ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಿವಾಕರ್ ನೇರನುಡಿ : ಕಾವೇರಿ ವಿವಾದ ಜನರ ದನಿಯನ್ನು ಕೊಂಚ ಆಲಿಸಿ

ಕಾವೇರಿ ವಿವಾದ ಜನರ ದನಿಯನ್ನು ಕೊಂಚ ಆಲಿಸಿ

ಕಾವೇರಿ ವಿವಾದ ಕಾವೇರಿ ಮಾತೆಯಷ್ಟೇ ಶಾಶ್ವತ, ನಿರಂತರ ಮತ್ತು ಚಲನಶೀಲ. ನದಿ ಇರುವವರೆಗೂ ಸಮಸ್ಯೆ ಇರುತ್ತದೆ. ಏಕೆಂದರೆ ಈ ಸಮಸ್ಯೆಯ ಬೀಜಗಳು ಶತಮಾನದಷ್ಟು ಹಳೆಯದು. ಬಹುತೇಕ 90 ವರ್ಷಗಳ ಕಾಲ ಈ ವೃಕ್ಷವನ್ನು ಆಳುವ ವರ್ಗಗಳು ಪೋಷಿಸುತ್ತಲೇ ಬಂದಿದ್ದಾರೆ. ಭಾರತ ಪಾಕಿಸ್ತಾನದ ನಡುವೆ ಕಾಶ್ಮೀರ ವಿವಾದ ಇರುವಂತೆ ಕರ್ನಾಟಕ ತಮಿಳುನಾಡು ನಡುವೆ ಕಾವೇರಿ ವಿವಾದ ಸದಾ ಜಾಗೃತವಾಗಿರುತ್ತದೆ. ಕಾಶ್ಮೀರ ಎರಡೂ ರಾಷ್ಟ್ರಗಳ ರಾಷ್ಟ್ರೀಯತೆಯ ಭಾವನೆಗಳ ಭಂಡಾರವಾದರೆ ಕಾವೇರಿ ವಿವಾದ ಕನ್ನಡ ತಮಿಳು ಭಾಷಿಕರ ಭಾವಾವೇಷದ ಭಂಡಾರವಾಗಿ ಪರಿಣಮಿಸಿದೆ. ಹಾಗಾಗಿಯೇ ಸರ್ಕಾರ ಯಾವುದೇ ಇದ್ದರೂ ಮಳೆಯ ಕೊರತೆ ಕಂಡಾಗಲೆಲ್ಲಾ ಕಾವೇರಿ ವಿವಾದ ಭುಗಿಲೇಳುತ್ತದೆ. ಭುಗಿಲೇಳುತ್ತದೆ ಎಂಬ ಪದ ಬಳಕೆ ಸಮರ್ಥನೀಯ ಎನಿಸದಿದ್ದರೂ, ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಈ ಪದವನ್ನು ಬಳಸುವ ಮೂಲಕವೇ ಸಮಸ್ಯೆಗೆ ಮತ್ತಷ್ಟು ಜೀವ ತುಂಬುತ್ತಿರುವುದಂತೂ ಸತ್ಯ.

ಕಳೆದ ನಾಲ್ಕು ತಿಂಗಳುಗಳಿಂದ ರಾಜ್ಯದ ಜನತೆಯನ್ನು ಕಾಡುತ್ತಿರುವ ಕಾವೇರಿ ವಿವಾದ ಈಗಾಗಲೇ ಸಾಕಷ್ಟು ಪ್ರಕ್ಷುಬ್ಧತೆಯನ್ನು ಉಂಟುಮಾಡಿದೆ. ರಸ್ತೆ ತಡೆ ಆಚರಿಸುವುದು , ಜಿಲ್ಲಾ ಮತ್ತು ರಾಜ್ಯ ಮಟ್ಟದ ಬಂದ್ ಆಚರಿಸುವುದು, ಸತ್ಯಾಗ್ರಹ ಹೂಡುವುದು, ಪ್ರತಿಭಟನೆ, ಧರಣಿ, ಮುತ್ತಿಗೆ, ಬಂಧನ , ಬಿಡುಗಡೆ ಇವೆಲ್ಲವೂ ಕ್ಲೀಷೆ ಎನ್ನುವಷ್ಟು ಮಟ್ಟಿಗೆ ಸಹಜ ಪ್ರಕ್ರಿಯೆಗಳಾಗಿವೆ. ಹಾಗಾಗಿಯೇ ಮಾನ್ಯ ಮಾಜಿ ಪ್ರಧಾನಿ ದೇವೇಗೌಡರು ಆಮರಣಾಂತ ಉಪವಾಸ ಸತ್ಯಾಗ್ರಹ ಹೂಡಲು ನಿರ್ಧರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹಗಳೂ (ಆಮರಣಾಂತ ಎನ್ನುವುದು ಅಪಪ್ರಯೋಗದ ಶಬ್ದವಾಗಿರುವುದು ಒತ್ತಟ್ಟಿಗಿರಲಿ) ಸಹ ಜನರ ದೃಷ್ಟಿಯಲ್ಲಿ ಕ್ಲೀಷೆಯೇ ಆಗಿಬಿಟ್ಟಿದೆ. ಕಾರಣ ಹೇಳಬೇಕಿಲ್ಲ. ರಾಜಕಾರಣಿಗಳಿಗೆ ಈ ಪ್ರಹಸನಗಳೇ ಚುನಾವಣೆಗಳ ಗೆಲುವಿನ ನೆಲಹಾಸುಗಳು, ಮೆಟ್ಟಿಲುಗಳು. ಕಾವೇರಿ ನಿಯಂತ್ರಣ ಪ್ರಾಧಿಕಾರ ಕಳೆದ ಬಾರಿಯಂತೆಯೇ ಈ ಬಾರಿಯೂ ತಮಿಳುನಾಡಿಗೆ ನೀರು ಬಿಡಲು ಆದೇಶಿಸಿದೆ. ಸುಪ್ರೀಂ ಕೋರ್ಟ್ ಸಹ ಇದೇ ನಿಲುವು ತಾಳಿದೆ. ಕಾರಣಗಳು ಸ್ಪಷ್ಟ.

ಕಾವೇರಿ ಕರ್ನಾಟಕದ ಸ್ವತ್ತಾದರೂ ನದಿಯ ನೀರು ರಾಜ್ಯದ ಸ್ವತ್ತಲ್ಲ. ನ್ಯಾಯಾಧಿಕರಣದ ತೀರ್ಪಿನ ಅನುಸಾರ, ಸಂವಿಧಾನಾತ್ಮಕ ಹೊಣೆಗಾರಿಕೆಯನ್ನರಿತು ನದಿ ನೀರನ್ನು ಹಂಚಿಕೊಳ್ಳುವುದು ಸರ್ಕಾರದ ಕರ್ತವ್ಯವೂ ಹೌದು, ಜವಾಬ್ದಾರಿಯೂ ಹೌದು. ಆದರೆ ರಾಜ್ಯದಲ್ಲಿ ಮಳೆಯ ಕೊರತೆ ಇದ್ದಾಗ ನೆರೆ ರಾಜ್ಯವೊಂದು ನೀರಿಗಾಗಿ ತಗಾದೆ ತೆಗೆದಾಗ ರಾಜ್ಯ ಸರ್ಕಾರದ ನಿಲುವು ಹೇಗಿರಬೇಕು ? ಇದು ಆಳುವ ಪಕ್ಷದ ಪ್ರಬುದ್ಧತೆ ಮತ್ತು ಪ್ರಾಮಾಣಿಕತೆಯನ್ನು ಪರೀಕ್ಷಿಸುವ ಒಂದು ಸಮಸ್ಯೆ. ನಿಜ, ನ್ಯಾಯಾಂಗದ ಆದೇಶವನ್ನು ಉಲ್ಲಂಘಿಸುವಂತಿಲ್ಲ. ಆದರೆ ಸಾರ್ವಭೌಮ ಪ್ರಜೆಗಳ ಆಕಾಂಕ್ಷೆಗಳನ್ನು ಉಲ್ಲಂಘಿಸಬಹುದೇ. ಜನಾಭಿಪ್ರಾಯವನ್ನು ಅಲ್ಲಗಳೆಯಬಹುದೇ ? ಇಲ್ಲಿ ಪ್ರಜೆಗಳ ದನಿಯನ್ನು ಗುರುತಿಸುವುದು ಮುಖ್ಯವಾಗುತ್ತದೆ. ಕಾವೇರಿ ವಿವಾದದಂತಹ ಸೂಕ್ಷ್ಮ ವಿಚಾರಗಳಲ್ಲಿ ಯಾವ ಜನರ ದನಿಯನ್ನು ಆಲಿಸಬೇಕು, ಯಾರ ಹಿತಾಸಕ್ತಿಯನ್ನು ರಕ್ಷಿಸಬೇಕು ಎಂಬ ಪ್ರಶ್ನೆ ಮುಖ್ಯವಾಗುತ್ತದೆ.

ಆದರೆ ಕನ್ನಡ ಪರ ಸಂಘಟನೆಗಳಿಗೆ ಈ ಪ್ರಶ್ನೆ ವಿಭಿನ್ನವಾಗಿ ಕಾಣುತ್ತದೆ. ಕಾವೇರಿ ನೀರಿನ ಸಮಸ್ಯೆ ಎನ್ನುವುದಕ್ಕಿಂತಲೂ ಕನ್ನಡ ಅಸ್ಮಿತೆಯ ಪ್ರಶ್ನೆಯಾಗುತ್ತದೆ, ರಾಜ್ಯದ ಪ್ರತಿಷ್ಠೆಯ ಪ್ರಶ್ನೆಯಾಗುತ್ತದೆ. ಕನ್ನಡ ಪರ ಸಂಘಟನೆಗಳ ಭಾವಾವೇಷದ ಹೋರಾಟಗಳು ಒಂದು ಪ್ರಾಂತೀಯ ವಿವಾದವನ್ನು ರಾಜ್ಯಮಟ್ಟದ ವಿವಾದವನ್ನಾಗಿ ಪರಿವತರ್ಿಸುತ್ತವೆ. ಕಾವೇರಿ ವಿವಾದದಲ್ಲಿ ರಾಜ್ಯದ ಪರವಾಗಿ ವಾದಿಸುವವರು, ಅಂದರೆ ತಮಿಳುನಾಡಿಗೆ ನೀರು ಬಿಡಲೇ ಕೂಡದು ಎಂದು ವಾದಿಸುವವರು ಹಿತಚಿಂತಕರಾಗುತ್ತಾರೆ. ವಿರೋಧಿಸುವವರು ದ್ರೋಹಿಗಳಾಗುತ್ತಾರೆ. ತಟಸ್ಥರಾಗಿರುವುದೂ ದುಸ್ತರವಾಗುತ್ತದೆ. ಸಾಹಿತಿಗಳು ಕಾವೇರಿ ವಿವಾದದ ಬಗ್ಗೆ ಸೊಲ್ಲೆತ್ತುವುದಿಲ್ಲ ಎಂಬ ಆಕ್ಷೇಪವನ್ನೂ ಈ ಹಿನ್ನೆಲೆಯಲ್ಲಿ ಪರಿಗಣಿಸಬೇಕಾಗುತ್ತದೆ. ಪ್ರಜೆಗಳ ಬದುಕಿನ ಸಮಸ್ಯೆಯನ್ನು ಭಾವನೆಗಳ ತಕ್ಕಡಿಯಲ್ಲಿ ತೂಗಿದಾಗ ಇಂತಹ ಭಾವಾವೇಷದ ಸನ್ನಿವೇಶಗಳು ಸೃಷ್ಟಿಯಾಗಿ ಪರ-ವಿರೋಧಿ ನೆಲೆಗಟ್ಟಿನಲ್ಲಿ ವಿಶ್ವಾಸಾರ್ಹತೆಗಳು ನಿರ್ಧರಿಸಲ್ಪಡುತ್ತವೆ. ಇದು ದುರಂತವಾದರೂ ಸತ್ಯ .

ಆದರೆ ರಾಜಕೀಯ ಪಕ್ಷಗಳಿಗೆ ಈ ಭಾವನೆಗಳೂ ಲೆಕ್ಕಕ್ಕಿರುವುದಿಲ್ಲ. ಬದಲಾಗಿ ಯಾವ ರೀತಿ ಈ ಸಮಸ್ಯೆಗೆ ಸ್ಪಂದಿಸಿದರೆ ಮುಂದಿನ ಚುನಾವಣೆಗಳಲ್ಲಿ ಲಾಭವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ತೊಡಗಿರುತ್ತವೆ. ಕಾವೇರಿ ನೀರನ್ನು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀಡುವುದಿಲ್ಲ ಎಂಬ ನಿಲುವು ತಳೆದು, ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ, ಸರ್ಕಾರವನ್ನು ವಿಸರ್ಜಿಸಿ ಹುತಾತ್ಮ ಪಟ್ಟ ಪಡೆದರೆ ಮುಂದಿನ ಚುನಾವಣೆಯಲ್ಲಿ ಜನರ ಅನುಕಂಪದ ಅಲೆಯ ಮೇಲೆ ಗೆಲುವು ಸಾಧಿಸಬಹುದು ಎಂದು ಆಳುವ ಪಕ್ಷ ಯೋಚಿಸುತ್ತದೆ. ಸರ್ಕಾರ ಸಂವಿಧಾನ ಬದ್ಧವಾಗಿ ನಡೆದುಕೊಂಡು, ಅನಿವಾರ್ಯವಾಗಿ ನೀರನ್ನು ಬಿಡಬೇಕಾದ ಸನ್ನಿವೇಶ ಎದುರಿಸುತ್ತಿದ್ದರೂ ಪರ್ಯಾಯ ಮಾರ್ಗ ಸೂಚಿಸದೆ ಸರ್ಕಾರವನ್ನು ದೂಷಿಸುವ ಮೂಲಕವೇ ತಮ್ಮ ಪಕ್ಷದ ಜನಪರ ನಿಲುವನ್ನು ಪ್ರದರ್ಶಿಸುವ ಮೂಲಕ ವಿರೋಧ ಪಕ್ಷಗಳು ಲಾಭ ಗಳಿಸಲೆತ್ನಿಸುತ್ತವೆ. ಆದರೆ ಈ ನಿಲುವುಗಳು ಸಮಸ್ಯೆಗೆ ಪರಿಹಾರ ಸೂಚಿಸುವುದೇ? ಇಲ್ಲ.

ಹಾಗಾದರೆ ಆಡಳಿತ ಯಂತ್ರದ ಮೂರೂ ಪ್ರಮುಖ ಅಂಗಗಳಿಂದ ದೊರೆಯದ ಪರಿಹಾರವನ್ನು ಕಂಡುಕೊಳ್ಳುವುದೆಲ್ಲಿ ? ಕಾವೇರಿ ನೀರಿನ ಅವಶ್ಯಕತೆ ಇರುವ ರೈತಾಪಿ ಸಮುದಾಯದ ದನಿಗಳಲ್ಲಿ ಅಲ್ಲವೇ ? ಎರಡೂ ರಾಜ್ಯಗಳಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ತಮ್ಮ ಕೃಷಿ ನಡೆಸುವ ಮೂಲಕ ದೇಶದ ಜನತೆಗೆ ಅನ್ನ ನೀಡುವ ರೈತ ಬಂಧುಗಳ ಪ್ರತಿನಿಧಿಗಳಿಗೆ ಸಮಸ್ಯೆಯ ಪರಿಹಾರ ಒದಗಿಸುವಲ್ಲಿ ಪ್ರಮುಖ ಪಾತ್ರ ನೀಡುವ ಬಗ್ಗೆ ಏಕೆ ಯಾರೂ ಚಿಂತಿಸುವುದಿಲ್ಲ. ತಮಿಳುನಾಡು ಮತ್ತು ಕರ್ನಾಟಕ ಸರ್ಕಾರಗಳನ್ನು ದೂಷಿಸುವ, ಶ್ಲಾಘಿಸುವ ಬದಲು ಎರಡೂ ರಾಜ್ಯಗಳಲ್ಲಿ ಕಾವೇರಿ ನೀರನ್ನು ಬಳಸುವ ರೈತ ಸಮುದಾಯದ ನೈಜ ಸಮಸ್ಯೆಯನ್ನು ಗ್ರಹಿಸಲು ಏಕೆ ಯತ್ನಿಸಲಾಗುತ್ತಿಲ್ಲ ? ಇದು ಸಮಸ್ಯೆಯನ್ನು ನಾವು ನೋಡುವ ದೃಷ್ಟಿಕೋನವನ್ನು ಅವಲಂಬಿಸುತ್ತದೆ. ಜಯಲಲಿತಾ, ಕರುಣಾನಿಧಿಯಿಂದ ಆಚೆಗಿರುವ ತಮಿಳುನಾಡಿನ ರೈತರು ನಮ್ಮ ಕಣ್ಣಿಗೆ ಗೋಚರಿಸುತ್ತಿದ್ದಾರೆಯೇ ? ಅಥವಾ ಕಾಂಗ್ರೆಸ್ ಮತ್ತು ಬಿಜೆಪಿಯಿಂದಾಚೆಗಿನ ಕನರ್ಾಟಕದ ರೈತರು ಗೋಚರಿಸುತ್ತಿದ್ದಾರೆಯೇ ? ಇಲ್ಲವಾದಲ್ಲಿ ಕಾವೇರಿ ವಿವಾದ ಬಗೆಹರಿಯುವುದಿಲ್ಲ. ನದಿಯ ನೀರಿನಂತೆ ಹರಿಯುತ್ತಲೇ ಇರುತ್ತದೆ.

 

‍ಲೇಖಕರು G

16 December, 2012

1 Comment

  1. ಟಿ.ಕೆ.ಗಂಗಾಧರ ಪತ್ತಾರ.

    ಕಾವೇರಿ ವಿವಾದ ನೂರೋ-ಇನ್ನೂರೋ ವರ್ಷಗಳದ್ದಲ್ಲ. ಸಾವಿರ ವರ್ಷದಷ್ಟು ಹಿಂದಿನದು. 13ನೇ ಶತಮಾನದ ಕನ್ನಡದ ಪ್ರಪ್ರಥಮ ವೈಯಾಕರಣಿ “ಕೇಶಿರಾಜ”ನ ಕಾಲದಷ್ಟು ಹಳೆಯದಿದು. ಕೇಶಿರಾಜನ “ಶಬ್ದಮಣಿ ದರ್ಪಣದಲ್ಲಿ ಕಾವೇರಿಯ ಪ್ರಸ್ತಾಪವಿದೆ. ಈ ವ್ಯಾಕರಣ ಗ್ರಂಥದ ಒಂದು ಸೂತ್ರದಲ್ಲಿ “ಕಾವೇರಿಯ ಕಾಲನಾ ತಿಗುಳನೇಂ ಕಡಗೊಂಡನೊ ಬಡ್ಡಿಗೊಂಡನೊ….”ಎಂಬ ಸುಸ್ಪಷ್ಟ ಉಲ್ಲೇಖವಿದೆ. “ತಿಗುಳ” ಎಂದರೆ “ತಮಿಳ”ನು ಕಾವೇರಿಯ ಕಾಲ್=ಕಾಲುವೆ=ಯನ್ನು ಕಡವೆಂದು ತೆಗೆದುಕೊಳ್ಳುತ್ತಿದ್ದಾನೋ, ಬಡ್ಡಿ ರೂಪದಲ್ಲಿ ಪಡೆಯುತ್ತಿದ್ದಾನೋ ಎಂದು ನಮ್ಮ ಮೇಷ್ಟ್ರು ತಾತ್ಪರ್ಯ ಹೇಳುತ್ತಿದ್ದರು. ನಾನು “ಕಾವೇರಿಯ ಕಾಲನಾ” ಎಂಬುದನ್ನು ವ್ಯಂಗ್ಯವಾಗಿ “ಕಾವೇರಿಗೆ ಕಾಲಸ್ವರೂಪನಾದ ತಿಗುಳ..” ಎಂದು ವ್ಯಾಖ್ಯಾನಿಸುತ್ತಿದ್ದೆ. ಅಂದರೆ ಆಗಿನಿಂದಲೂ ತಮಿಳರು ಕಾವೇರಿ ನೀರಿನ ಮೇಲೆ ತಮ್ಮ ಹಕ್ಕು ಸ್ಥಾಪಿಸುತ್ತಲೇ ಬಂದಿದ್ದಾರೆಂದಾಯ್ತಲ್ಲವೇ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading