ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನಗೆ ನಿನ್ನ ಮೇಲೆ ಇರುವ ವಿಶ್ವಾಸ ಬಹಳ ಮುಖ್ಯ

ಪ್ಯಾಪಿಯೋನ್ 3

ಬದುಕಿನ ಜೊತೆಗೆ ಒಬ್ಬಂಟಿ ಹೋರಾಟ

 

shreekala ds

ಶ್ರೀಕಲಾ ಡಿ.ಎಸ್.

`ಇತರರಿಗೆ ನಿನ್ನ ಮೇಲಿರುವ ಅಭಿಪ್ರಾಯಗಳಿಗಿಂತ, ನಿನಗೆ ನಿನ್ನ ಮೇಲೆ ಇರುವ ವಿಶ್ವಾಸ ಬಹಳ ಮುಖ್ಯ’ ಎಂಬ ಫ್ರೆಂಚ್ ನುಡಿಮುತ್ತಿನೊಂದಿಗೆ `ಪ್ಯಾಪಿಯೋನ್ 3 (ಬಾಜಿ)’ ಪುಟಗಳು ತೆರೆದುಕೊಳ್ಳುತ್ತವೆ. ಇದೇ ಮಾತನ್ನು ಗಟ್ಟಿಯಾಗಿ ನಂಬುತ್ತಾ, ತನ್ನ ಬದುಕಿನ ಜೊತೆಗೇ ಗುದ್ದಾಡುತ್ತಾ ಗುರಿಯತ್ತ ಸಾಗುವ ಹೋರಾಟಗಾರನ ಕಥೆಯೇ `ಪ್ಯಾಪಿಯೋನ್’ ಸರಣಿ.

ಇಪ್ಪತ್ತನೆಯ ಶತಮಾನದ ಎರಡು ಅತಿ ಶ್ರೇಷ್ಠ ಮಹಾ ಪಲಾಯನದ ಕೃತಿಗಳಲ್ಲಿ ಹೆನ್ರಿ ಶರಾರೇಯ `ಪ್ಯಾಪಿಯೋನ್’ ಮೊದಲನೆಯದು ಎಂದು ಪೂರ್ಣಚಂದ್ರ ತೇಜಸ್ವಿ ಹೇಳಿದ್ದರು. ಎರಡನೆಯದ್ದು ಮಿಲೇನಿಯಂ ಸರಣಿಯಲ್ಲಿ ತೇಜಸ್ವಿ ಅವರೇ ತರ್ಜುಮೆ ಮಾಡಿದ ಸ್ಲಾವೋಮಿರ್ ರಾವಿಸ್ ಅವರ `ಲಾಂಗ್ ವಾಕ್’ ಕೃತಿ. ಪ್ಯಾಪಿಯೋನ್ ಕೃತಿಯ ಒಂದು ಮತ್ತು ಎರಡನೆಯ ಭಾಗವನ್ನು ತೇಜಸ್ವಿ ಮತ್ತು ಪ್ರದೀಪ ಕೆಂಜಿಗೆ ಕನ್ನಡಕ್ಕೆ ಅನುವಾದಿಸಿದ್ದರೆ, ಮೂರನೆಯ ಭಾಗ ಪೂರ್ಣವಾಗಿ ಕೆಂಜಿಗೆ ಕೈಯಲ್ಲಿ ಭಾಷಾಂತರಗೊಂಡಿದೆ.

 

`ಪ್ಯಾಪಿಯೋನ್’ ಸ್ವಾತಂತ್ರ್ಯಕ್ಕಾಗಿ ಮನುಷ್ಯನೊಬ್ಬ ನಡೆಸುವ ಅದಮ್ಯ ಹೋರಾಟದ ಕಥೆ. ಈ ಕಥೆ ಆರಂಭಗೊಳ್ಳುವುದು ಫ್ರಾನ್ಸಿನ ರಾಜಧಾನಿ ಪ್ಯಾರಿಸ್ ನಿಂದ. ಯಾವ ತಪ್ಪನ್ನೂ ಮಾಡಿಲ್ಲದ, ಕೊಲೆ ಪ್ರಕರಣಕ್ಕೆ ಸಂಬಂಧವೇ ಇಲ್ಲದೆ ಎಲ್ಲೋ ಇದ್ದ ತರುಣನನ್ನು (ಪ್ಯಾಪಿಯೋನ್) ನಿಷ್ಕಾರಣವಾಗಿ ಫ್ರೆಂಚ್ ಪೊಲೀಸರು, ಸರ್ಕಾರಿ ಲಾಯರ್ ಗಳು ಸೇರಿ ಪಿತೂರಿ ಮಾಡಿ ಜೀವಾವಧಿ ಶಿಕ್ಷೆ ವಿಧಿಸುವಂತೆ ಮಾಡಿ, ತಕ್ಷಣ ಅಮೆರಿಕದ ಫ್ರೆಂಚ್ ಗಯಾನದ ಕಾರಾಗೃಹದ ದ್ವೀಪಗಳಿಗೆ ಗಡೀಪಾರು ಮಾಡಿಸುತ್ತಾರೆ. ಫ್ರೆಂಚ್ ನಾಗರೀಕತೆಯ ಅಮಾನುಷ ವ್ಯವಸ್ಥೆ ಈ ಕಾರಾಗೃಹದಲ್ಲಿ ತೆರೆದುಕೊಳ್ಳುತ್ತದೆ. ಈ ದ್ವೀಪಗಳಿಗೆ ಹೋದ ಯಾವನೂ ತನ್ನ ಕಾರಾಗೃಹದ ಅವಧಿ ಮುಗಿಸಿ ಜೀವಸಮೇತ ವಾಪಸಾಗುವುದಿಲ್ಲ. ಸುತ್ತ ವಿಶಾಲ ಸಾಗರದಿಂದ ಆವೃತವಾದ ಈ ದ್ವೀಪಗಳಿಂದ ಪಲಾಯನಗೊಳ್ಳುವ ಪ್ಯಾಪಿಯೋನ್ ನ ಹದಿಮೂರು ವರ್ಷಗಳ ನಿರಂತರ ಹೋರಾಟ ಆರಂಭವಾಗುತ್ತದೆ. ಸಿಕ್ಕಿ ಬಿದ್ದಾಗ ಅತ್ಯಂತ ಕ್ರೂರವಾದ ಶಿಕ್ಷೆಗಳನ್ನು ಅನುಭವಿಸುತ್ತಾನೆ. ಸಾವಿನ ಅಂಚು ತಲುಪಿದಾಗೆಲ್ಲಾ ತನ್ನನ್ನು ಸೆರೆಗೆ ಹಾಕಿದವರ ಮೇಲೆ ಮುಯ್ಯಿ ತೀರಿಸಬೇಕೆಂದೇ ಬದುಕಿ ಬರುತ್ತಾನೆ. `ಪ್ಯಾಪಿಲಾನ್ 1 ಮತ್ತು ಪ್ಯಾಪಿಲಾನ್ 2’ರ ಕಥಾಹಂದರ ಇದು.

ಮೂರನೇ ಭಾಗವಾದ `ಬಾಜಿ’ಯಲ್ಲಿ ಹೆನ್ರಿ ಶರಾರೇ (ಪ್ಯಾಪಿ) ಹದಿಮೂರು ವರ್ಷಗಳ ಕ್ರೂರವಾದ ಜೈಲು ಶಿಕ್ಷೆಯನ್ನು ಮುಗಿಸಿ ವೆನಿಜುವೆಲಾ ದೇಶದ ಎಲ್-ಕ್ಯಾಲವೋ ಹಳ್ಳಿಯಲ್ಲಿ ಬದುಕನ್ನು ಆರಂಭಿಸುವಲ್ಲಿಗೆ ಹೊಸ ಥರಹದ ಹೋರಾಟ ಆರಂಭಗೊಳ್ಳುತ್ತದೆ. ಇಲ್ಲಿಯ ತನಕ ಜೈಲಿನಿಂದ ತಪ್ಪಿಸಿಕೊಳ್ಳಲು ಜೀವದ ಹಂಗು ತೊರೆದು ಬಡಿದಾಡಿದ್ದ ಪ್ಯಾಪಿ ಈಗ ಸ್ವತಂತ್ರ ಹಕ್ಕಿ. ತನಗಿಷ್ಟ ಬಂದಂತೆ ಬದುಕುವ ಎಲ್ಲಾ ಅವಕಾಶಗಳು ಇದ್ದರೂ ತನ್ನನ್ನು ಜೈಲಿಗೆ ತಳ್ಳಿದ ವ್ಯಕ್ತಿಗಳ ವಿರುದ್ಧ ಮುಯ್ಯಿ ತೀರಿಸಿಕೊಳ್ಳುವ ವಾಂಛೆಯಿಂದ ತನ್ನೊಳಗೆ ಹೋರಾಟಕ್ಕೆ ಬೀಳುತ್ತಾನೆ. ಹೆಣ್ಣು, ಹೊನ್ನು, ಮಣ್ಣು ಎಲ್ಲವೂ ದೊರಕಿ ಅದೆಷ್ಟೇ ಅದ್ಭುತವಾಗಿ ಬದುಕಲು ಅವಕಾಶವಿದ್ದರೂ ಸೇಡಿನ ಹಪಹಪಿ ಮಾತ್ರ ನಿಲ್ಲುವುದಿಲ್ಲ.

ಮತ್ತೆ ತನ್ನ ದೇಶವಾದ ಫ್ರಾನ್ಸ್ ಗೆ ತಲುಪುವುದು ಅಷ್ಟು ಸುಲಭದ ಸಂಗತಿಯಾಗಿರುವುದಿಲ್ಲ. ಊರಿಂದ ಊರಿಗೆ ಸಾಗುತ್ತಾ, ಅಪಾಯಕಾರಿ ಕೆಲಸಗಳನ್ನು ಮಾಡುತ್ತಾ, ಸೋಲುತ್ತಾ, ಸತ್ತೇ ಹೋಗುವಂತಹ ಅದೆಷ್ಟೋ ಘಟನೆಗಳಲ್ಲಿ ಬದುಕಿ ಬರುತ್ತಾನೆ. ತನ್ನ ಚಾಣಾಕ್ಷತನ ಮತ್ತು ಮನೋಬಲದಿಂದ ಬದುಕಿನ ಎಲ್ಲಾ ಕಷ್ಟಕರ ಸನ್ನಿವೇಶವನ್ನು ಎದುರಿಸುತ್ತಾ ಹೋಗುತ್ತಾನೆ. ಒಂದು ಹಂತದಲ್ಲಿ ಭೂಗತ ವ್ಯಕ್ತಿಗಳ ಜೊತೆ ಸೇರಿ ಮಾಡಿದ ಕೆಲಸದ ಹಾದಿ ಅನ್ಯಾಯಯುತವಾಗಿ ಇದ್ದಿದ್ದೇ ಪ್ರತಿ ಬಾರಿಯ ಸೋಲಿಗೆ-ಹೊಡೆತಕ್ಕೆ ಕಾರಣವೂ ಹೌದು. ಕೊನೆಗೂ ಪ್ಯಾಪಿಯ ಕೈ ಹಿಡಿಯುವುದು ನ್ಯಾಯದ ದಾರಿಯಲ್ಲಿ ಮಾಡುವ ಉದ್ಯೋಗಗಳೇ. ಇದಕ್ಕೊಂದು ಘಟನೆಯನ್ನು ಉದಾಹರಿಸಬೇಕು.

ಢೋಂಗಿ ಪಾಸ್ ಪೋರ್ಟ್ ಬಳಸಿ ವೆನಿಜುವೆಲಾದ ಪಕ್ಕದ ದೇಶದೊಳಗೆ ಪ್ರವೇಶಿಸಿ ಅಲ್ಲಿನ ಚಿನ್ನದಂಗಡಿಯನ್ನು ಪ್ಯಾಪಿ ಮತ್ತಿತರರು ಕದಿಯುತ್ತಾರೆ. ಅವರವರ ಪಾಲಿನ ಮಾಲನ್ನು ಪ್ರತ್ಯೇಕವಾಗಿ ಬೇರೆ ಬೇರೆ ಸ್ಥಳಗಳಲ್ಲಿ ಹುಗಿಯುತ್ತಾರೆ. ಆದರೆ ಕೂಡಲೇ ಸಿಕ್ಕಿಬಿದ್ದು ಪೊಲೀಸರಿಂದ ನರಕ ದರ್ಶನ ಕಾಣುತ್ತಾರೆ. ಒಂದು ರಾತ್ರಿ ಇಡೀ ಎಂಟು ತಾಸು ನಿರಂತರ ಮಾಂಸದ ಮುದ್ದೆಗಳಾಗುವಂತೆ ಹೊಡೆತ ಬಿದ್ದರೂ ಕದ್ದ ಮೂವರಲ್ಲಿ ಒಬ್ಬರೂ ಬಾಯಿ ಬಿಡುವುದಿಲ್ಲ. ಚಿತ್ರ ವಿಚಿತ್ರ ಹಿಂಸೆ ಕೊಡಲಾಗುತ್ತದೆ. ಶೈತ್ಯಾಗಾರಕ್ಕೆ ನೂಕಿ ಅಕ್ಷರಶಃ ಮಂಜುಗಡ್ಡೆಯಾಗಿಸುತ್ತಾರೆ. ಒಬ್ಬ ಸತ್ತೇ ಹೋಗುತ್ತಾನೆ. ಕೊನೆಗೆ ಪ್ಯಾಪಿಯ ವಿರುದ್ಧ ಸರಿಯಾದ ಸಾಕ್ಷ್ಯಗಳಿಲ್ಲದ ಕಾರಣ ಜೈಲಿನಲ್ಲಿ ಕೊಳೆಯುವುದು ತಪ್ಪುತ್ತದೆ.

ಎಲ್ಲಾ ಸಮಸ್ಯೆಯಿಂದ ತಪ್ಪಿಸಿಕೊಂಡು ಕೆಲ ತಿಂಗಳ ನಂತರ ಹುಗಿದಿಟ್ಟ ಅರವತ್ತು ಸಾವಿರ ಡಾಲರ್ ನಷ್ಟು ಚಿನ್ನವನ್ನು ಕೊಂಡೊಯ್ಯಲು ಬಂದರೆ ಹಿಂದಿದ್ದ ದ್ವಿಪಥ ರಸ್ತೆ ಈಗ ಚತುಷ್ಪಥವಾಗಿದೆ! ಗುರುತಿನ ಮರ ನೆಲಸಮ. ಚಿನ್ನವೆಲ್ಲೋ ಡಾಂಬರ್ ರಸ್ತೆಯಡಿ ಹೋಗಿದೆ. ಬೃಹತ್ ಆಸೆಯ ಬೆಟ್ಟವೊಂದು ಕಣ್ಣೆದುರೇ ನೆಲಸಮವಾದ ಅನುಭವ. ಕುಸಿದು ಕೂರುವ ಪ್ಯಾಪಿ ಅರ್ಧಗಂಟೆಯಲ್ಲಿ ಚೇತರಿಸಿಕೊಂಡು ತನ್ನನ್ನು ತಾನೇ ಉತ್ತೇಜಿಸಿಕೊಳ್ಳುತ್ತಾ ಆಡುವ ಮಾತು ಉಲ್ಲೇಖನೀಯ. “ಬದುಕೆಂದರೆ ಇದೇ.. ನಮ್ಮ ನಂಬುಗೆಗಳತ್ತ ಸತತ ಪ್ರಯಾಣ. ಗುರಿ ತಲುಪುತ್ತೇವೆ ಎಂಬ ಭರವಸೆಯೊಂದಿಗೆ ಎಡೆಬಿಡದೆ ಪ್ರಯತ್ನ. ನಿರಾಶೆ ನಿನ್ನ ಜಾಯಮಾನಕ್ಕೆ ಶೋಭಿಸುವ ಸಂಗತಿಯಲ್ಲ. ಹಲವು ಹತ್ತು ಕಗ್ಗತ್ತಲ ಯಾತ್ರೆಗಳಲ್ಲಿ ಒಂದು ಫಲಿಸಿಯೇ ತೀರುತ್ತದೆ.’’

ಇಂತಹ ಅದೆಷ್ಟೋ ನಿರಾಶೆಗಳನ್ನು ಕಂಡು ಕೊನೆಗೆ ಕೇವಲ ನ್ಯಾಯಯುತ ದಾರಿಯಲ್ಲಿ ನಡೆಯುವ ಪ್ಯಾಪಿ ಹೊಟೇಲ್ ಉದ್ಯಮದಲ್ಲಿ ತೊಡಗಿಸಿಕೊಂಡು ಸಮಾಜದ ಉನ್ನತ ಸ್ಥರವನ್ನೇರುತ್ತಾನೆ. ಅಮಾಯಕನಾದ ತನ್ನನ್ನು ಜೈಲಿಗೆ ಕಳುಹಿಸಲು ಕಾರಣವೇನು ಎಂದು ಫ್ರಾನ್ಸ್ ಗೆ ತೆರಳಿ ತಿಳಿದುಕೊಳ್ಳುತ್ತಾನೆ. ಇನ್ನು ಇಷ್ಟು ವರುಷಗಳ ದ್ವೇಷದ ಸಂಗತಿ ಏನಾಯಿತು? ಸೇಡು ತೀರಿಸಿಕೊಳ್ಳುವ ಎಲ್ಲಾ ಅವಕಾಶಗಳು, ಹಣ, ಶಕ್ತಿ ಇದ್ದರೂ ಕೊನೆಗೆ ಅವರೆಲ್ಲರನ್ನೂ ಸಂಪೂರ್ಣವಾಗಿ ಕ್ಷಮಿಸಿ, ಸುಂದರ ಜೀವನವನ್ನು ಕಟ್ಟಿಕೊಂಡು ಬದುಕುವಲ್ಲಿಗೆ `ಪ್ಯಾಪಿಯೋನ್ 3’ ಕೊನೆಯಾಗುತ್ತದೆ.

Photo Courtesy: Suprabha S M

Photo Courtesy: Suprabha S M

ಒಬ್ಬ ವ್ಯಕ್ತಿಯ ಕಥೆ ಇಷ್ಟೊಂದು ಮಹತ್ವದ್ದೇಕಾಗುತ್ತದೆ ಎಂಬ ಪ್ರಶ್ನೆ ಹುಟ್ಟಬಹುದು. ಇಷ್ಟಕ್ಕೂ ಶರಾರೇ ಈ ಆತ್ಮಕಥೆಯನ್ನು ಎಪ್ಪತ್ತೈದು ಶೇಕಡಾ ಸತ್ಯ ಎಂದಿದ್ದಾನೆ. ತನ್ನ ಬದುಕಿನ ಸೋಲುಗಳನ್ನು ಮತ್ತೆ ಮತ್ತೆ ಸೋಲಿಸುತ್ತಾ ಗುರಿಯತ್ತ ಸಾಗುವ ಪ್ಯಾಪಿಯ ಜೀವನ ಒಂದು ವೇಳೆ ಕಾಲ್ಪನಿಕವೇ ಆಗಿದ್ದರು ಕೂಡಾ ಸ್ಫೂರ್ತಿದಾಯಕ. ಕೆಲವೊಮ್ಮೆ ಗುರಿ ಸಾಧನೆಗೆ ಹಿಡಿದ ಹಾದಿ ಕೆಟ್ಟದ್ದು ಹೌದು. ಆದರೆ ಗಮನಿಸಬೇಕಾದದ್ದು ಆ ಹಾದಿಯ ಸೋಲನ್ನು ಪ್ಯಾಪಿ ಮೆಟ್ಟಿ ನಿಂತ ಪರಿ. ಬದುಕು ಸಂಪೂರ್ಣ ಬಡಿದು ಕೆಳಗುರುಳಿಸಿತು ಎನ್ನುವಾಗ ಆತ ಎದ್ದು ನಿಂತು ಹೋರಾಡುವ ಛಲ ಸುಲಭಕ್ಕೆ ದಕ್ಕುವಂತಹುದ್ದಲ್ಲ. ಅಪರಿಮಿತ ತಾಳ್ಮೆಯ ಅಗತ್ಯವೂ ಅದಕ್ಕಿದೆ. ತನ್ನ ಜೀವನವೇ ದಿಕ್ಕುಗೆಟ್ಟಿದ್ದರೂ ಪಿಕೊಲಿನೋ ಎಂಬ ಪಾರ್ಶ್ವವಾಯು ಪೀಡಿತ ಗೆಳೆಯನನ್ನು ಜೊತೆಗಿರಿಸಿಕೊಂಡು ಚಾಕರಿ ಮಾಡುತ್ತಾನೆ. ಎಷ್ಟೇ ಕಷ್ಟ ಎದುರಾದರೂ ಪಿಕೊಲಿನೋವನ್ನು ಕೈಬಿಟ್ಟು ಹೋಗಿಬಿಡೋಣ ಎಂದು ಒಂದು ಬಾರಿಯೂ ಯೋಚಿಸುವುದಿಲ್ಲ. ಇಂತಹ ಮನಮಿಡಿಯುವ ಸನ್ನಿವೇಶಗಳಿಂದಲೇ `ಪ್ಯಾಪಿಯೋನ್’ ಇಷ್ಟವಾಗುತ್ತಾ ಹೋಗುತ್ತದೆ.

“ನಾಳೆಗಳು ನಿಶ್ಚಿತವಲ್ಲ, ನಿನ್ನೆಗಳಿಂದ ಯಾವುದೇ ಪ್ರಯೋಜನವಿಲ್ಲ ಅಂದ ಮೇಲೆ ಇಂದು, ಈ ಗಳಿಗೆ ಮಾತ್ರ ನನ್ನದು. ಅದು ಮಾತ್ರ ಪ್ರಸ್ತುತ. ವರ್ತಮಾನವನ್ನು ಅದ್ಭುತವೆಂಬಂತೆ ಬದುಕುವುದು ಮಾತ್ರ ನಮ್ಮ ಕೈಲಿದೆ. ಹಿಂದಿನ ಕಹಿ, ಸೋಲುಗಳನ್ನು ಮರೆಯುವುದು. ಮತ್ತೆ ಮತ್ತೆ ಎದ್ದು ನಿಲ್ಲುವುದು, ಅತ್ಯುತ್ಸಾಹದಿಂದ ಜೀವನದಲ್ಲಿ ತೊಡಗಿಕೊಳ್ಳುವುದು. ಇದು ಸಂಪೂರ್ಣ ನಮ್ಮ ಕೈಲಿದೆ” ಎಂಬ ಪ್ಯಾಪಿ ಮಾತು ಕಾಲ ಕಾಲಕ್ಕೂ, ವ್ಯಕ್ತಿ ವ್ಯಕ್ತಿಗೂ ಸಲ್ಲುವಂತಹುದು.

‍ಲೇಖಕರು admin

21 December, 2015

2 Comments

  1. G.W.Carlo

    ಪ್ಯಾಪಿಯೋನ್ ನನ್ನು ಈ ಮೊದಲೇ ನಾನು ಓದಿದ್ದು ‘ಪ್ಯಾಪಿಲೊನ್’ ಎಂದೇ! ಈ ಮೊದಲ ಭಾಗಗಳನ್ನು ತೇಜಸ್ವಿಯವರು ಅನುವಾದಿಸಿದ್ದು ‘ಪ್ಯಾಪಿಲೊನ್’ ಎಂದೇ! ಇಂಗ್ಲಿಷ್ ವಿಚಿತ್ರವಾದರೆ ಫ್ರೆಂಚ್ ಬಾಷೆ ಮತ್ತೂ ವಿಚಿತ್ರ. ಮೂಲ ಲೇಖಕರ ಹೆಸರನ್ನೇ ನೋಡಿ, ಹೆನ್ರಿ ಛಾರೇರೆ, ಚಾರರೇ, ಶರಾರೇ! ಈಗ ಹೆಸರುಗಳ ಉಚ್ಚಾರದ ಶಬ್ಧಕೋಶಗಳು ಅಂತರ್ಜಾಲದಲ್ಲಿರುವುದರಿಂದ ಸಲೀಸಾಗಿ ಉಚ್ಛಾರಮಾಡಬಹುದು!

  2. ಮುಗಿಯದ ಮೌನ- GKN

    ಪ್ಯಾಪಿಲಾನ್ ನ ಭಾಗಗಳನ್ನು ಓದಿದ್ದೇನೆ, ಮೂರನೆಯದರ ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading