ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಿವಾಕರ್ ನೇರ ನುಡಿ: ಭ್ರಷ್ಟ ವ್ಯವಸ್ಥೆಯ ಅಕ್ರಮ ಸಂತಾನಗಳು

ಭಾರತ ಮಾತೆಯ ಜಾತಕ ಎಂದೇನಾದರೂ ಇದ್ದರೆ ಅದನ್ನು ನೋಡಿದ ಜ್ಯೋತಿಷಿ ಈ ದೇಶಕ್ಕೆ ಜನ್ಮತಃ ಕುಜದೋಷವಿದೆ, ಜೀವನ ಪರ್ಯಂತ ಶನಿಕಾಟ ಇರುತ್ತದೆ ಎಂದು ಹೇಳಬಹುದು. ಒಬ್ಬ ವಾಸ್ತು ತಜ್ಞರಿಗೆ ಭಾರತದ ಭೂಪಟವನ್ನು ತೋರಿಸಿದರೆ, ಈ ದೇಶದ ವಾಸ್ತು ಕಿಂಚಿತ್ತೂ ಸರಿಯಾಗಿಲ್ಲ ಎಲ್ಲವೂ ತದ್ವಿರುದ್ಧವಾಗಿದೆ ಎಂದು ಹೇಳಬಹುದು. ಒಬ್ಬ ವೈದ್ಯನ ಬಳಿ ಭಾರತಮಾತೆಯನ್ನು ಚಿಕಿತ್ಸೆಗಾಗಿ ಕೊಂಡೊಯ್ದರೆ, ಈ ೬೩ ವರ್ಷದ ವೃದ್ಧೆಗೆ ಯಾವ ಅಂಗಾಂಗಗಳೂ ಸರಿಯಾಗಿಲ್ಲ, ಎಲ್ಲವೂ ಅಸ್ತವ್ಯಸ್ತವಾಗಿವೆ ಎಂದು ಸಕಲಾಂಗ ಮರುಜೋಡನೆಯನ್ನೇ ಮಾಡಲು ನಿರ್ಧರಿಸಬಹುದು. ಒಬ್ಬ ತತ್ವಶಾಸ್ತ್ರಜ್ಞ ಭಾರತಮಾತೆಯನ್ನು ವಿಶ್ಲೇಷಿಸಿದರೆ ಆಕೆಯ ಪೂರ್ವಜನ್ಮದ ಫಲಗಳೇ ಸರಿಯಾಗಿಲ್ಲ ಎಂದು ಕರ್ಮಸಿದ್ಧಾಂತವನ್ನು ಉಲ್ಲೇಖಿಸಿ ಭರತಮಾತೆಯ ಭವಿಷ್ಯವನ್ನು ಕರಾಳವಾಗಿ ಚಿತ್ರಿಸಬಹುದು. ಇವೆಲ್ಲಾ ಅಮೂರ್ತ ಕಲ್ಪನೆಗಳಷ್ಟೆ. ಈಗಾಗಲೇ ಈ ಅಭಿಪ್ರಾಯಗಳು ವಿಭಿನ್ನ ಆಯಾಮಗಳಲ್ಲಿ ವ್ಯಕ್ತವಾಗಿರುವುದೂ ಅಷ್ಟೇ ಸತ್ಯ. ಆದರೆ ಸ್ವತಂತ್ರ ಭಾರತದ ಸಾರ್ವಭೌಮ ಪ್ರಜೆಯೊಬ್ಬನಲ್ಲಿ ಈ ಕುರಿತು ಪ್ರಸ್ತಾಪಿಸಿದಾಗ ಆ ವ್ಯಕ್ತಿ, ಯಾವ ಭಾರತಮಾತೆಯನ್ನು ಕುರಿತು ಕೇಳುತ್ತಿದ್ದೀರಿ ಎಂದು ಕೇಳಿದರೂ ಅಚ್ಚರಿಯೇನಿಲ್ಲ. ಏಕೆಂದರೆ ಇದು ನಮ್ಮ ದೇಶ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲಾಗದ ಪರಿಸ್ಥಿತಿಯನ್ನು ಈ ದೇಶ ತಲುಪಿದೆ. ಮತ್ತೊಂದೆಡೆ ನೂರು ಕೋಟಿ ಜನಗಳ ದೇಶದಲ್ಲಿ ಎರಡು ಭರತಮಾತೆಯರಿದ್ದಾರೆ.

ಈ ಕಪೋಲ ಕಲ್ಪಿತ ಲೋಕದಿಂದ ವಾಸ್ತವಲೋಕಕ್ಕೆ ಬಂದು ನೋಡಿದಾಗ, ಒಬ್ಬ ಸಾಮಾನ್ಯ ಪ್ರಜೆಯಲ್ಲಿ ಉಂಟಾಗಿರುವ ಭ್ರಮನಿರಸನವನ್ನು ಗ್ರಹಿಸಬಹುದು. ಇದು ಸಹಜವೂ ಹೌದು. ಇಂದು ಪ್ರತಿಯೊಬ್ಬ ಭಾರತೀಯನ ಮುಂದಿರುವುದು ಕೆಲವೇ ಆಯ್ಕೆಗಳು. ಒಂದು ಭ್ರಮನಿರಸನ ಹೊಂದಿ, ಇರುವ ವ್ಯವಸ್ಥೆಯನ್ನೇ ಹೇಗೋ ಒಪ್ಪಿಕೊಂಡು ತನ್ನ ಪಾಡಿಗೆ ತಾನಿರುವುದು. ಅಥವಾ ವ್ಯವಸ್ಥೆಯ ಲೋಪದೋಷಗಳನ್ನು ವಿರೋಧಿಸುತ್ತಾ ತನ್ನ ಜೀವವನ್ನೇ ಒತ್ತೆಯಿಟ್ಟು ಪ್ರಭುತ್ವದ ಕೆಂಗಣ್ಣಿಗೆ ಗುರಿಯಾಗಿ ಜೀವನಪರ್ಯಂತ ಆಳ್ವಿಕರ ಸರ್ಪಗಾವಲಿನಲ್ಲಿ ಭೀತಿಯಿಂದಲೇ ಬದುಕುವುದು. ಇನ್ನೂ ಒಂದು ಮಾರ್ಗವೆಂದರೆ ಹೋರಾಟದ ಮಾರ್ಗ ಅನುಸರಿಸಿ ಹಿಂಸೆಯ ಚೌಕಟ್ಟಿನಲ್ಲಿ ನಿಶ್ಯೇಷವಾಗುವುದು. ಈ ಮೂರೂ ಆಯಾಮಗಳ ನಡುವೆಯೇ ಬದುಕುತ್ತಿರುವ ಸಾಮಾನ್ಯ ಭಾರತೀಯನಿಗೆ ದಿಗಂತದಂಚಿನಲ್ಲಿ ಆಶಾದೀಪವೊಂದು ಮಿನುಗುತ್ತಿರುವುದು ಕಂಡಲ್ಲಿ ದೇಶಕ್ಕೆ ಭವಿಷ್ಯವಿದೆ ಎಂದು ಭಾವಿಸಬಹುದು.

ನಿರಾಶೆಯ ದನಿಯಲ್ಲ

ಇವೆಲ್ಲವೂ ನಿರಾಶೆಯ ದನಿಯ ದ್ಯೋತಕ ಎಂದು ಹೀಗಳೆಯಬಹುದು. ಆದರೆ ತಮ್ಮ ಆದರ್ಶಪ್ರಾಯ ಸಮಾಜದ ಕನಸುಗಳನ್ನು ಹೊತ್ತ ದೇಶದ ಅಲ್ಪ ಸಂಖ್ಯೆಯ ಜನತೆಯನ್ನು ಹೊರತುಪಡಿಸಿದರೆ, ಉಳಿದಂತೆ ಈ ನಿರಾಶೆಯ ದನಿ ಎದ್ದುಕಾಣುವುದಂತೂ ಸತ್ಯ. ಒಂದೆಡೆ ನವ ಉದಾರವಾದ ಸಮಾಜದ ಎಲ್ಲ ಸ್ತರದ ಸಮುದಾಯಗಳಿಗೆ ಮೇಲ್‌ಚಲನೆಯ ಅವಕಾಶಗಳನ್ನು ಸೃಷ್ಟಿಸುತ್ತಿರುವಂತೆಯೇ ಮತ್ತೊಂದೆಡೆ, ಸಮಾಜದಲ್ಲಿ ಸ್ವಾಭಾವಿಕವಾಗಿ ಮೂಡಬಹುದಾದ ಸ್ಥಾಪಿತ ವ್ಯವಸ್ಥೆಯ ವಿರುದ್ಧದ ದನಿಗಳನ್ನು ತಣ್ಣಗಾಗಿಸುತ್ತಿದೆ. ೧೯೭೦-೮೦ರ ದಶಕಗಳಿಗೆ ಹೋಲಿಸಿದರೆ ಅಂದಿನ ಚಳುವಳಿಗಳ ಕಾವು, ಆಕ್ರೋಶ ಎಲ್ಲವೂ ಮಾಯವಾಗಿ ಹತಾಶ ಮನೋಭಾವ ಎಲ್ಲೆಡೆ ಪಸರಿಸುತ್ತಿದೆ. ಚಳುವಳಿಗಳು ಹುಟ್ಟುತ್ತಿಲ್ಲ ಎಂದು ಹೇಳಲಾಗುವುದಿಲ್ಲ. ಆದರೆ ದಿನನಿತ್ಯ ಹುಟುತ್ತಿರುವ ಪ್ರತಿಭಟನಾ ದನಿಗಳು ತಾರ್ಕಿಕ ಅಂತ್ಯ ತಲುಪುತ್ತಿಲ್ಲ. ಅಥವಾ ತಲುಪಲು ಆಳ್ವಿಕರು ಅವಕಾಶವನ್ನೇ ನೀಡುತ್ತಿಲ್ಲ. ಚಳುವಳಿಗಳ ಹುಟ್ಟು ಸಾವುಗಳೂ ಆಳ್ವಿಕರು ಸೃಷ್ಟಿಸುವ ವ್ಯವಸ್ಥೆಯಲ್ಲೇ ಇರುವ ಮೂಲಭೂತ ದ್ವಂದ್ವಗಳ ಸುತ್ತ ಸುತ್ತುತ್ತಿರುತ್ತವೆ.

ಪ್ರಸ್ತುತ ಭಾರತದ ಸನ್ನಿವೇಶವನ್ನೇ ನೋಡೋಣ. ಕಳೆದ ಎರಡು ಮೂರು ವರ್ಷಗಳಲ್ಲಿ ಭಾರತದ ಜನಸಾಮಾನ್ಯರು ಎದುರಿಸಿರುವ ಸಮಸ್ಯೆಗಳು ಎಷ್ಟು ವೈವಿಧ್ಯಮಯವಾಗಿವೆ. ಈ ಸಮಸ್ಯೆಗಳನ್ನು ಎದುರಿಸಿ ರೂಪುಗೊಂಡಿರುವ ಹೋರಾಟಗಳೂ ಅಷ್ಟೇ ವೈವಿಧ್ಯಮಯವಾಗಿವೆ. ಕೋಮುವಾದ, ಭಯೋತ್ಪಾದನೆ, ಮೂಲಭೂತವಾದ, ಜಾತಿ ಸಂಘರ್ಷಗಳು, ರಾಜಕೀಯ ಭ್ರಷ್ಟಾಚಾರ, ಅಧಿಕಾರಶಾಹಿಯ ಅಟ್ಟಹಾಸ, ಚುನಾವಣಾ ಅಕ್ರಮಗಳು, ಔದ್ಯಮಿಕ ಅಕ್ರಮಗಳು, ಜಾತಿ ದೌರ್ಜನ್ಯಗಳು, ಮಾಧ್ಯಮಗಳ ಭ್ರಷ್ಟತೆ, ನ್ಯಾಯಾಂಗದಲ್ಲಿನ ಭ್ರಷ್ಟಾಚಾರ, ಕಾರ್ಯಾಂಗದ ವೈಫಲ್ಯಗಳು, ಧಾರ್ಮಿಕ-ಆಧ್ಯಾತ್ಮಿಕ ವ್ಯಕ್ತಿ-ಸಂಘಟನೆಗಳ ಭ್ರಷ್ಟತೆ, ಸಂವಿಧಾನದ ಉಲ್ಲಂಘನೆ, ಮಾನವ ಹಕ್ಕುಗಳ ದಮನ, ಪ್ರಜಾತಾಂತ್ರಿಕ ವ್ಯವಸ್ಥೆಯ ಅವಹೇಳನ ಹೀಗೆ ಸಮಸ್ಯೆಗಳ ಮಹಾಪೂರವನ್ನೇ ಎದುರಿಸಿದ್ದೇವೆ. ಈ ಎಲ್ಲ ಸಮಸ್ಯೆಗಳ ವಿರುದ್ಧವೂ ಹೋರಾಟ, ಪ್ರತಿಭಟನೆ, ಚಳುವಳಿ ನಡೆಯುತ್ತಲೇ ಇವೆ. ಆದರೆ ಯಾವುದೇ ಚಳುವಳಿ ಫಲಕಾರಿಯಾದಂತಿಲ್ಲ. ಕಾರಣ ಇಡೀ ವ್ಯವಸ್ಥೆಯನ್ನು ತನ್ನ ಕಬಂಧ ಬಾಹುಗಳಲ್ಲಿ ಬಂಧಿಸಿರುವ ನವ ಉದಾರವಾದದ ರಾಕ್ಷಸೀ ಪ್ರವೃತ್ತಿ, ಎಲ್ಲ ಚಳುವಳಿಗಳನ್ನೂ ನುಂಗಿಹಾಕಿ ಮುನ್ನಡೆಯುತ್ತಿದೆ. ನವ ಉದಾರವಾದದ ಈ ಪ್ರಾಬಲ್ಯಕ್ಕೆ ಚಳುವಳಿಗಳಲ್ಲಿನ ಸಮಗ್ರತೆಯ ಸ್ವರೂಪವೂ ಒಂದು ಕಾರಣವಾಗಿರಬಹುದು.

ಪ್ರತಿರೋಧದ ದಮನ

ಬಂಡವಾಳ ವ್ಯವಸ್ಥೆಯ ಆಧುನಿಕ ಉನ್ನತ ರೂಪವಾಗಿ ನವ ಉದಾರವಾದ ತನ್ನದೇ ಆದ ಆಕ್ರಮಣಕಾರಿ ನೀತಿಗಳ ಮೂಲಕವೇ ವ್ಯವಸ್ಥೆಯಲ್ಲಿನ ಸೂಕ್ಷ್ಮ ತರಂಗಗಳನ್ನು ನಾಶಗೊಳಿಸಿ, ಅಕ್ರಮ ವ್ಯವಹಾರಗಳಿಗೆ ಎಡೆಮಾಡಿಕೊಟ್ಟಿದೆ. ಬಂಡವಾಳ ಹೂಡಿಕೆ, ವಿದೇಶಿ ಬಂಡವಾಳದ ಒಳಹರಿವು ಮತ್ತು ಔದ್ಯಮಿಕ ಕ್ಷೇತ್ರದ ವಿಸ್ತರಣೆ ಇವುಗಳಿಂದಲೇ ಸಮಸ್ತ ಪ್ರಜೆಗಳ ಅಭ್ಯುದಯ ಸಾಧ್ಯ ಎಂಬ ಭ್ರಮೆಯನ್ನು ನವ ಉದಾರವಾದ ಸೃಷ್ಟಿಸಿದ್ದು, ಈ ಭ್ರಮೆಗೆ ದೇಶದ ಶ್ರಮಿಕ ವರ್ಗಗಳೂ ಬಲಿಯಾಗುವಂತೆ ಮಾಡಿದೆ. ಹಾಗಾಗಿಯೇ ಚಂದ್ರಭಾನ್ ಪ್ರಸಾದ್ ಅಂತಹ ದಲಿತ ವಿದ್ವಾಂಸರು ದಲಿತ ಬಂಡವಾಳಶಾಹಿಯನ್ನು ಕುರಿತು ಮಾತನಾಡುತ್ತಾರೆ. ಬಂಡವಾಳ ಹೆಚ್ಚಾದಷ್ಟೂ ಕ್ರೋಢೀಕೃತ ಸಂಪತ್ತು ಹೆಚ್ಚಾಗುತ್ತದೆ. ಸಂಪತ್ತಿನ ಕ್ರೋಢೀಕರಣ ನೈಸರ್ಗಿಕ ಸಂಪನ್ಮೂಲಗಳನ್ನು ನುಂಗಿ ನಡೆಯುವ ಒಂದು ಪ್ರಕ್ರಿಯೆಯಾದ್ದರಿಂದ ತನ್ನ ಪಥಸಂಚಲನಕ್ಕೆ ಅಡ್ಡಿಬರುವ ಎಲ್ಲವನ್ನೂ ತೊಡೆದುಹಾಕಿ ಮುನ್ನಡೆಯಲು ಹವಣಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಕ್ರೋಢೀಕೃತ ಸಂಪತ್ತಿನ ರಕ್ಷಣೆಯೇ ಆಳ್ವಿಕರ ಅಥವಾ ಪ್ರಭುತ್ವದ ಆದ್ಯತೆಯೂ ಆಗುತ್ತದೆ.

ಹಾಗಾಗಿ ಜನಸಾಮಾನ್ಯರಿಗೆ ವ್ಯಕ್ತಿಗತವಾಗಿ ಮೇಲ್ ಚಲನೆಯ ಅವಕಾಶಗಳನ್ನು ನೀಡುತ್ತಲೇ, ಬಂಡವಾಳ ವ್ಯವಸ್ಥೆಯ ಮತ್ತು ಈ ವ್ಯವಸ್ಥೆ ಸೃಷ್ಟಿಸುವ ಶ್ರೀಮಂತ ವರ್ಗಗಳ ಮೇಲ್ ಚಲನೆಯನ್ನು ಪ್ರತಿರೋಧಿಸುವ ಇದೇ ಜನಸಮುದಾಯಗಳನ್ನು ದಮನಿಸಲು ಪ್ರಭುತ್ವ ತನ್ನೆಲ್ಲಾ ಚಾಕಚಕ್ಯತೆಯನ್ನೂ ಬಳಸುತ್ತದೆ. ಪ್ರತಿರೋಧದ ದನಿ ಹೇಗೇ ಇದ್ದರೂ ದಮನಿಸುವ ವಿಧಾನ ಮತ್ತು ದಮನಿಸುವ ಉದ್ದೇಶ ಒಂದೇ ಆಗಿರುತ್ತದೆ. ಛತ್ತಿಸ್‌ಘಡ ಸರ್ಕಾರಕ್ಕೆ ಮಾವೋವಾದಿಗಳು ಪ್ರಥಮ ವೈರಿಗಳಾದರೆ, ಒರಿಸ್ಸಾ ಸರ್ಕಾರಕ್ಕೆ ವೇದಾಂತ ಕಂಪನಿಯ ವಿರುದ್ಧ ಹೋರಾಡುವ ಆದಿವಾಸಿಗಳು ವೈರಿಗಳಾಗುತ್ತಾರೆ. ಗುಜರಾತ್‌ನಲ್ಲಿ ಕೋಮವಾದವನ್ನು ವಿರೋಧಿಸುವವರು, ಕರ್ನಾಟಕದಲ್ಲಿ ಗಣಿ ಅಕ್ರಮಗಳನ್ನು ವಿರೋಧಿಸುವವರು, ಭಗವದ್ಗೀಗೆ ಅಭಿಯಾನವನ್ನು ವಿರೋಧಿಸುವವರು, ಪಶ್ಚಿಮ ಬಂಗಾಲದಲ್ಲಿ ಸಿಂಗೂರ್ ಟಾಟಾ ಘಟಕವನ್ನು ವಿರೋಧಿಸುವವರು, ರಾಷ್ಟ್ರಮಟ್ಟದಲ್ಲಿ ಅಣು ಶಕ್ತಿ ಉತ್ಪಾದನೆಯನ್ನು ವಿರೋಧಿಸುವವರು, ಭ್ರಷ್ಟಾಚಾರದ ವಿರುದ್ಧ ಸೊಲ್ಲೆತ್ತುವವರು ಎಲ್ಲರೂ ಪ್ರಭುತ್ವದ ದೃಷ್ಟಿಯಲ್ಲಿ ದಮನಿಸಬಹುದಾದ ವೈರಿಗಳಂತೆಯೇ ಕಾಣುತ್ತಾರೆ.

ಪ್ರಭುತ್ವದ ಈ ಧೀ ಶಕ್ತಿಯನ್ನು ಎದುರಿಸಿ ನಿಲ್ಲುವ ಅತ್ಯಧಿಕ ಧೀ ಶಕ್ತಿ ಜನಸಾಮಾನ್ಯರಲ್ಲಿದ್ದರೂ ಈ ಸಂದರ್ಭದಲ್ಲಿ ಹುಟ್ಟಿಕೊಳ್ಳುತ್ತಿರುವ ಚಳುವಳಿಗಳಲ್ಲಿ ಈ ಶಕ್ತಿಯನ್ನು ಉಪಯೋಗಿಸಿಕೊಳ್ಳುವ ಸಾಮರ್ಥ್ಯ ಅಥವಾ ವಾಂಛೆ ಕಂಡುಬರುತ್ತಿಲ್ಲ. ಇದಕ್ಕೆ ಅತ್ಯುತ್ತಮ ನಿದರ್ಶನವೆಂದರೆ ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಆಂದೋಲನ ಮತ್ತು ಲೋಕಪಾಲ್ ಮಸೂದೆಯ ಪರವಾದ ಚಳುವಳಿ. ಭ್ರಷ್ಟಾಚಾರ ರಾಜಕೀಯ ವ್ಯವಸ್ಥೆಯಲ್ಲಿ, ಅಧಿಕಾರಶಾಹಿಯಲ್ಲಿ, ಕಾರ್ಯಾಂಗ ನ್ಯಾಯಾಂಗದಲ್ಲಿ ಮಾತ್ರ ಅಡಕವಾಗಿದೆ ಎಂದು ಭಾವಿಸುವ ಈ ಚಳುವಳಿಗಳು ಕಪ್ಪುಹಣ, ಸ್ವಿಸ್ ಬ್ಯಾಂಕ್‌ಗಳ ಬಗ್ಗೆ ಮಾತನಾಡುತ್ತವೆಯೇ ಹೊರತು, ಭಾರತ ಮಾತೆಯ ಗಜ ಗರ್ಭದಲ್ಲೇ ಅಡಗಿರುವ ಅಪಾರ ಪ್ರಮಾಣದ ಅಕ್ರಮ ನಿಧಿಯನ್ನು ಕುರಿತು ಮಾತನಾಡುವುದೇ ಇಲ್ಲ. ಪದ್ಮನಾಭ ದೇವಾಲಯ, ಸತ್ಯಸಾಯಿ ಟ್ರಸ್ಟ್‌ಗಳಲ್ಲಿ ದೊರೆತಿರುವ ಸಂಪತ್ತಿನ ಪ್ರಮಾಣ ನೋಡಿದರೆ ನಮ್ಮ ದೇಶದಲ್ಲಿಯೇ ಎಷ್ಟು ಕಪ್ಪುಹಣ ಸಂಗ್ರಹವಾಗಿದೆ ಎಂದು ಅಂದಾಜು ಮಾಡಬಹುದು.

ಗುರುವಾಯೂರು, ತಿರುಪತಿ, ಆದಿಚುಂಚನಗಿರಿ, ಉಡುಪಿ, ಧರ್ಮಸ್ಥಳ, ಕಂಚಿ, ಶ್ರೀರಂಗಂ, ಶೃಂಗೇರಿ, ಶ್ರೀ ರವಿಶಂಕರ್ ಗುರೂಜಿ, ಮಾತಾ ಅಮೃತಾನಂದಮಯಿ, ರಾಮದೇವ್, ಕರ್ನಾಟಕದಲ್ಲಿ ಜಾತ್ಯಾಧಾರಿತ ಮಠಗಳು ಹೀಗೆ ಧರ್ಮ ಆಧ್ಯಾತ್ಮದ ಹೆಸರಿನಲ್ಲಿ ಕಪ್ಪುಹಣದ ಕಣಜಗಳಾಗಿರುವ ಈ ಸಂಸ್ಥೆಗಳ ಆದಾಯ, ಸ್ಥಿರಾಸ್ತಿ, ಚರಾಸ್ತಿ, ಸಂಪತ್ತನ್ನು ಪ್ರಶ್ನಿಸುವವರೇ ಇಲ್ಲ. ಏಕೆಂದರೆ ಇವೆಲ್ಲವೂ ದೇವರ ಸ್ವತ್ತುಗಳಾಗಿಬಿಡುತ್ತವೆ. ಅಥವಾ ಜನಸಾಮಾನ್ಯರನ್ನು ತಲುಪುವ ಯೋಗ, ಧ್ಯಾನ, ಭಜನೆ ಇತ್ಯಾದಿಗಳ ಪಾಲಾಗಿಬಿಡುತ್ತವೆ. ಮತ್ತೊಂದೆಡೆ ಬಡಜನತೆಯ ಸಮಾಧಿಗಳ ಮೇಲೆ ತಮ್ಮ ಭವ್ಯ ಸೌಧಗಳನ್ನು ನಿರ್ಮಿಸಿಕೊಂಡು ಔದ್ಯಮಿಕ ಸಾಮ್ರಾಟರಾಗಿ ಮೆರೆಯುತ್ತಿರುವ ಉದ್ಯಮಪತಿಗಳ,ಜನತೆಗೆ ಮನರಂಜನೆ ಒದಗಿಸುವ ನೆಪದಲ್ಲಿ ಕೋಟ್ಯಾಂತರ ರೂಗಳ ಕಪ್ಪುಹಣವನ್ನು ಬಳಸಿಕೊಳ್ಳುತ್ತಿರು ಚಲನಚಿತ್ರೋದ್ಯಮವನ್ನು ಯಾರೂ ಪ್ರಶ್ನಿಸುವುದಿಲ್ಲ. ವಾಣಿಜ್ಯೋದ್ಯಮಿ, ಮಠೋದ್ಯಮಿ, ರಾಜಕೀಯೋದ್ಯಮಿ, ಕ್ರೀಡೋದ್ಯಮಿ, ನ್ಯಾಯೋದ್ಯಮಿ ಹೀಗೆ ದೇಶದ ಎಲ್ಲ ಪ್ರಮುಖ ಕ್ಷೇತ್ರಗಳೂ ಔದ್ಮಮೀಕರಣಗೊಳ್ಳುತ್ತಿವೆ. ಈ ಔದ್ಯಮೀಕರಣದ ಹಿಂದಿರುವ ಧೀ ಶಕ್ತಿಯೇ ನವ ಉದಾರವಾದ ಮತ್ತು ಬಂಡವಾಳದ ಹರಿವು. ಕರ್ನಾಟಕದ ಗಣಿ ಅಕ್ರಮಗಳು, ಪೋಸ್ಕೋ, ವೇದಾಂತಗಳ ಭೂಸ್ವಾಧೀನಗಳನ್ನು ನೋಡಿದರೆ ಜಾಗತಿಕ ಬಂಡವಾಳ ಸಮಾವೇಶದ ಪ್ರಭಾವ ಮತ್ತು ಪ್ರಾಬಲ್ಯವನ್ನು ಗ್ರಹಿಸಬಹುದು.

ವ್ಯವಸ್ಥೆಯ ಸಂತಾನಗಳು

ಭಾರತದ ಬಂಡವಾಳ ವ್ಯವಸ್ಥೆ ನವ ಉದಾರವಾದದ ಕೃಪೆಯಿಂದ ಸೃಷ್ಟಿಸಿರುವ ಅಕ್ರಮಗಳ ಸಂತಾನದ ರುದ್ರ ನರ್ತನವನ್ನು ನಾವಿಂದು ಕಾಣುತ್ತಿದ್ದೇವೆ. ೨ಜಿ ತರಂಗಾಂತರ, ಕಾಮನ್‌ವೆಲ್ತ್, ಆದರ್ಶ್, ಅಕ್ರಮ ಗಣಿಗಾರಿಕೆ, ಭೂ ಸ್ವಾಧೀನ, ಅರಣ್ಯ ನಾಶ, ನೈಸರ್ಗಿಕ ಸಂಪತ್ತಿನ ಲೂಟಿ ಇವೆಲ್ಲವೂ ಲೀಲಾಜಾಲವಾಗಿ ನಡೆದಿವೆ. ಈ ಅಕ್ರಮಗಳ ವಿರುದ್ಧ ನಡೆದ ಅನೇಕಾನೇಕ ಪ್ರತಿಭಟನೆಗಳು ನಿರಂತರ ಹೋರಾಟಗಳಾಗಿ ರೂಪುಗೊಂಡಿವೆ. ಆದರೆ ಆಳ್ವಿಕರ ಚಾಣಕ್ಯ ತಂತ್ರಗಳು ಈ ಹೋರಾಟಗಳ ಮೂಲ ಬೇರುಗಳನ್ನೇ ಅಲುಗಾಡಿಸುತ್ತಿವೆ. ನವ ಉದಾರವಾದ ಅಥವಾ ಭಾರತದ ಧರ್ಮ-ಆಧ್ಯಾತ್ಮ ಕೇಂದ್ರಗಳ ಅಕ್ರಮ ಸಂಪತ್ತನ್ನು ಕಿಂಚಿತ್ತೂ ಪ್ರಶ್ನಿಸದ ಅಣ್ಣಾ ಹಜಾರೆಯ ಭ್ರಷ್ಟಾಚಾರ ವಿರೋಧಿ ಅಂದೋಲನಕ್ಕೆ ಪ್ರತಿಯಾಗಿ ರಾಮದೇವ್ ಸೃಷ್ಟಿಯಾಗುತ್ತಾರೆ. ಕರ್ನಾಟಕದಲ್ಲಿ ಗದಗ್‌ನ ಪೋಸ್ಕೋ ವಿರುದ್ಧ ರೈತಸಮುದಾಯಗಳು ನಡೆಸಿದ ಹೋರಾಟವನ್ನು ಇಬ್ಭಾಗ ಮಾಡುವ ಕುಂತ್ರವೂ ನಡೆದಿದೆ. ಜನತೆಯ ಉಗ್ರ ಹೋರಾಟಗಳನ್ನು ದಮನಿಸಲು ಹಲವು ತಂತ್ರಗಳನ್ನು ಹೂಡುವ ಆಳ್ವಿಕರು ಇಲ್ಲಿ ಒಂದು ಧಾರ್ಮಿಕ ಮಠದ ನೇತೃತ್ವದ ಹೋರಾಟಕ್ಕೆ ಕೂಡಲೇ ಶರಣಾಗಿ ತಮ್ಮ ನಿರ್ಧಾರವನ್ನೇ ಬದಲಿಸುತ್ತಾರೆ.

ಇಲ್ಲಿ ಜನಸಾಮಾನ್ಯರ ಪ್ರತಿರೋಧದ ದನಿಗಳನ್ನು ಗುರುತಿಸದೆ, ಈ ದನಿಗಳ ಹಿಂದಿನ ಧಾರ್ಮಿಕ ಶಕ್ತಿಗಳ ಪ್ರಾಬಲ್ಯವನ್ನು ಗುರುತಿಸುವ ಮೂಲಕ, ಜನಪರ ಹೋರಾಟಗಳ ಆಯಾಮವನ್ನೇ ಬದಲಾಯಿಸುವ ಒಂದು ಹುನ್ನಾರವನ್ನು ಸ್ಪಷ್ಟವಾಗಿ ಕಾಣಬಹುದು. ಮಠಮಾನ್ಯಗಳ ನೇತೃತ್ವದಲ್ಲಿ ನಡೆಯುವ ಹೋರಾಟಗಳಿಗೆ ಸರ್ಕಾರ ಅಥವಾ ಪ್ರಭುತ್ವ ಶೀಘ್ರವಾಗಿ ಸ್ಪಂದಿಸುತ್ತದೆ ಎಂಬ ಭ್ರಮೆ ಮೂಡಿಸುವ ಮೂಲಕ, ಜನತೆಯ ಆಕ್ರೋಶದ ದನಿಗಳನ್ನು ಹತ್ತಿಕ್ಕುವ ಸೂಕ್ಷ್ಮ ತರಂಗಗಳನ್ನು ಇಲ್ಲಿ ಗಮನಿಸಬಹುದು. ಮಠಗಳ ಮೂಲ ಆಶಯಗಳು ಎಷ್ಟೇ ಪ್ರಾಮಾಣಿಕವಾಗಿದ್ದರೂ ಆಳ್ವಿಕರ ಆಶಯಗಳು ಸಂದೇಹಾಸ್ಪದವಾದುದೆಂದು ಸ್ಪಷ್ಟವಾಗಿ ಹೇಳಬಹುದು. ರಾಷ್ಟ್ರ ಮಟ್ಟದಲ್ಲೂ ಹತ್ತು ವರ್ಷಗಳ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಇರೋಮ್ ಶರ್ಮಿಳಾ ಮತ್ತು ಕೆಲವು ದಿನಗಳ ನಿರಶನ ನಡೆಸಿದ ಹಜಾರೆ ಹೋರಾಟಗಳನ್ನು ಪ್ರಭುತ್ವ ಪರಿಗಣಿಸಿದ ರೀತಿ ಪ್ರಶ್ನಾರ್ಹವೇ ಆಗಿದೆ. ಪ್ರಭುತ್ವದ ಈ ನೀತಿಯೇ ಪ್ರಸ್ತುತ ಹೋರಾಟಗಳ ಹೊಸ ಆಯಾಮಗಳನ್ನೂ ನಿರ್ಧರಿಸುತ್ತಿದ್ದು ನವ ಉದಾರವಾದದ ವಿರುದ್ಧ ಸ್ಪಷ್ಟ ಸೈದ್ಧಾಂತಿಕ ಹೋರಾಟ ರೂಪುಗೊಳ್ಳುವಲ್ಲಿ ಕೊರತೆ ಕಾಣುತ್ತಿದೆ.

ತತ್ಪರಿಣಾಮವಾಗಿ ಜನಸಾಮಾನ್ಯರು ಕ್ರಮೇಣ ಭ್ರಮನಿರಸನಕ್ಕೊಳಗಾದರೆ ಅಚ್ಚರಿಯೇನಿಲ್ಲ. ಆದರೆ ಎಲ್ಲೋ ಒಂದು ಕಡೆ ಆಶಾವಾದದ ಕಿಡಿಗಳು ಹೊತ್ತಿಕೊಳ್ಳುತ್ತಿವೆ ಎಂಬ ಆಶಯವನ್ನು ಪ್ರತಿಯೊಬ್ಬ ಭಾರತೀಯ ಪ್ರಜೆ ಹೊಂದಿರುವುದು ಅತ್ಯಗತ್ಯ. ಎಷ್ಟೇ ದಿಕ್ಕು ತಪ್ಪಿಸಿದರೂ ಕೊನೆಗೊಂದು ಅಂತಿಮ ಘಟ್ಟವನ್ನು ಮುಟ್ಟುವ ಸಂದರ್ಭ ಬಂದೇ ಬರುತ್ತದೆ. ಕವಲು ಹಾದಿಗಳಲ್ಲಿ ನಡೆದ ಚಳುವಳಿಗಳು ಎಲ್ಲೋ ಒಂದೆಡೆ ಪರಸ್ಪರ ಸಂಪರ್ಕಿಸುತ್ತವೆ. ಈ ಆಶಯದೊಂದಿಗೇ ಭವಿಷ್ಯದ ಆಶಾಕಿರಣಗಳನ್ನು ಕಾಣಬಹುದಲ್ಲವೇ. ಹೋರಾಟದ ಕಾವು ಅಡಗಿರಬಹುದು ಆದರೆ ಕಿಚ್ಚು ಅಡಗಿಲ್ಲ. ಹತಾಶೆಯ ದನಿಗಳು ಮೂಡಿರಬಹುದು ಆದರೆ ಆಕ್ರೋಶದ ದನಿಗಳು ಅಡಗಿಲ್ಲ. ಪ್ರಭುತ್ವ ಈ ಸತ್ಯವನ್ನು ಅರಿತಿರುವುದರಿಂದಲೇ ಸದಾ ಜಾಗೃತವಾಗಿರುತ್ತದೆ. ಆಧಾರ್‌ಗಳ ಮೂಲಕ. ಜನತೆಯೂ ಜಾಗೃತರಾಗಬೇಕು, ಐಕ್ಯತೆಯ ಆಧಾರದ ಮೇಲೆ.

 

 

‍ಲೇಖಕರು G

24 July, 2011

6 Comments

  1. ಸಿ ಪಿ ನಾಗರಾಜ

    ಶ್ರೀ ದಿವಾಕರ ಅವರಿಗೆ ,
    ನಿಮ್ಮ ಪ್ರತಿಯೊಂದು ಬರಹವೂ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಬಹಳ ಸ್ಪಷ್ಟವಾದ ತಿಳುವಳಿಕೆಯನ್ನು ನೀಡುತ್ತದೆ . ನೀವು ಸಂಕೀರ್ಣವಾದ ವಿಷಯಗಳ ಮತ್ತು ಘಟನೆಗಳ ಒಳಗಿನ ಎಲ್ಲಾ ಎಳೆಗಳನ್ನು ಬಿಡಿಬಿಡಿಯಾಗಿ ಗುರುತಿಸಿ ಹೇಳುವುದರಿಂದ , ಮೇಲುನೋಟಕ್ಕೆ ಒಳ್ಳೆಯದರಂತೆ ಕಾಣುವುದರ ಒಳಗೆ ಎಂತಹ ವಿಷ ಅಡಗಿದೆಯೆಂಬುದು ಓದುಗರಾದ ನಮಗೆ ಚೆನ್ನಾಗಿ ಮನದಟ್ಟಾಗುತ್ತದೆ . ಆದರೆ ಏನು ಮಾಡುವುದು ? ವೈಯಕ್ತಿಕ ನೆಲೆಯಲ್ಲಿ ಸಮಾಜಕ್ಕೆ ಮತ್ತು ಸಹಮಾನವರಿಗೆ ಕೇಡನ್ನು ಮಾಡದಂತೆ ನಡೆದುಕೊಳ್ಳಬಹುದಾದರೂ , ಕಣ್ಣಮುಂದೆ ನಡೆಯುತ್ತಿರುವ ಸಾವಿರಾರು ಬಗೆಯ ಅನ್ಯಾಯಗಳ ವಿರುದ್ಧ ಹೋರಾಟ ಮಾಡುವ ಶಕ್ತಿ ನಿಮ್ಮ ಬರಹಗಳ ಓದುಗರಾದ ನಮ್ಮಲ್ಲಿ ಬಹುತೇಕ ಮಂದಿಗಿಲ್ಲ . ಮಧ್ಯಮ ಇಲ್ಲವೇ ಮಧ್ಯಮ ಮೇಲು ವರ್ಗದಲ್ಲಿ ಸದ್ಯಕ್ಕೆ ಸುರಕ್ಷಿತವಾಗಿ ಬಾಳುತ್ತಿರುವ ನಮಗೆ ಸಾಮಾಜಿಕ ಅನ್ಯಾಯಗಳನ್ನು ಕುರಿತು ಮಾತನಾಡಬಲ್ಲ ಶಕ್ತಿಯಿದೆಯೇ ಹೊರತು ,ನೇರವಾಗಿ ಎದುರಿಸುವ ಶಕ್ತಿಯಿಲ್ಲ .ಏಕೆಂದರೆ ಅಧಿಕಾರದ ಗದ್ದುಗೆಯಲ್ಲಿ ಕುಳಿತು ಸಮಾಜಕ್ಕೆ ಹಾನಿ ಮಾಡುತ್ತಿರುವವರನ್ನು ಕಾಪಾಡಲು ಪೋಲಿಸ್ ಮತ್ತು ಕೋರ್ಟುಗಳ ಜತೆಗೆ ಧರ್ಮದ ಹಾಗೂ ಜಾತಿಸೇನೆಗಳು ಸನ್ನದ್ಧವಾಗಿವೆ .ಆದುದರಿಂದ ನೀವು ಹೇಳಿರುವಂತೆ ” ಇರುವ ವ್ಯವಸ್ಥೆಯನ್ನೇ ಹೇಗೋ ಒಪ್ಪಿಕೊಂಡು ತನ್ನ ಪಾಡಿಗೆ ತಾನಿರುವುದು ” ನನ್ನಂತಹವರ ಆಯ್ಕೆಯಾಗಿದೆ .

    • Divakara

      ಸಿ.ಪಿ. ನಾಗರಾಜ್ ಅವರೇ, ನಿಮ್ಮ ಶ್ಲಾಘನೆಗೆ ಧನ್ಯವಾದಗಳು. ನೀವು ಹೇಳಿರುವುದು ಅಕ್ಷರಶಃ ಸತ್ಯ. ಮಧ್ಯಮವರ್ಗಗಳಲ್ಲಿ ಈ ರೀತಿಯ ಆತಂಕ ಸಹಜವಾಗಿರುತ್ತವೆ. ಆದರೆ ನಮ್ಮ ಕಣ್ಣೆದುರು ನಡೆಯುತ್ತಿರುವ ದೌರ್ಜನ್ಯ,ಅನ್ಯಾಯಗಳನ್ನು ನೋಡಿ ಸುಮ್ಮನಿರಲು ಹೇಗೆ ಸಾಧ್ಯ. ದೇಶದ ಸಮಸ್ತ ಪ್ರಜೆಗಳಲ್ಲಿ, ಅದರಲ್ಲೂ ಬಡಜನತೆಯಲ್ಲಿ ಆಕ್ರೋಶ ಮಡುಗಟ್ಟಿದೆ. ಆದರೆ ಎಲ್ಲರೂ ಬೀದಿಗಿಳಿದು ಹೋರಾಡಲಾಗುವುದಿಲ್ಲ. ಇದು ಸತ್ಯ. ಎಲ್ಲರೂ ಅಣ್ಣಾ ಹಜಾರೆಯವರ ಹಿಂದೆ ಹೋಗಲಾಗುವುದಿಲ್ಲ. ಮಾವೋವಾದಿಗಳಂತೆ ಶಸ್ತ್ರ ಹಿಡಿಯಲೂ ಆಗುವುದಿಲ್ಲ. ಆದರೆ ನಾವು ಕುಳಿತಲ್ಲಿಂದಲೇ ಒಂದಿನಿತು ಅಳಿಲು ಸೇವೆ ಸಲ್ಲಿಸಬಹುದಲ್ಲವೇ. ಎಲ್ಲೋ ಒಂದೆಡೆ ವ್ಯವಸ್ಥೆಯ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದರೆ ರಸ್ತೆ ಬದಿ ಹಾದುಹೋಗುತ್ತಿರುವಾಗ ಕಣ್ಣಿಗೆ ಕಂಡರೆ ಅಲ್ಲಿ ಕೆಲವು ನಿಮಿಷಗಳ ಕಾಲ ಇದ್ದು, ಆ ಪ್ರತಿರೋಧದ ದನಿಗಳಿಗೆ ನಮ್ಮ ದನಿಗೂಡಿಸಬಹುದು. ಯಾವುದೋ ಒಂದು ವಿಚಾರ ಸಂಕಿರಣದ ಸಭಾಂಗಣದಲ್ಲಿ ಕುಳಿತು ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, ವಿಷಯಗ್ರಹಣ ಮಾಡಬಹುದು. ಹೀಗೆ ರಾಮಾಯಣದಲ್ಲಿ ಪ್ರಸ್ತಾಪವಾಗುವ ಅಳಿಲು ಸೇವೆಯ ಹಾಗೆ ಯಾರಾದರೂ ಸೇವೆ ಸಲ್ಲಿಸಬಹುದು. ಆದರೆ ಮಧ್ಯಮವರ್ಗಗಳಲ್ಲಿನ ಸಿನಿಕತೆ ಇದಕ್ಕೆ ಅಡ್ಡಿಯಾಗುತ್ತದೆ. ನಿಮ್ಮಂತಹ ಕಾಳಜಿಯುಳ್ಳ ವ್ಯಕ್ತಿಗಳು, ನಿರಾಶೆ, ಸಿನಿಕತೆಯನ್ನು ತೊರೆದು ಅಲ್ಲಲ್ಲಿ ನಡೆಯುತ್ತಿರುವ ಜನಾಂದೋಲನಗಳಿಗೆ ಕೊಂಚವಾದರೂ, ತಮ್ಮ ಕೈಲಾದಷ್ಟು ಬೆಂಬಲ ಸೂಚಿಸಿದರೆ ಅಷ್ಟೇ ಸಾಕಲ್ಲವೇ.. ನಮ್ಮ ಜೀವನದ ಸಾರ್ಥಕತೆಯೂ ಅಲ್ಲೇ ಅಡಗಿದೆ. ಒಬ್ಬ ಬ್ಯಾಂಕ್ ಅಧಿಕಾರಿಯಾಗಿ ನಾನು ಮಾಡಲಾಗುವುದೂ ಅಷ್ಟೇ. ಆದರೆ ನನ್ನ ಇತರ ಮನರಂಜನೆಗಳನ್ನು ಬದಿಗಿರಿಸಿ ನನ್ನ ಸಮಯವನ್ನು ಬರಹ,ಹೋರಾಟಗಳಿಗೆ ಮೀಸಲಿರಿಸುತ್ತೇನೆ. ನೀವು ಭಿನ್ನ ರೀತಿಯಲ್ಲಿ ಮುಂದುವರೆಯಬಹುದು. ನೀವು ನನಗಿಂತಲೂ ಚಿಕ್ಕವರಾಗಿದ್ದರೆ ಇದು ನನ್ನ ಸಲಹೆ ಎಂದು ಭಾವಿಸಿ,ದೊಡ್ಡವರಾಗಿದ್ದರೆ ನನ್ನ ಅಭಿಪ್ರಾಯವೆಂದು ಮನ್ನಿಸಿ.

      ನಾ ದಿವಾಕರ.

  2. Manjula Narayanarao

    Spastha chitrana – article tumba chennagide

  3. KM

    ಫಿಡೆಲ್ ಕ್ಯಾಸ್ಟ್ರೋ ರನ್ನು ಹೊಗಳುತ್ತಿಲ್ಲ .ಆದರೆ ಅವರೊಬ್ಬ ಆದರ್ಶ ಬಯಸುವ ವ್ಯಕ್ತಿ ಯಾದರಿಂದ ಬಗಲಲ್ಲಿರುವ ಸೂಪರ್ ಪವರ್ ಅಮೆರಿಕ ದ ಎದುರು ನಿಂತು ಕ್ಯುಬ ವನ್ನು ಕಡಿಮೆ ಭ್ರಷ್ಟಾಚಾರ ವಿರುವ ರಾಷ್ಟ್ರಗಳು ಅಲ್ಲೊಂದಾಗಿಸಿದರು.ಅಲ್ಲಿ ಎಲ್ಲವೂ ಸರಿಯಾಗಿದೆ ಎನ್ನುತ್ತಿಲ್ಲ .ಕೆಟ್ಟ ಕೆಲಸ ಭ್ರಷ್ಟಾಚಾರ ,ಅನಾಚಾರ ,ಧಾರ್ಮಿಕ ಸಂಸ್ಥೆಗಗಳ ದುರುಪಯೋಗ ಇತ್ಯಾದಿ ಗಳ ಬಳಕೆಯ ಬಗ್ಗೆ ಯೋಚಿಸಿದಾಗ ಹೀಗೆ ಹೇಳಬೇಕಾಯ್ತು .ಕೆಲವು ಸಲ ನಮಗೆ ಅನಿಸುತ್ತದೆ. ಬ್ರ್ಹಷ್ಟತೆ ಹೆಚ್ಚಿ ಸಾಮಾಜಿಕ ಕಾಳಜಿಯ ಭಾವನೆಗಳು ತುಕ್ಕು ಹಿಡಿದು ಸಮಾಜ ದಯನೀಯ ಸ್ಥಿತಿಗಿಳಿದಾಗ ಈ ರಾಷ್ಟ್ರವನ್ನು ಕನಿಷ್ಠ ಪಕ್ಷ ೫ ವರ್ಷವಾದರೂ ಮಿಲಿಟರಿ ಆಡಳಿತಕ್ಕೊಪ್ಪಿಸಿ ಎಲ್ಲ ಭ್ರಷ್ಟ ರಾಜಕೀಯ ವ್ಯಕ್ತಿಗಳನ್ನು ಶಿಕ್ಷೆಗೊಳಪಡಿಸಿ ಮುಂಬರುವ ಭ್ರಷ್ಟ ಪೀಳಿಗೆ ಈಗಿರುವ (೨೦೧೧ರ ವರೆಗೆ ಇದ್ದ ) ವ್ಯವಸ್ಥೆye ಸರಿ ಎಂದು ಯೋಚಿಸಲು ಸಹ ಹೆದರುವಂತೆ ಮಾಡಿ ಒಂದು ಸುಂದರ ವ್ಯವಸ್ತಿತ ಸಮಾಜ ಸೃಷ್ಟಿಸುವಂತೆ ಮಾಡಬೇಕಾಗಿದೆ.
    ನಿಮ್ಮ ಲೇಖನ ಓದಿ ಮುಗಿಸಿದಾಗ “ಲೇಖನ ಕೆಲವು ಸಲ ಖಡ್ಗಕ್ಕಿಂತ ಮೊನಚಾಗಿರುತ್ತದೆ ” ಎನ್ನುವ ವಾಸ್ತವ ಸತ್ಯ ನೆನಪಾಗುತ್ತದೆ.ಕತ್ತಿಯನ್ನು ಒಳ್ಳೆ ಕೆಲಸಕ್ಕೆ (ಹಣ್ಣು ಹಂಪಲು ಕುಯ್ಯಲು ಉಪಯೋಗಿಸುವಂತೆ) ಉಪಯೋಗಿಸಿದರೆ ರುಚಿಯಾಗಿರುತ್ತದೆ ಎಂದು ಇಲ್ಲಿ ಹೇಳುವುದು ಸೂಕ್ತವೇನೋ?. .

  4. ವಾಸುದೇವ ನವಿಲೇಕರ್

    ಉತ್ತಮವಾದ ಲೇಖನ.ನಡೆಯುತ್ತಿರುವ ಅನ್ಯಾಯಗಳನ್ನು ಓದಿ ಮನಸ್ಸು ಏನದರೂ ಮಾಡು ಎಂದು ಚದಪಡಿಸುತ್ತಿದೆ.ಆದರೆ ನಾಗರಾಜರವರು ಹೇಳಿದಂತೆ ಏನೂ ಮಾಡಲಾಗದ ಅಸಹಾಯಕತೆ.ಸಂಘಟಿತರಾದರೆ ಏನಾದರೂ ಮಾಡಬಹುದು.ಆದರೆ ಹೇಗೆ ಎನ್ನುವ ಯಕ್ಷ ಪ್ರಶ್ನೆ!

  5. gunashekara murthy

    ನಿಮ್ಮ ಈ ಬರಹವು ನನ್ನನೇ ನಾ ಕನ್ನಡಿಯಲ್ಲಿ ನೋಡಿದಂತಿದೆ ಮೆಚ್ಚುವಂತದ್ದು.

    ನನ್ನ ಬರಹವನ್ನು ನೋಡಲಿಚ್ಚಿಸಿದಲ್ಲಿ ಕನ್ನಡ ಬ್ಲಾಗರ್ಸ್‍ನಲ್ಲಿ gunashekara murthy pageನ್ನುನೋಡಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading