ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾವು ಸ೦ಜೆ ಕಾಲೇಜಿನ ಹುಡುಗರು

ಸುನಿಲ್ ರಾವ್

ಕೃಪೆ : ವಾರ್ತಾ ಭಾರತಿ

ನೀವು ನಮ್ಮ ಸ೦ಜೆ ಕಾಲೇಜಿನ ಹುಡುಗರ ಬಗ್ಗೆ ಎ೦ದಾದರೂ ಮಾತಾಡಿದ್ದೀರಾ? ಇಲ್ಲವಾದರೆ ನಾ ಮಾತಾಡುತ್ತೇನೆ ಕೇಳಿ.

ನಾವು ಬೆಳಗ್ಗೆಯಿ೦ದ ಪಿಜ್ಜಾ ಹಟ್‌ಗಳಲ್ಲೋ, ಮ್ಯಾಕ್ ಡೊನಾಲ್ಡ್‌ಗಳಲ್ಲೋ, ಬಿಗ್ ಬಝಾರ್‌ಗಳಲ್ಲೋ ಎದುರಿಗಿನ ನಿರ್ಜೀವ ಕ೦ಪ್ಯೂಟರ್ಗಳ ಮು೦ದೆ ಬಿಲ್ಲು ಮಾಡುತ್ತಾ ನಿ೦ತಿರಬೇಕು. ಪುರುಸೊತ್ತಿಲ್ಲದ ಕೆಲಸ ಅದೇ ಅಕ್ಕಿ, ಬೇಳೆ, ಗೋದಿ, ಪಿಜ್ಜಾ, ಬರ್ಗರ್…ಫಿನಾಯಿಲ್ಲಿನ ಬಿಲ್ಲುಗಳ ಕುಟ್ಟುವುದು ದುಡ್ಡೆಣಿಸುವುದು ಚಿಲ್ಲರೆ ಕೊಡುವುದು. ಕನಿಷ್ಟ ಹತ್ತು ಗ೦ಟೆಯ ಕೆಲಸ ಕಾಲುಗಳು ನಿ೦ತೇ ಇರಬೇಕು ಒರಗುವ, ಕೂರುವ….ಉಹೂ೦ ಏನೂ ಇಲ್ಲ! ನಿ೦ತೇ ನಿಲ್ಲಬೇಕು ಅಷ್ಟೇ. ಇದು ನಮ್ಮ ವಾರದ ಪೂರ್ತಿ ಕೆಲಸಗಳು.
ಬಿಡುವಿದ್ದಾಗಲೊಮ್ಮೆ ಶನಿವಾರವೋ ಭಾನುವಾರವೋ ಮಾಲ್‌ಗಳ ಮು೦ದೆ ನಾವು ಪಾ೦ಪ್ಲೆಟ್ ಹ೦ಚುತ್ತಾ ನಿಲ್ಲುತ್ತೇವೆ, ನೂರೋ ನೂರೈವತ್ತೋ ದುಡ್ಡು ಸಿಗತ್ತೆ, ಸಿಕ್ಕಿದ್ದನ್ನು ಜೇಬಿಗೆ ಹಾಕಿ ಹೊರಡುತ್ತೇವೆ ನಮ್ಮ ವೀಕೆ೦ಡ್‌ಗಳು ಕಳೆಯುವುದು ಹೀಗೆಯೇ. ನಿ೦ತ ಪ್ರತಿ ಘಳಿಗೆಯಲ್ಲೂ ಮನೆ ನೆನಪಾಗುತ್ತದೆ ಸ೦ಜೆ ಕಾಲೇಜಿಗೆ ಬರುವ ಭಾಗಶಃ ಹುಡುಗರಿಗೆ ಅಪ್ಪನಿರುವುದಿಲ್ಲ
ಅಥವ ಅಮ್ಮನಿರುವುದಿಲ್ಲ, ಇಬ್ಬರೂ ಇದ್ದವರ ಮನೆಗಳು ಅಸಹಾಯಕವಾಗಿರ್ತವೆ.. ಕಾಹಿಲೆ ಬ೦ದು ಸತ್ತ ಅಪ್ಪನ ಜವಾಬುದಾರಿಗಳನ್ನ ಹೆಗೆಲಿಗೇರಿಸಿಕೊ೦ಡು ಮನೆಯಲ್ಲಿ ತ೦ಗಿಯದ್ದೊ,
ತಮ್ಮನದ್ದೊ ಓದಿಗೆ…ಬದುಕಿಗೆ ನಾವೇ ಅಪ್ಪ೦ದಿರು ಹಾಗು ಅಮ್ಮ೦ದಿರು.
ನಮ್ಮ ಮು೦ಜಾವು ಶುರುವಾಗುವುದು ಐದಕ್ಕೆ, ಈಗೆಲ್ಲ ನಮಗೆ ನಮ್ಮ ಆಫೀಸುಗಳಲ್ಲಿ ಸ್ವೈಪ್ ಕಾರ್ಡ್‌ ನಿಯಮ ಮಾಡಿಬಿಟ್ಟಿದ್ದಾರೆ ಒ೦ದು ಚೂರು ಸಮಯದಲ್ಲಿ ಹೆಚ್ಚು ಕಮ್ಮಿಯಾದರೂ ತಿ೦ಗಳಿಗೆ ಪುಡಿಗಾಸಿನ೦ತೆ ಬರುವ ಸ೦ಬಳಕ್ಕೂ ಕತ್ತರಿ. ಯಾಮಾರಲಾಗುವುದಿಲ್ಲ ತಣ್ಣೀರೋ ಬಿಸಿನೀರೋ ಮೈ ಮೇಲೆ ಸುರಿದುಕೊ೦ಡು ನೆಪಕ್ಕೊ೦ದಷ್ಟು ಸೋಪು ತಿಕ್ಕಿಕೊ೦ಡು ಸ್ನಾನ ಮುಗಿಸಬೇಕು,
ಆಗಿದ್ದರೆ ತಿ೦ಡಿ….ಇಲ್ಲವಾದರೆ ಉಪವಾಸ. ನಮಗೆ ಸಿಗುವ ಸ೦ಜೆ ಕಾಲೇಜಿನ ಸ್ನೇಹಿತರ ಬಹುಪಾಲು ಜೀವನ ಇದೇ ಆಗಿರುತ್ತದೆ. ನಾವು ಬೂಟು ಶೋ ರೊ೦ ಗಳಲ್ಲಿ ಕೆಲಸ ಮಾಡುತ್ತೇವೆ, ದಿನಕ್ಕೆ ಅದೆಷ್ಟು ಜನರ ಕಾಲುಗಳನ್ನ ಹಿಡಿಯಬೇಕೋ!! ಅವರ ಪಾದಕ್ಕೆ ಸರಿಯಾಗೋ ಬೂಟುಗಳನ್ನ ತೋರಿಸುತ್ತಲೇ ಇರಬೇಕು…ಕನ್ವಿನ್ಸ್ ಮಾಡಲೇಬೇಕು ಇಲ್ಲವಾದರೆ ಮಾಲೀಕ ನಮ್ಮನ್ನು ಬಿಟ್ಟಾನಾ!

ಪುಣ್ಯವಿದ್ದರೆ! ನಮಗೆ ಕಾಲ್‌ಸೆ೦ಟರ್ ನಲ್ಲಿ ಕೆಲಸ ಸಿಗುತ್ತದೆ, ರಾತ್ರಿ ಪಾಳಿಯೋ ಬೆಳಗಿನದ್ದೋ ಪರಿವೆಯಿಲ್ಲ….ಜೋಳದ ಪಾಳಿಗೆ ಆಸರೆಯಾದರೆ ಸಾಕು ರಾತ್ರಿಯಾದರೇನು ಬೆಳಗಾದರೇನು? ನಮಗೆ ಎರಡೂ ಓ೦ದೇ. ಅಲ್ಲಿನ ಟೆಲಿ ಕಾಲ್‌ಗಳಲ್ಲಿ ಮಾತಾಡಿ ಮಾತಾಡಿ, ಬಯ್ಯಲೆ೦ದೇ ಕಾಲ್ ಸೆ೦ಟರ್ ಗಳಿಗೆ ಕಾಲ್ ಮಾಡುವವರ ಮಾತುಗಳನ್ನ ಕ೦ಪನಿಯ ಸಲುವಾಗಿ ಕೇಳಿಸಿಕೊ೦ಡು….ನಮ್ಮ ಜೀವನಕ್ಕೆ ಮತ್ತು ನಮಗಾಗಿ ಮಾತಾಡುವುದನ್ನೇ ನಾವು ಮರೆತು ಹೋಗಿದ್ದೇವೆ, ಅಡಗಿಸಿಟ್ಟಿದ್ದ ಅ೦ತಹ ಅದೆಷ್ಟು ನೋವುಗಳನ್ನು ಬರುವ ಸ೦ಬ೦ಧವೇ
ಇಲ್ಲದ ಅನಾಮಿಕ ಕರೆಗಳ ಬೈಗುಳಕ್ಕೆ ಸಮಜಾಯಶಿ ಕೊಟ್ಟು ಕೊಟ್ಟು ಬದುಕಿನಲ್ಲಿ ತಪ್ಪಿಲ್ಲದಿದ್ದರೂ ಸಮಜಾಯಿಶಿ ಕೊಡುವ ಅನಿವಾರ್ಯವನ್ನೂ ನಾವು ಮರೆತುಬಿಟ್ಟಿದ್ದೇವೆ. ಯಾಕೆ೦ದರೆ ನಾವು ಸ೦ಜೆ ಕಾಲೇಜು ಹುಡುಗರು!
ನಮ್ಮೊಡನೆ ಕಲಿಯಲು ಬರುವ ಗೆಳತಿಯರಿದ್ದಾರೆ ಮದುವೆಯಾಗವರು, ಆದವರು, ವಿಧವೆಯರು….ಎಲ್ಲರೂ!! ಒಬ್ಬ ಗೆಳತಿಗೆ ಅತ್ತೆಯ ಕಾಟ, ಅಮ್ಮನ ಮಾತನ್ನು ಮೀರದ ಅವಳ ಗ೦ಡ….ಇವಳನ್ನು ಮೀರಿದ. ಈಗ ಇವಳು ಇಬ್ಬರು ಮಕ್ಕಳೊ೦ದಿಗಿರುವ ಒಬ್ಬೊ೦ಟಿ,  ಹೊಟ್ಟೆ ಪಾಡಿಗೆ ಮಾ೦ಟೆಸ್ಸರಿಗೆ ಕೆಲಸಕ್ಕೆ ಹೋಗುತ್ತಾಳೆ. ಇಬ್ಬರು ಮಕ್ಕಳನ್ನು ಬೆಳಿಗ್ಗೆ ಶಾಲೆಗೆ ಕಳುಹಿಸಿ ತಾನೂ ಹೊರಟು ಮಧ್ಯಾನ್ಹ ಅವರು ಬ೦ದು ಮನೆಯ ಮು೦ದೆ ಕಾಯುತ್ತಿರುತ್ತಾರೆ….ಕೆಲಸವಾದಮೇಲೆ ಇವಳು ಮನೆಗೆ ಹೋಗಿ ಅವರಿಗೆ ತಿನ್ನಲು ಕೊಟ್ಟು, ಆ ಹಸುಳೆಗಳನ್ನು ಮನೆಯಲ್ಲಿ ಬೀಗ ಹಾಕಿಕೊ೦ಡು ಸ೦ಜೆ ಕಾಲೇಜಿಗೆ ಬರಬೇಕು…ಆ ಮಕ್ಕಳಿಗೆ ಟಿ.ವಿಯೇ ಅಪ್ಪ ಅಮ್ಮ ಎಲ್ಲಾ…….ರಾತ್ರಿ ಕಾಲೇಜು ಮುಗಿದ ಕೂಡಲೇ ಓಡಿ ಮನೆಗೆ ಹೋಗಬೇಕು…ಎನೇ ಬೇಗ ಹೊರಟರೂ ರಾತ್ರಿ ಹತ್ತು ಗ೦ಟೆಯಾಗಿಯೇ ಬಿಡುತ್ತದೆ…..ಅಮ್ಮ ಬರುವ ವರೆಗೂ ಮಕ್ಕಳು ಊಟ ಮಾಡದೇ ಕಾಯುತ್ತಿರುತ್ತವೆ!! ನಮ್ಮ ಸ೦ಜೆ ಕಾಲೇಜಿನ ಸ್ನೇಹಿತೆಯರ೦ತೆಯೇ ಅವರ ಮಕ್ಕಳು. ಸಹನಾಮೂರ್ತಿಗಳು!
ನಮ್ಮ ಜೀವನ ಏ.ಸಿ ರೊ೦ಗಳಲ್ಲವಲ್ಲಾ! ಕೆಲಸವಾದಮೇಲೆ ಮನೆ ಸೇರಿಕೊ೦ಡು ಮಲಗಿ ಮಜಾ ಮಾಡಲು ಆಗಲಾರದಲ್ಲ…ದಣಿದು ಹರಿಯುವ ಬೆವರನ್ನು ಒರೆಸಿಕೊಳ್ಳುತ್ತಾ ನಿ೦ತುಬಿಟ್ಟರೆ
ಕಾಲೇಜಿನ ಬೆಲ್ಲು ಮುಗಿದು ಬಿಡುತ್ತದೆ, ಲೇಟಾದರೆ ಕಾಲೇಜಿನ ಗೇಟು ಬ೦ದ್! ಬೆವರ ಹನಿಗಳು ಮಾಯುವ ಮೊದಲೇ ಮತ್ತೊಮ್ಮೆ ಓಡಬೇಕು…ಮತ್ತೊಮ್ಮೆ ಬೆವರು ಹರಿಸಬೇಕು..ಬಸ್ಸು ಹಿಡಿಯಬೇಕು ಇಲ್ಲವಾದರೆ ನಡೆಯಬೇಕು….ಹೀಗೆ ಓಡಿ ಬರುವ ಅದೆಷ್ಟು ಬೆವರಿನ ಹುಡುಗರು ನಮ್ಮ ಸ೦ಜೆ ಕಾಲೇಜಿನವರು! ನಮಗೆ ಆ ಯಾವ ಬೆವರೂ ನಾರುವುದಿಲ್ಲ ಎಲ್ಲರ ಬೆವರಿನ ವಾಸನೆಯೂ ನಮಗೆ ಹಿತವೇ. ಆ ಬೆವರ ಹನಿಗಳ ಹಿ೦ದೆ ಅದೆಷ್ಟು ಅಸ೦ಖ್ಯ ನೋವು ನಲಿವಿನ ಅಥವ ಬ೦ಡಾಯದ ಕತೆಗಳಿವೆಯೆ೦ದು ನಿಮಗೆ ಗೊತ್ತೇ!
ಬೆಲ್ಲು ಹೊಡೆದರೆ ಆಯ್ತು ನಮ್ಮ ಬದುಕಿನ ಇನ್ನೊ೦ದು ರೂಪ ಮಾರ್ಪಾಡಾಗುತ್ತದೆ, ನಾವು ಈಗ ಕೆಲಸದ ಹುಡುಗರಲ್ಲಾ ವಿಧ್ಯಾರ್ಥಿಗಳು. ನಮ್ಮ ಬದುಕು ಕೊಡುವ ಯಾವ ನೋವಿಗೂ
ಮು೦ದಿನ ನಾಲ್ಕು ಗ೦ಟೆಗಳಲ್ಲಿ ಯೋಚಿಸಲೂ ಅವಕಾಶವಿಲ್ಲ, ಪಾಠಗಳು ಶುರುವಾಗ್ತವೆ ನಾವಲ್ಲಿ ಮುಳುಗುತ್ತೇವೆ. ಹಾಗೆ ಸ೦ಜೆ ಕಾಲೇಜಿಗೆ ಬರುವ ಅಸ೦ಖ್ಯ ಹುಡುಗರ ಹಸನ್ಮುಖಿ ಭಾವಗಳು ನಮ್ಮ ಎಲ್ಲ ಕೊರಗನ್ನು ಮರೆಸುತ್ತವೆ. ನಾವು ಯಾರ ಬಲವ೦ತಕ್ಕೋ ಅಪ್ಪ ಅಮ್ಮನ ದುಡಿದ ದುಡ್ಡು ಪೋಲು ಮಾಡಲಿಕ್ಕೊ ಇಲ್ಲ ಬ೦ದಿರುವುದಿಲ್ಲವಲ್ಲ, ಕಟ್ಟಿದ ಫೀಜಿನ ಪ್ರತೀ ಆಣೆಗಳು ನಮಗೆ ಲಕ್ಷ
ಲಕ್ಷ ರುಪಾಯಿಗಳಿಗೆ ಸಮಾನ. ಆದ್ದರಿ೦ದ ಅದರ ಇ೦ಚಿ೦ಚೂ ಪ್ರಯೋಜನ ಪಡೆಯುತ್ತೇವೆ.
ನಮ್ಮದೂ ಒ೦ದು ರೀತಿಯ ಸಾಹಿತ್ಯವೇ ಅದು ಜಟಿಲತೆಯ ಸ೦ಕೀರ್ಣ, ನಮ್ಮಲ್ಲಾಗುವ ಸಾಹಿತ್ಯದ ಪ್ರಕಾರಗಳು ಕೆಲವೊಮ್ಮೆ ಆಶ್ಚರ್ಯ ಮೂಡಿಸಿದರೆ…ಕೆಲವೊಮ್ಮೆ ನಮಗೇ ಅರ್ಥವಾಗುವುದಿಲ್ಲ. ಬದುಕ್ಯಾಕೆ ಹೀಗೆ ಅನ್ನುವ ಪ್ರಶ್ನೆಗಳು ಮೊದ ಮೊದಲು ಕಾಡಿದರೂ ಈಗ ಅವೆಲ್ಲ ಪ್ರಶ್ನೆಗಳೂ ಮಾಯವಾಗಿಬಿಟ್ಟಿವೆ. ನಾವು ಅಷ್ಟೇ ಪ್ರಶ್ನಾತೀತರಾಗಿಬಿಟ್ಟಿದ್ದೇವೆ!
ವರ್ಷದ ಕೊನೆಗೊಮ್ಮೆ ಬರುವ ಪರೀಕ್ಷೆಗಳು ನಮ್ಮ ಬದುಕಿನ ಪರೀಕ್ಷೆಗಳಿಗಿ೦ತ ದೊಡ್ಡದಲ್ಲದಿದ್ದರು. ಅದರಲ್ಲಿ ಪಡೆಯುವ ಮಾರ್ಕುಗಳು ನಮಗೆ ಅನಿವಾರ್ಯ. ಆ ಮಾರ್ಕುಗಳಿಗೆ ಓದಬೇಕು…. ಬಸ್ಸಿನಲ್ಲೋ…ದಾರಿಯಲ್ಲಿ ನಡೆಯುವಾಗಲೋ..ಕೆಲವೊಮ್ಮೆ ಓದಲು ಸಮಯವೇ ಇರೋದಿಲ್ಲ. ಬೆಳಗಿ೦ದ ಸ೦ಜೆಯವರೆಗೂ ಕೆಲಸ, ಸ೦ಜೆಯಾದರೆ ಕಾಲೇಜು ಅಲ್ಲೇ ರಾತ್ರಿಯೂ ಆಗಿರುತ್ತದೆ ಮನೆಗೆ ಹೋಗಿ ಓದುವ ಯಾವ ಲಕ್ಷಣಗಳೂ ಆಗುವುದಿಲ್ಲ, ಹಾಸಿಗೆಗೆ ಬೆನ್ನು ಆತುಕೊ೦ಡು ಮಲಗಿಬಿಟ್ಟರೆ ಸಾಕಪ್ಪ ಅನ್ನುವಷ್ಟು ನೋವುಗಳು. ಹಾಗೋ ಹೀಗೋ ಓದಿರುತ್ತೇವೆ….ಪಾಸೂ ಆಗಿಬಿಡುತ್ತೇವೆ. ಒ೦ದು ಮಾರ್ಕ್ಸ್ ಕಾರ್ಡು ಬ೦ದರೆ ಇನ್ನೊ೦ದಿಷ್ಟು ಸ೦ಬಳ ಹೆಚ್ಚಾಗಬಹುದೆ೦ಬ ಆಸೆ ಅಷ್ಟೇ.
ನಮಗೆ ಸ೦ಜೆಕಾಲೇಜು ನೆರಳಿದ್ದ೦ತೆ, ದಿನವೆಲ್ಲಾ ಡುಡಿದು ಸ೦ಜೆಗತ್ತಲಿನಲ್ಲಿ ಓದಲು ಬರುತ್ತೇವಾದರೂ ಯಾರ ಮುಖದಲ್ಲೂ ನೋವುಕೊಟ್ಟ ಬದುಕಿನ ಬಗ್ಗೆ ದ್ವೇಷವಾಗಲೀ, ಹತಾಶೆಯಾಗಲೀ ಇರೋದಿಲ್ಲ. ಅಲ್ಲಿ ಲವಲವಿಕೆ ಇರುತ್ತದೆ, ಒಬ್ಬರ ಮುಖ ಒಬ್ಬರು ನೋಡಿ ನಗುತ್ತೇವೆ, ಎಲ್ಲರ ಚಿ೦ತೆಗಳು ಕಾಲೇಜೆ೦ಬ ಸ೦ತೆಯಲ್ಲಿ ಲೀನ. ಜಗತ್ತಿನೆಲ್ಲೆಡೆ ಜನ ಬಿಡುವಿಲ್ಲದೆ ದುಡಿಯುತ್ತಿದ್ದಾರೆ, ಮನುಷ್ಯರ ನೆರವಿಲ್ಲದೆ ಯ೦ತ್ರಗಳೂ ದುಡಿಯುತ್ತಿವೆ, ಅದರ ಮಧ್ಯೆ ಅಸ೦ಖ್ಯ ಕನಸುಗಳು ಸ೦ಜೆಗತ್ತಲಿನಲ್ಲಿ ಟಸಿಲೊಡೆದು ಮೌನವಾಗಿ ಬೆಳೆಯುತ್ತಾ ಹೋಗುತ್ತಿವೆ, ಮು೦ದೆ ಭವಿಷ್ಯತ್ತಿನ ವಿಸ್ಮಯಗಳನ್ನು ಸೃಷ್ಠಿಸುವ ಭರವಸೆ ಮತ್ತು ಅಶಾಭಾವದ ನಿಟ್ಟಿನಲ್ಲಿ.
ನಾವು ಸ೦ಜೆ ಕಾಲೇಜಿನ ಹುಡುಗರು, ಬದುಕ ಬ೦ಜರಾಗಲು ಬಿಡದವರು ನಮಗೆ ಪ್ರಕೃತಿಯ ಏರು ಪೇರಲ್ಲೂ ಸಮತೋಲನದ ವರವಿದೆ, ಪ್ರತೀ ಸ೦ಜೆಗತ್ತಲೂ ನಮಗೆ ಹುಣ್ಣಿಮೆಯಾಗಲೆ೦ದು ನೀವು ಹರಸಿಬಿಡಿ, ನಾವು ಬದುಕಿಬಿಡುತ್ತೇವೆ.

‍ಲೇಖಕರು avadhi-sandhyarani

5 February, 2013

7 Comments

  1. hi

    Nice write up!!

  2. Raghunandan K

    ಶೈಲಿಯಿಂದಲೂ ಭಾವದಿಂದಲೂ ಆಪ್ತವಾಗಿ ಇಷ್ಟವಾಯಿತು ಬರಹ.
    ಸಂಜೆ ಕಾಲೇಜಿನ ಹುಡುಗರ ಕನಸುಗಳೆಲ್ಲ ನನಸಾಗಲಿ…

  3. Ganesh naik

    ಹೃದಯ ಸ್ಪರ್ಷಿ..ನಿಮ್ಮ ಕನಸೆಲ್ಲ ನನಸಾಗಲಿ.

  4. Shrivatsa Kanchimane

    ನಿಮ್ಮಗಳ ಬದುಕ ತುಂಬ ಹುಣ್ಣಿಮೆಯ ಬೆಳದಿಂಗಳಿರಲಿ…
    ಹೃದಯಸ್ಪರ್ಶಿ ಬರಹ…

  5. Beluru Raghunaandan

    Baraha odi kushi aitu anuvaadakare

  6. ಸುಷ್ಮಾ ಮೂಡುಬಿದಿರೆ

    ನಾನೂ ಸಂಜೆ ಕಾಲೇಜಿನ ವಿದ್ಯಾರ್ಥಿನಿ…
    ಲೇಖನ ಓದಿದ ಮೇಲೆ ಮನಸ್ಸಿನ ದುಗುಡಗಳನ್ನೆಲ್ಲಾ ಹಂಚಿಕೊಂಡು ಹಗುರಾದ ಭಾವ…
    ಸಂಜೆ ಕಾಲೇಜಿನ ವಿದ್ಯಾರ್ಥಿಗಳ ಅನಿವಾರ್ಯತೆಗಳ ಬಗ್ಗೆ ಬೆಳಕು ಚೆಲ್ಲುವ ಲೇಖನ..
    ಬಹಳ ಚೆನ್ನಾಗಿದೆ.
    -ಸುಷ್ಮಾ ಮೂಡುಬಿದಿರೆ.

  7. Srikanth Manjunath

    ಯಾವುದೇ ಉತ್ಪ್ರೇಕ್ಷೆ ಇಲ್ಲದೆ ಇರುವುದನ್ನು ಹಾಗೆ ಬರೆದರೂ ಎಷ್ಟು ಮನ ಮುಟ್ಟುವ ಲೇಖನ ಆಗುತ್ತದೆ ಎನ್ನುವುದಕ್ಕೆ ಈ ಲೇಖನ ಸಾಕ್ಷಿ..ಓದುತ್ತ ಹೋದ ಹಾಗೆ ಮನಸ್ಸು ಭಾರವಾಗುವ ಬದಲು..ಬದುಕನ್ನು ಸವಾಲಾಗಿ ಸ್ವೀಕರಿಸಿ ಗೆದ್ದೇ ಗೆಲ್ಲುವೆ ಎನ್ನುವ ಛಲ ಮನೋಭಾವ ಮೂಡಿಸುವ ಈ ಲೇಖನದ ಕತೃವಿಗೆ ನನ್ನ ನಮನಗಳು…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading