ರೇಪಿಸ್ತಾನದಲ್ಲೊಂದು ಮೇಣದ ಬತ್ತಿಯ ಸ್ವಗತ
ಇದೇನು ಎತ್ತ ನೋಡಿದರೂ ನನ್ನ ಸಂಗಾತಿಗಳ ಚಹರೆಗಳೇ ಕಾಣುತ್ತಿವೆ ? ಒಂದು ಕಾಲಘಟ್ಟದಲ್ಲಿ ಭಾರತೀಯ ಸಮಾಜದಲ್ಲಿ ಯಾವುದೇ ಸಾಂಸ್ಕೃತಿಕ ನೆಲೆಗಟ್ಟು ಇಲ್ಲದೆ ದಿನಬಳಕೆಯ ವಸ್ತುವಾಗಿ, ಕತ್ತಲು ಹರಿಯುವ ಒಂದು ಸಾಧನವಾಗಿ ಬಳಸಲ್ಪಡುತ್ತಿದ್ದ ನಾನು ಮತ್ತು ನನ್ನ ಸಂಗಾತಿಗಳು ಇಂದು ಈ ದೇಶದ ರಾಜಧಾನಿಯ ಮುಖ್ಯ ರಸ್ತೆಗಳಲ್ಲಿ ತಂಡೋಪತಂಡವಾಗಿ ಭಾಗವಹಿಸುತ್ತಿದ್ದೇವೆ ! ಅಚ್ಚರಿಯಾಗುತ್ತಿದೆ. ಭಾರತದ ಕುಟುಂಬಗಳಲ್ಲಿ ನನ್ನ ಅಸ್ತಿತ್ವ ಕಂಡುಕೊಳ್ಳುವುದು ಕತ್ತಲು ಕವಿದಾಗ, ವಿದ್ಯುತ್ ಸರಬರಾಜು ಕೈಕೊಟ್ಟಾಗ. ಅದು ಕೆಲವು ಬಡವರ ಮನೆಗಳಲ್ಲಿ. ಮೊದಲು ಎಲ್ಲ ವರ್ಗಗಳ ಜನತೆಯೂ ನನ್ನನ್ನು ಬಳಸುತ್ತಿದ್ದರು. ಕ್ರಮೇಣ ಆಧುನಿಕ ಸೌಲಭ್ಯಗಳು ಒದಗಿಬಂದ ನಂತರ ನನ್ನ ಬಳಕೆ ಮಧ್ಯಮ ವರ್ಗಗಳಿಗೆ ಸೀಮಿತವಾಯಿತು. ದೇಶದ ಪ್ರಜೆಗಳ ಆರ್ಥಿಕ ಸ್ಥಿತಿ ಉತ್ತಮವಾಗುತ್ತಿದ್ದಂತೆಲ್ಲಾ ಯುಪಿಎಸ್ ಇತ್ಯಾದಿಗಳ ಬಳಕೆ ಹೆಚ್ಚಾಗಿ ನನ್ನ ಅಸ್ತಿತ್ವ ಕೇವಲ ಸಮಾರಂಭಗಳಿಗೆ ಸೀಮಿತವಾಗತೊಡಗಿದೆ.
ಹುಟ್ಟು ಹಬ್ಬಗಳಲ್ಲಿ ನನ್ನನ್ನು ಬೆಳಗಿಸಿ ಮತ್ತೆ ನಂದಿಸಿಬಿಡುತ್ತಾರೆ. ಬೆಳಕು ನೀಡಿ ಕತ್ತಲು ಕವಿಯುವ ಸೂಚನೆಯೋ ಅಥವಾ ಬೆಳಕು ನೀಡುವ ಅವಕಾಶವನ್ನೇ ನೀಡದಿರುವ ಸಿನಿಕತೆಯೋ ತಿಳಿಯುತ್ತಿಲ್ಲ. ಆದರೂ ಯಾವುದೋ ಎರವಲು ಸಂಸ್ಕೃತಿಯನ್ನು ಅನುಸರಿಸುವ ಚಪಲ ಈ ದೇಶದ ಜನತೆಯನ್ನು ಆವರಿಸಿದೆ ಎನಿಸುತ್ತದೆ. ಹುಟ್ಟುಹಬ್ಬ ಆಚರಿಸುವ ವ್ಯಕ್ತಿಯ ಅಥವಾ ಮಕ್ಕಳ ಭವಿಷ್ಯದಲ್ಲಿ ಬೆಳಕು ಚೆಲ್ಲಲಿ ಎಂದು ಪರಿಭಾವಿಸಲಾಗುವುದಾದರೂ ನನ್ನನ್ನು ನಂದಿಸುವುದು ಹೇಗೆ ಸಾಂಕೇತಿಕವಾಗಿ ಬಳಸಲ್ಪಡುತ್ತಿದೆ ಎಂದು ಹೊಳೆಯುತ್ತಿಲ್ಲ. ಇರಲಿ. ಒಂದೇ ಸ್ವಾಗತಾರ್ಹ ಸಂಗತಿ ಎಂದರೆ ನನ್ನ ವಸ್ತು ವಿನ್ಯಾಸದಲ್ಲಿ ತೀವ್ರ ಬದಲಾವಣೆಗಳಾಗಿವೆ. ಅತಿ ಸುಂದರ ವಿನ್ಯಾಸಗಳಲ್ಲಿ ನನ್ನನ್ನು ಅಲಂಕರಿಸಲಾಗುತ್ತಿದೆ. ಮತ್ತೊಂದೆಡೆ ತಮ್ಮ ಆಕ್ರೋಶದ ದನಿಗಳನ್ನು , ಪ್ರತಿಭಟನೆಯ ದನಿಗಳನ್ನು ನನ್ನ ಮೂಲಕ ಬಿಂಬಿಸುವ ಸಂಸ್ಕೃತಿ ಬೆಳೆಯುತ್ತಿದೆ. ದೇಶದ ಆಳ್ವಿಕರ ನೀತಿಗಳ ವಿರುದ್ಧ ವ್ಯಕ್ತಪಡಿಸುವ ಆಕ್ರೋಶಕ್ಕೆ ನಾನು ಚಿಮ್ಮುಹಲಗೆಯಾಗುತ್ತಿದ್ದೇನೆ, ಲಾಂಛನವಾಗುತ್ತಿದ್ದೇನೆ, ಸಂಕೇತವಾಗುತ್ತಿದ್ದೇನೆ. ಸಂತೋಷವಾಗುತ್ತಿದೆ.
ಆದರೆ ಕಳೆದ ವಾರ ದೆಹಲಿ, ಕೊಲ್ಕತ್ತಾ, ಬೆಂಗಳೂರು, ಚೆನ್ನೈ, ಮುಂಬೈ ಮತ್ತಿತರ ನಗರಗಳಲ್ಲಿ, ಸಣ್ಣ ಪುಟ್ಟ ಊರುಗಳಲ್ಲಿ ಸಾವಿರಾರು ಯುವತಿಯರು, ಯುವಕರು, ಮಹಿಳೆಯರು ಕೈಯ್ಯಲ್ಲಿ ನನ್ನ ಸಹಚರರನ್ನು ಹಿಡಿದು, ಕಂಗಳಲ್ಲಿ ಹನಿಗಳನ್ನು ತುಂಬಿಕೊಂಡು, ಆಕ್ರೋಶದ ದನಿಗಳನ್ನು ಅದುಮಿಟ್ಟುಕೊಂಡು, ಆಳ್ವಿಕರ ನಿಷ್ಕ್ರಿಯತೆಯನ್ನು ಪ್ರತಿಭಟಿಸುತ್ತಿದ್ದಾಗ ನನ್ನ ಜನ್ಮ ಸಾರ್ಥಕವಾಯಿತೇನೋ ಎನಿಸತೊಡಗಿತು. ಏಕೆಂದರೆ ಈ ಪ್ರತಿಭಟನೆಯ ಹಿಂದೆ ಇಡೀ ಮನುಕುಲದ ವ್ಯಥೆ, ಆಕ್ರೋಶ ಅಡಗಿದ್ದುದು ಸ್ಪಷ್ಟ. ಒಬ್ಬ ಅಮಾಯಕ ಬಾಲೆಯ ಮೇಲೆ ಅತ್ಯಾಚಾರ ಎಸಗಿ ಆ ಬಾಲೆಯ ಮೃತ್ಯುವನ್ನು ಪ್ರತಿಭಟಿಸಲು ಸಾವಿರಾರು ಜನರು ತಮ್ಮ ಅಸ್ಮಿತೆಗಳ ಎಲ್ಲೆ ಮೀರಿ ಒಂದೆಡೆ ನೆರೆದಿದ್ದು ಅಭೂತಪೂರ್ವ ಎನಿಸಿತ್ತು. ನನ್ನನ್ನು , ನನ್ನ ಸಹಚರರನ್ನು ಶಾಂತಿಯುತ ಪ್ರತಿಭಟನೆಯ ಸಂಕೇತವಾಗಿ ಬಳಸುವುದು ಜನ್ಮದ ಸಾರ್ಥಕತೆಯ ಪ್ರತೀಕವಾಗಿ ಕಂಡಿತ್ತು.
ಆದರೆ ಇಷ್ಟೆಲ್ಲಾ ಉತ್ಸಾಹವನ್ನು ಕಂಡ ನಂತರವೂ ನನಗೆ ಎಲ್ಲೋ ಒಂದೆಡೆ ಚಿಂತೆ ಕಾಡತೊಡಗಿತು. ನಿಜ. ದೆಹಲಿಯ ಘಟನೆಯಲ್ಲಿ ಮೃತಪಟ್ಟ ಬಾಲಕಿಗೆ ಶ್ರದ್ಧಾಂಜಲಿ ಅರ್ಪಿಸುವುದು ಮತ್ತು ಮನುಕುಲದ, ಪುರುಷ ಸಮಾಜದ ಬರ್ಬರ ಕೃತ್ಯದ ವಿರುದ್ಧ ಶಾಂತಿಯುತ ಪ್ರತಿಭಟನೆಗೆ ನನ್ನ ಬಳಕೆಯಾದದ್ದು ಹೆಮ್ಮೆಯ ವಿಚಾರವೇ.. ಆದರೆ ಈ ಘಟನೆಗಿಂತಲೂ ಹೀನ, ಕ್ರೂರ, ಅಮಾನವೀಯ ಕೃತ್ಯಗಳು ಈ ಪವಿತ್ರ ಭೂಮಿಯ ಗ್ರಾಮಗಳಲ್ಲಿ, ಪಟ್ಟಣಗಳಲ್ಲಿ, ನಗರಗಳಲ್ಲಿ ನಡೆಯುತ್ತಿದೆ. ಮಹಿಳೆ ಅತ್ಯಾಚಾರಕ್ಕೊಳಗಾಗುವುದು ನಿತ್ಯಸುದ್ದಿಯಾಗಿದೆ. ಮೂರು ವರ್ಷದ ಹಸುಳೆಯಿಂದ 70 ವರ್ಷದ ವೃದ್ಧೆಯವರೆಗೆ ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ. ತಂದೆಯಿಂದ, ಸೋದರರಿಂದ, ಸಂಬಂಧಿಕರಿಂದ, ನೆರೆಮನೆಯವರಿಂದ, ಸ್ನೇಹಿತರಿಂದ ಮಹಿಳೆಯರು, ಬಾಲಕಿಯರು , ಯುವತಿಯರು ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ. ಆದರೆ ಈ ಯಾವ ಘಟನೆಯಲ್ಲೂ ನನ್ನ ಬಳಕೆಯಾಗಿಲ್ಲ. ಇದು ಸಮಾಜದ ಪ್ರಜ್ಞಾವಂತರ ಪ್ರಮಾದ ಎಂದು ನಾನು ಹೇಳುವುದಿಲ್ಲ. ನನ್ನ ದುರಾದೃಷ್ಟ ಎಂದು ದುಃಖಿಸುತ್ತೇನೆ. ನನ್ನ ದುಃಖವನ್ನು ಕೇಳುವವರಾದರೂ ಈ ದೇಶದಲ್ಲಿ ಇದ್ದಾರೆಯೇ ?





0 Comments