ಲೋಕಪಾಲ್ ಮಸೂದೆಯ ಬಗ್ಗೆ ಸಾರ್ವಜನಿಕ ಚರ್ಚೆ ವ್ಯಾಪಕತೆಯನ್ನು ಪಡೆಯುತ್ತಿದ್ದು, ರಾಜಕೀಯ ವಲಯಗಳಲ್ಲಿ ಸಂಚಲನ ಮೂಡಿಸುತ್ತಿರುವಂತೆಯೇ ಆಳುವ ವರ್ಗಗಳು ಪ್ರಾಬಲ್ಯ ಜನಪರ ಹೋರಾಟಗಳನ್ನು ಬದಿಗೊತ್ತುವಲ್ಲಿ ಯಶಸ್ವಿಯಾಗುತ್ತಿರುವುದೂ ಸ್ಪಷ್ಟವಾಗುತ್ತಿದೆ. ದೇಶದ ಜನತೆ ಬೀದಿಗಿಳಿದು ಹೋರಾಡಿದ ದಿನಗಳೂ ಆಗಲೇ ಇತಿಹಾಸ ಸೇರಿದಂತಾಗಿದೆ. ಪ್ರತಿಭಟನೆ, ಧರಣಿ ಆಳ್ವಿಕರ ದೃಷ್ಟಿಯಲ್ಲಿ ಸಂತೆ ವ್ಯಾಪಾರದಷ್ಟೇ ಕ್ಷುಲ್ಲಕವಾಗಿಬಿಟ್ಟಿದೆ. ಒಂದು ಕಾಲ ಇತ್ತು. ಆಳುವ ವರ್ಗಗಳ ವಿರುದ್ಧ ಯಾವುದೇ ಪ್ರತಿಭಟನೆ ನಡೆದರೆ ಇಡೀ ಜನಸಮುದಾಯಗಳು ಒಂದಾಗುತ್ತಿದ್ದವು. ರಾಜಕೀಯ ಮತ್ತು ರಾಜಕೀಯೇತರ ಗುಂಪುಗಳು ಒಟ್ಟಾಗಿ ಧರಣಿ ಸತ್ಯಾಗ್ರಹಗಳನ್ನು ಏರ್ಪಡಿಸುತ್ತಿದ್ದವು. ಇವೆಲ್ಲಾ ೧೯೭೦-೮೦ರ ದಶಕದ ಮಾತು. ಪ್ರಗತಿಪರ ಎಂಬ ಹಣೆಪಟ್ಟಿಯ ಅಡಿಯಲ್ಲಿ ಬಹುತೇಕ ಎಲ್ಲಾ ಸಾರ್ವಜನಿಕ ಸಂಘಟನೆಗಳು ಒಂದಾಗುತ್ತಿದ್ದವು. ತುರ್ತುಪರಿಸ್ಥಿತಿಯ ಸಮಯದಲ್ಲಿ ಜೆಪಿ ಅವರ ಸಂಪೂರ್ಣ ಕ್ರಾಂತಿಯೂ ಇದೇ ಸಂದರ್ಭದಲ್ಲಿ ಸೃಷ್ಟಿಯಾದ ಒಕ್ಕೊರಲ ದನಿಯಾಗಿತ್ತು.
ಆದರೆ ಇವೆಲ್ಲವೂ ಈಗ ಗತಕಾಲದ ಪಳೆಯುಳಿಕೆಗಳಂತಾಗಿದೆ. ದೇಶವನ್ನು ಕಾಡುತ್ತಿರುವ ಭ್ರಷ್ಟಾಚಾರ ಎಂಬ ಪೆಡಂಭೂತವನ್ನು ಹೊಡೆದೋಡಿಸಲು ಹೂಡಿದ ದೇಶವ್ಯಾಪಿ ಚಳುವಳಿ ಈಗ ಕವಲು ಹಾದಿಯಲ್ಲಿದೆ. ಈಗಾಗಲೇ ಆಳ್ವಿಕರ ಏಜೆಂಟ್ ಸ್ವಾಮಿ ಬಾಬಾ ರಾಮದೇವ್ ತಮ್ಮ ಢೋಂಗಿ ಸತ್ಯಾಗ್ರಹದ ಮೂಲಕ ಮಿಥ್ಯಾಗ್ರಹಕ್ಕೆ ನಾಂದಿ ಹಾಡಿದ್ದಾರೆ. ದೇಶಾದ್ಯಂತ ಲಕ್ಷಾಂತರ ಬೆಂಬಲಿಗರನ್ನು ಹೊಂದಿರುವ ಬಾಬಾ ವಿರುದ್ಧ ಕೇಂದ್ರ ಸರ್ಕಾರ ನಡುರಾತ್ರಿಯಲ್ಲಿ ದಾಳಿ ನಡೆಸಿದರೂ ಸಾರ್ವಜನಿಕ ವಲಯದಲ್ಲಿ ಪ್ರತಿರೋಧದ ದನಿ ಎಲ್ಲೂ ಕಾಣದೆ ಹೋದದ್ದು ಇಡೀ ಪ್ರಹಸನದ ನಾಟಕೀಯತೆಯ ದ್ಯೋತಕವಾಗಿ ಕಾಣುತ್ತದೆ. ಸತ್ಯಾಗ್ರಹ ಎಂಬ ಪರಿಭಾಷೆಯನ್ನೇ ಅಪಮಾನಗೊಳಿಸುವಂತೆ, ಸಶಸ್ತ್ರ ಪಡೆಯನ್ನು ನಿರ್ಮಿಸುವ ಶಪಥ ಮಾಡಿದ ರಾಮದೇವ್ ಭವಿಷ್ಯದಲ್ಲಿ ಯಾವುದೇ ಸತ್ಯಾಗ್ರಹಿಯನ್ನು ಅನುಮಾನ ದೃಷ್ಟಿಯಿಂದ ನೋಡಲು ಆಳ್ವಿಕರಿಗೆ ಸ್ಪಷ್ಟ ಮಾರ್ಗ ಸೂಚಿಸಿದ್ದಾರೆ. ಬಹುಶಃ ಇದೂ ಸಹ ಪತಂಜಲಿ ಯೋಗದ ಒಂದು ವಿಧಾನ ಇರಬಹುದು.
ಬಾಬಾ ರಾಮದೇವ್ ಮಾಡಿದ ಮಹಾಪರಾಧವೆಂದರೆ, ಜನಸಾಮಾನ್ಯರ ದನಿಯನ್ನು ಆಳ್ವಿಕರಿಗೆ ಮುಟ್ಟಿಸಲು ರೂಪಿಸಲಾಗಿದ್ದ ಸತ್ಯಾಗ್ರಹ ಎಂಬ ಅಸ್ತ್ರವನ್ನು ಮಾರುಕಟ್ಟೆಯ ವಸ್ತುವನ್ನಾಗಿ ಮಾಡಿದ್ದು. ಜಾಗತೀಕರಣದ ಭರಾಟೆಯಲ್ಲಿ ರಾಜಕಾರಣದಿಂದ ಹಿಡಿದು ಸಾಂಸ್ಕೃತಿಕ ನೆಲೆಗಳವರೆಗೆ ಎಲ್ಲವೂ ಮಾರುಕಟ್ಟೆಯ ಸರಕುಗಳಾಗಿರುವಾಗ ಸತ್ಯಾಗ್ರಹ ಮಾತ್ರ ಬಾಕಿ ಉಳಿದಿತ್ತು. ಈಗ ಅದೂ ಸಹ ಸಂತೆಯಲ್ಲಿ ಬಿಕರಿಗಿದೆ. ನಿದರ್ಶನ ಬೇಕಾದರೆ ಕರ್ನಾಟಕದ ರಾಜಕಾರಣವನ್ನು ಗಮನಿಸಬೇಕು. ತಮ್ಮ ಕಾಲಾವಧಿಯಲ್ಲಿ ತಾವೇ ಖುದ್ದಾಗಿ ನೀಲಿ ನಕ್ಷೆ ಸಿದ್ಧಪಡಿಸಿ, ಕೃಷಿಕರ, ಜನಸಾಮಾನ್ಯರ ಅಮೂಲ್ಯ ಆಸ್ತಿ ಭೂಮಿಯನ್ನು ಕಾರ್ಪೋರೇಟ್ಗಳಿಗೆ ಪರಭಾರೆ ಮಾಡುವ ಪರಂಪರೆಗೆ ನಾಂದಿ ಹಾಡಿದ ರಾಜಕಾರಣಿಗಳು ಈಗ ಅದೇ ಯೋಜನೆಯ ವಿರುದ್ಧ ಆಮರಣಾಂತ ಉಪವಾಸ ಹೂಡುತ್ತಾರೆ. ನೈಸ್ ಮತ್ತು ದೇವೇಗೌಡರ ನಡುವಿನ ಸಂಘರ್ಷದಲ್ಲಿ ಕಾಣುವುದು ರಾಜಕೀಯ ವೈಷಮ್ಯವೇ ಹೊರತು, ತಾತ್ವಿಕ ನೆಲೆಗಟ್ಟಾಗಲೀ, ಜನಪರ ಕಾಳಜಿಯಾಗಲೀ ಅಲ್ಲ.
ಮತ್ತೊಂದೆಡೆ ಪ್ರಸಕ್ತ ಭ್ರಷ್ಟಾತಿಭ್ರಷ್ಟ ಸರ್ಕಾರಕ್ಕೆ ಭದ್ರ ಬುನಾದಿ ಒದಗಿಸಿ ಈಗ ಅದೇ ಭ್ರಷ್ಟಾಚಾರದ ವಿರುದ್ಧ ರಣಕಹಳೆ ಊದುತ್ತಿರುವ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಸಹ ತಮ್ಮ ವಿರುದ್ಧದ ಆರೋಪಗಳನ್ನು ಪ್ರತಿಭಟಿಸಿ ಸತ್ಯಾಗ್ರಹ ನಿರತರಾಗುತ್ತಾರೆ. ಸತ್ಯಾಗ್ರಹಿಗಳಿಗೆ ಪರಿಗ್ರಹದ ಆಕಾಂಕ್ಷೆ ಇರಕೂಡದು ಎಂದು ಗಾಂಧೀಜಿ ಹೇಳುತ್ತಿದ್ದುದನ್ನು ನೆನಪಿಸಿಕೊಂಡರೆ, ಕೋಟ್ಯಾಂತರ ರೂಗಳ ಆಸ್ತಿ ಹೊಂದಿರುವ (ಅಕ್ರಮ ಎಂದು ಹೇಳಬೇಕಿಲ್ಲ) ರಾಜಕಾರಣಿಗಳು, ಢೋಂಗಿ ಬಾಬಾಗಳು, ಸ್ವಾಮೀಜಿಗಳು ಸತ್ಯಾಗ್ರಹ ಹೂಡುವುದು ವಿಪರ್ಯಾಸವಲ್ಲವೇ ? ಸತ್ಯಕ್ಕಾಗಿ ಆಗ್ರಹಿಸುವ ಈ ಮನಸ್ಸುಗಳು ಎಲ್ಲೋ ಒಂದೆಡೆ ಸತ್ಯದ ಸಮಾಧಿ ಮಾಡುತ್ತಿರುವುದನ್ನು ಜನತೆ ಗಮನಿಸದೆ ಹೋಗುತ್ತಾರೆಯೇ ? ಆದರೂ ಸತ್ಯಾಗ್ರಹ ಒಂದು ರಾಜಕೀಯ ಅಸ್ತ್ರಕ್ಕಿಂತಲೂ ಹೆಚ್ಚಾಗಿ ಜನಪ್ರಿಯತೆ ಗಳಿಸುವ ಮಾರುಕಟ್ಟೆ ಸರಕಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಸತ್ಯಾಗ್ರಹಗಳನ್ನೂ ಕಾರ್ಪೋರೇಟ್ ಉದ್ದಿಮೆಗಳು ಪ್ರಾಯೋಜಿಸುವ ವ್ಯವಸ್ಥೆ ಜಾರಿಗೊಳ್ಳಬಹುದು.
ಆಗಸ್ಟ್ ಹದಿನೈದರಿಂದ ಆಮರಣಾಂತ ಉಪವಾಸ ಕೈಗೊಳ್ಳುವ ಅಣ್ಣಾ ಹಜಾರೆ ಘೋಷಣೆಗೆ ಸಾರ್ವಜನಿಕ ಪ್ರತಿಕ್ರಿಯೆ ವ್ಯಕ್ತವಾಗುವ ಮೊದಲೇ, ಹಜಾರೆಯವರು ರಾಜಕೀಯ ಪಕ್ಷಗಳ ಬೆಂಬಲ ಕೋರಲು ಮುಂದಾಗಿದ್ದಾರೆ. ಜನ ಲೋಕಪಾಲ್ ಮಸೂದೆಗೆ ರಾಜಕೀಯ ಪಕ್ಷಗಳು ಪೂರ್ಣ ಬೆಂಬಲ ವ್ಯಕ್ತಪಡಿಸುವುದೇ ನಿಜವಾದಲ್ಲಿ, ಈ ಮಸೂದೆ ೪೨ ವರ್ಷಗಳ ಅಜ್ಞಾತವಾಸ ಅನುಭವಿಸುತ್ತಿರಲಿಲ್ಲ. ಆದರೂ ಜನಪರ ಹೋರಾಟಗಾರ ಹಜಾರೆಯವರಿಗೆ ಜನತೆಗಿಂತಲೂ ರಾಜಕೀಯ ಪಕ್ಷಗಳು ಪ್ರಮುಖವಾಗಿ ಕಂಡಿದ್ದು ದುರಂತವೇ ಸರಿ. ಭ್ರಷ್ಟತೆಗೆ ಒಂದು ಹೊಸ ರಾಜಕೀಯ ವ್ಯಾಖ್ಯಾನವನ್ನೇ ನೀಡಿದ ಭಾಜಪ, ಭೂಸ್ವಾಧೀನ ರಾಜಕಾರಣಕ್ಕೆ ನಾಂದಿ ಹಾಡಿದ ಜೆಡಿಎಸ್, ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು, ಅಧಿಕಾರ ಉಳಿಸಿಕೊಳ್ಳಲು ಎಂತಹ ಭ್ರಷ್ಟ ವ್ಯಕ್ತಿ-ಪಕ್ಷವನ್ನಾದರೂ ಬೆಂಬಲಿಸಲು ಸಿದ್ಧವಾಗಿರುವ ಪ್ರಾದೇಶಿಕ ಪಕ್ಷಗಳು ನೀಡುವ ತಾತ್ವಿಕ ಬೆಂಬಲದ ಮೌಲ್ಯವನ್ನು ಪರಿಶೀಲಿಸಿದಾಗ ಭ್ರಮನಿರಸನವಾಗುವ ಸಾಧ್ಯತೆಗಳೇ ಹೆಚ್ಚು. ಆದರೂ ಟೀಂ ಅಣ್ಣಾ ಈ ಹಾದಿ ಹಿಡಿದಿದೆ.
ಈ ಬೆಳವಣಿಗೆಗಳು ಸತ್ಯಾಗ್ರಹಿಗಳಿಗೆ ನೆರವಾಗುವುದೋ ಇಲ್ಲವೋ, ಆಳ್ವಿಕರಿಗಂತೂ ನೆರವಾಗುವುದು ಖಚಿತ. ಏಕೆಂದರೆ ಸತ್ಯಾಗ್ರಹಿಗಳ ಹಿಂದೆ ಜನಸಾಮಾನ್ಯರ ದನಿ ಕೇಳಿಬರುತ್ತಿಲ್ಲ. ರಾಮದೇವ್ ಪ್ರಹಸನದ ನಂತರ ಆಳ್ವಿಕರ ಕೈ ಮೇಲಾಗಿರುವುದೂ ಅಷ್ಟೇ ಸತ್ಯ. ಮಾಹಿತಿ ಹಕ್ಕು ಕಾರ್ಯಕರ್ತನೊಬ್ಬನನ್ನು ಬಂಧಿಸಿ ಆತನನ್ನು ಮಾವೋವಾದಿ ಎಂದು ದೂಷಿಸಲಾಗುತ್ತದೆ. ಅಣ್ಣಾ ಹಜಾರೆಗೂ ಇದೇ ಪಟ್ಟ ನೀಡಲಾಗಿದೆ. ಸಾರ್ವಜನಿಕ ಹಿತಾಸಕ್ತಿಗಾಗಿ ಹೋರಾಡುವ ಸಂಘಟನೆ/ವ್ಯಕ್ತಿಗಳನ್ನು ಮಾವೋವಾದಿಗಳೆಂದೋ, ಮಾವೋವಾದಿಗಳೊಡನೆ ಸಹಾನುಭೂತಿ ಹೊಂದಿರುವವರೆಂದೋ ಬಿಂಬಿಸಿದಲ್ಲಿ, ಎಂತಹ ಶಿಕ್ಷೆಯನ್ನಾದರೂ ನೀಡಬಹುದು, ಜನತೆ ಒಪ್ಪಿಬಿಡುತ್ತಾರೆ ಎಂಬ ಅಹಂ ಆಳ್ವಿಕರಲ್ಲಿ ಆಳವಾಗಿ ಬೇರೂರಿರುವುದು ಇಲ್ಲಿ ಸ್ಪಷ್ಟವಾಗುತ್ತದೆ. ಭ್ರಷ್ಟಾಚಾರದ ವಿರುದ್ಧ ದನಿ ಎತ್ತುವ ಮಧ್ಯಮ ವರ್ಗಗಳಲ್ಲೂ ಇದೇ ಅಭಿಪ್ರಾಯ ನೆಲೆ ಮಾಡಿರುವುದೂ ಆಳ್ವಿಕರಿಗೆ ಅನುಕೂಲಕರವಾಗಿದೆ. ಆಳ್ವಿಕರ ಈ ತಂತ್ರವೇ ಭ್ರಷ್ಟಾಚಾರದ ಅನಿಯಂತ್ರಿತ ಬೆಳವಣಿಗೆಗೆ ಕಾರಣವಾಗಿದೆ. ಮಾವೋವಾದಿ, ಭಯೋತ್ಪಾದಕ ಎಂಬ ಹಣೆಪಟ್ಟಿಗಳು ಒಂದು ರೀತಿಯಲ್ಲಿ ಪ್ರತಿರೋಧದ ದನಿಗಳನ್ನು ಅಡಗಿಸುವ ಅಸ್ತ್ರಗಳಾಗಿ ಪರಿಣಮಿಸಿರುವಾಗ ಸತ್ಯಾಗ್ರಹ, ಪ್ರತಿಭಟನೆಗಳು ರಾಜಕೀಯ ಉದ್ದೇಶಕ್ಕಾಗಿ ಬಳಸುವ ಮಾರುಕಟ್ಟೆ ವಸ್ತುಗಳಾಗಿ ಪರಿಣಮಿಸಿವೆ. ಇದರ ನೇರ ಪರಿಣಾಮ ಎಂದರೆ ದೇಶದಲ್ಲಿ ಪ್ರತಿರೋಧದ ದನಿಗಳು ಕ್ಷೀಣವಾಗುತ್ತಿರುವುದು.
ಭ್ರಷ್ಟಾಚಾರವನ್ನು ನಿಯಂತ್ರಿಸಲು ಅಗತ್ಯವಿರುವುದು ಶಾಸನ, ಮಸೂದೆಗಳಿಗಿಂತಲೂ ಜನಸಾಮಾನ್ಯರ ಪ್ರತಿರೋಧದ ಭೀತಿ. ಪ್ರಸ್ತುತ ಸನ್ನಿವೇಶದಲ್ಲಿ ಆಳ್ವಿಕರಿಗೆ ಈ ಭೀತಿ ಇಲ್ಲವಾಗಿದೆ. ಕಾರಣ ಜನಸಾಮಾನ್ಯರನ್ನು ಖರೀದಿಸುವ ಹಲವು ಮಾರ್ಗಗಳನ್ನು ನವ ಉದಾರವಾದ ಸೃಷ್ಟಿಮಾಡಿದೆ. ರಾಜಕಾರಣಿಗಳಿಗೆ ಅಭಿಮಾನಿ ಸಂಘಗಳಿರುವುದೇ ಇದಕ್ಕೆ ಸಾಕ್ಷಿ. ತಮ್ಮ ಸ್ವಾರ್ಥ ಸಾಧನೆಗಾಗಿ ದೇಶದ ಸಂಪತ್ತನ್ನೇ ಕೊಳ್ಳೆ ಹೊಡೆಯುವ ರಾಜಕಾರಣಿಗಳಿಗೂ ಅಭಿಮಾನಿಗಳಿದ್ದಾರೆಂದರೆ, ಅಭಿಮಾನಿ ಎಂಬ ಪದಕ್ಕೇ ಅಪಮಾನ ಮಾಡಿದಂತಲ್ಲವೇ ? ಪುರಾಣ ಕಥೆಗಳಲ್ಲಿ ದೇವಾಧಿದೇವತೆಗಳನ್ನು ವಿರೋಧಿಸುತ್ತಿದ್ದ ಶಕ್ತಿಗಳನ್ನು ರಾಕ್ಷಸರೆಂದು ಬಿಂಬಿಸಿ ಅವರ ಹತ್ಯೆ ಮಾಡುವ ಮೂಲಕ, ಪ್ರಭುತ್ವದ ಪ್ರಾಬಲ್ಯವನ್ನು ಹೆಚ್ಚಿಸಲಾಗುತ್ತಿತ್ತು. ಸಮಕಾಲೀನ ಸಂದರ್ಭದಲ್ಲಿ ಇದೇ ಪರಂಪರೆ ವಿಭಿನ್ನ ರೀತಿಯಲ್ಲಿ ಜಾರಿಯಲ್ಲಿದೆ. ಪ್ರಭುತ್ವವನ್ನು ವಿರೋಧಿಸುವವರೆಲ್ಲರೂ ದೇಶದ್ರೋಹಿಗಳೋ, ಮಾವೋವಾದಿಗಳೋ ಆಗಿಬಿಡುತ್ತಾರೆ. ಮುಂದಿನ ಆಗುಹೋಗುಗಳ ಪೊಲೀಸರ ಕೈಯ್ಯಲ್ಲಿರುತ್ತದೆ.
ಈ ಸೂಕ್ಷ್ಮ ತರಂಗಗಳನ್ನು, ಸರ್ಕಾರ-ಪ್ರಭುತ್ವ-ಕಾರ್ಪೋರೇಟ್ ಉದ್ದಿಮೆ ಮತ್ತು ಸಂಪತ್ತಿನ ಖಜಾನೆಗಳಾದ ಮಠ-ಮಂದಿರಗಳ ಸೂಕ್ಷ್ಮ ತಂತುಗಳನ್ನು ಗ್ರಹಿಸದೆ ಹೋದಲ್ಲಿ ಆಳ್ವಿಕರ ವಿರುದ್ಧ ಮೊಳಗಿರುವ ದನಿ ಕ್ರಮೇಣ ಕ್ಷೀಣವಾಗುವ ಸಂಭವವೇ ಹೆಚ್ಚು. ಇದು ಭಾರತದ ಪ್ರಜೆಗಳ ಮುಂದಿನ ಗಂಭೀರ ಸವಾಲೂ ಹೌದು.








“ಭ್ರಷ್ಟಾಚಾರವನ್ನು ನಿಯಂತ್ರಿಸಲು ಅಗತ್ಯವಿರುವುದು ಶಾಸನ, ಮಸೂದೆಗಳಿಗಿಂತಲೂ ಜನಸಾಮಾನ್ಯರ ಪ್ರತಿರೋಧದ ಭೀತಿ. ಪ್ರಸ್ತುತ ಸನ್ನಿವೇಶದಲ್ಲಿ ಆಳ್ವಿಕರಿಗೆ ಈ ಭೀತಿ ಇಲ್ಲವಾಗಿದೆ. ಕಾರಣ ಜನಸಾಮಾನ್ಯರನ್ನು ಖರೀದಿಸುವ ಹಲವು ಮಾರ್ಗಗಳನ್ನು ನವ ಉದಾರವಾದ ಸೃಷ್ಟಿಮಾಡಿದೆ.” Yes, this is the truth. It’s time for introspection.
ಅಳ್ವಿಕರಿಗೆ ಮೊದಲಿಂದಲೂ ಹಜಾರೆಯವರ ಮತ್ತು ಅವರ ಹೋರಾಟದ ಬಗೆಗೂ ಎಲರ್ಜಿಏ ಹೊರತು ಕಾಳಜಿಯಿದ್ದಿಲ್ಲ .ಕೇರಳ ಮತ್ತು ಇತರ ರಾಜ್ಯಗಲ್ಲಿ ಚುನಾವಣೆಯ ಹಿನ್ನಲೆಯಲ್ಲಿ ಅದು ಮಾತುಕತೆಯ ನಾಟಕವಡಿತು ಅಸ್ಟೇ .ಆದರೆ ಪ್ರಾಮನಿಕಥೆಗೆ ಹೆಸರಾದ ಅಂತನಿಯಂಥವರು ಯಾಕೆ ಮೌನವಾಗಿದ್ದಾರೆ? .