ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀನಾಸಂ ಶಿಸ್ತಿನ ‘ಹುಲಿಯ ನೆರಳು’

ಕಿರಣ್ ಭಟ್

—-

ಹುಲಿಯ ನೆರಳು

ರಚನೆ: ಚಂದ್ರಶೇಖರ ಕಂಬಾರ

ನಿರ್ದೇಶನ; ಕೆ.ಜಿ.ಕೃಷ್ಣಮೂರ್ತಿ.

ʼಅಪ್ಪಾ ಸೂರ್ಯನ್ನ ಮೀರಿದ ಬೆಳಕಿನ ಸ್ವಾಮಿ, ಈ ಲೋಕವನ್ನ ಅಖಂಡ ಸತ್ಯವಾಗಿ ತೋರಿಸೋ ತಂದೇ….ನೆರಳಿಲ್ಲದ ಸತ್ಯ ತೋರಿಸೋ ತಂದೆʼ

ರಾಮಗೊಂಡನ ಸತ್ಯ ದರ್ಶನ ದ ಕಥೆಯಿದು.

ಇದು ಜಾನಪದ ಕಥೆಯೊಂದು ರೂಪಕವಾಗುವ ಮತ್ತು ತನ್ನೊಡಲಲ್ಲೇ ಅಸ್ಥಿತ್ವದ ಹುಡುಕಾಟ ನಡೆಸುವ ಕಥೆ.

ಹುಲಿಯ ಬೇಟೆಯಾಡಲು ಹೋದ ಗೌಡ ವಿಚಿತ್ರ ರೀತಿಯಲ್ಲಿ ಮರಳಿದ್ದಾನೆ. ಮರುದಿನದಿಂದಲೇ ಊರು ವಿಚಿತ್ರ ಸ್ಥಿತ್ಯಂತರಗಳಿಗೆ ಸಾಕ್ಷಿಯಾಗ್ತಿದೆ. ಅಲ್ಲಿ

ʼ ಆಲಕ್ಕೆ ತಂಪಿಲ್ಲ. ಊರೆಲ್ಲ ರಣ ರಣʼ

ಗೌಡತಿ ಮಾನಸಿಕ ಸ್ಥಿಮಿತ ಕಳಕೊಂಡಿದ್ದಾಳೆ. ಮಾನವೀಯ ಗುಣಗಳ ಗೌಡ ರಾಕ್ಷಸನಂತಾಗಿದ್ದಾನೆ. ಇದನ್ನೆಲ್ಲ ಕಂಡು ಆತನ ಮಗ ರಾಮೇಗೌಡನಿಗೆ ವಿಚಿತ್ರ ಕುತೂಹಲ, ಅತಂಕ. ಸತ್ಯ ಹುಡುಕಿ ಹೊರಡ್ತಾನೆ ಆತ.  ಊರ ಹೊರಗಣ ನಿಷೇಧಿತ ಬಾವಿಯ ಹತ್ತಿರ ಗೌಡನ ಪ್ರೇತವನ್ನ ಕಂಡ ರಾಮೇಗೌಡ ದಿಗ್ಭ್ರಾಂತನಾಗ್ತಾನೆ. ನಿಜವಾದ ತಂದೆ ಯಾರೆಂಬುದು ತಿಳಿಯದೇ ನೋಯ್ತಾನೆ. ಪ್ರೇತ ಹೇಳಿದ್ದು ಸತ್ಯವೋ ತಾನು ಕಾಣ್ತಿರೋದು ಸತ್ಯವೋ ಅಂತ ಗಲಿಬಿಲಿಗೊಳ್ತಾನೆ.  ಆತನಿಗೆ ನಿಜದ ದರ್ಶನ ಮಾಡಿಸಬಲ್ಲವಳು ತಾಯಿ ಮಾತ್ರ. ಆಕೆಯೋ ಈಗ ರಾಕ್ಷಸ ಗರ್ಭ ಹೊತ್ತಿದ್ದಾಳೆ.  ಸತ್ಯದರ್ಶನ ಮಾಡಿಸಲು ಆಕೆ ಸಿದ್ಧ.  ಆದರೆ ಆಕೆಯೇ ಹೇಳುವಂತೆ ಆಕೆಯ ಹೊಟ್ಟೆಯೊಳಗಿನ ಗರ್ಭವನ್ನು ಕೊಲ್ಲದೇ ಸತ್ಯದ ದರ್ಶನ  ಅಸಾಧ್ಯ. ಇತ್ತ ಗರ್ಭವನ್ನೂ ಕೊಲ್ಲಲಾರದೆ ಸತ್ಯವನ್ನೂ ಅರಿಯಲಾರದೆ ರಾಮಗೊಂಡ ರೋದಿಸ್ತಾನೆ. ಸತ್ಯ ಕಂಡುಕೊಳ್ಳಲಾರದೇ ಕುಸೀತಾನೆ.

ನಾಟಕದದಕ್ಕೂ ಕಾಣುವದು ಒಂದು ಇನ್ನೊಂದಾಗಿ ಮಾರ್ಪಾಡಾಗುವ ಕ್ರಿಯೆ. ಹುಲಿ ಕೊಲ್ಲೋದಕ್ಕೆ ಹೋಗಿ ಬಂದ ಗೌಡ ಇನ್ನೇನೋ ಆಗಿಬಿಡ್ತಾನೆ. ಊರ ಜನ ವಿಚಿತ್ರವಾಗಿ ವರ್ತಿಸ್ತಾರೆ. ಮುದುಕಿಯೊಬ್ಬಳು ಧುತ್ತನೆ ಪ್ರವೇಶ ಮಾಡ್ತಾಳೆ. ಗೌಡತಿ ಹುಚ್ಚಿಯಾಗ್ತಾಳೆ. ಮಧ್ಯೆಯೇ ಭೂತವೊಂದು ಬಂದು ಗೋಳಿಡ್ತದೆ. ಕೊನೆಗೆ ಊರ ಕಾಯೋ ಕರಿಮಾಯಿ ಕೂಡ ಹುಡುಗಿಯಾಗಿ ಬಂದು ಹಳೆಯ ಆಲದ ಮರವನ್ನು ಕಡಿಯೋದಕ್ಕೂ ಅನುಮತಿ ಕೊಟ್ಟುಬಿಡ್ತಾಳೆ.

ಹೀಗೆ ಒಂದು ಇನ್ನೊಂದಾಗುವದರ ನಡುವೆಯೇ ಬರುವ ಮರೀಚಿಕೆಗಳು, ಯಕ್ಷಿಣಿ, ದೇವತೆಗಳಂಥ ಪಾತ್ರಗಳು ರಾಮೇಗೌಡನ ದಾರಿಯಲ್ಲಿ ಬಂದುಹೋಗುತ್ತ ದಾರಿ ತೋರುವ, ದಾರಿ ತಪ್ಪಿಸುವ ಕೆಲಸವನ್ನೂ ಮಾಡ್ತವೆ. ಯಕ್ಷಿಣಿಗಳು ನೀಡುವ ಕನ್ನಡಿ, ಕೀಲುಕುದುರೆ, ಕೊಂಬುಗಳು ರಾಮಗೊಂಡನ ಅನ್ವೇಷಣೆಗೆ ಸಹಾಯಕವಾಗಿಯೂ ನಿಲ್ತವೆ. ಆದರೆ ಎಲ್ಲವೂ ನಿಷ್ಪ್ರಯೋಜಕವಾಗ್ತವೆ

ರಂಗದ ಮಧ್ಯ ಹಿಂಭಾದಲ್ಲೊಂದು ಸಾಂಕೇತಿಕವಾದ ದೊಡ್ಡ ಗಾತ್ರದ ನಿರ್ಮಿತಿ. ಹುಲಿ ಮುಂಗಾಲುಗಳನ್ನ ಅಗಲಿಸಿ ಪಂಜುಗಳನ್ನ ಚಾಚಿದ ಹಾಗೆ. ಮಧ್ಯೆ ಕಾಣುವ ಅರ್ಧ ಹುಲಿ, ಅರ್ಧ ಮನುಷ್ಯನ ರೂಪದ ಮುಖ. ಅದು ಹಾಕಿಕೊಂಡ ಹ್ಯಾಟ್.‌ ಸಾಂಕೇತಿಕವಾದ ಈ ನಿರ್ಮಿತಿಯೇ ನಾಟಕದ ಹೂರಣದ ಮುನ್ನೋಟವನ್ನೂ ನೀಡುತ್ತದೆ.

ಕಂಬಾರರ ಜಾನಪದ ರೂಪಕವಿದು. ಮೂಲದಲ್ಲೇ ಭಾಷೆಯ ಕಸುವಿದೆ. ಸೊಗಸಾದ ಹಾಡುಗಳಿವೆ. ನಾಟಕದಲ್ಲಿ ಅವು ಮೇಲಿಂದ ಮೇಲೆ ಬಂದು ಹೋಗ್ತವೆ. ಹಾಗಾಗಿ ಗುಂಪುಗಳ ಒಡಾಟವೇ ಜಾಸ್ತಿ. ಜೊತೆಗೆ ಕುಣಿತಗಳೂ ಕೂಡ. ಹಾಡುತ್ತ, ಒಡಾಡುತ್ತ ಗುಂಪುಗಳು ನಾಟಕವನ್ನೂ ಜೊತೆಗೊಯ್ಯುತ್ತವೆ. ನಿರ್ದೇಶಕ ಕೆ.ಜಿ.ಕೃಷ್ಣಮೂರ್ತಿ ಗುಂಪನ್ನು ಸಮರ್ಥವಾಗಿ ನಿಭಾಯಿಸಿದಾರೆ. ಅದರಲ್ಲೂ ರಾಮಗೊಂಡ ಮತ್ತು ಗೆಳೆಯರ ಕುಸ್ತಿ, ನಾಟಕದ ದೃಶ್ಯಗಳಲ್ಲಂತೂ ಇದು ತುಂಬ ಚೆನ್ನಾಗಿ ಮೂಡಿದೆ.ಕೆಲವೆಡೆ ವಿನ್ಯಾಸಗಳೂ ಸುಂದರ. ನಾಟಕ ಸಾಗುತ್ತಿದ್ದಂತೆ ಅದರ ಹರಿವಿನೊಳಗೇ ಅವಿತಿರುವ, ಹಳ್ಳಿಯ ಬದುಕಲ್ಲಿಆಧುನಿಕ ಜಗತ್ತು ಸೃಷ್ಟಿಸಿದ  ತಲ್ಲಣಗಳ ಸೂಚನೆಯೂ ಸಿಗುತ್ತ ಹೋಗುತ್ತದೆ. ಕರಿಮಾಯಿಯ ಗುಡಿಯೆದುರಿನ ಮರ ಕಡಿಯುವ ದೃಶ್ಯದಲ್ಲಂತೂ ಇದು ಸ್ಪಷ್ಟವಾಗಿ ಗೋಚರಿಸುತ್ತದೆ.

ಅಭಿನಯದ ಮಟ್ಟಿಗಂತೂ ತಂಡದ ಹುಡುಗರು ವೃತ್ತಿಪರತೆ ಮೆರೆಯುತ್ತಾರೆ.‌ ಮುಖ್ಯ ಪಾತ್ರಗಳು ಊರ ಗೌಡ, ರಾಮೇಗೌಡ ಮತ್ತು ತಾಯಿ. ʼರಾಮಗೊಂಡʼನಾಗಿ ರಂಜಿತ್‌ ಶೆಟ್ಟಿ, ʼಗೌಡ್ತಿʼಯಾಗಿ ಸಂಗೀತಾ ಭಿಡೆ, ʼಗೌಡʼ ನಾಗಿ ಓಂಕಾರ್‌ ಮೇಗಳಾಪುರ ಗಮನಾರ್ಹ ಅಭಿನಯ ನೀಡಿದ್ದಾರೆ. ಇನ್ನುಳಿದಂತೆ ನಾಟಕವನ್ನೇ ಮುನ್ನಡೆಸುವ ಮೇಳದ ಕುರಿತು ಬೇರೆ ಹೇಳಬೇಕಿಲ್ಲ.

ಎಂದಿನಂತೆ ನೀನಾಸಮ್‌ ನ ತಾಂತ್ರಿಕ ಶಿಸ್ತು ಇಲ್ಲೂ ಇದೆ. ಹೊನ್ನಾವರದ ಪ್ರಯೋಗದ ಮಟ್ಟಿಗೆ ಹೇಳುವದಾದರೆ ಬಣ್ಣದ ಬೆಳಕುಗಳ ಕೈ ಸ್ವಲ್ಪ ಮೇಲಾಯಿತೇನೋ ಎನಿಸುತ್ತದೆ. ಇನ್ನು ಆ ದಿನದ ಪ್ರಯೋಗದಲ್ಲಿ ಸ್ವಲ್ಪ ಗಡಿಬಿಡಿಯಿತ್ತು. ಸನ್ನಿವೇಷಗಳು ಮನದಲ್ಲಿ ದಾಖಲಾಗುವ ಮೊದಲೇ ಹಾಡಿನ ಗುಂಪು ಬಂದು ಕಥೆಯನ್ನು ಮುಂದೊಯ್ಯುತ್ತಿದ್ದ ಹಾಗೆ ಅನಿಸ್ತಿತ್ತು. ಇದು ನಾಟಕವನ್ನ ಒಟ್ಟಾರೆ ಗ್ರಹಿಸೋದಕ್ಕೆ ಸ್ವಲ್ಪ ತೊಡಕಾಯ್ತೇನೋ.

 ಒಂದೊಳ್ಳೆಯ ಪ್ರಯೋಗ.

‍ಲೇಖಕರು avadhi

29 November, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading