ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಿವಾಕರ್ ನೇರನುಡಿ : ಐದು ವರ್ಷದ ಹಸುಳೆಗೆ ಉತ್ತರಿಸುವ ದಾಷ್ಟ್ರ್ಯ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ (?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ  ಚಿಂತನೆ, ಮಾನವೀಯ ಧೋರಣೆ, ಅಹಿಂಸಾತ್ಮಕ ಪ್ರವೃತ್ತಿ ಇತ್ಯಾದಿಗಳು ಇವೆ ಎಂದು ಶತಮಾನಗಳಿಂದ ಸಾರಿ ಸಾರಿ ಹೇಳಲಾಗುತ್ತಿದೆ. ಶ್ರೇಣೀಕೃತ ಜಾತಿ ವ್ಯವಸ್ಥೆಯ ವಿಕೃತಗಳ ನಡುವೆಯೂ, ಮನುಧರ್ಮ ಶಾಸ್ತ್ರದ ಮನುಕುಲ ವಿರೋಧಿ ನೀತಿ ಸಂಹಿತೆಗಳ ನಡುವೆಯೂ, ಶತಮಾನಗಳ ಊಳಿಗಮಾನ್ಯ ವ್ಯವಸ್ಥೆಯ ಶೋಷಕ ಸಾಮಾಜಿಕ ಚೌಕಟ್ಟಿನ ನಡುವೆಯೂ, ಪುರಾಣ-ವೇದೋಪನಿಷತ್ ಕಾಲದಿಂದ ಅಚಲವಾಗಿ ಉಳಿದು ಬಂದಿರುವ ಪಿತೃ ಪ್ರಧಾನ-ಪುರುಷ ಪ್ರಧಾನ ಸಾಮಾಜಿಕ ಚೌಕಟ್ಟಿನ ನಡುವೆಯೂ ಇಂತಹ ಒಂದು ಸಕಾರಾತ್ಮಕ ಭಾವನೆ ಭಾರತೀಯ ಸಮಾಜದ ಬಗ್ಗೆ ಮೂಡಿ ಬಂದಿದ್ದು ಇಂದಿಗೂ ಪ್ರಚಲಿತವಾಗಿದೆ ಎಂದರೆ ನಮ್ಮ ಸಾಮಾಜಿಕ-ಸಾಂಸ್ಕೃತಿಕ ಪ್ರಜ್ಞೆ ಅಥವಾ ಗ್ರಹೀತಗಳಲ್ಲಿ ಎಲ್ಲೋ ಒಂದು ಕಡೆ ದೋಷ ಇದೆ ಎಂದು ಒಪ್ಪಿಕೊಳ್ಳಬೇಕಾಗುತ್ತದೆ.

ನಿಜ, ಒಂದು ವಿಕೃತ ಸನ್ನಿವೇಶವನ್ನು ಅಥವಾ ಘಟನೆಯನ್ನು ಸಾರ್ವತ್ರೀಕರಿಸಿ ಇಡೀ ಸಾಮಾಜಿಕ ನೆಲೆಗಟ್ಟನ್ನೇ ಪ್ರಶ್ನಿಸುವುದು ಸಮರ್ಥನೀಯವಲ್ಲ. ಕಪ್ಪು ಬಿಳುಪುಗಳ ಮಾನವ ಜಗತ್ತಿನಲ್ಲಿ, ಎಡ ಬಲಗಳ ಸಾಮುದಾಯಿಕ ಸಂದರ್ಭಗಳಲ್ಲಿ ಒಳಿತು ಕೆಡಕುಗಳು, ದುಷ್ಟ ಶಿಷ್ಟ ಭಾವಗಳು, ಹಿಂಸೆ ಅಹಿಂಸೆಯ ಧೋರಣೆಗಳು ತಮ್ಮದೇ ಆದ ರೀತಿಯಲ್ಲಿ, ತಮ್ಮದೇ ಆದ ಆಯಾಮಗಳಲ್ಲಿ ಸಂದರ್ಭಾನುಸಾರವಾಗಿ ಪ್ರಕಟಗೊಳ್ಳುತ್ತಿರುತ್ತವೆ. ಮಹಾಭಾರತದ ದ್ರೌಪದಿ ವಸ್ತ್ರಾಪಹರಣ ಪ್ರಸಂಗದಲ್ಲಿ ಒಬ್ಬ ಮಹಿಳೆಯನ್ನು ಜೂಜಿನಲ್ಲಿ ಪಣಕ್ಕೆ ಇಡುವ ಮೂಲಕ ಮಹಿಳೆಯನ್ನು ಒಂದು ವಿಕ್ರಯಿಸಬಹುದಾದ ಅಥವಾ ವಿನಿಮಯ ಮಾಡಬಹುದಾದ ವಸ್ತುವಿನಂತೆ ಪರಿಗಣಿಸಲಾಗುತ್ತದೆ.

ಧರ್ಮರಾಯನ ಈ ನಿರ್ಣಯವನ್ನು ವಿರೋಧಿಸುವ ಧೋರಣೆಯನ್ನೂ ತೋರದ ಪಾಂಡವರು ಅಥವಾ ಭೀಷ್ಮ ದ್ರೋಣ, ವಿದುರಾದಿಗಳು ಊಳಿಗಮಾನ್ಯ ಶೋಷಕ ವ್ಯವಸ್ಥೆಗೆ ತಲೆಬಾಗಿದ ಅಸಹಾಯಕ ಮುತ್ಸದ್ದಿಗಳಾಗಿ ಕಾಣುತ್ತಾರೆ. ದುಷ್ಯಾಸನನ ದೌರ್ಜನ್ಯಕ್ಕೊಳಗಾಗಿ ವಸ್ತ್ರಾಪಹರಣದ ಅಪಮಾನವನ್ನು ಅಸಹಾಯಕಳಾಗಿ ಅನುಭವಿಸುವ ದ್ರೌಪದಿ ತನ್ನೆಲ್ಲಾ ಶೌರ್ಯ-ಸಾಹಸಗಳ ಹೊರತಾಗಿಯೂ ಪುರುಷ ಸಮಾಜದ ಶೋಷಣೆಗೆ ಬಲಿಯಾದ ಅಬಲೆಯಾಗಿ ಕಾಣುತ್ತಾಳೆ. ಇದೇ ಪ್ರಸಂಗದಲ್ಲಿ ಶ್ರೀ ಕೃಷ್ಣ ಮಹಿಳೆಯ ಗೌರವ ಕಾಪಾಡುವ ಪ್ರಜ್ಞಾವಂತ ಪ್ರಜೆಯಾಗಿ ಕಾಣುತ್ತಾನೆ.

ಈ ಪ್ರಸಂಗವನ್ನು ನಿಮಿತ್ತ ಮಾತ್ರವಾಗಿ ಪರಿಗಣಿಸಿ ಸಮಕಾಲೀನ ಸಂದರ್ಭದಲ್ಲಿ ನೋಡುವಾಗ ನಮ್ಮ ಸಾಮಾಜಿಕ-ರಾಜಕೀಯ ವ್ಯವಸ್ಥೆಯ ಸ್ಪಷ್ಟ ಚಿತ್ರಣ ಕಣ್ಣೆದುರು ಹಾದು ಹೋಗುತ್ತದೆ. ಎಷ್ಟೇ ಭವ್ಯ ಪರಂಪರೆಯ ಹಮ್ಮು ಬಿಮ್ಮುಗಳಿದ್ದರೂ ಭಾರತೀಯ ಸಮಾಜದಲ್ಲಿ ಮಹಿಳೆಯ ಸ್ಥಾನಮಾನಗಳು ಮೇಲ್ನೋಟಕ್ಕೆ ಮನ್ವಂತರದ ಹಾದಿ ಹಿಡಿದಿರುವಂತೆ ಕಾಣುತ್ತದೆ. ಆಂತರ್ಯದಲ್ಲಿ ಇಲ್ಲಿನ ಪರಂಪರೆ ಮತ್ತು ಸಂಸ್ಕೃತಿ ತನ್ನ ಪ್ರಾಚೀನ ಮನುವಾದಿ ಧೋರಣೆಯನ್ನೇ ಪ್ರದರ್ಶಿಸುತ್ತದೆ. ದೆಹಲಿಯಲ್ಲಿ ಕಳೆದ ವರ್ಷ ಸಂಭವಿಸಿದ ಒಂದು ಘಟನೆ ಮಹಿಳಾ ಪರ ಸಂಕಥನಗಳನ್ನು ವಿಭಿನ್ನ ಮಾರ್ಗದಲ್ಲಿ ಕೊಂಡೊಯ್ದಿರುವುದು ಸ್ಪಷ್ಟ.

ನಿರ್ಭಯ ಪ್ರಕರಣ ಭಾರತೀಯ ಮಹಿಳೆಯರಿಗೆ ಒಂದು ಸವಾಲಾಗಿ ಪರಿಣಮಿಸಿದ್ದು ಕೇವಲ ಆ ಘಟನೆಯ ಪ್ರಾಮುಖ್ಯತೆಯಿಂದ ಮಾತ್ರವಲ್ಲ. ನಿರಂತರವಾಗಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಶೋಷಣೆ, ಆಕ್ರಮಣ ಮತ್ತು ಸಾಂಸ್ಕೃತಿಕ ಹಲ್ಲೆಗಳಿಗೆ ಅಲ್ಲಲ್ಲಿ ವ್ಯಕ್ತವಾಗುತ್ತಿದ್ದ ಪ್ರತಿರೋಧದ ದನಿಗಳಿಗೆ ಈ ಘಟನೆ ಒಂದು ವೇಗವರ್ಧಕವಾಗಿ (Catalyst) ಪರಿಣಮಿಸಿತ್ತು. ಈ ಘಟನೆಯ ಮುನ್ನ ಮತ್ತು ನಂತರದಲ್ಲಿ ಈ ದೇಶದ ಸಾವಿರಾರು ನಿರ್ಭಯಗಳು ಯಾವುದೇ ಅಭಯಹಸ್ತವಿಲ್ಲದೆ ನಲುಗಿಹೋಗಿದ್ದವು. ಮಾನಾಪಹರಣ, ವಸ್ತ್ರಾಪಹರಣ, ಅತ್ಯಾಚಾರ, ಮಾನಭಂಗ ಇತ್ಯಾದಿ ದೌರ್ಜನ್ಯಗಳಿಗೆ ಅಭಯ ಹಸ್ತ ತೋರುವ ಕೃಷ್ಣಾದಿಗಳು ಇಲ್ಲದೆ ಲಕ್ಷಾಂತರ ದ್ರೌಪದಿಗಳು ಗಂಗೆಯಲ್ಲಿ ತೇಲಿ ಹೋಗಿದ್ದರು, ಹೋಗುತ್ತಲೂ ಇದ್ದಾರೆ.

ಆದರೂ ಪ್ರಜಾತಂತ್ರ ವ್ಯವಸ್ಥೆ, ಭಾರತದ ಸಂವಿಧಾನ ಮತ್ತು ಇನ್ನೂ ಜೀವಂತವಾಗಿದೆ ಎಂದು ನಂಬಲಾಗಿರುವ ಮಾನವೀಯ ಮೌಲ್ಯ-ಪ್ರಜ್ಞೆಯ ಮೇಲೆ ಅಪಾರ ವಿಶ್ವಾಸ ಇರಿಸಿರುವ ಭಾರತದ ಪ್ರಜ್ಞಾವಂತ ಮನಸ್ಸುಗಳು ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಕಡಿವಾಣ ಹಾಕಲು ಸಾಂವಿಧಾನಿಕ, ಕಾನೂನಾತ್ಮಕ ಮತ್ತು ಶಾಸನಬದ್ಧತೆಯ ಸಂಹಿತೆಗಳಿಂದ ಸಾಧ್ಯ ಎಂದು ನಂಬಿದ್ದಾರೆ. ಹಾಗಾಗಿಯೇ ನಾವು ನ್ಯಾ. ವರ್ಮಾ ಸಮಿತಿಯ ಶಿಫಾರಸುಗಳನ್ನು ಶ್ರೀಕೃಷ್ಣನ ಅಭಯ ಹಸ್ತದಂತೆ ಪರಿಗಣಿಸಿದ್ದೇವೆ. ಇದು ಅಕ್ಷೇಪಾರ್ಹವಲ್ಲ. ಏಕೆಂದರೆ ಸಂವಿಧಾನಾತ್ಮಕ ಕಾನೂನು ಕ್ರಮಗಳ ಮೇಲಿನ ವಿಶ್ವಾಸವನ್ನೂ ಕಳೆದುಕೊಂಡರೆ ಭಾರತೀಯ ಸಮಾಜ ಮತ್ತೊಮ್ಮೆ ಪುರಾತನ, ಜಡ್ಡು ಹಿಡಿದ ವ್ಯವಸ್ಥೆಗೆ ಜಾರಿ ಹೋಗುವ ಸಾಧ್ಯತೆಗಳಿವೆ. ನ್ಯಾ. ವರ್ಮಾ ಸಮಿತಿಯ ವರದಿಯನ್ನು ಭಾರತದ ಆಳುವ ವರ್ಗಗಳು ತಮ್ಮ ಮೂಲ ಪುರುಷ ಪ್ರಧಾನ ವ್ಯವಸ್ಥೆಗೆ ಚ್ಯುತಿ ಬಾರದಂತೆ ಜಾರಿಗೊಳಿಸಲು ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ದೇಶದ ಮಹಿಳೆಯರಿಗೆ ಅಸಮಾಧಾನಗಳಿದ್ದರೂ ಎಲ್ಲೊ ಒಂದೆಡೆ ನ್ಯಾಯದ ಛಾಯೆ ಕಾಣುತ್ತಿರುವ ನಿಟ್ಟುಸಿರು ಕಂಡುಬರುತ್ತಿದೆ.

ಆದರೆ ವರ್ಮಾ ಸಮಿತಿಯಾಗಲಿ, ಈ ದೇಶದ ಪ್ರಭುತ್ವವಾಗಲಿ ಅಥವಾ ಆಳ್ವಿಕರಾಗಲಿ ಜನಸಾಮಾನ್ಯರಿಂದ ಮರೆಮಾಚುವ ಒಂದು ಸಂಗತಿ ಎಂದರೆ ನಮ್ಮ ದೇಶದ ಪ್ರಭುತ್ವವನ್ನು ನಿಗ್ರಹಿಸುವ ಅಗೋಚರ ಶಕ್ತಿಯ ಮೂಲ. ಈ ಅಗೋಚರ ಶಕ್ತಿಯೇ ಪುರುಷ ಪ್ರಧಾನ ಧೋರಣೆ ಮತ್ತು ಈ ಧೋರಣೆಯನ್ನು ಶತಮಾನಗಳಿಂದ ರಕ್ಷಿಸಿಕೊಂಡು ಬಂದಿರುವ ಇಲ್ಲಿನ ಸಾಮಾಜಿಕ-ಸಾಂಸ್ಕೃತಿಕ ನೆಲೆಗಟ್ಟು . ಮಹಿಳೆಯರನ್ನು, ನಿಮ್ನ ವರ್ಗದವರನ್ನು, ಶೋಷಿತ ಸಮುದಾಯಗಳನ್ನು ಮತ್ತು ಊಳಿಗಮಾನ್ಯ ವ್ಯವಸ್ಥೆ ತನ್ನ ಅಡಿಯಾಳಾಗಿ ಇರಲು ಬಯಸುವ ಎಲ್ಲ ಸಮುದಾಯಗಳನ್ನು ಬಳಸಿಕೊಳ್ಳಬಹುದಾದ ಅಥವಾ ಬಳಸಿ ಬಿಸಾಡಬಹುದಾದ ವಸ್ತುವಿನಂತೆ ಪರಿಗಣಿಸುವ ಒಂದು ಮನೋಭಾವ ಈ ನೆಲೆಗಟ್ಟಿನ ಮೂಲ ಮತ್ತು ಆಶಯವೂ ಹೌದು. ಹಾಗಾಗಿಯೇ ಮೇಲ್ಜಾತಿಯ ಗಲ್ಲಿಗಳಲ್ಲಿ ಮೆರವಣಿಗೆ ಹೋಗುವ ದಲಿತರ ಹತ್ಯೆಯಾದಾಗ, ಹತ್ಯೆ ಮಾಡುವವರನ್ನು ದೂಷಿಸದೆ, ಮೆರವಣಿಗೆ ಮಾಡಿದವರನ್ನೇ ದೂಷಿಸಲಾಗುತ್ತದೆ. ಮಹಿಳೆಯೊಬ್ಬಳು ಅತ್ಯಾಚಾರಕ್ಕೊಳಗಾದಾಗ ಆಕೆಯ ವರ್ತನೆ, ಉಡುಪು, ಪ್ರಚೋದಕತೆ ಇತ್ಯಾದಿಗಳು ಮುಂಚೂಣಿಗೆ ಬರುತ್ತವೆಯೇ ಹೊರತು ಅತ್ಯಾಚಾರಿಯ ಅನಾಚಾರವಲ್ಲ.

ಯಾವ ವಸ್ತುವನ್ನು ಎಲ್ಲಿ ಇಡಬೇಕೋ ಅಲ್ಲಿಯೇ ಇಡುವುದು ಸೂಕ್ತ ಎಂಬ ಜನಸಾಮಾನ್ಯ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ಒಂದು ಧೋರಣೆ ಸ್ಪಷ್ಟವಾಗುತ್ತದೆ. ಅತ್ಯಾಚಾರ ಅಥವಾ ದೌರ್ಜನ್ಯಕ್ಕೊಳಗಾದ ವ್ಯಕ್ತಿ ಅಥವಾ ಸಮುದಾಯಗಳು ತಮ್ಮ ಸಂಯಮವನ್ನು ಕಾಪಾಡಿಕೊಂಡರೆ ಅಪರಾಧಗಳೇ ಜರುಗುವುದಿಲ್ಲ ಎಂಬ ಧೋರಣೆಯ ಹಿಂದೆ ಶೋಷಕ ಸಮಾಜವನ್ನು ರಕ್ಷಿಸುವ ಪರಂಪರೆ ಎದ್ದು ಕಾಣುತ್ತದೆ. ಭಾರತ ಎಂದು ಪರಿಗಣಿಸಲಾಗುವ ಸಮಾಜದಲ್ಲಿ ಇನ್ನೂ ಭಾರತೀಯ ಸಂಸ್ಕೃತಿ ಜೀವಂತವಾಗಿರುವುದರಿಂದ ಅಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗಿ ನಡೆಯುವುದಿಲ್ಲ, ಆದರೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋದ ಆಧುನಿಕ ಇಂಡಿಯಾದಲ್ಲಿ ಮಹಿಳೆಯ ಶೋಷಣೆ, ಅತ್ಯಾಚಾರ ಹೆಚ್ಚಾಗುತ್ತಿದೆ , ಭಾರತೀಯ ಸಮಾಜದಲ್ಲಿ ವಿವಾಹ ಎನ್ನುವುದು ಪತಿ ಪತ್ನಿಯರ ನಡುವಿನ ಒಪ್ಪಂದವಾಗಿದ್ದು, ಈ ಒಪ್ಪಂದದಂತೆ ಪತ್ನಿ ಗೃಹಿಣಿಯಾಗಿ ಮನೆಯೊಳಗೇ ಪತಿಯ ರಕ್ಷಣೆಯಲ್ಲಿದ್ದರೆ ಯಾವುದೇ ದೌರ್ಜನ್ಯ ನಡೆಯುವುದಿಲ್ಲ ಎಂದು ವ್ಯಾಖ್ಯಾನಿಸುವ ಆರೆಸ್ಸೆಸ್ನ ಮೋಹನ್ ಭಾಗವತ್ ಈ ಧೋರಣೆಯ ಪ್ರತೀಕವಾಗಿ ಕಾಣುತ್ತಾರೆ. ಅತ್ಯಾಚಾರಕ್ಕೊಳಗಾದ ಮಹಿಳೆ ಅತ್ಯಾಚಾರ ಎಸಗುವ ವ್ಯಕ್ತಿಯನ್ನು ಅಂಗಲಾಚಿದರೆ ಇಂತಹ ಘಟನೆ ನಡೆಯುವುದಿಲ್ಲ ಎಂಬ ಆಧ್ಯಾತ್ಮಿಕ ಗುರುವೊಬ್ಬರ ಹೇಳಿಕೆಯೂ ಇದೇ ಧೋರಣೆಯನ್ನು ಬಿಂಬಿಸುತ್ತದೆ.

ಆದರೆ ಈ ಎಲ್ಲಾ ಗ್ರಹೀತಗಳಿಗೆ ಪ್ರತ್ಯುತ್ತರವಾಗಿ ಒಂದು ಘಟನೆ ಇತ್ತೀಚೆಗೆ ಸಂಭವಿಸಿದೆ. ಇಂತಹ ಘಟನೆಗಳು ನಡೆಯುತ್ತಲೂ ಇವೆ. ದೆಹಲಿಯಲ್ಲಿ ಐದು ವರ್ಷದ ಹಸುಳೆಯ ಮೇಲೆ ಅತ್ಯಾಚಾರ ಎಸಗಿ, 40 ಗಂಟೆಗಳ ಕಾಲ ಮಗುವಿನ ಅನ್ನಾಹಾರಗಳನ್ನು ನೀಡದೆ ಚಿತ್ರಹಿಂಸೆ ನೀಡುವ ಮೂಲಕ ಮನೋಜ್ ಕುಮಾರ್ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಅಡಕವಾಗಿರುವ ಪುರುಷ ಪ್ರಧಾನ, ಸಾಂಪ್ರದಾಯಿಕ, ಮಾರುಕಟ್ಟೆ ಸಂಸ್ಕೃತಿಯ ಸಂಕೇತವಾಗಿ ಕಾಣುತ್ತಾರೆ. ಮಹಿಳೆಯರ ಮೇಲೆ ಅತ್ಯಾಚಾರ ಎಸಗುವವರಿಗೆ ಮರಣದಂಡನೆ ನೀಡುವ , ಕಠಿಣ ಶಿಕ್ಷೆ ವಿಧಿಸುವ, ಬಹಿಷ್ಕಾರ ಹಾಕುವ ನಿರ್ಧಾರಗಳು, ಕಾನೂನುಗಳು ಈ ಧೋರಣೆಯನ್ನು ಬದಲಿಸುವುದಿಲ್ಲ. ಶಿಕ್ಷೆ ಮತ್ತು ಶಿಕ್ಷೆಯ ಪ್ರಮಾಣ ಅಪರಾಧ ಸಂಭವಿಸಿದ ನಂತರದ ಪ್ರಕ್ರಿಯೆಗಳು. ಅಪರಾಧವನ್ನು ತಡೆಗಟ್ಟುವ ಸಾಧನಗಳಾಗುವುದಿಲ್ಲ. ಸಾಮುದಾಯಿಕ ಪ್ರಜ್ಞೆ ಎಷ್ಟೇ ಜಾಗೃತವಾಗಿದ್ದರೂ ವಿಕೃತ ಮನಸ್ಸಿನ ಸಾಮಾಜಿಕ ವ್ಯವಸ್ಥೆ ಈ ಪ್ರಜ್ಞೆಯನ್ನು ಮೂಲದಲ್ಲೇ ಚಿವುಟಿ ಹಾಕಿಬಿಡುತ್ತದೆ. ಭಾರತದ ಜಾತಿ ವ್ಯವಸ್ಥೆಯಲ್ಲೂ ಇದೇ ಪ್ರವೃತ್ತಿಯನ್ನು ಕಾಣುತ್ತಿದ್ದೇವೆ. ಈಗ ಮಹಿಳೆಯರು ಗುರಿಯಾಗಿದ್ದಾರೆ.

ಈ ಪ್ರವೃತ್ತಿ ಭಾರತದ ಪುರುಷ ಸಮಾಜದಲ್ಲಿ ಇನ್ನೂ ಜಾಗೃತವಾಗಿ, ಸಕ್ರಿಯವಾಗಿ, ಕ್ರಿಯಾಶೀಲವಾಗಿ (?) ಇರುವುದರಿಂದಲೇ ತನ್ನ ದೇಹದಲ್ಲಿರುವ ಅಂಗಾಂಗಗಳ ಪರಿವೆಯೂ ಇಲ್ಲದ ಹಸುಳೆ ಅತ್ಯಾಚಾರಕ್ಕೊಳಗಾಗುತ್ತದೆ. ತನ್ನ ಅಂಗಾಂಗಗಳ ಆನುಭವಾತ್ಮಕ ಕಾಮನೆಗಳನ್ನು ಕಳೆದುಕೊಂಡ ವಯೋವೃದ್ಧ ಮಹಿಳೆಯೂ ಅತ್ಯಾಚಾರಕ್ಕೊಳಗಾಗುತ್ತಾಳೆ. ಪ್ರಚೋದಕ ಎನ್ನಬಹುದಾದ ಉಡುಪುಗಳನ್ನು ಧರಿಸುವ ಯುವತಿಯಷ್ಟೇ, ಸಾಂಪ್ರದಾಯಿಕ ಉಡುಪು ಧರಿಸುವ ಯುವತಿಯೂ ಅಪಾಯ ಎದುರಿಸುತ್ತಾಳೆ. ಅವಿವಾಹಿತ, ವಿಚ್ಚೇದಿತ , ವಿಧವೆ ಮಹಿಳೆಯರಷ್ಟೇ ಆತಂಕ ಗೃಹಿಣಿಯರೂ ಎದುರಿಸುತ್ತಿರುತ್ತಾರೆ. ಇಲ್ಲಿ ಮಹಿಳೆಯರ ವ್ಯಕ್ತಿಗತ ನೆಲೆ ಮತ್ತು ಸ್ಥಾನಮಾನಗಳಿಗಿಂತಲೂ ಮಹಿಳೆಯರನ್ನು ತಮ್ಮ ನಿಯಂತ್ರಣದಲ್ಲಿರಿಸಿಕೊಳ್ಳಬಹುದಾದ ವಸ್ತುವೆಂದು ಪರಿಗಣಿಸುವ ಪುರುಷ ಮನೋಭಾವ ಮುಖ್ಯವಾಗುತ್ತದೆ. ನಿಗ್ರಹ, ನಿಯಂತ್ರಣ ಇರಬೇಕಾದ್ದು ಅತ್ಯಾಚಾರ , ದೌರ್ಜನ್ಯಕ್ಕೊಳಗಾದವರಲ್ಲೋ ಅಥವಾ ಅತ್ಯಾಚಾರ, ದೌರ್ಜನ್ಯ ಎಸಗುವ ಪುರುಷರಲ್ಲೋ ಎಂಬ ಮೂರ್ತ ಪ್ರಶ್ನೆ ಪ್ರಶ್ನೆಯಾಗಿಯೇ ಕಾಡುತ್ತಿರುತ್ತದೆ.

ಜೀವನ್ಮರಣ ಹೋರಾಟ ನಡೆಸುತ್ತಿರುವ ಐದು ವರ್ಷದ ದೆಹಲಿಯ ಹಸುಳೆ ಉತ್ತರ ನಿರೀಕ್ಷಿಸುತ್ತದೆ. ಉತ್ತರಿಸುವ ದಾಷ್ಟ್ರ್ಯತೆ ಭಾರತೀಯ ಸಮಾಜಕ್ಕೆ ಇದೆಯೇ ?

‍ಲೇಖಕರು avadhi

16 May, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading