ಕರ್ನಾಟಕದ ರಾಜಕಾರಣದಲ್ಲಿ ಮುಖ್ಯವಾಹಿನಿಯ ಪಕ್ಷಗಳಿಗೆ ಸವಾಲೊಡ್ಡುವಂತಹ ಪ್ರಾದೇಶಿಕ ಪಕ್ಷಗಳು ಹಲವು ಆಗಿ ಹೋಗಿವೆ. ಕ್ರಾಂತಿ ರಂಗ, ಜನತಾ ಪಕ್ಷ, ಜನತಾದಳ, ಕರ್ನಾಟಕ ಕ್ರಾಂತಿ ರಂಗ ಇತ್ಯಾದಿ, ಇತ್ಯಾದಿ. ಪ್ರಸಕ್ತ ಚುನಾವಣೆಯಲ್ಲೂ ಹಲವು ಪ್ರಾದೇಶಿಕ ಪಕ್ಷಗಳು ಸ್ಪರ್ಧೆಯಲ್ಲಿದ್ದು ರಾಜ್ಯದ ಜನತೆಯಲ್ಲಿ ಸ್ವಚ್ಚ ಆಡಳಿತ ನೀಡುವ ಬಗ್ಗೆ ಭ್ರಮೆ ಸೃಷ್ಟಿಸಿ ಮರೆಯಾಗಿ ಹೋಗಿವೆ. ಇತ್ತೀಚಿನ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತು ಸುಣ್ಣವಾದ ಬಿಜೆಪಿಯ ತುಣುಕುಗಳಾದ ಯಡಿಯೂರಪ್ಪನವರ ಕೆಜೆಪಿ ಮತ್ತು ಶ್ರೀರಾಮುಲು ಅವರ ಬಿಎಸ್ಆರ್ ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳೇ ಆದರೂ ಮುಖ್ಯವಾಹಿನಿಯ ಪಕ್ಷಗಳಿಗಿಂತಲೂ ಭಿನ್ನವಾಗಿ ಕಾಣುವುದಿಲ್ಲ. ಅಶೋಕ್ ಖೇಣಿಯವರ ಕರ್ನಾಟಕದ ಮಕ್ಕಳ ಪಕ್ಷ ತನ್ನದೇ ಆದ ಔದ್ಯಮಿಕ ಹಿತಾಸಕ್ತಿಗಳನ್ನು ಹೊಂದಿರುವುದರಿಂದ ಒಂದು ಜನಪರ ಆಡಳಿತ ನೀಡುವ ಸಾಮರ್ಥ್ಯ ಹೊಂದಲು ಸಾಧ್ಯವೇ ಇಲ್ಲವಾಗಿದೆ.
ಹಾಗಾಗಿಯೇ ಜನತೆ ಈ ಪಕ್ಷದ ಅಸ್ತಿತ್ವವನ್ನೇ ಅಲ್ಲಗಳೆಯುವಂತೆ ನಿರ್ಲಕ್ಷಿಸಿದ್ದಾರೆ. ರೈತಸಂಘ ಮತ್ತು ಕೆಲವು ದಲಿತ ಸಂಘಟನೆಗಳು ಕೂಡಿ ರಚಿಸಿರುವ ಸರ್ವೋದಯ ಪಕ್ಷ ಮೂಲತಃ ಸ್ಪಷ್ಟ ಸಿದ್ಧಾಂತ ಇಲ್ಲದ ಒಕ್ಕೂಟವಾಗಿದ್ದು ರಾಜಕೀಯ ಪ್ರಭಾವ ಬೀರುವಂತಹ ಸಾಧ್ಯತೆಗಳು ಕಡಿಮೆ ಎಂದು ಸಾಬೀತಾಗಿದೆ. ರೈತಸಂಘದ ಪುಟ್ಟಣ್ಣಯ್ಯ ತಮ್ಮ ರೈತ ಸಂಘಟನೆಯ ಹಿನ್ನೆಲೆಯಲ್ಲಿ ಗೆಲುವು ಸಾಧಿಸಿದ್ದಾರೆಯೇ ಹೊರತು ಸರ್ವೋದಯ ಪಕ್ಷದ ನೆಲೆಯಲ್ಲಿ ಅಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆಗಳು ಮುಗಿದಿವೆ. ಕರ್ನಾಟಕದ ರಾಜಕಾರಣದಲ್ಲಿ ‘ ಜನಪರ ‘ ‘ ಮೌಲ್ಯಾಧಾರಿತ ‘ ‘ತತ್ವಾಧಾರಿತ ‘ ಎಂಬ ಪದಗಳು ತಮ್ಮ ಅರ್ಥವನ್ನೇ ಕಳೆದುಕೊಂಡಿರುವ ಹಿನ್ನೆಲೆಯಲ್ಲೇ ಕಾಂಗ್ರೆಸ್ ಅಧಿಕಾರ ವಹಿಸಿಕೊಳ್ಳಲಿದೆ.
ಕರ್ನಾಟಕದಲ್ಲಿ ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲೂ ಕಳೆದ ಎರಡು ಮೂರು ದಶಕಗಳಿಂದ ಪರ್ಯಾಯ ರಾಜಕಾರಣದ ಸಂಕಥನಗಳು ತಾತ್ವಿಕ ನೆಲೆಯಲ್ಲಿ ನಡೆಯುತ್ತಿವೆ. ಮುಖ್ಯವಾಹಿನಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರತುಪಡಿಸಿ, ಪ್ರಾದೇಶಿಕ ಪಕ್ಷಗಳನ್ನು ಬದಿಗಿಟ್ಟು, ದೇಶದ/ರಾಜ್ಯದ ಪ್ರಜೆಗಳಿಗೆ ಒಂದು ಪರ್ಯಾಯ ಆಡಳಿತ ವ್ಯವಸ್ಥೆಯನ್ನು ಒದಗಿಸುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ನಡೆದಿವೆ. ನವ ಉದಾರವಾದ ಮತ್ತು ಜಾಗತೀಕರಣವನ್ನು ಪೋಷಿಸಿ ಬೆಳೆಸುತ್ತಿರುವ ಮುಖ್ಯವಾಹಿನಿ ಪಕ್ಷಗಳು ತನ್ಮೂಲಕ ಕಾರ್ಪೋರೇಟ್ ಬಂಡವಾಳಕ್ಕೆ ಶರಣಾಗಿ ಭ್ರಷ್ಟಾಚಾರವನ್ನು ಒಂದು ಸ್ವೀಕೃತ ವಿದ್ಯಮಾನವನ್ನಾಗಿ ಮಾಡಿರುವುದು ಕಳೆದ ಎರಡು ದಶಕಗಳಲ್ಲಿ ಜನತೆ ಕಂಡಿರುವ ಸತ್ಯ.
ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾತಿಭ್ರಷ್ಟ ಎನ್ನುವುದರಲ್ಲಿ ಎರಡು ಮಾತಿಲ್ಲ ಆದರೆ ಈ ಭ್ರಷ್ಟತೆಯನ್ನು ಖಂಡಿಸುವ ನೈತಿಕ ನೆಲೆಯನ್ನೇ ಕಳೆದುಕೊಂಡಿರುವ ಕಾಂಗ್ರೆಸ್ ಕೇಂದ್ರ ಮಟ್ಟದಲ್ಲಿ ಇನ್ನೂ ಹೆಚ್ಚಿನ ಭ್ರಷ್ಟತೆಯಲ್ಲಿ ತೊಡಗಿದೆ. ಹಾಗಾಗಿ ಕರ್ನಾಟಕದ ಚುನಾವಣೆಗಳ ಸಂದರ್ಭದಲ್ಲಿ ಬಿಜೆಪಿ ಸಕರ್ಾರದ ಭ್ರಷ್ಟಾಚಾರವನ್ನು ವಿರೋಧಿಸುವ ಕಾಂಗ್ರೆಸ್ ಪಕ್ಷದ ನಿಲುವು ರಾಜಕೀಯ ದ್ವಂದ್ವ ಮತ್ತು ವಿರೋಧಾಭಾಸಗಳ ಸಂಕೇತವಾಗಿ ಕಾಣುತ್ತದೆ.
ಈ ನಿಟ್ಟಿನಲ್ಲಿ ಪರ್ಯಾಯ ರಾಜಕಾರಣದ ಚಿಂತನೆ ಮುಖ್ಯ ಎನಿಸುತ್ತದೆ. ಕಮ್ಯುನಿಸ್ಟ್ ಪಕ್ಷಗಳು, ಅಣ್ಣಾ ಹಜಾರೆ ಅಂದೋಲನ, ಅರವಿಂದ ಕೇಜ್ರಿವಾಲ್ ಅವರ ಪ್ರಯತ್ನಗಳು ಇಂತಹ ಒಂದು ಪ್ರಯತ್ನದಲ್ಲಿ ತೊಡಗಿವೆ. ಆದರೆ ಅಧಿಕಾರಸ್ಥ ರಾಜಕಾರಣದಲ್ಲಿ ಈ ಪ್ರಯತ್ನಗಳು ವಿಫಲವಾಗಿರುವುದೇ ಹೆಚ್ಚು. ಕಾರಣ ಸ್ಪಷ್ಟ. ಈ ಸೈದ್ಧಾಂತಿಕ ನಿಲುವುಗಳನ್ನು ರಾಜಕೀಯ ನೆಲೆಯಲ್ಲಿ ಸ್ಥಾಪಿಸಲು ಈ ಅಂದೋಲನಗಳು, ಪಕ್ಷಗಳು ವಿಫಲವಾಗಿವೆ. ಹಣ, ಜಾತಿ ಮತ್ತು ಅಸ್ಮಿತೆಗಳ ರಾಜಕಾರಣದಲ್ಲಿ ನೈಜ ಜನಪರಯುಕ್ತ ರಾಜಕಾರಣ ಹಿನ್ನಡೆ ಸಾಧಿಸುವುದು ಅಚ್ಚರಿಯ ಮಾತೇನಲ್ಲ. ಪ್ರಾದೇಶಿಕ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ತಮ್ಮ ರಾಜಕೀಯ ಆಕಾಂಕ್ಷೆ ಮತ್ತು ಅಧಿಕಾರ ರಾಜಕಾರಣದ ವಾಂಛೆಗಳನ್ನು ತೀರಿಸಿಕೊಳ್ಳಲು ಹೆಣಗಾಡುವ ಪ್ರಾದೇಶಿಕ ಪಕ್ಷಗಳೂ ಇಂತಹ ಸಪ್ರಯತ್ನಗಳನ್ನು ವಿಫಲಗೊಳಿಸಲು ಸತತ ಪ್ರಯತ್ನ ನಡೆಸುತ್ತಿರುತ್ತವೆ.

ಪ್ರಾಮಾಣಿಕತೆ, ದಕ್ಷತೆ, ಶಿಸ್ತು, ತತ್ವ, ಸಿದ್ಧಾಂತ, ಮೌಲ್ಯ, ಪಾರದರ್ಶಕತೆ, ಜನಪರ ಕಾಳಜಿ, ಸೆಕ್ಯುಲರ್ ಮೌಲ್ಯಗಳು ಇನ್ನೂ ಮುಂತಾದ ಸಕಾರಾತ್ಮಕ ವಿದ್ಯಮಾನಗಳಿಗೆ ತಿಲಾಂಜಲಿ ನೀಡಿರುವ ರಾಜಕೀಯ ಪಕ್ಷಗಳಿಗೆ ವ್ಯತಿರಿಕ್ತವಾಗಿ ಜನತೆಯ ಮುಂದೆ ಒಂದು ಪರ್ಯಾಯ ಆಡಳಿತ ವ್ಯವಸ್ಥೆಯ ಅವಶ್ಯಕತೆಯನ್ನು ಪ್ರಸ್ತುತಪಡಿಸುವ ಹೊಣೆಗಾರಿಕೆ ಪ್ರಜ್ಞಾವಂತ ನಾಗರಿಕ ಸಮಾಜಕ್ಕಿದೆ.
ಈ ಪ್ರಜ್ಞಾವಂತ ನಾಗರಿಕ ಸಮಾಜವನ್ನು ಪ್ರತಿನಿಧಿಸುವ ಮೂಲಕ ರಾಜ್ಯದ ಜನತೆಗೆ ಒಂದು ಪರ್ಯಾಯ ಆಡಳಿತ ವ್ಯವಸ್ಥೆಯ ಚಿಂತನೆಯನ್ನು ಪ್ರಸ್ತುತಪಡಿಸುವ ಹೊಣೆಗಾರಿಕೆ ಪ್ರಗತಿಪರ ಎಂಬ ಹಣೆಪಟ್ಟಿ ಹೊತ್ತಿರುವ ಸಾಹಿತಿಗಳು, ಕಲಾವಿದರು ಮತ್ತು ಸಾಮಾಜಿಕ ಕಾರ್ಯಕರ್ತರ ಮೇಲಿದೆ. 1975ರ ತುರ್ತುಪರಿಸ್ಥಿತಿಯ ನಂತರದಲ್ಲಿ ಏರ್ಪಟ್ಟಿದ್ದ ರಾಜಕೀಯ ವಿಪ್ಲವಗಳು ಮತ್ತು ಅದೇ ಸಂದರ್ಭದಲ್ಲಿ ರಾಜ್ಯದಾದ್ಯಂತ ಸಂಘಟನಾತ್ಮಕವಾಗಿ ಬೆಳೆದಿದ್ದ ದಲಿತ , ಹಿಂದುಳಿದ ವರ್ಗಗಳ ಹೋರಾಟಗಳು, ಮಹಿಳಾ ಚಳುವಳಿಗಳು, ಬಂಡಾಯ ಸಾಹಿತ್ಯ ಮುಂತಾದ ಬೆಳವಣಿಗೆಗಳು ಸಾಮಾಜಿಕ ನ್ಯಾಯದ ಹೊಸ ಆಯಾಮವನ್ನ ಜನತೆಗೆ ಪರಿಚಯಿಸಿದ್ದವು. ಅಂಬೇಡ್ಕರ್, ಲೋಹಿಯಾ, ಗಾಂಧಿ, ಮಾರ್ಕ್ಸ್ ಪ್ರೇರಿತ ಚಳುವಳಿಗಳು ರಾಜ್ಯ ರಾಜಕಾರಣದ ಮೇಲೆ ತಮ್ಮದೇ ಆದ ಪ್ರಭಾವ ಬೀರತೊಡಗಿದ್ದವು.
ಕನ್ನಡ ಸಾಹಿತ್ಯದಲ್ಲಿ ಸಾಮಾಜಿಕ ಅನಿಷ್ಟಗಳ ವಿರುದ್ಧ ದನಿ ಎತ್ತುವುದೇ ಅಲ್ಲದೆ ರಾಜಕೀಯ ನೆಲೆಗಟ್ಟಿನಲ್ಲೂ ಒಂದು ನಿರ್ದಿಷ್ಟ ಅಭಿಪ್ರಾಯ ಮೂಡತೊಡಗಿತ್ತು. ಜನಪರ ಆಳ್ವಿಕೆಯ ಮೂಲಕ ಸಾಮಾಜಿಕ ನ್ಯಾಯ ಸಾಧಿಸುವ ನಿಟ್ಟಿನಲ್ಲಿ ಒಂದು ಧೋರಣೆ ಮತ್ತು ಚಿಂತನೆ ಸಾಹಿತ್ಯ ಮತ್ತು ಕಲೆಯ ಅಭಿವ್ಯಕ್ತಿಯ ಮೂಲಕ ಪ್ರಕಟಗೊಂಡಿತ್ತು.

ಸಾಹಿತ್ಯ ಸಮಾಜ ಮತ್ತು ರಾಜಕಾರಣದ ಸಮೀಕರಣ ತಾತ್ವಿಕ ನೆಲೆಯಲ್ಲಿ ಮೂಡಿತ್ತು. ಸಾಹಿತಿಗಳಿಗೆ ಸಾಮಾಜಿಕ ಪರಿವೆ ಇರುವುದೇ ಅಲ್ಲದೆ ಸಮಾಜದ ಉನ್ನತಿಗೆ ಅವಶ್ಯವಾದ ಜನಪರ ಕಾಳಜಿಯೂ ಇರಬೇಕು ಎಂದು ಮನದಟ್ಟಾಗಿತ್ತು. ಹಾಗಾಗಿಯೇ ಪ್ರಭುತ್ವವನ್ನು ಧಿಕ್ಕರಿಸುವ ಕಥೆ, ಕಾದಂಬರಿ, ಕವನ, ಕಾವ್ಯಗಳು ರೂಪುಗೊಳ್ಳತೊಡಗಿದ್ದವು. ಜಾಗತೀಕರಣ ಮತ್ತು ನವಉದಾರವಾದದ ಸಿದ್ಧಾಂತವನ್ನೇ ಖಂಡಿಸುವ ಧೋರಣೆ ಸಾಹಿತ್ಯದಲ್ಲಿ ವ್ಯಕ್ತವಾಗತೊಡಗಿತ್ತು. ಈ ಧೋರಣೆಯನ್ನು ವ್ಯಕ್ತಪಡಿಸುತ್ತಲೇ ಬಲಪಂಥೀಯ ರಾಜಕಾರಣದ ಫ್ಯಾಸಿಸ್ಟ್ ಮತ್ತು ಕೋಮುವಾದಿ ನೆಲೆಗಳನ್ನೂ ಸಾಹಿತ್ಯದ ಮೂಲಕ ಪ್ರತಿರೋಧಿಸಲಾಗಿತ್ತು. ಇ ಧೋರಣೆಯನ್ನು ವ್ಯಕ್ತಪಡಿಸುವ ವರ್ಗವನ್ನು ಬುದ್ಧಿಜೀವಿಗಳೆಂದು ವರ್ಗೀಕರಿಸುವುದೇ ಅಲ್ಲದೆ ಕೆಲವೊಮ್ಮೆ ಪ್ರಭುತ್ವಪರ ಶಕ್ತಿಗಳು ಲೇವಡಿ ಮಾಡುವ ಸಂಪ್ರದಾಯವೂ ಬೆಳೆದಿತ್ತು.
ಪ್ರಗತಿ ಪರ ಎಂಬ ಹಣೆಪಟ್ಟಿ ಹೊತ್ತ ಈ ಸಾಹಿತಿ ಕಲಾವಿದರ ಸೈದ್ಧಾಂತಿಕ ನಿಲುವುಗಳು ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಯ ಕೋಮುವಾದಿ ತಂತ್ರಗಳು, ನವ ಉದಾರವಾದಿ ನೀತಿಗಳು ಮತ್ತು ಜಾತಿವಾದಿ ರಾಜಕಾರಣದ ವಿರುದ್ಧವಾಗಿ ಇರುತ್ತಿದ್ದವು. ಮುಖ್ಯವಾಹಿನಿ ರಾಜಕೀಯ ಪಕ್ಷಗಳಿಂದ ಸಮಾನ ಅಂತರ ಕಾಪಾಡಿಕೊಂಡು ಜನತೆಯಲ್ಲಿ ಪ್ರಜಾತಂತ್ರ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಗುರುತರ ಹೊಣೆಗಾರಿಕೆಯನ್ನು ಬುದ್ಧಿಜೀವಿಗಳ ಬಳಗ ಹೊತ್ತುಕೊಂಡಿದ್ದೂ ಉಂಟು. ಈ ನಿಟ್ಟಿನಲ್ಲಿ ಪ್ರಭುತ್ವದ ವಿರುದ್ಧ ಸೆಟೆದು ನಿಲ್ಲುವ ಮೂಲಕ ಪರ್ಯಾಯ ರಾಜಕಾರಣ ಹುಟ್ಟುಹಾಕದಿದ್ದರೂ ಇದರ ಸಾಧ್ಯತೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಜವಾಬ್ದಾರಿ ಪ್ರಗತಿಪರ ಎನಿಸಿಕೊಳ್ಳುವ ಸಾಹಿತಿ ಕಲಾವಿದರ ಮೇಲಿತ್ತು.
ಆದರೆ ಮೇ 5ರಂದು ನಡೆದ ಚುನಾವಣೆಗಳಲ್ಲಿ ಪ್ರಗತಿಪರರೆಂದು ಗುರುತಿಸಿಕೊಳ್ಳುವ ಸಾಹಿತಿ ಕಲಾವಿದರ ಗುಂಪು ನೇರವಾಗಿ, ಸಾರ್ವಜನಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವುದು ಪರ್ಯಾಯ ರಾಜಕಾರಣದ ಚರ್ಚೆಯನ್ನು ಸಮಾಪ್ತಿಗೊಳಿಸಿದಂತಾಗಿದೆ. ಪಯರ್ಾಯ ರಾಜಕಾರಣದ ಪ್ರಯತ್ನಗಳಿಗೆ ತಿಲಾಂಜಲಿ ಹಾಡಿದಂತಿದೆ. ನವ ಉದಾರವಾದ, ಕಾರ್ಪೊರೇಟ್ ಪಾರಮ್ಯ, ಕೋಮುವಾದ ಮತ್ತು ಜಾತಿವಾದವನ್ನು ಪೋಷಿಸುವ ರಾಜಕೀಯ ಶಕ್ತಿಗಳ ವಿರುದ್ಧ ಮೂಡಬಹುದಾಗಿದ್ದ ಪರ್ಯಾಯ ಚಿಂತನೆಗೆ ಮತ್ತು ಪ್ರಜಾತಂತ್ರ ಮೌಲ್ಯಗಳನ್ನು ಸಂರಕ್ಷಿಸುವ ಪ್ರಯತ್ನಗಳಿಗೆ ಘಟಶ್ರಾದ್ಧ ಮಾಡಿದಂತಾಗಿದೆ. ಬಿಜೆಪಿಯ ಕೋಮುವಾದವನ್ನು ಎದುರಿಸಲು ಕಾಂಗ್ರೆಸ್ ಒಂದೇ ಪರಿಹಾರ ಎಂಬ ಭ್ರಮೆಯಲ್ಲಿ ಮುಳುಗಿ ಆಳ್ವಿಕರಿಗೆ ಪರಾಕು ಹೇಳುವ ಮೂಲಕ ಪ್ರಗತಿಪರ ಎನಿಸಿಕೊಂಡಿದ್ದ ಸಾಹಿತಿಗಳು ಆಸ್ಥಾನ ಕವಿಗಳಾಗಿ ಪರಿಣಮಿಸಿರುವುದು ರಾಜ್ಯದ ದುರಂತ , ಪ್ರಜಾತಂತ್ರದ ದುರಂತ.
ನಾ ದಿವಾಕರ್ ನೇರನುಡಿ : ಪರ್ಯಾಯ ರಾಜಕಾರಣದ ಘಟಶ್ರಾದ್ಧ
ನಿಮಗೆ ಇವೂ ಇಷ್ಟವಾಗಬಹುದು…
2 Comments
Trackbacks/Pingbacks
- ಜುಗಾರಿ ಕ್ರಾಸ್: ಲೇಖಕರಿಗೆ ರಾಜಕೀಯದಲ್ಲಿ ಪಾಲುಗೊಳ್ಳುವ ಎಲ್ಲ ಅಧಿಕಾರವಿದೆ « ಅವಧಿ / avadhi - [...] ವಿಷಯ ಕುರಿತು ಅವಧಿಯಲ್ಲಿ ನನ್ನ ಲೇಖನ ಪರ್ಯಾಯ ರಾಜಕಾರಣದ ಘಟಶ್ರಾದ್ಧ [...]




ಕರ್ನಾಟಕಕ್ಕೆ ಒಂದೇ ಪಕ್ಷದ ಸ್ಥಿರ ಸರಕಾರ ಬರುವುದು ಅತೀ ಅಗತ್ಯವಿತ್ತು. ಕಳೆದ ಕೆಲವು ವರ್ಷಗಳಿಂದ ಅಸ್ಥಿರ, ಅತಂತ್ರ ವಿಧಾನಸಭೆಗಳಿಂದ ಕರ್ನಾಟಕದ ವರ್ಚಸ್ಸಿಗೆ ತೀವ್ರ ಧಕ್ಕೆಯಾಗಿದೆ. ಅತಂತ್ರ ವಿಧಾನಸಭೆಯೇ ಹಲವು ಅನೈತಿಕ ರಾಜಕೀಯ ಚಟುವಟಿಕೆಗಳ ತಾಯಿಬೇರು. ಹೀಗಾಗಿ ಕರ್ನಾಟಕದ ಸಾಹಿತಿಗಳು ಒಂದು ಗುಂಪಾಗಿ ಒಂದು ರಾಜಕೀಯ ಪಕ್ಷಕ್ಕೆ ಮತ ನೀಡಿ ಅಸ್ಥಿರತೆಯನ್ನು ಕೊನೆಗಾಣಿಸಲು ಮನವಿ ಮಾಡುವ ಪ್ರಕಟಣೆ ಕೊಟ್ಟದ್ದರಲ್ಲಿ ತಪ್ಪೇನೂ ಇಲ್ಲ. ಸದ್ಯಕ್ಕಂತೂ ಕರ್ನಾಟಕದಲ್ಲಿ ಪರ್ಯಾಯ ರಾಜಕೀಯ ಬೆಳೆಯುವ ಪರಿಸ್ಥಿತಿ ಇಲ್ಲದಿರುವ ಸಂದರ್ಭದಲ್ಲಿ ಪರ್ಯಾಯ ರಾಜಕೀಯದ ಬಗ್ಗೆ ಸಾಹಿತಿಗಳು ಮನವಿ ಮಾಡಿದ್ದರೆ ಅತಂತ್ರ ವಿಧಾನಸಭೆ ಸೃಷ್ಟಿಯಾಗಿ ಭೀಕರ ಅನೈತಿಕ ರಾಜಕೀಯಕ್ಕೆ ವೇದಿಕೆ ಒದಗಿಸಿಕೊಟ್ಟಂತೆ ಆಗುತ್ತಿತ್ತು. ಚುನಾವಣಾ ಪೂರ್ವದ ಕರ್ನಾಟಕದ ತುರ್ತು ಆಗಿದ್ದದ್ದು ಕರ್ನಾಟಕ ಕಂಡ ಅತ್ಯಂತ ಭ್ರಷ್ಟ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಪಕ್ಷದ ಆಡಳಿತವನ್ನು ಕೊನೆಗಾಣಿಸುವುದೇ ಆಗಿತ್ತು. ಅದು ಈಗ ಈಡೇರಿದೆ. ಇನ್ನು ಸಾಹಿತಿಗಳು ಸರ್ಕಾರದಿಂದ ದೂರವನ್ನು ಕಾಯ್ದುಕೊಂಡು ಎಚ್ಚರಿಸುವ ಕೆಲಸವನ್ನು ಮಾಡುತ್ತಿರಬೇಕು. ಯಾವ ಕಾರಣಕ್ಕೂ ಸರ್ಕಾರದ ಹಂಗಿನಲ್ಲಿ ಇರಬಾರದು. ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಇನ್ನೊಂದು ಜಾತ್ಯತೀತ ರಾಜಕೀಯ ಶಕ್ತಿಯನ್ನು ಬೆಳೆಸುವ ಕುರಿತು ನಿಧಾನಕ್ಕೆ ಪ್ರೋತ್ಸಾಹವನ್ನು ಕೊಡುತ್ತಾ ಹೋದರೆ ಒಳ್ಳೆಯದು ಏಕೆಂದರೆ ಕರ್ನಾಟಕದಲ್ಲಿ ಹಿಂದೆ ಕಾಂಗ್ರೆಸ್ಸಿಗೆ ಎದುರಾಗಿ ಜನತಾ ಪರಿವಾರ ಪರ್ಯಾಯ ಜಾತ್ಯತೀತ ಶಕ್ತಿಯಾಗಿ ಇತ್ತು. ಇಂದು ಅಂಥ ಪರಿಸ್ಥಿತಿ ಇಲ್ಲ. ಇದುವೇ ಕರ್ನಾಟಕವನ್ನು ಮತ್ತೊಮ್ಮೆ ಕೋಮುವಾದಿಗಳ ದುರಾಡಳಿತಕ್ಕೆ ದೂಡುವ ಅಪಾಯ ಇದೆ.
ಅತಂತ್ರ ಸರಕಾರದಾಡಳಿತದಿಂದ ಬೇಸತ್ತ ಸಾಮಾನ್ಯ ಪ್ರಜೆಗಳು ಸ್ಥಿರ ಸರಕಾರವನ್ನು ಬಯಸಿದರೆ ಅದರಲ್ಲಿ ತಪ್ಪೇನಿದೆ? ಭ್ರಷ್ಟಾಚಾರಕ್ಕಿಂತ ಕೋಮುವಾದಿ ಪಕ್ಷವನ್ನು ಜಾತಿವಾದಿ ಪಕ್ಷವನ್ನು ಸೋಲಿಸುವುದು ಪ್ರಜೆಗಳ ಪ್ರಾಶಸ್ತ್ಯವಾಗಿತ್ತು.ಅದಕ್ಕೆ ಸಾಹಿತಿಗಳು ಕೈ ಜೋಡಿಸಿದರೆ ಅದರಲ್ಲೇನು ತಪ್ಪು? ಆದರೆ ನಮ್ಮದು ಸಂಸದೀಯ ಪಕ್ಷಾಧಾರಿತ ವ್ಯವಸ್ಥೆ ಇರುವ ದೇಶ. ಇಲ್ಲಿ ಭ್ರಷ್ಟಾಚಾರಕ್ಕಿಂತ ಜಾತೀಯತೆಯೇ ಹೆಚ್ಚಿನ ಅಪಾಯಕಾರಿಯಾದ ವಿಷಬೀಜವಾಗಿದೆ. ಜಾತೀಯತೆಯನ್ನು ಪೋಷಿಸುವ ಯಾವುದೇ ಪಕ್ಷವನ್ನು ನಾವು ವಿರೋಧಿಸಲೇಬೇಕಾಗಿದೆ. ಲೇಖಕರು ಹೇಳಿದ ಮೌಲ್ಯಾಧಾರಿತ ರಾಜಕಾರಣ ಕಣ್ಮರೆಯಾಗಿದೆ.ಪಕ್ಷಾತೀತ ರಾಜಕಾರಣ ನಮ್ಮಲ್ಲಿಲ್ಲ. ಸದ್ಯಕ್ಕಂತೂ ಕಾಂಗ್ರೆಸ್ಸಿಗೆ ಪರ್ಯಾಯವಾದ ಜಾತ್ಯಾತೀತ ಪಕ್ಷ ನಮ್ಮ ಕಣ್ಣಿಗೆ ಕಾಣುತ್ತಿಲ್ಲ. ಎಲ್ಲ ಜಾತ್ಯಾತೀತ ಪಕ್ಷಗಳು ಕಾಂಗ್ರೆಸ್ಸನ್ನು ಬೆಂಬಲಿಸಲಿ. ನಾವು ಒಮ್ಮೆ ಅವಕಾಶ ಕೊಟ್ಟು ನೋಡೋಣ. ಅಸ್ಥಿರ ಸರಕಾರ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಟ್ಟದ್ದನ್ನು ನಾವು ಕಂಡಿದ್ದೇವೆ. ಕಮ್ಯೂನಿಷ್ಟ್ ಪಕ್ಷವು ಇನ್ನೂ ಜನಸಾಮಾನ್ಯರ ಮನಸ್ಸುಗಳಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಆ ದಿಶೆಯಲ್ಲಿ ಎಲ್ಲ ಪಕ್ಷಗಳು ಕಾರ್ಯನಿರ್ವಹಿಸಲಿ. ಇದ್ದುದರಲ್ಲಿಯೇ ಹಿತವಾದ ಪಕ್ಷವನ್ನು ಬೆಂಬಲಿಸಲಾಗಿದೆ.ಸದ್ಯಕ್ಕಂತೂ ಕಾಂಗ್ರೆಸ್ಸು ಮಾತ್ರ ಸ್ಥಿರ ಸರಕಾರ ಕೊಡಲು ಸಾಧ್ಯ. ಅದನ್ನೇ ನಾವೆಲ್ಲ ಬಯಸುವುದು. ಉದಯಕುಮಾರ ಹಬ್ಬು, ಕಿನ್ನಿಗೋಳಿ