ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಿವಾಕರ್ ಕಾಲಂ : ಅಖಂಡತೆಯ ಸೋಗು – ಪ್ರತ್ಯೇಕತೆಯ ಕೂಗು

ಅಖಂಡತೆಯ ಸೋಗು – ಪ್ರತ್ಯೇಕತೆಯ ಕೂಗು

ರಾಜ್ಯದ ಜನತೆ ಮತ್ತೊಂದು ರಾಜ್ಯೋತ್ಸವವನ್ನು ಆಚರಿಸುತ್ತಿದೆ. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ಕವಿವಾಣಿಯನ್ನು ಸಾಕಾರಗೊಳಿಸಿ 56 ವರ್ಷಗಳೇ ಸಂದಿವೆ. ಈ 56 ಸಂವತ್ಸರಗಳಲ್ಲಿ ಕರ್ನಾಟಕ ಒಂದು ಪ್ರವರ್ಧಮಾನಕ್ಕೆ ಬಂದ ಪ್ರಬುದ್ಧ ರಾಜ್ಯವಾಗಿ ಬೆಳೆದಿದೆಯಾದರೂ ಅಖಂಡ ಕರ್ನಾಟಕದ ಆಶಯಗಳನ್ನು ಹೊತ್ತು ರಾಜ್ಯದ ಜನತೆಗೆ ಭಾಷಾಭಿಮಾನ ಮತ್ತು ಪ್ರಾದೇಶಿಕ ಅಸ್ಮಿತೆಯ ಹೊಸ ಆಯಾಮವನ್ನು ಒದಗಿಸಿದ ಕರ್ನಾಟಕ ಏಕೀಕರಣ ಚಳುವಳಿಯ ರೂವಾರಿಗಳು ಅಂದು ಬಿಟ್ಟು ಹೋದ ಸಮಸ್ಯೆಗಳೇ ಇಂದಿಗೂ ರಾಜ್ಯವನ್ನು ಕಾಡುತ್ತಿವೆ. ಆಳ್ವಿಕರ ನಿಷ್ಕಾಳಜಿ ಮತ್ತು ನಿಷ್ಕ್ರಿಯತೆ ಹಾಗೂ ರಾಜಕೀಯ ವ್ಯವಸ್ಥೆ ಅನುಸರಿಸುತ್ತಿರುವ ಸಮಾಜೋ ಆರ್ಥಿಕ ನೀತಿಗಳು ರಾಜ್ಯದ ಅಖಂಡತೆ ಮತ್ತು ಅಸ್ತಿತ್ವವನ್ನೇ ಅಣಕಿಸುವಂತೆ ಕಾಣುತ್ತಿವೆ. ನಿಜ ಭೌಗೋಳಿಕವಾಗಿ ಅಖಂಡ ಕರ್ನಾಟಕದ ಆಶಯಗಳು ಪೂರ್ಣವಾಗಿಲ್ಲ ಆದರೆ ಭಾವನಾತ್ಮಕವಾಗಿ ಪರಿಪೂರ್ಣವಾಗಿದೆ. ಕನರ್ಾಟಕ-ಕನ್ನಡ-ಕನ್ನಡಿಗ ಎಂಬ ಸಮೀಕರಣದ ಛಾಯೆಯಲ್ಲಿ ಅಖಂಡತೆಯ ಸೋಗು ಎದ್ದು ಕಾಣುತ್ತದೆ.

ಆದರೆ ಕಾಸರಗೋಡಿನ ಬಗ್ಗೆ ಆಳುವ ವರ್ಗಗಳ ನಿರ್ಲಕ್ಷ್ಯ ಮತ್ತು ಬೆಳಗಾವಿಯ ಮೇಲೆ ಮಹಾರಾಷ್ಟ್ರದ ಆಕ್ರಮಣ ಅಖಂಡತೆಯ ಪ್ರಶ್ನೆಯನ್ನು ನೆನಪಿಸುತ್ತಲೇ ಇರುತ್ತವೆ. ರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯದೆಲ್ಲೆಡೆ ಕಾಣುವ ಸಂಭ್ರಮ, ವೈಭವ ಮತ್ತು ಭಾವನೆಗಳು ಕ್ಷಣಕಾಲದ ಆಚರಣೆಯ ದ್ಯೋತಕವಾಗಿ ಕಾಣುತ್ತದೆಯೇ ಹೊರತು, ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಯಾವುದೇ ರೀತಿಯ ಬೆಳಕು ಚೆಲ್ಲುವುದಿಲ್ಲ. ಕನ್ನಡಾಂಭೆ, ಭುವನೇಶ್ವರಿ ಮತ್ತು ಕನ್ನಡ ಭಾಷೆಯ ವೈಭವೀಕರಣದ ಮೆರವಣಿಗೆಯಲ್ಲಿ ಹೂತು ಹೋಗುವ ಜನಸಾಮಾನ್ಯರ ಬವಣೆಗಳು ಮತ್ತು ಅಸಮಾನತೆಯ ಸೂಕ್ಷ್ಮ ತರಂಗಗಳು ಸದಾ ಸುಪ್ತವಾಗಿಯೇ ಇರುತ್ತವೆ. ಸಿರಿಗನ್ನಡಂ ಗೆಲ್ಗೆ ಎಂಬ ಕವಿವಾಣಿಯೂ ಭಾಷೆಯ ಮಟ್ಟಿಗೆ ಸಾಕಾರಗೊಳ್ಳುತ್ತಿದೆ ಆದರೆ ಕನ್ನಡದ ಸಿರಿಯ ಗೆಲುವಿಗೆ, ಕನ್ನಡದ ಸಿರಿಯ ಬಾಳುವಿಕೆಗೆ ಪೂರಕವಾದ ಸಾಂಸ್ಕೃತಿಕ ಹಾಗೂ ಸಾಮಾಜಿಕ ವಾತಾವರಣವನ್ನು ಸೃಷ್ಟಿಸುವಲ್ಲಿ ನಾವು ವಿಫಲರಾಗುತ್ತಿದ್ದೇವೆ.

ಕರ್ನಾಟಕದಲ್ಲಿ ಕಂಡುಬರುವ ವೈಶಿಷ್ಟ್ಯವೆಂದರೆ ಕನ್ನಡ ಪರ ಹೋರಾಟ ಸಂಘಟನೆಗಳಿಗೆ ಭಾಷೆ ಪ್ರಧಾನ ಭೂಮಿಕೆಯಾದರೆ ರಾಜ್ಯದ ಆಳುವ ವರ್ಗಗಳಿಗೆ ಭಾಷೆಯ ಸುತ್ತಲಿನ ಭಾವನೆಗಳು ಮತ್ತು ಭಾವನಾತ್ಮಕ ಸನ್ನಿವೇಶಗಳು ಪ್ರಧಾನ ಭೂಮಿಕೆಯಾಗುತ್ತವೆ. ಭೌಗೋಳಿಕ ಸಮಸ್ಯೆಗಳನ್ನು ಭಾಷಿಕ ದೃಷ್ಟಿಕೋನದಿಂದಲೇ ನೋಡುವ ಮೂಲಕ ಕರ್ನಾಟಕ ಎಂದರೆ ಕನ್ನಡಿಗ ಎಂದೇ ಪರಿಭಾವಿಸಲಾಗುತ್ತದೆ. ಭಾಷೆಯ ಎಲ್ಲೆಗಳನ್ನೂ ಮೀರಿದ ಕನ್ನಡತನ ಅಥವಾ ಕರ್ನಾಟಕದ ಸಂಬಂಧಗಳನ್ನು ಯಾವುದೇ ಸಂದರ್ಭದಲ್ಲೂ ಗುರುತಿಸಲಾಗುತ್ತಿಲ್ಲ.  ಆರ್.ಕೆ. ನಾರಾಯಣ್ ಅವರ ಸ್ಮಾರಕದ ವಿವಾದದಲ್ಲಿ ಈ ಒಂದು ವಿದ್ಯಮಾನ ಸ್ಪಷ್ಟವಾಗಿ ಕಾಣುತ್ತಿದೆ. ಈ ಹಿನ್ನೆಲೆಯಲ್ಲೇ ಕಾಸರಗೋಡು ಅಥವಾ ಬೆಳಗಾವಿಯ ವಿವಾದಗಳನ್ನೂ ಪರಾಮರ್ಶಿಸಬೇಕಾಗುತ್ತದೆ. ಪ್ರಾದೇಶಿಕ ಭಾವನೆಗಳನ್ನು ಬದಿಗಿರಿಸಿ ಪ್ರದೇಶದಲ್ಲಿ ವಾಸಿಸುವ ಸರ್ವ ಭಾಷಿಕರ ಮೂಲಭೂತ ಸಮಸ್ಯೆಗಳನ್ನು ಮಾನವೀಯ ದೃಷ್ಟಿಯಿಂದ ನೋಡುವ ಪರಿಭಾಷೆಯೂ ರಾಜ್ಯದಲ್ಲಿ ಕಂಡುಬರುತ್ತಿಲ್ಲ.

ರಾಜ್ಯೋತ್ಸವ ಸಂದರ್ಭದಲ್ಲಿ ರಾಜ್ಯದ ಜನತೆಯನ್ನು ಕಾಡುತ್ತಿರುವ ಮತ್ತೊಂದು ಪ್ರಶ್ನೆ ಉತ್ತರ ಕರ್ನಾಟಕದ ಪ್ರತ್ಯೇಕತೆಯ ಕೂಗು. ಸಚಿವ ಉಮೇಶ್ ಕತ್ತಿ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಲು ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದೆ. ಈ ಪ್ರಾಂತ್ಯದ ಜನರ ಪ್ರತ್ಯೇಕತೆಯ ಕೂಗು ಇತ್ತೀಚಿನದೇನಲ್ಲ. ಕರ್ನಾಟಕದ ರಚನೆಯಾದ ದಿನದಿಂದಲೂ ಆಳ್ವಿಕರ ನಿರ್ಲಕ್ಷ್ಯಕ್ಕೆ ಗುರಿಯಾಗಿ ಅಭಿವೃದ್ಧಿ ಪಥದಲ್ಲಿ ಹಿಂದುಳಿದಿರುವ ಉತ್ತರ ಕರ್ನಾಟಕದ ಜನತೆ ಅಖಂಡ ಕರ್ನಾಟಕದೊಡನೆ ಗುರುತಿಸಿಕೊಂಡರೆ ಅದು ಕೇವಲ ಭಾಷಿಕ ಭಾವನೆಗಳ ನೆಲೆಯಲ್ಲಿ ಮಾತ್ರ ಎನಿಸುತ್ತದೆ. ಏಕೆಂದರೆ ಆರ್ಥಿಕ ಅಭಿವೃದ್ಧಿಯಲ್ಲಿ ಕರ್ನಾಟಕವನ್ನಾಳಿದ ರಾಜಕೀಯ ಪಕ್ಷಗಳು ಈವರೆಗೂ ಈ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ನೀತಿಗಳನ್ನು ಅನುಸರಿಸಿಲ್ಲ. ಉದ್ಯೊಗ ಸೃಷ್ಟಿಯಲ್ಲಾಗಲಿ, ಕೈಗಾರಿಕೋದ್ಯಮ ಅಭಿವೃದ್ಧಿಯಲ್ಲಾಗಲೀ, ಬಂಡವಾಳ ಹೂಡಿಕೆಯಲ್ಲಾಗಲೀ ಉತ್ತರ ಕರ್ನಾಟಕದ ಪ್ರಾತಿನಿಧ್ಯ ಕಡಿಮೆ ಪ್ರಮಾಣದಲ್ಲಿರುವುದು ಸಾರ್ವಕಾಲಿಕ ಸತ್ಯ.

ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಜನತೆ ನಿರ್ಲಕ್ಷ್ಯತೆಗೊಳಗಾಗಿ ಜಿಗುಪ್ಸೆಯಿಂದ ಪ್ರತ್ಯೇಕತೆ ಬಯಸಿದರೆ ಅದನ್ನು ದೇಶದ್ರೋಹಿ ಅರ್ಥಾತ್ ರಾಜ್ಯದ್ರೋಹಿ ಧೋರಣೆ ಎಂದು ಭಾವಿಸುವುದು ಆತ್ಮದ್ರೋಹದ ಮಾತಾಗುತ್ತದೆ. ಐದು ದಶಕಗಳಿಗೂ ಹೆಚ್ಚು ಕಾಲ ರಾಜ್ಯವನ್ನಾಳಿದ ರಾಜಕೀಯ ಪಕ್ಷಗಳು ಬಂಡವಾಳ ಹೂಡಿಕೆಯಲ್ಲಿ, ಸಂಪನ್ಮೂಲ ಹಂಚಿಕೆಯಲ್ಲಿ, ಉದ್ಯೋಗ ಸೃಷ್ಟಿಯಲ್ಲಿ ಮತ್ತು ಅಭಿವೃದ್ಧಿ ನೀತಿಗಳನ್ನು ಜಾರಿಗೊಳಿಸುವಲ್ಲಿ ಉತ್ತರ ಕರ್ನಾಟಕವನ್ನೂ ಕರ್ನಾಟಕದ ಅರ್ಥಾತ್ ಅಖಂಡ ಕರ್ನಾಟಕದ ಒಂದು ಭಾಗ ಎಂದು ಪರಿಗಣಿಸಿದ್ದ ಪಕ್ಷದಲ್ಲಿ ಬಹುಶಃ ಪ್ರತ್ಯೇಕತೆಯ ಕೂಗು ಗಟ್ಟಿಯಾಗಿ ಕೇಳಿಬರುತ್ತಿರಲಿಲ್ಲ. ಒಬ್ಬ ಸಚಿವರಾಗಿ ಕತ್ತಿಯವರ ಆಗ್ರಹವನ್ನು ಸಂವಿಧಾನ ವಿರೋಧಿ ಎಂದು ಖಂಡಿಸಬಹುದು, ಆದರೆ ಅಸಮತೋಲನ ಬೆಳವಣಿಗೆಗೆ ಗುರಿಯಾಗಿರುವ ಜನತೆ ಇದೇ ಆಗ್ರಹವನ್ನು ಮುಂದಿಟ್ಟಾಗ ಆಳ್ವಿಕರ ಆಯ್ಕೆ ಏನಿರುತ್ತದೆ ? ಇಲ್ಲಿ ಭಾವನೆಗಳು ತನ್ನದೇ ಆದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ.

ಸಣ್ಣ ರಾಜ್ಯಗಳಿಂದ ಯಾವುದೇ ಪ್ರದೇಶದ ಜನತೆಗೆ ಹೆಚ್ಚು ಅವಕಾಶಗಳು ಲಭ್ಯವಾಗುತ್ತವೆ, ಆಡಳಿತ ವ್ಯವಸ್ಥೆಯಲ್ಲಿ ಜನತೆಯ ದನಿಗೆ ಅವಕಾಶ ದೊರೆಯುತ್ತದೆ, ಸಂಪನ್ಮೂಲ ಕ್ರೋಢೀಕರಣ ಮತ್ತು ಹಂಚಿಕೆ ಸಮತೋಲನದಿಂದ ನಡೆಯುತ್ತದೆ, ಯುವ ಪೀಳಿಗೆಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯುತ್ತವೆ, ಬಂಡವಾಳ ಹೂಡಿಕೆಗೆ ಪ್ರಶಸ್ತ ಅವಕಾಶ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಈ ವಾದ ಪ್ರತಿವಾದವನ್ನು ಬದಿಗಿಟ್ಟು ಒಂದು ರಾಜ್ಯದ ಅಖಂಡತೆಯ ನೆಲೆಯಲ್ಲೇ ಪ್ರತ್ಯೇಕತೆಯ ಆಗ್ರಹವನ್ನು ಪರಿಗಣಿಸಿದಾಗ ವಂಚಿತ ಜನಸಮುದಾಯಗಳಿಗೆ ಮೇಲಿನ ಅನುಕೂಲಗಳನ್ನು ಒದಗಿಸುವುದು ಆಳ್ವಿಕರ ಕರ್ತವ್ಯವಾಗುತ್ತದೆ. ಪ್ರತ್ಯೇಕತೆಯ ಕೂಗಿನ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿರುವ ರಕ್ಷಣಾ ವೇದಿಕೆಗಳು, ಕನ್ನಡ ಪರ ಸಂಘಟನೆಗಳು, ಕವಿ ಸಾಹಿತಿಗಳು, ರಾಜಕೀಯ ನಾಯಕರು ಮತ್ತು ಕನ್ನಡ ಪರ ಕೈ ಎತ್ತುವ ದಿಟ್ಟ ಹೋರಾಟಗಾರರು ಉತ್ತರ ಕರ್ನಾಟಕಕ್ಕೆ ಕರ್ನಾಟಕದ ಆಳ್ವಿಕರಿಂದ ಆಗಿರುವ, ಆಗುತ್ತಿರುವ ಮತ್ತು ಆಗಲಿರುವ ಅನ್ಯಾಯಗಳ ವಿರುದ್ಧ ಎಂದಾದರೂ ದನಿ ಎತ್ತಿದ್ದಾರೆಯೇ?

ಶೌಚಾಲಯ ವ್ಯವಸ್ಥೆಯಿಂದ ಹಿಡಿದು ಬೃಹತ್ ಕೈಗಾರಿಕೆಯವರೆಗೆ ಉತ್ತರ ಕನರ್ಾಟಕದ ಜನತೆ ವಂಚಿತರಾಗಿರುವುದು ಗುಟ್ಟಿನ ಮಾತೇನಲ್ಲ. ಮೂಲಭೂತ ಅವಶ್ಯಕತೆಗಳನ್ನು ಪೂರೈಸುವುದರಲ್ಲೂ ರಾಜ್ಯ ಸರ್ಕಾರಗಳು ಇಲ್ಲಿನ ಜನರನ್ನು ವಂಚಿಸಿರುವುದೂ ಅಷ್ಟೇ ಸತ್ಯ. ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವುದು, ಈ ಪ್ರದೇಶದ ನಾಯಕರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡುವುದು, ಸುವರ್ಣ ಸೌಧ ನಿರ್ಮಿಸುವುದು, ವರ್ಷಕ್ಕೊಮ್ಮೆ ಅಧಿವೇಶನ ನಡೆಸುವುದು ಈ ಎಲ್ಲಾ ವಯ್ಯಾರದ ಪ್ರಹಸನಗಳು ಯಾವುದೇ ಪ್ರದೇಶದ ಅಭಿವೃದ್ಧಿಗೆ ಪೂರಕವಾಗಿರುವುದಿಲ್ಲ. ಜನತೆಯ ಮೂಲಭೂತ ಅವಶ್ಯಕತೆಗಳನ್ನು ಮತ್ತು ಆಶೋತ್ತರಗಳನ್ನು ಪೂರೈಸುವ ನಿಟ್ಟಿನಲ್ಲಿ ಜನಪರ ಎನಿಸುವ ಸಮಾಜೋ ಆರ್ಥಿಕ ನೀತಿಗಳನ್ನು ಜಾರಿಗೊಳಿಸಲು ಬೇಕಿರುವುದು ರಾಜಕೀಯ ಇಚ್ಚಾಶಕ್ತಿಯೇ ಹೊರತು ಭಾವನಾತ್ಮಕ ಘೋಷಣೆಗಳಾಗಲೀ, ಭವ್ಯ ಸ್ಥಾವರಗಳಾಗಲೀ ಅಲ್ಲ.

ಅಂಕಿ ಅಂಶಗಳ ಗೋಜಿಗೆ ಹೋಗದೆಯೇ ಉತ್ತರ ಕರ್ನಾಟಕದ ಜನತೆಯ ಬವಣೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಕೇವಲ ಸರ್ಕಾರಗಳಷ್ಟೇ ಅಲ್ಲ ರಾಜ್ಯದ ಸಮಸ್ತ ಜನತೆಯನ್ನು ಪ್ರತಿನಿಧಿಸುವ ಕನ್ನಡಪರ ಸಂಘಟನೆಗಳು, ರಕ್ಷಣಾ ವೇದಿಕೆಗಳು ಮತ್ತು ಸಾಹಿತಿ ಬರಹಗಾರರೂ ಸಹ ಎಲ್ಲೋ ಒಂದು ಕಡೆ ತಮ್ಮ ಹೊಣೆಗಾರಿಕೆಯನ್ನು ಮರೆತಿದ್ದಾರೆ ಎನಿಸುತ್ತದೆ. ಪ್ರತ್ಯೇಕತೆ ಬಯಸುವವರ ಪ್ರತಿಕೃತಿ ದಹಿಸುವ ಹೋರಾಟಗಾರರು ಈ ಬಯಕೆಗೆ, ಆಗ್ರಹಕ್ಕೆ , ಬೇಡಿಕೆಗೆ ಕಾರಣರಾದವರ ಪ್ರತಿಕೃತಿಯನ್ನು ಎಂದಾದರೂ ದಹಿಸಿದ್ದಾರೆಯೇ ಎಂಬ ಪ್ರಶ್ನೆ ಎದುರಾದಾಗ ಮೌನ ಆವರಿಸುತ್ತದೆ. ಇದು ಕಟು ವಾಸ್ತವ. ಭೌಗೋಳಿಕ ಅಖಂಡತೆಗೂ ಭೌತಿಕ ಅಖಂಡತೆಗೂ ಇರುವ ಸೂಕ್ಷ್ಮ ವ್ಯತ್ಯಾಸಗಳನ್ನು ಗ್ರಹಿಸುವಲ್ಲಿ ಭಾವನೆಗಳು ಪ್ರಧಾನ ಭೂಮಿಕೆ ವಹಿಸಿದಾಗ ಇಂತಹ ವ್ಯತ್ಯಯಗಳು ಉಂಟಾಗುವುದು ಸಹಜ. ರಾಜ್ಯೋತ್ಸವದ ಸಂದರ್ಭದಲ್ಲಿ ಕನರ್ಾಟಕದ ಜನತೆ ತಮ್ಮ ಭಾಷಾಭಿಮಾನದ ಅತಿರೇಕಗಳನ್ನು ಬದಿಗಿಟ್ಟು ವಸ್ತುನಿಷ್ಠವಾಗಿ ಯೋಚಿಸಿದಲ್ಲಿ ಪ್ರತ್ಯೇಕತೆಯ ಚರ್ಚೆಗಳಿಗೆ ಒಂದು ಅರ್ಥ ಇರುತ್ತದೆ. ಇಲ್ಲವಾದಲ್ಲಿ ಘೋಷಣೆಗಳ ನಡುವೆ ವಾಸ್ತವಗಳು ಕರಗಿ ಹೋಗುತ್ತವೆ.

‍ಲೇಖಕರು G

1 November, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading