ಸಾಮಾನ್ಯವಾಗಿ ಊಳಿಗಮಾನ್ಯ ವ್ಯವಸ್ಥೆಯ ಆಡಳಿತ ವ್ಯವಸ್ಥೆಯಲ್ಲಿ ಆಳ್ವಿಕರು ಅಥವಾ ಆಡಳಿತ ನಡೆಸುವ ಪ್ರಭುಗಳು ತಮ್ಮ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ವರ್ಗಗಳನ್ನು ಸದಾ ಹದ್ದುಬಸ್ತಿನಲ್ಲಿಡಲು ಬಳಸುವ ಒಂದು ತಂತ್ರ ಎಂದರೆ ನೌಕರಶಾಹಿಯ ಅನಿವಾರ್ಯತೆಗಳನ್ನು ಬಳಸಿಕೊಂಡು ನೌಕರರನ್ನು ವರ್ಗಾವಣೆಯ ಮೂಲಕವೋ, ಬಡ್ತಿ ನೀಡದಿರುವ ಮೂಲಕವೋ ತಮ್ಮ ಮುಷ್ಟಿಯಲ್ಲಿರಿಸಿಕೊಳ್ಳುವುದು. ಇದು ಸಾರ್ವಜನಿಕ ಉದ್ಯಮಗಳಿಗೆ ಎಷ್ಟು ಅನ್ವಯಿಸುವುದೋ ಖಾಸಗಿ ಕ್ಷೇತ್ರದ ಉದ್ದಿಮೆಗಳಿಗೂ ಅಷ್ಟೇ ಅನ್ವಯಿಸುತ್ತದೆ. ತಮ್ಮ ಸೀಮಿತ ಆದಾಯದಲ್ಲಿ ಜೀವನ ನಡೆಸುವುದು ದುಸ್ತರವಾದಾಗ ನೌಕರ ವರ್ಗಗಳು ಯಾವುದೊ ಒಂದು ಸ್ಥಳದಲ್ಲಿ ನೆಲೆಯೂರಲು ಯತ್ನಿಸುತ್ತವೆ. ಆಧುನಿಕ ಸಮಾಜದಲ್ಲಿ ಯಾವುದೇ ಮಧ್ಯಮ ವರ್ಗದ ಕುಟುಂಬ ಊರಿಂದ ಊರಿಗೆ ವರ್ಗಾವಣೆಯಾಗುವುದೆಂದರೆ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಆರ್ಥಿಕ, ಕೌಟುಂಬಿಕ ಮತ್ತು ಸಾಮಾಜಿಕ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಹಾಗಾಗಿ ಬಹುಪಾಲು ನೌಕರರು ಒಂದೆಡೆ ನೆಲೆ ಮಾಡಲು ಪ್ರಯತ್ನಿಸುತ್ತಾರೆ. ಈ ನಿಟ್ಟಿನಲ್ಲಿ ವರ್ಗಾವಣೆಯಿಂದ ತಪ್ಪಿಸಿಕೊಳ್ಳಲು ಅಧಿಕಾರಸ್ಥರ ಇಚ್ಚೆಯಂತೆ ನಡೆದುಕೊಳ್ಳುವುದೂ ಉಂಟು. ಹಾಗಾಗಿ ಸರ್ಕಾರಿ ವಲಯಗಳಲ್ಲಿ ವರ್ಗಾವಣೆ ಎಂದರೆ ಒಂದು ಒತ್ತಡ ತಂತ್ರವಾಗಿ ಮಾತ್ರವೇ ಕಾಣುತ್ತದೆ. ಅಧಿಕಾರಸ್ಥ ರಾಜಕಾರಣಿಗಳ ಮಾತು ಕೇಳದೆ ಸಾಂವಿಧಾನಿಕವಾಗಿ ಕರ್ತವ್ಯ ನಿರ್ವಹಿಸುವ ಪ್ರಾಮಾಣಿಕ ಅಧಿಕಾರಿಗಳು ಹಲವು ಬಾರಿ ವರ್ಗಾವಣೆಯಾಗಿರುವ ನಿದರ್ಶನಗಳಿವೆ.
ಇದು ಸರ್ಕಾರಿ ನೌಕರರ ಪಾಡಾಯಿತು. ಸರ್ಕಾರಿ ವಲಯದಲ್ಲಿ ಅಥವಾ ಅಧಿಕಾರಸ್ಥ ಆಡಳಿತ ವ್ಯವಸ್ಥೆಯಲ್ಲಿ ಈ ಪ್ರಕ್ರಿಯೆಯನ್ನು ಆಡಳಿತಾತ್ಮಕ ಸಮಸ್ಯೆ ಎಂದು ಹೇಳಬಹುದು. ಆದರೆ ಇದೇ ಒತ್ತಡ ತಂತ್ರ ಸಾಂಸ್ಕೃತಿಕ ಕ್ಷೇತ್ರದಲ್ಲಿ ನಡೆದಾಗ ಅದು ಫ್ಯಾಸಿಸಂನ ಸೂಚನೆಯಾಗುತ್ತದೆ. ಮೈಸೂರಿನ ರಂಗಾಯಣದಲ್ಲಿ ನಡೆಯುತ್ತಿರುವ ಸೈದ್ಧಾಂತಿಕ ಸಂಘರ್ಷದಲ್ಲಿ ಈ ಬೆಳವಣಿಗೆಯ ಛಾಯೆಯನ್ನು ಕಾಣಬಹುದಾಗಿದೆ. ವಿಧಾನಸೌಧದ ಕಚೇರಿಗಳಲ್ಲಿ ತಮ್ಮ ಸಿದ್ಧಾಂತವನ್ನು ಗೋಪ್ಯವಾಗಿ ಕಾರ್ಯಗತಗೊಳಿಸಲು ತಮ್ಮದೇ ಆದ ಬಾಲಂಗೋಚಿಗಳನ್ನು ನೇಮಿಸುವ ಹಾಗೆಯೇ ಸಾಂಸ್ಕೃತಿಕ ಲೋಕದಲ್ಲೂ ಮಾಡಲು ಮುಂದಾಗುವುದು ಫ್ಯಾಸಿಸಂನ ಲಕ್ಷಣವಾಗಿ ಕಾಣುತ್ತದೆ. ಬಹುಶಃ ರಂಗಾಯಣದ ಸಮಸ್ಯೆ ಇದೇ ಜಾಡಿನಲ್ಲಿ ಸಾಗುತ್ತಿದೆ. ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ಕೆಲವು ಐತಿಹ್ಯಗಳು ಹೇಗೆ ತಮ್ಮದೇ ಆದ ಪ್ರಭಾವಳಿಗಳನ್ನು ನಿರ್ಮಿಸಿದೆಯೋ ಹಾಗೆಯೇ ಕೆಲವು ಸಂಸ್ಥೆಗಳು, ಕೆಲವು ಸಭಾಂಗಣಗಳು, ಕೆಲವು ಕಟ್ಟಡಗಳು ರಾಜ್ಯದ ಸಾಂಸ್ಕೃತಿಕ ಆಯಾಮಗಳನ್ನು ವಿಶ್ವದ ಜನತೆಗೆ ಪರಿಚಯಿಸುವ ಮಹತ್ತರ ಕಾರ್ಯನಿರ್ವಹಿಸಿವೆ . ಇಂತಹುದೇ ಒಂದು ಸಂಸ್ಥೆ ಮೈಸೂರಿನಲ್ಲಿ ಸ್ಥಾಪಿತವಾಗಿದ್ದು 1989ರಲ್ಲಿ. ಕರ್ನಾಟಕ ನಾಟಕ ರಂಗಾಯಣ ಎಂಬ ಸಂಸ್ಥೆ ಮೈಸೂರಿನ ಸಾಂಸ್ಕೃತಿಕ ಪರಿಸರದಲ್ಲಿ ಒಂದು ವಿಶಿಷ್ಟ ಸ್ಥಾನ ಗಳಿಸಿದೆ. ಅಷ್ಟೇ ಅಲ್ಲ ಆಧುನಿಕ, ಪಾರಂಪರಿಕ, ಜನಪದ ನಾಟಕಗಳಿಗೆ ಒಂದು ಕೇಂದ್ರ ಬಿಂದುವಾಗಿ ರಂಗಾಯಣ ಪರಿಣಮಿಸಿದೆ.
ಕನ್ನಡದ ಆಧುನಿಕ ರಂಗಭೂಮಿಯ ಭೀಷ್ಮ ಎಂದೇ ಹೆಸರಾದ ಶ್ರೀಯುತ ಬಿ.ವಿ. ಕಾರಂತರ ಕನಸಿನ ಕೂಸು ರಂಗಾಯಣ. ಕಾರಂತರ ದೃಷ್ಟಿಯಲ್ಲಿ ಕ್ರಿಯಾಶೀಲತೆ ರಂಗಭೂಮಿ ಮತ್ತು ಇತರ ಕಲೆಗಳ ಆತ್ಮವಾದರೆ ಚಲನಶೀಲತೆ ಅದರ ದಮನಿಗಳಾಗಿತ್ತು. ಕನ್ನಡ ರಂಗಭೂಮಿಯನ್ನು ಕನರ್ಾಟಕದಲ್ಲಿ ಮಾತ್ರ ಬೆಳೆಸಲು ಯತ್ನಿಸದೆ ದೇಶಾದ್ಯಂತ ಬೆಳೆಸುವ ಒಂದು ದೂರದೃಷ್ಟಿಯ ಚಿಂತನೆ ಕಾರಂತರಿಗಿತ್ತು. ಈ ಚಿಂತನೆಗೆ ಪೂರಕವಾಗಿ ಅಂದಿನ ರಾಜ್ಯ ಸಕರ್ಾರ ರಂಗಾಯಣದ ಸ್ಥಾಪನೆಗೆ ಅವಕಾಶ ನೀಡಿದಾಗ ಈ ಸಂಸ್ಥೆಯ ಧ್ಯೇಯೋದ್ದೇಶಗಳು ಸ್ಪಷ್ಟವಾಗಿದ್ದವು. ಕರ್ನಾಟಕದಲ್ಲಿ ಬೇರಾವ ಸಂಸ್ಥೆಯೂ ಆಯೋಜಸಿದಂತಹ ನಾಟಕಗಳನ್ನು, ನಾಟಕೋತ್ಸವಗಳನ್ನು ರಂಗಾಯಣ ಆಯೋಜಿಸಿದೆ. ಇಲ್ಲಿ ಪ್ರತಿ ವರ್ಷ ನಡೆಯುವ ಬಹುರೂಪಿ ನಾಟಕೋತ್ಸವ ಮತ್ತು ಮಕ್ಕಳಿಗಾಗಿ ಬೇಸಿಗೆಯಲ್ಲಿ ನಡೆಸುವ ಚಿನ್ನರ ಮೇಳ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದ್ದು ನಾಟಕ, ಕಲೆ ಮತ್ತು ಮನರಂಜನೆಯ ಮಾಧ್ಯಮಕ್ಕೆ ಹೊಸ ಆಯಾಮ ನೀಡಿದೆ. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ನಾಟಕವನ್ನು ಅಹೋರಾತ್ರಿ ಪ್ರದರ್ಶಿಸಿದ ಒಂದು ಹೊಸ ಪ್ರಯತ್ನಕ್ಕೂ ರಂಗಾಯಣ ನಾಂದಿ ಹಾಡಿದೆ. ಆದರೆ ಇತ್ತೀಚಿನ ಹಲವು ವರ್ಷಗಳಿಂದ ರಂಗಾಯಣ ನಾಟಕ ಮತ್ತು ಕಲೆಗಿಂತಲೂ ವ್ಯಕ್ತಿಗತ ಪ್ರತಿಷ್ಠೆ, ವೈಯ್ಯಕ್ತಿಕ ಹಿತಾಸಕ್ತಿ ಮತ್ತು ಸೈದ್ಧಾಂತಿಕ ಸಂಘರ್ಷಗಳಿಗೆ ಹೆಸರಾಗಿದೆ.
ರಂಗಾಯಣದ ರಾಮಾಯಣಗಳು
ಆದರೆ ಒಂದು ಸರ್ಕಾರಿ ಅನುದಾನಿತ ಸಂಸ್ಥೆಯಾಗಿ ರಂಗಾಯಣ ಪೂರ್ಣ ಸ್ವಾಯತ್ತತೆಯನ್ನು ಪಡೆದಿಲ್ಲ. ಹಾಗೊಮ್ಮೆ ಸ್ವಾಯತ್ತತೆ ಪಡೆದರೂ ಸಹ ಈಗ ಕಾಣಲಾಗುತ್ತಿರುವ ಸೈದ್ಧಾಂತಿಕ ಸಂಘರ್ಷ ನಿಲ್ಲುವುದೂ ಇಲ್ಲ. ಕಾರಣ ಭಾರತದ ಸಂದರ್ಭದಲ್ಲಿ ಕಲೆ, ನಾಟಕ ಮತ್ತಿತರ ಸಾಂಸ್ಕೃತಿಕ ಪ್ರಕಾರಗಳು ಸದಾ ಭಿನ್ನತೆಯ ನಡುವೆಯೇ ಸಾಗುತ್ತವೆ. ಸಾಂಪ್ರದಾಯಿಕ, ಪಾರಂಪರಿಕ, ಆಧುನಿಕ, ಆಧುನಿಕೋತ್ತರ, ಪ್ರಗತಿಪರ ಹೀಗೆ ವಿಭಿನ್ನ ಲೇಬಲ್ಗಳನ್ನು ಹೊತ್ತು ತಿರುಗುವ ಕಲಾಪ್ರಪಂಚದಲ್ಲಿ ಭಿನ್ನ ನಿಲುವು, ಭಿನ್ನಾಭಿಪ್ರಾಯ ಮತ್ತು ವೈವಿಧ್ಯತೆ ಸಹಜ, ಸ್ವಾಭಾವಿಕ. ಆದರೂ ರಂಗಾಯಣದ ವೈಶಿಷ್ಟ್ಯವೆಂದರೆ ಕಳೆದ ಎರಡು ದಶಕಗಳಲ್ಲಿ ತನ್ನ ಜನಪರ ನಿಲುವನ್ನು ಕಾಪಾಡಿಕೊಂಡು ಬಂದಿದ್ದರೆ ಅದಕ್ಕೆ ಕಾರಣ ಈ ಸಂಸ್ಥೆಯನ್ನು ಪೋಷಿಸಿ, ಬೆಳೆಸಿ ಮುನ್ನಡೆಸಿರುವ ಕಲಾವಿದರು ಮತ್ತು ಅವರ ಕಲಾ ಬದ್ಧತೆ. ಇಂದಿಗೂ ರಂಗಾಯಣದ ಅಂಗಣದಲ್ಲಿ ಈ ಬದ್ಧತೆಗೆ ಕೊರತೆಯಿಲ್ಲ. ಅಥವಾ ಕಲಾ ಪ್ರತಿಭೆಗೆ, ನೈಪುಣ್ಯತೆಗೆ ಕೊರತೆ ಕಂಡುಬರುತ್ತಿಲ್ಲ. ರಂಗಾಯಣದ ನಿರ್ದೇಶಕರಾಗಿ ನೇಮಿಸಲ್ಪಡುವವರು ಸರ್ಕಾರದ ಮರ್ಜಿಗೆ ಒಳಪಟ್ಟಿದ್ದರೂ ಆಡಳಿತಾತ್ಮಕ ಹಾಗೂ ಹಣಕಾಸಿನ ಅಧಿಕಾರಗಳನ್ನು ನೀಡದೆ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.
ಮೈಸೂರಿನ ರಂಗಾಯಣದಲ್ಲಿ ಕಳೆದ ಎರಡು ದಶಕಗಳಿಂದ ಬೇರೂರಿರುವ ಕಲಾವಿದರ ತಂಡ, ಸಿಬ್ಬಂದಿ ವರ್ಗ ತನ್ನದೇ ಆದ ಪ್ರಾಬಲ್ಯವನ್ನೂ ಪಡೆದುಕೊಂಡಿದೆ. ನಿರ್ಧೇಶಕರ ನೇಮಕಾತಿಯಿಂದ ಹಿಡಿದು, ನಾಟಕೋತ್ಸವಗಳನ್ನು ಆಯೋಜಿಸುವವರೆಗೂ ವಿವಿಧ ನೆಲೆಗಳಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವ ಮಟ್ಟಿಗೆ ಇಲ್ಲಿ ಪ್ರಬಲ ಗುಂಪುಗಳು ಸೃಷ್ಟಿಯಾಗಿವೆ. ಈ ಬೆಳವಣಿಗೆಯನ್ನು ನಕಾರಾತ್ಮಕ ದೃಷ್ಟಿಯಿಂದಲೇ ನೋಡಬೇಕೆಂದಿಲ್ಲ. ಒಂದು ರೀತಿಯಲ್ಲಿ ಈ ಬೆಳವಣಿಗೆ ರಂಗಾಯಣದ ಮೂಲ ಧ್ಯೇಯಗಳನ್ನ ಉಳಿಸಿರುವುದೂ ಉಂಟು. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರದಲ್ಲಿ ರಂಗಾಯಣವನ್ನು ಸಂಘಾಯಣ ಮಾಡುವ ಪ್ರಯತ್ನಗಳು ನಡೆದಾಗ ಇದೇ ಪ್ರಬಲ ಗುಂಪುಗಳೇ ಕಲೆಯ ರಕ್ಷಣೆಗೆ ನಿಂತಿದ್ದನ್ನು ಮರೆಯುವಂತಿಲ್ಲ. ಈಗ ರಂಗಾಯಣವನ್ನು ಕಾಡುತ್ತಿರುವುದು ವರ್ಗಾಯಣದ ಸಮಸ್ಯೆ.
ರಂಗಾಯಣದ ಸ್ವಾಯತ್ತತೆಯನ್ನು ಉಳಿಸಿಕೊಂಡು ಸಂಸ್ಥೆಯನ್ನು ಅಧಿಕಾರಶಾಹಿಗಳ ಕಪಿಮುಷ್ಠಿಯಿಂದಜ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಸತತ ಹೋರಾಟ ನಡೆಯುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಏಕಪಕ್ಷೀಯ ನಿರ್ಧಾರ ಮತ್ತು ಹಠಮಾರಿತನವೇ ಪ್ರಸ್ತುತ ಬಿಕ್ಕಟ್ಟಿಗೆ ಕಾರಣ ಎಂದು ಆರೋಪಿಸಿರುವ ಪ್ರಗತಿಪರ ಸಂಘಟನೆಗಳು ಮತ್ತು ಸಾಹಿತಿ ಕಲಾವಿದರು, ರಂಗಾಯಣದಂತಹ ರಂಗಕ್ಷೇತ್ರವನ್ನು ಶಾಶ್ವತವಾಗಿ ಮುಚ್ಚಲು ಹುನ್ನಾರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಜಾಗತೀಕರಣ ಯುಗದಲ್ಲಿ ನಾಟಕ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದ್ದರೂ ರಂಗಾಯಣದ ಕಲಾವಿದರ ಶ್ರದ್ಧೆ ಮತ್ತು ಪರಿಶ್ರಮದಿಂದ ಮೈಸೂರಿನಲ್ಲಿ ನಾಟಕ ಪರಂಪರೆ ಇನ್ನೂ ಜೀವಂತವಾಗಿದೆ. ಕಲಾವಿದರ ಹತ್ತು ಹಲವು ಸಮಸ್ಯೆಗಳನ್ನು ಬಗೆಹರಿಸುವ ಬದಲು ಸಕರ್ಾರ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಕಲಾವಿದರ ಕ್ರಿಯಾಶೀಲತೆಯನ್ನು ನಾಶಪಡಿಸಲು ಮುಂದಾಗಿದೆ ಮತ್ತು ರಂಗಾಯಣದ ಪ್ರಗತಿಪರತೆಯನ್ನು ನಿರ್ವೀರ್ಯಗೊಳಿಸಿ ಸಂಘಾಲಜಿಯನ್ನು ಅಳವಡಿಸಲು ಯತ್ನಿಸುತ್ತಿರುವುದು ಸ್ಪಷ್ಟ. ಜಯಶ್ರೀ ಅವರು ನಿರ್ದೇಶಕರಾಗಿದ್ದಾಗಲೇ ಈ ಪ್ರಯತ್ನಗಳು ನಡೆದಿದ್ದು, ಹಾಲಿ ಬೆಳವಣಿಗೆಗಳು ಜಯಶ್ರೀ ಅವರ ಪದಚ್ಯುತಿಯೇ ಆಗಿದೆ ಎಂದು ರಂಗಾಯಣದ ಮಿತ್ರರೊಬ್ಬರು ಹೇಳಿರುವುದು ಸುಳ್ಳೇನಲ್ಲ.
ನಾಟಕ ಕಲೆಯನ್ನು ಪ್ರೋತ್ಸಾಹಿಸಿ, ಪೋಷಿಸಿ, ಬೆಳೆಸಲು ಉದ್ದೇಶಿಸಿ ಸ್ಥಾಪಿಸಲಾದ ರಂಗಾಯಣದ ವ್ಯಾಪ್ತಿ ಕೇವಲ ಮೈಸೂರಿಗೆ ಸೀಮಿತವಾಗಿಲ್ಲ. ಒಂದು ಸಾಂಸ್ಕೃತಿಕ ಸಂಸ್ಥೆಯಾಗಿ ರಂಗಾಯಣ ತನ್ನ ವಿವಿಧ ಆಯಾಮಗಳಲ್ಲಿ ರಾಜ್ಯಾದ್ಯಂತ ನಾಟಕ ಕಲೆಯನ್ನು ಬೆಳೆಸುವ ಸದುದ್ದೇಶದಿಂದ ಆರಂಭವಾದ ಒಂದು ರಿಪರ್ಟರಿ. ಹಾಗಾಗಿ ಅಕಾಡೆಮಿಕ್ ವಲಯದಿಂದ ಬಂದಂತಹ ರಂಗಾಯಣದ ನಿರ್ದೇಶಕರಿಗೆ ಇಲ್ಲಿ ಕ್ರಿಯಾಶೀಲತೆಯನ್ನು ಅಳವಡಿಸಿ ಉತ್ತಮ ನಾಟಕಗಳನ್ನು ಪ್ರದರ್ಶಿಸಲು ಅವಕಾಶ ಇರುತ್ತದೆ. ಆದರೆ ಕಳೆದ ಒಂದು ವರ್ಷದಲ್ಲಿ ಇಂತಹ ಯಾವುದೇ ಕ್ರಿಯಾಶೀಲತೆ ಇಲ್ಲಿ ಕಂಡುಬಂದಿಲ್ಲ. ಕಾರಣ ಹಲವು ಇರಬಹುದು. ಈಗ ವರ್ಗಾವಣೆಯಾಗಿರುವ ಕಲಾವಿದರನ್ನು ರಂಗಾಯಣದಿಂದ ಹೊರಗೆ ಕಳುಹಿಸಿದಲ್ಲಿ ರಂಗಾಯಣದ ವರ್ಚಸ್ಸಿಗೆ ಧಕ್ಕೆ ಉಂಟಾಗುತ್ತದೆ, ಕ್ರಿಯಾಶೀಲತೆ ಕುಂಠಿತವಾಗುತ್ತದೆ, ನಾಟಕ ರಂಗ ಸೊರಗಿಹೋಗುತ್ತದೆ ಎಂದೆಲ್ಲಾ ಆರೋಪಿಸಲಾಗುತ್ತಿದೆ. ಶಿವಮೊಗ್ಗ ಮತ್ತು ಧಾರವಾಡದ ರಂಗಾಯಣ ಸಂಸ್ಥೆಗೆ ಮೈಸೂರಿನಿಂದ ವರ್ಗಾವಣೆ ಮಾಡುವುದರ ಮೂಲಕ ಈ ಘಟಕಗಳನ್ನು ಉಪಕೇಂದ್ರಗಳನ್ನಾಗಿ ಪರಿವರ್ತಿಸಲು ಯತ್ನಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಇದಕ್ಕಿಂತಲೂ ಹೆಚ್ಚಾಗಿ ಈ ಕಲಾವಿದರ ಜಾಗದಲ್ಲಿ ಸಂಘಪರಿವಾರದವರನ್ನು ಕೂಡಿಸುವ ಮೂಲಕ ರಂಗಾಯಣದ ಕೇಸರೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಹುನ್ನಾರ ಕಾಣುತ್ತಿದೆ.
ರಂಗಭೂಮಿಯಲ್ಲಿ ಪ್ರಾದೇಶಿಕತೆ ಮತ್ತು ಸ್ಥಳೀಯ ಧೋರಣೆಗಳು ಹೆಚ್ಚಾಗಿ ಪ್ರಸ್ತುತವೆನಿಸುವುದಿಲ್ಲ. ಆದರೂ ತಮ್ಮ ನಟನಾ ಕೌಶಲ್ಯದ ಮೂಲಕ ಸಮಾಜದ ವಿಭಿನ್ನ ಸಮಸ್ಯೆಗಳಿಗೆ ನಾಟಕದ ಮೂಲಕ ವ್ಯಕ್ತಪಡಿಸುವ ತುಡಿತಗಳು ಸ್ಥಳೀಯ ಪರಿಸರದಿಂದ ಪ್ರಭಾವಿತವಾಗುತ್ತವೆ. ಮೈಸೂರಿನ ಕಲಾವಿದರನ್ನು ಬೇರೆಡೆಗೆ ವರ್ಗಾಯಿಸುವುದರಿಂದ ಕಲಾವಿದರಿಗೆ ಏನು ತೊಂದರೆಯಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸಿದಾಗ, ಕಲಾವಿದರನ್ನು ನೌಕರರೊಂದಿಗೆ ಸಮೀಕರಿಸಿ ನೋಡುವ ಧೋರಣೆ ಎದ್ದು ಕಾಣುತ್ತದೆ. ನಿಜ, ತಮ್ಮ ಕೌಶಲ್ಯವನ್ನು ಅನ್ಯರೊಡನೆ ಹಂಚಿಕೊಂಡು ರಂಗಭೂಮಿಯನ್ನು ಬೆಳೆಸುವ ಗುರುತರ ಹೊಣೆಗಾರಿಕೆ ಕಲಾವಿದರ ಮೇಲಿದೆ. ಆದರೆ ಈ ಹೊಣೆಗಾರಿಕೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ತಮ್ಮ ಮೂಲ ನೆಲೆಯಿಂದ ದೂರ ಹೋಗಿ ಸಾಧಿಸಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದರೆ ಈ ನೀತಿಯನ್ನು ಅನುಸರಿಸಿದರೆ, ರಂಗಾಯಣ ಒಂದು ಸ್ವತಂತ್ರ, ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಯಾಗಿ ಉಳಿಯುವುದಿಲ್ಲ. ಸರ್ಕಾರದ ಕೃಪಾಪೋಷಿತ ನಾಟಕ ಮಂಡಲಿಯಾಗಿಬಿಡುವ ಸಾಧ್ಯತೆಗಳಿರುತ್ತವೆ. ಕಲಾವಿದರ, ಪ್ರಗತಿಪರ ಸಂಘಟನೆಗಳ ಮತ್ತು ಸಾಹಿತಿಗಳ ವಿರೋಧವನ್ನು ಈ ದೃಷ್ಟಿಯಿಂದಲೇ ನೋಡಬೇಕಾಗುತ್ತದೆ. ಇದು ವರ್ಗಾವಣೆಯಾಗಿರುವ ಹಲವು ಕಲಾವಿದರ ಪ್ರಶ್ನೆಯಲ್ಲ. ರಂಗಭೂಮಿಯ ಅಳಿವು ಉಳಿವಿನ ಪ್ರಶ್ನೆ. ಆಳುವ ವರ್ಗಗಳು ತಮ್ಮ ರಾಜಕೀಯ ಹಿತಾಸಕ್ತಿಗಳಿಗೆ ಅನುಸಾರವಾಗಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುತ್ತಾ ಹೋದರೆ ಬಹುಶಃ ಕಲೆ ಮತ್ತು ಸಂಸ್ಕೃತಿಯೂ ಸಹ ಆಡಳಿತಾತ್ಮಕ ಧೋರಣೆಗಳ ಆಗರವಾಗಿಬಿಡುವ ಸಾಧ್ಯತೆಗಳಿರುತ್ತವೆ. ರಂಗಾಯಣದ ಸಂಘಾಯಣ ರಾಮಾಯಣದಲ್ಲಿ ಈ ಅಂಶವನ್ನು ಸ್ಪಷ್ಟವಾಗಿ ಕಾಣಬಹುದು.
ನಾ ದಿವಾಕರ್ ನೇರ ನುಡಿ : ರಂಗಾಯಣದಲ್ಲಿ ಸಂಘಾಯಣ
ನಿಮಗೆ ಇವೂ ಇಷ್ಟವಾಗಬಹುದು…





0 Comments