ನಾ ದಿವಾಕರ್
ಭಾರತದ ಸಂವಿಧಾನ ವಿಶ್ವದಲ್ಲೇ ಅತ್ಯುತ್ತಮವಾದ, ಉತ್ಕೃಷ್ಟವಾದ, ಉದಾತ್ತವಾದ ಸಂವಿಧಾನ ಎಂದೇ ಹೆಸರು ಗಳಿಸಿದ್ದರೆ ಅದಕ್ಕೆ ಕಾರಣ ನಮ್ಮ ಸಂವಿಧಾನದಲ್ಲಿ ಸಾರ್ವಭೌಮ ಪ್ರಜೆಗಳಿಗೆ ಒದಗಿಸಲಾಗಿರುವ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯ. ಕೆಲವು ನಿಬಂಧನೆಗಳಿಗೊಳಪಟ್ಟಿದ್ದರೂ ಭಾರತದ ಸಂವಿಧಾನ ಪ್ರಜೆಗಳಿಗೆ ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಯಪಾಲಿಸಿದೆ. ಸಂವಿಧಾನ ಕತರ್ೃಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಕಲ್ಪನೆ ಮೂಡಲು ಕಾರಣ ಭಾರತ ಶತಮಾನದ ಕಾಲ ಬ್ರಿಟೀಷ್ ವಸಾಹತುಶಾಹಿಯ ಆಳ್ವಿಕೆಯಲ್ಲಿದ್ದುದು ಮತ್ತು ಈ ಅವಧಿಯಲ್ಲಿ ಜನಸಾಮಾನ್ಯರ ಮೂಲಭೂತ ಹಕ್ಕುಗಳು ಬ್ರಿಟೀಷ್ ಸಾಮ್ರಾಜ್ಯದ ದಮನಕ್ಕೊಳಗಾಗಿದ್ದುದು. ಈ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಕೆಲವು ನಿಬಂಧನೆಗಳಿವೆ. ಸಮಾಜದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟುಮಾಡುವಂತಹ, ಯಾವುದೇ ಒಂದು ಜನಸಮೂಹದ ಭಾವನೆಗಳಿಗೆ ಧಕ್ಕೆ ಉಂಟುಮಾಡುವಂತಹ, ಸಾಮಾಜಿಕ ಸೌಹಾರ್ದತೆಯನ್ನು ಕದಡುವಂತಹ ವ್ಯಾಖ್ಯಾನಗಳಿಗೆ ಕಡಿವಾಣ ಹಾಕಲಾಗಿದೆ. ಇದು ಅಗತ್ಯವೂ ಹೌದು. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಈ ನಿಬಂಧನೆಗಳು ಕೆಲವೊಮ್ಮೆ ಸಹಕಾರಿಯಾಗಲೂಬಹುದು.
ಆದರೆ ಸಾಹಿತ್ಯ, ಕಲೆ, ಸಂಗೀತ ಮತ್ತಿತರ ಸಂವೇದನಾಶೀಲ ಕ್ಷೇತ್ರಗಳಲ್ಲಿ ಸೃಜನಶೀಲತೆಯ ಚೌಕಟ್ಟಿನಲ್ಲಿ ವ್ಯಕ್ತವಾಗಬಹುದಾದ ಸಾಹಿತಿ-ಕಲಾವಿದರ ಅಭಿಪ್ರಾಯಗಳು ಸಮಾಜದ ಒಂದು ನಿದರ್ಿಷ್ಟ ವರ್ಗದ ಭಾವನೆಗಳಿಗೆ ಘಾಸಿ ಉಂಟುಮಾಡಿದ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೇಗೆ ಪರಿಗಣಿಸಬೇಕು ಎಂಬುದು ಇಂದಿನ ಚಚರ್ೆಯ ವಿಷಯವಾಗಿದೆ. ಭಾರತದಂತಹ ಸಂಕೀರ್ಣ, ಬಹುಮುಖೀ ಸಮಾಜದಲ್ಲಿ ಅಸ್ಮಿತೆಗಳೇ ಪ್ರಧಾನ ಭೂಮಿಕೆ ನಿರ್ವಹಿಸುತ್ತವೆ. ಜನಸಾಮಾನ್ಯರ ಆಂತರಿಕ ಭಾವನೆಗಳನ್ನೂ ಸಹ ಯಾವುದೋ ಒಂದು ಅಸ್ಮಿತೆಗಳ ಚೌಕಟ್ಟಿನಲ್ಲಿ ಬಂಧಿಸಿಡಲಾಗುತ್ತದೆ. ಹಾಗಾಗಿ ಜನಸಮೂಹಗಳ ಧಾಮರ್ಿಕ, ಭಾಷಿಕ, ಪ್ರಾದೇಶಿಕ ಮತ್ತು ಜಾತಿಸಂಬಂಧಿತ ಭಾವನೆಗಳು ಈ ಅಸ್ಮಿತೆಗಳನ್ನು ನಿರ್ಧರಿಸಿ, ನಿರ್ವಹಿಸುವ ಕೆಲವೇ ಪ್ರಬಲ ಗುಂಪುಗಳ ವ್ಯಾಖ್ಯಾನಕ್ಕೆ ಸುಲಭವಾಗಿ ಒಳಪಡುತ್ತವೆ. ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಹುಯಿಲೆದ್ದಾಗಲೆಲ್ಲಾ ಈ ಒಂದು ಕ್ಷೀಣ ಧ್ವನಿಯೇ ಪ್ರಧಾನವಾಗಿ ಗೋಚರಿಸಿ ಚಚರ್ೆ, ವಿವಾದಗಳನ್ನು ಸೃಷ್ಟಿಸುತ್ತದೆ.
ಇಂತಹ ಸನ್ನಿವೇಶದಲ್ಲಿ ಉದ್ಭವಿಸುವ ಸಂಕಥನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಕಲ್ಪನೆಯೇ ಸಂಕುಚಿತವಾಗುತ್ತಾ ಹೋಗುವುದನ್ನು ಕಾಣಬಹುದಾಗಿದೆ. ಸಲ್ಮಾನ್ ರಷ್ದಿ, ಎಂ.ಎಫ್. ಹುಸೇನ್ ಮುಂತಾದ ಮಹಾನ್ ಸಾಹಿತಿ ಕಲಾವಿದರ ಕೃತಿಗಳ ಸುತ್ತ ಉದ್ಬವಿಸುವ ವಾದ ವಿವಾದಗಳು ಈ ಸಂಕುಚಿತ ಚೌಕಟ್ಟಿನಲ್ಲೇ ಚಚರ್ೆಗೊಳಗಾಗುತ್ತವೆ. ಸಂಘಟನಾ ಸಾಮಥ್ರ್ಯ ಮತ್ತು ಪ್ರಾಬಲ್ಯದ ಅಹಮಿಕೆಗಳು ಬಹುಪಾಲು ಸಂಘಟನೆಗಳಿಗೆ ಇಡೀ ಜನಸಮುದಾಯಗಳನ್ನು ಪ್ರತಿನಿಧಿಸುತ್ತೇವೆ ಎಂಬ ಭ್ರಮೆಯನ್ನೂ ಮೂಡಿಸುವುದನ್ನು ಈ ಸಂಕಥನಗಳಲ್ಲಿ ಕಾಣಬಹುದು. ಹಾಗಾಗಿಯೇ ಜೈಪುರ ಸಾಹಿತ್ಯೋತ್ಸವಕ್ಕೆ ಸಲ್ಮಾನ್ ರಷ್ದಿ ಆಗಮಿಸುವುದು ಇಡೀ ಭಾರತೀಯ ಮುಸ್ಲಿಮರ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತದೆ ಎಂಬ ಭಾವನೆಯನ್ನು ಸೃಷ್ಟಿಸಲಾಗುತ್ತದೆ. ಕೆಲವೇ ಮೂಲಭೂತವಾದಿ ಮತೀಯ ಸಂಘಟನೆಗಳು, ಕೆಲವೇ ಮೌಲ್ವಿಗಳು ತಮ್ಮ ಸ್ವಕಲ್ಪಿತ ಪ್ರಾತಿನಿಧಿತ್ವವವನ್ನೇ ಬಳಸಿಕೊಂಡು ಸಾಮುದಾಯಿಕ ಹಿತಾಸಕ್ತಿಗಳ ಸಂರಕ್ಷಕರಾಗಿ ಫಟ್ವಾಗಳನ್ನು ಹೊರಡಿಸುವುದನ್ನು ಇಲ್ಲಿ ಕಾಣಬಹುದು.
ಭಾರತದ ಸೆಕ್ಯುಲರಿಸಂನ ವéೈಶಿಷ್ಟ್ಯ ಎಂದರೆ ಇಲ್ಲಿ ಮತಾಂಧರಿಗೇ ಹೆಚ್ಚು ಮನ್ನಣೆ ದೊರೆಯುವುದು. ಸರ್ವ ಧರ್ಮ ಸಮಭಾವದ ಹೆಸರಿನಲ್ಲಿ ಧರ್ಮವನ್ನು ಪೋಷಿಸುವ ಸೋಗಿನಲ್ಲಿ ಮತೀಯವಾದಿಗಳಿಗೆ, ಧಾಮರ್ಿಕ ಢಂಬಾಚಾರಗಳಿಗೆ ಮನ್ನಣೆ ನೀಡುವ ಆಳ್ವಿಕರು ದೇವರನ್ನು ಒಂದು ಸಾರ್ವಜನಿಕ ಉದ್ಯಮವನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹಜ್ ಯಾತ್ರೆಗೆ ಕೇಂದ್ರ ಸಕರ್ಾರ ಕೋಟ್ಯಾಂತರ ರೂಗಳ ಸಬ್ಸಿಡಿ ನೀಡುತ್ತದೆ ಎಂದು ಆರೋಪಿಸಲಾಗುತ್ತದೆ. ಇದು ನಿಜವೇ. ಆದರೆ ಕೇಂದ್ರ ಸಕರ್ಾರಗಳು ಹಿಂದೂ ಉತ್ಸವಗಳಿಗೂ ಅಷ್ಟೇ ಪ್ರಮಾಣದ, ಇನ್ನೂ ಹೆಚ್ಚಿನ ಸಬ್ಸಿಡಿ ನೀಡುವುದನ್ನು ನಾವು ಗಮನಿಸುವುದೇ ಇಲ್ಲ. ಹನ್ನೆರಡು ವರ್ಷಗಳಿಗೊಮ್ಮೆ ಉಜ್ಜಯಿನಿ, ಅಲಹಾಬಾದ್, ನಾಸಿಕ್ ಮತ್ತು ಹರಿದ್ವಾರದಲ್ಲಿ ನಡೆಯುವ ಮಹಾ ಕುಂಭಮೇಳ ಉತ್ತಮ ನಿದರ್ಶನ. ಈ ಕುಂಭಮೇಳಗಳಿಗೆ ಒದಗಿಸಲಾಗುವ ಸಕರ್ಾರದ ಸಹಾಯಧನ 120 ಕೋಟಿ ರೂಗಳು. ಅದೇ ರೀತಿ ಹಜ್ ಯಾತ್ರೆಗೆ ಹೋಗುವ ಮುಸ್ಲಿಮರಿಗೂ ಸಕರ್ಾರ ಸಹಾಯಧನ ನೀಡುತ್ತದೆ. ಪಾಕಿಸ್ತಾನದ ಗುರುದ್ವಾರಕ್ಕೆ ಹೋಗುವ ಸಿಖ್ಖರಿಗೂ ನೀಡುತ್ತದೆ. ಅಮರನಾಥ ಯಾತ್ರೆ, ವéೈಷ್ಣೋದೇವಿ ಯಾತ್ರೆಗಳಿಗೂ ಸಕರ್ಾರವೇ ಖಚರ್ು ಮಾಡುತ್ತದೆ. ಒಂದು ವರದಿಯ ಪ್ರಕಾರ ದೆಹಲಿ ಸಕರ್ಾರದ ಒಟ್ಟು ಖಚರ್ಿನಲ್ಲಿ ಶೇ. 74ರಷ್ಟು ಧಾಮರ್ಿಕ-ಸಾಂಸ್ಕೃತಿಕ ಕ್ಷೇತ್ರಕ್ಕೇ ಮೀಸಲಾಗಿರುತ್ತದೆ.
ಸಕರ್ಾರ ಇಷ್ಟೆಲ್ಲಾ ಖಚರ್ು ಮಾಡಿ ಎಲ್ಲ ಧಾಮರ್ಿಕ ಕೇಂದ್ರಗಳನ್ನೂ ಪೋಷಿಸುತ್ತಿದ್ದರೂ, ಯಾವುದೇ ಧರ್ಮದ ನಾಯಕರೂ ತಮ್ಮ ಮೇಲಿನ ನಿಯಂತ್ರಣ, ನಿಬಂಧನೆಗಳನ್ನು ಸಹಿಸುವುದಿಲ್ಲ ಎನ್ನುವುದೂ ಅಷ್ಟೇ ಸತ್ಯ. ಹಾಗಾಗಿಯೇ ಧರ್ಮ ಮತ್ತು ಧಾಮರ್ಿಕ ವಿಚಾರಗಳನ್ನು ಕುರಿತು ವ್ಯಾಖ್ಯಾನ ಮಾಡುವ ಯಾವುದೇ ಲೇಖಕ ಹಲ್ಲೆಗೊಳಗಾಗುತ್ತಾನೆ. ದಮನಕ್ಕೊಳಗಾಗುತ್ತಾನೆ. ಬಹಿಷ್ಕೃತನಾಗುತ್ತಾನೆ. ಸಲ್ಮಾನ್ ರಷ್ದಿಯ ಸಟಾನಿಕ್ ವರ್ಸಸ್, ರಾಮಾನುಜಂ ಅವರ ಮುನ್ನೂರು ರಾಮಾಯಣ, ಡಿ.ಎನ್ ಝಾ ಅವರ ಮಿತ್ ಆಫ್ ಹೋಲಿ ಕೌ, ಆಬ್ರೇಮೆನನ್ ಅವರ ರಾಮಾಯಣ, ಜೇಮ್ಸ್ ಲೈನ್ ಅವರ ಶಿವಾಜಿ ಇವೆಲ್ಲವೂ ಮತೀಯ ಶಕ್ತಿಗಳ ದಾಳಿಗೆ ತುತ್ತಾಗಲು ಸಕರ್ಾರಗಳ ಈ ಓಲೈಕೆ ನೀತಿಯೇ ಕಾರಣವಾಗಿದೆ. ಜನರು ಯಾವ ಆಹಾರ ಸೇವಿಸಬಹುದು, ಕಲಾವಿದರು ಯಾವ ರೀತಿಯ ಕಲಾಕೃತಿ ಸೃಷ್ಟಿಸಬೇಕು, ಕವಿಗಳು ಹೇಗೆ ತಮ್ಮ ಕವಿತಾ ಕೌಶಲ್ಯವನ್ನು ಪ್ರದಶರ್ಿಸಬೇಕು, ಸಾಹಿತಿಗಳು ಹೇಗೆ ಕೃತಿರಚನೆ ಮಾಡಬೇಕು ಇವೆಲ್ಲವನ್ನೂ ನಮ್ಮ ಸಕರ್ಾರಗಳು ಮತಾಂಧ ಶಕ್ತಿಗಳ ಮೂಲಕ ನಿರ್ಧರಿಸುತ್ತದೆ. ಈ ನಿಯಮಗಳನ್ನು ಮೀರಿದವರು ಹುಸೇನ್, ರಷ್ದಿಗಳಾಗುತ್ತಾರೆ.
ರಷ್ದಿ ತಮ್ಮ ಸಟಾನಿಕ್ ವರ್ಸಸ್ ಕೃತಿಯಲ್ಲಿ ಪ್ರವಾದಿ ಪೈಗಂಬರ್ ಅವರನ್ನು ಅವಹೇಳನಕಾರಿಯಾಗಿ ಚಿತ್ರಿಸಿದ್ದಾರೆ ಎಂದು ಆರೋಪಿಸಿ ಆ ಕೃತಿಯನ್ನ ನಿಷೇಧಿಸಿದ ಭಾರತ ಸಕರ್ಾರ ಮೂರು ದಶಕಗಳ ಹಿಂದೆ ಮಾಡಿದ ತಪ್ಪಿಗೆ ಇಂದಿಗೂ ಮತೀಯವಾದಿಗಳ ಆಜ್ಞಾಪಾಲಕನಂತೆ ವತರ್ಿಸಬೇಕಾಗಿದೆ. ರಷ್ದಿ ತಮ್ಮ ಕೃತಿಯಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಒಪ್ಪುವುದು ಬಿಡುವುದು ವೈಯ್ಯಕ್ತಿಕ ವಿಚಾರ. ಆದರೆ ಅವರ ಕೃತಿಯನ್ನು ನಿಷೇಧಿಸುವುದು, ಭಾರತೀಯ ಸಂಜಾತನಾದ ಒಬ್ಬ ಸಾಹಿತಿಯನ್ನು ಬಹಿಷ್ಕರಿಸುವುದು, ಭಾರತಕ್ಕೆ ಪ್ರವೇಶಿಸುವುದನ್ನೇ ತಡೆಗಟ್ಟುವುದು ಇವೆಲ್ಲವೂ ಅಸಾಂವಿಧಾನಿಕ ಮತ್ತು ಅನೈತಿಕ ವರ್ತನೆಗಳಾಗುತ್ತವೆ. ಸಂಪ್ರದಾಯವಾದಿ ಮುಸ್ಲಿಮರಿಗೆ ರಷ್ದಿಯವರ ಕೃತಿ ಆಕ್ಷೇಪಾರ್ಹವಾದರೆ ನ್ಯಾಯಾಂಗದ ಮೂಲಕ , ಹೋರಾಟದ ಮೂಲಕ, ಚಚರ್ೆಯ ಮೂಲಕ ಪ್ರತಿಭಟಿಸುವ ಅವಕಾಶವಿದೆ ಆದರೆ ಕೃತಿಯನ್ನೂ ಕೃತಿಕಾರನನ್ನೂ ನಿಷೇಧಿಸುವ ಅಧಿಕಾರ ಇರುವುದಿಲ್ಲ. ವಿಪಯರ್ಾಸವೆಂದರೆ ಭಾರತದಲ್ಲಿನ ಎಲ್ಲ ಮತೀಯ ಸಂಘಟನೆಗಳೂ ಈ ಅಧಿಕಾರವನ್ನು ತಮ್ಮ ಇಚ್ಚೆಗನುಸಾರವಾಗಿ ಬಳಸಿಕೊಳ್ಳುತ್ತಿವೆ.
ರಷ್ದಿ ಮುಸ್ಲಿಂ ಮೂಲಭೂತವಾದಿಗಳ ಗುರಿಯಾದರೆ ಹುಸೇನ್ ಹಿಂದೂ ಮೂಲಭೂತವಾದಿಗಳಿಗೆ ಗುರಿಯಾಗುತ್ತಾರೆ. ಅಲ್ಲಿ ಮೌಲ್ವಿಗಳು ಫತ್ವಾ ಹೊರಡಿಸಿದರೆ ಇಲ್ಲಿ ಭಜರಂಗಿಗಳು ಆದೇಶ ನೀಡುತ್ತಾರೆ. ಧಾಮರ್ಿಕ ಭಾವನೆಗಳು ಈ ಸಂಘಟನೆಗಳ ಮೂಲ ಬಂಡವಾಳವಾಗಿ ಪರಿಣಮಿಸುತ್ತವೆ, ಜನಸಾಮಾನ್ಯರ ನಂಬಿಕೆ ವಿಶ್ವಾಸಗಳು ಅಸ್ಮಿತೆಗಳನ್ನು ಸಂರಕ್ಷಿಸುವ ಪ್ರಬಲ ಅಸ್ತ್ರಗಳಾಗುತ್ತವೆ. ಆದ್ದರಿಂದಲೇ ರಷ್ದಿಯ ಕೃತಿಯನ್ನು ಓದದೆಯೇ ಕೃತಿಯನ್ನು ನಿಷೇಧಿಸಲಾಗುತ್ತದೆ, ಹುಸೇನ್ ಅವರ ಕಲಾಕೃತಿಯ ಗಂಧವನ್ನೂ ಅರಿಯದೆ ನಾಶಪಡಿಸಲಾಗುತ್ತದೆ. ಈ ನಿರ್ಣಯ ಕೈಗೊಳ್ಳುವವರು, ಈ ವಿಧ್ವಂಸಕ ಕೃತ್ಯಗಳಲ್ಲಿ ತೊಡಗುವವರು ಪ್ರತಿನಿಧಿಸುವುದು ಜನತೆಯ ಮನದಾಳದಲ್ಲಿನ ಅವ್ಯಕ್ತ ಭಾವನೆಗಳನ್ನೇ ಹೊರತು, ವಾಸ್ತವ ಜಗತ್ತಿನಲ್ಲಿ ಬಾಳಲಿಚ್ಚಿಸುವ ಜನಸಮುದಾಯಗಳನ್ನಲ್ಲ. ಹಾಗಾಗಿ ಸಂಘಟನೆಗಳ ಅಥವಾ ಕೆಲವೇ ನಾಯಕರ ನಿಲುವುಗಳೇ ಸಮುದಾಯದ ನಿಲುವುಗಳಾಗಿ, ಸಾರ್ವತ್ರಿಕ ಅಭಿಪ್ರಾಯಗಳಾಗಿ, ಸಾರ್ವಕಾಲಿಕ ಸತ್ಯಗಳಾಗಿ ಪ್ರತಿಪಾದಿಸಲ್ಪಡುತ್ತವೆ.
ಆದರೆ ಈ ಪ್ರತಿಪಾದನೆಗಳಿಗೆ ಮನ್ನಣೆ ನೀಡುವ ನಮ್ಮ ಆಳುವ ವರ್ಗಗಳಿಗೆ ಏನನ್ನೋಣ ? ಸಾಂವಿಧಾನಿಕ ತತ್ವಾದರ್ಶಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ಹೊತ್ತಿರುವ ಜನ ಪ್ರತಿನಿಧಿಗಳು ತಮ್ಮ ಪ್ರಾತಿನಿಧಿಕ ಹೊಣೆಗಾರಿಕೆ, ಉತ್ತರದಾಯಿತ್ವಗಳನ್ನೂ ಮರೆತು ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಮತೀಯ ಶಕ್ತಿಗಳಿಗೆ ಶರಣಾಗುವುದು ಸ್ವತಂತ್ರ ಭಾರತದ ದುರಂತಗಳಲ್ಲೊಂದು. ರಷ್ದಿ, ಹುಸೇನ್ ಮತ್ತಿತರ ಕಲಾವಿದರ ಮೇಲೆ ನಿಷೇಧ ಹೇರುವ ಮತೀಯ ಸಂಘಟನೆಗಳ ಪ್ರಾತಿನಿಧಿಕ ಸತ್ವ ಏನೆಂದು ಗ್ರಹಿಸುವ ಸಾಮಥ್ರ್ಯವನ್ನೂ ಆಳ್ವಿಕರು ಕಳೆದುಕೊಂಡಿರುವುದು ಈ ಸಂದರ್ಭದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ನಿಷೇಧಕ್ಕೊಳಗಾದ ಕೃತಿ, ಕಲಾಕೃತಿ, ಕೃತಿಕಾರ ಮತ್ತು ಕಲಾವಿದರಿಗೆ ಭಾರತೀಯ ಸಂವಿಧಾನ ಯಾವ ರೀತಿಯ ನ್ಯಾಯ ಒದಗಿಸುತ್ತದೆ ಎಂಬ ಪ್ರಶ್ನೆ ಎದುರಾದಾಗ ನಮ್ಮ ಗಣತಂತ್ರದ ಆದ್ಯತೆಗಳು, ಪ್ರಜಾತಂತ್ರದ ಮೌಲ್ಯಗಳು, ಮಾನವೀಯ ತತ್ವಗಳು ಪ್ರಶ್ನಾರ್ಹವಾಗಿಬಿಡುತ್ತವೆ. ಸಲ್ಮಾನ್ ರಷ್ದಿಯ ಸಟಾನಿಕ್ ವರ್ಸಸ್ ಭಾರತದಲ್ಲಿ ನಿಷೇಧಿತವಾಗಿದ್ದರೂ ಕಾನೂನಿನ ಪ್ರಕಾರ ಪುಸ್ತಕದ ಪ್ರತಿಗಳನ್ನು ಆಮದು ಮಾಡಿಕೊಳ್ಳುವಂತಿಲ್ಲವಷ್ಟೆ. ಆದರೆ ಈ ಕೃತಿಯನ್ನು ಓದಲೂಬಾರದು, ಅಂತಜರ್ಾಲದಲ್ಲಿ ಡೌನ್ಲೋಡ್ ಮಾಡಬಾರದು ಎಂಬ ನಿಬಂಧನೆಗಳಿಲ್ಲ. ಅದರೆ ರಾಜಸ್ಥಾನ ಸಕರ್ಾರ ಮೂಲಭೂತವಾದಿಗಳಿಗೆ ಎಷ್ಟರ ಮಟ್ಟಿಗೆ ಹೆದರಿದೆ ಎಂದರೆ, ಈ ಕೃತಿಯ ಕೆಲವು ಅಧ್ಯಾಯಗಳನ್ನು ಸಾಹಿತ್ಯೋತ್ಸವದಲ್ಲಿ ಓದಿದ ಹರೀಶ್ ಕುಂಜ್ರು , ಅಮಿತಾವ್ ಕುಮಾರ್ ಮತ್ತಿಬ್ಬರು ಸಾಹಿತಿಗಳನ್ನು ಬಲವಂತವಾಗಿ ಹೊರಗೆ ತಳ್ಳಲಾಗಿದೆ. ಕೃತಿಯ ಸಾಲುಗಳನ್ನು ಓದಲೂ ಬಿಡದೆ, ರಷ್ದಿಯವರು ವಿಡಿಯೋ ಸಂದರ್ಶನದ ಮೂಲಕ ಮಾತನಾಡಲೂ ಅವಕಾಶ ನೀಡದೆ ಇರುವುದು ಪ್ರಜಾತಂತ್ರಕ್ಕೇ ಅಪಮಾನಕರ. ವಿಪಯರ್ಾಸವೆಂದರೆ ಎಂ.ಎಫ್. ಹುಸೇನ್ ಕಲಾಕೃತಿಗಳ ಪ್ರದರ್ಶನಕ್ಕೂ ಅವಕಾಶ ನೀಡದ ಬಿಜೆಪಿ ನಾಯಕರು ಈಗ ರಷ್ದಿಯ ಪರ ವಹಿಸುತ್ತಿದ್ದಾರೆ. ಭಾರತದಲ್ಲಿ ಎಲ್ಲವೂ ರಾಜಕೀಯವೇ, ಕ್ಷುದ್ರ ರಾಜಕೀಯ !
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಭುತ್ವದ ಪ್ರಯತ್ನಗಳಿಗೆ ಪೂರಕವಾಗಿ ತಮ್ಮ ಪ್ರಾತಿನಿಧಿಕ ಶಕ್ತಿಯನ್ನು ಬಳಸಿಕೊಳ್ಳುವ ಮತೀಯವಾದಿ ಸಂಘಟನೆಗಳು ಭಾರತದ ಸಂವಿಧಾನವನ್ನೇ ಅವಹೇಳನ ಮಾಡುತ್ತಿರುವುದನ್ನು ನೋಡಿದರೆ, ನಿಷೇಧಕ್ಕೊಳಗಾಗಬೇಕಿರುವುದು ಯಾರು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಸಂವಿಧಾನವನ್ನು ಗೌರವಿಸುವ ಪ್ರಜ್ಞಾವಂತ ಸಮಾಜ ಗಂಭೀರವಾಗಿ ಯೋಚಿಸಬೇಕಾದ ವಿಚಾರ ಇದು. ಪ್ರಜಾತಂತ್ರದ ಉಳಿವಿಗೆ ಇದು ಅಗತ್ಯವೂ ಹೌದು.]]>






ಧರ್ಮದ ವಿಷಯದಲ್ಲಿ ಇಂದಿನ ೨೧ನೆ ಶತಮಾನದಲ್ಲೂ ಮಾನವನು ಅನಾಗರಿಕ ಕಾಡು ಮನುಷ್ಯನಂತೆ ವರ್ತಿಸುತ್ತಿರುವುದು ಖೇದಕರ. ಸತ್ಯದ ಅನ್ವೇಷಣೆಯಲ್ಲಿ ಮಾನವನು ಕೆಲವು ಸತ್ಯಗಳನ್ನು ಇಂದಿಗೂ ಅರಗಿಸಿಕೊಳ್ಳದೆ ನಿಷೇಧ ಹೇರುವುದು ನಾಚಿಕೆಗೇಡು. ವಿಜ್ಞಾನವು ತೆರೆದಿರಿಸಿದ ಸತ್ಯಗಳನ್ನು ತಿಳಿಯುವ ಕನಿಷ್ಠ ಕುತೂಹಲವೂ ಇಲ್ಲದ ಬಾವಿಯೊಳಗಿನ ಕಪ್ಪೆಯಂಥ ಮನಸುಗಳು ನಿಷೇಧ ಹೇರುವಲ್ಲಿ ಸದಾ ಮುಂದು. ರಾಜಕೀಯ ಪಕ್ಷಗಳು ಉತ್ತಮ ಆಡಳಿತ ನೀಡಿ ಚುನಾವಣೆಗಳಲ್ಲಿ ಆಯ್ಕೆಯಾಗಲು ಒತ್ತು ನೀಡಿದ್ದರೆ ಇಂಥ ಧರ್ಮದ ವೋಟು ಬ್ಯಾಂಕ್, ಜಾತಿಯ ವೋಟ್ ಬ್ಯಾಂಕ್ ಮೇಲೆ ಅವಲಂಬನೆಯಾಗುವ ಪ್ರಮೇಯ ಇರುತ್ತಿರಲಿಲ್ಲ. ಇದು ಎಲ್ಲ ರಾಜಕೀಯ ಪಕ್ಷಗಳ ಹಣೆಬರಹ ಎಡ ಪಕ್ಷಗಳನ್ನೂ ಒಳಗೊಂಡು.