ಶ್ರೀನಾಥ್ ಭಲ್ಲೆ
ಮದುವೆಯಾಗಿ ವರ್ಷ ಉರುಳುತ ಬಂದಾಗಿಯೂ ಏನೂ ಸುದ್ದಿ ಹೊರಗೆ ಬರಲೇ ಇಲ್ಲವಲ್ಲ ಎಂಬ ಆತಂಕ, ಅನುಮಾನಗಳು ಆ ದಿನಗಳಲ್ಲಿ ಶುರುವಾಗಿತ್ತು. ನಮ್ಮಪ್ಪನಾಣೆ ನಮ್ಮ ಮನೆಯಲ್ಲಿನ ಜನರಿಗೆ ಅಲ್ಲ … ನಮ್ಮ ಓರಗೆಯವರಿಗೆ !!!
ನಮ್ಮ ಮನೆತನದಲ್ಲಿನ ಮದುವೆಯಾದ ಸದಸ್ಯರುಗಳು ತಾಯ್ತಂದೆಯಾದ ಸರಾಸರಿ ಅವಧಿಯನ್ನು ತೂಗಿ ನೋಡಿದ ಮೇಲಂತೂ ನಮ್ಮ ಸುತ್ತಲೂ ಅನುಮಾನದ ಕಂಗಳೆಂಬ ಸಿಸಿ ಟಿವಿ ಕ್ಯಾಮೆರಾಗಳು ಇನ್ನೂ ಹೆಚ್ಚಾಗಿ ಕೆಲಸ ಮಾಡತೊಡಗಿದ್ದವು. ಪೂಜೆ, ಪುನಸ್ಕಾರ, ಮದುವೆ, ಮುಂಜಿ ಎಂಬೆಲ್ಲ ಕಡೆ ಹೊರಗೆ ಹೋದಾಗ ಚುಚ್ಚುವ ಕಣ್ಣೋಟಗಳಿಂದ ಬೆನ್ನು ನೋವು ಶುರುವಾಗಿತ್ತು. ನೇರವಾಗಿ ಕೇಳಿದ್ದರೆ ನಾನೇ ಹೇಳಿರುತ್ತಿದ್ದೆ “ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ಕೊಡಿ. ನಿಮ್ ಟಿವಿ ಆಫ್ ಮಾಡಿ” ಅಂತ.
ಕೊನೆಗೂ ಒಂದು ದಿನ ಅರ್ಥವಾಯಿತು … ಒಬ್ಬರನ್ನೊಬ್ಬರು ಇಷ್ಟು ಬೇಗ ಅರಿತಿರಾ? ಅಂದ್ರಾ? ಅಲ್ಲಲ್ಲ! ಜೀವನಪರ್ಯಂತ ಒಬ್ಬರನ್ನೊಬ್ಬರು ಅರ್ಥೈಸಿಕೊಂಡರೂ ಸಂಪೂರ್ಣವಾಗಿ ಒಬ್ಬ ಮನುಷ್ಯನನ್ನು ಅರ್ಥೈಸಿಕೊಳ್ಳುವುದು ಅಸಾಧ್ಯ ಅಂತ.
ಎದ್ವಾತದ್ವಾ ಆಯಾಸಗೊಂಡು ಒಂದು ಸಂಜೆ ಕೆಲಸದಿಂದ ಮನೆಗೆ ಹಿಂದಿರುಗಿದೆ. ಲಂಚ್ ಬ್ಯಾಗನ್ನು ಹಿತ್ತಲಿಗೆ ಸಾಗಿಸಿ, ವಾಹನಗಳಿಂದಾದ ಕರಿ ಹೊಗೆಯ ಮುಖವನ್ನು ತಕ್ಕ ಮಟ್ಟಿಗೆ ಉಜ್ಜಿ ತೊಳೆದು, ಶುಭ್ರ ಮೊಗವನ್ನು ಹೆಂಡತಿಗೆ ತೋರುವ ಸಲುವಾಗಿ ನನ್ನ ರೂಮಿಗೆ ಅಡಿಯಿಟ್ಟರೆ ಅಲ್ಲೊಂದು ಆಸ್ಪತ್ರೆಯ ರಿಪೋರ್ಟ್ ಕುಳಿತಿತ್ತು.
ಸಿಹಿ ಸುದ್ದಿ ಬಿತ್ತರಿಸಿತ್ತು ಆ ರಿಪೋರ್ಟು. ಮನೆಗೆ ಅತಿಥಿ ಆಗಮನದ ಸುದ್ದಿ. ಅತಿಥಿ ಎಂದ ಹೇಗೆ ಹೇಳಲಿ ? ತಪ್ಪು … ಮನೆಗೆ ಸದಸ್ಯನೊಬ್ಬ (ಳು) ಬರುವ ಸುದ್ದಿ.
ಆ ಕ್ಷಣದಲ್ಲಿ ಮನದಲ್ಲಿ ಏನೇನು ಮೂಡಿ ಬರುತ್ತದೆ ಎಂದು ನೆನಪಿಸಿಕೊಂಡರೆ ’ಮನವೇ ನಿನ್ನಷ್ಟು ವೇಗಿ ಇನ್ನೊಂದಿಲ್ಲ’ ಎನಿಸುವುದು ಸಹಜ !
ಈ ಹೊಸ ಜೀವಿಯನ್ನು ಸಾಕುವಷ್ಟು ಕೈಲಿ (ಜೇಬಲಿ) ಶಕ್ತಿ ಇದೆಯೇ ? ಹುಟ್ಟೋ ಕಂದ ಹೇಗಿರುತ್ತೆ? ಕೈಕಾಲುಗಳು, ಕಿವಿ ಕಣ್ಣುಗಳು ಯಾವುದೂ ಊನವಾಗಿರೋದಿಲ್ಲ ಅಲ್ಲವೇ? ನಾನೇನು ತಪ್ಪ ಮಾಡಿದ್ದರೂ ಹುಟ್ಟೋ ಕಂದನ ಅಂಗಾಂಗಗಳ ಮೇಲೆ ಅದರ ಪ್ರಭಾವ ಬೀರದಿರಲಿ ಎಂದು ಪ್ರಾರ್ಥಿಸಿಕೊಂಡೆ.

ಮಗು ಗಂಡೋ? ಹೆಣ್ಣೋ? ಯಾವುದಾದರೇನು ಆರೋಗ್ಯ ಹಾಕಿಕೊಂಡು ಹುಟ್ಟಿದರೆ ಸಾಕು. ಕೂಸು ನನ್ನಂತೆಯೇ ಬಣ್ಣ ಹೊಂದಿದರೆ? ಕಪ್ಪೇನು ಬಿಳುಪೇನು?
ಮಗುವನ್ನು ನೋಡಲು ಇನ್ನೂ ಎಷ್ಟು ದಿನ ಕಾಯಬೇಕು? ದೇಹದಲ್ಲಾಗೋ ಬದಲಾವಣೆಗಳಿಗೆ ತಕ್ಕಂತೆ ಹೆಣ್ಣಿನ ಮನಸ್ಸಿನಲ್ಲಿ ಕಿರಿ ಕಿರಿಯೂ ಹೆಚ್ಚುತ್ತಂತೆ. ನನ್ ಹೆಂಡತೀನೂ ಕಿರಿ ಕಿರಿ ಮಾಡ್ತಾಳಾ? ನನಗೆ ತಾಳ್ಮೆ ಕೊಡಪ್ಪ ದೇವಾ?
“ಏನು? ಹಂಗೇ ನಿಂತುಬಿಟ್ರಲ್ಲಾ? ರಿಪೋರ್ಟ್ ಅರ್ಥಾ ಆಯ್ತಾ? ಇಲ್ವಾ?” ಎಂದು ಪತ್ನಿ ಕೇಳಿದ ಮೇಲೇ ಪುನಹ ಈ ಲೋಕಕ್ಕೆ ಬಂದಿದ್ದು. ಬಕೀಟಿನ ನೀರನ್ನು ಸುರಿಯುವಂತೆ ನನ್ನೆಲ್ಲ ಅನಿಸಿಕೆಗಳನ್ನು ಅವಳ ಮುಂದೆ ಸುರಿವ ಮುನ್ನ ಮೊದಲು ಸಂತಸ ವ್ಯಕ್ತಪಡಿಸಿದೆ. ನನ್ನ ಆತಂಕಗಳಿಗೆ ಪಕ ಪಕ ನಕ್ಕುಬಿಡುವುದೇ?
ನನಗೆ ಮೊದಲಿಂದಲೂ ಒಂದು ವಿಚಾರ ಗೊತ್ತಿತ್ತು. ಹೊಟ್ಟೆಯಲ್ಲಿನ ಕಂದನ ಜೊತೆ ಸುಮ್ಮನೆ ಮಾತಾಡುತ್ತಿರಬೇಕು. ಹಾಡಾಗಲಿ, ಶ್ಲೋಕಗಳಾಗಲಿ ಏನೋ ಒಂದು ಒಟ್ಟು ಮಗುವಿನ ಕಿವಿಗೆ ಬೀಳಿಸುತ್ತಿರಬೇಕು ಅನ್ನೋ ವಿಚಾರ. ಅದರಂತೆಯೇ ಪುತ್ತೂರು ನರಸಿಂಹ ನಾಯಕರ ’ದಾಸನಾಗು ವಿಶೇಷನಾಗು’ ಕ್ಯಾಸೆಟ್ ಎಷ್ಟು ಬಾರಿ ಓಡುತ್ತಿತ್ತೋ ಲೆಕ್ಕವೇ ಇಲ್ಲ !
ಭಾರತೀಯ ಐ.ಟಿ. ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಸಂಜೆ ವಾಕಿಂಗ್’ಗೆ ಪುರುಸೊತ್ತೆಲ್ಲಿ? ಮನೆಯ ಜನರಲ್ಲಿ ಯಾರು ಬಿಡುವಿದ್ದಾರೋ ಅವರೊಂದಿಗೇ ನನ್ನಾಕೆಯ ಸಂಜೆ ವಾಕಿಂಗು, ದೇವಸ್ಥಾನ, ಪಾನಿಪುರಿ ಸೇವನೆ ಇತ್ಯಾದಿ ಕೆಲಸಗಳೂ ನೆಡೆಯುತ್ತಿತ್ತು.
ಆ ದಿನ ಬಂದೇ ಬಿಟ್ಟಿತು. ಸಂಜೆ ಎಂಟಕ್ಕೆ ಅತ್ತೆ ಮನೆಗೆ ಬಂದವನು ಏನೋ ಒಂದು ಹೊಟ್ಟೆಗೆ ಹಾಕಿಕೊಂಡು ಹತ್ತು ಘಂಟೆಗೆ ಮೈಯ ನರ್ಸಿಂಗ್ ಹೋಮ್’ಗೆ ದಾಖಲಾಯಿತಿ ಆಯ್ತು. ನೀರಿನ ಕಣಗಳಾದ ಹೈಡ್ರೋಜನ್ ಮತ್ತು ಆಕ್ಸಿಜನ್ ಎರಡೂ ಬೇರೆ ಬೇರೆಯಾಗುವ ಸಮಯವೂ ಬಂತು. ವಾಟರ್ ಬ್ರೇಕ್ ಆಯ್ತು ಅಂತ ಹೇಳಿದೆ ಅಷ್ಟೇ ಕಣ್ರೀ!
ರಾತ್ರಿ ಹನ್ನೆರಡು ದಾಟಿದ ಆ ಸಮಯದಲ್ಲಿ, ನರ್ಸಮ್ಮಗಳು ಮಾತ್ರ ಇರೋ ಹೊತ್ತಿನಲ್ಲಿ ನೋವು ಶುರುವಾಗಿತ್ತು. ವೈದ್ಯರಿಗೆ ಕರೆ ಹೋಯ್ತು. ನನ್ನಾಕೆಯ ಕಿರುಚಾಟದ ಆ ಹೊತ್ತಲಿ ನನಗೋ ಭಯಂಕರ ತಳಮಳ. ಏನೂ ಹೆಚ್ಚು ಕಮ್ಮಿಯಾಗದಿರಲಿ … ಇಬ್ಬರೂ ಚೆನ್ನಾಗಿರಲಿ … ಏನೇನೋ ಕೆಟ್ಟ ಅನಿಸಿಕೆಗಳು … ನಾಂದಿ ಸಿನಿಮಾದ ಜಯಂತಿ ಯಾಕೆ ಆಗಲೇ ನೆನಪಿಗೆ ಬರುತ್ತಿತ್ತೋ ನಾ ಕಾಣೆ !
ಗುರುವಾರ ಶುಭ ಹಗಲು ನಾಲ್ಕು ಘಂಟೆ ಎರಡು ನಿಮಿಷಕ್ಕೆ ಕೂಸು ಅಳುವ ದನಿ ಕೇಳಿತ್ತು … ಮನೆಯವಳ ಗಲಾಟೆ ನಿಂತಿತ್ತು … ಸದ್ದು ಟ್ರ್ಯಾನ್ಫರ್ ಆಗಿತ್ತು ಅನ್ನಿಸುತ್ತೆ ! ನೆಮ್ಮದಿಯಾಗಿ ಕೋಟೆಯೊಳಗಿದ್ದೆ. ನಿತ್ಯ ಹೋರಾಟದ ಕೂಪಕ್ಕೇಕೆ ತಂದಿರೋ ಅಂತ ನನ್ನ ಮಗನ ಅಳು … ಏನ್ ಮಾಡೋಕ್ಕೆ ಆಗುತ್ತೆ ಸಾರ್, ಬನ್ನಿ ಬನ್ನಿ ಅಂತ ಸ್ವಾಗತಿಸಿದೆವು …. ಮರೆತಿದ್ದೆ, ಗಂಡು ಮಗು ಅಂತ ಹೇಳಲೇ ಇಲ್ಲ ಅಲ್ಲವೇ?
ಮಗನನ್ನು ಮೊದಲ ಬಾರಿಗೆ ಕಂಡೆ … ಎಷ್ಟು ಎತ್ತರ, ಗಾತ್ರ ಇದ್ದನೋ ನನಗೆ ಗಮನವಿಲ್ಲ. ಎಲ್ಲ ಅಂಗಾಂಗಗಳು ಎಲ್ಲಿರಬೇಕೋ ಅಲ್ಲೇ ಇವೆಯೇ ಎಂದೇ ನೋಡಿದೆ. ಸುರುಟುಗಟ್ಟಿದ್ದ ಚರ್ಮವನ್ನು ಕಂಡಾಗ ಅನ್ನಿಸಿತು ’ಇದಕ್ಕೇ ಇರಬೇಕು ಪುಟ್ಟಮಕ್ಕಳು ಹಿರಿಯರೂ ಒಂದೇ ರೀತಿ’ ಅಂತ. ಯಾರ ಮುಂದಾದರೂ ಹೇಳಿದ್ದರೆ ’ತಂದೆಯಾದ ಖುಷಿಯಲ್ಲಿ ಒಮ್ಮೊಮ್ಮೆ ಹೀಗಾಗುತ್ತೆ, ಸಮಾಧಾನ ಮಾಡಿಕೊಳ್ಳಿ’ ಅನ್ನಬಹುದು ಅಂತ ಸುಮ್ಮನಾದೆ.
ಅತೀ ಹತ್ತಿರ ಮನೆ ಜನರ ಆಗಮನದ ನಂತರ ಪರ ಊರಲ್ಲಿದ್ದ ತಂಗಿಗೆ ಕರೆ ಮಾಡಿ ತಿಳಿಸಿದೆ. “ಮಗರಾಯ ಏನ್ ಬಣ್ಣ ಇದ್ದಾನೋ?” ಅಂದ್ಲು ! ನಾನು “ಬೆಳ್ಳಗಿದ್ದಾನೆ ಕಣೇ” ಅಂದೆ ಸಂತಸದಿಂದ .. ಅದಕ್ಕವಳು “ನಿಜವಾಗ್ಲೂ ? ಸದ್ಯ ಈಗ ನನಗೆ ನೆಮ್ಮದಿಯಾಯ್ತು” ಅನ್ನೋದೇ? ಹೋಗ್ಲಿ ಬಿಡಿ … ಅವಳಿಗೂ ನನ್ ಕಾಲೆಳೆಯುವುದಕ್ಕೆ ಒಂದು ಕಾರಣ ಸಿಕ್ಕಿತ್ತು !!
ಶುಭ್ರಗೊಳಿಸಲ್ಪಟ್ಟ ಮಗ ಎತ್ತಿಕೊಳ್ಳಲು ಯೋಗ್ಯನಾಗಿದ್ದ … ಆದರೆ ನಾನು ಎತ್ತಿಕೊಳ್ಳಲಿಲ್ಲ. ನನಗೆ ಭಯವೋ ಭಯ. ಹೇಗೋ ಎತ್ತಿಕೊಂಡು ಏನೋ ಆದರೆ ಗತಿ ಏನು? ಗಂಡಾಗಿದ್ದು ನನಗೆ ಹಿಡಿಸಲಿಲ್ಲವೇನೋ ಎಂಬ ಅಳುಕು ನನ್ನಾಕೆಗೆ. ಅವಳ ಕಿರಿ ಕಿರಿ ಅರ್ಥವಾಗಿ ಮುಂದೆ ಮೂರೇ ದಿನಗಳಲ್ಲಿ ಮೊದಲ ಬಾರಿಗೆ ಮಗನನ್ನು ಎತ್ತಿಕೊಂಡೇ ಬಿಟ್ಟೆ ! ಅಯ್ಯೋ ಪಾಪಿ ಅಂದ್ರಾ? ಏನೇ ಹೇಳಿ ನನಗೆ ಭಯ ಕಣ್ರೀ !
ಮೊದ ಮೊದಲಿಗೆ ಮಗ ನನ್ನ ಬಳಿ ಬರುವುದಿಲ್ಲ ಎಂಬ ಅಳಲು … ನನ್ನದೂ ತಪ್ಪಿದೆ ಬಿಡಿ. ಆರು ತಿಂಗಳ ಡೈಪರ್’ಧಾರಿ ಕಂದನನ್ನು ಒಮ್ಮೆ ಎತ್ತಿಕೊಂಡಿದ್ದೆ. ಬೇಜಾನ್ ಅಳ್ತಿದ್ದ. ಎತ್ತಿಕೊಂಡೆ ಸಾಮಾಧಾನ ಮಾಡ್ತಿದ್ದೆ, ಹೊರಗೆ ಓಡಾಡಿಸ್ತಿದ್ದೆ, ಸೂರ್ಯನನ್ನೇ ತೋರಿಸಿ ಚಂದ್ರ ಎಂದಿದ್ದೆ ! ಏನು ಮಾಡಿದರೂ ಸುಮ್ಮನಾಗಲಿಲ್ಲ !! ಅವನ ಅಮ್ಮನ ಕೈಗೆ ರವಾನಿಸಿದೆ ಮೇಲೆ ಬೆಚ್ಚಿಬಿದ್ದೆ. ನನ್ನ ಬಲಗೈನ ಬಂಗಾರದ ಬ್ರೇಸ್ಲೆಟ್ ಕಂದನ ತೊಡೆಗೆ ಒತ್ತಿ ಬರೆ ಮೂಡಿತ್ತು. ನಮ್ಮಮ್ಮನಿಂದ ಬೈಗುಳವೋ ಬೈಗುಳ !!!
ಆಟಪಾಟ, ಅಳು-ನಗು, ಶಾಲೆ-ಓದು ಎಂದೆಲ್ಲ ಅಪ್ಪನಾಗಿ ಅನುಭವಿಸಿದ ನಾನು, ಇಂದು ಅವನಿಂದ ಕಲಿಯುವ ಸ್ನೇಹಿತನಾಗಿದ್ದೇನೆ, ಮಗನಾಗಿದ್ದೇನೆ.
ಇಂದಿಗೂ ನಾ ಹೇಳುವ ಕಥೆ ಕೇಳುವುದಕ್ಕೆ ಖುಷಿ ಈ ಹದಿನಾರರ ಪೋರನಿಗೆ !!!






ಶ್ರೀನಾಥ ಭಲ್ಲೆ ಜಿ, ತುಂಬ ಆಪ್ತವಾದ ಬರಹ, ತಂದೆ ಮಗುವಿನ ಸಂಬಂಧ,ಆತಂಕ, ಮನೆಯವರೊಂದಿಗೆ ಒಡನಾಟಗಳು, ಅನಿಸಿಕೆಗಳು ಸುಂದರವಾಗಿ ಮೂಡಿವೆ, ವಂದನೆಗಳು ಸರ್.
ಅನಂತ ಧನ್ಯವಾದಗಳು ಲಕ್ಷ್ಮೀಕಾಂತರೇ 🙂
What a FATHERS DAY ARTICLE! Beats any hallmark card.
Very v good
Thank you so much Uma’avare ….