ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀನಿಲ್ಲದೇ ಅರ್ಥಾತ್ 'ನಿನ್ನಿಂದಲೇ'..

ನೀತಾ ರಾವ್

ಬೆಳಗಿನ ಟೈಮೇನು ನಿಂತಲ್ಲೇ ನಿಲ್ತದ? ಕಾಲಿಗೆ ಘಾಲಿ ಕಟಗೊಂಡು ಓಡತಿರ್ತದ. ಅಂಥಾದ್ದರಾಗ ಒಂಬತ್ಯಾವಾಗ ಆತು ಗೊತ್ತ ಆಗಲೇ ಇಲ್ಲ.
ಯಾಕಂದ್ರ ಒಂಬತ್ತಕ್ಕ ಢಣ್ ಅಂತ ಘಂಟಿ ಹೊಡಧಂಗ ಬರೋ ಒ.S. ಸುಮಾ ಬಂದಿರಲೇ ಇಲ್ಲ.
ಒಂಬತ್ತೂವರಿ ಆತು, ಆಕಿ ಸದ್ದು-ಸುಳಿವು ಕಾಣಲಿಲ್ಲ. ಟೆನ್ಶನ್ ಮಾಡಕೋತನ ಒಳಗಿಂದೊಳಗ ಕೊತಕೊತ ಕುದಕೋತ ಎಲ್ಲಾ ಕೆಲಸಾ ಅರ್ಥಾತ್ ಎಷ್ಟೆಷ್ಟ ಬೇಕೋ ಅಷ್ಟಷ್ಟ ಕೆಲಸಾ ಮಾಡಿ, ತಂದೂ ಒಂದ್ಸಲ್ಪ ಸ್ವಂತದ್ದು ಮೇಕಪ್ಪು ಮಾಡಕೊಂಡು – ಮೇಕಪ್ಪ ಅಂದ್ರ ಬ್ಯಾರೆ ಏನಿಲ್ಲ, ಒಂದಿಷ್ಟು ಪೌಡರ ಬಡಕೊಂಡು – ಮೈಯಾಗ ಏರಂಗಿಲ್ಲಂದ್ರ ಏರಂಗಿಲ್ಲಂತ ಹಟ ಹಿಡದ ಕೂತ ಬ್ಲೌಸಿನ ತೋಳು ಏರಿಸಿಕೊಂಡs ಖರೆ ಆಗಿ ಡಬ್ಬಿ ಒಂದಿಷ್ಟು ಕಟಗೊಂಡು ನಮ್ಮ ಅಂಬಕ್ಕ ಹೊಂಟಬಿಟ್ಳು ತನ್ನ ಆಫೀಸಿಗೆ.
ಅಲ್ಲಾ ಈ ಸುಡಗಾಡ ಸುಮ್ಮಿ ಇಷ್ಟೊತ್ತಾದ್ರೂ ಯಾಕ ಬರ್ಲಿಲ್ಲ ಇವತ್ತ? ನಿನ್ನೆ ಅಂತೂ ಏನೇನೂ ಹೇಳೀಲ್ಲ. ಏನ ಹೇಳ್ತಾಳ ದ್ಯಾಮವ್ವನ ಜಾತ್ರ್ಯಂತ ಹೋದವಾರನs ಮೂರು ದಿನಾ ಚಕ್ಕರ ಹೊಡದಾಳ, ಇನ್ನ ಈ ವಾರ ಯಾವ ಜಾತ್ರಿ ಬಂತೋ ಏನೋ! ಹೇಳದ ಕೇಳದ ತಪ್ಪಿಸಿಬಿಡೋದು, ಆಮ್ಯಾಲೆ ಬಂದು ಮಳ್ಳೀ ಗತೆ ತಲಿ ಕೆಳಗ ಹಕ್ಕೊಂಡು ಕೆಲಸಾ ಮಾಡಲಿಕತ್ತಬಿಡೋದು. ಒಂದ ಸ್ವಲ್ಪರೇ ಪ್ರೊಫೆಶನಾಲಿಸಂ ಬೇಕೋ ಬ್ಯಾಡೋ ಅಂತ ಮನಸ್ಸಿನ್ಯಾಗ ಬೈಕೋತ ಬೈಕೋತ ಅಂತೂ ಆಫೀಸಿಗೆ ಹತ್ತ ನಿಮಿಷ ಲೇಟಾಗಿ ಹೋಗಿ “ಈ ಸುಡಗಾಡು ಬಯೋಮೆಟ್ರಿಕ್ ಒಂದು” ಅಂತ ಅದನ್ನೂ ಬೈಕೋತ ಅದರಾಗೊಂದು ಬೆರಳು ಒತ್ತಿ ಧಸಕ್ಕ ಅಂತ ತನ್ನ ಸೀಟಿನ್ಯಾಗ ವಿರಾಜಮಾನ ಆದ್ಳು ನಮ್ಮ ಅಂಬಕ್ಕ.

ಮೈಯೇನೋ ಆಫೀಸಿನ ಸೀಟಿನ್ಯಾಗ ಫುಲ್ ಸೀಟಾಗಿ ಕೂತಿತ್ತು. ಆದರ ಮನಸ್ಸೊಂದು ಕೇಳಬೇಕಲಾ, ಅದು ಮತ್ತ ಅಂಡಲಕೋತ ಮನಿಕಡೆನs ಹೋತು. ಇನ್ನ ಇಷ್ಟೊತ್ತಿಗೇನರೆ ಈ ಸುಮ್ಮಿ ಬಂದು ಬಾಗಲಾ ಬಡದ್ರ ತಗೀಲಿಕ್ಕೆ ಯಾರಿರ್ತಾರ ಮನ್ಯಾಗ, ಬಂದಾಳರೇ ಇಲ್ಲೋ ಯಾರಿಗ್ಗೊತ್ತು? ಇನ್ನ ಇಲ್ಲಿ ದುಡುದು ಹೈರಾಣಾಗಿ ಮನಿಗೆ ಹೋದ್ರ ಒಂದ್ಹತ್ತ ನಿಮಿಷ ಕೂತು ಸುಧಾರಿಸಿಕೊಳ್ಳೋ ಹಂಗೂ ಇಲ್ಲ ನನ್ನ ನಶೀಬದಾಗ. ಕಸಾ-ಮುಸುರಿ, ಒಗ್ಯೋ ಅರಿವಿ ಎಲ್ಲಾ ನನ್ನ ಹಾದೀನ ನೋಡಕೋತ ಬಿದ್ದಿರ್ತಾವ.
ಹೆಣ್ಣಾಗಿ ಹುಟ್ಟಬಾರ್ದವಾ ಈ ದೇಶದೊಳಗ. ಹೊರಗೂ ದುಡೀರಿ, ಮನ್ಯಾಗೂ ದುಡೀರಿ, ಒಟ್ಟು ದುಡುದು ದುಡುದು ಸಾಯ್ರಿ, ಯಾರೂ ಸುಖಾ-ದುಃಖಾ ಕೇಳಂಗಿಲ್ಲ. ಗಂಡಸರು ಮಾತ್ರ ಇಡೀ ಮನಿ ಹೊಲಸು ತಿಪ್ಪಿ ಗುಂಡಿ ಆಗಿರ್ಲಿ, ಮುಸರಿ ಭಾಂಡಿ ವಾಸನಿ ಹೊಡೀತಿರ್ಲಿ, ಉಟಗೊಂಡು ತಗದ ಒಗದ ಅರಿವಿ ಸೋಫಾ ಮ್ಯಾಲೆ, ಕಾಟ್ ಮ್ಯಾಲೆ ಎಲ್ಲೆಂದರಲ್ಲೆ ಬಿದ್ಯಾಡತಿರ್ಲಿ, ತಮಗ ಅದಕ್ಕ ಸಂಬಂಧನs ಇಲ್ಲ ಅನ್ನಾವ್ರಹಂಗ ನಿಶ್ಚಿಂತಿಯಿಂದ ಅನಂತಶಯನನ ಗತೆ ಆರಾಮಾಗಿ ಮಲಕ್ಕೊಂಡು ಟಿ.ವ್ಹಿ. ನೋಡತಿರ್ತಾತ. ಆ ದೇವ್ರರೇ ಅದೆಂಥಾ ಗುಂಡಕಲ್ಲು ನೋಡಿ ನೋಡಿ ಈ ಗಂಡಸರ್ನ ತಯಾರ ಮಾಡ್ಯಾನೋ ಏನೋ!
ಇಷ್ಟೆಲ್ಲಾ ಒದ್ಯಾಟ, ಹೊಯ್ದಾಟ ಯಾಕಂತ ನಿಮಗ ಈಗಂತೂ ಗೊತ್ತಾಗಿರಲಿಕ್ಕೇ ಬೇಕು. ಹೌದು, ಅಂಬುಜಾ ಅನ್ನೋ ಈ ಹೆಣ್ನುಮಗಳ ಮನಿ ಕೆಲಸದಾಕಿ ಅಂದ್ರ ಮೇಡ್ ಸರ್ವಂಟ (ಒ.S.) ಸುಮಾ ಇವತ್ತ ಕೆಲಸಕ್ಕ ಬಂದಿಲ್ಲ ಅನ್ನೋದs ಈ ಎಲ್ಲಾ ವಿಪ್ಲವಗಳಿಗ ಕಾರಣ. ಆ ಒ.S. ಸುಮಾ ಅರೇ ಏನು ಅಷ್ಟು ಸೀದಾ ಸಾದಾ ಹೆಣಮಗಳು ಅನಕೊಂಡ್ರ್ಯಾ? ಬಲಿ ಕಿಲಾಡಿ ಹೆಣ್ಣಕಿ. ವರ್ಷದಾಗ ನಾಲ್ಕು ಜಾತ್ರಿ, ಎಂಟ ಮದಿವಿ, ಹತ್ತು ಕುಬುಸಾ, ಇಪ್ಪತ್ತು ಮಣ್ಣು ಕೊಡೋ ಕಾರ್ಯಕ್ರಮ ಅಂತೂ ಒಂಥರಾ ಸರಕಾರಿ ಕಾರ್ಯಕ್ರಮಧಂಗ ಫಿಕ್ಸ್ ಇಟಗೊಂಡಿರ್ತಾಳ.
ಅದರ ಮ್ಯಾಲೆ ಮತ್ತ ಮಕ್ಕಳ ಬರ್ಥಡೇ, ಗಂಡನ ಬರ್ಥಡೇ, ಸತ್ಯನಾರಾಯಣ ಪೂಜಾ, ತಲಿನೋವು, ಬೆನ್ನು ನೋವು, ಜ್ವರಾ, ಥಂಡಿ, ಮಳಿ, ಬಸ್ ಸ್ಟ್ರೈಕು, ಹಿಂಗ ನೂರಾಎಂಟು ಕಾರಣಿರ್ತಾವ ಪಾಪ ಅಕಿಗೆ ಕೆಲಸಾ ತಪ್ಪಸಲಿಕ್ಕೆ. ಎಲ್ಲಾ ಸರಿಯಿದ್ದಾಗ ಮಂದ್ಯರೆ ಏನು ಸಂಡೆನೂ ಸೂಟಿ ಕೊಡಧಂಗ ದುಡಿಸಿ ಕಾಡಸ್ತಾರ ಅಕಿನ್ನ. “ಅಲ್ಲಾ ಇರೋದ ಒಂದು ರೈವಾರ ನಮಗ (ನಿನಗೇನು ಮನಸ್ಸು ಮಾಡಿದಾಗೊಮ್ಮೆ ರೈವಾರ ಅಂತ ಮನಸ್ಸಿನಾಗ ಅನಕೋತ) ಅವತ್ತರೇ ಒಂದಿಷ್ಟು ರೆಸ್ಟು ಮಾಡಣೋರಂದ್ರ ಅವತ್ತ ನೀನೂ ಕೈಕೊಟ್ಟರ ಹೆಂಗ?” ಅಂತ ಮೊದಲ ತಾಕೀದು ಮಾಡಿರ್ತಾರ. ಇಕೀನು ಬೆರಕಿ, ಹಾಂಗ ಸಂಡೇ ಬಂಧಂಗ ಮಾಡಿ ಒಂದಿಷ್ಟು ಭಾವ ಬೆಳಿಸಿಕೊಂಡಿರ್ತಾಳ, ಆ ಮಾತ ಬ್ಯಾರೆ.
ಒಟ್ಟು ಹಿಂಗೆಲ್ಲಾ ಆಗಿ, ಇಕಿ ಇಲ್ದಿದ್ರ ನಡ್ಯಂಗೇ ಇಲ್ಲ ಅನ್ನೋ ಪರಿಸ್ಥಿತಿ ಬಂದ ಬಿಟ್ಟದ. ಮೂಡು ಛೊಲೋ ಇದ್ದಾಗ ಅಂಬಕ್ಕನೂ ’ನೀನಿಲ್ಲದೇ ನನದೇನಿದೆ?’ ಅಂತ ಕಣ್ಣ ಮುಂದ ಆ ಸುಮ್ಮಿದs ಮುಖಾ ತರಿಸಿಕೊಂಡು ಹಾಡ ಅಂತಿರ್ತಾಳ. ಇನ್ನ ಕೆಲವೊಮ್ಮೆ ’ನಿನ್ನಿಂದಲೇ, ನಿನ್ನಿಂದಲೇ, ಕೆಲಸೆಲ್ಲಾ ಹಗುರಾಗಿದೆ’ ಅಂತ ಟ್ಯೂನ್ ಕೊಟ್ಟು ಹಾಡು ಹೇಳ್ತಾಳ. ಆದ್ರ ಆ ಸುಮಾನೂ ಭಾಳ ಬೆರಕಿ ಹೆಣ್ಣಮಗಳು. ಒಂದ ದಿನಾ ಹೇಳಿ ತಪ್ಪಸತಾಳ, ಎರಡನೇ ದಿನಾ ಹೇಳಲಾರದನ ತಪ್ಪಸತಾಳ. ಮೂರನೇ ದಿನಾ ಇನ್ನ ಎಲ್ಲಾರೂ ಫೋನ್ ಮಾಡ್ತಾರ ಬಾ ಅಂತ್ಹೇಳಿ ಮೊಬೈಲ್ ಸ್ವಿಚಾಫ್ ಮಾಡಿಟ್ಟು ಗಂಡನ ಜೋಡಿ ಝುಂ ಅಂತ ಜಾತ್ರಿ ತಿರಗಲಿಕ್ಕೆ, ಇಲ್ಲಾ ಸಿನಮಾ ನೋಡಲಿಕ್ಕೆ ಹೋಗಿ ಕೂತಬಿಡ್ತಾಳ.
ಯಥಾಪ್ರಕಾರ ಇವತ್ತೂ ಹಂಗ ಆಗಿತ್ತು. ಐದೂವರಿಗೆ ಕೆಲಾಸಾ ಮುಗಿಸಿ, ಮತ್ತ ಬಯೊಮೆಟ್ರಿಕ್ ಮಷಿನ ಒಳಗ ಬೆರಳ ಒತ್ತಿ ’ಅಂತೂ ಮುಗಿತಪ್ಪಾ ಇವತ್ತಿನ ಕೆಲಸಾ’ ಅನಕೋತ ಓಡಿ ಓಡಿ ಮನಿಗೆ ಬಂದ್ರ, ಎಲ್ಲಾ ಸಾಮಾನು ಬೆಳಿಗ್ಗೆ ಎಲ್ಲೆಲ್ಲಿ ಇದ್ದೂನೋ ಅಲ್ಲಲ್ಲೇ ಬಿದ್ದಕೊಂಡು ಅಂಬಕ್ಕಗ ಸ್ವಾಗತ ಕೋರಿದ್ವು.
ಸೋಮಾರಿ ಪತಿ ಪರಮೇಶ್ವರ ಚಹಾ ಕುಡದು ಸೋಫಾದ ಮ್ಯಾಲೇ ಕಪ್ಪು ಇಟ್ಟಿದ್ದ. ಡೈನಿಂಗ ಹಾಲಿನ್ಯಾಗ ಟೇಬಲ್ಲಿನ ಮ್ಯಾಲೆ ಮಧ್ಯಾಹ್ನ ಊಟಾ ಮಾಡಿದ ರಾಯರು ಅನ್ನದ ಕುಕ್ಕರು ಢಾಳಾಗಿ ಓಪನ್ ಇಟ್ಟು ಹೋಗಿದ್ರು. ಅಡಗಿ ಮನ್ಯಾಗ ಸಾರು, ಮಸರಿನ ಭಾಂಡಿ ಮ್ಯಾಲೆ ನೊರ್ಜು ಗುಂಯ್ ಅನಲಿಕತ್ತಿದ್ದು. ಹುಡುಗರ ರೂಮಿನ್ಯಾಗ ಅಂಗಿ, ಪ್ಯಾಂಟು, ಟವೆಲ್ಲು ಎಲ್ಲೆಂದರಲ್ಲೆ ಬಿದ್ಯಾಡಿದ್ದು. ಎಲ್ಲೆ ಓಡಾಡಿದ್ರೂ ಕಾಲಿಗೆ ಕಸ ಮೆತಿಗೊಳ್ಳೀಕತ್ತು. ನಿನ್ನೆ ರಾತ್ರಿ ತೊಳಿಲಿಕ್ಕಂತ ಇಟ್ಟ ಪಾತ್ರಿ-ಪಗಡ ಎಲ್ಲಾ ಒಣಗಿ ವಟಕ್ರಾಗಿದ್ದು. ಎಲ್ಲಾ ನೋಡಿ ಅಂಬಕ್ಕಗ ಕಣ್ಣೀರು ಕಪಾಳಿಗೆ ಬರೋದೊಂದs ಬಾಕಿ. ಎಷ್ಟು ತಡಕೊಂಡ್ರನೂ ತಡಕೊಳ್ಳಿಕ್ಕಾಗದನ ತಲಿನೋವು ಬಂದು ಅಮೃತಾಂಜನ ಹಚಗೊಂಡು ಧಡ್ಡಂತ ಕಾಟಿನ ಮ್ಯಾಲೆ ಬಿದ್ದಬಿಟ್ಳು.
ಸೂರ್ಯಾ ಆಕಳಿಸಿಗೋತ ತನ್ನ ಮನಿಗೆ ಹೋದ, ಕಾಗಕ್ಕ-ಗುಬ್ಬಕ್ಕಗೋಳ ಸಾಲಿ ಬಿಟ್ತು. ಸಂಜಿ ಕಳದು ರಾತ್ರಿ ಆಗಲಿಕತ್ತು. ಮೂಡಣದಿಂದ, ಬಡಗಣದಿಂದ, ತೆಂಕಣದಿಂದ, ಪಡುವಣದಿಂದ ಅಂತ ’ಒಬ್ಬ ಅರಸ, ನಾಲ್ವರು ಕಳ್ಳರು’ ಅಂತ ಅಂಬಕ್ಕ ತನ್ನ ಬಾಲ್ಯದಾಗ ಓದಿದ ಕಥಿ ಒಳಗಿನ ಕಳ್ಳರು ಬಂಧಂಗ ಒಬ್ಬೊಬ್ಬರಾಗಿ ಮನಿ ಮಂದಿ ರಾತ್ರಿ ಊಟಕ್ಕ ಮತ್ತ ಮಲಕೊಳ್ಳಿಕ್ಕೆ ಒಕ್ಕರಸಲಿಕತ್ರು. ಮದ್ಲs ಕೆಲಸೇನೂ ಆಗಿಲ್ಲ, ತನಗರೇ ತಲಿನೋವು, ಅಂಥಾದ್ದರೊಳಗ ಈ ಗಂಡಾ, ಈ ಮಕ್ಕಳು ಸಾವಕಾಶ, ಏನೂ ಟೆನ್ಶನ್ ಇಲ್ದನ ಬೆಕ್ಕಿನ್ಹಂಗ ಕಳ್ಳ ಹೆಜ್ಜಿ ಇಟಗೋತ ಬರಲೀಕತ್ತಾರ ಅಂತ ಅಂಬಕ್ಕನ ತಲಿ ಕೆಟ್ಟು ಮಸರ ಗಡಿಗ್ಯಾತು.
“ರಾತ್ರಿ ಎಂಟೂವರಿ ಆತು, ಈಗ ಬರಲೀಕತ್ತೀರಿ, ಇದೇನು ಮನಿನೋ, ಇಲ್ಲಾ ಲಾಜಿಂಗ್-ಬೋರ್ಡಿಂಗ್ ಅನಕೊಂಡೀರೋ? ಆ ಸುಮ್ಮಿ ಒಬ್ಬಾಕಿ ಕೆಲಸಕ್ಕ ಲಗಾಟಿ ಹೊಡದು ಎಲ್ಲಿ ಚೈನಿ ಮಾಡಲಿಕತ್ತಾಳೋ ಏನೋ! ನೀವ ನೋಡಿದ್ರ ಮಹಾರಾಜರ ಮಮ್ಮಕ್ಕಳ ಹಂಗ ಆರಾಮ ಬರಲೀಕತ್ತೀರಿ. ನೀರ ಕುಡದ ಲೋಟಾನೂ ಎತ್ತಿ ಇಡಾವ್ರಲ್ಲ. ನಾ ಒಬ್ಬಾಕಿ ಸಿಕ್ಕೇನಲಾ, ಕೆಲಸಾ ಮಾಡಾಕಿ, ಬಿನ್ ಪಗಾರಿ- ಫುಲ್ ಟೈಮ ಚಾಕರಿ ಮಾಡಲಿಕ್ಕೆ” ಅಂತ ವಟವಟ ಮಾಡಕೋತ ಯಾವ ಕೆಲಸಾ ಮದ್ಲ ಮಾಡ್ಲಿ, ಯಾವದು ಆಮೇಲೆ ಒಂದೂ ತಿಳೀದ ಆ ಕಡೆ ಈ ಕಡೆ ಧಪಾ ಧಪಾ ಕಾಲು ಹಾಕ್ಕೋತ ಅಡ್ಯಾಡಲಿಕತ್ತಳು.
ಅಕಿ ಗಂಡಗ -ಅನಂತ ಪದ್ಮನಾಭ ಅಂತ ಅವನ ಹೆಸರು – ಒಂದ ಕಡೆ ನಗಿ ಉಕ್ಕಿ ಬರಲೀಕತ್ತದ, ಇನ್ನೊಂದ ಕಡೆ ಹೆಂಡತಿ ಪಾಡು ನೋಡಿ ಕೆಟ್ಟ ಅನಸಲಿಕತ್ತದ. ಈಗ ಏನು ಮಾತಾಡಿದ್ರೂ ಮತ್ತೊಂದು ರೌಂಡು ಫೈರಿಂಗ ಆಗ್ತದ ಅಂತ ಇಷ್ಟ ವರ್ಷದ ಅನುಭವದಿಂದ ಅವನಿಗೂ ಗೊತ್ತದ. ಹಂಗಾಗಿ ಬಾಯಾಗ ಕಡುಬು ತುರುಕಿಧಂಗ ಸುಮ್ಮನಾಗಿಬಿಟ್ಟ.
ಆದರ ಅಂವ ಹಂಗ ಸುಮ್ಮನಿದ್ದದ್ದು ನೋಡಿ ಮತ್ತ ಅಂಬಕ್ಕನ ಸಿಟ್ತು ನೆತ್ತಿಗೇರಿತು. ’ಅಲ್ಲಾ ನಾ ಒಬ್ಬಾಕಿನ ಮನಿವೊಳಗ ಒದ್ಯಾಡಲೀಕತ್ತೇನಿ. ನಿಮಗೇನರೆ ಕರುಳು, ಕರುಣಾ ಅನ್ನೋದದಯೇನು? ಎಷ್ಟು ಆರಾಮಾಗಿ ಮುಸಿಮುಸಿ ನಕ್ಕೋತ ಕೂತೀರಿ. ಇಲ್ಲೇನು ಮಂಗ್ಯಾನಾಟ ನಡದದೇನು?” ಅಂತ ಇನ್ನೊಮ್ಮೆ ಆವಾಜ ಹಾಕಿದ್ಲು.
“ನನಗ ಕೆಟ್ಟ ತಲಿ ನೋವು ಬಂದದ. ರಾತ್ರಿ ಊಟಕ್ಕ ಅನ್ನಾ ನೀವ ಮಾಡತಿರೋ ಇಲ್ಲಾ ಹಾಟೆಲ್ಲಿನಿಂದ ತರ್ತೀರೋ?” ಇದ ಸುಸಂಧಿ ಅನಕೊಂಡ ಹುಡುಗರು “ಅಪ್ಪಾ ಪಲಾವು ಇಲ್ಲಾ ಬಿರ್ಯಾನಿ ತೊಗೊಂಡು ಬರೋಣು” ಅಂತ ಗಂಟ ಬಿದ್ದಬಿಟ್ಟು.
ಅನಂತಪದ್ಮನಾಭನಿಗೂ ಏನೆನಿಸಿತೋ ಏನೋ, ಮಾತಾಡದ ಹೋಗಿ ಪಾರ್ಸಲ್ ತೊಗೊಂಡು ಬಂದ. ಅಂತೂ ಇಂತೂ ರಾತ್ರಿ ಊಟದ ಸಮಸ್ಯಾ ಕಳೀತು.
ಮತ್ತ ಮರದಿನಾ ದಿನಧಂಗ ಬೆಳಗಾತು. ಹಕ್ಕಿ-ಪಕ್ಷಿಗೋಳೆಲ್ಲಾ ಕಲಕಲ-ಚಿಲಿಪಿಲಿ ಮಾಡಿ ಅಂಬಕ್ಕನ್ನ ಎಬ್ಬಿಸಿದ್ವು. ಅಷ್ಟೆಲ್ಲಾ ಸಣ್ಣ ಸದ್ದಿಗೆ ಏಳೋ ಗಿರಾಕಿಗಳಲ್ಲ ಅಕಿ ಗಂಡಾ-ಮಕ್ಕಳು. ಅವರಿನ್ನೂ ನಿದ್ಯಾಗ ಕನಸ ಕಾಣಲೀಕತ್ತಿದ್ರು. “ಏನ್ರಿ, ಏಳ್ರಿ. ಇವತ್ತೂ ಸುಮ್ಮಿ ಬರಂಗಿಲ್ಲ, ನಂಗೊತ್ತದ. ಅಕಿ ಯಾವಾಗ ರಜಾ ತೊಗೊಂಡ್ರೂ ಜೋಡಿಸಿ ತೊಗೋತಾಳ, ಎರಡು, ಮೂರು, ನಾಕು ದಿನಾ” ಅಂತ ಸುಪ್ರಭಾತ ಶುರುವಾತು.
ಮಕ್ಕಳ ರೂಮಿಗೂ ಹೋಗಿ, “ಏಳ್ತೀರೋ ಇಲ್ಲಾ ಚಾದರ ಎಳದು ತಗೀಲೋ?” ಅಂತ ಧಮಕಿ ಹಾಕಿದ ಮ್ಯಾಲೇ ಕುಮಾರ ಕಂಠೀರವರಿಬ್ಬರೂ ಕಣ್ಣು ಒರಿಸಿಗೋತ ಜೋತಾಡಲೀಕತ್ರು. ಅಂತೂ ಕುಕ್ಕರ್ ಏರಿಸಿ, ಉಪ್ಪಿಟ್ಟು ಕೆರದು, ಮುಂಜಾನಿ ತಿಂಡಿಗೆ, ಮಧ್ಯಾಹ್ನದ ಊಟಕ್ಕ ನೈವೇದ್ಯಧಂಗ ಒಂದಿಷ್ಟಿಷ್ಟು ಅಡಗಿ ಮಾಡಿಟ್ಟು ಅಂಬಕ್ಕನ ಸವಾರಿ ಆಫೀಸಿಗೆ ಹೊಂಟಿತು.
ಆಗಾಗ ಸುಮ್ಮಿ ಇಲ್ದನ ಅಡ್ಜಸ್ಟ ಆಗೋದು ಅವ್ರ ಹಣೇಬಾರನs ಆಗಿತ್ತಲಾ! ಏನು ಮಾಡೋದು, ಹಂಗಂತ ಸುಮ್ಮಿನ ಬಿಟ್ಟು ಪಮ್ಮಿನ್ನೋ, ಮತ್ತೊಬ್ಬಾಕಿನ್ನೋ ಹಚ್ಚಿದ್ರೂ ಅದ ಪಾಡು, ಒಂದೆರಡು ತಿಂಗಳು ಛಂದಾಗಿ ಕೆಲಸಾ ಮಾಡಿಧಂಗ ಮಾಡತಾರ, ಆಮ್ಯಾಲೆ ಮತ್ತದೇ ಹಳೆ ಹಾಡು, ಹಳೆ ರಾಗ. ಆದರ ಪ್ರತಿ ಸಲ ಕೆಲಸದಾಕಿನ್ನ ಬದ್ಲಾಯಿಸಿದಾಗೂ ಪಗಾರ ಮಾತ್ರ ಜಾಸ್ತಿ ಅನ್ನೋದು ಅಂಬಕ್ಕನ ಲೆಕ್ಕಾಚಾರ. ಹಂಗಾಗೇ ಸುಮ್ಮಿನ ಸಹನ ಮಾಡಕೊಂಡು ಹೆಂಗೋ ಕಾಲ ಕಳೀತಾಳ.
ಮೂರನೇ ದಿನಾ ಎದ್ದ ಕೂಡ್ಲೆ ಸುಮ್ಮೀ ಮೊಬೈಲಿಗೆ ಫೋನ ಹಚ್ಚಿದರ ಯಾರಿದ್ದಾರ ಉತ್ತರಾ ಕೊಡಲಿಕ್ಕೆ! ಸ್ವಿಚಾಫ್ ಅಂತ ಬರಲೀಕತ್ತು. “ಮಾಡ್ಯಾಳ ನೋಡ್ರಿ ಖತರ್ನಾಕ ಐಡಿಯಾ, ಇವ್ವತ್ತ ಮೊಬೈಲ್ ಆನ್ ಮಾಡಂಗೇ ಇಲ್ಲ ಸುಡಗಾಡ ಸುಮ್ಮಿ” ಅಂತ ಬೈಕೋತ ಬೇಕಾದಷ್ಟು ಬೇಕಾದಷ್ಟs ಭಾಂಡಿ ತೊಳಕೊಂಡಾತು, ಹಾಲು, ಅಡಗಿಮನಿ ಅಂತ ಲೆಕ್ಕಾ ಹಾಕಿ ಕಸಾ ಉಡುಗಿ ನೆಲಾ ಒರಸೂದ್ರಾಗ ಮೈಮ್ಯಾಲೆ ದಳದಳಾಂತ ಬೆವರು ಹರೀಲಿಕತ್ತು.
“ದಿನಾಲೂ ಹಿಂಗ ಇಡೀ ಮನಿ ಕಸಾ ಉಡುಗಿ ಫರಶಿ ಒರಸಿದ್ರ ವಾಕಿಂಗು, ಯೋಗಾ ಏನೇನೂ ಇಲ್ದನ, ರೊಕ್ಕನೂ ಖರ್ಚಾಗದನ ಥೆಳ್ಳಗ ಬಳಕೋ ಬಳ್ಳಿ ಹಂಗ ಆಗ್ತಿ ನೋಡ ಅಂಬು” ಅನಂತಪದ್ಮನಾಭ ಹೆಂಡ್ತಿಗೆ ಚಾಸ್ಟಿ ಮಾಡಲಿಕ್ಕೆ ಹೋಗಿ, “ಅಲ್ಲ ನೀವರೇ ಏನು ಭಾಳ ಥೆಳ್ಳಗಿದ್ದೀರಿ? ನೀವು ಮಾಡಿದ್ರ ನಿಮ್ದೂ ಡುಮ್ಮ ಹೊಟ್ಟಿ ಒಂದಿಷ್ಟು ಒಳಗ ಹೋಗಿ ಛಂದ ಕಾಣತೀರಿ” ಅಂತ ಅನಿಸಿಕೊಂಡ. ’ಅಂದ ಅನಿಸಿಕೊಳ್ಳೋ ಛಂದಗೇಡಿ’ ಅಂತ ಮನಸ್ಸಿನ್ಯಾಗ ಹೊಳದು ಖಿಳ್ ಅಂತ ನಕ್ಕೋತ ಮಕ್ಕಳು ಹೊರಗೋಡಿದ್ವು. “ಎಲ್ಲಾರೂ ಊಟಾ ಮಾಡಿ ನಿಮ್ಮ ನಿಮ್ಮ ತಾಟು, ಲೋಟಾ ನೀವ ತೊಳದಿಡೋದು” ಅಂತ ಇನ್ನೊಂದು ಫರ್ಮಾನು ಹೊಂಡಸಿದ್ಲು ಅಂಬುಜಾ.
ರಾತ್ರಿ ಮಲಕೊಂಡ್ರ ಅಂಬಕ್ಕನ ಕಾಲು, ಕೈ, ಬೆನ್ನು, ಗೋಣು ಎಲ್ಲಾ ನಾನಾ ನಮೂನಿ ರಾಗದೊಳಗ ಹಾಡಲಿಕತ್ತು. ’ಸುಡಗಾಡ ಹೆಣ್ಣಜನ್ಮ, ಎಷ್ಟ ಕೆಲಸಾ ಮಾಡಿದ್ರೂ ಮುಗೀಲಾರದ್ದಿದು’ ಅಂತ ಬೈಕೋತ ಒಮ್ಮೆ ಕರುಣಾ ಬರೂಹಂಗ ಅಳಬುರಕ ಮುಖಾ ಮಾಡಿ ದೇವರ ಕಡೆ ನೋಡಿ “ಎಲ್ಲಾ ನಿಂದs ಮಹಿಮಾ” ಅಂತ ಬೈಧಂಗ ಮಾಡಿ ಬೇಡಕೋತ ಮಗ್ಗಲು ಬದಲಾಸಿ ಮಲಕೊಂಡ್ಳು.
“ಇನ್ನ ಇಕಿನ್ನ ಇಟಕೋಬಾರ್ದು, ನಾಳೆ ಬಂದಳಂದ್ರ ಪಗಾರ ಕೊಟ್ಟು ಹೊರಗಿಂದ ಹೊರಗ ಕಳಸಬೇಕು. ಏನು ತಿಳಕೊಂಡಾಳ ಇಕಿನ್ನ ಬಿಟ್ರ ಬ್ಯಾರೆ ಗತಿ ಇಲ್ಲ ನಂಗ, ಇಕಿ ಇಲ್ಲಂದ್ರ ಇಕಿ ಅಜ್ಜಿ” ಅಂತ ಎಲ್ಲಾ ಸರ್ವನಾಮದಾಗ ಧುಸುಫುಸು ಮಾಡಿ ಮಲಗಿದ್ರೂ ಅಕಿ ಸಹಸ್ರನಾಮಾವಳಿ ಯಾರಿಗೆ ಅನ್ನೋದು ಎಲ್ಲಾರಿಗೂ ಗೊತ್ತಾತು. ಆದ್ರೂ ಏನೂ ಕೇಳಸೇ ಇಲ್ಲ ಅನ್ನೋ ಹಂಗ ಎಲ್ಲಾರೂ ಸುಮ್ಮನ ಮಲಕೊಂಡ್ರು. ಮನ್ಯಾಗ ಒಂಥರಾ ಕರ್ಫ್ಯೂ ಹಾಕಿದ ವಾತಾವರಣ.
ಮರದಿನಾ ಬೆಳಿಗ್ಗೆ ಮತ್ತ ಹಕ್ಕಿ ಚಿಲಿಪಿಲಿ ಅಂದು, ಆರ ಘಂಟೆಕ್ಕ ಕರೆಕ್ಟ್ ಮೊಬೈಲಿನ ಕೋಳಿ ಕೂಗಿತು. ಏನಾದ್ರೂ ಅಂಬಕ್ಕನ ಕಣ್ಣ ತಗೀವಾಲ್ಲು. ತಲಿ ಪೂರ್ತಿ ವಜ್ಜೆ ಆಗೇದ, ಮಣಕಾಲು ಹಿಡಕೊಂಡಾವ, ತೊಡಿನೋವು ಬಂದದ, ಬೆನ್ನು ನೊಯಿಸಲೀಕತ್ತದ. ಜ್ವರಾಗಿರಾ ಬಂದಾವೇನೋ ಅಂತ ಹೆದರಿಕಿ ಆತು. “ರೀ ಎಲ್ಲಿ ಹಾಳಾದ್ರೀ, ನನಗರೇ ಏಳಲಿಕ್ಕೂ ಆಗವಾಲ್ತು” ಅಂತ ಒದರಿ, ಸುಮ್ಮನ ಹೊತಕೊಂಡು ಮಲಕೊಂಡುಬಿಟ್ಳು. ಟೈಮ್ ಎಷ್ಟಾತೋ ಏನೋ, ಅಂತೂ ಒಂದು ಸಾಡೇಸಾತಿ ಮುಹೂರ್ತದಾಗ ಢಣ್ ಅಂತ ಬೆಲ್ ಮಾಡಿ ಒ.S. ಸುಮಾ ಒಳಗ ಪದಾರ್ಪಣೆ ಮಾಡೇಬಿಟ್ಳು.
ಅನಂತಪದ್ಮನಾಭ ಗಡಬಡಿಸಿ ಅಂಬೂನ ಹತ್ತರ ಓಡಿ ಬಂದು ಕಿವ್ಯಾಗ ಹಗೂರಕ ಕೇಳಿದ, “ಅಕಿ ಬಂದಾಳ ನೋಡು, ಇರು ಅಂತಿಯೋ ಹೋಗಂತಿಯೋ?” ನಿನ್ನೆ ಇಕಿ ಬೈದದ್ದು ಅಂವಗೂ ಇನ್ನ ನೆನಪಿತ್ತು. ಆದ್ರ ಎದ್ದು ಕೂಡಲಿಕ್ಕೂ ಅಂಬೂಗ ಆಗವಾಲ್ತು. ಅಷ್ಟರಾಗ ಸುಮಾನ ಇವರ ರೂಮಿಗೆ ಬಂದು, “ಏನಾತ್ರೀ ಅಂಟೀ, ಆರಾಮಿಲ್ಲಾ? ನೀವು ಸುಮ್ಮನ ಮಲಕೋರಿ, ನಾ ಎಲ್ಲಾ ಕೆಲಸಾ ಮಾಡಿಕೊಡತೇನಿ. ಛಾ ಕುಡದೀರಿಲ್ಲೋ, ನಾ ಮಾಡಿಕೊಡ್ಲೇನು? ನನ್ನ ಮಗಳಿಗೆ ಆರಾಮಿದ್ದಿಲ್ಲಂತ ಬರಲಿಲ್ಲರೀ. ಮೋಬೈಲ್ ಬ್ಯಾರೆ ನನ್ನ ಕಿಡಗೇಡಿ ಮಾಗಾ ಪಲ್ಲಂಗದ ಕೆಳಗ ಒಗದ ಬಿಟ್ಟಿದ್ದ ನೋಡ್ರಿ. ಹುಡುಕಿ ಹುಡುಕಿ ಸಾಕಾತ್ರೆವಾ ಅಂಟಿ, ಇವತ್ತ ಬೆಳಿಗ್ಗೆ ಸಿಕ್ತು ನೋಡ್ರಿ” ಅಂತ ಟೇಪರೆಕಾರ್ಡ ಹಚ್ಚಿಬಿಟ್ಳು.
ಎಷ್ಟಂದ್ರೂ ಹೆಣ್ಣಮಕ್ಕಳ ತ್ರಾಸು ಹೆಣ್ಣಮಕ್ಕಳಿಗಲ್ದ ಇನ್ಯಾರಿಗೆ ತಿಳೀತದ? ಈ ಗಂಡ ಅನ್ನಾಂವಗ ಹೆಂಡ್ತಿಗೆ ಅರಾಮಿಲ್ಲಂದ್ರ ಒಂದು ಕಪ್ಪು ಛಾ ಮಾಡಿ ಬಸೀಲಿಕ್ಕೆ ಗೊತ್ತಾಗಂಗಿಲ್ಲ. ನಾನು ದಿನಕ್ಕ ಹತ್ತ ಸರ್ತೆ ಛಾ-ಕಾಫಿ ಮಾಡಿ ಮಾಡಿ ಇವ್ರು ಇದ್ದಲ್ಲೇ ತೊಗೊಂಡ ಹೋಗಿ ಬಡದಿರ್ತೇನಿ! ಏನುಪಯೋಗದ? ನಾ ಹಾಸಗಿ ಹಿಡದ್ರ ಇವ್ರ್ಯಾರೂ ಮಾಡಾವರಲ್ಲ.
ಕೆಲಸದಾವ್ರಿಗೆ ಇರೋವಷ್ಟು ಕರುಣಾನೂ ಮನಿಯಾವ್ರಿಗೆ ಇರೂದಿಲ್ಲ, ಅಂತೆಲ್ಲಾ ವಿಚಾರ ಮಾಡೂದ್ರೊಳಗ , “ಹೂಂ ಏಳ್ರಿ ಏಳ್ರಿ ಅಂಟೀ, ಮುಖಾ ತೊಳೀಲಿಕ್ಕಾದ್ರ ತೊಳಕೋಂಡು ಬರ್ರಿ, ಬಿಸಿ ಬಿಸಿ ಛಾ ಮಾಡೇನಿ ನೋಡ್ರಿ” ಅಂತ ಸುಮಾ ಛಾ ಕಪ್ಪು ಹಿಡಕೊಂಡ ಬಂದs ಬಿಟ್ಳು. ಮತ್ತ ಅಂಬಕ್ಕನ ಮನಸ್ಸಿನ್ಯಾಗ ’ನಿನ್ನಿಂದಲೇ, ನಿನ್ನಿಂದಲೇ ………’ ಹಾಡು ಯಾರೋ ಹಾಡಲೀಕತ್ರು. ಕಣ್ಣ ಮುಂದ ಸುಮ್ಮಿನs ಕುಣಿಲೀಕತ್ಳು.
“ನೀನೂ ಛಾ ಕುಡಿ ಮದ್ಲ, ಆಮ್ಯಾಲೆ ಎಲ್ಲಾ ಕೆಲಸಾ ಮಾಡಿ ಅಂತ. ಇನ್ನೊಮ್ಮೆ ಹಿಂಗ ಕೆಲಸಾ ತಪ್ಪಿಸಿ ನನ್ನ ಫಜೀತಿ ಮಾಡಬ್ಯಾಡ ನೋಡು” ಅಂತ ಒಂದಿಷ್ಟು ಸಿಟ್ಟಲೇ, ಒಂದಿಷ್ಟು ಪ್ರೀತಿಲೇ ಆವಾಜ ಹಾಕಿ ಅಂಬುಜಾ ನಿಶ್ಚಿಂತಿಯಿಂದ ಛಾ ಕುಡೀಲಿಕತ್ಳು.

‍ಲೇಖಕರು admin

28 March, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading