ಮುಂಬೈ ಸ್ಫೋಟ
ಪ್ರಬುದ್ಧ ಭಾರತ ಅಸಹಾಯಕ ಆಳ್ವಿಕರು
ಮುಂಬೈನ ಬಾಂಬ್ ಸ್ಫೋಟಕ್ಕೆ ಎರಡು ದಿನಗಳ ಮುನ್ನ ಭುವನೇಶ್ವರದ ಸಭೆಯೊಂದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಯುಪಿಎ ಸರ್ಕಾರದ ಆಳ್ವಿಕೆಯಲ್ಲಿ ಶೇ. ೯೯ರಷ್ಟು ಭಯೋತ್ಪಾದನೆಯನ್ನು ತಡೆಗಟ್ಟಲಾಗಿದೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದರು. ಬಹುಶಃ ನಮ್ಮ ಭಾವಿ ಪ್ರಧಾನಿಗಳು ಭಯೋತ್ಪಾದಕ ಕೃತ್ಯಗಳನ್ನು ಸರ್ಕಾರದ ಯೋಜನೆಗಳಂತೆ ಶೇಕಡಾವಾರು ಸಾಫಲ್ಯ ವೈಫಲ್ಯಗಳ ನೆಲೆಗಟ್ಟಿನಲ್ಲಿ ವಿಶ್ಲೇಷಿಸಲು ಹೊರಟಿರಬೇಕು. ರಾಹುಲ್ ಮಾತಿನ ಅರ್ಥದಲ್ಲಿ ದೇಶದಲ್ಲಿ ಇಂತಿಷ್ಟು ಭಯೋತ್ಪಾದಕ ಕೃತ್ಯಗಳು ನಡೆಯಬೇಕೆಂಬ ನಿಯಮ ಇರುತ್ತದೆ, ಅದರಲ್ಲಿ ಶೇ. ೯೯ರಷ್ಟನ್ನು ತಡೆಗಟ್ಟಲಾಗಿದೆ ಎಂದು ಭಾವಿಸೋಣವೇ ? ಅಥವಾ ತಡೆಹಿಡಿಯಲಾಗದಿದ್ದ ಶೇ. ೧ರ ಪ್ರಮಾಣದ ಕೃತ್ಯ ಮುಂಬೈನಲ್ಲಿ ಸಂಭವಿಸಿದೆ ಎಂದು ಭಾವಿಸೋಣವೇ ? ಮತ್ತೊಂದೆಡೆ ಕೇಂದ್ರ ಗೃಹ ಮಂತ್ರಿ ಚಿದಂಬರಂ ೨೦೦೮ರ ನಂತರ ಮುಂಬೈನಲ್ಲಿ ಭಯೋತ್ಪಾದಕ ದಾಳಿಯೇ ಸಂಭವಿಸಿಲ್ಲ ಎಂದು ಹೇಳಿದ್ದರು. ಆದರೆ ಗೃಹಮಂತ್ರಿಗಳ ಹೇಳಿಕೆಯಲ್ಲಿ ಭಯೋತ್ಪಾದನೆಯನ್ನು ತಡೆಗಟ್ಟುವಲ್ಲಿ ಪೊಲೀಸ್ ಮತ್ತು ಗುಪ್ತಚರ ಇಲಾಖೆಯ ಕೊಡುಗೆ ಇರುವ ಬಗ್ಗೆ ಯಾವುದೇ ಪ್ರಸ್ತಾಪ ಮಾಡಲಿಲ್ಲ. ಅಂದರೆ ಭಯೋತ್ಪಾದಕರು ಯಾವುದೇ ಕೃತ್ಯಗಳನ್ನು ನಡೆಸಿಲ್ಲ ಎಂದು ಭಾವಿಸಬಹುದೇ ಹೊರತು, ಸರ್ಕಾರದ ಸಕಾರಾತ್ಮಕ ಕ್ರಮಗಳು ತಡೆಗಟ್ಟಿವೆ ಎಂದು ಹೇಳಲಾಗುವುದಿಲ್ಲ.
ಮುಂಬೈನಲ್ಲಿ ಮೂರು ಕಡೆ ಬಾಂಬ್ ಸ್ಪೋಟ ನಡೆದಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಕ್ತಾರರ ಈ ಹೇಳಿಕೆಗಳು ಅತಿಯಾದ ಆತ್ಮವಿಶ್ವಾಸವೋ ಅಥವಾ ನಿರ್ಲಕ್ಷ್ಯವೋ ಮಾನ್ಯ ಮಂತ್ರಿಗಳು ಸ್ಪಷ್ಟಪಡಿಸಬೇಕಿದೆ. ಭಾರತದ ಆಳ್ವಿಕರಿಗೆ ಭಯೋತ್ಪಾದನೆ ಒಂದು ಕಾನೂನು ಸುವ್ಯವಸ್ಥೆಯ ಅಂಶಿಕ ಭಾಗವಾಗಿಯೇ ಕಾಣುವುದೇ ಹೊರತು, ನವ ಉದಾರವಾದ-ಜಾಗತೀಕರಣ ಮತ್ತು ಪ್ರಭುತ್ವದ ಸಮಾಜೋ-ಆರ್ಥಿಕ ನೀತಿಗಳು ಸೃಷ್ಟಿಸುತ್ತಿರುವ ಒಂದು ಜಾಗತಿಕ ವಿದ್ಯಮಾನ ಎಂದು ಕಾಣುತ್ತಿಲ್ಲ. ಹಾಗಾಗಿಯೇ ರಾಹುಲ್ ಗಾಂಧಿಯಂತಹ ಯುವ ನಾಯಕರೂ ಸಹ ಅಂಕಿಅಂಶಗಳಲ್ಲೇ ಈ ವಿದ್ಯಮಾನವನ್ನು ವ್ಯಾಖ್ಯಾನಿಸುತ್ತಾರೆ. ನಿಜ, ೨೬/೧೧ರ ನಂತರ ಮುಂಬೈನಲ್ಲಿ ಯಾವುದೇ ದಾಳಿ ಸಂಭವಿಸಿಲ್ಲ. ಆದರೆ ಭಾರತದ ಇತರ ಐದು ಕಡೆ ಸಂಭವಿಸಿದೆಯಲ್ಲವೇ ? ಅಬ್ಬಾ ! ಮುಂಬೈನಲ್ಲಿ ಸಂಭವಿಸಿಲ್ಲ ಎಂದು ಗೃಹಮಂತ್ರಿಗಳು ಸಂಭ್ರಮಿಸುವುದನ್ನು ನೋಡಿದರೆ, ಸರ್ಕಾರದ ದೃಷ್ಟಿಯಲ್ಲಿ ಮುಂಬೈ ಮಾತ್ರವೇ ಪ್ರಾಮುಖ್ಯತೆ ಪಡೆಯುತ್ತದೆ ಎಂದು ಭಾವಿಸಬೇಕೇ ?
ಏಕೆಂದರೆ ೨೬/೧೧ರ ಘಟನೆಯ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತನಿಖೆ ಮತ್ತು ಬೇಹುಗಾರಿಕೆಯ ಕ್ಷೇತ್ರದಲ್ಲಿ ಸಾಕಷ್ಟು ಬಂಡವಾಳ ಹೂಡಿ ಹಲವು ರೀತಿಯ ಪ್ರಯೋಗಗಳನ್ನು ಕೈಗೊಂಡಿದ್ದರೂ, ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿದ ಐದು ಪ್ರಮುಖ ಭಯೋತ್ಪಾದಕ ಕೃತ್ಯಗಳನ್ನು ಬೇಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಫೆಬ್ರವರಿ ೨೦೧೦ರಲ್ಲಿ ಪುಣೆಯ ಜರ್ಮನ್ ಬೇಕರಿ ಸ್ಫೋಟ, ಏಪ್ರಿಲ್ ೨೦೧೦ರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಸ್ಫೋಟ, ದೆಹಲಿಯ ಜಮ್ಮಾ ಮಸೀದಿಯ ಬಳಿ ಸೆಪ್ಟೆಂಬರ್ ೨೦೧೦ರಲ್ಲಿ ಸಂಭವಿಸಿದ ಶೂಟಿಂಗ್ ಪ್ರಕರಣ, ಡಿಸೆಂಬರ್ ೨೦೧೦ರಲ್ಲಿ ವಾರಣಾಸಿಯ ಶಿತ್ಲ ಘಾಟ್ನಲ್ಲಿ ನಡೆದ ಪ್ರಕರಣ ಮತ್ತು ೨೦೧೧ರ ಮೇನಲ್ಲಿ ದೆಹಲಿಯ ಹೈಕೋರ್ಟ್ ಬಳಿ ಸಂಭವಿಸಿದ ಘಟನೆ ಈ ಯಾವುದೇ ಪ್ರಕರಣಗಳಲ್ಲಿ ಅಪರಾಧಿಗಳನ್ನು ಈವರೆಗೂ ಕಂಡುಹಿಡಿಯಲಾಗಿಲ್ಲ. ಸುಳಿವೂ ಸಿಕ್ಕಂತಿಲ್ಲ. ೨೦೦೯ರಲ್ಲಿ ವಿಜೃಂಭಣೆಯಿಂದ ಆರಂಭವಾದ ರಾಷ್ಟ್ರೀಯ ತನಿಖಾ ಆಯೋಗ ಮೂರು ಪ್ರಕರಣಗಳನ್ನು ವಹಿಸಿಕೊಂಡಿದ್ದರೂ ಫಲಿತಾಂಶ ಮಾತ್ರ ಶೂನ್ಯವೇ.
೨೦೧೦-೧೧ರ ಕೇಂದ್ರ ಗೃಹಮಂತ್ರಾಲಯದ ವರದಿಯ ಪ್ರಕಾರ ಜಾಗತಿಕ ಭಯೋತ್ಪಾದನೆಯನ್ನು ಎದುರಿಸುವ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಬಂಡವಾಳ ಹೂಡಿದ್ದು ರಾಷ್ಟ್ರೀಯ ಭದ್ರತಾ ವಿಶೇಷ ಪಡೆಗಳಿಗೆ ಪೂರಕವಾಗುವಂತೆ ಶೀಘ್ರ ಸ್ಪಂದನಾ ಕೇಂದ್ರಗಳನ್ನೂ ಆರಂಭಿಸಲಾಗಿದೆ. ಇದರೊಂದಿಗೆ ರಾಷ್ಟ್ರೀಯ ಬೇಹುಗಾರಿಕೆ ಕೇಂದ್ರವನ್ನೂ ಪ್ರತ್ಯೇಕವಾಗಿ ಆರಂಭಿಸಲಾಗಿದೆ. ಆದರೆ ಈ ಕ್ರಮಗಳು ಫಲಕಾರಿಯಾಗಿಲ್ಲವೆಂದು ತಜ್ಞರು ಹೇಳುತ್ತಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭಯೋತ್ಪಾದನಾ ವಿರೋಧಿ ಕ್ರಮಗಳನ್ನು ವಿಶೇಷ ನಿಗಾ ವಹಿಸಿ ಕೈಗೊಳ್ಳುತ್ತಿದ್ದರೂ ಸಹ ಗುಪ್ತಚರ ಇಲಾಖೆಯ ಮಾಹಿತಿ ಸಂಗ್ರಹ ವಿಧಾನದಲ್ಲಿ ಪರಿಣಾಮಕಾರಿ ಬೆಳವಣಿಗೆ ಆಗದಿರುವುದೇ ಪ್ರಸ್ತುತ ಸನ್ನಿವೇಶಕ್ಕೆ ಕಾರಣ, ಸೂಕ್ತ ಮಾಹಿತಿ ಇಲ್ಲದೆ ಹೋದಲ್ಲಿ ಎಂತಹುದೇ ಗಣಕಯಂತ್ರವಾದರೂ ವ್ಯರ್ಥವೇ ಎಂದು ಡಾ. ಅಜಯ್ ಸಾಹ್ನಿ ಹೇಳುತ್ತಾರೆ.
ಭಾರತೀಯ ಪ್ರಭುತ್ವದ ಅಸಹಾಯಕತೆಯೂ ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಯಾವುದೇ ಘಟನೆ ನಡೆದ ಕೂಡಲೇ ಮೂರು ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತವೆ. ಮೊದಲನೆಯದಾಗಿ ಆಳುವ ಪಕ್ಷ ಅಪರಾಧಿಗಳನ್ನು ಶೀಘ್ರವೇ ಗುರುತಿಸಲಾಗುವುದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿ, ಮಡಿದವರಿಗೆ ಗಾಯಗೊಂಡವರಿಗೆ ಸಾಂತ್ವನ ಹೇಳುತ್ತಾ ಪರಿಹಾರ ಘೋಷಿಸುತ್ತದೆ. ನಂತರ ಗುಪ್ತಚರ ಇಲಾಖೆಯ ವೈಫಲ್ಯವನ್ನು ಎತ್ತಿಹಿಡಿಯುತ್ತಾ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಯತ್ನಿಸುತ್ತದೆ. ಆದರೆ ಗುಪ್ತಚರ ಇಲಾಖೆಯ ವೈಫಲ್ಯಕ್ಕೆ ಇಡೀ ಆಡಳಿತ ಯಂತ್ರ ಹೊಣೆ ಎನ್ನುವುದನ್ನು ಜಾಣ್ಮೆಯಿಂದ ಮರೆಮಾಚುತ್ತದೆ. ಎರಡನೆಯ ಅಭಿಪ್ರಾಯ ಭಾಜಪದಿಂದ. ಸರ್ಕಾರ ಭಯೋತ್ಪಾದನೆಯ ಬಗ್ಗೆ ಮೃದು ನೀತಿ ತಾಳುತ್ತದೆ, ವೋಟ್ ಬ್ಯಾಂಕ್ ರಾಜಕಾರಣವೇ ಭಯೋತ್ಪಾದಕ ಕೃತ್ಯಗಳ ಹೆಚ್ಚಳಕ್ಕೆ ಕಾರಣ ಎಂದು ಭಾಜಪ ಆರೋಪಿಸುತ್ತದೆ. ಈ ಆರೋಪ ಒಂದು ರೀತಿಯಲ್ಲಿ ಪುನರಾವರ್ತನೆಯಷ್ಟೆ. ಈ ಎರಡೂ ಆರೋಪಗಳಿಗೆ ಯಾವುದೇ ಸ್ಪಷ್ಟೀಕರಣ ನೀಡುವಲ್ಲಿ ಭಾಜಪ ವಿಫಲವಾಗಿದೆ. ದೇಶದ ಐಕiತ್ಯವನ್ನೇ ಪ್ರಶ್ನಿಸುವ ಇಂತಹ ರಾಜಕೀಯ ಪ್ರೇರಿತ ಹೇಳಿಕೆಗಳು ಭಯೋತ್ಪಾದಕರಿಗೆ ನೆರವಾಗುವ ಸಂಭವವೇ ಹೆಚ್ಚು. ಇನ್ನು ಮೂರನೆಯದು ಶಿವಸೇನೆ ಸಂಘಪರಿವಾರ ಮುಂತಾದ ಫ್ಯಾಸಿಸ್ಟ್ ಸಂಘಟನೆಗಳಿಂದ ಬರುತ್ತದೆ. ಇವರ ಮೂಲ ಆರೋಪ ಅಫ್ಜಲ್ ಗುರುವಿಗೆ ಮರಣದಂಡನೆ ವಿಧಿಸದಿರುವುದು. ಒಂದು ವೇಳೆ ಅಫ್ಜಲ್ ಗುರು ಮತ್ತು ಕಸಬ್ನನ್ನು ನೇಣು ಹಾಕಿಬಿಟ್ಟರೆ ಭಯೋತ್ಪಾದಕರು ಹೆದರಿ ಓಡಿ ಹೋಗಿಬಿಡುತ್ತಾರೆ ಎಂಬ ಭ್ರಮೆ ಈ ಸಂಘಟನೆಗಳನ್ನು ಆವರಿಸಿದೆ. ಅಲ್ಪಸಂಖ್ಯಾತ ಸಮುದಾಯವನ್ನು ಸದಾ ಭೀತಿಯಲ್ಲಿಟ್ಟಿರಲು ಶ್ರಮಿಸುವ ಈ ಸಂಘಟನೆಗಳಿಂದ ಮತ್ತಿನ್ನೇನು ಅಪೇಕ್ಷಿಸಲು ಸಾಧ್ಯ ?
ಇಂತಹ ರಾಜಕೀಯ ವ್ಯವಸ್ಥೆಯಲ್ಲಿ ಭಾರತದ ನಾಗರಿಕ ಸಮಾಜ ಭಯೋತ್ಪಾದಕ ಕೃತ್ಯಗಳನ್ನು ಸಹಿಸಿಕೊಳ್ಳುವುದಷ್ಟೇ ಅಲ್ಲ, ಯಾವುದೇ ಉದ್ವೇಗಕ್ಕೊಳಗಾಗದೆ ಸಂಯಮಶೀಲತೆಯಿಂದ ಎದುರಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಮುಂಬೈನ ಜನತೆ ಮಾತ್ರವಲ್ಲ, ದೇಶದ ಇತರೆಡೆಗಳಲ್ಲೂ ಜನಸಾಮಾನ್ಯರಿಗೆ ಭಯೋತ್ಪಾದನೆಯ ಜಾಗತಿಕ ಆಯಾಮದ ಅರಿವಾಗಿರುವುದು ಸ್ಪಷ್ಟ. ಮಲೆಗಾಂವ್, ಸಂಜೋತ, ಅಜ್ಮೇರ್ ಘಟನೆಗಳ ನಂತರ ಭಾರತದ ಪೊಲೀಸ್, ಆಡಳಿತ ಯಂತ್ರ ಮತ್ತು ಮಾಧ್ಯಮಗಳಲ್ಲೂ ಸಹ ಸಂಯಮ ಮೂಡಿರುವುದು ಕಾಣುತ್ತದೆ. ಬಾಂಬ್ ಸ್ಫೋಟ ಸಂಭವಿಸಿದ ಕೂಡಲೇ ಕೆಲವು ಸಂಘಟನೆಗಳನ್ನು ಹೆಸರಿಸಿ, ಸುತ್ತಲಿನ ಅಲ್ಪಸಂಖ್ಯಾತ ಯುವಕರನ್ನು ಬಂಧಿಸುವ ಪರಂಪರೆಗೆ ತಿಲಾಂಜಲಿ ನೀಡಲಾಗಿದೆ. ಇದು ಮಲೆಗಾಂವ್ನ ಪ್ರಭಾವ ಎಂದು ಹೇಳಬೇಕಿಲ್ಲ. ಮಾಧ್ಯಮಗಳೂ ಸಹ ಭಯೋತ್ಪಾದಕ ಕೃತ್ಯಗಳನ್ನು ವೈಭವೀಕರಿಸಿ, ರಂಜನೀಯವಾಗಿ ಬಿಂಬಿಸುವ ತಮ್ಮ ಶೈಲಿಯನ್ನು ಕೈಬಿಟ್ಟು ಗಂಭೀರ ಚರ್ಚೆಗಳಲ್ಲಿ ತೊಡಗಿವೆ. ಈ ಎಲ್ಲಾ ಧನಾತ್ಮಕ ಬೆಳವಣಿಗೆಯ ನಡುವೆಯೂ ಚಿಂತೆಗೀಡುಮಾಡುವ ವಿಚಾರವೆಂದರೆ ಭಾರತದ ಸಮಸ್ತ ನಾಗರಿಕರನ್ನು ನಿರಂತರವಾಗಿ ಕಾಡುತ್ತಿರುವ ಭಯೋತ್ಪಾದನೆ ಭೀತಿ.
ಇಲ್ಲಿ ಆಳ್ವಿಕರ ನೀತಿಯಲ್ಲಿನ ನ್ಯೂನತೆ ಮತ್ತು ಕೊರತೆ ಎದ್ದು ಕಾಣುತ್ತದೆ. ಗುಪ್ತಚರ ಇಲಾಖೆಯನ್ನು ಬಲಪಡಿಸುವ ಅನೇಕ ಕ್ರಮಗಳನ್ನು ಸರ್ಕಾರ ಕೈಗೊಂಡಿದ್ದರೂ ಪೊಲೀಸ್ ಇಲಾಖೆಯನ್ನು ಸುಧಾರಿಸುವಲ್ಲಿ ಸೋತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಮುಂಬೈನಂತಹ ನಗರಗಳಲ್ಲಿ ಪೊಲೀಸ್ ಇಲಾಖೆಗೆ ಅಗತ್ಯವಾದ ಪರಿಕರಗಳನ್ನು, ಸಿಬ್ಬಂದಿಯನ್ನು ಮತ್ತು ಆಧುನಿಕ ತಂತ್ರಜ್ಞಾನವನ್ನು ಒದಗಿಸಿದ್ದ ಪಕ್ಷದಲ್ಲಿ ಈ ರೀತಿಯ ಸರಣಿ ಸ್ಫೋಟಗಳು ಸಂಭವಿಸುತ್ತಿರಲಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ರಹಸ್ಯ ಕ್ಯಾಮರಾಗಳಾಗಲಿ, ಮೆಟಲ್ ಡಿಟೆಕ್ಟರ್ ಬಾಗಿಲುಗಳಾಗಲೀ ಬಹುಪಾಲು ದುಸ್ಥಿತಿಯಲ್ಲಿರುತ್ತವೆ. ಅತ್ಯಂತ ಜನ ನಿಬಿಡ ಪ್ರದೇಶಗಳಲ್ಲಿ ಇಂತಹ ಪರಿಕರಗಳು ಕೇವಲ ಅಲಂಕಾರಿಕವಾಗುತ್ತವೆ. ಈ ಪರಿಸ್ಥಿತಿಯನ್ನು ಭಯೋತ್ಪಾದಕರು ಸಮರ್ಥವಾಗಿ ಉಪಯೋಗಿಸಿಕೊಳ್ಳುತ್ತಾರೆ. ಮತ್ತೊಂದೆಡೆ ಪೊಲೀಸ್ ಇಲಾಖೆಗೆ ಸೂಕ್ತವಾದ ಪರಿಕರಗಳನ್ನು ಒದಗಿಸದೆ, ಸಿಬ್ಬಂದಿಯ ಸಾಧನೆಯನ್ನೇ ಪ್ರಮುಖ ಮಾನದಂಡವಾಗಿ ಬಳಸುವುದರಿಂದ ಅನೇಕ ಸಂದರ್ಭಗಳಲ್ಲಿ ಅಮಾಯಕರನ್ನು ಬಂಧಿಸಿ, ತಪ್ಪಿತಸ್ಥರು ಶಾಶ್ವತವಾಗಿ ತಪ್ಪಿಸಿಕೊಂಡು ಹೋದ ಪ್ರಕರಣಗಳೂ ಹೇರಳವಾಗಿವೆ. ಪ್ರತಿ ಬಾಂಬ್ ದಾಳಿಯಾದಾಗಲೂ ಪೊಲೀಸ್ ಸುಧಾರಣೆಗಳ ಬಗ್ಗೆ ಮಾತನಾಡುವ ಸರ್ಕಾರ ಮತ್ತೊಂದು ದಾಳಿಯಾಗುವವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾಮಾನ್ಯ ಸಂಗತಿಯೇ ಆಗಿಹೋಗಿದೆ.
ಯಾವುದೇ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಸಮಾಜಘಾತುಕ ಶಕ್ತಿಗಳನ್ನು, ದೇಶದ ಅಖಂಡತೆಯನ್ನು ಪ್ರಶ್ನಿಸುವ ಶಕ್ತಿಗಳನ್ನು ಎದುರಿಸಲು ಪ್ರಜಾ ಪ್ರತಿನಿಧಿಗಳು ಒಗ್ಗಟ್ಟಾಗಿ ಹೋರಾಡುವುದು, ನೀತಿ ನಿಯಮಗಳನ್ನು ರೂಪಿಸುವುದು ಅತ್ಯಗತ್ಯ. ಆದರೆ ಭಾರತದ ರಾಜಕಾರಣದಲ್ಲಿ ಈ ವಿದ್ಯಮಾನಕ್ಕೆ ಅವಕಾಶವೇ ಇಲ್ಲವಾಗಿದೆ. ಕೆಲವು ಪಕ್ಷ ಸಂಘಟನೆಗಳಿಗೆ ಭಯೋತ್ಪಾದಕ ಕೃತ್ಯಗಳು ಮುಂಬರುವ ಚುನಾವಣೆಯ ಕೇಂದ್ರ ಬಿಂದುವಾಗಿ ಕಂಡರೆ, ಇನ್ನು ಕೆಲವು ಪಕ್ಷಗಳಿಗೆ ಇದು ಕಾನೂನು ಸುವ್ಯವಸ್ಥೆಯ ಒಂದು ಭಾಗವಾಗಿ ಕಾಣುತ್ತದೆ. ದೇಶವನ್ನು ಕಾಡುತ್ತಿರುವ ಸಂಘಟನಾತ್ಮಕ ಹಿಂಸಾಪ್ರವೃತ್ತಿಯನ್ನು ಹತ್ತಿಕ್ಕುವಲ್ಲಿ ಯಾವುದೇ ಒಮ್ಮತ ಮೂಡುತ್ತಿಲ್ಲ. ಅಷ್ಟೇ ಅಲ್ಲ ಭಾರತೀಯ ಪ್ರಭುತ್ವಕ್ಕೆ ಅಂತರಿಕವಾಗಿ ತನ್ನ ಆರ್ಥಿಕ ನೀತಿಗಳನ್ನು ಎದುರಿಸಿ ಹೋರಾಡುತ್ತಿರುವ ಜನಸಾಮಾನ್ಯರನ್ನು ನಿಗ್ರಹಿಸುವುದೇ ಪ್ರಮುಖ ಸವಾಲಾಗಿ ಪರಿಣಮಿಸಿದ್ದು, ಬಾಹ್ಯ ಶಕ್ತಿಗಳಿಂದ ಉಂಟಾಗುತ್ತಿರುವ ಮತ್ತು ಉಂಟಾಗಬಹುದಾದ ಅಪಾಯದ ಮುನ್ಸೂಚನೆ ಕಾಣುತ್ತಲೇ ಇಲ್ಲ. ಪೋಸ್ಕೋ, ವೇದಾಂತ, ಮಿಟ್ಟಲ್ಗಳನ್ನು ಸಂರಕ್ಷಿಸಲು ತನ್ನೆಲ್ಲಾ ಮಾನವ ಸಂಪನ್ಮೂಲಗಳನ್ನೂ ಖರ್ಚು ಮಾಡಿ, ಜನಾಂದೋಲನಗಳನ್ನು ಹತ್ತಿಕ್ಕಲು ಹವಣಿಸುತ್ತಿರುವ ಆಳ್ವಿಕರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿರುವ ಮತ್ತು ಭಾರತದಲ್ಲೂ ವ್ಯಾಪಿಸುತ್ತಿರುವ ಭಯೋತ್ಪಾದನೆಯ ಕರಾಳ ನೆರಳು ಗೋಚರಿಸುತ್ತಲೇ ಇಲ್ಲ.
ಹಾಗಾಗಿಯೇ ಇಲ್ಲಿ ಯಾವುದೇ ಭಯೋತ್ಪಾದಕ ದಾಳಿ ಆದರೂ ಅದು ಧರ್ಮ-ಸಮುದಾಯ-ರಾಜಕಾರಣದ ಚೌಕಟ್ಟಿನಲ್ಲೇ ವ್ಯಾಖ್ಯಾನಿಸಲ್ಪಡುತ್ತದೆ. ಈ ಚೌಕಟ್ಟನ್ನೂ ಮೀರುವ ನೆಲೆಗಟ್ಟಿನಲ್ಲಿ ಭಯೋತ್ಪಾದನೆ ತನ್ನದೇ ಆದ ವಿಸ್ತೃತ ಜಾಲವನ್ನು ಹೆಣೆಯುತ್ತಿರುವುದನ್ನು ಆಳ್ವಿಕರು ಗಮನಿಸದೇ ಇರುವುದು ಪ್ರಸ್ತುತ ಸನ್ನಿವೇಶಕ್ಕೆ ಕಾರಣವಾಗಿದೆ. ಭಯೋತ್ಪಾದನೆಯಾಗಲಿ, ಫ್ಯಾಸಿಸಂ ಆಗಲೀ ಯಾವುದೇ ಹಿಂಸಾತ್ಮಕ ಧೋರಣೆಯೂ ಸಹ ಶೂನ್ಯದಲ್ಲಿ ಸೃಷ್ಟಿಯಾಗುವುದಿಲ್ಲ. ಬದಲಾಗಿ ಆಳ್ವಿಕರು ಸೃಷ್ಟಿಸುವ ಒಂದು ಸಮಾಜೋ-ಆರ್ಥಿಕ ಚೌಕಟ್ಟಿನಲ್ಲಿ ಸೃಷ್ಟಿಯಾಗುತ್ತದೆ. ಈ ಆಯಾಮವನ್ನು ಸೂಕ್ಷ್ಮವಾಗಿ ಗ್ರಹಿಸದೆ ಹೋದಲ್ಲಿ ಈ ರೀತಿಯ ಮಾರಣಾಂತಿಕ ದಾಳಿಗಳು ಸಂಭವಿಸುತ್ತಲೇ ಇರುತ್ತವೆ. ಜನಸಾಮಾನ್ಯರು ಸಾವಿನ ಭೀತಿ ಎದುರಿಸುತ್ತಲೇ ಇರುತ್ತಾರೆ. ಭಾರತದ ಆಳ್ವಿಕರಲ್ಲಿ ರಾಜಕೀಯ ಇಚ್ಚಾಶಕ್ತಿ ಇರುವುದೇ ಆದಲ್ಲಿ, ಎಲ್ಲ ಪಕ್ಷಗಳೂ ಒಂದಾಗಿ ದೇಶವನ್ನು ಈ ಪಿಡುಗಿನಿಂದ ರಕ್ಷಿಸುವ ನಿಟ್ಟಿನಲ್ಲಿ ಸ್ಪಷ್ಟ ನೀತಿಯನ್ನು ರೂಪಿಸಬೇಕಿದೆ. ಪೊಲೀಸ್, ಗುಪ್ತಚರ ವ್ಯವಸ್ಥೆಯನ್ನೂ ಮೀರಿದ ಒಂದು ಸಾಮಾಜಿಕ ಆಯಾಮವನ್ನು ಗುರುತಿಸದೆ ಹೋದಲ್ಲಿ ಭಯೋತ್ಪಾದನೆಯ ನಿಗ್ರಹ ಸಾಧ್ಯವಿಲ್ಲ. ಮೃದು-ಕಠಿಣ ನೀತಿಗಳ ವ್ಯಾಖ್ಯಾನಕ್ಕಿಂತಲೂ ಅಗತ್ಯವಾಗಿರುವುದು ರಾಜಕೀಯ ಇಚ್ಚಾಶಕ್ತಿ ಮತ್ತು ಜನಸಾಮಾನ್ಯರ ಬಗ್ಗೆ ಕಾಳಜಿ. ಇವೆರಡರ ಕೊರತೆಯೇ ಮುಖ್ಯ ಸಮಸ್ಯೆ.








bhayotpaadakara bagge mrudu dhorane, vote bank rajakaaranada pariraamavagi alpasankyatara tustikarna idu bhoyotpadakarige bembala koduttadennuva katu satya nannathaha samanyarigide. Afzal, kasabge nenu haakalu saradi, avarige jailinalli sarkari kharchinalli bage bageya `rajopachara’kke sarkarave ede madikottare `bhayotpadane’yalli todaguvava hege hedarikondanu? avanade dharmada kanooninate sarvajanika stalagalli kallu hodedu saayisuva illave nenu haakuva katina shikshe vidhisidare bayotpadakaru dushkrutyadalli todaguvalli hinjeridaru. Adare deshada duradrusta. e bayotpadaka `alapasakyata’ mattu avana virudda mataduvavarella `komuvadi’vadigalagi lekhakara kannige kanuttaralla?
After 26/11 there are less terror attacks this is not because our system prevented them its just because terrorists did not plant bombs. i feel we are living at mercy of terrorists.indian system is good only at corruption.