ಭಾರತ ಕಳೆದುಕೊಂಡ ಅಮೂಲ್ಯ ರತ್ನ
ಕೆಲವು ಅಮೂಲ್ಯ ರತ್ನಗಳು ನಮ್ಮ ಕೈತಪ್ಪಿ ಹೋಗುತ್ತವೆ. ಕೆಲವನ್ನು ಇತರರು ಬಲವಂತವಾಗಿ ಕಸಿದುಕೊಳ್ಳುತ್ತಾರೆ. ಮತ್ತು ಕೆಲವನ್ನು ಯಾವುದೋ ಅವಘಡದಲ್ಲಿ ಸ್ವತಃ ನಾವೇ ಕಳೆದುಕೊಳ್ಳುತ್ತೇವೆ. ಇನ್ನು ಕೆಲವನ್ನು ಸಮಾಜಘಾತುಕ ಶಕ್ತಿಗಳ ದುಷ್ಕೃತ್ಯಗಳ ಪರಿಣಾಮವಾಗಿ ಕಳೆದುಕೊಳ್ಳುತ್ತೇವೆ. ಹೀಗೆ ಭಾರತ ಕಳೆದುಕೊಂಡ ಅಮೂಲ್ಯ ರತ್ನಗಳು ಹಲವು. ಕೋಹಿನೂರ್ ಬ್ರಿಟೀಷ್ ಸಾಮ್ರಾಜ್ಯದ ವಶವಾಯಿತು. ದೇಶದ ಅರಣ್ಯ ಸಂಪತ್ತು ಕಾರ್ಪೋರೇಟ್‌ಗಳ ವಶವಾಗುತ್ತಿವೆ. ಭಾರತೀಯ ಸಂಸ್ಕೃತಿ ಕೋಮುವಾದಿಗಳ ವಶವಾಗುತ್ತಿದೆ. ಈ ಕಳೆದು ಹೋದ ರತ್ನಗಳ ನಡುವೆಯೇ ಒಂದು ಸೆಕ್ಯುಲಾರ್ ಪ್ರಜಾಸತ್ತಾತ್ಮಕ ರಾಷ್ಟ್ರವಾಗಿ ಕಳೆದುಕೊಂಡ ಅಮೂಲ್ಯ ರತ್ನ ಎಂ.ಎಫ್. ಹುಸೇನ್. ಕಲೆಯನ್ನೇ ತನ್ನ ಉಸಿರಾಗಿಸಿಕೊಂಡು ಅಲೆದಾಡಿದ ಬರಿಗಾಲಿನ ಕಲಾವಿದ ಹುಸೇನ್ ಇನ್ಲಿಲ್ಲ ಎಂದರೆ ಭಾರತದ ಕಲಾ ಪ್ರಪಂಚದಲ್ಲಿ ಒಂದು ಶೂನ್ಯ ಸೃಷ್ಟಿಯಾಗಿದೆ ಎಂದೇ ಭಾವಿಸಬಹುದು.
ಹುಸೇನ್ ಕಲೆಯ ಮಾಂತ್ರಿಕ. ಕುಂಚ ಪ್ರಪಂಚದ ಸಾಮ್ರಾಟ. ತಮ್ಮ ಕ್ಯಾನ್ವಾಸಿನ ಮೇಲೆ ಕುಂಚದಿಂದ ಚಿತ್ರಗಳನ್ನು ಬಿಡಿಸುವ ಮಟ್ಟಿಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ಚಿತ್ರಕಲೆಯಲ್ಲಿ ಪ್ರಯೋಗಶೀಲತೆಗೆ ಒಂದು ವಿಭಿನ್ನ, ನವೀನ, ಅಂತಾರಾಷ್ಟ್ರೀಯ, ಅತೀತ ಆಯಾಮವನ್ನು ನೀಡಿದ ಧೀಮಂತ ವ್ಯಕ್ತಿತ್ವ. ಎಂ.ಎಫ್ ಹುಸೇನ್. ೯೭ ವರ್ಷಗಳ ಕಾಲದ ತಮ್ಮ ಸುದೀರ್ಘ ಬದುಕಿನಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಕಲಾಕೃತಿಗಳನ್ನು ರಚಿಸಿ, ಭಾರತದ ಸಾಂಸ್ಕೃತಿಕ ವೈವಿಧ್ಯತೆಗೆ ಹೊಸ ಆಯಾಮವನ್ನು ದೊರಕಿಸಿಕೊಟ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರನ್ನು ಚಿರಸ್ಥಾಯಿಯಾಗಿ ನೆಲೆಸುವಂತೆ ಮಾಡಿದ ಹುಸೇನ್ ಅಂತ್ಯಕಾಲದಲ್ಲಿ ಮತ್ತೊಂದು ದೇಶಕ್ಕೆ ವಲಸೆ ಹೋಗಿ, ಅನಾಥರಂತೆ ಸಾವನ್ನಪ್ಪಿರುವುದು ಇಡೀ ಭಾರತೀಯರನ್ನು ತಲೆ ತಗ್ಗಿಸುವಂತೆ ಮಾಡಿದೆ. ಎಂತಹುದೇ ಕಲಾವಿದನಾಗಲೀ ಬದುಕುವುದು ತನ್ನ ದೈಹಿಕ ಇರುವಿಕೆಯಿಂದಲ್ಲ. ಅಥವಾ ತನ್ನ ಅಸ್ಮಿತೆಗಳಿಂದಲೂ ಅಲ್ಲ. ಕಲಾ ರಸಿಕರ ಹೃದಯಾಂತರಾಳದಲ್ಲಿ ಅಚ್ಚಾಗಿರುವ ಅಭಿಮಾನವೇ ಅವರ ಶಾಶ್ವತ ಇರುವಿಕೆಗೆ ಸಾಕ್ಷಿಯಾಗುತ್ತದೆ.
ಹುಸೇನ್ ಕೇವಲ ಕುಂಚದಿಂದ ಚಿತ್ರ ಬಿಡಿಸುವ ಒಬ್ಬ ಕಲಾವಿದರಲ್ಲ. ಆತನ ಒಡಲಾಳದಲ್ಲಿ ಅಂತರ್ಗತವಾಗಿದ್ದ ಕಲೆಯ ಸಂಸ್ಕೃತಿ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ಬೆಳೆದುಬಂದಿತ್ತು. ಬಹು ಸಂಸ್ಕೃತಿಯ, ಸೆಕ್ಯುಲರ್ ಭಾರತಕ್ಕೆ ಹೆಮ್ಮೆಯ ಗರಿ ಮೂಡಿಸುವಲ್ಲಿ ಬಿಸ್ಮಿಲ್ಲಾ ಖಾನ್, ಬಡೆ ಗುಲಾಂ ಅಲಿ ಖಾನ್, ಮುಂತಾದವರ ಸಾಲಿನಲ್ಲಿ ಹುಸೇನ್ ನಿಲ್ಲುತ್ತಾರೆ. ಒಂದೂವರೆ ವರ್ಷದ ಕೂಸಾಗಿದ್ದಾಗಲೇ ತಾಯ ಮಮತೆಯನ್ನು ಕಳೆದುಕೊಂಡ ಹುಸೇನ್ ಅವರ ಕಲೆಯ ಕ್ಯಾನ್‌ವಾಸ್ ವಿಶ್ವವ್ಯಾಪಕ. ಭಾರತೀಯನಾಗಿರಲು ಭಾರತದಲ್ಲೇ ಇರಬೇಕಿಲ್ಲ ಎಂದು ತಾವು ಕುವೈತ್ ಪ್ರಜೆಯಾಗಿ ಹೊರಟಾಗ ಹೇಳಿದ ಹುಸೇನ್ ಅಂತ್ಯದವರೆಗೂ ಭಾರತೀಯರಾಗಿಯೇ ಇದ್ದುದು ಮಾತ್ರ ಅಲ್ಲಗಳೆಯಲಾಗದ ಸತ್ಯ. ಆದೆ ತಮ್ಮದೇ ಆದ ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ರಾಷ್ಟ್ರೀಯ ಸಂಸ್ಕೃತಿಯ ಚೌಕಟ್ಟನ್ನು ನಿರ್ಮಿಸಿಕೊಂಡಿರುವ ಫ್ಯಾಸಿಸ್ಟ್ ಶಕ್ತಿಗಳಿಗೆ ಹುಸೇನ್ ಅವರಲ್ಲಿ ಕಂಡಿದ್ದು ಧರ್ಮಾತೀತ ಕಲಾವಿದನಲ್ಲ. ಬದಲಾಗಿ ಒಂದು ನಿರ್ದಿಷ್ಟ ಕೋಮಿಗೆ ಸೇರಿದ ವ್ಯಕ್ತಿಯಷ್ಟೆ. ಪರಿಣಾಮ ಹುಸೇನ್ ಅವರ ಉಚ್ಚಾಟನೆಗೆ ಅವರ ಕಲಾಕೃತಿಗಳ ಧ್ವಂಸ.
ಹುಸೇನ್ ಭಾರತದಲ್ಲೇ ಇರಬಹುದಿತ್ತು ಎಂದು ಹೇಳುವವರು ಅನೇಕ. ಆದರೆ ಯಾವುದೇ ವ್ಯಕ್ತಿಯ ವಿರುದ್ಧ ಒಂದು ಸಾವಿರ ಮೊಕದ್ದಮೆಗಳನ್ನು ಹೂಡಿ, ಎಲ್ಲಿ ಕಾಲಿಟ್ಟರೂ ಬಂಧನಕ್ಕೊಳಗಾಗುವ ಭೀತಿಗೊಳಪಡಿಸಿ, ಆತನ ಕಲಾಕೃತಿಗಳನ್ನು ಕಂಡೆಡೆಯಲ್ಲೆಲ್ಲಾ ಧ್ವಂಸಗೊಳಿಸುತ್ತಾ ಹೋದರೆ ಅಂತಹ ಕಲಾವಿದರು ನೆಮ್ಮದಿಯಿಂದ ಬದುಕಲು ಸಾಧ್ಯವೇ ? ಕೇವಲ ಸಂವಿಧಾನ, ಶಾಸನ, ಕಾಯ್ದೆಗಳು ಮತ್ತು ಇದರಿಂದ ಒದಗುವ ಮೂಲಭೂತ ಹಕ್ಕುಗಳೇ ಒಬ್ಬ ವ್ಯಕ್ತಿಯ ನಾಗರಿಕ ಅಸ್ಮಿತೆಯನ್ನು ರಕ್ಷಿಸಲಾರದು ಎಂದು ನಿರೂಪಿಸಲು ಎಂ.ಎಫ್. ಹುಸೇನ್ ಅವರ ಜೀವನವೇ ಸಾಕ್ಷಿ. ಭಾರತೀಯ ಸಂಸ್ಕೃತಿಯನ್ನು ಧಿಕ್ಕರಿಸುವ ಚಿತ್ರಗಳನ್ನು ತಮ್ಮ ಕ್ಯಾನ್ವಾಸಿನ ಮೇಲೆ ಬಿಡಿಸಿ, ಭಾರತೀಯರಿಗೆ ಅವಮಾನ ಮಾಡಿದ್ದಾರೆ ಎಂದು ಹುಸೇನ್ ವಿರುದ್ಧ ಸೊಲ್ಲೆತ್ತುವವರು ಹುಸೇನ್ ಅವರಲ್ಲಿ ಕಂಡಿದ್ದು ಅನ್ಯ ಕೋಮಿನ ಒಬ್ಬ ವ್ಯಕ್ತಿಯನ್ನೇ ಹೊರತು ಅಸಾಧಾರಣ ಕಲಾವಿದನನಲ್ಲ.
ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ರಾಷ್ಟ್ರೀಯ ಸಂಸ್ಕೃತಿಯ ಹೆಸರಿನಲ್ಲಿ ಭಾರತದ ಬಹುಮುಖಿ ಸಂಸ್ಕೃತಿಯನ್ನು ಹಿಂದೂ ಧರ್ಮದೊಡನೆ ಸಮೀಕರಿಸುವ ಫ್ಯಾಸಿಸ್ಟ್ ಶಕ್ತಿಗಳ ದೃಷ್ಟಿಯಲ್ಲಿ ಕಲೆಯೂ ಒಂದು ನಿರ್ದಿಷ್ಟ ಚೌಕಟ್ಟಿಗೆ ಒಳಪಡಬೇಕು. ಯಾವುದೇ ಕಲೆಯಲ್ಲಿ ಹೊರಸೂಸುವುದು ಕಲಾವಿದನ ಅದ್ಭುತ ಕಲ್ಪನೆಗಳು, ಆತನ/ಆಕೆಯ ವಿಶ್ವಾತೀತ ಭಾವನೆಗಳು, ಹುಲು ಮಾನವನ ಪರಿಕಲ್ಪನೆಯನ್ನು ಮೀರಿದ ಅಮೂರ್ತ ಭಾವನೆಗಳು. ಈ ಭಾವನೆಗಳನ್ನೇ ವಾಸ್ತವ ಜೀವನದೊಂದಿಗೆ ತುಲನಾತ್ಮಕವಾಗಿ ನೋಡುತ್ತಾ, ಕಲೆಯ ಅಮೂರ್ತತೆಯನ್ನು ನಿರ್ದಿಷ್ಟ ಚೌಕಟ್ಟಿನೊಳಗೆ ಬಂಧಿಸಿಡುವ ಮನೋಭಾವ ಕಲಾವಿದನನ್ನು ಮಾತ್ರವಲ್ಲ, ಕಲೆಯನ್ನೂ ಕೊಂದುಬಿಡುತ್ತದೆ. ಮಾನವನ ಇತಿಹಾಸದಲ್ಲಿ ಇಂತಹ ಬರ್ಬರ ಕೊಲೆಗಳು ಅನೇಕ ಸಂಭವಿಸಿವೆ. ಹುಸೇನ್ ಇತ್ತೀಚಿನ ನಿದರ್ಶನವಷ್ಟೆ.
ಫ್ಯಾಸಿಸ್ಟ್ ಶಕ್ತಿಗಳ ಈ ಮನೋಭಾವ ಹೊಸತೇನಲ್ಲ. ಅನಾದಿ ಕಾಲದಿಂದಲೂ ಸಾಂಪ್ರದಾಯಿಕತೆಯನ್ನು ಪ್ರಶ್ನಿಸುವ, ವೈಜ್ಞಾನಿಕ ದೃಷ್ಟಿಕೋನದಿಂದ ಧಾರ್ಮಿಕತೆಯನ್ನು ಪ್ರತಿರೋಧಿಸುವ ಮಹಾನ್ ಚಿಂತಕರು, ಕಲಾವಿದರು ಹತ್ಯೆಗೀಡಾಗಿದ್ದಾರೆ. ಬಹಿಷ್ಕೃತರಾಗಿದ್ದಾರೆ. ಉಚ್ಚಾಟಿತರಾಗಿದ್ದಾರೆ. ಭಾರತದಲ್ಲೂ ಇದು ಸಂಭವಿಸಿದೆ. ಆದರೆ ಸಂವಿಧಾನ ಮತ್ತು ಸೆಕ್ಯುಲರಿಸಂ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ನಮ್ಮಮ ಸೆಕ್ಯುಲರ್ ಸರ್ಕಾರಗಳು ಮಾಡಿದ್ದೇನು. ಕಲಾವಿದರ ಸಂಘಟನೆಗಳು, ಮಾಧ್ಯಮಗಳು ಮಾಡಿದ್ದೇನು ? ಕೇವಲ ಸುದೀರ್ಘ ಚರ್ಚೆಗಳು, ವಾದ ವಿವಾದಗಳು, ಪ್ರತಿಪಾದನೆಗಳು. ಹುಸೇನ್ ಕುವೈತ್‌ನ ಪ್ರಜೆಯಾಗಿ ಭಾರತವನ್ನು ಅಗಲಿ ಹೋಗುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತಳೆದ ತಟಸ್ಥ ನೀತಿ, ದಿವ್ಯ ಮೌನ ಭಾರತದ ಆಳ್ವಿಕರ ಸೆಕ್ಯುಲರ್ ನೀತಿಯನ್ನು ಅನಾವರಣಗೊಳಿಸುತ್ತದೆ.
ಹುಸೇನ್ ಅವರಂತಹ ಅಪೂರ್ವ, ಅಮೂಲ್ಯ ರತ್ನವನ್ನು ಈ ನೆಲದಲ್ಲೇ ಉಳಿಸಿಕೊಳ್ಳುವ ಕಿಂಚಿತ್ ಪ್ರಯತ್ನವನ್ನೂ ಮಾಡದ ಪ್ರಭೃತಿಗಳು, ಇಂತಹ ಅಮೂಲ್ಯ ಕಲೆಗಾರನ ನೆನಪಿನಲ್ಲಿ ರಾಷ್ಟ್ರೀಯ ಶೋಕವನ್ನೂ ಆಚರಿಸದೆ ಹೋದದ್ದು ನಮ್ಮ ನಿಷ್ಕ್ರಿಯತೆಯ ದ್ಯೋತಕವೇನೋ ಎನಿಸುತ್ತದೆ. ಈಗ ಹುಸೇನ್ ನೆನಪು ಮಾತ್ರ ಅವರೊಂದಿಗೆ ಉಳಿಯುವುದು ಅವರ ಅಪೂರ್ವ ಕಲಾಕೃತಿಗಳು. ಕಲಾವಿದನನ್ನು ನಿರ್ನಾಮ ಮಾಡಬಹುದು, ಕಲಾಕೃತಿಗಳನ್ನಲ್ಲ. ಹುಸೇನ್ ಇದಕ್ಕೆ ಸಾಕ್ಷೀಭೂತವಾಗಿ ನಿಲ್ಲುತ್ತಾರೆ.








ಕಲೆಯ ಆಂತರ್ಯವನ್ನು ತಿಳಿಯಲಾರದ ಸಮಾಜ ಹಾಗೂ ಪ್ರಭುತ್ವ….ಸಂವೇದನಾರಹಿತರಾಗಿಯೂ ನೆಮ್ಮದಿಯಿಂದ ಬದುಕುತ್ತಿರುವ ನಮ್ಮ ಸೈದ್ಧಾಂತಿಕ ಷಂಡತನ….ಎಲ್ಲವೂ ಯಾವ ದುರಂತದ ಮುನ್ಸೂಚನೆಯೆಂಬ ಮೂಲಭೂತ ಪ್ರಶ್ನೆ , ಹುಸೇನ್ ಸಾವಿನ ಸೂತಕದಲ್ಲಿ ನನ್ನನ್ನು ನರಳುವಂತೆ ಮಾಡುತ್ತಿದೆ. ಹುಸೇನ್ ಇರಲಾರದ ಈ ನೆಲದ ಕುರಿತು ನಿರ್ವಂಚನೆಯಿಂದ “ದೇಶಗೀತೆ” ಬರೆಯುವುದು ಕಷ್ಟ!
-ದಿನೇಶ್ ಕುಕ್ಕುಜಡ್ಕ
” ಕೋಹಿನೂರ್ ಬ್ರಿಟೀಷ್ ಸಾಮ್ರಾಜ್ಯದ ವಶವಾಯಿತು. ದೇಶದ ಅರಣ್ಯ ಸಂಪತ್ತು ಕಾರ್ಪೋರೇಟ್‌ಗಳ ವಶವಾಗುತ್ತಿವೆ. ಭಾರತೀಯ ಸಂಸ್ಕೃತಿ ಕೋಮುವಾದಿಗಳ ವಶವಾಗುತ್ತಿದೆ “- ಈ 3 ವಾಕ್ಯಗಳಲ್ಲಿ ” ಹಿಂದಿನ-ಇಂದಿನ-ಮುಂದಿನ ” ಭಾರತೀಯ ಸಮಾಜದ ದುರಂತವನ್ನು ಶ್ರೀ ದಿವಾಕರ್ ಸರಿಯಾಗಿ ಗುರುತಿಸಿದ್ದಾರೆ . ಯಾರು ಏನು ತಾನೇ ಮಾಡಲು ಸಾಧ್ಯ ? ನಮ್ಮ ಕಣ್ಣ ಮುಂದಿನ ಸಮಾಜದಲ್ಲಿ ಈಗ ಎಲ್ಲಾ ಜಾತಿ-ಮತ-ಧರ್ಮದವರಲ್ಲಿ ಬಹುತೇಕ ಮಂದಿ ಆರ್ಥಿಕವಾಗಿ ಮಧ್ಯಮ ಇಲ್ಲವೇ ಮಧ್ಯಮ ಮೇಲು ವರ್ಗಕ್ಕೆ ಏರುತ್ತಿದ್ದಂತೆಯೇ ” ತಮ್ಮ ತಮ್ಮ ಜಾತಿ-ಧರ್ಮ-ದೇವರುಗಳ ನೆಲೆಗಳಲ್ಲಿ ” ತಮ್ಮನ್ನು ಗುರುತಿಸಿಕೊಳ್ಳುತ್ತ ಕೋಮುವಾದಿಗಳಾಗಿದ್ದಾರೆ ಅಥವಾ ಕೋಮುವಾದದ ಸುಳಿಗೆ ಸಿಲುಕಿದ್ದಾರೆ . ಆದುದರಿಂದಲೇ ನಮ್ಮ ಜಾತಿ-ಧರ್ಮದ ಭ್ರಷ್ಟರನ್ನು ಅಪ್ಪಿಕೊಳ್ಳಲು , ಅನ್ಯ ಜಾತಿ-ಧರ್ಮದ ಪ್ರಾಮಾಣಿಕರನ್ನು ಮತ್ತು ಪ್ರತಿಭಾವಂತರನ್ನು ಕಡೆಗಣಿಸಲು ಹಾಗೂ ದ್ವೇಷಿಸಲು ನಮಗೀಗ ಯಾವುದೇ ಬಗೆಯ ಮುಜುಗರ ಅಥವಾ ಹಿಂಜರಿಕೆಯಿಲ್ಲ .
ಹುಸೇನರಿಗಿಂತ ಅಮೂಲ್ಯ ರತ್ನಗಳು ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ದೊರೆಯುತ್ತವೆ. ವಿವಾದಗ್ರಸ್ತರನ್ನ, ಕೋಮಿನ ಆಧಾರದಲ್ಲಿ ರತ್ನಗಳನ್ನಾಗಿಸುವ ಹಪಹಪಿ ಒಳ್ಳೆಯದಲ್ಲ, ಸಾಮಾಜಿಕ ಬದ್ದತೆ ಮರೆತು ನಗ್ನತೆಯನ್ನೇ ಕಲೆ ಎಂದುಕೊಳ್ಳುತ್ತ ದೇಶವನ್ನ ಬೆತ್ತಲಾಗಿ ಚಿತ್ರಿಸುವುದರಿಂದ ಪ್ರಸಿದ್ಧಿ ಪಡೆಯುವ ಕಲಾವಿದ ಕಲೆಯನ್ನ ಬೆತ್ತಲಾಗಿಸುತ್ತಾನೆ, ಕಲೆ ಅರಳುವುದು ಬೆಳೆಯುವುದು ಕ್ಯಾನ್ವಾಸ್ ಗಳಲ್ಲಲ್ಲ, ಮನಸ್ಸುಗಳಲ್ಲಿ…
ಸಮಾಜದ ಸಂಕೀರ್ಣ ನಡೆಯನ್ನು ಅರ್ಥ ಮಾಡಿಕೊಳ್ಳದ ಮೇಲುಸ್ತರದ ವಿಶ್ಲೇಷಣೆಯುಳ್ಳ ಲೇಖನ. ಹುಸೇನ್ ದೊಡ್ದ ಕಲಾವಿದರು ನಿಜ. ಆದರೆ ಅವರ ಬಗೆಗಿನ ವಿವಾದಗಳನ್ನು ಅರ್ಥ ಮಾಡಿಕೊಳ್ಳಲು ಇನ್ನಷ್ಟು ಆಳಕ್ಕೆ ಇಳಿಯಬೇಕೆನಿಸುತ್ತದೆ. ಇಂಥ ಜನಜನಿತ ಮೇಲುಸ್ತರದ ಹೇಳಿಕೆಗಳಿಂದ ಯಾವ ಸಮಸ್ಯೆ ಕೂಡ ಪರಿಹಾರ ಆಗೊಲ್ಲ. ಹೀಗೆ ಹೇಳುವವರು ಹೇಳುತ್ತಲೇ ಇರುತ್ತಾರೆ. ದುಷ್ಟರು ಕಲಾವಿದರಿಗೆ, ಲೇಖಕರಿಗೆ ಕಿರಿಕಿರಿ ಮಾಡುತ್ತಲೂ ಇರುತ್ತಾರೆ. ಸೆಲೆಕ್ಟಿವ್ ಆಗಿ ನಾವು ಅಭಿವ್ಯ್ಕ್ತಿಸ್ವಾತಂತ್ರ್ಯದ ಬಗ್ಗೆ ಮಾತಾಡುತ್ತಲೇ ಇರುತ್ತೇವೆ.
ಹುಸೇನ್ ಅವರು ಕುವೈತ್ ಪ್ರಜೆ ಎಂದು ಈ ಲೇಖನದಲ್ಲಿ ಮತ್ತೆ ಮತ್ತೆ ಹೇಳಲಾಗಿದೆ. ನಿಜವೇ? ಅಥವಾ ಪತ್ರಿಕೆಗಳಲ್ಲಿ ಹಲವೆಡೆ ಬಂದಂತೆ ಕತಾರ್ ಪ್ರಜೆಯೇ?