ನಿಮ್ಮ ಮೇಲೆ ಸಿವಿಲ್ ವ್ಯಾಜ್ಯ ಬೀಳ!

ಕೃಷ್ಣ ಸಂಧಾನ ತಾಳಮದ್ದಳೆಯಲ್ಲಿ ಸಂಧಾನಕ್ಕೆ ಬಂದ ಕೃಷ್ಣನಿಗೆ ಕೌರವ “ಐದು ಗ್ರಾಮಗಳನ್ನು ಬಿಡು, ಒಂದು ಸೂಜಿ ಮೊನೆಯನ್ನೂರುವ ಜಾಗವನ್ನೂ ಪಾಂಡವರಿಗೆ ಕೊಡೆ”ಎನ್ನುತ್ತಾನೆ. ಇದು ಭಾರತ, ಇದು ಮಹಾಭಾರತ!

ಅಂತಹಾ ಭಾರತದ ಕೃಷಿ ನೆಲವನ್ನು ಕಾರ್ಪೋರೇಟ್ ಫಾರ್ಮಿಂಗಿಗೆ ವಹಿಸಿಕೊಡಬಹುದೆಂಬ ಯೋಚನೆ ತಲೆಗೆ ಬರುತ್ತಲೇ ಭೂದಾಖಲೆಗಳ ಕುರಿತಾಗಿ ಆಳುವವರ ಆಸಕ್ತಿ ಎಷ್ಟು ವೇಗವಾಗಿ ಹೆಚ್ಚಿದೆ ಎಂಬುದನ್ನು ಕಂಡರೆ, ಹೌದಾ, ಭಾರತೀಯ ಆಡಳಿತ ವ್ಯವಸ್ಥೆ ನಿಜಕ್ಕೂ “ಇನ್ ಎಫೀಷಿಯಂಟಾ?!!”ಅನ್ನಿಸದಿರುವುದಿಲ್ಲ .  ಆದರೆ, ಆ ಹೆಸರಲ್ಲಾದರೂ ಚಟುವಟಿಕೆ ಆರಂಭಗೊಂಡಿದೆ ಎಂಬುದಕ್ಕೊಂದು ನಿಟ್ಟುಸಿರು.

ಯಾಕೆ ಭೂದಾಖಲೆಗಳ ಕುರಿತು ಆಳುವವರಿಗ ಆಸಕ್ತಿ ಮೂಡಿತೆಂದರೆ, ಕ್ರಷಿ ಭೂಮಿಯನ್ನು ಲೀಸ್ (ಗುತ್ತಿಗೆ) ತೆಗೆದುಕೊಂಡು, ಕಾರ್ಪೋರೇಟ್ ಫಾರ್ಮಿಂಗ್ ನಡೆಸಲು ಇರುವ ಅತಿದೊಡ್ಡ ಅಡ್ಡಿತಡೆ – ಭೂಮಿಯ ಮಾಲಕತ್ವ. ಈವತ್ತು ಗದ್ದೆಯ ಅಂಚುಗಳ ಬೌಂಡರಿಯನ್ನು ಆಧಾರವಾಗಿಟ್ಟುಕೊಂಡು, ಆತಂಕಗಳು ಬಂದಾಗ ಜೀವತೆತ್ತಾದರೂ ಕಾಪಾಡಿಕೊಂಡು ಬಂದಿರುವ ಮಾಲಕತ್ವ ನಾಳೆ ಕಾರ್ಪೋರೇಟ್ ಫಾರ್ಮಿಂಗಿನ ವೇಳೆ ಊರಿಗೆ ಊರೇ ಗದ್ದೆ/ಹೊಲ ಆದಾಗ ಉಳಿದಿರುವುದಿಲ್ಲ.

ಯಾರ ಜಾಗ ಎಲ್ಲಿತ್ತು ಎಂಬುದಕ್ಕೆ ಖಚಿತ ಆಧಾರವಿಲ್ಲದೇ ಕಾರ್ಪೋರೇಟ್ ಫಾರ್ಮಿಂಗಿಗೆ ಹೊರಡುವುದು ಭಾರತದ ಸಂದರ್ಭದಲ್ಲಿ ಜೇನುಗೂಡಿಗೆ ಕಲ್ಲೆಸೆದಂತೆ ಎಂಬುದು ಆಳುವವರಿಗೆ ಅರಿವಿದೆ. ಹಾಗಾಗಿಯೇ 2016ರಲ್ಲಿ ಡಿಜಿಟಲ್ ಇಂಡಿಯಾ ಲಾಂಡ್ ರೆಕಾರ್ಡ್ಸ್ ಮಾಡರ್ನೈಸೇಷನ್ ಪ್ರೊಗ್ರಾಮ್ (DILRMP) ಚುರುಕು ಪಡೆದದ್ದು.

ಅಂದಾಜು 1988-89ರ ಹೊತ್ತಿಗೆ ಕೇಂದ್ರ ಸರಕಾರ ಮೊದಲಬಾರಿಗೆ ಭೂದಾಖಲೆಗಳ ಕಂಪ್ಯೂಟರೀಕರಣವನ್ನು ತೀರ್ಮಾನಿಸಿತು. ಅದು 2008 ಕ್ಕೆ ಬರುವ ಹೊತ್ತಿಗೆ ಚುರುಕು ಪಡೆದು, ಎಲ್ಲ ರಾಜ್ಯ ಸರಕಾರಿ ಯೋಜನೆಗಳು ಒಂದಾಗಿ ಒಂದು ಕೇಂದ್ರೀಕ್ರತ ಯೋಜನೆ ಆಯಿತು ಅದೇ (NLRMP). ಕುಂಟುತ್ತಿದ್ದ ಈ ಯೋಜನೆಗೆ, ಖಚಿತ ವೇಗ ಬಂದದ್ದು 2016ರಲ್ಲಿ ಮೋದಿ ಸರಕಾರ ಬಂದ ಬಳಿಕ. ಡಿಜಿಟಲ್ ಇಂಡಿಯಾದ ಭಾಗವಾಗಿ, ಸಂಪೂರ್ಣ ಕೇಂದ್ರ ಸರ್ಕಾರದ ಅಧೀನದ ಯೋಜನೆ ಆಗಿ ಬದಲಾದ DILRMPಗೆ ಹಾಲೀ ಕೇಂದ್ರ ಸರಕಾರ ಈತನಕ 946 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ. (ಯೋಜನೆಯ ವಿವರಗಳಿಗೆ ಬಾಕ್ಸ್ ನೋಡಿ.)

ಸ್ವಾತಂತ್ರ್ಯ ಪೂರ್ವದಲ್ಲಿ ಜಮೀನ್ದಾರಿ ವ್ಯವಸ್ಥೆಯ ಕಾರಣದಿಂದಾಗಿ ಭೂದಾಖಲೆಗಳು ಭಾರತದಲ್ಲಿ ವ್ಯವಸ್ಥಿತವಲ್ಲ. ಈವತ್ತಿಗೂ ಭೂಮಿಯ ಮಾಲಕತ್ವ ನಮ್ಮಲ್ಲಿ ವರ್ಚುವಲ್ಲೇ. ಅಂದರೆ ಒಬ್ಬರು ಇನ್ನೊಬ್ಬರಿಂದ ಖರೀದಿಸಿದ ಕ್ರಯಪತ್ರವೇ ಇನ್ನೂ ನಮ್ಮ ಮೂಲ ಭೂದಾಖಲೆ. ಆ ದಾಖಲೆಗೂ ಆ ವ್ಯಕ್ತಿಯ ಕೈನಲ್ಲಿರುವ ನೆಲದ ಅಳತೆಗೂ ವ್ಯತ್ಯಾಸ ಇರಬಹುದು!

2007ರಲ್ಲಿ ವಿಶ್ವಬ್ಯಾಂಕ್ ನಡೆಸಿದ ಅಧ್ಯಯನದ ಪ್ರಕಾರ ಭಾರತದ ನ್ಯಾಯಾಲಯಗಳಲ್ಲಿರುವ ದಾವೆಗಳಲ್ಲಿ ಮೂರನೇ ಎರಡರಷ್ಟು ಭೂವ್ಯಾಜ್ಯಗಳು. ಮತ್ತು ಒಂದು ಭೂವ್ಯಾಜ್ಯ ಇತ್ಯರ್ಥವಾಗಲು ಭಾರತದಲ್ಲಿ ನ್ಯಾಯಾಲಯಗಳು  ತೆಗೆದುಕೊಳ್ಳುವ ಸರಾಸರಿ ಸಮಯ ಇಪ್ಪತ್ತು ವರ್ಷಗಳು! (ಈ ಸಮೀಕ್ಷೆಯನ್ನು ವಿಶ್ವಬ್ಯಾಂಕು ಯಾಕೆ ನಡೆಸಬೇಕಾಗಿತ್ತೆಂಬುದು ಈವತ್ತಿಗೆ ಸರಳವಾಗಿ ಊಹಿಸಬಹುದಾದ ಸಂಗತಿ. ಈವತ್ತು ಕಾರ್ಪೋರೇಟ್ ಫಾರ್ಮಿಂಗ್ ಚಾಲ್ತಿಗೆ ಬರಲು ಹಾಕಲಾಗುತ್ತಿದ್ದ ತಳಪಾಯದ ಒಂದು ಭಾಗ ಅದು.) ನಗರಗಳಲ್ಲೂ ನೆಲದ ಒತ್ತಡದಿಂದಾಗಿ ಪುಟ್ಟಪುಟ್ಟ ಭೂಮಾಲಕತ್ವ, ಅಪಾರ್ಟ್ ಮೆಂಟುಗಳಂತಹ ಸಂಗ್ರಾಹ್ಯ ಭೂಮಾಲಕತ್ವ, ಬೇನಾಮಿ ಭೂಮಾಲಕತ್ವದಂತಹ ಸಂಕೀರ್ಣ  ವಿಚಾರಗಳ ಕಾರಣದಿಂದಾಗಿ ಭೂಮಿಯ ಮಾಲಕತ್ವಕ್ಕೆ ಖಚಿತ ರೂಪ ಕೊಡುವುದು ಅನಿವಾರ್ಯ ಆಗಿಬಿಟ್ಟಿದೆ.

ಈವತ್ತಿಗೂ ಭಾರತದಲ್ಲಿ ಭೂಮಾಲಕತ್ವಕ್ಕೆ ಆಧಾರ ಆಗಿರುವ ಕಾನೂನುಗಳೆಂದರೆ 1882ರ ಆಸ್ತಿ ವರ್ಗಾವಣೆ ಕಾಯಿದೆ ಮತ್ತು 1908ರ ಭೂಮಿ ನೋಂದಣಿ ಕಾಯಿದೆ. 2009ರಲ್ಲಿ ಸಂಸತ್ತಿನ ಆರ್ಥಿಕ ಸುಧಾರಣೆಗಳ ಸಮಿತಿಯು ಭೂಮಾಲಕತ್ವಕ್ಕೆ ಸರ್ಕಾರಿ ಗ್ಯಾರಂಟಿ ಸಹಿತವಾದ  ವ್ಯವಸ್ಥೆಯನ್ನು ಒದಗಿಸಲು ಶಿಫಾರಸು ಮಾಡಿತ್ತು. ಆಸ್ಟ್ರೇಲಿಯಾ, ಇಂಗ್ಲಂಡ್ ಮೊದಲಾದ ಪ್ರಗತಿ ಹೊಂದಿರುವ ದೇಶಗಳಲ್ಲಿ ಇದು ಈಗಾಗಲೇ ಚಾಲ್ತಿ ಇದೆ. (ವಿವರಗಳಿಗೆ ಬಾಕ್ಸ್ ನೋಡಿ.)

 

ಈಗ 2017ರ ಹೊತ್ತಿಗೆ ಲಭ್ಯವಿದ್ದ ಅಂಕಿಅಂಶಗಳ ಪ್ರಕಾರ ದೇಶದ 86% ಭೂದಾಖಲೆಗಳು ಕಂಪ್ಯೂಟರೀಕರಣಗೊಂಡಿದ್ದು, 47% ಮ್ಯುಟೇಶನ್ ದಾಖಲೆಗಳು (ಅಂದರೆ ಮಾಲಕತ್ವ ವರ್ಗಾವಣೆ ದಾಖಲೆಗಳು) ಕಂಪ್ಯೂಟರೀಕರಣಗೊಂಡಿವೆ. ಮತ್ತು ರೆಕಾರ್ಡ್ ಆಫ್ ರೈಟ್ಸ್ (RoR) ದಾಖಲೆಯನ್ನು ರಿಯಲ್ ಟೈಮಿನಲ್ಲಿ ಬದಲಾಯಿಸುವ ಕೆಲಸ ಆಗಿರುವುದು 15% ದಾಖಲೆಗಳಲ್ಲಿ ಮಾತ್ರ.

ಇದು ಎಷ್ಟು ಸಂಕೀರ್ಣವಾದ ಕೆಲಸ ಎಂಬುದಕ್ಕೆ ಸಣ್ಣ ಸೂಚನೆ: ದೇಶದ 6.4ಲಕ್ಷ ಹಳ್ಳಿಗಳಲ್ಲಿ ಭೂನಕಾಶೆಗಳನ್ನು ರಚಿಸಿರುವುದು 19ನೇ ಶತಮಾನದ ಆದಿಯಲ್ಲಿ. ಬರಿಯ ಗ್ರಾಮೀಣ ಭಾಗಗಳಲ್ಲೇ 14ಕೋಟಿಗೂ ಮಿಕ್ಕಿ ಭೂಮಾಲಕರಿದ್ದು, ಅವರಲ್ಲಿ 43ಕೋಟಿಗೂ ಮಿಕ್ಕಿ ಭೂದಾಖಲೆಗಳಿವೆ. ಈ ನಕಾಶೆಗಳನ್ನು ಮತ್ತು ಲಿಖಿತ ಭೂದಾಖಲೆಗಳನ್ನು ಪರಸ್ಪರ ಒಂದೇ ಧ್ವನಿಯಲ್ಲಿರುವಂತೆ ನೋಡಿಕೊಳ್ಳುವುದು ಅತಿದೊಡ್ಡ ಸವಾಲಾಗಿದ್ದು, ಈ ತನಕ ಬರೀ 15% ದಾಖಲೆಗಳಲ್ಲಿ ಮಾತ್ರ ಇದು ಸಾಧ್ಯವಾಗಿದೆ! (ವಿವರಗಳಿಗೆ ಬಾಕ್ಸ್ ನೋಡಿ.)

 

ಇಷ್ಟೆಲ್ಲ ಆದ ಮೇಲೆ, ನಮಗಿರುವ ಹೊಣೆ ಎಂದರೆ, ಈ ಚುರುಕಿನ ಬದಲಾವಣೆಗಳನ್ನೆಲ್ಲ “ಆದದ್ದೆಲ್ಲ ಒಳ್ಳೆಯದಕ್ಕೇ”ಎಂಬ ನೆಲೆಯಲ್ಲಿ ಸ್ವೀಕರಿಸಿ, ಕಾರ್ಪೋರೇಟ್ ಗಳ ಕೈಗೆ ನಮ್ಮ ನೆಲ ಕೊಡುವ ಬದಲಿಗೆ ನಾವೇ ಕಾಪರೇಟಿವ್ ಆಗಿ (ಸಹಕಾರಿ ತತ್ವದಲ್ಲಿ) ನಮ್ಮ ಕ್ರಷಿ ಭೂಮಿಗಳಲ್ಲಿ ಫಾರ್ಮಿಂಗ್ ಮಾಡಲು ಸಾಧ್ಯವಿದೆಯೇ ಎಂದು ಯೋಚಿಸುವುದು ಮತ್ತು ಆ ನಿಟ್ಟಿನಲ್ಲಿ ಕಾರ್ಯಾಚರಿಸುವುದು.

 

‍ಲೇಖಕರು Avadhi GK

March 12, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: