ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಿವಾಕರ ನೇರನುಡಿ: ಧರ್ಮ ಕೇಂದ್ರ, ಕಾರ್ಪೋರೇಟ್ ಉದ್ಯಮ ಹಾಗೂ ಪ್ರಭುತ್ವ

ಪಾಪದ ಕೂಪಗಳ ಸ್ವತಂತ್ರ ಭಾರತ

ಸ್ವತಂತ್ರ ಭಾರತದ ವೈಚಿತ್ರ್ಯವೆಂದರೆ, ನಮ್ಮ ದೇಶ ಒಂದು ಸಾರ್ವಭೌಮ ಪ್ರಜಾತಂತ್ರವಾಗಿದ್ದರೂ ಸಹ ಪ್ರಜೆಗಳ ಸಾರ್ವಭೌಮತ್ವಕ್ಕೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ. ಅಥವಾ ಸಾರ್ವಜನಿಕ ಅಭಿಪ್ರಾಯಕ್ಕೆ ಆಳ್ವಿಕರಿಂದಾಗಲೀ, ಅಧಿಕಾರಿ ವರ್ಗಗಳಿಂದಾಗಲೀ ಮನ್ನಣೆಯೂ ಇಲ್ಲ. ದೇಶದ ಸಂಪತ್ತು ಸಾರ್ವಜನಿಕರ ಸಂಪತ್ತು, ದೇಶದ ರಕ್ಷಣೆ ಎಂದರೆ ಸಾರ್ವಜನಿಕರ ರಕ್ಷಣೆ, ದೇಶದ ಅಭಿವೃದ್ಧಿ ಎಂದರೆ ಸಾರ್ವಜನಿಕರ ಏಳಿಗೆ ಇವೆಲ್ಲವೂ ಯಾವುದೇ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೂಲ ಮಂತ್ರಗಳಾಗಿರುವುದು ಸಹಜ. ಆದರೆ ವಿಶ್ವದ ಅತಿ ದೊಡ್ಡ ಪ್ರಜಾತಂತ್ರ ದೇಶವಾದ ಭಾರತದಲ್ಲಿ ಈ ಪ್ರವೃತ್ತಿ ವಿಭಿನ್ನ ರೀತಿಯಲ್ಲಿ ವ್ಯಕ್ತವಾಗುತ್ತಿದೆ. ಇಲ್ಲಿ ಸಾರ್ವಜನಿಕರ ಆಸ್ತಿ ಎಂದರೇನು ಎಂಬುದೇ ಒಂದು ಜಿಜ್ಞಾಸೆ. ಬದಲಾಗಿ ಸಾರ್ವಭೌಮ ಪ್ರಜೆಗಳಿಗೆ ಸಂವಿಧಾನದತ್ತವಾಗಿ ಒದಗಿಬರುವ ಎಲ್ಲವೂ ಪ್ರಭುತ್ವದ ಆಸ್ತಿಯಾಗಿಬಿಡುತ್ತದೆ. ಸಾರ್ವಜನಿಕರಿಗೆ ಸೇರಬೇಕಾದ ಸಂಪತ್ತು ಯಾವುದೇ ಅಡೆ ತಡೆಯಿಲ್ಲದೆ ಸರ್ಕಾರದ ಸ್ವಾಧೀನ ಪ್ರಕ್ರಿಯೆಗೆ ಬಲಿಯಾಗಿಬಿಡುತ್ತದೆ. ದೇಶದ ಪ್ರಗತಿ ಮತ್ತು ಅಭಿವೃದ್ಧಿ ಮಂಜಿನ ಪರದೆಯಂತೆ ಈ ಸ್ವಾಧೀನ ಪ್ರಕ್ರಿಯೆಗಳನ್ನು ಮುಚ್ಚಿಬಿಡುತ್ತದೆ.

ಈ ಪ್ರಶ್ನೆಯನ್ನು ಎರಡು ಮಜಲುಗಳಲ್ಲಿ ನೋಡಬಹುದು. ಒಂದು ಮಾನವನ ಅಭ್ಯುದಯ ಮತ್ತು ಅಸ್ತಿತ್ವಗಳಿಗೆ ಮೂಲಭೂತವಾಗಿ ಅಗತ್ಯವಾಗಿರುವ ಭೂಮಿಯ ಪ್ರಶ್ನೆ. ಭೂಮಿ ಯಾರ ಸ್ವತ್ತೂ ಅಲ್ಲ. ಅದು ಯಾವುದೇ ಒಂದು ಪ್ರದೇಶದಲ್ಲಿ ವಾಸಿಸುವ ಪ್ರಜೆಗಳ ನೈಸರ್ಗಿಕ ಹಕ್ಕು. ಆದರೆ ಬಂಡವಾಳ ವ್ಯವಸ್ಥೆಯಲ್ಲಿ ಭೂಮಿ ಒಂದು ಮಾರುಕಟ್ಟೆಯ ಸರಕು. ಹಾಗೆಯೇ ಜನರ ಬದುಕೂ ಸಹ. ಹಾಗಾಗಿ ಭಾರತದಂತಹ ಬಂಡವಾಳ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಲಭ್ಯವಾಗಬೇಕಾದ ಭೂಮಿ ಸರ್ಕಾರದ ಸ್ವತ್ತಾಗಿಬಿಡುತ್ತದೆ. ದೇಶದ ಸಂವಿಧಾನಕ್ಕೆ ಅನುಗುಣವಾಗಿ, ಕಾನೂನು ರೀತ್ಯಾ ತನ್ನ ಪರಿಶ್ರಮದಿಂದ, ಬೆವರಿನ ದುಡಿಮೆಯಿಂದ ಭೂಮಿಯನ್ನು ಬಳಸಿ ದೇಶದ ಉತ್ಪಾದನೆಗೆ ತನ್ನದೇ ಆದ ಕೊಡುಗೆ ನೀಡುವ ಕೃಷಿಕನಿಗೆ ಆ ಭೂಮಿಯ ಮೇಲಿನ ಹಕ್ಕು ಇರುವುದು ಸರ್ಕಾರ ಅಥವಾ ಪ್ರಭುತ್ವದ ಇಚ್ಚೆಯ ಮೇರೆಗೆ ಮಾತ್ರ. ಹಾಗಾಗಿ ಈ ಭೂಮಿಯನ್ನು ಸರ್ಕಾರ ಯಾವ ಸಂದರ್ಭದಲ್ಲಿ ಬೇಕಾದರೂ ಸ್ವಾಧೀನ ಪಡಿಸಿಕೊಳ್ಳಬಹುದು. ಇದಕ್ಕೆ ಪೂರಕವಾಗಿರುವುದು ಬ್ರಿಟೀಷ್ ಸಾಮ್ರಾಜ್ಯದ ವಸಾಹತು ಕಾಯ್ದೆ ೧೮೯೪ರ ಭೂ ಸ್ವಾಧೀನ ಕಾಯ್ದೆ. ಈ ಕಾಯ್ದೆಯೇ ಪೋಸ್ಕೋ, ವೇದಾಂತ, ಮಿಟ್ಟಲ್, ರಿಲೈಯನ್ಸ್, ಅಂಬಾನಿ, ಟಾಟಾಗಳಿಗೆ ಭಗವದ್ಗೀತೆ ಇದ್ದಂತೆ.

ಕಾರ್ಟೂನ್: ರಘುಪತಿ ಶೃಂಗೇರಿ

ಎರಡನೆಯ ವಿದ್ಯಮಾನವೆಂದರೆ ಅರಣ್ಯ ಸಂಪತ್ತು ಮತ್ತು ಅರಣ್ಯವನ್ನೇ ನಂಬಿ ಬಾಳುವ ಆದಿವಾಸಿಗಳ ಜೀವನ. ಶತಮಾನಗಳ ಮೂಲಕ, ಪಾರಂಪರಿಕವಾಗಿ, ತಲೆಮಾರುಗಳನ್ನು ದಾಟಿ ಅರಣ್ಯಗಳಲ್ಲೇ ತಮ್ಮ ಇಡೀ ಕಾಲಮಾನವನ್ನು ಕಳೆದಿರುವ ಆದಿವಾಸಿಗಳು ಇಂದು ಅತಿ ಹೆಚ್ಚು ಅತಂತ್ರತೆ ಎದುರಿಸುತ್ತಿದ್ದರೆ ಅದಕ್ಕೆ ಮೂಲ ಕಾರಣ ನವ ಉದಾರವಾದ ಪ್ರೇರಿತ ಕಾರ್ಪೋರೇಟ್ ಔದ್ಯಮೀಕರಣ ಮತ್ತು ಈ ಪ್ರಕ್ರಿಯೆಯ ಹಿಂದೆ ಬಲವಾಗಿ ನಿಂತಿರುವ ಪ್ರಭುತ್ವದ ನವ ಆರ್ಥಿಕ ನೀತಿ. ವಿಚಿತ್ರವಾದ ಸಂಗತಿ ಎಂದರೆ ಲಕ್ಷಾಂತರ ಎಕರೆ ಅರಣ್ಯ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು ದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡುವ ಶ್ರೀಮಂತರು ನಿರ್ಭೀತಿಯಿಂದ, ಯಾವುದೇ ಕಾನೂನಿನ ಭಯವಿಲ್ಲದೆ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಲೇ ಇರುತ್ತಾರೆ. ಆದರೆ ತಮ್ಮ ಸೀಮಿತ ಅರಣ್ಯ ಪ್ರದೇಶಗಳಲ್ಲಿ ಅಲ್ಲಿನ ಉತ್ಪಾದನೆಯನ್ನೇ ನಂಬಿ, ಹೊರಗಿನ ಪ್ರಪಂಚದ ಅರಿವೇ ಇಲ್ಲದೆ ತಮ್ಮ ಪಾಡಿಗೆ ಜೀವನ ನಡೆಸುತ್ತಿರುವ ಆದಿವಾಸಿಗಳನ್ನು ಏಕಾಏಕಿ ಉಚ್ಚಾಟಿಸಲಾಗುತ್ತದೆ. ಕಾಪೋರೇಟ್ ಉದ್ಯಮಿಗಳಿಗೆ ಹಾಸುವ ಕೆಂಪುಗಂಬಳಿಯ ಮಾರ್ಗದಲ್ಲಿ ಹಾಸುಗಲ್ಲುಗಳಾಗಿ ಪರಿಣಮಿಸುವ ಆದಿವಾಸಿಗಳು ತಮ್ಮ ನೈಸರ್ಗಿಕ ನೆಲೆಗಳಿಂದ ಉಚ್ಚಾಟಿಸಲ್ಪಡುತ್ತಾರೆ. ಅಭಿವೃದ್ಧಿಗಾಗಿ.

ಒಂದಿಂತಿಷ್ಟು ಹಣ ನೀಡಿ, ನೊಂದಣಿ ಮಾಡಿಸಿಕೊಂಡ ಭೂಮಿಯ ಮೇಲೆ ತಮ್ಮ ಶಾಶ್ವತ ನೆಲೆ ಸ್ಥಾಪಿಸಿಕೊಳ್ಳುವ ನಗರವಾಸಿಗಳಿಗೆ ಒದಗುವ ಸಾಂವಿಧಾನಿಕ ಹಕ್ಕು, ತಲೆತಲಾಂತರಗಳಿಂದ ತಾವು ನಂಬಿ ಬಾಳುತ್ತಿರುವ ಅರಣ್ಯ ಪ್ರದೇಶಗಳ ಮೇಲೆ ಆದಿವಾಸಿಗಳಿಗೆ ಒದಗುವುದಿಲ್ಲ. ಇದು ವಿಪರ್ಯಾಸವಲ್ಲವೇ ? ಶ್ರೀಮಂತ ನಗರವಾಸಿಗಳನ್ನು ಮೂಲ ನೆಲೆಯಿಂದ ಉಚ್ಚಾಟಿಸಲು ಮುಂದಾದರೆ ನ್ಯಾಯಾಲಯದ ಮೊರೆ ಹೋಗುತ್ತಾರೆ. ತಡೆಯಾಜ್ಞೆ ನೀಡಲಾಗುತ್ತದೆ. ವರುಷಗಳ ಕಾಲ ಅಕ್ರಮ ಆಸ್ತಿಯನ್ನೂ ಅನುಭವಿಸುವ ಅವಕಾಶ ಇವರಿಗೆ ಇರುತ್ತದೆ. ಆದರೆ ಆದಿವಾಸಿಗಳಿಗೆ ಈ ಸಾಂವಿಧಾನಿಕ ಹಕ್ಕುಗಳು ಅನ್ವಯಿಸುವುದೇ ಇಲ್ಲ ಎನಿಸುತ್ತದೆ. ಪ್ರಸಕ್ತ ವಿದ್ಯಮಾನಗಳನ್ನು ನೋಡಿದರೆ ಹೀಗನಿಸುವುದು ಸಹಜ. ನಗರವಾಸಿಗಳ ಉಚ್ಚಾಟನೆಗೆ ಮುನ್ನ ನೋಟಿಸ್ ನೀಡಿ, ಒಂದು ತಿಂಗಳ ಗಡುವನ್ನೂ ನೀಡಲಾಗುತ್ತದೆ. ಆಕ್ಷೇಪಣೆಗಳಿಗೆ ಅವಕಾಶ ಇರುತ್ತದೆ. ಆದರೆ ಆದಿವಾಸಿಗಳಿಗೆ ಇಂತಹ ಯಾವುದೇ ಅವಕಾಶಗಳೂ ಇರುವುದಿಲ್ಲ. ಇವರ ಮೂಲೋತ್ಪಾಟನೆಗೆ ಸಲ್ವಾಜುಡುಂನಂತಹ ಕೊಲ್ಲುವ ಪಡೆಗಳನ್ನೂ ರಚಿಸಲಾಗುತ್ತದೆ. ಮಕ್ಕಳಿಗೆ ಗುಮ್ಮ ಬಂತು ಎಂದು ಓಡಿಸುವ ಹಾಗೆ ಆದಿವಾಸಿಗಳಿಗೆ ಮಾವೋವಾದಿಗಳ ಭೀತಿ ಹುಟ್ಟಿಸಿ ಉಚ್ಚಾಟಿಸಲಾಗುತ್ತದೆ. ಈ ಎರಡೂ ವಿದ್ಯಮಾನಗಳ ಹಿನ್ನೆಲೆಯಲ್ಲಿ ಉದ್ಭವಿಸುವ ಮೂಲ ಪ್ರಶ್ನೆ ಸಾರ್ವಜನಿಕ ಆಸ್ತಿ ಮತ್ತು ಅಸ್ತಿತ್ವವನ್ನು ಕುರಿತಾದದ್ದು.

ಸಾರ್ವಜನಿಕರ ಆಸ್ತಿಯ ನೆಲೆಗಟ್ಟಿನಲ್ಲೇ ನಮ್ಮ ದೇಶವನ್ನು ಕಾಡುವ ಮತ್ತೊಂದು ವಿದ್ಯಮಾನವೆಂದರೆ ಸಂಪತ್ತಿನ ಶೇಖರಣೆ ಮತ್ತು ಅದರ ಉತ್ತರದಾಯಿತ್ವ. ಯಾವುದೇ ವ್ಯಕ್ತಿ ಅಥವಾ ಸಂಘಟನೆ ಅಥವಾ ಸಂಸ್ಥೆ ಕಾಲಾನುಕ್ರಮದಲ್ಲಿ ಶೇಖರಿಸುವ ಸಂಪತ್ತು ಯಾರಿಗೆ ಸೇರಬೇಕು ಎನ್ನುವುದು ಮತ್ತೊಂದು ಜಿಜ್ಞಾಸಾಪೂರ್ವಕ ಪ್ರಶ್ನೆ. ಇತ್ತೀಚಿನ ತಿರುವನಂತಪುರದ ಪದ್ಮನಾಭ ಸ್ವಾಮಿ ದೇವಾಲಯ ಪ್ರಕರಣದ ಹಿನ್ನೆಲೆಯಲ್ಲಿ ನೋಡಿದಾಗ ಭಾರತದಲ್ಲಿನ ಧಾರ್ಮಿಕ ಸಂಘ ಸಂಸ್ಥೆಗಳು ಸಂಗ್ರಹಿಸಿರುವ ಅತ್ಯಮೂಲ್ಯ ಸಂಪತ್ತು ಸಾರ್ವಜನಿಕರ ಆಸ್ತಿಯೇ ಅಲ್ಲವೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಪದ್ಮನಾಭಸ್ವಾಮಿ ದೇವಾಲಯದಲ್ಲಿ ಈವರೆಗೆ ದೊರೆತಿರುವ ಅಮೂಲ್ಯ ಚಿನ್ನದ ಆಭರಣಗಳ ಮೌಲ್ಯ ಒಂದು ಲಕ್ಷ ಕೋಟಿ ಎಂದು ಹೇಳಲಾಗುತ್ತಿದೆ. ಇನ್ನೂ ಒಂದು ಭಂಡಾರವನ್ನು ತೆರೆಯಲಾಗಿಲ್ಲ. ಟ್ರವಾಂಕೂರ್ ರಾಜ ಮನೆತನದ ರಾಜಧನವನ್ನೊಳಗೊಂಡ ಈ ವಸ್ತುಗಳು ದೇವಾಲಯದ ಆಸ್ತಿ, ಇದರ ಮೇಲೆ ದೇವಾಲಯದ ಟ್ರಸ್ಟಿಗಳಿಗೆ ಮಾತ್ರ ಹಕ್ಕಿರುತ್ತದೆ ಎಂಬ ವಾದ ಕೇಳಿಬರುತ್ತಿದೆ.

ಅಂದರೆ ರಾಜಮನೆತನಗಳು ಸಂಗ್ರಹಿಸಿದ ಸಂಪತ್ತೆಲ್ಲವೂ ರಾಜರಿಗೇ ಸೇರಿದ್ದು ಎಂದಂತಾಯಿತು. ಆಧುನಿಕ ಪರಿಭಾಷೆಯಲ್ಲಿ ಇದನ್ನು ನೋಡಿದಾಗ ಭಾರತದ ಪ್ರಭುತ್ವವೂ ಇದೇ ವಾದವನ್ನು ಮಂಡಿಸುತ್ತದೆಯಲ್ಲವೇ ? ಯಾವುದೇ ರಾಜ ಮಹಾರಾಜರಾಗಲಿ ಸಂಪನ್ಮೂಲಗಳನ್ನು ಕ್ರೋಢೀಕರಿಸುವುದು ಜನತೆಯ ಮೇಲೆ ತೆರಿಗೆ ವಿಧಿಸುವ ಮೂಲಕ, ಅನ್ಯ ರಾಜ್ಯಗಳನ್ನು ಆಕ್ರಮಿಸಿ ಲೂಟಿ ಮಾಡುವ ಮೂಲಕ ಅಥವಾ ಸಣ್ಣ ಪುಟ್ಟ ಸಾಮ್ರಾಟರ ಕಪ್ಪ ಕಾಣಿಕೆಗಳ ಮೂಲಕ. ಇವೆಲ್ಲವೂ ಸಾರ್ವಜನಿಕ ಆಸ್ತಿಯಲ್ಲವೇ ? ಈ ಸಂಪತ್ತನ್ನು ರಾಜರುಗಳು ದೇವಾಲಯಗಳಿಗೆ ರಾಜಧನದ ರೂಪದಲ್ಲಿ ನೀಡಿದ ಮಾತ್ರಕ್ಕೆ ಸಂಪತ್ತಿನ ಮೇಲೆ ಸಾರ್ವಜನಿಕರ ಹಕ್ಕು ಇಲ್ಲವಾಗುವುದೇ ? ದೇವಾಲಯವನ್ನು ನಿರ್ವಹಿಸಲು ಕೆಲವೇ ವ್ಯಕ್ತಿಗಳು ತಮ್ಮ ಸ್ವಂತ ಹಿತಾಸಕ್ತಿಗಳಿಗಾಗ ರಚಿಸಿಕೊಳ್ಳುವ ಟ್ರಸ್ಟ್‌ಗಳು ಈ ಸ್ವತ್ತಿನ ಮೇಲೆ ಹೇಗೆ ಅಧಿಕಾರ ಚಲಾಯಿಸಲು ಸಾಧ್ಯ ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದಾಗ ಮೇಲೆ ಉಲ್ಲೇಖಿಸಿದ ಭೂಸ್ವಾಧೀನ ಮತ್ತು ಆದಿವಾಸಿಗಳ ಪ್ರಶ್ನೆಯೂ ಎದುರಾಗುತ್ತದೆ.

ಭಾರತದಲ್ಲಿ ದೇವಾಲಯ, ಮಠ, ಮಸೀದಿ,ಚರ್ಚುಗಳಿಗೇನೂ ಕಡಿಮೆಯಿಲ್ಲ. ಎಲ್ಲ ಧಾರ್ಮಿಕ ಕೇಂದ್ರಗಳಲ್ಲೂ ಅಪಾರ ಸಂಪತ್ತಿನ ಶೇಖರಣೆಯಾಗಿರುವುದೂ ದಿಟ. ಪದ್ಮನಾಭ ಸ್ವಾಮಿ ದೇವಾಲಯ ಇದೀಗ ಹೊರಬಂದ ಸತ್ಯ. ಇದಕ್ಕೂ ಮಿಗಿಲಾದ ತಿರುಪತಿ, ಉಡುಪಿ, ಇಸ್ಕಾನ್, ಕಂಚಿ, ಸಾಯಿಬಾಬ, ಶಿರಡಿ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಧರ್ಮ ಕೇಂದ್ರಿತ ಸಂಸ್ಥೆಗಳ ಸಂಪತ್ತಿನ ಕ್ರೋಢೀಕರಣವಾಗುವುದಾದರೂ ಹೇಗೆ. ಜನಸಾಮಾನ್ಯರು ತಾವು ದೇವರಿಗೆ ಅರ್ಪಿಸುವ ಪ್ರತಿಯೊಂದು ವಸ್ತುವೂ ದೇವರಿಗೇ ಸೇರುವುದೆಂಬ ಭಾವುಕ ನಂಬಿಕೆಯಿಂದ ಅರ್ಪಿಸುತ್ತಾರೆ. ಆದರೆ ಇವೆಲ್ಲವೂ ತಲುಪುವುದು ಟ್ರಸ್ಟಿಗಳಿಗೆ, ಧಾರ್ಮಿಕ ಸಂಸ್ಥೆಗಳ ಒಡೆಯರಿಗೆ ಎಂದು ಅವರಿಗೂ ತಿಳಿದಿರುತ್ತದೆ. ಆದರೂ ಏಕೆ ಸಲ್ಲಿಸುತ್ತಾರೆ. ತಮ್ಮ ಪಾಪಪ್ರಜ್ಞೆ ಕಳೆದುಕೊಳ್ಳಲು ಅಥವಾ ತಮ್ಮ ಸಂಕಷ್ಟಗಳಿಗೆ ಸ್ವತಃ ಸಾಂತ್ವನ ಪಡೆಯಲು. ಇಲ್ಲಿ ಸಾಮಾನ್ಯ ಜನರ ಅರ್ಪಣೆಗಳಿಗಿಂತಲೂ ಅಮೂಲ್ಯವಾದದ್ದು ಶ್ರೀಮಂತರ ಅರ್ಪಣೆಗಳು. ತಮ್ಮ ವ್ಯಾವಹಾರಿಕ ಜೀವನದಲ್ಲಿ ಅಕ್ರಮವಾಗಿ ಸಂಪಾದಿಸಿದ ಆಸ್ತಿಯ ಒಂದು ಪಾಲನ್ನು ದೇವರಿಗೆ ಅರ್ಪಿಸುವ ಮೂಲಕ ಕೃತಾರ್ಥರಾಗುವ ಶ್ರೀಮಂತರ ಕಪ್ಪುಹಣ ಈ ಭಂಡಾರಗಳಲ್ಲಿ ಹುದುಗಿರುವುದು ಸಾರ್ವಕಾಲಿಕ ಸತ್ಯ.

ದೇವಾಲಯಗಳಿರಲಿ ಮಠಗಳ ಆಸ್ತಿಯನ್ನೇ ನೋಡಿ. ಧರ್ಮಸ್ಥಳ, ಶೃಂಗೇರಿ, ಆದಿಚುಂಚನಗಿರಿ, ಆರ್ಟ್ ಆಫ್ ಲಿವಿಂಗ್, ಬಾಬಾ ರಾಮದೇವರ ಪತಂಜಲಿ, ಮಾಧ್ವ ಮಠಗಳು, ಶಂಕರ ಮಠಗಳು, ಲಿಂಗಾಯತ ಮಠಗಳು ಇವೆಲ್ಲವೂ ಹೊಂದಿರುವ ಸ್ಥಿರಾಸ್ತಿ ಚರಾಸ್ತಿಗಳ ಲೆಕ್ಕ ಎಲ್ಲಿಯಾದರೂ ದೊರಕುವುದೇ ? ಸಾವಿರಾರು ಎಕರೆ ಭೂಮಿ, ಕೋಟ್ಯಾಂತರ ಬೆಲೆ ಬಾಳುವ ಕಟ್ಟಡಗಳು ಈ ಧರ್ಮ ಕೇಂದ್ರಗಳ ಸುಪರ್ದಿಯಲ್ಲಿರುತ್ತವೆ. ಇದರ ಉತ್ತರದಾಯಿತ್ವ ಯಾರದು ಎಂಬ ಪ್ರಶ್ನೆ ಎದುರಾದಾಗ, ಧರ್ಮ, ನಂಬಿಕೆ ಎದುರಾಗುತ್ತದೆ. ಈ ಧರ್ಮ ಕೇಂದ್ರಗಳು ಕೆಲವೇ ನಿರ್ದಿಷ್ಟ ಪ್ರದೇಶಗಳಿಗೆ ಒದಗಿಸುವ ಹಲವು ಸೌಕರ್ಯಗಳನ್ನೇ ಮುಂದಿಟ್ಟುಕೊಂಡು ಸಂಪತ್ತಿನ ಕ್ರೋಢೀಕರಣವನ್ನು ಸಮರ್ಥಿಸಿಕೊಳ್ಳಲಾಗುತ್ತದೆ. ಆದರೆ ಈ ಆಸ್ತಿಯಿಂದ ಸಮಸ್ತ ನಾಗರಿಕರಿಗಾಗಲೀ, ದೇಶದ ಒಟ್ಟು ಉತ್ಪಾದನೆಗಾಗಲೀ ಯಾವುದೇ ಪ್ರಯೋಜನ ಉಂಟೇ ಎಂದು ಪ್ರಶ್ನಿಸಿದಾಗ ಭ್ರಮನಿರಸನವಾಗುವುದೇ ಹೆಚ್ಚು. ಇಷ್ಟಕ್ಕೂ ಈ ಧರ್ಮ ಕೇಂದ್ರಗಳು ಬದುಕುವುದೇ ಸಾರ್ವಜನಿಕರ ಬೆವರಿನ ಬಲದಿಂದ. ಉಚಿತ ಊಟ ನೀಡುವ ಧರ್ಮ ಸಂಸ್ಥೆಗಳು ಆಹಾರ ಧಾನ್ಯಗಳನ್ನೂ ಸಾರ್ವಜನಿಕರಿಂದ ಉಚಿತವಾಗಿಯೇ ಪಡೆಯುವುದು ಸತ್ಯವಲ್ಲವೇ ? ಕೆರೆಯ ನೀರನು ಕೆರೆಗೆ ಚೆಲ್ಲುವ ಈ ಕ್ರಿಯೆಗೆ ಸೇವೆಯ ರಂಗು ನೀಡುವುದೇಕೆ ?

ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ಪ್ರಸಕ್ತ ಸನ್ನಿವೇಶವನ್ನು ನೋಡಿದಾಗ ಭಾರತದ ಆಳ್ವಿಕರು ರಾಜಪರಂಪರೆಯ ಮನಸ್ಥಿತಿಯಿಂದ ಇನ್ನೂ ಹೊರಬಂದಿಲ್ಲ ಎಂಬ ಸಂಗತಿ ವೇದ್ಯವಾಗುತ್ತದೆ. ರಾಜ ಸಂಗ್ರಹಿಸಿದ ಆಸ್ತಿಯೆಲ್ಲವೂ ರಾಜನಿಗೇ ಸೇರಬೇಕಾದ್ದು ಎಂದು ವಾದಿಸುವಂತೆಯೇ ಸರ್ಕಾರದ ಒಡೆತನದಲ್ಲಿರುವ ಇಡೀ ಭರತ ಭೂಮಿ ಆಳ್ವಿಕರಿಗೆ ಸೇರಿದ್ದು ಎಂದು ವಾದಿಸಲಾಗುತ್ತದೆ. ಒಂದು ಕಾಲದಲ್ಲಿ ರಾಜಮಹಾರಾಜರುಗಳು ತಮ್ಮ ಅಮೂಲ್ಯ ಆಸ್ತಿಯನ್ನು ರಕ್ಷಿಸುವ ದೃಷ್ಟಿಯಿಂದ ದೇವಾಲಯಗಳಲ್ಲಿ ಬಚ್ಚಿಡುತ್ತಿದ್ದರು. ಏಕೆಂದರೆ ಎಂತಹ ಆಕ್ರಮಣಕಾರರಾದರೂ ದೇವಾಲಯಗಳನ್ನು ಲೂಟಿ ಮಾಡುವುದಿಲ್ಲ ಎಂಬ ನಂಬಿಕೆ. ಆದರೆ ಇತಿಹಾಸ ಈ ನಂಬಿಕೆಯನ್ನು ಹುಸಿಯಾಗಿಸಿದೆ. ಪ್ರತಿಯೊಂದು ಆಕ್ರಮಣದಲ್ಲೂ ದೇವಾಲಯಗಳ ಲೂಟಿಯಾಗಿದೆ. ಇದು ಧರ್ಮಾತೀತ ಸತ್ಯ. ಅಂದು ರಾಜರುಗಳು ಹೂಡಿದ ತಂತ್ರವನ್ನೇ ಇಂದಿನ ಪ್ರಜಾತಾಂತ್ರಿಕ ಪ್ರಭುಗಳು ಅನುಸರಿಸುತ್ತಿದ್ದಾರೆ. ತಮ್ಮ ಎಲ್ಲ ಕಪ್ಪು ಹಣವನ್ನು, ಅಕ್ರಮ ಸಂಪಾದನೆಯನ್ನು ಧರ್ಮಕೇಂದ್ರಗಳಲ್ಲಿ ಹುದುಗಿಸಿಡುತ್ತಿದ್ದಾರೆ.

ಭಾರತದಲ್ಲಿನ ಧರ್ಮ ಕೇಂದ್ರಗಳಲ್ಲಿರುವ ಒಟ್ಟು ಆಸ್ತಿಯನ್ನು ಸರ್ಕಾರದ ವಶಕ್ಕೆ ತೆಗೆದುಕೊಂಡಲ್ಲಿ, ನಮ್ಮಷ್ಟು ಸುಭಿಕ್ಷ ದೇಶ ಮತ್ತೊಂದು ಇರಲಿಕ್ಕಿಲ್ಲ. ಆದರೆ ಧರ್ಮ, ನಂಬಿಕೆ ಮತ್ತು ಮತೀಯ ಅಸ್ಮಿತೆಗಳು ರಾಷ್ಟ್ರಪ್ರೇಮದ ವ್ಯಾಖ್ಯಾನವನ್ನೇ ನಿರ್ಧರಿಸುವ ಪ್ರಸ್ತುತ ಸನ್ನಿವೇಶದಲ್ಲಿ ಇದು ಸಾಧ್ಯವೇ ಎನಿಸುತ್ತದೆ. ಸ್ವಿಸ್ ಬ್ಯಾಂಕುಗಳಲ್ಲಿ ಅಕ್ರಮವಾಗಿ ಇಟ್ಟಿರುವ ಲಕ್ಷಾಂತರ ಕೋಟಿ ರೂಗಳನ್ನು ಹಿಂಪಡೆಯುವ ಆಗ್ರಹ ಬಲಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಭಾರತದ ಗರ್ಭದಲ್ಲೇ ಅಡಗಿರುವ ಕಪ್ಪುಹಣದ ನಿಧಿಯನ್ನು ಕುರಿತು ಚರ್ಚೆಯೇ ನಡೆಯದಿರುವುದು ವಿಪರ್ಯಾಸ. ಬಂಡವಾಳ ಶೇಖರಣೆ ಹೆಚ್ಚಾಗಿ ಸಂಪತ್ತಿನ ಕ್ರೋಢೀಕರಣವಾದಂತೆಲ್ಲಾ ಬಡವ ಶ್ರೀಮಂತರ ನಡುವಿನ ಕಂದರ ಹೆಚ್ಚಾಗುತ್ತಲೇ ಹೋಗುತ್ತದೆ. ಭಾರತದ ಸಂದರ್ಭದಲ್ಲಿ ಈ ಪಾಪ ಕೃತ್ಯಕ್ಕೆ ನೇರವಾಗಿ ಹೊಣೆಯಾಗುವುದು ಧರ್ಮ ಕೇಂದ್ರಗಳು ಮತ್ತು ಕಾರ್ಪೋರೇಟ್ ಉದ್ಯಮಿಗಳು ಹಾಗೂ ಇವುಗಳನ್ನು ಪ್ರೋತ್ಸಾಹಿಸಿ ಪೋಷಿಸುವ ಪ್ರಭುತ್ವ. ಭ್ರಷ್ಟಾಚಾರ ವಿರೋಧಿ ಅಂದೋಲನದ ಹಿನ್ನೆಲೆಯಲ್ಲಿ ಈ ಪ್ರಶ್ನೆಗಳು ಚರ್ಚೆಯಾಗದಿರುವುದು ಸೋಜಿಗವೇ.

‍ಲೇಖಕರು G

10 July, 2011

ನಿಮಗೆ ಇವೂ ಇಷ್ಟವಾಗಬಹುದು…

3 Comments

  1. Nagesh. KM

    ಈ ಸಂಪತ್ತು ದೇವಾಲಯದಲ್ಲೇ ಉಳಿಯುವುದು ಒಳ್ಳೆಯದು ಅದನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸಬೇಕೆಮ್ಬುದೇನೋ ನಿಜ ಆದರೆ ಆ ಕೆಲಸ ಮಾಡುವವರು ಯಾರು ಮತ್ತೆ ಅದೇ ರಾಜಕಾರಣಿ ಮತ್ತು ಅಧಿಕಾರಿಗಳಲ್ಲವೇ. ಈ ಹಣವನ್ನು ಅರ್ದ ತಿನ್ನುವರು ಆದ್ದರಿಂದ ಈ ಹಣ ದೇವಾಲಯದಲ್ಲಿದ್ದರೆ ಮುಂದಿನ ಜನಾಂಗಕ್ಕೆ ಉಪಯೋಗಕ್ಕೆ ಬರಬಹುದು.

  2. sridhara pisse

    ಭಾರತದ ಸಂಪತ್ತಿನ ಮತ್ತೊಂದು ಆಕರ ಕಪ್ಪು ಹಣದ ಮಾದರಿಯಲ್ಲಿ ಧರ್ಮ ಸಂಸ್ಥೆಗಳಲ್ಲಿ ಹುದುಗಿರುವ ಸತ್ಯದ ಕಡೆಗೆ ಓದುಗರ ಗಮನವನ್ನು ಸೆಳೆದಿದ್ದೀರಿ. ಅಲ್ಲದೆ ಅವೆಲ್ಲೂ ಸಾರ್ವಜನಿಕ ಹಣ ಎಂಬುದನ್ನು ಚೆನ್ನಾಗಿಯೆ ವಾದಿಸಿದ್ದೀರಿ. ರಾಜರ ಆಳ್ವಿಕೆಯ ಮನಸ್ಥಿತಿಯೇ ಪ್ರಜಾಪ್ರಭತ್ವ ವ್ಯವಸ್ಥೆಯ ಆಡಳಿತಗಾರರಿಗೂ ಇರುವುದನ್ನು ಸರಿಯಾಗಿಯೆ ಗುರುತಿಸಿದ್ದೀರಿ. ಇಂದಿನ ಸಮಸ್ಯೆಗಳ ಮೂಲ ಮನಸ್ಸನ್ನು ಅರಿಯಲು ಈ ಬರವಣಿಗೆ ನೆರವು ನೀಡುತ್ತದೆ. ಧನ್ಯವಾದಗಳು.

  3. prasadraxidi

    ಇದು ನಿಸ್ಸಂದೇಹವಾಗಿ ಸಮಾಜದ ಸಂಪತ್ತು ಆದರೆ ನಮ್ಮ ಈಗಿನ ವ್ಯವಸ್ತೆಯಲ್ಲಿ ಇದು ರಾಜರಿಂದ ರಾಜಕಾರಣಿಗಳ ಕೈಗೆ ವರ್ಗಾವಣೆಯಾದರೆ, ಜನರ ಸ್ತಿತಿಯಲ್ಲಿ ವೆತ್ಯಾಸವೇನೂ ಆಗದು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading