ನೇತಾಜಿ ಸೆಕ್ಯುಲರ್ ಮನಸ್ಥಿತಿಯವರೇ? ಅಥವಾ ಕಮ್ಯುನಲ್ಲೇ?

ಭಾರತ ದೇಶ ಕಂಡ ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಪತ್ರಕರ್ತ, ಲೇಖಕ ಬಿ.ಎಂ.ಹನೀಫ್ ಅವರು ‘ಸೆಕ್ಯುಲರ್ ಸೇನಾನಿ ಸುಭಾಷ್ ಚಂದ್ರ ಬೋಸ್’ ಎಂಬ ಕೃತಿ ರಚಿಸಿದ್ದಾರೆ. ಈ ಕೃತಿಯಲ್ಲಿ ತೀವ್ರಗಾಮಿ ಪಡೆಯಲ್ಲಿ ಪ್ರಮುಖರಾಗಿದ್ದ ನೇತಾಜಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ವಹಿಸಿದ್ದ ಪಾತ್ರವನ್ನು ವಿವರವಾಗಿ ಹೇಳಲಾಗಿದೆ.

ಈ ಕೃತಿಯ ಬಗ್ಗೆ ನಂದಿನಿ ವಿಶ್ವನಾಥ ಹೆದ್ದುರ್ಗ ವಿಮರ್ಶಿಸಿದ್ದಾರೆ..

ನಂದಿನಿ ವಿಶ್ವನಾಥ ಹೆದ್ದುರ್ಗ

ಇತಿಹಾಸದ ಬಗ್ಗೆ ನಮಗೆಲ್ಲರಿಗೂ ಒಂದು ಪೂರ್ವಾಗ್ರಹವಿದೆ. ಅದು ನಾಯಕರು, ನೇತಾರರ ವೈಯುಕ್ತಿಕ ವಿವರಗಳಿರಬಹುದು, ದೇಶದ ಇತಿಹಾಸವಿರಬಹುದು,
ಆಳಿದ ಸಾಮ್ರಾಜ್ಯಗಳ ಕುರಿತಾಗಿರಬಹುದು, ದೇಶ-ದೇಶಗಳ ನಡುವಿನ ಗಲಭೆ, ಯುದ್ಧ, ಸ್ನೇಹದ ಕುರಿತಾಗಿರಬಹುದು. ಮಹಾ ನಾಗರಿಕತೆಗಳು ನಿರ್ನಾಮವಾದ ಕುರಿತಾಗಿಯೂ ಇರಬಹುದು.

ಪ್ರತಿಯೊಬ್ಬರಿಗೂ ತಾವು ತಿಳಿದ್ದದ್ದೇ ಸತ್ಯ, ನಮ್ಮ ಓದೇ ಶ್ರೇಷ್ಟ ಎನ್ನುವ ಮನಸ್ಥಿತಿ. ಆದರೆ ವಾಸ್ತವವಾಗಿ ಸತ್ಯ ಭೂತದ ಜೊತೆಗೆ ಹೂತುಹೋಗಿರುತ್ತದೆ.
ದಾಖಲೆಗಳಲ್ಲಿ, ಬರಹಗಳಲ್ಲಿ, ಕಲೆಯಲ್ಲಿ ಅಥವಾ ಮೌಖಿಕವಾಗಿ ಹರಿದು ಬರುತ್ತದೆಯಾದರೂ ಸತ್ಯವೂ ಕಾಲದ ಹರಿವಿನಲ್ಲಿ ಬದಲಾವಣೆ ಕಾಣುತ್ತಲೇ ಹೋಗುತ್ತದೆ. ಅದು ಪ್ರಜ್ಞಾಪೂರ್ವಕವೂ ಆಗಬಹುದು ಅಥವಾ ಅಪ್ರಜ್ಞೆಯಿಂದಲೂ. ಹಾಗಾಗಿಯೇ there is no eternal truth ಅಂತ ಹೇಳಿದ್ದಾರೆ ಅನಿಸುತ್ತೆ.

ಇತಿಹಾಸವನ್ನು ನೋಡುವಲ್ಲಿ, ಅರಿಯುವಲ್ಲಿ ಮತ್ತದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವಲ್ಲಿ ಒಂದು ನಿರ್ಭಾವುಕ ಮನಸ್ಥಿತಿ ಇರುವುದು ಎಂತಹ ಅನಿವಾರ್ಯ ಎನ್ನುವುದು ಸಮಾಜದ ಸದ್ಯದ ಸ್ಥಿತಿಯನ್ನು ಗಮನಿಸಿದಾಗ ಅರಿವಾಗುತ್ತದೆ. ಶತಮಾನದ ಹಿಂದೆ ಯಾರೋ ಮುಸ್ಲಿಂ ದೊರೆ ಮಂದಿರಗಳನ್ನು ನಾಶಪಡಿಸಿ, ಮಿನಾರುಗಳನ್ನು ಕಟ್ಟಿಸಿದನೆಂದರೆ ಅದನ್ನು ವರ್ತಮಾನಕ್ಕೆ ತಂದು ಮತ್ತೊಮ್ಮೆ ಕಟ್ಟುವ ಅಥವಾ ಕೆಡವುವ ಕಾರ್ಯ ಬೇಕಿದೆಯಾ.?

ಯಾವುದೋ ಸಾಮ್ರಾಜ್ಯದ ಹಿಂದು, ಜೈನ ಅಥವಾ ಇನ್ನಾವುದೊ ಧರ್ಮದ ದೊರೆ ಶಾಂತಿ ಪ್ರಿಯನೂ, ಜನಾನುರಾಗಿಯೂ ಆಗಿದ್ದ ಮಾತ್ರಕ್ಕೆ ಈಗಿನ ಆ ಧರ್ಮದ ನೇತಾರರೂ ಅವರ ಜೆರಾಕ್ಸು ಕಾಪಿಗಳೆಂದು ಪರಿಗಣಿಸಬಹುದೇ? ಯಾವುದೇ ಅಭಿವೃದ್ಧಿ ಕೆಲಸ ಆಗದೇ ಇದ್ದಾಗ, ಅಥವಾ ತಾವು ಮಾಡಿಕೊಂಡ ತಪ್ಪು ಮುಚ್ಚಿ ಹಾಕಲು ವ್ಯವಸ್ಥೆ ಬಳಕೆ ಮಾಡುತ್ತಿರುವ ಧರ್ಮದ ತಂತ್ರ ಇನ್ನೂ ಸಾಮಾನ್ಯರ ಅರಿವಿಗೆ ಬರುತ್ತಿಲ್ಲವೇಕೆ.?

ಕಾರಣವೇನೆಂದರೆ.. ಇದನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಇತಿಹಾಸದ ತಪ್ಪುಗಳನ್ನು ವರ್ತಮಾನದ  ದಿನಚರಿಯಲ್ಲಿ ಬೆರೆಸಿ ರಾಜಕಾರಣ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆ. ಇದು ಪಕ್ಷಾತೀತವಾಗಿ ಆಗುತ್ತಿರುವುದನ್ನ ಗಮನಿಸಿದರೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ಕುದುರೆಯ ನೆನಪಾಗುತ್ತದೆ.

ಆದರೆ, ಇದು ಹೀಗೆ ಮುಂದುವರೆದರೆ ಗತದ ತಪ್ಪಿಗೆ (ಆಯಾ ಕಾಲದ ದೃಷ್ಟಿಯಿಂದ ನೋಡುವುದಾದರೆ ಸರಿ ತಪ್ಪುಗಳು ವ್ಯಾಖ್ಯಾನಕ್ಕೆ ಸಿಕ್ಕುವುದಿಲ್ಲ) ಪ್ರಸ್ತುತದ ಉಜ್ವಲ, ಪ್ರತಿಭಾ ಸಂಪನ್ನ ಸಮಾಜ ಬಲಿಯಾಗಲಾರದೇ? ವೈವಿಧ್ಯತೆಯೇ ಪ್ರಧಾನವಾಗಿರುವ, ವಿವಿಧ ಆಚರಣೆಗಳೇ ಅಸ್ಮಿತೆಯಾಗಿರುವ ನಮ್ಮ ರಾಷ್ಟ್ರ ಇಂತಹ ಪೂರ್ವಗ್ರಹಗಳಿಂದ ಕಲಕಿದ ಕೊಳವಾಗಲಾರದೇ.?

ನಮ್ಮ ಸ್ವಾತಂತ್ರ್ಯ ಸೇನಾನಿಗಳ, ನೇತಾರರ ಕುರಿತು ಇಂತಹ ಪೂರ್ವಾಗ್ರಹಗಳು ವರ್ತಮಾನವನ್ನು ಗೊಂದಲಕ್ಕೀಡು ಮಾಡಿ ಭವಿಷ್ಯದಲ್ಲಿ ಅಸ್ತವ್ಯಸ್ತತೆ ಉಂಟುಮಾಡುತ್ತವೆ ತಾನೇ?. ಈಗಿನ ದಿನಮಾನದ ಯುವ ಸಮುದಾಯ ಮತ್ತು ಬುದ್ಧಿಜೀವಿಗಳು ಎನ್ನುವ ಎರಡು ವರ್ಗಗಳ ಈ ಬಗೆಯ ಮನಸ್ಥಿತಿಯನ್ನು ತುಸುವಾದರೂ ನಿವಾರಿಸುವ ಸಲುವಾಗಿ  ಬಿ.ಎಂ.ಹನೀಫ್ ಅವರ “ಸೆಕ್ಯುಲರ್ ಸೇನಾನಿ ಸುಭಾಷ್ ಚಂದ್ರ ಬೋಸ್” ಎನ್ನುವ ಸೆಕ್ಯುಲರಿಸಂ ಸರಣಿಯ ಮೊದಲ ಪುಸ್ತಕ ಗಮನ ಸೆಳೆಯುತ್ತದೆ.                                     

ನೇತಾಜಿಯವರ ವೈಯಕ್ತಿಕ ವಿವರಗಳಿಗೆ ಹೆಚ್ಚಿನ ಮಹತ್ವವನ್ನೇನೂ ಕೊಡದ ಹನೀಫರ ಬರವಣಿಗೆ ಅವರ ನಿಲುವುಗಳ ಕುರಿತು ಸ್ಪಷ್ಟನೆ ಕೊಡುವಲ್ಲಿ ಮಾತ್ರ ತನ್ನ ಗುರಿಯಿರಿಸಿಕೊಂಡ ಹಾಗಿದೆ. ತೀವ್ರಗಾಮಿ ಪಡೆಯಲ್ಲಿ ಪ್ರಮುಖರಾಗಿದ್ದ ನೇತಾಜಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ವಹಿಸಿದ ಪಾತ್ರವನ್ನು ವಿವರವಾಗಿ ಹೇಳಲಾಗಿದೆ.

ಈ ಬಗೆಯ ಓದು ಇಂದಿಗೆ ಯಾಕೆ ಪ್ರಸ್ತುತವೆನ್ನುವ ಪ್ರಶ್ನೆ ಬಂದರೆ.. ಸುಭಾಷ್ ಚಂದ್ರ ಬೋಸರು ಅಂದಿನ ಹೋರಾಟದ ಸಂದರ್ಭದಲ್ಲಿ ನೀಡಿದ್ದಂತಹ ರಾಷ್ಟ್ರೀಯತೆಯ ಕಲ್ಪನೆಯನ್ನು ಮತ್ತದೆ ಪೂರ್ವಾಗ್ರಹದ ಮನಸ್ಸಿನ ಮಂದಿ ಕಲಕುತ್ತಿದ್ದಾರೆ. ನೇತಾಜಿಯವರು ಮುಸ್ಲಿಂ ಪಕ್ಷಪಾತಿಯಾಗಿದ್ದರು ಎನ್ನುವುದನ್ನು ಬಹಳ ಖಡಕ್ಕಾಗಿ ಹೇಳಲಾಗ್ತಿದೆ.

ಆದರೆ, ವಾಸ್ತವದಲ್ಲಿ ನೇತಾಜಿಯವರು ತಮ್ಮ ಧರ್ಮದ ಬಗ್ಗೆ ಪ್ರೀತಿಯುಳ್ಳವರೂ, ಅನ್ಯಧರ್ಮದ ಬಗ್ಗೆ ಗೌರವ ಮತ್ತು ಪ್ರೇಮವುಳ್ಳವರೂ ಆಗಿದ್ದರು ಎನ್ನುವುದನ್ನು ಅವರೇ ಬರೆದ ಕೆಲವು ಪುಸ್ತಕಗಳ ಆಧಾರದ ‌ಮೇರೆಗೆ, ಅವರ ಕುಟುಂಬದವರು ಬರೆದ ಅವರ ಆತ್ಮಚರಿತ್ರೆಯ ಆಧಾರದ ಮೇರೆಗೆ ಇಲ್ಲಿ ಸ್ಪಷ್ಟೀಕರಿಸಲಾಗಿದೆ.
ಹಾಗೆಯೇ ಅವರ ದೇಶ ಪ್ರೇಮವು ಯಾವ ಉಳಿದ ನೇತಾರರಿಗಿಂತಲೂ ಕಡಿಮೆಯದಲ್ಲವೆಂದು ಹೇಳುವುದರ  ಜೊತೆಗೆ  ಅವರ ತೀವ್ರಗಾಮಿ ಸ್ವಭಾವದ ಕುರಿತಾಗಿಯೂ ಪರಿಚಯಿಸಲಾಗಿದೆ.

ನೇತಾಜಿಯವರು ವಿದೇಶಗಳನ್ನು ತಮ್ಮ ಸ್ನೇಹವಲಯಕ್ಕೆ ತೆಗೆದುಕೊಂಡಿದ್ದನ್ನು, ವಿಶೇಷವಾಗಿ ಜರ್ಮನಿಯ ಜೊತೆ ಸ್ನೇಹ ಬೆಳೆಸಿದ್ದನ್ನ ಫ್ಯಾಸಿಸ್ಟ್ ಸಂಸ್ಕಾರಕ್ಕೆ ಹೋಲಿಕೆ ಮಾಡಿದವರೂ ಇದ್ದಾರೆ. ಆದರೆ ಶತ್ರುವಿನ ಶತ್ರು ಮಿತ್ರನಾಗುವ ಅವರ ಲೆಕ್ಕಾಚಾರಗಳನ್ನು ಈ ಪುಸ್ತಕದಲ್ಲಿ ಹೇಳಲಾಗಿದೆ‌.

ಶಾಲಾ ದಿನಗಳಿಂದಲೇ ಅವರ ತೀವ್ರಗಾಮಿತ್ವದ ಸ್ವಭಾವದ ಪರಿಚಯ ಮಾಡಿಕೊಡುತ್ತ ದೇಶದ ಅತ್ಯುನ್ನತ ಐಸಿಎಸ್ ಪರೀಕ್ಷೆ ಪಾಸು ಮಾಡಿದರೂ ಬ್ರಿಟಿಷರ ಆಡಳಿತದಲ್ಲಿ ಕೆಲಸ ಮಾಡಲಿಚ್ಚಿಸದೆ, ಅದನ್ನು ತ್ಯಜಿಸಿ ಸ್ವಾತಂತ್ರ್ಯದ ಸಲುವಾಗಿ ಮನಸ್ಸುಗಳನ್ನು ಒಂದು ಮಾಡುವ ಕೆಲಸದಲ್ಲಿ ತೊಡಗಿಕೊಳ್ಳುವುದು ಅವರ ರಾಷ್ಟ್ರೀಯತೆಯ ದ್ಯೋತಕವಾಗಿ ಕಂಡುಬರುತ್ತದೆ.

ವಿದೇಶದಲ್ಲಿ ಉನ್ನತ ವಿದ್ಯೆಯನ್ನು ಪಡೆದ ನೇತಾಜಿಯವರು ಅಖಿಲ ಭಾರತ ಯುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ, ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದರೂ ಪಕ್ಷದ ಹಿರಿಯರ ಸಹಕಾರವಿರದೆ ರಾಜೀನಾಮೆ ಕೊಡುತ್ತಾರೆ. ತಮ್ಮದೇ ಪಕ್ಷದ ಸದಸ್ಯರ ವಿರೋಧದ ನಡುವೆಯೂ ನೇತಾಜಿ ವಿಜಯಿಯಾದದ್ದು ಅವರಿಗಿದ್ದ ಅಗಾಧ ಜನಬೆಂಬಲಕ್ಕೆ ಸಾಕ್ಷಿಯಾಗುತ್ತದೆ. ಅವರ ವಿಜಯವನ್ನು ಗಾಂಧೀಜಿಯವರು ‘ತಮ್ಮ ಸೋಲು’ ಎಂದು ಹೇಳಿಕೊಂಡರೂ ನೇತಾಜಿ ಬಾಪುವನ್ನು ಸದಾ ರಾಷ್ಟ್ರಪಿತ ಎಂತಲೇ ಕರೆದರು. ಹೃದಯಪೂರ್ವಕ ಪ್ರೀತಿಯನ್ನು ಬಾಪುರವರಿಗೆ ಮುಡಿಪಿಟ್ಟರು‌.

ಎಐಸಿಸಿಯ ಯಾವುದೋ ನಿರ್ಣಯವನ್ನು ವಿರೋಧಿಸಿದ್ದರ ಸಲುವಾಗಿ ಬೋಸರನ್ನು ಪಕ್ಷದಿಂದ ಉಚ್ಚಾಟಿಸಿದರೂ ಅವರ ನಿಷ್ಠೆ ಬದಲಾಗಲಿಲ್ಲ. ಕಾಂಗ್ರೆಸಿನ ಹಿರಿಯ ನಾಯಕರು ಬ್ರಿಟಿಷರ ಜೊತೆಗೆ ರಾಜಿಗೆ ತಯಾರಾಗುತ್ತಿರುವುದಷ್ಟೇ ಅವರ ಸಿಟ್ಟಿಗೆ ಕಾರಣವಾಗಿತ್ತು. ಯಾವುದೇ ಮುಲಾಜಿಲ್ಲದ, ರಾಜಿಯಿಲ್ಲದ ಪೂರ್ಣ ಸ್ವಾತಂತ್ರ್ಯವೇ ತಮ್ಮ ಗುರಿ ಎನ್ನುವುದನ್ನು ಅವರು ಸ್ಪಷ್ಟವಾಗಿ ತಿಳಿಸುತ್ತಾರೆ.

ಈ ನಿಟ್ಟಿನಲ್ಲಿ ಇಲ್ಲಿನ ಎಐಸಿಸಿಯ ಹಿರಿಯ ನಾಯಕರ (ಮಂದಗಾಮಿಗಳ) ನೆರವು ಸಿಕ್ಕದೇ ಹೋದಾಗ ವಿದೇಶಗಳಲ್ಲಿ ಓಡಾಡಿ ಸೇನೆ ಕಟ್ಟುವ ಯತ್ನ ನಡೆಸುತ್ತಾರೆ. ಮಹಿಳೆಯರೂ ಈ ಹೋರಾಟದಲ್ಲಿ ಸಮವಾಗಿ ಭಾಗವಹಿಸಬೇಕೆಂದು ಲಕ್ಷ್ಮಿ ಸ್ವಾಮಿನಾಥನ್ ಅವರಿಗೆ ತಮ್ಮ ಆಜಾದ್ ಹಿಂದ್‍ ಸಂಘಟನೆಯ ಜವಾಬ್ದಾರಿ ವಹಿಸಿರುವುದು ನೋಡುವಾಗ ಆಗಲೇ ಸಮಾನತೆಯ ಕುರಿತು ಅವರಿಗಿದ್ದ ಸ್ಪಷ್ಟತೆ ಅರಿವಾಗುತ್ತದೆ.

ಹಿಂದೂ-ಮುಸ್ಲಿಂ ಐಕ್ಯತೆಯ ಜೊತೆಗೆ ಸರ್ವಧರ್ಮ ಗಳನ್ನು ಸಮನಾಗಿ ಪರಿಗಣಿಸುವುದು ನೇತಾಜಿಯವರ ಪ್ರಮುಖ ಧ್ಯೇಯಗಳಲ್ಲೊಂದಾಗಿತ್ತು. ಇಂದಿಗೂ ಭಾರತದ ಹೃದಯಗಳ ಮಿಡಿತ ‘ಜೈ ಹಿಂದ್ ‘ ನೇತಾಜಿಯವರ ಘೋಷಣೆ. ಆದರೆ, ಇಷ್ಟೆಲ್ಲಾ ಕೆಲಸಗಳ ಭರದಲ್ಲಿರುವಾಗಲೇ, ದೇಶ ಅಸಹಕಾರ ಚಳುವಳಿಯನ್ನು ಆರಂಭಿಸಿದಾಗಲೇ ನೇತಾಜಿಯವರು ಕಣ್ಮರೆಯಾದರು ಎನ್ನುವ ಸುದ್ದಿ ಅವರ ಕುರಿತು ಉಹಾಪೋಹಗಳಿಗೆ ಎಡೆಮಾಡಿಕೊಟ್ಟಿದ್ದೂ ಸತ್ಯ.

ಆದರೆ, ವಿದೇಶಿ ನೆಲದಿಂದ ಬಂದ ಬೋಸರ ಬಾನುಲಿ ಭಾಷಣ ಅಲ್ಲಿಯವರೆಗೂ ಹಬ್ಬಿದ್ದ ವದಂತಿಗಳಿಗೆ ಸತ್ಯದ ಅರಿವು ಮೂಡಿಸುತ್ತದೆ. ಸಿಂಗಾಪುರ, ಬರ್ಮಾ, ಬ್ಯಾಂಕಾಕ್, ಜರ್ಮನಿ, ರಷ್ಯಾ, ಜಪಾನ್ ಮುಂತಾದ ವಿದೇಶಿ ನೆಲದಲ್ಲಿ ಹಲವು ವರ್ಷಗಳ ಕಾಲ ಓಡಾಡಿ ಗುಪ್ತವಾಗಿ(ಐ ಎನ್ ಎ) ದೇಶದ ಸ್ವಾತಂತ್ರ್ಯಕ್ಕಾಗಿ ಇಂಡಿಯನ್ ನ್ಯಾಷನಲ್ ಆರ್ಮಿಯನ್ನು ಕಟ್ಟುತ್ತಾರೆ.

ಆದರೂ ತಮ್ಮ ಹೋರಾಟ ಒಂದು ಪೂರ್ಣ ಸ್ವರೂಪ ಪಡೆಯುತ್ತಿದೆ ಎನುವಷ್ಟರಲ್ಲೇ., 1945ರಲ್ಲಿ ಬೋಸ್ ವಿಮಾನ ಅಪಘಾತದಲ್ಲಿ ಮೃತಪಟ್ಟರು ಎನ್ನುವ  ಸುದ್ದಿ ಎಷ್ಟರ ಮಟ್ಟಿನ ಸತ್ಯ? ಈ ಸಂದರ್ಭದಲ್ಲಿ ಅವರ ಜೊತೆಗಿದ್ದ ಅವರ ನೆಚ್ಚಿನ ಸ್ನೇಹಿತ ಹಬೀಬುರ್ ರೆಹಮಾನ್ ಸತ್ಯ ಅಡಗಿಸಿಟ್ಟರೇ?. ಅದಾದ ನಂತರವೂ ಬೋಸರು ಬೇರೆ-ಬೇರೆ ಹೆಸರುಗಳಿಂದ ಬದುಕಿದ್ದರು ಎನುವುದು ಸತ್ಯವೇ? ಧರ್ಮಾಚರಣೆಗಳ ಪ್ರತಿಪಾದನೆಯಲ್ಲಿ ,ರಾಷ್ಟ್ರೀಯತೆಯ ನಿಲುವಿನಲ್ಲಿ ಅವರಿಗೆ ಸ್ವಕೀಯರೇ ಶತ್ರುಗಳಾದರೇ? ಅವರ ಸಾವಿನ ವಿಚಾರದಲ್ಲಿ ಸುಳ್ಳು ವದಂತಿ ಸೃಷ್ಟಿಯಾಗಿದ್ದರೆ ಅದು ಯಾಕೆ? ಅಥವಾ ಅವರು ಕೊನೆಯವರೆಗೂ ವಿದೇಶದಲ್ಲಿ ತಮ್ಮ ಪತ್ನಿಯೊಡನೆ ವಾಸಿಸಿ ವೃದ್ಧಾಪ್ಯದಲ್ಲಿ ತೀರಿಕೊಂಡರು ಎನುವುದು ಸತ್ಯವೇ..?

ಹಾಗಿದ್ದರೆ ಇಷ್ಟೆಲ್ಲಾ ದಿಟ್ಟ ನಿಲುವಿನ ಬೋಸ್ ಯಾಕೆ ಸ್ವದೇಶದಲ್ಲಿ ನೆಲೆ ನಿಲ್ಲಲಿಲ್ಲ.? ಹಬೀಬುರ್ ರೆಹಮಾನರಿಗೆ ಮಾತ್ರ ತಿಳಿದಿದೆ ಎನ್ನಲಾಗುವ ಬೋಸರ ಸಾವಿನ ಸತ್ಯ ಅದೇ ಬಾಂಬರ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಜಪಾನಿ ವಿಜ್ಞಾನಿಗಳಿಂದ ಯಾಕೆ ತಿಳಿಯಲಾಗಲಿಲ್ಲ.? ಧೀರ ನಾಯಕನೊಬ್ಬನ ಸಾವಿನ ಸುದ್ದಿಯನ್ನು ರೆಹಮಾನರು ತನ್ನ ಸೇನೆಯ (ಐ ಎನ್ ಎ)ಯ ವಿವಿಧ ಘಟಕಗಳಿಗೆ ಯಾಕೆ ತಿಳಿಸಲಿಲ್ಲ.? ಸುಭಾಷ್ ಚಂದ್ರ ಬೋಸರು ಟೈಹೋಕ್‍ನಿಂದ ತಪ್ಪಿಸಿಕೊಂಡು ಹೋಗಿ ಸೈಬೀರಿಯಾದಲ್ಲಿ ವಾಸವಾಗಿ ಅಲ್ಲಿಯೇ ಮೃತರಾದರು ಎನ್ನುವುದೇ ಹೆಚ್ಚು ನಂಬಲರ್ಹ ಸುದ್ದಿಯೇ? ಮುಸ್ಲಿಮರನ್ನು ಆ ಬಗೆಯಲ್ಲಿ ನಂಬಿಕೆಗೆ ತೆಗೆದುಕೊಂಡ ಬೋಸರ ಗುಣವಿಶೇಣವೇನು? ಬೋಸರು ಸೆಕ್ಯುಲರ್ ಮನಸ್ಥಿತಿಯವರೇ ಅಥವಾ ಕಮ್ಯುನಲ್ಲೇ?

ಈ ಪುಸ್ತಕದ ಓದಿನೊಂದಿಗೆ ಇಂತಹ ಸಾವಿರಾರು ಪ್ರಶ್ನೆಗಳು ಉದ್ಭವವಾಗಿ ನಮ್ಮ ನಡುವೆಯೇ ಇದ್ದು ಹೋದ ಅದ್ಭುತ ಸೇನಾನಿಯೊಬ್ಬನ ಬದುಕು ತೆರೆದುಕೊಂಡು ಕೆಲವೊಮ್ಮೆ ರೋಮಾಂಚನವೆನಿಸಿದರೆ ಕೆಲವು ಭಾಗಗಳಲ್ಲಿ ಅನುಮಾನಗಳು ಹುಟ್ಟುತ್ತವೆ.

ಬೋಸರ ಪ್ರೇಮ ವಿವಾಹ, ಕ್ರಿಶ್ಚಿಯನ್ ಪತ್ನಿ  ಬೋಸರ ಜಾತ್ಯತೀತ ಮನೋಭಾವಕ್ಕೆ ಉದಾಹರಣೆಯೆನಿಸಿದರೆ ಅವರು ಬರ್ಮಾದ ಮಂಡಾಲೇ ಜೈಲಿನಲ್ಲಿದ್ದಾಗ ಹಿಂದೂ ಧರ್ಮೀಯ ಕೈದಿಗಳ ಧಾರ್ಮಿಕ ಆಚರಣೆಗೆ ಹಣ ಬಿಡುಗಡೆಗೊಳಿಸಬೇಕೆಂದು ಬರ್ಮಾ ಸರ್ಕಾರಕ್ಕೆ ಪತ್ರ ಬರೆದ ಬಗ್ಗೆ ಅವರ ಸ್ವಂತ ಧರ್ಮದ ಪ್ರೀತಿಯ ಪ್ರತೀಕವೆನಿಸುತ್ತದೆ‌.

ಬಹದ್ದೂರ್ ಷಾ ಗೋರಿಗೆ ಸಲ್ಲಿಸಿದ ಪುಷ್ಪಾಂಜಲಿ ಮತ್ತು ಅಲ್ಲಿ ಮಾಡಿದ ಭಾಷಣ ಅವರ ಸರ್ವಧರ್ಮ ಸಮಭಾವ ಪ್ರಜ್ಞೆಯನ್ನು ಪುಷ್ಟೀಕರಿಸುತ್ತದೆ. ಇಡೀ ಪುಸ್ತಕದ ಓದು ಮತ್ತದರ ವಿಚಾರಗಳು ಮೊದಲೇ ಅಣಿ ಮಾಡಿಟ್ಟುಕೊಂಡ ಒಂದು ನಿಭಾರ್ವುಕ ಮನಸ್ಥಿತಿಯೊಂದಿಗೇ ಮುಗಿದು ನೇತಾಜಿ ಸುಭಾಷ್ ಚಂದ್ರ ಬೋಸ್‍ರ ಹೋರಾಟದ ಮನೋಭಾವ, ಕೆಳವರ್ಗದ ನಿರ್ಗತಿಕರ ಕುರಿತಾದ ಕಾಳಜಿ, ಅವರ ನಾಯಕತ್ವದ ಗುಣ, ರಾಷ್ಟ್ರೀಯತೆ ಮತ್ತು ಜಾತ್ಯಾತೀತ ಸ್ವಭಾವ ಜೊತೆಗೆ ಸ್ವಾತಂತ್ರ್ಯಕ್ಕಾಗಿ ಯಾವುದೇ ರಾಜಿ ಮಾಡಿಕೊಳ್ಳದ ಪೂರ್ಣ ಸ್ವತಂತ್ರವೇ ಬೇಕು ಎನ್ನುವ ಪಟ್ಟು ಮತ್ತು ಆ ನಿಟ್ಟಿನಲ್ಲಿ ತಮ್ಮ ನಡೆಯನ್ನು ಅತ್ಯಂತ ಕರಾರುವಾಕ್ಕಾಗಿ ನಿರೂಪಿಸುತ್ತದೆ.

ಪುಸ್ತಕದ ಕೊನೆಯ ಅಧ್ಯಾಯದಲ್ಲಿ ಬರುವ  “ಇಂಕ್ವಿಲಾಬ್ ಜಿಂದಾಬಾದ್”, “ಆಜಾದ್ ಹಿಂದ್ ಜಿಂದಾಬಾದ್” ಎನ್ನುವುದು ಪ್ರತಿಯೊಬ್ಬ ಓದುಗನ ಮನದಲ್ಲೂ ಅನುರಣಿಸಿ ಒಂದು ಹೊಸದಾದ, ಅರಿವುಳ್ಳ ರಾಷ್ಟ್ರ ಪ್ರೇಮ ಜಾಗೃತಗೊಳ್ಳುತ್ತದೆ. ಈಗಿನ ಯುವ ಜನಾಂಗದ ವಾಟ್ಸಾಪ್ ದೇಶಪ್ರೇಮ, ಫೇಸ್ಬುಕ್ ರಾಷ್ಟ್ರೀಯತೆ ನಿಜವಾಗಿಯೂ ಕಳಚಿಬಿದ್ದು ವಾಸ್ತವವಾದ ಸ್ವದೇಶ ಪ್ರೀತಿಯನ್ನು ಜಾಗೃತಗೊಳಿಸುವಲ್ಲಿ  “ಸೆಕ್ಯುಲರ್ ಸೇನಾನಿ ಸುಭಾಷ್ ಚಂದ್ರ ಬೋಸ್”
ಒಂದು ಓದಲೇಬೇಕಾದ  ಪುಸ್ತಕ.

ಜೊತೆಗೆ ಸೆಕ್ಯಲರ್ ಸೀರೀಸ್‍ನ  ಈ ಮೊದಲ ಓದು ಮುಂದಿನ ಓದಿಗೆ ಕಾಯುವಂತೆ ಕೂಡ ಮಾಡಿದೆ. ಪುಸ್ತಕದ ಗಾತ್ರ ತೀರಾ ಹ್ಯಾಂಡಿಯಾಗಿದ್ದು ಒಂದೇ ಗುಕ್ಕಿಗೆ ಓದಿಸಿಕೊಳ್ಳುವಂತಿದೆ. ಮತ್ತು ಮರು ಓದಿಗೆ ಹಚ್ಚುವಂತಿದೆ. ಈಗಾಗಲೇ ಈ ಪುಸ್ತಕದ ಕುರಿತು ಹಲವಾರು ಚರ್ಚೆಗಳು ನಡೆದು ಆಸಕ್ತರ ಗಮನ ಸೆಳೆದಿದೆ.
ಅದ್ಭುತ ವಾಗ್ಮಿಯೂ ಆದ ಹನೀಫ್ ಅವರು ತಮ್ಮ ಪ್ರಖರ, ಸ್ಪಷ್ಟ ಮತ್ತು ವೈಚಾರಿಕ ದೃಷ್ಟಿಕೋನದಿಂದ ಆಸಕ್ತರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

—–

ಅಮೆಜಾನ್, ಫ್ಲಿಪ್ ಕಾರ್ಟ್ ನ ಸಿ ಎಫ್ ಎಮ್ ಡಿಜಿಟಲ್ ಸ್ಟೋರ್ಸ್ ಗಳ ಜೊತೆಗೆ ನವಕರ್ನಾಟಕ ಪ್ರಕಾಶನದ ಎಲ್ಲಾ ಮಳಿಗೆಗಳಲ್ಲಿ  ಪುಸ್ತಕವು ಲಭ್ಯವಿದೆ.

‍ಲೇಖಕರು avadhi

September 17, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: