ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಿವಾಕರ್ ಕಾಲಂ : ಮಕ್ಕಳ ದಿನಾಚರಣೆ ಮುಗಿವ ಮುನ್ನ..

ಮಕ್ಕಳ ದಿನಾಚರಣೆ ಕಣ್ತೆರೆದು ನೋಡೋಣವೇ ?

ನವಂಬರ್ 14 ಮಕ್ಕಳ ದಿನಾಚರಣೆ. ದೇಶದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ಅವರಿಗೆ ಮಕ್ಕಳ ಬಗ್ಗೆ ಅಪಾರ ಪ್ರೀತಿ ಮತ್ತು ಕಾಳಜಿ ಇತ್ತು ಎಂಬ ಕಾರಣಕ್ಕೆ ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸುತ್ತೇವೆ. ಒಂದು ದಿನಾಚರಣೆಯಾಗಿ ಈ ದಿನ ತನ್ನದೇ ಆದ ಮಹತ್ವ ಪಡೆದಿರಲು ಕಾರಣ ಈ ದೇಶದ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು ಇಂದಿಗೂ ಗಂಭೀರ ಸಮಸ್ಯೆಗಳಾಗಿಯೇ ಇರುವುದು. ಮಕ್ಕಳ ದಿನಾಚರಣೆಯ ದಿನ ಸಾಮಾನ್ಯವಾಗಿ ಸಾರ್ವಜನಿಕ ವಲಯದಲ್ಲಿ ಚಚರ್ೆಯಾಗುವುದು ಮಕ್ಕಳ ಶಿಕ್ಷಣ, ಪೌಷ್ಟಿಕತೆ, ಆರೋಗ್ಯ ಸಮಸ್ಯೆಗಳು ಮತ್ತು ಮಕ್ಕಳ ಭವಿಷ್ಯದ ಚಿಂತನೆ. ಮಾಧ್ಯಮಗಳಲ್ಲಿ ಶಾಲಾ ಮಕ್ಕಳ ರಂಗುರಂಗಿನ ಪೋಷಾಕುಗಳು ವಿಜೃಂಭಿಸುತ್ತವೆ. ಟಿವಿ ವಾಹಿನಿಗಳಲ್ಲಿ ಸರ್ಕಾರ ಅನುಸರಿಸುವ ಮಕ್ಕಳ ನೀತಿಗಳ ಬಗ್ಗೆ, ಕಾನೂನುಗಳ ಬಗ್ಗೆ, ಸಾಂವಿಧಾನಿಕ ಆದ್ಯತೆಗಳ ಬಗ್ಗೆ ಚರ್ಚೆಗಳಾಗುತ್ತವೆ. ವಿಪರ್ಯಾಸವೆಂದರೆ ಈ ಚರ್ಚೆ, ಸಂವಾದಗಳು ಕೇವಲ ದೃಶ್ಯ ಮಾಧ್ಯಮದ ಪರಿಕರಗಳಾಗಿ ಸಮಾಪ್ತಿಯಾಗುತ್ತವೆಯೇ ಹೊರತು, ಸಂವಾದದ ತಿರುಳು ಅಥವಾ ಆಶಯಗಳು ಆಳುವ ವರ್ಗಗಳ ಮನದ ಕದವನ್ನು ತಟ್ಟುವುದೇ ಇಲ್ಲ.

ಮಕ್ಕಳ ದಿನಾಚರಣೆ ಎಂದರೆ ದೇಶದ ಅಸಂಖ್ಯಾತ ಮಕ್ಕಳ ಶ್ರೇಯೋಭಿಲಾಷೆಗಾಗಿ ಪಣ ತೊಡುವ ಒಂದು ಅವಕಾಶವೆಂದು ಭಾವಿಸಿದಾಗಲೇ ಈ ದಿನದ ಸಾರ್ಥಕತೆಯನ್ನು ಕಾಣಲು ಸಾಧ್ಯ. ಆರು ದಶಕಗಳ ಆಳ್ವಿಕೆಯ ನಂತರವೂ ದೇಶದಲ್ಲಿ ಮಕ್ಕಳಿಗಾಗಿ ಒಂದು ಪ್ರತ್ಯೇಕ ನೀತಿಯನ್ನು ಜಾರಿಗೊಳಿಸದಿರುವುದು ನಮ್ಮ ಪ್ರಭುತ್ವದ ಕಾಳಜಿ, ಕಳಕಳಿಯ ಸಂಕೇತವಾಗಿ ಕಾಣುತ್ತದೆ. ಮಕ್ಕಳಿಗಾಗಿ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ನೀತಿಗಳನ್ನು ರೂಪಿಸುವುದು ಬೇರೆ, ಮಕ್ಕಳಿಗಾಗಿಯೇ ಸಮಗ್ರ ನೀತಿಯನ್ನು ಅನುಸರಿಸುವುದು ಬೇರೆ. ಈ ಎರಡೂ ವಿದ್ಯಮಾನಗಳನ್ನು ಪ್ರತ್ಯೇಕವಾಗಿ ಪರಿಗಣಿಸಿದಾಗ ಈ ದೇಶದ ಮಕ್ಕಳು ಬಹುಶಃ ನತದೃಷ್ಟರೆಂದೇ ಭಾವಿಸಬೇಕಾಗುತ್ತದೆ. ಬಂಡವಾಳ ಪರ ಆರ್ಥಿಕ ನೀತಿ ಮತ್ತು ಆಧುನಿಕತೆಯ ಸಾಮಾಜಿಕ ನೀತಿಗಳ ನಡುವೆ, ಜಾಗತೀಕರಣ ಹಾಗೂ ನವ ಉದಾರವಾದದ ಸ್ಪರ್ದಾತ್ಮಕ ಜಗತ್ತಿನಲ್ಲಿ ದೇಶದ ಮಕ್ಕಳ ಬಾಲ್ಯ ನಲುಗಿಹೋಗುತ್ತಿರುವುದು ಆಳ್ವಿಕರ ಗಮನಕ್ಕೆ ಬಾರದಿರುವುದು ಅಚ್ಚರಿ ಮೂಡಿಸುತ್ತದೆ.

ಶೈಕ್ಷಣಿಕ ಜಗತ್ತಿನ ರೋಬೋಟ್ಗಳು

ಶಿಕ್ಷಣವನ್ನು ಸಾಂವಿಧಾನಿಕ ಮೂಲಭೂತ ಹಕ್ಕು ಎಂದು ಪರಿಗಣಿಸುವ ನಿಟ್ಟಿನಲ್ಲಿ ಸರ್ಕಾರ  ದಿಟ್ಟ ಹೆಜ್ಜೆ ಇಟ್ಟಿರುವುದೇನೋ ನಿಜ. ಇಲ್ಲಿ ಸರ್ಕಾರದ ಕಾಳಜಿ ಮೆಚ್ಚುವಂತಹುದೇ. ಆದರೆ ಈ ಕಾಯ್ದೆಯ ಅನುಷ್ಠಾನದಲ್ಲಿ ಕಂಡುಬರುತ್ತಿರುವ ಅಡೆತಡೆಗಳನ್ನು, ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರಗಳು ತೋರುತ್ತಿರುವ ನಿರ್ಲಕ್ಷ್ಯವನ್ನು ಗಮನಿಸಿದರೆ ಸರ್ಕಾರದ ನೀತಿ ನಿಯಮಗಳು, ಕಾನೂನುಗಳು ಕೇವಲ ಅಲಂಕಾರಿಕ ಪರಿಕರಗಳಂತೆ ಭಾಸವಾಗುತ್ತವೆ. 14 ವರ್ಷದವರೆಗಿನ ಮಕ್ಕಳಿಗೆ ಕಡ್ಡಾಯ, ಉಚಿತ ಶಿಕ್ಷಣ ನೀಡುವ ಸಂವಿಧಾನದ ಆಶಯವನ್ನು ಸಾಕಾರಗೊಳಿಸಲು ಆರು ದಶಕಗಳ ಕಾಲ ಬೇಕೇ ಎಂಬ ಪ್ರಶ್ನೆ ಉದ್ಭವಿಸಿದಾಗ ಆಳುವ ವರ್ಗಗಳ ನಿರ್ಲಕ್ಷ್ಯ ಮತ್ತು ನಮ್ಮ ದೇಶದ ಸಾಮಾಜಿಕ ವ್ಯವಸ್ಥೆಯಲ್ಲಿನ ಲೋಪಗಳು ಧುತ್ತನೆ ಎದುರಾಗುತ್ತವೆ.

ಆಳ್ವಿಕರು ಎಂಬ ವಿಶಾಲ ತಳಹದಿಯ ವ್ಯಾಖ್ಯಾನದಲ್ಲಿ ಕೇವಲ ಆಳುವ ರಾಜಕೀಯ ಪಕ್ಷಗಳನ್ನು ಮಾತ್ರ ಒಳಗೊಂಡಾಗ ಇಂತಹ ವೈಪರೀತ್ಯಗಳಿಗೆ ಸರ್ಕಾರವನ್ನು ಮಾತ್ರ ದೂಷಿಸುವ ಮನೋಭಾವ ಸೃಷ್ಟಿಯಾಗುತ್ತದೆ. ಆದರೆ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಆಳುವ ವರ್ಗಗಳು ಎಂದರೆ ಆಡಳಿತಾರೂಢ ಪಕ್ಷಗಳನ್ನು, ಸಕರ್ಾರಿ ಯಂತ್ರಗಳನ್ನು ಮತ್ತು ದೇಶದ ಸಾಂವಿಧಾನಿಕ ಆಶಯಗಳನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಎಲ್ಲ ಸರ್ಕಾರಿ-ಸರ್ಕಾರೇತರ ಸಂಸ್ಥೆಗಳ ಪಾತ್ರ ತಮ್ಮದೇ ಆದ ಮಹತ್ವ ಪಡೆದಿರುತ್ತವೆ. ಈ ನಿಟ್ಟಿನಲ್ಲಿ ನೋಡಿದಾಗ ಈ ದೇಶದ ಶೈಕ್ಷಣಿಕ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಸಾರ್ವಜನಿಕ ಸಂಘಟನೆಗಳು ಮತ್ತು ಕೆಲವೊಮ್ಮೆ ಜನಾಂದೋಲನಗಳೂ ಸಹ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತವೆ. ಕಾರಣ ಮಕ್ಕಳ ಹಕ್ಕುಗಳನ್ನು ಕುರಿತು, ಮಕ್ಕಳ ಆದ್ಯತೆಗಳನ್ನು, ಕಾಳಜಿಗಳನ್ನು ಕುರಿತು ಸೂಕ್ತ ಸಮಯದಲ್ಲಿ ಸಮರ್ಪಕವಾಗಿ ದನಿ ಎತ್ತದಿರುವುದು. ಆಳ್ವಿಕರ ನಿಷ್ಕ್ರಿಯತೆಯನ್ನು ಸಹಿಸಿಕೊಳ್ಳುವುದೂ ನಿಷ್ಕ್ರಿಯತೆಯಷ್ಟೇ ದೊಡ್ಡ ಅಪರಾಧವಾಗುತ್ತದೆ.

ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆಯುವ ಹಂಬಲ ಸ್ವಾಭಾವಿಕ. ಆದರೆ ಈ ದೇಶದ ಸಮಸ್ಯೆ ಇರುವುದು ಶಿಕ್ಷಣ ವಂಚಿತ ಮಕ್ಕಳಲ್ಲಿ. ಮತ್ತು ತಮ್ಮ ಶೈಕ್ಷಣಿಕ ಮುನ್ನಡೆಯಲ್ಲಿ ತೊಡರುಗಳನ್ನು ಎದುರಿಸುವ ಮಕ್ಕಳಲ್ಲಿ. ಸರ್ವರಿಗೂ ಶಿಕ್ಷಣ ನೀತಿಯಡಿ ಸಕರ್ಾರ ರೂಪಿಸಿರುವ ಹೊಸ ಕಾಯ್ದೆ ಮತ್ತು ಖಾಸಗಿ ಶಾಲೆಗಳಲ್ಲಿ ಹಿಂದುಳಿದ ವರ್ಗಗಳಿಗೆ ನೀಡಲಾಗಿರುವ ಮೀಸಲಾತಿ ಈ ಸಮಸ್ಯೆಗಳಿಗೆ ಕೊಂಚ ಮಟ್ಟಿಗೆ ಪರಿಹಾರ ಸೂಚಿಸಬಹುದಿತ್ತು. ಆದರೆ ಸರ್ಕಾರದ ಸವಲತ್ತುಗಳು, ಔದ್ಯಮಿಕ ಕೃಪಾಕಟಾಕ್ಷ ಮತ್ತು ಕಾರ್ಪೋರೇಟ್ ಪ್ರೇರಣೆಯಿಂದ ಕೊಬ್ಬಿದ ತೋಳಗಳಂತಾಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಈ ನೀತಿಗಳನ್ನು ಅಳವಡಿಸಲೂ ಹಿಂಜರಿಯುತ್ತಿರುವುದು ಈ ದೇಶದ ಪ್ರಭುತ್ವದ ಲಕ್ಷಣಗಳಿಗೆ ಕನ್ನಡಿ ಹಿಡಿದಂತಿದೆ. ಸರ್ಕಾರ ತೊಟ್ಟಿಲು ತೂಗಿದರೆ ಖಾಸಗಿ ಸಂಸ್ಥೆಗಳು ಲಾಲಿ ಹಾಡುತ್ತವೆ ಈ ಎರಡರ ನಡುವೆ ಔದ್ಯಮಿಕ ಬಂಡವಾಳ ಹಿತಾಸಕ್ತಿಗಳು ತಿಗಣೆಗಳಂತೆ ಈ ದೇಶದ ಮಕ್ಕಳನ್ನು ಕಡಿಯುತ್ತಿರುತ್ತವೆ. ಮಕ್ಕಳ ದಿನಾಚರಣೆಯಂದು ಈ ಅಂಶವನ್ನು ಗಂಭೀರವಾಗಿ ಪರಿಗಣಿಸುವುದು ಅತ್ಯಗತ್ಯ.

ಅಮಾನವೀಯ ಸ್ಪರ್ಧಾತ್ಮಕ ಜಗತ್ತು

ನಿಜ, ಶೈಕ್ಷಣಿಕ ರಂಗದಲ್ಲಿ ನಮ್ಮ ದೇಶದ ಸಾಧನೆ ಅಪ್ರತಿಮ. ಶಾಲಾ ದಾಖಲಾತಿ ಪ್ರಮಾಣ ಹೆಚ್ಚಾಗಿದೆ. ಶೈಕ್ಷಣಿಕ ಪ್ರಗತಿ ಉತ್ತಮವಾಗಿದೆ. ಸಾಕ್ಷರತೆ ಪ್ರಮಾಣ ಹೆಚ್ಚಾಗಿದೆ. ಪ್ರತಿಯೊಂದು ಕುಗ್ರಾಮದಲ್ಲೂ ಶಾಲೆಗಳು ತೆರೆದಿವೆ. ಗ್ರಾಮೀಣ ಮಕ್ಕಳೂ ಶಿಕ್ಷಣ ಪಡೆಯುತ್ತಿದ್ದಾರೆ. ಮಕ್ಕಳ ಕಲಿಕಾ ಸಾಮಥ್ರ್ಯ ಹೆಚ್ಚಾಗುತ್ತಿದೆ. ಪ್ರತಿಭಾವಂತ ಮಕ್ಕಳ ಪ್ರಮಾಣ ಹೆಚ್ಚುತ್ತಿದೆ. ಇವೆಲ್ಲವೂ ಮಧ್ಯಮ, ಮೇಲ್ ಮಧ್ಯಮ ಮತ್ತು ಶ್ರೀಮಂತ ವರ್ಗಗಳಲ್ಲಿ ಕಂಡುಬರುವಂತಹ ವಿದ್ಯಮಾನಗಳು. ಮಕ್ಕಳ ದಿನಾಚರಣೆಯೂ ಇದೇ ವರ್ಗಗಳಿಗೆ ಸೀಮಿತವಾದ ಒಂದು ಆಚರಣೆಯಾಗಿ ಆರು ದಶಕಗಳಿಂದಲೂ ಕಂಡುಬರುತ್ತಿದೆ. ಸಮಾಜದ ನಿಮ್ನ ವರ್ಗಗಳ ಮತ್ತು ಅವಕಾಶವಂಚಿತ ಮಕ್ಕಳ ಬವಣೆಯನ್ನು ಬದಿಗಿಟ್ಟು, ಸ್ಥಿತಿವಂತರ, ಉಳ್ಳವರ ಸಮಾಜದಲ್ಲಿನ ಮಕ್ಕಳ ಸ್ಥಿತಿಗತಿಗಳನ್ನು ಅವಲೋಕಿಸಿದಾಗ, ಸೌಲಭ್ಯ, ಸವಲತ್ತು, ಅವಕಾಶಗಳು ಮಾತ್ರ ಮಕ್ಕಳ ಬಾಳನ್ನು ಹಸನಾಗಿಸುತ್ತವೆ ಎಂಬ ಭ್ರಮೆ ಮಾಯವಾಗುತ್ತದೆ.

ಕಾರಣ ಇಂದಿನ ಮಾರುಕಟ್ಟೆ ಪ್ರಣೀತ ಶಿಕ್ಷಣ ವ್ಯವಸ್ಥೆ ನವ ಉದಾರವಾದ ಪೋಷಿಸುವ ಸ್ಪರ್ಧಾತ್ಮಕ ಜಗತ್ತಿನ ಒಂದು ಪರಿಕರವಾಗಿ ಪರಿಣಮಿಸಿ ಶೈಕ್ಷಣಿಕ ಲೋಕದ ಮೊದಲ ಮೆಟ್ಟಿಲುಗಳನ್ನು ಕ್ರಮಿಸುವ ಮಕ್ಕಳನ್ನು ಯಂತ್ರಗಳಂತೆಯೇ ಪರಿಗಣಿಸುತ್ತಿದೆ. ಪ್ರತಿಭೆ ಎಂದರೆ ಶೈಕ್ಷಣಿಕ ಸಾಧನೆ, ಶೈಕ್ಷಣಿಕ ಸಾಧನೆ ಎಂದರೆ ಹೆಚ್ಚು ಅಂಕ ಗಳಿಕೆ, ಅಂಕ ಗಳಿಕೆಗಾಗಿ ಅವಿರತ ಪರಿಶ್ರಮ, ಪರಿಶ್ರಮಕ್ಕೆ ಪೂರಕವಾಗಿ ವಿವಿಧ ಸೌಲಭ್ಯಗಳು, ಸೌಲಭ್ಯಗಳನ್ನು ಒದಗಿಸಲು ವಿವಿಧ ಸಂಸ್ಥೆಗಳು ಮತ್ತು ಇವೆಲ್ಲವನ್ನೂ ಮೀರಿಸುವಂತೆ ಮಕ್ಕಳ ಸಾಮಥ್ರ್ಯವನ್ನು ಪರೀಕ್ಷಿಸಲು ತುದಿಗಾಲಲ್ಲಿ ನಿಂತಿರುವ ಮಾರುಕಟ್ಟೆ ಶಕ್ತಿಗಳು ಇಂದಿನ ಮಧ್ಯಮ ವರ್ಗದ ಮಕ್ಕಳ ಭವಿಷ್ಯವನ್ನು ನಿರ್ಧರಿಸುತ್ತಿವೆ. ಪ್ರಗತಿ ಮತ್ತು ಅಭಿವೃದ್ಧಿಯ ನಡುವಿನ ಸೂಕ್ಷ್ಮ ಸಂಬಂಧಗಳನ್ನು ಪರಿಪೂರ್ಣವಾಗಿ ಗ್ರಹಿಸದೆ ಮೈಲಿಗಲ್ಲುಗಳನ್ನು ನಿರ್ಮಿಸುವುದೇ ಮುಂದಡಿಯ ಪರಮೋದ್ದೇಶ ಎಂದು ಪರಿಗಣಿಸುವ ಪರಿಪಾಠವನ್ನು ಆಧುನಿಕ ಜಗತ್ತಿನಲ್ಲಿ ಕಾಣಬಹುದು. ಈ ಕಡಿವಾಣವಿಲ್ಲದ ಕುದುರೆಯ ನಾಗಾಲೋಟಕ್ಕೆ ಬಲಿಯಾಗುತ್ತಿರುವುದು ಮಕ್ಕಳು ಮತ್ತು ಮಕ್ಕಳ ಬಾಲ್ಯ.

ಪೂರ್ವ ಪ್ರಾಥಮಿಕ ಹಂತದಿಂದಲೇ ಮಕ್ಕಳನ್ನು ಕಲಿಕೆಯ ಕಾರ್ಖಾನೆಗಳಂತೆ ತಯಾರು ಮಾಡುವ ಪ್ರಕ್ರಿಯೆ ಪೋಷಕರಿಂದಲೇ ಆರಂಭವಾಗುತ್ತದೆ. ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಎಂಬ ನಾಣ್ಣುಡಿ ಇದೆ. ಈ ನಾಣ್ಣುಡಿಯ ಹಿಂದೆ ಜ್ಞಾನಾರ್ಜನೆಯ ಗುರಿ ಇದೆ. ವಿದ್ಯಾರ್ಜನೆಯ ಆಶಯವಿದೆ ಹಾಗೂ ಬಾಲ್ಯ ಜೀವನವನ್ನು ಹಸನಾಗಿಸುವ ಅಭಿಲಾಷೆ ಇದೆ. ಆದರೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮನೆ ಎನ್ನುವುದು ಪಾಠಶಾಲೆಯಾಗಿಲ್ಲ. ಬಾಲ್ಯದಲ್ಲಿ ಮಕ್ಕಳ ಮನದಾಳದಲ್ಲಿ ಮೂಡುವ ಎಲ್ಲ ಆಕಾಂಕ್ಷೆ, ಅಭಿಲಾಷೆ, ಅಭೀಪ್ಸೆಗಳನ್ನು ಬದಿಗಿರಿಸಿ, ಜ್ಞಾನಾರ್ಜನೆಯೆಂಬ ಮಹತ್ವಾಕಾಂಕ್ಷೆಯ ಪರಿಕರವನ್ನು ಕಡೆಗಣಿಸಿ, ಮಕ್ಕಳ ಮೆದುಳಿನಲ್ಲಿ ಶೈಕ್ಷಣಿಕ, ಶೈಕ್ಷಣಿಕೇತರ ಚಟುವಟಿಕೆಗಳ ಕಲಸುಮೇಲೋಗರೆಯನ್ನು ತುಂಬುವ ಪಾಕಶಾಲೆಯಾಗಿ ಪರಿಣಮಿಸಿದೆ. ಮೊದಲ ಗುರು ಆಗಬೇಕಿರುವ ತಾಯಿ ಮಕ್ಕಳ ಬಾಲ್ಯವನ್ನು ತಮ್ಮ ಆಕಾಂಕ್ಷೆಗಳಿಗೆ ಅನುಸಾರವಾಗಿ ನಿಯಂತ್ರಿಸುವ ರಿಂಗ್ ಲೀಡರ್ ಆಗಿ ಪರಿಣಮಿಸುತ್ತಿದ್ದಾರೆ. ಇದು ವಾಸ್ತವ.

 

ಮಕ್ಕಳು ಎಷ್ಟು ಕಲಿತರೂ ಸಾಲದು. ಶಾಲೆಯಲ್ಲಿ ನೂರಕ್ಕೆ ನೂರು ಅಂಕ ಗಳಿಸಬೇಕು. ಅದಕ್ಕಾಗಿ ಶಾಲೆಗೆ ಹೋಗುವ ಮುನ್ನ, ಶಾಲೆಯಿಂದ ಬಂದ ಕೂಡಲೇ ಟ್ಯೂಷನ್ ಅನಿವಾರ್ಯ. ಮಕ್ಕಳಲ್ಲಿ ಇಷ್ಟು ಸಾಮಥ್ರ್ಯವಿದೆಯೇ, ಕಲಿಕಾ ಶಕ್ತಿ ಇದೆಯೇ ಎಂದು ಪರಿಶೀಲಿಸುವ ಗೋಜಿಗೇ ಹೋಗದೆ ಪೋಷಕರು ತಮ್ಮ ಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ಸಾಧಿಸಬೇಕು ಎಂದು ಅಪೇಕ್ಷಿಸುವುದು ಸಹಜ, ಸ್ವಾಭಾವಿಕ. ಆದರೆ ಮಕ್ಕಳು ಏನೇ ಕಲಿತರೂ ಅವರ ಬಾಲ್ಯ ಜೀವನದ ಸೊಗಡನ್ನು ಕಳೆದುಕೊಳ್ಳದೆ ಕಲಿಯುವ ಅಗತ್ಯತೆಯನ್ನೂ ಪೋಷಕರು ಮನಗಾಣಬೇಕು. ವಾಸ್ತವದಲ್ಲಿ ಹಾಗಾಗುತ್ತಿಲ್ಲ. ಟಿವಿ ವಾಹಿನಿಗಳಲ್ಲಿ ಬರುವ ರಿಯಾಲಿಟಿ ಷೋಗಳನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ. ಸಂಗೀತ, ನೃತ್ಯ, ಹಾಡುಗಾರಿಕೆ ಹೀಗೆ ಮಕ್ಕಳು ಟಿವಿ ಷೋಗಳಲ್ಲಿ ಪ್ರಶಸ್ತಿ ಗಳಿಸಲು ಸಿದ್ಧಪಡಿಸುವುದೂ ಪೋಷಕರ ಆದ್ಯತೆಯಾಗಿಬಿಡುತ್ತದೆ. ಶಾಲೆಯಿಂದ ಬಂದ ಮಕ್ಕಳಿಗೆ ಸ್ವಾಭಾವಿಕವಾಗಿ ಅತ್ಯಗತ್ಯವಾದ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲೂ ಅವಕಾಶ ನೀಡದಿರುವುದು ಇಂದಿನ ಸಾಮಾನ್ಯ ಲಕ್ಷಣ. ಟ್ಯೂಷನ್ನಿಂದ ಬಂದ ಕೂಡಲೇ ಹೋಂ ವರ್ಕ್, ನಂತರ ಓದು, ಬರಹ. ಮಧ್ಯೇ ಮಧ್ಯೇ ಟಿವಿ ವೀಕ್ಷಣಂ, ದಿನಂ ಸಮಾಪ್ತಿ ಎಂಬಂತೆ ಮಕ್ಕಳ ನಿತ್ಯ ಜೀವನ ಬಿರುಸಾಗಿರುತ್ತದೆ.

ಇಲ್ಲಿ ಬಲಿಯಾಗುತ್ತಿರುವುದು ಮಕ್ಕಳ ಬಾಲ್ಯ ಮತ್ತು ಬಾಲ್ಯದ ಸುತ್ತಲಿನ ಸುಂದರ ಕನಸುಗಳು ಎಂಬ ಅಂಶವನ್ನು ಪೋಷಕರು ಮನಗಾಣುತ್ತಿಲ್ಲ. ಶಾಲೆಗಳಲ್ಲೂ ಮಕ್ಕಳಿಗೆ ಮುಕ್ತ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ. ಅತಿ ಹೆಚ್ಚು ಪಠ್ಯ ಪುಸ್ತಕಗಳು, ಹೆಚ್ಚಿನ ಪಠ್ಯ ಕ್ರಮ ಮತ್ತು ತಿಂಗಳಿಗೊಂದು ಪರೀಕ್ಷೆ ನಡೆಸುವುದೇ ಶಾಲೆಗಳ ಗುಣಮಟ್ಟದ ಮಾನದಂಡವಾಗಿರುತ್ತದೆ. ಯೂನಿಟ್ ಮತ್ತು ಮಾಸಿಕ ಪರೀಕ್ಷೆಗಳಲ್ಲಿ ಮಕ್ಕಳ ಕಲಿಕಾ ಸಾಮಥ್ರ್ಯವನ್ನಾಗಲೀ, ಜ್ಞಾನದ ಮಟ್ಟವನ್ನಾಗಲೀ ಪರೀಕ್ಷಿಸುವುದಿಲ್ಲ. ಬದಲಾಗಿ ಇಂತಿಷ್ಟು ಪಾಠಗಳಿಂದ ಇಂತಹುದೇ ಪ್ರಶ್ನೆಗಳನ್ನು ನೀಡುವುದಾಗಿ ಮುಂಚಿತವಾಗಿಯೇ ತಿಳಿಸಿ, ಬಾಯಿಪಾಠ ಮಾಡುವ ಪರಂಪರೆಗೆ ಒತ್ತು ನೀಡಲಾಗುತ್ತಿದೆ. ರಿಯಾಲಿಟಿ ಷೋಗಳಿಗಾಗಿ ಹಾಡು, ನೃತ್ಯ ಕಲಿಯುವಂತೆ ಮಕ್ಕಳು ಈ ಪರೀಕ್ಷೆಗಳಿಗಾಗಿ ಸಿದ್ಧತೆ ನಡೆಸುತ್ತಾರೆ. ಇಲ್ಲಿ ಬಲಿಯಾಗುವುದು ಜ್ಞಾನಾರ್ಜನೆಯ ಇಚ್ಚಾಶಕ್ತಿ ಮತ್ತು ಪುನಃ ಬಾಲ್ಯದ ಸುಂದರ ಕನಸುಗಳು.

ತಮ್ಮದೇ ಆದ ಲೋಕದಲ್ಲಿ ವಿಹರಿಸಲು ಇಚ್ಚಿಸುವ ಮಕ್ಕಳ ಬಾಲ್ಯದ ರೆಕ್ಕೆ ಪುಕ್ಕಗಳನ್ನು ಹಿರಿಯರು ತಮ್ಮ ಸ್ವಾರ್ಥ, ತಮ್ಮ ಘನತೆ, ಗೌರವ ಮತ್ತು ಸ್ಥಾನಮಾನಗಳಿಗಾಗಿ ಬಲಿ ನೀಡುತ್ತಿರುವುದು ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಕಾಡಬೇಕಾದ ಪ್ರಶ್ನೆ. ಇದಕ್ಕೆ ಪರಿಹಾರ ಇರುವುದು ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆಯಲ್ಲಿ ಮತ್ತು ಪೋಷಕರ ಮನೋಧರ್ಮದ ಬದಲಾವಣೆಯಲ್ಲಿ. ಇಂದಿನ ಪೋಷಕರು ತಮ್ಮ ಬಾಲ್ಯ ಜೀವನವನ್ನು ಒಮ್ಮೆ ನೆನಪಿಸಿಕೊಂಡರೆ ತಮ್ಮ ಮಕ್ಕಳ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಮನಗಾಣವುದು ಕಷ್ಟವೇನಲ್ಲ. ಆದರೆ ಕಾಲ ಬದಲಾಗಿದೆ ಎನ್ನುತ್ತಾ ತಮ್ಮನ್ನು ತಾವೇ ಬದಲಾವಣೆಯತ್ತ ಸಾಗಿಸುತ್ತಿದ್ದು ಬದಲಾವಣೆಯ ಹೊರೆಯನ್ನು ತಮ್ಮ ಕಂದಮ್ಮಗಳ ಮೇಲೆ ಹೊರೆಸುತ್ತಿರುವ ಪೋಷಕರು, ಶಾಲೆಗಳು ಮತ್ತು ಸಮಾಜ, ಮಕ್ಕಳ ದಿನಾಚರಣೆಯ ಸಂದರ್ಭದಲ್ಲಾದರೂ ಆತ್ಮಾವಲೋಕನ ಮಾಡಿಕೊಳ್ಳುವುದು ಅತ್ಯಗತ್ಯ.

ವಂಚಿತರ ಅಳಲು

ಶಿಕ್ಷಣ ವಂಚಿತ ಮಕ್ಕಳ ಬವಣೆ ಇನ್ನೂ ಗಂಭೀರವಾಗಿದೆ. ಸರ್ಕಾರಗಳ ಜನಪರ ನೀತಿಗಳ ಪರಿಣಾಮವಾಗಿ ಶಾಲಾ ದಾಖಲಾತಿ ಪ್ರಮಾಣ ಹೆಚ್ಚಾಗಿರುವುದಾದರೂ ಶಾಲೆಯನ್ನು ಮಧ್ಯದಲ್ಲೇ ತೊರೆಯುವ ಮಕ್ಕಳ ಸಂಖ್ಯೆಯೂ ಅಷ್ಟೇ ಗಣನೀಯ ಪ್ರಮಾಣದಲ್ಲಿ ಏರುತ್ತಿದೆ. ಇಂತಹ ಸ್ಥಿತಿಯಲ್ಲಿಯೂ ಕರ್ನಾಟಕದ ಬಿಜೆಪಿ ಸಕರ್ಾರ ತನ್ನ ಅಪ್ರಬುದ್ಧತೆಯ ಪರಾಕಾಷ್ಠೆಯನ್ನು ಪ್ರದರ್ಶಿಸುತ್ತಾ ಹಾಜರಾತಿ ಕಡಿಮೆ ಇರುವ ಸರ್ಕಾರಿ ಶಾಲೆಗಳನ್ನು ಮುಚ್ಚುವ ನೀತಿ ಅನುಸರಿಸುತ್ತಿದೆ. ಒಂದೆಡೆ ಪೌಷ್ಟಿಕತೆಯ ಕೊರತೆ ಮತ್ತೊಂದೆಡೆ ಜ್ಞಾನದ ಕೊರತೆ ಎದುರಿಸುವ ಬಡ ಮಕ್ಕಳು ಬಂಡವಾಳ ವ್ಯವಸ್ಥೆಯ ಹೆದ್ದಾರಿಯಲ್ಲಿ ಹಾಸುಗಲ್ಲುಗಳಾಗಿ ನಲುಗಿ ಹೋಗುತ್ತಿರುವುದು ಆಳ್ವಿಕರಿಗೆ ತಿಳಿಯದ ವಿಷಯವೇನಲ್ಲ. ಚಿಂದಿ ಆಯುವ ಮಕ್ಕಳು, ಗ್ಯಾರೇಜುಗಳಲ್ಲಿ ದುಡಿಯುವ ಮಕ್ಕಳು, ಭಿಕ್ಷಾಟನೆ ಮಾಡುವ ಮಕ್ಕಳು, ಕಾರ್ಖಾನೆಗಳಲ್ಲಿ ಗುಪ್ತವಾಗಿ ದುಡಿಯುವ ಮಕ್ಕಳು ಪ್ರಭುತ್ವದ ಕಣ್ಣಿಗೆ ಬೀಳುತ್ತಿವೆ. ಆದರೆ ಜಾಣ ಕುರುಡು ಎಲ್ಲವನ್ನೂ ಮರೆಮಾಚಿಸುತ್ತಿದೆ. ಚಾಚಾ ನೆಹರೂ ಅವರ ಸ್ಮರಣಾರ್ಥ ಬಿಂಬಿಸಲಾಗುವ ಕೆಂಗುಲಾಬಿಯ ಪಕಳೆಗಳಲ್ಲಿ ಈ ಅವಕಾಶವಂಚಿತ ಮಕ್ಕಳಿಗೆ ಸ್ಥಾನವೇ ಲಭಿಸದಿರುವುದು ಸ್ವತಂತ್ರ ಭಾರತದ ದುರಂತ.

ನೆಹರೂ ಕಾಲದಿಂದಲೂ ಮಕ್ಕಳ ದಿನಾಚರಣೆ ಉಳ್ಳವರ ವಿಜೃಂಭಣೆಯಾಗಿದೆ. ಮಿಥ್ಯಾಲೋಕದ ವೈಭವೀಕರಣವಾಗಿಯೇ ಪ್ರಕಟವಾಗುತ್ತಿದೆ. ರಂಗುರಂಗಿನ ಪೋಷಾಕು ತೊಟ್ಟ ಮಕ್ಕಳ ಅಂದ ಚೆಂದದ ಮೆರವಣಿಗೆ ಮತ್ತು ಪ್ರತಿಭಾ ಪ್ರದರ್ಶನದ ಹಿಂದೆ, ಕಂಡೂ ಕಾಣದಂತೆ ರಸ್ತೆಬದಿಯಲ್ಲಿ ನಿಂತು ಇಂದ್ರಲೋಕವನ್ನೇ ನೋಡುವಂತೆ ನಿಬ್ಬೆರಗಾಗಿ ನೋಡುತ್ತಾ , ಹಸಿದ ಹೊಟ್ಟೆಯನ್ನೂ ಲೆಕ್ಕಿಸದೆ ಬಿಸಿಲ ಝಳದಲ್ಲಿ ಬೆವರು ಸುರಿಸುವ ಕೋಟ್ಯಂತರ ಮಕ್ಕಳ ಕರಾಳ ಲೋಕವೊಂದು ಅಡಗಿರುವುದು ಪ್ರಭುತ್ವದ ಕಣ್ಣಿಗೆ, ಆಳ್ವಿಕರ ಸಂವೇದನೆಗೆ ನಿಲುಕದೆ ಹೋದರೆ ಮಕ್ಕಳ ದಿನಾಚರಣೆ ಒಂದು ಸಾಂಕೇತಿಕ ಹಬ್ಬವಾಗಿ ಪರ್ಯವಸಾನ ಹೊಂದುತ್ತದೆ. ರಸ್ತೆಯನ್ನು ಅಲಂಕರಿಸುವ ಕೆಂಗುಲಾಬಿಯ ಪಕಳೆಗಳನ್ನು ನೋಡುತ್ತಲೇ ತಮ್ಮ ಜೀವನ ಸುಖವನ್ನು ಅನುಭವಿಸುವ ಅಸಹಾಯಕ ಮೂಕ ಜೀವಿಗಳು ತಮ್ಮ ಮನದಾಳದಿ ಒಣಗಿ ಉದುರುತ್ತಿರುವ ಬದುಕಿನ ಪಕಳೆಗಳನ್ನು ಎಣಿಸುತ್ತಾ ಕಾಲ ಕಳೆಯುತ್ತಿರುತ್ತಾರೆ. ಚಾಚಾ ನೆಹರೂ ಜಿಂದಾಬಾದ್ ಎಂಬ ಘೋಷಣೆ ಹೊತ್ತ ಮಕ್ಕಳ ಸಾಲಿನ ಬದಿಯಲ್ಲಿ , ಚಾಯ್ ಚಾಯ್ ಎಂದು ಚಹಾ ಮಾರುವ ಹುಡುಗ ದಣಿದವರ ದಣಿವಾರಿಸಲು ಶ್ರಮಿಸುತ್ತಿರುತ್ತಾನೆ. ಆಚರಣೆಗಳ ವೈಭವದಲ್ಲಿ ಸಂವೇದನೆ ಮರೆಯಾಗುತ್ತಿರುತ್ತದೆ.

 

‍ಲೇಖಕರು G

15 November, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading