ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಿವಾಕರ್ ಕಾಲಂ : ಸೂರಿಂಜೆ, ಮಲಾಲ ಮತ್ತು ಶರ್ಮಿಳಾ

ಆಳ್ವಿಕರ ದಮನಕಾರಿ ಪ್ರವೃತ್ತಿ

ಮಂಗಳೂರು ಹೋಂ ಸ್ಟೇ ಪ್ರಕರಣದಲ್ಲಿ ಸಂಘ ಪರಿವಾರದ ಕಾರ್ಯಕರ್ತರ ದುಷ್ಕೃತ್ಯಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದು ನಡೆದ ಘಟನೆಯ ಸತ್ಯಾಸತ್ಯತೆಗಳನ್ನು ಲೋಕಕ್ಕೆ ಸಾರಿದ ತಪ್ಪಿಗಾಗಿ ನವೀನ್ ಸೂರಿಂಜೆ ಎಂಬ ಪತ್ರಿಕಾ ಛಾಯಾಗ್ರಾಹಕ ಈಗ ಜೈಲಿನ ಕಂಬಿ ಎಣಿಸುತ್ತಿದ್ದಾರೆ. ಈಶಾನ್ಯ ರಾಜ್ಯದಲ್ಲಿ ಸಶಸ್ತ್ರ ಸೇನಾ ವಿಶೇಷಾಧಿಕಾರ ಕಾಯ್ದೆಯ ದುರುಪಯೋಗ ಮತ್ತು ಸೇನೆಯಿಂದ ನಡೆಯುವ ಅತ್ಯಾಚಾರಗಳನ್ನು ವಿರೋಧಿಸಿ ಕಳೆದ ಹದಿಮೂರು ವರ್ಷಗಳಿಂದ ಸತತ ಉಪವಾಸ ಮಾಡುತ್ತಿರುವ ಇರೋಮ್ ಶರ್ಮಿಳಾ ಆಳ್ವಿಕರಿಂದ ನಿರ್ಲಕ್ಷಿಸಲ್ಪಟ್ಟು ತಮ್ಮ ಹೋರಾಟ ಮುಂದುವರೆಸಿದ್ದಾರೆ. ಅತ್ತ ಪಾಕಿಸ್ತಾನದಲ್ಲಿ ಮಹಿಳೆಯರ ಶಿಕ್ಷಣ ಮತ್ತು ಇತರ ಹಕ್ಕುಗಳಿಗಾಗಿ ಹೋರಾಡಿದ ಅಪ್ರಾಪ್ತ ವಯಸ್ಸಿನ ಬಾಲಕಿ ಮಲಾಲ ತಾಲಿಬಾನಿಗಳ ಗುಂಡೇಟಿಗೆ ಬಲಿಯಾಗಿ ಅದೃಷ್ಟವಶಾತ್ ಬದುಕುಳಿದಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ. ಈ ಮೂರೂ ಘಟನೆಗಳು ವಿಭಿನ್ನ ಕಾಲಘಟ್ಟದಲ್ಲಿ, ವಿಭಿನ್ನ ರಾಜಕೀಯ ಸನ್ನಿವೇಶದಲ್ಲಿ, ವಿಭಿನ್ನ ಕಾರಣಗಳಿಗಾಗಿ ಸಂಭವಿಸಿದ್ದರೂ , ಮೂರೂ ಘಟನೆಗಳ ಹಿಂದೆ ಕಾಣುವ ಸತ್ಯ ಮಾತ್ರ ಒಂದೇ ಆಗಿದೆ. ಆಳ್ವಿಕರ ದಮನಕಾರಿ ಪ್ರವೃತ್ತಿ ಮತ್ತು ಪ್ರಜಾತಂತ್ರದ ಅವಸಾನದ ಆರಂಭ.

ಸೂರಿಂಜೆ ಮಾಡಿದ ಅಪರಾಧವಾದರೂ ಏನು ? ನಿಜ, ಒಂದು ಹಲ್ಲೆಯ ಪ್ರಕರಣದಲ್ಲಿ, ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿರುವುದನ್ನು ತಮ್ಮ ಟಿವಿ ವಾಹಿನಿಗಾಗಿ ಚಿತ್ರೀಕರಿಸುವ ಸಂದರ್ಭದಲ್ಲಿ ಅದನ್ನು ತಡೆಗಟ್ಟುವ ಅಥವಾ ಪೊಲೀಸರಿಗೆ ತಿಳಿಸುವ ವ್ಯವಧಾನವನ್ನು ಸೂರಿಂಜೆ ತೋರಿಲ್ಲ. ಮಾಧ್ಯಮ ಲೋಕದ ಟಿಆರ್ಪಿ ವ್ಯಾಮೋಹವೂ ಇದಕ್ಕೆ ಕಾರಣ ಇರಬಹುದು. ಅಥವಾ ಸಂಘಪರಿವಾರದ ಗೂಂಡಾಗಳನ್ನು ಎದುರಿಸುವ ಸ್ಥೈರ್ಯ ಇಲ್ಲದೆಯೂ ಇರಬಹುದು. ಏನೇ ಆದರೂ ಚಿತ್ರೀಕರಿಸಿದ ವಿಧಾನ ಅಥವಾ ಉದ್ದೇಶ ತಪ್ಪಾಗಿದ್ದರೆ ಅದನ್ನು ಕಾನೂನುರೀತ್ಯಾ ಪರಿಶೀಲಿಸುವ ಹಕ್ಕು ಸರ್ಕಾರಕ್ಕಿದೆ. ಆದರೆ ಹೋಂ ಸ್ಟೇ ಪ್ರಕರಣ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲ. ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ಸಮಾಜದಲ್ಲಿ ಯಜಮಾನಿಕೆಯನ್ನು ಸಾಧಿಸುವ ಮೂಲಭೂತವಾದಿಗಳ ಹುನ್ನಾರದ ಸಂಕೇತವಾಗಿ ಈ ಘಟನೆಯನ್ನು ನೋಡಬೇಕಾಗುತ್ತದೆ. ತಾವು ವ್ಯಾಖ್ಯಾನಿಸುವ ಸಂಸ್ಕೃತಿಯನ್ನೇ ಇಡೀ ಹಿಂದೂ ಸಮಾಜ ಅನುಸರಿಸಬೇಕು ಎಂದು ತನ್ನ ಅಧಿಪತ್ಯವನ್ನು ಸಾಧಿಸಲು ಯತ್ನಿಸುವ ಸಂಘಪರಿವಾರಕ್ಕೆ ಇಂತಹ ಸಾಂಸ್ಕೃತಿಕ ಆರಕ್ಷಕರ ಕೃತ್ಯಗಳು ಮುನ್ನಡೆಯ ಮೆಟ್ಟಿಲುಗಳಾಗುತ್ತವೆ, ಆಗುತ್ತಲೂ ಇವೆ.

ಈ ಸಾಂಸ್ಕೃತಿಕ ಆರಕ್ಷಕರಿಗೆ ಆಳುವ ಬಿಜೆಪಿ ಸರ್ಕಾರ ಸಂಸ್ಕೃತಿ ರಕ್ಷಣೆ ಮತ್ತು ಧರ್ಮ ಸಂಸ್ಥಾಪನೆ ಸಚಿವಾಲಯದ ಹೊರಗುತ್ತಿಗೆ ನೀಡಿದ್ದು ಸಮಾಜದ ಸ್ವಾಸ್ಥ್ಯ (?)ವನ್ನು ಕಾಪಾಡುವ ಗುರುತರ ಹೊಣೆಗಾರಿಕೆಯನ್ನೂ ಹೊರಿಸಿದೆ. ಹಾಗಾಗಿ ರಾಜ್ಯದಲ್ಲಿನ ಹಿಂದೂ ಮಹಿಳೆಯರ ವೇಷ ಭೂಷಣಗಳು, ಉಡುಗೆ ತೊಡುಗೆಗಳು, ಜೀವನ ಶೈಲಿ, ಸಾಮಾಜಿಕ ಚಲನೆ, ಸಾಂಸ್ಕೃತಿಕ ಚಟುವಟಿಕೆ, ಶೈಕ್ಷಣಿಕ ಅವಶ್ಯಕತೆ ಇವೆಲ್ಲವನ್ನೂ ಸಂಘಪರಿವಾರ ನಿಯಂತ್ರಿಸುತ್ತದೆ. ಮಹಿಳೆಯರ ಮೇಲೆ ತನ್ನ ಹಿಡಿತವನ್ನು ಸಾಧಿಸುವ ಮೂಲಕ ಸಮಾಜದ ಅಧಿಪತ್ಯವನ್ನು ಸಾಧಿಸುವ ಸಂಘಪರಿವಾರದ ಪಿತೂರಿಗೆ ಹೋಂಸ್ಟೇ ಪ್ರಕರಣ ನಿದರ್ಶನವಷ್ಟೆ. ಈ ಘಟನೆಯಲ್ಲಿ ಮುಂಚೂಣಿಯಲ್ಲಿದ್ದ ಅತ್ಯಾಚಾರಿಗಳು ಯಾರೆಂದು ತಿಳಿದಿದ್ದೇ ಸೂರಿಂಜೆಯವರ ಕ್ಯಾಮರಾದಿಂದ. ಹಾಗಾಗಿ ಬಿಜೆಪಿ ಸರ್ಕಾರದ ದೃಷ್ಟಿಯಲ್ಲಿ ಅವರು ಅಪರಾಧಿಯಾಗಿಬಿಡುತ್ತಾರೆ. ಏಕೆಂದರೆ ನೈಜ ಅಪರಾಧಿಯನ್ನು ರಕ್ಷಿಸುವ ಸಾಂಸ್ಕೃತಿಕ , ನೈತಿಕ (?) ಹೊಣೆಗಾರಿಕೆ ಬಿಜೆಪಿ ನಾಯಕರ ಮೇಲಿದೆ. ಬಿಜೆಪಿ ಆಳ್ವಿಕೆಯಲ್ಲಿ ಸಂಘಪರಿವಾರದ ಕೃತ್ಯಗಳಿಂದ ಭಾರತದ ಬಹುಮುಖಿ ಸಂಸ್ಕೃತಿ ಬಲಿಯಾದರೆ, ಸತ್ಯವನ್ನು ಹೊರಗೆಡಹಿದ ತಪ್ಪಿಗೆ ಸೂರಿಂಜೆಯಂತಹ ಪತ್ರಕರ್ತರು ಬಲಿಯಾಗುತ್ತಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮರೀಚಿಕೆಯಾಗುತ್ತದೆ.

ಹೋಂ ಸ್ಟೇ ಪ್ರಕರಣದಲ್ಲಿ ಹಲ್ಲೆ ಮಾಡಿದ ದುಷ್ಕರ್ಮಿಗಳಿಗೂ, ಪಾಕಿಸ್ತಾನದಲ್ಲಿ 15 ವರ್ಷದ ಬಾಲಕಿ ಮಲಾಲಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ತಾಲಿಬಾನಿಗಳಿಗೂ ವ್ಯತ್ಯಾಸವೇನಿದೆ. ಅಲ್ಲಿ ಮಲಾಲಾ ಮಾಡಿದ ತಪ್ಪೇನು ? ತಾಲಿಬಾನಿಗಳ ಹಿಡಿತದಲ್ಲಿರುವ ಸ್ವಾಟ್ ಪ್ರದೇಶದಲ್ಲಿ ಜಾರಿಯಲ್ಲಿರುವ ಇಸ್ಲಾಮಿಕ್ ಶರಿಯತ್ ಕಾನೂನುಗಳನ್ನು ಪ್ರತಿರೋಧಿಸಿ, ಆಧುನಿಕ ಸಮಾಜದತ್ತ ಮುನ್ನಡೆಯುವ ಆಶಯದಿಂದ ಮಹಿಳೆಯರಿಗೆ ಶಿಕ್ಷಣದ ಹಕ್ಕು ಇರುವುದಾಗಿ ಪ್ರತಿಪಾದಿಸಿದ್ದೇ ಮಲಾಲಾ ಮಾಡಿದ ಬೃಹತ್ ಅಪರಾಧ. ತಾಲಿಬಾನಿಗಳು ತಮ್ಮ ಮೂಲಭೂತವಾದಿ, ಫ್ಯಾಸಿಸ್ಟ್ ಧೋರಣೆಗೆ ಪೂರಕವಾಗಿ ಸ್ವಾಟ್ ಪ್ರದೇಶದಲ್ಲಿ ನಿರ್ಮಿಸಿರುವ ಸಾಂಪ್ರದಾಯಿಕ ಸಮಾಜದಲ್ಲಿನ ಪ್ರಾಚೀನ ಸಂಪ್ರದಾಯವನ್ನು ಉಲ್ಲಂಘಿಸಿದ್ದು ಮಲಾಲಾ ಮಾಡಿದ ಮಹಾಪರಾಧ. ಸಂಪ್ರದಾಯಿಕತೆಯನ್ನು ಹೊಡೆದೋಡಿಸಿ ಆಧುನಿಕ ಸಮಾಜ ನಿರ್ಮಾಣದತ್ತ ದಿಟ್ಟ ಹೆಜ್ಜೆ ಹಾಕಲು ನಿರ್ಧರಿಸಿದ್ದು ಮಲಾಲಾ ಮಾಡಿದ ಅಪರಾಧ. ಇದರ ಪರಿಣಾಮ ಜೀವನ್ಮರಣ ಹೋರಾಟ.

ಇಲ್ಲಿ, ಪ್ರಜಾಸತ್ತಾತ್ಮಕ ವ್ಯವಸ್ಥೆ ಇರುವ ಭಾರತದಲ್ಲಿ ಹಿಂದೂ ತಾಲಿಬಾನಿಗಳು ಮಾಡುತ್ತಿರುವುದಾದರೂ ಇದನ್ನೇ ಅಲ್ಲವೇ ? ಅಲ್ಲಿ ಮಲಾಲಾ ಮೂಲಭೂತವಾದಿಗಳ ಕಲ್ಪಿತ ಅಥವಾ ಸ್ಥಾಪಿತ ಸಂಪ್ರದಾಯವನ್ನು ಮೀರಿ ನಡೆದರೆ, ಇಲ್ಲಿ ಹೋಂಸ್ಟೇ ಘಟನೆಯಲ್ಲಿ ಯುವಕರು ಸಂಘಪರಿವಾರ ವ್ಯಾಖ್ಯಾನಿತ ಹಿಂದೂ ಸಾಂಪ್ರದಾಯಿಕತೆಯನ್ನು ಮೀರಿ ವತರ್ಿಸಿದ್ದರು. ಅಲ್ಲಿ ನಿಯಮ ಉಲ್ಲಂಘಿಸಿದವರನ್ನು ಒಂದೇ ಏಟಿಗೆ ಗುಂಡಿಟ್ಟು ಕೊಲ್ಲಲು ಯತ್ನಿಸಿದರೆ, ಇಲ್ಲಿ ಜೀವನವಿಡೀ ಜೀವನ್ಮೃತರಂತೆ ಜೀವಿಸಿ ಎಂದು ಹೇಳುವ ರೀತಿಯಲ್ಲಿ ಯುವತಿಯರ ಮೇಲೆ ಅತ್ಯಾಚಾರ ಎಸಗಲಾಯಿತು. ಎರಡೂ ಘಟನೆಗಳಲ್ಲಿ ಸಮಾನತೆ ಕಂಡುಬರುವುದಾದರೆ ಅದು ಸಂಸ್ಕೃತಿ ಮತ್ತು ಸಂಪ್ರದಾಯದ ರಕ್ಷಣೆ ಹಾಗೂ ಧರ್ಮ ರಕ್ಷಣೆ ಮಾತ್ರ. ಮತ್ತು ಧರ್ಮ ರಕ್ಷಣೆಗಾಗಿ ಫ್ಯಾಸಿಸ್ಟ್ ತಂತ್ರಗಳನ್ನು ಬಳಸುವ ಪರಂಪರೆ.

ಧರ್ಮ ರಕ್ಷಣೆಗಾಗಿ ಟೊಂಕ ಕಟ್ಟಿನಿಂತ ಮೂಲಭೂತವಾದಿ ಸಂಘಟನೆಗಳ ಅಟ್ಟಹಾಸವನ್ನು ಮಟ್ಟಹಾಕುವುದು ಪ್ರಜಾತಂತ್ರ ವ್ಯವಸ್ಥೆಯ ಮೂಲಧರ್ಮವಾದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಬೇಕಾದ ಸರ್ಕಾರಗಳ ಆದ್ಯತೆಯಾಗಿರಬೇಕು. ಪ್ರತಿರೋಧದ ದನಿಗಳಿಗೆ ಸ್ಪಂದಿಸುವ ಕನಿಷ್ಠ ಸೌಜನ್ಯವನ್ನೂ ತೋರದ ಒಂದು ಚುನಾಯಿತ ಸರ್ಕಾರಕ್ಕೂ, ತಾಲಿಬಾನ್ ಮತ್ತು ಸಂಘಪರಿವಾರದಂತಹ ಸಂಘಟನೆಗಳಿಗೂ ಏನಾದರೂ ವ್ಯತ್ಯಾಸವಿದ್ದರೆ ಅದು ಕೇವಲ ಸಾಂವಿಧಾನಿಕ ಅಧಿಪತ್ಯದಲ್ಲಿ ಮಾತ್ರ ಎನಿಸುತ್ತದೆ. ಈ ನಿಟ್ಟಿನಲ್ಲಿ ಇರೋಮ್ ಶರ್ಮೀಳಾ ಒಂದು ನಿದರ್ಶನವಾಗಿ ನಿಲ್ಲುತ್ತಾರೆ. ಇರೋಮ್ ಶರ್ಮಿಳಾ 13 ವರ್ಷಗಳಿಂದ ಉಪವಾಸ ಸತ್ಯಾಗ್ರಹದಲ್ಲಿ ನಿರತರಾಗಿದ್ದಾರೆ. ಅವರ ಬೇಡಿಕೆ ಒಂದೇ, ಮಾನವ ಹಕ್ಕುಗಳನ್ನು ಅವ್ಯಾಹತವಾಗಿ ಉಲ್ಲಂಘಿಸುತ್ತಿರುವ ಸೇನಾಪಡೆಗಳ ವಿರುದ್ಧ ಕ್ರಮ ಕೈಗೊಳ್ಳುವುದು ಮತ್ತು ಯಾವುದೇ ಕಾನೂನಿಗೆ ಒಳಪಡದಂತೆ ಸಶಸ್ತ್ರ ಅಂತರಿಕ ಸೇನೆಗೆ ರಕ್ಷಣೆ ನೀಡುವ ಸಶಸ್ತ್ರ ವಿಶೇಷ ಸೇನಾಧಿಕಾರ ಕಾಯ್ದೆಯನ್ನು ರದ್ದುಪಡಿಸುವುದು. ಇಂತಹ ಒಂದು ಜನಪರ, ಪ್ರಜಾಸತ್ತಾತ್ಮಕ ಬೇಡಿಕೆಯನ್ನು ಮನ್ನಿಸುವುದಿರಲಿ, ಆಲಿಸಲೂ ಸಿದ್ಧರಿಲ್ಲದ ಸರ್ಕಾರದಲ್ಲಿ ಪ್ರಜಾತಂತ್ರ ಮೌಲ್ಯಗಳಿಗೆ ಎಂದು ನಂಬುವುದಾದರೂ ಹೇಗೆ ?

ಈ ಮೂರೂ ಪ್ರಕರಣಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಗ್ರಹಿಸಬಹುದಾದ ಒಂದು ಅಂಶವೆಂದರೆ ಪ್ರಜಾಸತ್ತೆ ಅಥವಾ ಪ್ರಜಾತಾಂತ್ರಿಕ ವ್ಯವಸ್ಥೆಗೆ ಮೂಲ ಆಧಾರ ಮೌಲ್ಯಗಳು, ಮಾನವೀಯ ಮೌಲ್ಯಗಳು. ಈ ಮೌಲ್ಯಗಳಿಲ್ಲದ ಒಂದು ಸಾಮಾಜಿಕ ವ್ಯವಸ್ಥೆಯಲ್ಲಿ ಸಂಘಪರಿವಾರ, ತಾಲಿಬಾನ್ನಂತಹ ಸಂಘಟನೆಗಳು ತಮ್ಮದೇ ಆದ ಪ್ರಭಾವಳಿಯನ್ನು ನಿರ್ಮಿಸಿ ಅಧಿಪತ್ಯ ಸಾಧಿಸಿದರೆ, ಆಳುವ ವರ್ಗಗಳು ಸಂವಿಧಾನದ ಪರಿಧಿಯಲ್ಲೇ ದಮನಕಾರಿ ನೀತಿಯನ್ನು ಅನುಸರಿಸುತ್ತವೆ. ಐರ್ಲೆಂಡಿನಲ್ಲಿ ಧಾರ್ಮಿಕ ಮೌಲ್ಯಗಳನ್ನು ಮನ್ನಿಸಿ ಮಾನವೀಯತೆಯನ್ನೂ ಕಳೆದುಕೊಂಡಿರುವ ಒಂದು ವ್ಯವಸ್ಥೆ ಇರುವುದು ಸವಿತಾ ಹಾಲಪ್ಪನವರ್ ಅವರ ಮರಣದಲ್ಲಿ ಕಾಣುತ್ತದೆ. ಸೂರಿಂಜೆ, ಮಲಾಲಾ, ಶರ್ಮಿಳಾ ಮತ್ತು ಸವಿತಾ ಒಂದು ಮೌಲ್ಯರಹಿತ ಸಾಮಾಜಿಕ-ರಾಜಕೀಯ ವ್ಯವಸ್ಥೆಗೆ ಬಲಿಯಾಗುತ್ತಿರುವ ಸಂಕೇತಗಳಷ್ಟೇ. ಮನುಕುಲದ ಇತಿಹಾಸದಲ್ಲಿ ಇಂತಹ ಬಲಿಪೀಠಗಳು ಸಾಕಷ್ಟು ಆಗಿ ಹೋಗಿವೆ. ಜನಸಾಮಾನ್ಯರಲ್ಲಿ ಪ್ರಜಾಸತ್ತೆಯ ಮೌಲ್ಯದ ಬೀಜಗಳನ್ನು ಬಿತ್ತದೆ ಹೋದರೆ ಇಂತಹ ಬಲಿಪೀಠಗಳು ಸೃಷ್ಟಿಯಾಗುತ್ತಲೇ ಇರುತ್ತವೆ.

‍ಲೇಖಕರು G

22 November, 2012

1 Comment

  1. Sharadhi

    ಹೋಂ ಸ್ಟೇ ಪ್ರಕರಣದಲ್ಲಿ ಹಲ್ಲೆ ಮಾಡಿದ ದುಷ್ಕರ್ಮಿಗಳಿಗೂ, ಪಾಕಿಸ್ತಾನದಲ್ಲಿ 15 ವರ್ಷದ ಬಾಲಕಿ ಮಲಾಲಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ತಾಲಿಬಾನಿಗಳಿಗೂ ವ್ಯತ್ಯಾಸವೇನಿದೆ – can’t agree more!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading