ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಿವಾಕರ ನೇರ ನುಡಿ: ರಕ್ಷಿತ ಅರಣ್ಯ ಪ್ರದೇಶಗಳಲ್ಲೂ ರೆಸಾರ್ಟ್‌ ನಿರ್ಮಾಣ

ಪಶ್ಚಿಮ ಘಟ್ಟಗಳ ರಕ್ಷಣೆ

ವಿಶ್ವ ಸಂಸ್ಥೆಯ ಪ್ರಮುಖ ಅಂಗಸಂಸ್ಥೆಯಾಗಿರುವ ಯುನೆಸ್ಕೋ ವಿಶ್ವದ ವಿವಿಧ ರಾಷ್ಟ್ರಗಳಲ್ಲಿನ ವಿಶೇಷ ಸ್ಥಳಗಳನ್ನು, ಚಾರಿತ್ರಿಕ ಸ್ಮಾರಕಗಳನ್ನು ಮತ್ತು ಇತಿಹಾಸದ ಪಳೆಯುಳಿಕೆಗಳನ್ನು ಗುರುತಿಸಿ ಅವುಗಳಿಗೆ ವಿಶ್ವಪರಂಪರೆಯ ತಾಣ ಎಂಬ ಪಟ್ಟ ನೀಡುವುದು ಸಾಮಾನ್ಯ ಸಂಗತಿ. ಜಾಗತಿಕ ರಾಜಕಾರಣ ಮತ್ತು ಸಾಮ್ರಾಜ್ಯಶಾಹಿ ನೀತಿಗಳು ಏನೇ ಇದ್ದರೂ ವಿಶ್ವಸಂಸ್ಥೆಯ ಈ ಕ್ರಮಗಳು ಅನೇಕ ರಾಷ್ಟ್ರಗಳ ನೈಸರ್ಗಿಕ ಸಂಪತ್ತನ್ನು ರಕ್ಷಿಸುವುದರಲ್ಲಿ ತಮ್ಮದೇ ಆದ ಪಾತ್ರ ವಹಿಸಿವೆ. ಅನೇಕ ಐತಿಹಾಸಿಕ ಸ್ಮಾರಕಗಳೂ ನಾಶವಾಗದೆ ತಮ್ಮ ಪರಂಪರಾತ್ಮಕ ವೈಭವವನ್ನು ಉಳಿಸಿಕೊಂಡಿದ್ದರೆ ಅದಕ್ಕೆ ಯುನೆಸ್ಕೋ ನೀಡುವ ವಿಶ್ವಪರಂಪರೆಯ ತಾಣ ಪಟ್ಟವೇ ಕಾರಣವೆಂದೂ ಹೇಳಬಹುದು.. ವಿಶ್ವದಾದ್ಯಂತ ಅನೇಕ ಐತಿಹಾಸಿಕ ತಾಣಗಳನ್ನು ವಿಶ್ವಪರಂಪರೆಯ ಪಟ್ಟಿಗೆ ಸೇರಿಸುವುದರ ಮೂಲಕ ಯುನೆಸ್ಕೋ ಇಂತಹ ತಾಣಗಳ ದುರುಪಯೋಗವನ್ನು ತಡೆಗಟ್ಟುತ್ತವೆ. ಭಾರತದಲ್ಲೂ ಇಂತಹ ಅನೇಕ ಸುಂದರ ನೈಸರ್ಗಿಕ, ಐತಿಹಾಸಿಕ ಮಹತ್ವದ ತಾಣಗಳನ್ನು ಯುನೆಸ್ಕೋ ಪರಿಗಣಿಸಿದೆ. ಜಾಗತಿಕ ಮಟ್ಟದಲ್ಲಿ ಪಶ್ಚಿಮ ಘಟ್ಟಗಳನ್ನು ಜೀವ ವೈವಿಧ್ಯತೆಯ ತಾಣ ಎಂದೇ ಪರಿಗಣಿಸಲಾಗಿದೆ. ಹಾಗಾಗಿ ಪಶ್ಚಿಮ ಘಟ್ಟವನ್ನು ವಿಶ್ವಪರಂಪರೆಯ ತಾಣ ಎಂದು ಗುರುತಿಸಲು ಹಲವು ವರ್ಷಗಳಿಂದ ಪರಿಸರವಾದಿಗಳು ಆಗ್ರಹಿಸುತ್ತಿದ್ದಾರೆ.

ಒಂದು ವೇಳೆ ಪಶ್ಚಿಮ ಘಟ್ಟಗಳನ್ನು ವಿಶ್ಪಪರಂಪರೆಯ ತಾಣ ಎಂದು ಘೋಷಿಸಿದರೆ ಯುನೆಸ್ಕೋ ಈ ಅರಣ್ಯ ಪ್ರದೇಶಗಳ ಉಸ್ತುವಾರಿಯನ್ನೇನೂ ವಹಿಸಿಕೊಳ್ಳುವುದಿಲ್ಲ. ಯುನೆಸ್ಕೋ ನಿಯಮಗಳಲ್ಲಿ ಈ ಕುರಿತು ಸ್ಪಷ್ಟವಾಗಿ ಹೇಳಲಾಗಿದೆ. ಈ ನಿಯಮಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅರ್ಥವಾಗುವುದೇನೆಂದರೆ ಯುನೆಸ್ಕೋ ಘೋಷಿತ ತಾಣಗಳ ರಕ್ಷಣೆ ಮತ್ತಷ್ಟು ಬಲಗೊಳ್ಳುತ್ತದೆ. ಅರಣ್ಯ ನಿರ್ವಹಣೆಗಾಗಿ ಸಂಶೋಧಕರು, ವಿಜ್ಞಾನಿಗಳು ಮತ್ತು ಜನಪ್ರತಿನಿಧಿಗಳನ್ನೊಳಗೊಂಡು ಅರಣ್ಯ ಅಧಿಕಾರಿಗಳೊಡನೆ ಸೇರಿ ರಕ್ಷಣಾ ವ್ಯವಸ್ಥೆ ರೂಪಿಸುವುದನ್ನು ಯುನೆಸ್ಕೋ ಖಚಿತಪಡಿಸಿಕೊಳ್ಳುತ್ತದೆ. ಇದರ ಜೊತೆಯಲ್ಲಿ ಇಂತಹ ರಕ್ಷಿತ ತಾಣಗಳ ನಿರ್ವಹಣೆಗೆ ಆಯಾ ರಾಜ್ಯಗಳ ಅರಣ್ಯ ಇಲಾಖೆ ಮುಖ್ಯಸ್ಥರು, ಕ್ಷೇತ್ರ ಶಾಸಕರು, ಸಂಸದರು ಮತ್ತು ವಿಜ್ಞಾನಿಗಳನ್ನೊಳಗೊಂಡ ಸಮಿತಿಯನ್ನು ರಚಿಸಿ, ಈ ಸಮಿತಿಯ ನಾಲ್ಕು ತಿಂಗಳಿಗೊಮ್ಮೆ ಸಭೆ ಸೇರುವ ಮೂಲಕ ಅರಣ್ಯ ರಕ್ಷಣೆ ಮತ್ತು ನಿರ್ವಹಣೆಯ ನಿರ್ಧಾರಗಳನ್ನು ಕೈಗೊಳ್ಳುತ್ತವೆ.

ವಿಶ್ವದ ಅನೇಕ ರಾಷ್ಟ್ರಗಳಲ್ಲಿ ನೈಸರ್ಗಿಕ ತಾಣಗಳನ್ನು ಯುನೆಸ್ಕೋ ವಿಶ್ವಪರಂಪರೆಯ ತಾಣಗಳಾಗಿ ಘೋಷಿಸಲು ಅಲ್ಲಿನ ಸರ್ಕಾರಗಳು ವಿಶ್ವಸಂಸ್ಥೆಗೆ ದುಂಬಾಲು ಬೀಳುತ್ತಿವೆ. ಆದರೆ ನಮ್ಮ ಕರ್ನಾಟಕದ ಭಾಜಪ ಸರ್ಕಾರಕ್ಕೆ ಈ ಪ್ರಕ್ರಿಯೆಯಲ್ಲಿ ಏಕೋ ವಿಶ್ವಾಸವಿಲ್ಲ. ಬಹುಶಃ ಭಾರತೀಯತೆ, ದೇಶಭಕ್ತಿ ಉಕ್ಕಿ ಹರಿಯುತ್ತಿರಬೇಕು. ಯುನೆಸ್ಕೋ ಪಟ್ಟಿಗೆ ಸೇರಿಸುವುದರಿಂದ ಪಶ್ಚಿಮ ಘಟ್ಟಗಳನ್ನು ಉಳಿಸಲು ವಿಶೇಷ ಅನುದಾನವೇನೂ ಬರುವುದಿಲ್ಲ. ಅಲ್ಲದೆ ಈ ಭಾಗದಲ್ಲಿ ಏನೇ ಅಭಿವೃದ್ಧಿ ಕಾರ್ಯ ನಡೆಸಲೂ ಯುನೆಸ್ಕೋ ಅನುಮತಿ ಪಡೆಯಬೇಕು. ಪಶ್ಚಿಮ ಘಟ್ಟಗಳು ನಮ್ಮ ಜಾಗ. ಬೇರೆಯವರ ಕೈಗೆ ಏಕೆ ಜುಟ್ಟು ಕೊಡುವುದು ಎಂದು ಹೇಳುವ ಮೂಲಕ ಅರಣ್ಯ ಖಾತೆ ಸಚಿವ ಸಿ.ಎಚ್. ವಿಜಯಶಂಕರ್ ಹೇಳಿರುವುದು ರಾಜ್ಯ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದೆ.

ಆದರೆ ಸರ್ಕಾರದ ಅಧಿಕೃತ ನಿಲುವೇ ಆಗಿರುವ ಈ ಹೇಳಿಕೆಯಲ್ಲಿ ಎಳ್ಳಷ್ಟೂ ಸತ್ಯಾಂಶವಿಲ್ಲ. ಈ ಅರಣ್ಯಗಳಲ್ಲಿ ವಾಸಿಸುವ ಆದಿವಾಸಿಗಳನ್ನು ಉಚ್ಚಾಟಿಸಲಾಗುತ್ತದೆ ಎಂಬ ಸರ್ಕಾರದ ವಾದವೂ ಹುರುಳಿಲ್ಲದ್ದು. ಸರ್ಕಾರದ ಪ್ರಮುಖ ಆರೋಪವೆಂದರೆ ಯುನೆಸ್ಕೋ ಘೋಷಣೆಯ ಪರಿಣಾಮ ಅಭಿವೃದ್ಧಿ ಕಾರ್ಯಗಳಿಗೆ ಪೆಟ್ಟಾಗುತ್ತದೆ ಎನ್ನುವುದು. ಅಭಿವೃದ್ಧಿ ಎಂದರೇನು ? ಸಾವಿರಾರು ಎಕರೆ ಅರಣ್ಯ ಪ್ರದೇಶಗಳನ್ನು ಗಣಿಗಾರಿಕೆಗೆ ನೀಡಿ ನಿಸರ್ಗವನ್ನು ಬೋಳಿಸುವುದೇ ? ನದಿಗಳ ದಿಕ್ಕು ತಪ್ಪಿಸಿ ಕೈಗಾರಿಕೆಗಳಿಗೆ ನೀಡಿ ಅಂತರ್ಜಲ ಬತ್ತುವಂತೆ ಮಾಡುವುದೇ ? ಘಟ್ಟಗಳ ಮಧ್ಯಭಾಗದಲ್ಲಿ, ಅಂಚಿನಲ್ಲಿ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಿ ಹಸಿರು ಕಾಡುಗಳನ್ನು ನಿರ್ನಾಮ ಮಾಡುವುದೇ ? ಪ್ರವಾಸೋದ್ಯಮದ ಹೆಸರಿನಲ್ಲಿ ರಕ್ಷಿತ ಅರಣ್ಯ ಪ್ರದೇಶಗಳಲ್ಲೂ ರೆಸಾರ್ಟ್‌ಗಳ ನಿರ್ಮಾಣಕ್ಕೆ ಅನುಮತಿ ನೀಡಿ, ನೈಸರ್ಗಿಕ ತಾಣಗಳನ್ನು ಮೋಜಿನ ತಾಣಗಳನ್ನಾಗಿ ಪರಿವರ್ತಿಸುವುದೇ ? ಇದನ್ನೇ ನಮ್ಮ ಆಳ್ವಿಕರು ಅಭಿವೃದ್ಧಿ ಎಂದು ಪರಿಗಣಿಸಿದಲ್ಲಿ, ಯುನೆಸ್ಕೋ ತಡೆಗೋಡೆಯಾಗಿ ನಿಲ್ಲುತ್ತದೆ.

ಪಶ್ಚಿಮಘಟ್ಟ ಉಳಿಸಿ ಎಂಬ ಜನತೆಯ ಒಕ್ಕೊರಲಿನ ಕೂಗು ಹಲವು ವರ್ಷಗಳಿಂದ ಮೊಳಗುತ್ತಲೇ ಇದೆ. ಆದರೆ ಪರಿಸರವಾದಿಗಳ ಈ ಕೂಗು ಅರಣ್ಯರೋದನವಾಗಿಯೇ ಉಳಿದಿದೆ. ನವ ಉದಾರವಾದಿ ನೀತಿಗಳ ಅನುಷ್ಟಾನದಲ್ಲಿ ರಾಜ್ಯದ ಅರಣ್ಯ ಸಂಪತ್ತು ಕಾರ್ಪೋರೇಟ್ ಉದ್ಯಮಿಗಳ ಪಾಲಾಗುತ್ತಿದೆ. ಆಧುನಿಕ ಬಂಡವಾಳಶಾಹಿ ಅಭಿವೃದ್ಧಿ ಧೋರಣೆಯಲ್ಲಿ ನಿಸರ್ಗ ಸಂಪತ್ತು ಬಳಸಿ ಬಿಸಾಡುವ ತ್ಯಾಜ್ಯ ವಸ್ತುವಿನಂತೆ ಪರಿಣಮಿಸಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಜನತೆ ಪಶ್ಚಿಮ ಘಟ್ಟಗಳನ್ನು ಉಳಿಸಿ ಎಂದು ಆಗ್ರಹಿಸಿದರೆ ಸರ್ಕಾರ ಮಾನ್ಯ ಮಾಡಬೇಕಾಗುತ್ತದೆ. ಆದರೆ ಕರ್ನಾಟಕದ ಅಪೂರ್ವ ನಿಸರ್ಗ ಸಂಪತ್ತನ್ನು ಉಳಿಸಬೇಕಾಗಿರುವುದು ಯುನೆಸ್ಕೋದಿಂದಲ್ಲ, ನಮ್ಮ ಆಳ್ವಿಕರಿಂದ ಮತ್ತು ಆಳ್ವಿಕರ ಕೃಪಾಕಟಾಕ್ಷ ಹೊಂದಿರುವ ಕಾರ್ಪೋರೇಟ್ ಶಕ್ತಿಗಳಿಂದ.

 

 

 

 

‍ಲೇಖಕರು G

25 June, 2011

ನಿಮಗೆ ಇವೂ ಇಷ್ಟವಾಗಬಹುದು…

3 Comments

  1. Badarinath Palavalli

    ಯುನೆಸ್ಕೋ ಘೋಷಿತ ತಾಣಗಳನ್ನು ಸಂರಕ್ಷಿಸಬೇಕಾದ ಸರ್ಕಾರಗಳ ಜನ್ಮೇಪಿ ಸೋಮಾರಿತನ ಮತ್ತದರ ಅವೈಙ್ಞಾನಿಕ ನೀತಿಗಳಿಗೆ ಧಿಕ್ಕಾರವಿರಲಿ!

  2. Manjula.N.

    Corporate Ghatanughatigalella portrait tara agiruvaga Ghattad Ulivu sadyave ? Article tumba chenngagide

    Manjula Narayanarao

  3. ರಾಕೇಶ ಜೋಶಿ

    ಯುನಿಸ್ಕೋ ಕೈಗೆ ಪಶ್ಚಿಮ ಘಟ್ಟದ ಉಸ್ತುವಾರಿ ಕೊಟ್ಟರೆ ನಮ್ಮ ರಾಜಕಾರಣಿಗಳು ಮುಂಬರುವ ದಿನಗಳಲ್ಲಿ ಅಲ್ಲಿ “ಗಣಿಗಾರಿಕೆ” ಮಾಡಬೇಕೆನ್ನುವ ಯೋಚನೆಗಳಿಗೆ ಎಳ್ಳು-ನೀರು ಬಿಡಬೇಕಾಗುತ್ತೆ. ಅದಕ್ಕೆ ಈಗಿಂದಲೇ ಅವರು ತಮ್ಮ ತಯಾರಿಯಲ್ಲಿದ್ದಾರೆ. 🙂 ನಮ್ಮ ಸರಕಾರಕ್ಕೆ ಒಂದು ವಿನಂತಿ “ಪಶ್ಚಿಮ ಘಟ್ಟಗಳನ್ನ ಹೇಗಿದೆಯೋ ಹಾಗೆ ಉಳಿಸಿದರೆ ಸಾಕು. ಅವರು ಮಾಡುವ ಅಭಿವೃದ್ಧಿ ಬೇಡ. ” ಯುನಿಸ್ಕೋ ಕೈಗೆ ಉಸ್ತುವಾರಿ ಕೊಡಲಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading