ರಾಜೇಶ್ವರಿ ಚನ್ನಂಗೋಡ್
ಕುಟ್ಟೂ,
ಹೇಗಿದ್ದೀ? ಹೀಗೇ ಕೇಳುತ್ತಲೇ ಇರುತ್ತೇನೆ. ಈಗಲೂ. ನಿನಗೆ ಕೇಳುವಂತೆಯೂ ಕೇಳದಂತೆಯೂ. ಹೇಗಿದೆ ನಿನ್ನೂರು? ನಿನ್ನ ಈಗಿನ ಕೋಣೆ? ಹಿಂದೆ ನೀನಿದ್ದ ಅವೆಷ್ಟೋ ಕೋಣೆಗಳಂತೆ ನಿನ್ನ ಈಗಿನ ಕೋಣೆಯೂ ನನಗೆ ಕಾಣದು, ಅನುಭವಕ್ಕೇ ಸಿಗದು. ಸಿಗಬೇಕೆಂದನಿಸುತ್ತೆ, ನೀನು ಕರೆಯುವವರೆಗೂ ನಾನೆಂತು ಬರಲಿ ಅಂತ ಸುಮ್ಮನಿರುವೆ. ಆದರೆ ಒಂದು ದಿನ, ಇನ್ನೂ ಅಮ್ಮನಾಗದ ನನ್ನ ಹೃದಯದಲ್ಲಿ ಅಮ್ಮನಾಗುವ ಭಾವವೇನಾದರೂ ತುಂಬಿ ತುಳುಕಿದರೆ, ನಿನ್ನ ಮನೆಯ ಮುಂದೆ ನಿಂತಿರುತ್ತೇನೆ ನೋಡು ನಾನು. ಹಾಗೆ ಬಂದಾಗ ಎತ್ತಿ, ಮುದ್ದಿಸಿ, ನೀನಂದು ಹೇಳಿದಂತೇ ಮುದ್ದಿಸಿ ಒಯ್ದುಬಿಡು ನಿನ್ನ ಕೋಣೆಯೊಳಗೆ. ಮಗುವಾಗಿಬಿಡುತ್ತೇನೆ. ಅಷ್ಟು ಪ್ರೀತಿ ಇನ್ನೂ ನಮ್ಮಲ್ಲುಳಿದೇ ಇದೆ, ನನಗದು ಅನುಭವವೇದ್ಯ.
ಪ್ರೀತಿಯ ಹೆಸರೇ ಹೇಳದೆ ಸಿಕ್ಕವರು ನಾವು. ನನ್ನ ದಾರಿ ಬೇರೆ, ನಿನ್ನದೇ ಬೇರೆ ಅಂತ ಸ್ಪಷ್ಟ ಅರಿವಿದ್ದೂ ನಿನ್ನೊಳಗೆ ಜಾರಿ ಬಿದ್ದಂತೇನೋ ಇತ್ತು. ಅದೆಲ್ಲ ಹೇಳಲೂ ಬರೆಯಲೂ ನನಗೆ ಬಾರದು. ಯಾವ ಕವಿಗೂ ಬಾರದೆಂದೇ ಅನಿಸುತ್ತೆ ನನಗೆ. ನಿನ್ನ ಕಪ್ಪು ಮೌನದೊಳಗೆ ಹತ್ತು ರೆಂಜೆ ಹೂವಿಟ್ಟು ಬಂದವಳು ನಾನು. ಪರಿಮಳವಿರಲಿ ಎಂದು. ನಿನಗದು ಬೇಕಿತ್ತೋ ಬೇಡವಾಗಿತ್ತೋ ಅಂತೆಲ್ಲ ತಿಳಿಯದೇ ನಾನೂ ಕಗ್ಗತ್ತಲಲ್ಲೇ ಕಳೆದು ಹೋಗಿದ್ದೆ. ಈಗ ನಾವು ಸುಖವಾಗಿ ನಿರಾಕರಿಸಬಹುದೆಂದುಕೊಳ್ಳುವ ಪ್ರೇಮಕ್ಕೆ ಆಗ ಅರ್ಥವಿತ್ತಿದ್ದೂ ರೂಪವಿತ್ತದ್ದೂ ಅವೊಂದಿಷ್ಟು ಹೂಗಳೇ. ಈಗಲೂ, ಈ ಯಂತ್ರಗಳ, ಯಾಂತ್ರಿಕತೆಯ ಜಮಾನಾದಲ್ಲೂ, ಬೊಕೆಗಳೊಳಗೆ ಕಂಗೊಳಿಸುವ ಹೂಗಳು ರಸ್ತೆಬದಿಯಲ್ಲಿ ಬೇಕಾದಷ್ಟು ಸಿಗುವಾಗಲೂ, ಅದನ್ನು ಕೊಳ್ಳಲು ನಮ್ಮ ಕೈತುಂಬಾ ದುಡ್ಡಿರುವಾಗಲೂ ಅದೇ ನಿನ್ನ ಕೋಣೆಯ ಪಕ್ಕದ ಅದೇ ರೆಂಜೆ ಮರದಿಂದುರಿದ ಹೂಗಳಿಂದಲೇ ನಾವು ಅರಳುವುದು, ಘಮಘಮಿಸುವುದು ಸಾಧ್ಯವೇನೋ ಅನಿಸುತ್ತೆ. ಆ ಕಂಪಿಗೆ, ತೀವ್ರತೆಗೆ ನಾನು ಮಾರುಹೋಗಿದ್ದು ನೀನು ನನ್ನ ದಾರಿಯಲ್ಲಿ ಸಿಗುವುದಕ್ಕಿಂತ ಎಷ್ಟೋ ವರ್ಷ ಮೊದಲು, ನಿಜ ಹೇಳಬೇಕೆಂದರೆ, ನನ್ನ ಮತ್ತು ಆ ಮರದ ಹೆಸರಿಡಲಾಗದ ಸಂಬಂಧದ ಮೂರ್ತರೂಪ ನೀನು ಅಂತೆಲ್ಲ ಅನಿಸುವುದಿದೆ ನನಗೆ. ವರ್ಷಗಟ್ಟಲೇ ಕಾಲ ಅದೇ ಮರದಡಿಗೆ ನಡೆಯುತ್ತಿದ್ದೆ. ಹೂ ಹೆಕ್ಕಿ ತಂದು ಕಬ್ಬಿಣದ ಮೂರ್ತಿಯ ಮುಂದಿಡುತ್ತಿದ್ದೆ. ದೇವರು? ನಿನ್ನ ಕೋಣೆಗೆ ದಕ್ಕಿದ ಹೂಗಳು, ಅವಷ್ಟೇ ಧನ್ಯ ಅಂತನಿಸುತ್ತೆ ಈಗ. ಆ ಹೂಗಳಿಗೆ ದಕ್ಕಿದ ನಿನ್ನ ಕೋಣೆ ದಕ್ಕಿದ್ದೂ ಧನ್ಯ.
ಬರವಣಿಗೆಯ ಸುತ್ತಲೂ ನಾನು ಕಟ್ಟಿಕೊಂಡ ಏಕಾಂತ. ಕಟ್ಟಿಕೊಂಡ ಗಂಡ ಬಳಿಯಿಲ್ಲದಿದ್ದಾಗ, ಇಲ್ಲಿ ಸರಿಯೆನಿಸಿ ಗೆಳೆತನ ಹಂಚಿಕೊಂಡು ನಾಲ್ಕುವರ್ಷ ಸತತವಾಗಿ ಸಹಚರಸಿದ ವ್ಯಕ್ತಿ ಮೆಲ್ಲಗೇ ಅಪರಿಚಿತನೆನಿಸಿದಾಗ ಹಾಗೊಂದು ಕತ್ತಲಿನ ಗೂಡೊಳಗಡಗಲು ಬರವಣಿಗೆಯ ಹುಸಿ ಕಾರಣ ಸಿಕ್ಕಿತ್ತು. ಹಗಲೆಲ್ಲ ಕೋಣೆಯೊಳಗಿದ್ದು, ಬರೆದು, ಬರವಣಿಗೆಯ ನಶೆಯಲ್ಲಿ ರಾತ್ರಿ ನಡೆಯಲು ಹೊರಗಡಿಯಿಡುತ್ತಿದ್ದೆ. Progressive ಅಂತ ಅನಿಸಿದ ನಿನ್ನೊಡನೆಯಾದ ಮೊದಲ ಕೆಲವು ಸಂಭಾಷಣೆಗಳು. ಹೆಣ್ಣನ್ನು ಅನ್ಯಗ್ರಹಜೀವಿಯೆಂದೋ, ಅಥವಾ ಇರುವೇ ಇಲ್ಲದ ಪ್ರಾಣಿಯೆಂದೋ ಅಥವಾ ತಮಗಿಂತ ಚಿಕ್ಕವರೆಂದೋ ತಿಳಿದೋ ತಿಳಿಯದೆಯೋ ನಡೆಸಿಕೊಳ್ಳುವ ಗಂಡಸುಬುದ್ಧಿಯ ಲೋಕದಲ್ಲಿ ನೀನು ನನಗೆ ಅಪರೂಪದ ಜೀವಿಯೆನಿಸಿದ್ದೆ, ಸೆಳೆದಿದ್ದೆ. ತೆಕ್ಕೆಗೇ ಬೀಳಲಿರುವೆನೆಂದು ಅವತ್ತೇ ಅನಿಸಿದ್ದರೂ ವಿರೋಧಿಸುತ್ತಿರಲಿಲ್ಲವೆಂದೇ ಅನಿಸುತ್ತೆ. ಅಷ್ಟಿತ್ತು ನಿನ್ನೊಳಗೆ. ನನ್ನ ಕೋಣೆಯೊಳಗೆ ನೀನು ಮೊದಲ ಬಾರಿಗೆ ಕಾಲಿಟ್ಟಾಗ ಅಲ್ಲಿ ತುಂಬ ಏಕಾಂತ, ಒಂಟಿತನ. ನೀನು ಬಂದಾಗ ಪುಳಕ. ನನಗೇ ತಿಳಿಯದಂತೆ ನಾನು ಅರಳಿದ್ದೆ. ಅಮೆಝಾನ್ ಪ್ರೈಮಿನ ಮೇಡ್ ಇನ್ ಹೆವನ್ ಇಂದ ಆರಂಭವಾದ ಕಥೆ ನಮ್ಮದು. ಹುಚ್ಚುಗಟ್ಟಿ ಬರೆಯುತ್ತಿದ್ದವಳು ಹುಚ್ಚುಗಟ್ಟಿ ಧಾರಾವಾಹಿಗಳನ್ನು ನಿನ್ನೊಡನೆ ಕುಳಿತು ನೋಡುವಂತಾಯ್ತು. ಮದುವೆಯೆಂಬ ವ್ಯವಸ್ಥೆಯನ್ನು, ತುಂಬ ದೀರ್ಘಕಾಲದ ಸಂಬಂಧಗಳಲ್ಲಿ ಬರುವ ಪ್ರಶ್ನೆಗಳನ್ನು ಚರ್ಚಿಸಿ, ತರ್ಕಿಸಿ ಬೆರೆತು ಕೊನೆಗೆ ನಮ್ಮದೇ ಸಂಬಂಧಗಳನ್ನು, ಮಿತಿಯನ್ನು, ನೈತಿಕತೆಯನ್ನು ಪ್ರಶ್ನಿಸಿಕೊಳ್ಳುವಲ್ಲಿಗೂ ಬಂದೆವು. ಬೆರಳುಗಳು ಬೆಸೆದಾಗ ಸುಮ್ಮನಿದ್ದೆ. ನಾನು ಮತ್ತೆ ಯಾವಾಗಲೂ ಸುಮ್ಮನೇ ಇದ್ದೆ. ಎಲ್ಲ ಘಟ್ಟದಲ್ಲೂ. ಬೇಡವೆನ್ನಲೂ ಇಲ್ಲ. ಬೇಕೆಂದು ಧೈರ್ಯವಾಗಂದು, ಆಕ್ರಮಿಸಿ ದಕ್ಕಿಸಿಕೊಳ್ಳಲೂ ಇಲ್ಲ. ಕೊಟ್ಟಷ್ಟು ಪಡೆದು, ಹಿಂದಿರುಗಿಸಲೂ ಏನೂ ಇಲ್ಲದವಳಂತೆ.. ನಾನು ಅರಳಿದ್ದು ತುಂಬ ನಿಧಾನವಾಗಿ. ನಿನ್ನ ಕ್ಷಮೆಯ ಪರಿಧಿಯಳೆದು, ಅದರಾಚೆಗೂ ಸರಿದು, ನೀನು ತಾಳ್ಮೆಗೆಟ್ಟು ಆಕ್ರಮಿಸಿದಾಗ ನಲುಗಿ, ಆದರೂ ಸೊರಗದೇ, ನಿಧಾನವನ್ನೇ ಹಠವಾಗಿಸಿಕೊಂಡು…ನನ್ನ ಏಕಾಂತ ಮತ್ತು ನಿನ್ನ ಏಕಾಂತಗಳು ಮಿಲಾಯಿಸಿಕೊಂಡಿದ್ದು ಹಾಗೇ. ಆದರೆ ನಾನು ತೀರ ಆಳದ ಸಂಬಂಧವನ್ನು ನಿರೀಕ್ಷಿಸಿದ್ದು ನಿಜ. ಅದಕ್ಕೆ ಅಷ್ಟೇ ಆಳದ ಮಾತುಕತೆಗಳು ಬೇಕೆಂಬುದು ನನ್ನ ಅನುಭವದ ಮಿತಿಯಲ್ಲಿ ಹುಟ್ಟಿದ್ದ ತಿಳುವಳಿಕೆ. 
ಮಾತೇ ಇಲ್ಲದೇ, ಮೌನದಿಂದಲೇ ಅಷ್ಟನ್ನೂ ಹೇಳಿಸಿಕೊಳ್ಳುವ, ಕೇಳಿಸಿಕೊಳ್ಳುವ ವಿದ್ಯೆ ತಿಳಿದ ಮಾಯಾವಿ ನೀನು. ನನ್ನದು ಒಂದೇ ಸಂಬಂಧದಿಂದ ಒಸರಿದ ಅನುಭವ. ನಿನ್ನದು ದೇಶ ಸುತ್ತಿ, ಕೋಶ ಓದಿ ಬಂದದ್ದು. ಟಿಂಡರಿನ ಹೆಸರಷ್ಟೇ ಬಲ್ಲವಳು ನಾನು. ಅಗತ್ಯ ಬರದೆಯೋ, ಅಥವಾ ತೆರೆದುಕೊಳ್ಳುವ ತಿಳುವಳಿಕೆಯೇ ಇರದೆಯೋ ಟಿಂಡರಿನೊಳಗೆ ಹೊಕ್ಕಲೇ ಇಲ್ಲ. ಅಲ್ಲಿನ ಚಿತ್ರ ನನಗೆ ಸಿಕ್ಕಿದ್ದು ನಿನ್ನಿಂದ. ನೀನು ಕೊಟ್ಟ ಹಿತಾನುಭವದಿಂದ ತಿಳಿದಿದ್ದು ನನಗೇನೂ ತಿಳಿದಿಲ್ಲವೆಂದೇ. ಆದರೆ ಎಲ್ಲವನ್ನೂ ತಿಳಿಯಲೇ ಬೇಕೆಂದಿತ್ತೇ? ನನ್ನ ಲೋಕದಾಚೆಗಿನ ಲೋಕಕ್ಕೆ ಹೋಗಲೇಬೇಕಿತ್ತೇ? ಹೋಗಲಿಲ್ಲ, ಆಗಲೂ. ನಿನ್ನನ್ನೇ ಒಳಗೆಳೆದುಕೊಂಡೆ, ನನ್ನ ಲೋಕದ ಬಾಗಿಲು ತೆರೆದಿದ್ದು, ಕಿಟಕಿ ಗವಾಕ್ಷಿಗಳು ತೆರೆದಿದ್ದು ಆಗಲೇ. ಭುಸ್ಸೆಂದು ನುಗ್ಗಿದ ಗಾಳಿಗೆ ನನ್ನ ಲೋಕದ ಕೆಲವು ನಂದಾದೀಪಗಳನ್ನು ಆರಿಸಿಬಿಡುವ ಹಠವಿತ್ತು. ನಿನಗಿರಲಿಲ್ಲ. ನನ್ನ ಸುದೀರ್ಘ ಸಂಬಂಧ ಆರಿಹೋಗಬಹುದೆಂದು ತಳಮಳಗೊಂಡಾಗ ಹೋಗಿಬಿಡು, ದೂರಹೋಗು ಅಂದೆ. ನಾನು ಆಗಲೂ ಸುಮ್ಮನೇ ಕುಳಿತಿದ್ದೆ. ಆದರೂ ನೀನು ನನ್ನೊಳಹೊಕ್ಕಲು ನೋಡಿದಾಗ ನಾನು ಬೆದರಿದ್ದೆ. ಭಯದ ಅಭಿವ್ಯಕ್ತಿ ತುಂಬ ಶಕ್ತವಾದ, ಬಿರುಗಾಳಿಯಂಥಾ ನಿರಾಕರಣೆ, ನನ್ನ ಭಾಷೆಯಲ್ಲಿ. ಆಗ ನೀನೂ ತತ್ತರಿಸಿದ್ದೆ. ಆದರೂ ಮತ್ತೆ ನಾನು ಮಾತಾಡಿದೆ. ಮಾತಾಡದೇ ಉಳಿದುಹೋಗಲು ಬಾರದು ನನಗೆ. ನೀನೂ ಮೌನವಾಗೇ ಬಂದೆ. ತಬ್ಬಿ ಹೋದೆ. ಅಷ್ಟರಲ್ಲೇ ನಾನು ಬದುಕಿಕೊಂಡೆ. ಮತ್ತಿನದ್ದಷ್ಟೂ ದಂತಕಥೆ.
ಈಗ, ಮಾಧವಿಕ್ಕುಟ್ಟಿಯನ್ನು ನೆನೆಸಿಕೊಂಡು ಬರೆಯುತ್ತಿರುವೆ ನೋಡು. ಅವರ ಪ್ರೇಮದ ಆಳ ಅರ್ಥವಾಗದ ಹೆಂಗಸರಿರಬಹುದೇ ಎಂದನಿಸುವುದಿದೆ. ಅವರಲ್ಲಿದ್ದ ಸ್ವಾತಂತ್ರ್ಯದ ದಾಹ ಮತ್ತು ಅಂಥಾ ಸ್ವಾತಂತ್ರ್ಯದಿಂದಷ್ಟೇ ಒಸರಬಹುದಾದ ಅಗಾಧ ಪ್ರೀತಿ. ಪ್ರತಿ ಬಾರಿ ಆಕರ್ಷಣೆಯ ನೂಲುದಾರಿ ಮೇಲೆ ನಡೆವಾಗಲೂ ನೆನಪಾಗುವುದು ಅವರ ಸಾಲುಗಳೇ. ಹುಡುಕಿದ್ದೂ ಹುಡುಕದ್ದೂ ಸಿಗದೇ, ಕೊನೆಗೂ ತನ್ನದೇ ಏಕಾಂತಕ್ಕೆ ಸಲ್ಲಿಸಿಕೊಂಡು ಸೊರಗುವ ಸಖಿಯರು. ನನ್ನಂತೇ, ನಿನ್ನಂತೇ. ನಾನು ನಿನಗೆಷ್ಟು ಕೊಟ್ಟೆ? ಏನು ಕೊಟ್ಟೆ? ಕಡಲಿಗೆ, ರೆಂಜೆ ಮರಕ್ಕೆ, ನಿನಗೆ ಹಾಗೂ ನನಗೆ ಅರ್ಥವಾಗುವ ಏಕಾಂತವೊಂದಿದೆಯಲ್ಲ. ಸಿಕ್ಕಸಿಕ್ಕವರಲ್ಲೆಲ್ಲ ಅಂಥದ್ದೇ ಇನ್ನೊಂದು ಏಕಾಂತವಿದೆಯೇ ಎಂದು ಹುಡುಕಿ, ಮಾರ್ದನಿಯೂ ಮೌನವೂ ಸಿಗದೇ, ನಿರಾಸೆಯಿಂದ ಕೋಣೆಗೆ ಬಂದು, ಸುಮ್ಮನಾಗುವ ನಮ್ಮಂಥವರು.. ಹೂ ಬಿಡುವುದು ನಿಲ್ಲಿಸದ ರೆಂಜೆ ಮರ. ಕರೆಯ ಕಾಲ್ಸವರುವುದನ್ನು ನಿಲ್ಲಿಸದ ಕಡಲು. ಮತ್ತದೇ ರೆಂಜೆ ಮರದಡಿಗೆ ನಡೆವಾಗ ಕಳೆದುಹೋಗುವ ಒಂದೆರಡು ಹೃದಯಬಡಿತಗಳಲ್ಲಿ ನಿನ್ನ ಕಟ್ಟಡದೆಡೆಗೆ ದಿಟ್ಟಿಸಿಬಿಡುವ ನಾನು. ಮತ್ತೆ ಅಲ್ಲಿಗೆ, ಆ ವಿಚಿತ್ರ ಕ್ಯಾಂಪಸಿಗೆ ಹೋಗಬೇಕಾದಾಗಲೆಲ್ಲ ನಿನ್ನ ಕೋಣೆಯ ವಾಸನೆಯ ಲೋಕಕ್ಕೆ ಜಾರುವ ನಾನು. ನೀನು?
ನಾವೊಮ್ಮೆ ಮಾತಾಡಬೇಕು ಅಥವಾ ಮೌನವಾಗಿರಬೇಕು ಕಣೋ. ಮತ್ತೆ ನಿನ್ನ ಕೈಯೊಳಗಿನಿಂದ ನನ್ನ ಮೃದು ಧ್ವನಿ, ನಿನಗಷ್ಟೇ ಕೇಳುವಂತೆ, ಲೋಕಕ್ಕೆಲ್ಲ ಸ್ಪಷ್ಟವಾಗುವ ಹಠವೂ ಹುಮ್ಮಸ್ಸೂ ಇಲ್ಲದೇ, ಎಲ್ಲರ ಕಣ್ಣಿನ ತಪ್ಪಾಗುತ್ತಲೇ ಹುಟ್ಟಿ, ಹಾಡಾಗಿ ಹಾರಿಹೋಗಬೇಕು. ಮತ್ತೆ ಸಿಗಬೇಕು. ನಿನಗನಿಸುತ್ತಿದೆಯೇ? ನನಗಷ್ಟೇ ಅನಿಸುತ್ತಿದೆಯೇ? ತಪ್ಪು ಸರಿಗಳ ಕವಚವನ್ನೇ ಆಚೆಗಿಟ್ಟು ತಬ್ಬಿಕೊಳ್ಳಬೇಕು. ನಿನಗಾ ಕವಚ ನನಗಿಂತ ಮೊದಲೇ ಕಳಚಿಹೋಗಿತ್ತು. ನನ್ನದ್ನ್ನೂ ಕಳಚುವಂತಾಗಿಸಿದೆ. ಹೆಂಡತಿಯಾದವಳು ಹೀಗೆಲ್ಲ ಮಾಡಬಹುದೇ ಎಂದು ಕೇಳುವವರಿರಬಹುದೆಂಬ ಭಯದಲ್ಲಿ ಯಾರಿಗೂ ಹೇಳದೇ, ಯಾರನ್ನೂ ಕೇಳದೇ, ಕೊನೆಗೆ ಹೇಳುವ, ಕೇಳುವ ಅಗತ್ಯವಿರುವುದು ನನ್ನ ಮೇಲಿನ ಅವಲಂಬನೆಯನ್ನು ನಿರಾಕರಿಸಲಾಗದ ಜೀವನಸಂಗಾತಿಯಲ್ಲಷ್ಟೇ ಎಂದರ್ಥವಾಗಿ, ಅವನಿಗೆ ಹೇಳಿ, ಕವಚ ಸರಿಸಿಬಿಟ್ಟಿದ್ದೆ. 
ನಿನಗದನ್ನೆಲ್ಲ ಕೇಳುವ ವ್ಯವಧಾನ ಆಗ ಇರಲಿಲ್ಲ, ಇರಬೇಕೆಂದೇನೂ ಇಲ್ಲ. ನಮ್ಮ ನಡುವಿನ ಸಂಬಂಧಕ್ಕೂ ಅಂಥಾ ಮಾತುಕತೆಗಳ ಅಗತ್ಯವೇನಿಲ್ಲ. ನನ್ನ ಸಂಬಂಧಗಳನ್ನು ನಿಭಾಯಿಸಿಕೊಳ್ಳುವ ಹೊಣೆ ನನಗೆ, ನಿನ್ನದು ನಿನಗೆ. ಆದರೆ ಆ ಹೊಣೆಯನ್ನು ನಿಭಾಯಿಸಲು ನನಗೆ ಶಕ್ತಿಯಿದೆಯೆಂದು ತಿಳಿದಿದ್ದು ನಿನ್ನ ಸಹಚಾರದಿಂದಲೇ ಅನ್ನಬಹುದೇನೋ. ಅಥವಾ ಸಮಾಜದ ಹಲವಾರು ಕಟ್ಟಳೆಗಳನ್ನು ಪ್ರಶ್ನೆಮಾಡುವು ಒಂದು ಪುಟ್ಟ ಲೋಕವಾಗಿ ನಿಂತು, ತನ್ನ ಪ್ರಶ್ನೆಗಳನ್ನು ತನ್ನ ನಾಲ್ಕುಗೋಡೆಗಳೊಳಗೇ ಅಡಗಿಸಿ, ಹಬ್ಬದಂತೆ ಆಚರಿಸಿ, ವಿಜೃಂಭಿಸಿ, ಆದರೆ ಹೊರಗಿನ ಸಮಾಜಕ್ಕೆ ಸ್ವರ್ಗಸದೃಶ ಜಾಗವಾಗಿ ನಿಲ್ಲುವ ಆ ಕ್ಯಾಂಪಸಿನ ಮಹಿಮೆಯೋ ಈ ‘ಶಾಕ್ತೀಕರಣ’? ಆದರೆ ಹೊರಲೋಕಕ್ಕೆ ಕಾಣದಿರುವಂತೆ, ಆದರೆ ಒಳಗಿರುವ ಕೆಲವರಿಗಾದರೂ ಕಾಣುವಂತೆ ಸಮಾಜದ ಆಚರಣೆಗಳ, ನಿಯಮಗಳ ಟೊಳ್ಳುತನವನ್ನು ಬಿಚ್ಚಿಡದಿದ್ದರೆ ಯಾವ ವಿದ್ಯಾಸಂಸ್ಥೆಗಾದರೂ ತನ್ನ ನಿಲುವುಳಿಸಿಕೊಳ್ಳಲು ಸಾಧ್ಯ ಅಂದನಿಸಿದ್ದೂ ಇದೆ. ನಿನಗೆ ನೆನಪಿದೆಯೋ ಏನೋ.. ನಮ್ಮ ಕಾಲ ಒಂದು ಕ್ರಾತಿಯದ್ದೂ ಕಾಲ. ನಾವೂ ರಾತ್ರಿ ನಡೆದು ಹೋಗಿ ಪೋಸ್ಟರುಗಳಿಗೆ ಗುಂಡುಸೂಜಿ ಚುಚ್ಚಿ ಅವುಗಳ ದನಿಯಾಗಿ ಬಂದಿದ್ದೇವೆ. ಮೋಂಬತ್ತಿ ಹಿಡಿದೂ ನಿಂತಿದ್ದೇವೆ. ಪ್ರೀತಿಗೂ ಕ್ರಾಂತಿಗೂ ಅಂತರವಿಲ್ಲವೆಂದು ನಾನು ಬರೆದುಕೊಂಡಿದ್ದ ಕಾಲವದು.
ಆದರೂ ಅಲ್ಲೆಲ್ಲೋ ಹಿಗೆ ನನ್ನ ಕಾಲಮೇಲೇ ನಾನು ನಿಲ್ಲುವಾಗ ಮತ್ತೆ ಒಂಟಿಯನಿಸುತ್ತೆ. ಕೇಳಿದ್ದಿದೆ. ಮದುವೆಯಾಗಿ, ಅದಕ್ಕೆ ಒಗ್ಗಿ ನಡೆದರೆ ಹೀಗೆ ಒಂಟಿತನ ಬಾಧಿಸದು ಅಂತೆಲ್ಲ. ಆದರೆ, ಹಾಗೆ ಹೇಳುವವರೆಲ್ಲ ಮದುವೆಯಾಗದ ಮಕ್ಕಳನ್ನು ಮದುವೆಗೆ ಒಪ್ಪಿಸುವ ಕೆಲಸದಲ್ಲಿರುತ್ತಾರೆ ಹಾಗೂ ಹೊರಹಾಕಲಾಗದ, ಕೆಲವೊಮ್ಮೆ ಒಪ್ಪಿಕೊಳ್ಳಲೂ ಆಗದ ಒಂಟಿತನದ ಒಳಗೂ ಇರುತ್ತಾರೆ ಅಮತನಿಸದ್ದಿದೆ ನನಗೆ. ನನಗೆ ಒಂಟಿತನವನ್ನು ಸುಂದರವಾದ, ಹಂಚಿಕೊಳ್ಳಬಹುದಾದ ಏಕಾಂತವಂತನಿಸುವಂತೆ ಮಾಡಿದ್ದು ನಾನು ಮತ್ತು ನನ್ನ ಜೀವನಸಂಗಾತಿಯ ನಡುವಿನ ಸಂಬಂಧವೇ. ಆದರೆ ಅಲ್ಲಿಗೆ ನಾವು ತಲುಪಿದ್ದು ಎಷ್ಟೆಂದರೂ ನಿನ್ನ ಮತ್ತು ನನ್ನ ಸಂಬಂಧದ ಮೂಲಕವೇ. ಹಾಗಾಗಿ ನನ್ನ ಇಂದಿನ ಈ ರೂಪಕ್ಕೆ ನೀನೂ ಶಿಲ್ಪಿಯೇ.
ಹೋಗಲಿ ಬಿಡು, ಹೇಳದೇ ಉಳಿದ ಒಂದಿಷ್ಟು ಮಾತೂ ಹಾಗೇ ಬಂದುಬಿಟ್ಟಿದೆ ಮೇಲೆ. ಕ್ಷಮಿಸಿಬಿಡು. ಆದರೆ, ನಾನು ಹೇಳಲು ಬಂದಿದ್ದು ನನಗೀಗ ರೆಂಜೆಯಂತೇ ಕಂಪಾಗಿ ತುಂಬುವ ಇನ್ನಾವುದೋ ಹೂಗಳನ್ನು ಹೆಕ್ಕಿ ತಂದು ನಿನ್ನ ಹೊಸಕೋಣೆಯಲ್ಲಿರಿಸಿಹೋಗುವ ಆಸೆಯಂತೂ ಬಂದಿದೆ. ಅಥವಾ ಹೂಗಳಲ್ಲದ ಇನ್ನಾವುದೋ ಹಿತಾನುಭವವನ್ನು ಅರ್ಪಿಸಿ ಮತ್ತೆ ನಿನ್ನನ್ನು ಕರೆಯಬೇಕೆಂಬ ಭಾವ. ನಿನ್ನ ಕೋಣೆಯಲ್ಲಿ ಮೊಳಗುವ ಹಾಡು ಕೇಳಬೇಕು. ನೀನು ನೋಡುವ ಹೊಸ, ಹಳೆಯ ಹಲವಾರು ಚಿತ್ರಗಳನ್ನೂ ನೋಡಿ, ನಿನ್ನ ಲೋಕದ ಕತೆಗಳನ್ನೂ ಕೇಳಿ.. ನೀನು ಅಲ್ಲಿ ಇನ್ನಾವುದೋ ಲೊಕದಲ್ಲಿರುವೆ. ಅಲ್ಲಿಗೆ ನನಗೆ ಪ್ರವೇಶವಿದೆಯೇ ಎಂಬ ಹಿಂಜರಿಕೆಯೂ ಇದೆ. ಕೇಳದೇ ಹೇಳದೇ ನಿನ್ನ ಕೋಣೆಗೆ ಬರಲು ನನಗೆ ಆಗಲೂ ಈಗಲೂ ಹಿಂಜರಿಕೆಯೇ.. ನಿನ್ನ ಏಕಾಂತಕ್ಕೆ ಧಕ್ಕೆ ಬಂದರೆ? ಪರಸ್ಪರ ಜಾಗವನ್ನು, ಸಮಯವನ್ನು ಬಿಟ್ಟು ಕೊಟ್ಟು ಗೌರವಿಸುವುದನ್ನು ಕಲಿಯಲು ಶ್ರಮಿಸಿದ್ದಾದರೂ ನಿನ್ನಿಂದಲೇ. ಅದನ್ನೀಗ ಹೇಗೆ ಮುರಿಯಲಿ? ನೀನೇ ಹೇಳು. ನಾನು ಬರಬಹುದೇ? ನಿನ್ನ ಏಕಾಂತವನ್ನೇ ಆದರೂ ಹಂಚಿಕೊಳ್ಳಲು? ನಿನ್ನ ಲೋಕದ ಹೊಸ ನಿವಾಸಿಗಳಿದ್ದರೆ, ಅವರಿಗೆ ನನ್ನ ಸಾನ್ನಿಧ್ಯ ಒಪ್ಪಿಗೆಯಿರಬಹುದೇ? ನಿನಗೆ?
ನಿನ್ನ
ಅಪರ್ಣಾ ಕವಿಯೂರ್






0 Comments