ಡಾ.ಸಿದ್ದನಗೌಡ ಪಾಟೀಲ್
ಕಲಬುರ್ಗಿ ಗುರುಗಳು ಬಸವರಾಜ ಕಟ್ಟೀಮನಿ ಟ್ರಸ್ಟ್ ನ ಅಧ್ಯಕ್ಷರಾಗಿದ್ದರು. ಒಂದು ದಿನ ಫೋನ್ ಮಾಡಿ ಕಟ್ಟೀಮನಿ ಟ್ರಸ್ಟ್ ನಿಂದ ಅವರ ಹುಟ್ಟೂರಿನಲ್ಲಿ (ಮಲಾಮರಡಿ- ಬೆಳಗಾವಿ ಜಿಲ್ಲೆ) ಕಾರ್ಯಕ್ರಮ ಇದೆ ನೀನು ಬಂದು ಮಾತಾಡು ಎಂದರು.

ಸಾಹಿತಿ ಎಂ.ಎಂ.ಕಲಬುರ್ಗಿ
ನಾನು ಬರ್ತೀನಿ ಸರ್ ಎಂದೆ. ಧಾರವಾಡಕ್ಕೆ ಬಾ, ನೇರ ಕಲ್ಯಾಣ ನಗರದ ಈಶ್ವರನ್ ಕಾಲೇಜ್ ಗೆಸ್ಟ್ ಹೌಸಿಗೆ ಬಂದು ರೆಡಿ ಆಗು ಅಲ್ಲಿಂದ ಮಲಾಮರಡಿಗೆ ಕಾರ್ ನಲ್ಲಿ ಹೋಗೋಣ ಅಂದ್ರು. ಹೂನ್ರಿ ಸರ್ ಅಂದೆ. ಕಾರ್ಯಕ್ರಮ ದಿನ ಧಾರವಾಡಕ್ಕೆ ಹೋಗಿ ಕಲಬುರ್ಗಿ ಗುರುಗಳು ಹೇಳಿದಂತೆ ಕಲ್ಯಾಣ ನಗರದ, ಗುರುಗಳ ಮನೆ ಹತ್ತಿರವೇ ಇದ್ದ ಗೆಸ್ಟ್ ಹೌಸ್‍ಗೆ ಹೋದೆ. ಹೋದ ಹತ್ತು ನಿಮಿಷಕ್ಕೇ ಕಲಬುರ್ಗಿ ಗುರುಗಳ ಫೋನು, “ಬಂದ್ಯಾ?. ಬಂದೀನ್ರೀ ಸರ್, ನೀವು ಹೇಳಿದ್ರ ಬರಲಿಲ್ಲ ಅಂದ್ರ ಹೆಂಗ ಅಂದು ಫೋನಿಟ್ಟೆ.
ನಾನು ಫೋನ್ ಇಟ್ಟ 20 ನಿಮಿಷ ಆಗಿತ್ತು. ಕಲಬುರ್ಗಿ ಗುರುಗಳು ಗೆಸ್ಟ್ ಹೌಸ್‍ಗೆ ಬಂದರು. ಕೈಯಲ್ಲಿ ದಿನಪತ್ರಿಕೆ, ಚಹಾ ಪ್ಲಾಸ್ಕ್ ಹಿಡಿದು, ನಾನಿದ್ದ ರೂಂ ಬಾಗಿಲಲ್ಲಿ ನಿಂತಿದ್ದರು.
ನನ್ನ ಸಿಟ್ಟಿನ ಕಟ್ಟೆ ಒಡೆದು ಹೋಯಿತು, ಕೂಗಾಡಿದೆ. ನೀವು ಹೇಳಿದ್ರೆ ನಿಮ್ಮನೆಗೆ ಬಂದು ಟೀ ಕುಡಿದು ಬರ್ತಿದ್ದೆ ಟೀ, ಪೇಪರ್ ನೀವ್ಯಾಕೆ ತಂದ್ರಿ? ನನ್ನ ಕಂಠ, ಹರಿವ ಆಕ್ರೋಶ, ಕಣ್ಣಲ್ಲಿ ಜಿನುಗಿದ ನೀರು ನೋಡಿ ಗುರುಗಳು ಖಿನ್ನರಾದರು. ನೀನು ನನ್ನ ಶಿಷ್ಯ ಇರಬಹುದು ಈಗ ನೀನು ನನ್ನ ಅತಿಥಿ ಎಂದು ಸುಧಾರಿಸಲು ಬಂದರು.
ನಾನು ಅವರ ಕೈಯ್ಯಲ್ಲಿನ ದಿನಪತ್ರಿಕೆ, ಚಾಯ್ ಪ್ಲಾಸ್ಕ್ ಕಸಿದುಕೊಂಡು ಬರ್ರಿ ಸರ್ ಮನೆಗೆ ಹೋಗೋಣ ಎಂದು ಹೊರಟೆ. ಕರುವನ್ನು ಬೆನ್ನಟ್ಟಿ ಬರುವ ಹಸುವಿನ ಥರ ಬಂದರು. ಅವರ ಮನೆಗೆ ಹೋಗಿ ಅಲ್ಲಿಯೇ ಟೀ ಕುಡಿದು ಎದ್ದು ಬಂದೆ. ನನ್ನ ಸಿಟ್ಟು ಕಡಿಮೆ ಆಗಿರಲಿಲ್ಲ. ಬಾಗಿಲು ದಾಟಿ ಬರುವಾಗ , ದೌಡ ರೆಡಿ ಆಗು, ಆ ರಮೇಶ ಜಾರಕಿಹೊಳಿ ಬ್ಯಾರೆ ಬರ್ತಾನ, ಅವನೂ ಗೆಸ್ಟ್, ದೌಡ ಹೋಗೂನು ಅಂದ್ರು.

ಚಿತ್ರಕೃಪೆ: ಸಿದ್ದಪ್ಪ ಮೂಲ್ಗೆ
ಈಗ ಅವರ ಧ್ವನಿಯಲ್ಲಿ ಆದೇಶವಿತ್ತು. ನನಗೆ ಆಗ ನಗು ಬಂತು. ಕಣ್ಣು ತೇವಗೊಡಿದ್ದವು. ಹೂನ್ರಿ ಸರ್ ನಾನೇ ರೆಡಿ ಆಗಿ ಇಲ್ಗೇ ಬರ್ತೀನಿ ನೀವು ಕರಿಯಾಕ ಬಂದ್ರ ಬಗಿ ಹರೆಂಗಿಲ್ರಿ ಅಂದೆ. ಏ ಹೋಗೋ ಉಡಾಳಾ ಅಂದ್ರು. ಖುಷಿ ಆತು. ಅವರ ಮನೆ ಬಾಗಿಲಲ್ಲಿ ನಾನು ನಿಂತು ಆ ಗುರುವಿನಿಂದ ಬೈಸಿಕೊಂಡ ಸ್ಥಳದಲ್ಲಿಯೇ ಗುರುವಿಗೆ ಗುಂಡು ತಗಲಿದ್ದು. ಗಾಂಧಿ ‘ಹೇ ರಾಮ್’ ಎಂದಂತೆ ನನ್ನ ಗುರು ‘ಬಸವಾ ‘ಎಂದಿರಬೇಕು.
ನಿಮ್ಮನ್ನು ಮರೆತಿಲ್ಲ ಗುರುವೆ, ಮರೆಯಲಾರದ, ಮರೆಯಲಾಗದ ಕರುಳ ಭಾಷೆಯ ಗುರು ನೀವು.






0 Comments