್ಲೆಲ್ಲಾ ನಂ. 1 ಜಾಗದಲ್ಲಿ ನಿಲ್ಲುವ ನಮ್ಮ ಶಬರಿಮಲೆ ಅಯ್ಯಪ್ಪಂಗೇ ಬುದ್ಧ ಇಲ್ಲಿ ಪೈಪೋಟಿ ಕೊಡ್ತಾ ಇದ್ದ. ಆರ್ಡಿನರಿ ದೇವಾಲಯಗಳಲ್ಲಿ ಬರೀ ಪೀರಿಯಡ್ಸ್ ನ ಆ ಒಂದು ವಾರ ಮಾತ್ರ ಪ್ರವೇಶ ನಿರಾಕರಿಸಿದರೆ, ಇಲ್ಲಿ ಪೀರಿಯಡ್ಸ್ ಆಗೋ ದೇಹ ಎಂದೆಂದಿಗೂ ಅಂಥ ಪವಿತ್ರ ಜಾಗಕ್ಕೆ ಹೋಗೋಕೆ ಅನರ್ಹ ಅಂತ ಹೆಂಗಸರಿಗೆ ಎಂದಿಗೂ ಅಲ್ಲಿಗೆ ಪ್ರವೇಶವಿಲ್ಲ.
ಬೇಕೋ ಬೇಡವೋ ನಿಯಮಿತವಾಗಿ ಹೆಣ್ಣಿನ ದೇಹದಲ್ಲಿ ಸಂಭವಿಸುವ ಒಂದು ಪರ್ವ ಪಿರಿಯಡ್ಸ್. ದೇಹದಲ್ಲಿ ಅಂಡಾಣು ಉತ್ಪತ್ತಿಯಾಗಿ ಸಂತಾನ ಹೊಂದಲು ಸಿದ್ಧವಾಗಿರುತ್ತದೆ. ಈಗ ದೇವಾಲಯದ ಬಾಗಿಲಲ್ಲಿ ನಿಂತ ಹೆಣ್ಣು ಜೀವಗಳನ್ನು ಒಳಗೆ ಹೋಗದಂತೆ ತಡೆದಿರುವ ವ್ಯವಸ್ತೆಯ ಪುರುಷ ಜೀವಗಳೂ ಈ ಅಂಡಾಣು, ಹೆಣ್ಣು ಗರ್ಭದಲ್ಲಿ ವೀರ್ಯದ ಜೊತೆ ಸೇರಿ ಮನೆ ಮಾಡಿದ ಮೇಲೆ ಹುಟ್ಟಿದ ಸಂತಾನವಲ್ಲವೇ? ಅಂದರೆ ಈ ಪುರುಷ ಲೋಕ ಇಷ್ಟೇನಾ ಹೆಣ್ಣು ಜೀವದ ದೇಹದ ಬಗ್ಗೆ ತಿಳಿದಿರೋದು? ದೇಹ ಅಂದರೆ ಅದು ಬರುವುದು ಹೆಣ್ಣಿನ ಮೂಲಕವೇ, ಅಂದ ಮೇಲೆ ತಾಯಿ ಪವಿತ್ರ ಅನ್ನುವ ನಾವು ಅವಳಂಥ ನೂರಾರು ಹೆಣ್ಣು ಜೀವಗಳು, ಹೆಣ್ಣು ದೇಹದೊಳಗೆ ಇವೆ ಎಂಬ ಒಂದೇ ಕಾರಣಕ್ಕೆ ಪ್ರವೇಶ ನಿರ್ಬಂಧಿಸೋದು ವಿಚಿತ್ರವೆನಿಸಿತು. ಸಂಸ್ಕೃತಿಯು ನಿಮರ್ಿಸುವ ದೇಹಮೀಮಾಂಸೆಯ ಕಟ್ಟು ಕಟ್ಟಳೆಗಳು ಎಷ್ಟು ಸೂಕ್ಷ್ಮವಾಗಿ ಬೇಕು, ಬೇಡಗಳನ್ನು ಹೇರುತ್ತಿರುತ್ತವೆ! ಧರ್ಮಗಳ ಇತಿಹಾಸ ನೋಡಿದರೂ ದೇವರ ಸಾಕಾರ ರೂಪ ಅಂತ ತೆಗೆದುಕೊಂಡರೆ ಅಲ್ಲಿ ಹೆಣ್ಣು ದೇವತೆಗೇ ಪ್ರಾಧಾನ್ಯತೆ. ಮಾತೃದೇವತಾ ಸ್ವರೂಪದ ಕೇಂದ್ರದ ಸುತ್ತಲೇ ದೇವತೆಗಳ ಲೋಕ ನಿಂತಿರುವುದು. ಆದರೆ ವಾಸ್ತವದ ನೆಲೆಯಲ್ಲಿ ಹೆಣ್ಣು ಜೀವಗಳು ಈ ದೇಗುಲಗಳ ಒಳಗೆ ಹೋಗದಿರುವಂಥ ವಿಪರ್ಯಾಸ ಇದೆ.
ಈಚೆಗೆ ಕೆಲಸದ ಮೇಲೆ ಜಪಾನ್ಗೆ ಹೋಗಬೇಕಾಗಿ ಬಂತು. ಅಲ್ಲಿನ ನನ್ನ ಸಹೋದ್ಯೋಗಿಯೊಬ್ಬರ ಜೊತೆ ಹಾಗೇ ಲೋಕಾರೂಢಿಯಾಗಿ ಥಾಯ್ಲ್ಯಾಂಡಿನ ದೇವಾಲಯದ ಬಗ್ಗೆ ಹೇಳಿದೆ. ಆಕೆ ಮತ್ತೊಂದು ಕುತೂಹಲಕಾರಿಯದ ಸಂಗತಿಯನ್ನು ಹೇಳಿದರು. ಜಪಾನಿನಲ್ಲಿ ಷಿಂಟೋ ಧರ್ಮಕ್ಕೆ ಸೇರಿದ ಒಂದು ಬೆಟ್ಟ ಇದೆ. ಆ ಬೆಟ್ಟದ ಒಂದು ಭಾಗ ತುಂಬಾ ಪವಿತ್ರ ಅಂತ ಪರಿಗಣಿಸುತ್ತಾರಂತೆ. ಅಲ್ಲಿಗೂ ಕೂಡ ಹೆಣ್ಣುಮಕ್ಕಳಿಗೆ ಪ್ರವೇಶವಿಲ್ಲ. ಪವಿತ್ರ ಅಂತ ಈಗಲೂ ಬರಿ ಹೆಣ್ಣು ಮಕ್ಕಳಿಗೆ ಹೆಸರಿಡುವುದು. ಪವಿತ್ರ ಅಂದರೆ ಏನು? ಈ ಕಲ್ಪನೆ ನಿಸರ್ಗದಲ್ಲಿ ಇಲ್ಲ. ಸದಾ ಮಿಲನ, ಸಂತಾನ, ಸಾವು, ಹೋರಾಟಗಳ ರಣರಂಗವಾಗಿರುವ ನಿಸರ್ಗವಿವೇಕದಲ್ಲಿ ಪವಿತ್ರ-ಅಪವಿತ್ರಗಳಿಗೆ ಎಡೆ ಇಲ್ಲ. ಬಹಳ ಧಾರ್ಮಿಕ ಅಂತ ಕರೆಯುವ ಈ ಪ್ರದೇಶದಲ್ಲಿ ಈ ಕ್ಷಣಕ್ಕೂ ಪ್ರಕೃತಿ ಹಡೆಯುತ್ತಿದೆ. ಆದರೆ ಮನುಷ್ಯ ಲೋಕಕ್ಕೆ ಬಂದರೆ ಈ ಮುಟ್ಟು-ಚಟ್ಟುಗಳ ವಿಧಿ ವಿಧಾನಗಳು ನಿಸರ್ಗದ ಸಹಜ ಭಾಗವೇನೋ ಅನ್ನುವ ಹಾಗೆ ಸಲೀಸಾಗಿ ದೇಹವನ್ನು ಇದು ಪವಿತ್ರ ದೇಹ- ಅಪವಿತ್ರ ದೇಹ ಎಂದು ವಿಂಗಡಿಸುತ್ತವೆ.

ಇದೇ ತರಹ ಅದೆಷ್ಟು ಸಂಸ್ಕೃತಿಗಳಲ್ಲಿ ಅದೆಷ್ಟು ದೇಶಗಳಲ್ಲಿ ಹೀಗೆ ಹೆಣ್ಣನ್ನು ಹೊರಗಿಡುವ ಪದ್ಧತಿ ಇದೆಯೋ. ಹುಡುಕುತ್ತಾ ಹೋದರೆ ಖಂಡಿತಾ ಬೇಕಾದಷ್ಟು ಕೇಸು ಸಿಗುತ್ತೇನೋ. ಇದು ದೇಹವನ್ನು ಗುಡಿಯ ಒಳಗೆ ಬರಬೇಡ ಎಂದು ಸಮಾಜ, ವ್ಯವಸ್ಥೆ ತಡೆದು ನಿಲ್ಲಿಸುವ ಕ್ರಮಗಳು. ಆದರೆ ಇದಕ್ಕಿಂತ ಸೂಕ್ಷ್ಮವಾದ ಮುಖವೆಂದರೆ ಹೆಣ್ಣು ತಾನೇ ತನ್ನ ಅಸ್ತಿತ್ವದ ಸಹಜ ನೈಸಗರ್ಿಕ ಕ್ರಿಯೆಗಳನ್ನು, ದೇಹದೊಳಗಿನ ಏರಿಳಿತಗಳನ್ನು ಮುಜುಗರದಿಂದ ಕಾಣುವುದು. ಇದು ದೇಹವನ್ನು ದೇಗುಲದೊಳಗೆ ಬರಬೇಡ ಎಂದು ತಡೆಯುವ ಹೊರಗಿನ ತಡೆಗಿಂತಲೂ ಅಪಾಯಕಾರಿ ಮತ್ತು ಸೂಕ್ಷ್ಮ. ಗೊತ್ತೇ ಇಲ್ಲದೆ ಹೆಣ್ಣು ತನ್ನ ದೇಹವನ್ನು ಅಪವಿತ್ರ ಎಂದು ಈ ಆಯಾಮದಲ್ಲಿ ಒಪ್ಪುತ್ತಿರುತ್ತಾಳೆ.
ನಮ್ಮ ಮನೆಯಲ್ಲಿ ಹಬ್ಬಗಳನ್ನು ಮಾಡುವುದೇ ವಿರಳ. ಆದರೆ ಮಗಳು ಇರುವ ಕಾರಣಕ್ಕೆ ವರ್ಷಕ್ಕೊಮ್ಮೆ ಹಬ್ಬದ ಸಡಗರ ತಂದುಕೊಳ್ಳುವುದಕ್ಕಾಗಿ ಗೌರಿ ಗಣೇಶ ಆಚರಿಸುತ್ತೇವೆ. ಕಳೆದ ಸಲದ ಹಬ್ಬದಲ್ಲಿ ನಮ್ಮ ಅಪಾರ್ಟಮೆಂಟಿನ ಹೆಣ್ಣುಮಕ್ಕಳನ್ನು ಅರಿಶಿಣ ಕುಂಕುಮದ ನೆಪದಲ್ಲಿ ಮನೆಗೆ ಕರೆದಾಗ 3-4 ಜನ ‘ಬರೋಕ್ಕಾಗಲ್ಲ. ನಂಗೆ ಪೀರಿಯಡ್ಸ’ ಅಂದರು. ನಾನು ‘ಸೋ ವಾಟ್, ನನಗೆ ಅದರಲ್ಲೆಲ್ಲಾ ನಂಬಿಕೆ ಇಲ್ಲ. ನನಗೇ ಪ್ರಾಬ್ಲಮ್ ಇಲ್ಲದ ಮೇಲೆ ನಿನಗೆ ಏನು ಬಾ’ ಅಂತ ಕರೆದರೆ ಅವರಲ್ಲಿ ಇಬ್ಬರು’ಇಲ್ಲ ಹಾಗೆಲ್ಲ ಮಾಡೋಕಾಗುತ್ತಾ? ಗಣೇಶ, ಗೌರಿ ಇಬ್ಬರಿಗೂ ತುಂಬಾ ಮಡಿ ಅಂತೆ. ಸಾರಿ’ ಅಂದರು. ‘ಅಯ್ಯೋ ಗೌರಿ ಹೆಣ್ಣು ತಾನೆ, ಇದೆಲ್ಲಾ ಅವಳಿಗೂ ಅರ್ಥ ಅಗುತ್ತೆ ಬನ್ನಿ ಅಂತ ನಾನು ಥರಥರವಾಗಿ ನನ್ನ ವಾದ ಮಂಡಿಸಿದ್ದೇ ಬಂತು. ನನಗೆ ಆ ನಾಲ್ಕು ಜನರಲ್ಲಿ ಒಬ್ಬರನ್ನೂ ಒಪ್ಪಿಸೋಕೆ ಆಗಲಿಲ್ಲ. ಅಷ್ಟಕ್ಕೂ ಆ ನಾಲ್ಕೂ ಜನ ಸಿಕ್ಕಾಪಟ್ಟೆ ‘ಮಾಡ್’ ಹುಡುಗಿಯರು. ತುಂಡುಲಂಗ ತೊಡುವವರು, ಐ ಫೋನ್ ಬಳಸಿ, ವಾಟ್ಸಯಾಪ್ ನಲ್ಲಿ ನಾನ್ ವೆಜ್ ಜೋಕ್ಸ್ ರವಾನಿಸಲು ಮುಜುಗರಪಡದವರು. ಒಂದಿಬ್ಬರು ವೀಕೆಂಡ್ನಲ್ಲಿ ಲೇಟ್ನೈಟ್ ಪಾರ್ಟಿ ಮಾಡುವವರು.
ಇಷ್ಟೆಲ್ಲಾ ಯಾಕೆ ಹೇಳಿದೆ ಅವರ ಬಗ್ಗೆ ಅಂದರೆ, ಆರ್ಥಿಕವಾಗಿ ಸ್ವತಂತ್ರರಾಗಿಯೂ, ಬೇರೆಲ್ಲಾ ರೀತಿಯಲ್ಲಿ ಮುಂದುವರೆದವರಾಗಿಯೂ ಇರುವ ಅವರನ್ನು ಈ ಮುಟ್ಟು ತಟ್ಟಿನ ವಿಷಯ ಬಂದಾಗ ಮಾತ್ರ ಯಾವುದು ತಡೆಯುತ್ತೆ ? ಅದು ಮೆಂಟಲ್ ಬ್ಲಾಕ್ ಇರಬಹುದಾ? ಈ ಥರ ವಿಷಯ ಬಂದಾಗ ನಾನು ಅನೇಕರನ್ನು ನನ್ನ ಕಡೆಗೆ ಕನ್ವರ್ಟ ಮಾಡಲು ತುಂಬಾ ಪ್ರಯತ್ನಿಸಿ ಸೋತಿದೀನಿ. ನಾನು ಹೇಗೆ ಪೀರಿಯಡ್ಸ್ ಟೈಮ್ನಲ್ಲಿ ದೇವಸ್ಥಾನಗಳಿಗೆ ಹೋಗೋಕೆ ಹಿಂದೆ ಮುಂದೆ ನೋಡಲ್ಲ ಅಂತ ಹೇಳಿ ಕೆಟ್ಟವಳಾಗಿದೀನಿ. ಕೆಲವರು, ಇಂತಹ ಪಾಪಕಾಂಡ ಮಾಡಿದ ನನಗೆ ಏನೇನು ಅನಾಹುತ ಕಾದಿದೆ ಅಂತ ದೊಡ್ಡ ಪಟ್ಟಿನೇ ಕೊಟ್ಟಿದಾರೆ. ಇದು ನಿನಗಾಗಿ ಅಲ್ಲದಿದ್ದರೂ ಬೇರೆಯವರಿಗಾಗಿ ನಿಯಮ ಪಾಲಿಸಬೇಕು, ‘ಬೇರೆಯವರ’ ಮನಸ್ಸಿಗೆ ನೋವಾಗುತ್ತದೆ ಅಂತ ಕೆಲವರು ಹೇಳುತ್ತಾರೆ. ಮನುಷ್ಯ ಮಾತ್ರರ ದೇಹಗಳು ಎಂದಾದರೂ ಅಪವಿತ್ರ ಆಗಬಹುದು ಎಂದು ನಾನು ಒಪ್ಪದಿರುವಾಗ ನನಗೆ ಈ ಪ್ರಶ್ನೆಯೇ ಬರುವುದಿಲ್ಲ.
ನಾನು ಸಣ್ಣವಳಿದ್ದಾಗ ಹಳ್ಳಿಯಲ್ಲಿ ಬೆಳೆದವಳು. ನಮ್ಮ ಹೊಲದಲ್ಲಿ ಒಂದು ಶಿವನ ಗುಡಿ ಇತ್ತು. ಅದು ನಮ್ಮ ಅಜ್ಜನ ಅಜ್ಜನ ಕಾಲದಿಂದಲೂ ಇತ್ತಂತೆ. ಅದರ ಪಕ್ಕ ಹಾವು ಬಂದು ಕುರುಹು ಕೊಟ್ಟು ಆ ಜಾಗ ಅಗೆದಾಗ ಅದರಲ್ಲಿ ನನ್ನ ಮುತ್ತಜ್ಜನಿಗೆ ಒಂದು ನಿಧಿ ಸಿಕ್ಕಿತ್ತಂತೆ. ಆ ಗುಡಿ, ಅದರ ಮಹಿಮೆ, ಗುಡಿಯ ಒಳಹೊರಗೆ ಆಡುವ, ಕಾಯುವ ನಾಗಮಹಿಮೆ ಇವೆಲ್ಲಾ ಆಗ ನಮಗೆ ಭಯಭಕ್ತಿಯಲ್ಲಿ ಮುಳುಗಿಸುತ್ತಾ ಇದ್ದವು. ಅದರ ಬಗ್ಗೆ ಹತ್ತೆಂಟು ಕತೆಗಳೂ ಓಡಾಡುತ್ತಾ ಇದ್ವು. ನಮ್ಮ ಅಜ್ಜ ಅದರ ಒಂದು ಪಾತ್ರವಾಗಿಯೂ ಇದ್ದದ್ದರಿಂದ ಅವೆಲ್ಲಾ ಬರೀ ಕತೆಯಾಗದೇ ನಿಜದ ಕತೆಗಳಾಗಿದ್ದವು. ನಮ್ಮೂರಲ್ಲಿ ಮುತ್ತು ಅಂತ ಒಬ್ಬಳಿದ್ದಳು. ಗುಡಿಯ ಜಗಲಿಗೆ ಒರಗಿ ಕುಳಿತಿದ್ದ ನನ್ನ್ ಅಜ್ಜನ ಕರೆಯೋಕೆ ಅಂತ ಪೀರಿಯಡ್ಸ್ನಲ್ಲಿದ್ದ ಅವಳು ಅಲ್ಲಿಗೆ ಹೋಗಿದ್ದಳಂತೆ. ಗುಡಿಯ ಬಾಗಿಲಿಗೆ ಹೋಗಿ ‘ಮಾವಾ..’ ಅಂಥ ಕರೆದಿದ್ದೇ ತಡ, ಒಂದು ನಾಗರ ಬಾಗಿಲಿಗೆ ಅಡ್ಡವಾಗಿ ಭುಸ್ ಅಂತ ನಿಂತು ಬಿಟ್ಟಂತೆ. ಅವಳು ‘ಯಪ್ಪಾ ನಾನು ಕೆಟ್ಟೇ’ ಅಂತ ಓಡಿ ಬಂದಳಂತೆ.
ಇದು 40 ವರ್ಷದ ಹಿಂದಿನ ಕತೆ. ಆದರೆ ಇವತ್ತಿಗೂ ಸಮಾಜ ಮತ್ತು ಹೆಣ್ಣಿನ ಮನಸ್ಸಿನ ಹೊಸ್ತಿಲಿನಲ್ಲಿ ದಾಟಲಾರದ ಸಂಕಟವೊಂದಿದೆ. ಅಲ್ಲಿ ಒಳಗೆ ಬರಬೇಡವೆಂಬ ನಿಷೇಧ ಹೆಡೆಯಾಡುತ್ತಲೇ ಇದೆ.
ದೇಹವನ್ನು ಕುರಿತು ಸಮಾಜ ಮಾಡಿಕೊಂಡು ಬಂದಿರುವ ವ್ಯಾಖ್ಯಾನಕ್ಕೆ ಆಯಾ ಕಾಲದ ತುತರ್ುಗಳಿರುತ್ತವೆ. ಅವು ಕ್ರಮೇಣ ಕಾಲಬಾಹಿರವಾಗುತ್ತವೆ.ಕಸುವು ಕಳೆದುಕೊಂಡಿರುವ ಆಚರಣೆಯ ಹಗ್ಗವನ್ನು ಜಗ್ಗಿದರೆ ಅದು ತುಂಡಾಗುತ್ತದೆ. ‘ಮುಂದುವರೆದ’ ಮಹಿಳೆಯರು ಇರುವ ನಗರದಲ್ಲೇ ದೇಹದ ಪ್ರಶ್ನೆ ಹೀಗೆ ಮುಜುಗರಕ್ಕೆ ಒಳಗಾದರೆ ಇನ್ನು ನಮ್ಮ ಹಳ್ಳಿಗಳ ದೇಹಯಾತನೆ ಹೇಗಿರಬಹುದು? ‘ನೀನೊಮ್ಮೆ ನನ್ನಂತೆ ಒಡಲುಗೊಂಡು ನೋಡಾ’ ಎಂದು ಪ್ರಾರ್ಥಿಸುವ ಕೋಟ್ಯಂತರ ದೇಹಗಳು ನಿತ್ಯವೂ ಅನುಭವಿಸುವ ಸಾಂಸ್ಕೃತಿಕ ನಿಷೇಧಗಳ ಸರಮಾಲೆಗೆ ಏನು ಉತ್ತರ? ಅರಿವು ಬಲವಾಗಿ ಡಿಕ್ಕಿ ಕೊಟ್ಟಾಗ ಈ ಮಾಲೆ ತುಂಡಾದೀತೇ?






ಲೇಖನ ಅರ್ಥಪೂರ್ಣವಾಗಿದೆ.
olleya chintane. Nimma abhipraayavannu naanu opputtene.
ತುಂಬಾ ಒಳ್ಳೆಯ ಬರಹ .
ಅರಿವು ಬಲವಾಗಿ ಡಿಕ್ಕಿ ಕೊಟ್ಟಾಗ ಈ ಮಾಲೆ ತುಂಡಾದೀತೇ?
Definitely.
Olleya chintane haagu sakalika lekhana.
Naanoo idara bagge ee munche tolalaadiddide – aadre eega kelavu varshagalinda atleast I am clear!!
noorakke nooru satya nimma avalokane. Estu mod agiruvavaru kooda ee vishyadalli badalagalla andre estu aaladalli berooride moodanambike alva.
Nice article about gender apartheid.
ಬರಹಗಳು ಈ ರಿತಿಯ ವಾಸ್ತವಕ್ಕೆ ತೆರೆದುಕೊಂಡಾಗ ಮಾತ್ರ ನಿಧಾನವಾಗಿ ಜಡ್ಡುಗಟ್ಟಿರುವ ರೂಢಿಗತ ಮನಸ್ಥಿತಿಗಳು ಮಂದಗತಿಯಲ್ಲಿ ಬದಲಾವಣೆ ಕಾಣಬಹುದು ಎನ್ನಿಸುತ್ತದೆ. ಒಳ್ಳೆಯ ಬರಹ
ಆಳವಾಗಿ ಬೇರೂರಿರುವ ನಂಬಿಕೆಗಳನ್ನು ಕಿತ್ತು ಹಾಕುವುದಿರಲಿ ಅಲುಗಾಡಿಸಲೂ ಆಗದಂತೆ ಕಾಯುವ ಶಕ್ತಿಗಳು ಇರುವವರೆಗೂ ಇದು ಬದಲಾಗದು. ಆದರೆ ಬದಲಾಯಿಸುವ ಪ್ರಯತನ್ನ ನಿರಂತರವಾಗಿರಲಿ ಆಶಾವಾದಿಗಳಾಗೋಣ….