ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಿವಾಕರ್ ನೇರ ನುಡಿ: ಮೂರು ವರ್ಷಗಳ ಕಮಲಾಕ್ರಸಿ

ನಾ ದಿವಾಕರ

ಇನ್ನು ಇಪ್ಪತ್ತು ವರ್ಷಗಳ ಕಾಲ ನಾವು ಕರ್ನಾಟಕವನ್ನು ಆಳುತ್ತೇವೆ. ಕರ್ನಾಟಕವನ್ನು ಗುಜರಾತ್ ಮಾಡುತ್ತೇವೆ. ಬೆಂಗಳೂರನ್ನು ಸಿಂಗಾಪುರ ಮಾಡುತ್ತೇವೆ. ರೈತರ ಬಾಳನ್ನು ಹಸನಾಗಿಸುತ್ತೇವೆ. ಎಂದೆಲ್ಲಾ ಘೋಷಣೆಗಳನ್ನು ಹೊತ್ತು ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಸರ್ಕಾರ ಸ್ಥಾಪಿಸಿದ ಯಡಿಯೂರಪ್ಪ ನೇತೃತ್ವದ ಭಾಜಪ ಸರ್ಕಾರ ಅಂತೂ ಇಂತೂ ಮೂರು ವರ್ಷಗಳ ಆಳ್ವಿಕೆ ಪೂರೈಸಿದೆ. ಪೂರೈಸಿದೆ ಎನ್ನುವದಕ್ಕಿಂತಲೂ ಈ ಸರ್ಕಾರ ಮೂರು ವರ್ಷ ಪೂರೈಸಲು ಅವಕಾಶ ನೀಡಲಾಗಿದೆ ಎಂದರೂ ತಪ್ಪೇನಿಲ್ಲ. ಏಕೆಂದರೆ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ಆಳ್ವಿಕೆಯೇ ಇರಲಿಲ್ಲ. ಏನಿದ್ದರೂ ಜನತೆಗೆ ಪುಗಸಟ್ಟೆ ಮನರಂಜನೆ ಮಾತ್ರ. ಸರ್ಕಾರ ರಚನೆ ಎಂದರೆ ತಮ್ಮ ಪಕ್ಷದ ಶಾಸಕರ ಬೆಂಬಲದಿಂದ ಮತ್ತು ಅಗತ್ಯ ಬಿದ್ದಲ್ಲಿ ಇತರೆ ಪಕ್ಷಗಳ ಶಾಸಕರ ಬಾಹ್ಯ-ಅಂತರಿಕ ಬೆಂಬಲದಿಂದ ಬಹುಮತ ನಿರೂಪಿಸಿ ಆಳ್ವಿಕೆ ನಡೆಸುವುದು ಎಂಬ ಪ್ರತೀತಿ ಇತ್ತು. ಆದರೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಈ ಪ್ರತೀತಿಗೆ ಹೊಸ ಭಾಷ್ಯವನ್ನೇ ಬರೆದಿದ್ದೆ.

ವಿವಿಧ ಪಕ್ಷಗಳನ್ನು ಸೇರಿಸಿಕೊಂಡು ಸಮ್ಮಿಶ್ರ ಸರ್ಕಾರ ರಚಿಸುವ ಆಧುನಿಕ ರಾಜಕೀಯ ಪರಂಪರೆಗೂ ಭಿನ್ನವಾದ ಕಮಲಾಕ್ರಸಿ ವ್ಯವಸ್ಥೆಗೆ ಯಡಿಯೂರಪ್ಪ ನಾಂದಿ ಹಾಡಿರುವುದು ಈ ಮೂರು ವರ್ಷಗಳ ಅದ್ಭುತ ಸಾಧನೆ. ವಿರೋಧ ಪಕ್ಷಗಳ ಶಾಸಕರನ್ನು ತಮ್ಮ ಪಕ್ಷಕ್ಕೆ ಸೆಳೆಯುವುದು, ಪಕ್ಷಾಂತರ ನಿಷೇಧ ಕಾಯ್ದೆಯಿಂದ ತಪ್ಪಿಸಿಕೊಳ್ಳಲು ಶಾಸಕರ ಹಿಂಡನ್ನೇ ಸೇರಿಸಿಕೊಳ್ಳುವುದು ಇದು ಒಂದು ಕಾಲದಲ್ಲಿದ್ದ ರಾಜಕೀಯ ವ್ಯವಸ್ಥೆ. ಆದರೆ ಯಡಿಯೂರಪ್ಪನವರ ಸ್ಟೈಲೇ ಬೇರೆ. ಶಾಸಕರಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪುಸಲಾಯಿಸಿ,ಅವರನ್ನು ಖರೀದಿಸಿ, ಪ್ರಜೆಗಳ ಖರ್ಚಿನಲ್ಲಿ ಮರುಚುನಾವಣೆ ನಡೆಸಿ ತಮ್ಮ ಪಕ್ಷದಿಂದ ಚುನಾಯಿತರಾಗುವಂತೆ ಮಾಡುವ ಭ್ರಷ್ಟ ಕಮಲಾಕ್ರಸಿ ವ್ಯವಸ್ಥೆಗೆ ಸ್ಪಷ್ಟ ಬುನಾದಿ ಹಾಕಿದ್ದು ಯಡಿಯೂರಪ್ಪನವರ ಹೆಮ್ಮೆ, ಹಿರಿಮೆ, ಗರಿಮೆ. ಬಹುಶಃ ಮುಂಬರುವ ದಿನಗಳಲ್ಲಿ ಇದು ಎಲ್ಲ ಪಕ್ಷಗಳ ರಾಜಕೀಯ ನೀತಿಯಾಗಲಿಕ್ಕೂ ಸಾಕು.

ರಾಜಕೀಯ ಭ್ರಷ್ಟತೆಗೆ ಈ ಮಾರ್ಗ ಅನುಸರಿಸುತ್ತಲೇ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ರೀತಿಯಲ್ಲಿ ನಡೆಯುತ್ತಿರುವ ಹಗರಣಗಳು ಭಾಜಪ ಸರ್ಕಾರದ ಮತ್ತೊಂದು ಸಾಧನೆ. ಮೂರು ವರ್ಷಗಳ ಭಾಜಪ ಆಳ್ವಿಕೆಯಲ್ಲಿ ಭೂ ಹಗರಣಗಳಿಗೆ ಪಾರವೇ ಇಲ್ಲ. ಗಣಿ ಉದ್ದಿಮೆಯಂತೂ ಹಗರಣಗಳ ಉದ್ದಿಮೆಯೇ ಆಗಿಹೋಗಿದೆ. ಗಣಿಗಾರಿಕೆ ಮತ್ತು ಅಕ್ರಮ ಎರಡೂ ಸಮಾನಾರ್ಥಕ ಪದಗಳಾಗಿಬಿಟ್ಟಿವೆ. ಆದರೂ ಗಣಿ ಧಣಿಗಳು ಭಾಜಪ ಸರ್ಕಾರದ ಕೃಪಾಕಟಾಕ್ಷದಿಂದ ತಲೆ ಎತ್ತಿ ತಿರುಗಾಡುತ್ತಿದ್ದಾರೆ. ಈ ಅಕ್ರಮ ಗಣಿಗಾರಿಕೆಯ ಅಕ್ರಮ ಸಂತಾನಗಳೇ ರಾಜ್ಯದ ರಾಜಕೀಯವನ್ನೂ ನಿಯಂತ್ರಿಸುತ್ತಿವೆ. ಭಾಜಪ ಸರ್ಕಾರದ ಸುಭದ್ರತೆಗಾಗಿ ಹಲವಾರು ಚುನಾವಣೆಗಳು ನಡೆದಿದ್ದು ಈ ಎಲ್ಲ ಚುನಾವಣೆಗಳಲ್ಲೂ ಹರಿದಿದ್ದು ಅಕ್ರಮ ಗಣಿಗಾರಿಕೆಯ ಹಣವೇ.

ಇಷ್ಟೆಲ್ಲಾ ನಡೆಯುತ್ತಿದ್ದರೂ ಮಾನ್ಯ ಮುಖ್ಯಮಂತ್ರಿಗಳು ತಮ್ಮ ಸರ್ಕಾರವನ್ನು ಸ್ವಚ್ಚ, ಪರಿಶುದ್ಧ ಎಂದು ಬಣ್ಣಿಸಲು ಕಾರಣ, ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಹಗರಣಗಳು. ನಾವೇನು ಮಹಾ ಮಾಡಿದ್ದೇವೆ, ಅವರು ನಮಗಿಂತಲೂ ಹೆಚ್ಚು ನುಂಗಿ ನೀರು ಕುಡಿದಿದ್ದಾರೆ ಎಂಬ ಸೋಗು ಇಂದಿನ ರಾಜಕಾರಣದ ಲಾಂಛನದಂತೆ ಆಗಿಬಿಟ್ಟಿದೆ. ಯಡಿಯೂರಪ್ಪನವರ ಮಾತಿನಲ್ಲಿ ಸತ್ಯವಿದೆ ನಿಜ, ಆದರೆ ಮತ್ತೊಬ್ಬರ ತಪ್ಪು ತಮ್ಮ ತಪ್ಪುಗಳನ್ನು ಸಮರ್ಥಿಸುವುದಿಲ್ಲ ಎಂಬ ಸೂಕ್ಷ್ಮವನ್ನು ಮುಖ್ಯಮಂತ್ರಿಗಳು ಗ್ರಹಿಸಿಯೇ ಇಲ್ಲ. ರೈತರ ಆತ್ಮಹತ್ಯೆ, ಆಶ್ರಯ ಮನೆಗಳ ನಿರ್ಲಕ್ಷ್ಯ, ರೈತರ ಸಮಸ್ಯೆಗಳು, ಪ್ರವಾಹ ಪೀಡಿತರ ಸಮಸ್ಯೆಗಳು, ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳು, ಸಾಂಸ್ಕೃತಿಕ ಆರಕ್ಷಕರ ಆರ್ಭಟ, ಎಲ್ಲೆಡೆ ಹೆಚ್ಚುತ್ತಿರುವ ಪೊಲೀಸ್ ದೌರ್ಜನ್ಯ (ಕೊಪ್ಪಳ-ಹಾವೇರಿ ಇತ್ಯಾದಿ), ಕೋಟ್ಯಾಂತರ ರೂಗಳ ಹಗರಣಗಳು, ಬೆಳೆಯುತ್ತಿರುವ ರಿಯಲ್ ಎಸ್ಟೇಟ್ ಮಾಫಿಯ ಇವೆಲ್ಲವೂ ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದ ಜನತೆ ಕಂಡಿರುವ ನಗ್ನ ಸತ್ಯ.

ಇಷ್ಟು ಸಾಲದೆಂಬಂತೆ ಜನಪ್ರತಿನಿಧಿಗಳ ನೈತಿಕ ಅಧಃಪತನ. ಜನತೆಗೆ ಯಾರಿಗೆ ಮತ ನೀಡುವುದು ಎಂಬುದೇ ಮುಖ್ಯ ಪ್ರಶ್ನೆಯಾಗಿದೆ. ತಾವು ಒಂದು ಪಕ್ಷದ ಸಿದ್ಧಾಂತ(?), ನಿಲುವುಗಳನ್ನು ನೋಡಿ ಮತ ಚಲಾಯಿಸಿ ಚುನಾಯಿಸಿದ ವ್ಯಕ್ತಿ ಮರುಕ್ಷಣ ಮತ್ತೊಂದು ಬ್ಯಾನರ್ನಡಿ ರಾರಾಜಿಸುತ್ತಿರುವುದನ್ನು ಕಂಡು ಮತದಾರ ದಿಗ್ಭ್ರಾಂತನಾಗಿದ್ದಾನೆ, ಗೊಂದಲಕ್ಕೀಡಾಗಿದ್ದಾನೆ. ಯಾವ ಶಾಸಕ ಯಾವ ಕ್ಷಣದಲ್ಲಿ ಯಾವ ಪಕ್ಷಕ್ಕೆ ಹಾರುತ್ತಾನೋ ಎಂದು ತಿಳಿಯದ ಪರಿಸ್ಥಿತಿಯಲ್ಲಿ ನಾಡ ಜನತೆ ಬಾಳುತ್ತಿದ್ದಾರೆ. ತಮ್ಮ ಅಮೂಲ್ಯ ಮತಗಳನ್ನು ಕಸದ ಬುಟ್ಟಿಗೆ ಎಸೆದು, ಮಾರುಕಟ್ಟೆಯಲ್ಲಿ ಖರೀದಿಗೆ ಸಿದ್ಧವಾಗಿ ನಿಂತಿರುವ ಶಾಸಕರ ದಂಡು ಜನತೆಯಲ್ಲಿ ಭ್ರಮನಿರಸನ ಮೂಡಿಸಿದೆ.

ಭಾಜಪದ ಆಳ್ವಿಕೆಯಲ್ಲಿ ಅಲ್ಪಸಂಖ್ಯಾತರು ಮಾತ್ರ ದಾಳಿಗೆ ಒಳಗಾಗಿಲ್ಲ. ರಾಜ್ಯದ ಪ್ರಜ್ಞಾವಂತ ಜನತೆ, ರಾಜ್ಯದ ಪ್ರಜಾತಂತ್ರ ರಾಜಕೀಯ ವ್ಯವಸ್ಥೆ, ಸಾಂವಿಧಾನಿಕ ಮೌಲ್ಯಗಳು, ರಾಜಕೀಯ ನೈತಿಕತೆ, ಸಾಮಾಜಿಕ ಹೊಣೆಗಾರಿಕೆ, ಆರ್ಥಿಕ ಶಿಸ್ತುಬದ್ಧತೆ ಇವೆಲ್ಲವೂ ದಾಳಿಗೊಳಗಾಗಿವೆ. ಜನರಿಂದ, ಜನರಿಗಾಗಿ ಇರುವ ಒಂದು ರಾಜಕೀಯ ವ್ಯವಸ್ಥೆಯನ್ನು ಹಣದಿಂದ, ಹಣಕ್ಕಾಗಿ ಬಳಸಿಕೊಂಡು ಕರ್ನಾಟಕದ ಜನತೆಯ ಭವಿಷ್ಯದ ಮೇಲೆ ನಿರ್ಮಿಸಿರುವ ಕಮಲಾಕ್ರಸಿಯ ಸೌಧ, ಬಹುಶಃ ಕರ್ನಾಟದ ರಾಜಕಾರಣವನ್ನು ಶಾಶ್ವತವಾಗಿ ನಿರ್ನಾಮ ಮಾಡುತ್ತದೆ. ಇದು ಭಾಜಪದ ಮೂರು ವರ್ಷಗಳ ಕೊಡುಗೆ.

‍ಲೇಖಕರು G

1 June, 2011

ನಿಮಗೆ ಇವೂ ಇಷ್ಟವಾಗಬಹುದು…

2 Comments

  1. raju hegade

    sir, jana antavaranne by electionnalli gellisisiddaare.andare jana kuuda idaralli shaamilagiddaare.nanaguu idara bagge vishaadavie.aadare naavu yochisuva kramave tappaagirabahude?–raju hegde

  2. ಸಿ ಪಿ ನಾಗರಾಜ

    ದೇವರು – ಧರ್ಮ – ಜಾತಿಗಳ ಹೆಸರಿನಲ್ಲಿ ಏನನ್ನೂ ಬೇಕಾದರೂ ಮಾಡಿ ಅರಗಿಸಿಕೊಳ್ಳಬಲ್ಲ ಸಮಾಜದಲ್ಲಿ ಯಾವುದೇ ಬಗೆಯ ಮಾನವೀಯ ನಡೆನುಡಿಗಳನ್ನಾಗಲಿ ಇಲ್ಲವೇ ಕಾನೂನಿನ ಚೌಕಟ್ಟಿಗೆ ಒಳಪಟ್ಟ ಸಾಮಾಜಿಕ ವರ್ತನೆಗಳನ್ನಾಗಲಿ ಕಾಣಲು ಸಾಧ್ಯವಿಲ್ಲ .ಆದುದರಿಂದಲೇ ನಾ .ದಿವಾಕರ್ ಹೇಳಿರುವಂತೆ ” ರಾಜ್ಯದ ಪ್ರಜಾತಂತ್ರ ರಾಜಕೀಯ ವ್ಯವಸ್ಥೆ, ಸಾಂವಿಧಾನಿಕ ಮೌಲ್ಯಗಳು, ರಾಜಕೀಯ ನೈತಿಕತೆ, ಸಾಮಾಜಿಕ ಹೊಣೆಗಾರಿಕೆ, ಆರ್ಥಿಕ ಶಿಸ್ತುಬದ್ಧತೆ ಇವೆಲ್ಲವೂ ದಾಳಿಗೊಳಗಾಗಿವೆ “.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading