ಜನ ಪ್ರತಿನಿಧಿಗಳೋ ಧನ ಪ್ರತಿನಿಧಿಗಳೋ ?
ಈ ದೇಶದ ಪ್ರಜೆಗಳ ಹಣೆಬರಹ ಸರಿ ಇಲ್ಲವೋ ಅಥವಾ ಗ್ರಹಚಾರ ಕೆಟ್ಟಿದೆಯೋ, ಆರು ದಶಕಗಳ ಸ್ವಾತಂತ್ರ್ಯದ ನಂತರವೂ ಇನ್ನೂ ನಮ್ಮ ಆಳ್ವಿಕರಿಗೆ ಪ್ರಬುದ್ಧತೆ ಬಂದಿಲ್ಲ. ಒಬ್ಬ ವ್ಯಕ್ತಿಯ ಜೀವನದಲ್ಲಿ ಅರವತ್ತು ತುಂಬಿದರೆ ವೃದ್ಧಾಪ್ಯ ಎನ್ನಲಾಗುತ್ತದೆ. ಜೀವನದ ಸಿಹಿ ಕಹಿ ಅನುಭವಗಳನ್ನೆಲ್ಲಾ ಎದುರಿಸಿ ಅಂತ್ಯಕಾಲವನ್ನು ಎದುರು ನೋಡುವ ಪರ್ವ ಕಾಲವದು. ಆದರೆ ಒಂದು ರಾಷ್ಟ್ರದ ನೆಲೆಯಲ್ಲಿ ಆರು ದಶಕಗಳು ಪ್ರಬುದ್ಧತೆಯ ಲಕ್ಷಣಗಳನ್ನು ಮೂಡಿಸುವ ಪರ್ವದಂತೆ. ಹಾಗೆ ನೋಡಿದರೆ ಕಳೆದ ಆರು ದಶಕಗಳ ಸ್ವತಂತ್ರ ಆಳ್ವಿಕೆಯಲ್ಲಿ ಭಾರತದ ಸಾಧನೆಯೇನೂ ಕಡಿಮೆ ಇಲ್ಲ. ಶತಮಾನಗಳಿಂದ ಈ ದೇಶದ ಮನಸ್ಥಿತಿಯನ್ನು ಮತ್ತು ಮನೋಭಾವವನ್ನು ಕಾಡುತ್ತಿರುವ ಕೆಲವು ಸಾಂಸ್ಕೃತಿಕ, ಸಾಮಾಜಿಕ ವಿದ್ಯಮಾನಗಳು ಇಂದಿಗೂ ಮುಂದುವರೆದಿರುವುದು ನಿಜವಾದರೂ ಭಾರತೀಯ ಸಮಾಜದ ಮುನ್ನಡೆಯ ಹೆಜ್ಜೆ ಗುರುತುಗಳು ಸಕಾರಾತ್ಮಕವಾಗಿರುವುದು ಕೊಂಚ ಮಟ್ಟಿಗಾದರೂ ಸತ್ಯ. ವ್ಯವಸ್ಥೆ ಬದಲಾಗಿಲ್ಲ ನಿಜ ಆದರೆ ವ್ಯವಸ್ಥೆಯ ಒಳಗೆ ಕೆಲವು ಸಕಾರಾತ್ಮಕ ಬದಲಾವಣೆಗಳ ಪ್ರಯತ್ನಗಳು ನಡೆಯುತ್ತಿರುವುದಂತೂ ಸತ್ಯ. ಆದರೆ ನಾವು ಎಡವುತ್ತಿರುವುದು ಎಲ್ಲಿ ? ಎಲ್ಲ ಕ್ಷೇತ್ರಗಳೂ ಅರಾಜಕತೆಯ ತಾಣವಾಗಿದೆ. ರಾಜಕೀಯವನ್ನು ಬಿಡಿ, ಸುಧಾರಣೆ ಎಂಬ ಪದ ದೇಶದ ರಾಜಕೀಯ ನಿಘಂಟಿನಲ್ಲೇ ಇಲ್ಲ. ಸಾಮಾಜಿಕ ಕ್ಷೇತ್ರದಲ್ಲೂ ವೈಫಲ್ಯ ಎದ್ದುಕಾಣುತ್ತಿದೆ. ಸಾಂಸ್ಕೃತಿಕ ಕ್ಷೇತ್ರ ಕಲುಷಿತಗೊಂಡು ರಾಡಿಯಾಗಿದೆ. ಎಲ್ಲದಕ್ಕೂ ರಾಜಕಾರಣಿಗಳೇ ಕಾರಣ ಎಂದು ನೇರವಾಗಿ ದೂಷಿಸುವುದು ಆತ್ಮದ್ರೋಹವಾದೀತೇನೋ. ಹೌದು, ರಾಜಕಾರಣಿಗಳು ತಮ್ಮ ಅಧಿಕಾರ ಪ್ರಾಬಲ್ಯದ ಕಾರಣ ದೇಶದ ಹಲವು ವಿದ್ಯಮಾನಗಳಿಗೆ ಕಾರಣರಾಗಿದ್ದು , ಕನಿಷ್ಠ ಪಕ್ಷ ಆಡಳಿತ ವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಈ ದೇಶದ ರಾಜಕಾರಣದ ವೈಫಲ್ಯ ಎದ್ದುಕಾಣುವಂತಹುದು. ಹಾಗೆಂದ ಮಾತ್ರಕ್ಕೆ ಈ ದೇಶದಲ್ಲಿ ಉತ್ತಮ ಸಂಸದರು, ಪ್ರಾಮಾಣಿಕರು, ಸತ್ಯಸಂಧರು, ಸಂವಿಧಾನಕ್ಕೆ ಬದ್ಧರಾದವರು ಇಲ್ಲವೆಂದು ಸಾರಾಸಗಟಾಗಿ ಹೇಳಲಾಗದು. ಇಲ್ಲಿಯೂ ಬೆರಳೆಣಿಕೆಯಷ್ಟು ಉತ್ತಮರು ಇದ್ದಾರೆ. ಅಷ್ಟೇ ಪ್ರಮಾಣದಲ್ಲಿ ಅಧಮರೂ ಇದ್ದಾರೆ. ಈ ಅಧಮರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದು ದುರದೃಷ್ಟಕರ ಬೆಳವಣಿಗೆ. ಇದು ಸಂಸತ್ತಿಗೆ ಮಾತ್ರ ಅನ್ವಯಿಸುವುದಲ್ಲ. ರಾಜ್ಯ ವಿಧಾನಸಭೆಗಳಲ್ಲೂ ಇದೇ ಲಕ್ಷಣಗಳನ್ನು ಕಾಣಬಹುದು. ನಮ್ಮ ಶಾಸಕಾಂಗದ ಅವ್ಯವಸ್ಥೆಯನ್ನೇ ನೋಡಿ. ವಿಧಾನಸಭೆ-ರಾಜ್ಯಸಭೆ-ಲೋಕಸಭೆಯ ಕಲಾಪಗಳಿಗೆ ಹಾಜರಾಗುವವರ ಸಂಖ್ಯೆಯೇ ಕ್ಷೀಣಿಸುತ್ತಿದೆ. ದೇಶದ ಕೋಟ್ಯಂತರ ಕಾರ್ಮಿಕರಿಗೆ ಅನ್ವಯವಾಗುವ ನೋ ವರ್ಕ್ ನೋ ಪೇ ಇವರಿಗೆ ಅನ್ವಯಿಸುವುದಿಲ್ಲ. ಒಬ್ಬ ಕಟ್ಟಡ ಕಾರ್ಮಿಕ ಒಂದು ದಿನ ಕೆಲಸಕ್ಕೆ ಹಾಜರಾಗದಿದ್ದರೆ ಒಂದು ದಿನದ ಕೂಲಿ ನೀಡಲಾಗುವುದಿಲ್ಲ. ಆದರೆ ಜನ ಪ್ರತಿನಿಧಿಗಳಿಗೆ ಕಾರ್ಮಿಕ ಕಾಯ್ದೆ ಅನ್ವಯಿಸುವುದಿಲ್ಲ. ಏಕೆಂದರೆ ಇವರು ಒಡೆಯರಲ್ಲವೇ ? ಊಳಿಗಮಾನ್ಯ ಮನೋಭಾವ ನಮ್ಮಲ್ಲಿ ಎಷ್ಟು ಗಾಢವಾಗಿ ಬೇರೂರಿದೆ ಎಂದರೆ ಟೀಕೆಗಳನ್ನು ಸ್ವೀಕರಿಸುವುದರಲಿ, ಆಲಿಸುವ ತಾಳ್ಮೆಯನ್ನೂ ಕಳೆದುಕೊಂಡುಬಿಟ್ಟಿದ್ದೇವೆ. ನಮ್ಮ ನಾಯಕನನ್ನು ಟೀಕಿಸುವ ಹಕ್ಕು ಇವರಿಗಿಲ್ಲ ಎಂಬ ಘೋಷಣೆ ನಿತ್ಯ ಸುದ್ದಿಯಾಗಿದೆ. ಟೀಕೆಗಳ ವಿರುದ್ಧ ಪ್ರತಿಭಟಿಸುವುದು ನಿತ್ಯ ಸುದ್ದಿಯಾಗಿದೆ. ಅಂದರೆ ನಮ್ಮ ನಾಯಕರು ಪ್ರಶ್ನಾತೀತರು ಸಂಶಯಾತೀತರು ಅವರ ನುಡಿಯೇ ಅಂತಿಮ ಎಂಬ ವಂಧಿಮಾಗದ ಸಂಸ್ಕೃತಿ ದೇಶದ ಎಲ್ಲ ಕ್ಷೇತ್ರಗಳನ್ನೂ ಆವರಿಸಿದೆ.
ಚಿತ್ರ ಕೃಪೆ : ಶಂಕರ್ ಪಾಮರ್ತಿ
ಕಲಾಪಕ್ಕೆ ಬರಲಿ ಬರದಿರಲಿ ಇವರ ವೇತನ, ಸೌಕರ್ಯ, ಸೌಲಭ್ಯ ಮತ್ತು ಸವಲತ್ತುಗಳಿಗೆ ಬರ ಬರುವುದಿಲ್ಲ. ದೇಶದ ಜನ ಬರಪೀಡಿತರಾದರೂ ಇವರ ಐಷಾರಾಮಿ ಜೀವನಕ್ಕೇನೂ ಕೊರತೆಯಿಲ್ಲ. ಈ ನಮ್ಮ ಪ್ರತಿನಿಧಿಗಳಿಗೆ ದೇಶದ ಜನತೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಚರ್ಚಿಸುವ ಇಚ್ಚಾಶಕ್ತಿಯೇ ಇಲ್ಲ. ದೇಶದ ಪ್ರಮುಖ ವಿರೋಧ ಪಕ್ಷಕ್ಕೆ ವಾಕ್ ಔಟ್ ಮಾಡುವುದೇ ಒಂದು ಚಟವಾಗಿ ಹೋಗಿದೆ. ಸಂವಿಧಾನ ಕರ್ತೃಗಳು ಸಂಸತ್ತಿನ ಕಲಾಪಗಳಿಗೆ ನೀಡಿದ್ದ ಮೌಲ್ಯಗಳನ್ನಾಗಲಿ, ಘನತೆ ಗೌರವಗಳನ್ನಾಗಲಿ ರಕ್ಷಿಸುವ ಕಾಳಜಿಯೂ ಇವರಲ್ಲಿಲ್ಲ. ಜನತೆಗೆ ಸಂವಿಧಾನದತ್ತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಆಳುವ ಸರ್ಕಾರಗಳು ಕೈಗೊಳ್ಳಬೇಕಾದ ಕ್ರಮಗಳು ಚುನಾವಣೆಯ ಲಾಭನಷ್ಟಗಳ ಲೆಕ್ಕಾಚಾರದಲ್ಲಿ ಕಳೆದುಹೋಗುತ್ತಿರುವುದರಿಂದ ಅವಕಾಶವಂಚಿತರು ಮತ್ತು ಶೋಷಿತ ವರ್ಗಗಳು ಇನ್ನೂ ಕಳೆದುಕೊಳ್ಳುತ್ತಲೇ ಇದ್ದಾರೆ.
ಈ ಬಾರಿಯ ಮುಂಗಾರು ಸಂಸತ್ ಅಧಿವೇಶನ ಮುಂಗಾರು ಮಳೆಯ ತುಂತುರು ಹನಿಗಳಂತೆಯೇ ಹೀಗೆ ಬಂದು ಹಾಗೆ ಹೋಗಿದೆ. ವಾಕ್ ಔಟ್ ತಜ್ಞರ ಕೊಡುಗೆ, ಇಡೀ ಕಲಾಪ ವಾಷ್ ಔಟ್ ಆಗಿಹೋಗಿದೆ. ಮಾಧ್ಯಮಗಳಲ್ಲಿ ಕಲಾಪದ ಸಮಯ ವ್ಯರ್ಥವಾಗಿದ್ದರಿಂದ ರಾಷ್ಟ್ರದ ಬೊಕ್ಕಸಕ್ಕೆ ಕೋಟ್ಯಂತರ ರೂಗಳ ನಷ್ಟವಾಗಿದೆ ಎಂದು ಬೊಬ್ಬೆ ಹೊಡೆಯಲಾಗುತ್ತಿದೆ. ಆದರೆ ಈ ಅರಣ್ಯ ರೋದನ ಕೇಳುವವರಾರು ? ಬೊಕ್ಕಸ ಇರುವುದೇ ಆಳ್ವಿಕರು ಲೂಟಿ ಮಾಡಲು ಅಥವಾ ಕಾಪರ್ೋರೇಟ್ ಉದ್ಯಮಿಗಳಿಗೆ ಹಂಚಲು ಅಲ್ಲವೇ ? ಜನಸಾಮಾನ್ಯರಿಗೂ ರಾಷ್ಟ್ರದ ಬೊಕ್ಕಸಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯಾ ಎನ್ನುತ್ತಾರೆ ನಮ್ಮ ವಾಕ್ ಔಟ್ ಶೂರರು. ಹಾಗಾಗಿಯೇ ಬಿಜೆಪಿ ನಾಯಕರಿಗೆ ತಾವು ಕಲಾಪವನ್ನು ಬಹಿಷ್ಕರಿಸುವ ಮೂಲಕ ಯಾವುದೇ ಚಚರ್ೆ ನಡೆಸಲು ಅವಕಾಶ ನೀಡದೆ ಇರುವುದು ಹೆಮ್ಮೆಯ ವಿಷಯವಾಗುತ್ತದೆ. ಪಕ್ಷದ ಲಾಭದ ಪ್ರಶ್ನೆ ಎದುರಾಗುತ್ತದೆ. ಚಚರ್ೆಯಾಗಲಿ ಬಿಡಲಿ, ಶಾಸನಗಳು ಜಾರಿಯಾಗಲಿ ಬಿಡಲಿ, ಲೋಕಪಾಲ್, ಮಹಿಳಾ ಮೀಸಲಾತಿ, ಬಾಲಕಾಮರ್ಿಕ ಮಸೂದೆ ಇತ್ಯಾದಿಗಳು ಧೂಳಿಪಟವಾಗಲಿ, ಯಾರಿಗೇನಾಗಬೇಕು ? ಆಳುವ ಪಕ್ಷದ ಮೇಲೆ ಗೂಬೆ ಕೂಡಿಸಿ ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವುದೊಂದೇ ಇವರ ಧ್ಯೇಯ.
ಇಲ್ಲಿ ಹಣಕಾಸು ಬೊಕ್ಕಸದ ಪ್ರಶ್ನೆಯಲ್ಲ. ಮೌಲ್ಯಗಳ ಬೊಕ್ಕಸದ ಪ್ರಶ್ನೆ. ದೇಶದ ಬೊಕ್ಕಸದಲ್ಲಿ ಹಣಕಾಸಿಗೆ ಕೊರತೆಯಿಲ್ಲ. ಆದರೆ ಮೌಲ್ಯಗಳ ಬೊಕ್ಕಸ ಬರಿದಾಗುತ್ತಿದೆ. ನೈತಿಕತೆಯ ಬೊಕ್ಕಸ ಬರಿದಾಗುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯ ಮೂಲಮಂತ್ರವಾದ ಜನಪರ ಕಾಳಜಿ ಎಂಬ ಪದ ಆಳ್ವಿಕರ ನಿಘಂಟಿನಿಂದ ಅದೃಶ್ಯವಾಗಿಹೋಗಿದೆ. ಜನ ಪ್ರತಿನಿಧಿಗಳು ಜನತೆಯನ್ನು ಪ್ರತಿನಿಧಿಸುತ್ತಿಲ್ಲ, ಜನತೆಯ ಜಾತಿ, ಮತ, ಧರ್ಮ, ಭಾಷೆ ಮತ್ತು ಇತರ ಅಸ್ಮಿತೆಗಳನ್ನು ಪ್ರತಿನಿಧಿಸುತ್ತಿದ್ದಾರೆ. ಇವರ ದೃಷ್ಟಿಯಲ್ಲಿ ಸಂವಿಧಾನ ಎನ್ನುವುದು ಪರೀಕ್ಷೆಗೆ ಓದಿ ಪಕ್ಕಕ್ಕಿಡುವಂತಹ ಒಂದು ಪಠ್ಯಪುಸ್ತಕವಾಗಿ ಪರಿಣಮಿಸಿದೆ. ಬೊಕ್ಕಸದಲ್ಲಿ ಹಣಕಾಸು ಮಾಯವಾದರೆ ಸಾಲ ತಂದು ತುಂಬಿಸಬಹುದು. ಮೌಲ್ಯಗಳನ್ನು ಎಲ್ಲಿಂದ ತರುವುದು ? ಭ್ರಷ್ಟಾಚಾರದ ಕಡಲಲ್ಲಿ ಮುಳುಗಿರುವ ಸಕರ್ಾರ ಮತ್ತು ಸಕರ್ಾರದ ಅಕ್ರಮಗಳನ್ನು ಬಯಲಿಗೆಳೆಯಲಾರದಷ್ಟು ಮಟ್ಟಿಗೆ ನೈತಿಕತೆಯನ್ನು ಕಳೆದುಕೊಂಡಿರುವ ವಿರೋಧ ಪಕ್ಷಗಳು ಈ ದೇಶದ ಆಡಳಿತ ಚುಕ್ಕಾಣಿಯನ್ನು ಜಂಟಿಯಾಗಿ ಹಿಡಿದಿರುವುದು ದುರಂತವಲ್ಲವೇ ? ಇಷ್ಟು ಸಾಲದೆಂಬಂತೆ ರಾಜ್ಯಸಭೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನಸಮಾಜ ಪಕ್ಷದ ಸಂಸದರು ಹೊಡೆದಾಟದಲ್ಲಿ ತೊಡಗುವ ಮೂಲಕ ತಮ್ಮ ಶಿಸ್ತಿನ (?) ಪರಿಚಯ ಮಾಡಿಸಿದ್ದಾರೆ. ಇನ್ನೆಷ್ಟು ಸಹಿಸಿಕೊಳ್ಳಬೇಕು ಭಾರತೀಯ ಪ್ರಜೆಗಳು ? ಅಶಿಸ್ತು, ಅರಾಜಕತೆ, ಅಪ್ರಮಾಣಿಕತೆ, ಅನೈತಿಕತೆಗೂ ಒಂದು ಮಿತಿ ಇರಬೇಕಲ್ಲವೇ ? ಮಿತಿ ಇಲ್ಲವಾದಲ್ಲಿ ಸಾರ್ವಭೌಮ ಪ್ರಜೆಗಳು ಮಿತಿಯನ್ನು ನಿಗದಿಪಡಿಸಬೇಕಾಗುತ್ತದೆ, ತಮ್ಮ ಅಮೂಲ್ಯ ಮತದ ಮೂಲಕ.
]]>





0 Comments