ಕ್ರಿಯಾಶೀಲ ರಂಗಮೌನಿ; ಶ್ರೀನಿವಾಸ ತಾವರಗೇರಿ
ರಜನಿ ಗರುಡ
ಎರಡು ತಿಂಗಳ ಹಿಂದೆ ಇರಬೇಕು. ‘ಅವಧಿ’ಯಲ್ಲಿ ಪರಮೇಶ್ವರ ಗುರುಸ್ವಾಮಿ ಒಂದು ಪುಟ್ಟ ಲೇಖನ ಬರೆದಿದ್ದರು. ಶ್ರೀನಿವಾಸ ತಾವರಗೇರಿಯವರ ಬಗ್ಗೆ. ಕಾಡುವ ಫೋಟೋ ಸಹಾ ಇತ್ತು.
ಸುಮಾರಾಗಿ ಎರಡು ದಶಕಗಳ ಹಿಂದೆ ಅವರೊಡನೆ ಒಡನಾಡಿದ ನೆನಪು ಒತ್ತರಿಸಿ ಬಂತು. ಅವರ ನೆನಪನ್ನು ಮತ್ತೊಮ್ಮೆ ಹಸಿಹಸಿಯಾಗಿ ನನ್ನ ಸುತ್ತಲೂ ಹರಡಿಕೊಳ್ಳಲು ಈ ಬರಹ.
95-96ನೇ ಸಾಲಿನಲ್ಲಿ ವಿಜಯಪುರದಲ್ಲಿ ಶ್ರೀ ಬಸವರಾಜ ಹೊಸಮನಿಯವರು ನನ್ನನ್ನು ಮಕ್ಕಳ ನಾಟಕ ಮಾಡಿಸಲು ಕರೆಸಿದ್ದರು. ನನ್ನ ಗಂಡ ಪ್ರಕಾಶ ನನ್ನನ್ನು ಬಿಡಲು ಬಂದಿದ್ದರೆ, ಗೆಳತಿ ಸುನಂದಾ ಗುರವ ನಾಟಕದ ಬ್ಯಾಕ್ ಸ್ಟೇಜ್ ಕೆಲಸಕ್ಕೆ ಜೊತೆಯಲ್ಲಿ ಬಂದಿದ್ದಳು. ನಾಟಕ ನಡೆಯುವಲ್ಲಿ ಬಂದು ಕೂತಿರುತ್ತಿದ್ದ ಸಣ್ಣಗೆ ಉದ್ದನೆಯವರೊಬ್ಬ ಹಿರಿಯರನ್ನು ತೋರಿಸಿ ಪ್ರಕಾಶ “ಆಕ್ಸಿಡೆಂಟ್ ಸಿನೆಮಾ ನೆನಪಿದೆಯಾ? ಅದರಲ್ಲಿ ಇವರು ರಿಟಾಯರ್ಡ್ ಡ್ರೈವರ್ ಆಗಿದ್ದರು, ಇವರು ಶ್ರೀನಿವಾಸ ತಾವರಗೇರಿಯವರು” ಎಂದು ಪರಿಚಯಿಸಿದ.
ಸಿಗರೇಟು ಸೇದಲೇ ಉಸಿರನ್ನು ಹಿಡಿದುಕೊಂಡತಿದ್ದ ಅವರು ಒಂದಾದನಂತರ ಒಂದು ಸಿಗರೇಟು ಸೇದುತ್ತಿದ್ದರು. ವಯಸ್ಸಾಗಿದ್ದರಿಂದ ಅನಾರೋಗ್ಯವೂ ಸೇರಿ ಸವೆದು ಹೋದಂತಿದ್ದರು.
ನಾನಲ್ಲಿರುವವರೆಗೂ ನಾಟಕಕ್ಕೆ ಯಾವುದೇ ಅನಾನುಕೂಲವಾಗದಂತೆ ನನಗೆ ಬೆಂಗಾವಲಾಗಿ ನಿಂತಿದ್ದಲ್ಲದೆ, ರಂಗಭೂಮಿ ನನಗೊದಗಿಸಿದ ಅನೇಕ ಹಿರಿಯ ಮಿತ್ರರಲ್ಲಿ ಬಹಳ ಆತ್ಮೀಯರಾಗಿದ್ದರು.
70ರ ದಶಕನಮ್ಮ ಆಧುನಿಕ ರಂಗಭೂಮಿಯ ಸುವರ್ಣ ಯುಗದ ಕಾಲ. ಕಾರ್ನಾಡ್, ಕಂಬಾರ, ಬಿ.ವಿ. ಕಾರಂತರಂಥಹ ದಿಗ್ಗಜರೆಲ್ಲ ಸೇರಿ ಬೆಂಗಳೂರಿನಲ್ಲಿ ಮಾಡುತ್ತಿದ್ದ ಹೊಸ ಹೊಸ ರಂಗ ಪ್ರಯೋಗಗಳು ವಿಜಯಪುರದಲ್ಲೂ ತಕ್ಷಣ ಪ್ರಯೋಗವಾಗುತ್ತಿತ್ತು. ಪ್ರೀಮಿಯರ್ ಶೋ, ಎರಡನೆಯ ಶೋ ಹೀಗೆ ಬೆಂಗಳೂರಿನಲ್ಲಿ ನಡೆಯುತ್ತಿದ್ದ ನಾಟಕಗಳು ವಿಜಯಪುರದ ಜನರಿಗೆ ತಾಜಾ ನೋಡಲು ಸಿಗುತ್ತಿತ್ತು. ಅಷ್ಟು ವ್ಯವಸ್ಥಿತವಾಗಿ ಅಲ್ಲಿ ಮಾಡಿಸುತ್ತಿದ್ದವರು ಶ್ರೀನಿವಾಸ ತಾವರಗೇರಿಯವರು.
ನಟ, ನಿರ್ದೇಶಕ, ಸಂಘಟಕನಾಗಿ ರಂಗಭೂಮಿಯನ್ನು ಮೈಮೇಲೆಳೆದುಕೊಂಡು ಗಳಸಿದ್ದಕ್ಕಿಂತ ಕಳೆದುಕೊಂಡಿದ್ದೇ ಬಹಳ. ಮರಾಠಿ ಶಾಲೆಯೊಂದರಲ್ಲಿ ಕ್ಲರ್ಕ್ ಕೆಲಸ ಮಾಡುತ್ತಿದ್ದ ಅವರ ಆಸಕ್ತಿ ರಂಗಭೂಮಿ ಮಾತ್ರವಲ್ಲ ಸಿನೆಮಾ, ಸಾಹಿತ್ಯ, ಸಂಗೀತ ಇನ್ನೂ ಹತ್ತು ಹಲವಾರು ಕ್ಷೇತ್ರಗಳು. ಕನ್ನಡ ನಾಟಕಗಳಲ್ಲದೆ ಮರಾಠಿ ನಾಟಕಗಳನ್ನೂ ಮಾಡುತ್ತಿದ್ದರು. ನಾಟಕಕ್ಕೆ ಹೆಣ್ಣು ಮಕ್ಕಳು ಬಾರದ ಕಾಲದಲ್ಲಿ ತಮ್ಮ ಹೆಂಡತಿಯಿಂದಲೆ ಪಾತ್ರವನ್ನು ಮಾಡಿಸಿದರು. ಶಂಕರನಾಗ್ ಮತ್ತು ಅನಂತನಾಗ್ ಅವರಿಗೆ ಆತ್ಮೀಯರಾಗಿದ್ದ ಅವರು ಸಂಕೇತ ಕಲಾವಿದರೊಂದಿಗೆ ಸಿನೆಮಾಗಳಲ್ಲಿ ನಟಿಸಿದ್ದರು.
ಮರಾಠಿ ಮತ್ತು ಕನ್ನಡ ಎರಡೂ ರಂಗಭೂಮಿಯನ್ನು ಸರಿದೂಗಿಸಿದವರು. ಕೆಲವು ಡಾಕ್ಯುಮೆಂಟ್ರಿ ಸಿನೆಮಾಗಳನ್ನೂ ಮಾಡಿದ್ದರು. ಹಿರಿಯರು-ಕಿರಿಯರು ಎನ್ನದೆ ಅಂದಿನ ರಂಗಕರ್ಮಿಗಳಿಗೆಲ್ಲ ಅಗತ್ಯವಾಗಿದ್ದರು.
ವಿಜಯಪುರದ ಖಾರದ ಊಟಕ್ಕೆ ಗಾಬರಿಯಾಗಿದ್ದ ನನ್ನನ್ನು ದಿನವೂ ಹೊಸ ಹೋಟೆಲ್ ಅಥವಾ ಖಾನಾವಳಿಗೆ ಕರೆದುಕೊಂಡು ಹೋಗುತ್ತಿದ್ದರು. ನನಗೆ ಮೊಸರನ್ನ ಮತ್ತು ಹಣ್ಣುಗಳನ್ನು ತಿನ್ನುವುದು ಮಾತ್ರ ಸಾಧ್ಯವಾಗಿತ್ತು. ಅವರ ಹೆಂಡತಿ ಬಾಣಂತಿಯಾಗಿದ್ದ ಮಗಳ ಆರೈಕೆಗೆ ಹೋಗಿದ್ದರು. ಹೀಗೆ ಇಲ್ಲಿ ನೀನು ಅವಸ್ಥೆಪಡಬೇಕಾಗಿರಲಿಲ್ಲವೆಂದು ಪೇಚಾಡಿಕೊಂಡರು. ಚಾಂದ್ಬಾವಡಿಯಲ್ಲಿದ್ದ ಅವರ ದೊಡ್ಡ ಮನೆಗೆ ಕರೆದುಕೊಂಡು ಹೋಗಿದ್ದರು. ನಾನು ಹೋದಾಗ ಅರ್ಧ ಮನೆ ಮಗಳ ಮದುವೆಗೆಂದು ಮಾರಿಯಾಗಿತ್ತು. ಬಾಗಿಲಲ್ಲೆ ನನ್ನಷ್ಟೇ ಎತ್ತರದ ಮುಧೋಳ ನಾಯಿ ಗುರ್ ಎಂದಿತು. “ನಾನು ಈ ತಳಿಯ ನಾಯಿಯ ಮೇಲೆ ಡಾಕ್ಯುಮೆಂಟ್ರಿ ಸಿನೆಮಾ ಮಾಡಿದ್ದೇನೆ“ ಎಂದು ತೋರಿಸಿದರು. ಮನೆ ತುಂಬ ಪುಸ್ತಕಗಳು ಮತ್ತು ಕ್ಯಾಸೆಟ್ ಗಳ ರಾಶಿ ಧೂಳನ್ನು ಹೊದ್ದು ಮಲಗಿದ್ದವು. ಆ ಹಳೆಯ ಮನೆ ಅವರ ಹೆಂಡತಿಯ ದಾರಿಯನ್ನು ಕಾಯುತ್ತಿತ್ತು.
ನಾನು ಅಲ್ಲಿಯ ಮಕ್ಕಳಿಗೆ ಶೇಕ್ಸಪಿಯರ್ ನ “ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್” ನಾಟಕ ಮಾಡಿಸಬೇಕೆಂದುಕೊಂಡೆ. ಎಲ್ಲೂ ಸ್ಕ್ರಿಪ್ಟ್ ಸಿಗಲಿಲ್ಲ. ತಾವರಗೇರಿಯವರೆ ಕೆ. ವಿ. ಸುಬ್ಬಣ್ಣನವರಿಗೆ ಫೋನ್ಮಾಡಿ ಹೆಗ್ಗೋಡಿನಿಂದ ಸ್ಕ್ರಿಪ್ಟ್ ತರಿಸಿದರು. ನಾಟಕಕ್ಕೆ ಕಾಶ್ಟ್ಯೂಮ್ಸ್ ಒಲಿಸಲು ಅಂಗಡಿಗೆ ಕರೆದುಕೊಂಡುಹೋಗಿ ಬಟ್ಟೆ ಕೊಡಿಸಿ ತಾವೇ ಒಬ್ಬ ಟೇಲರ್ನನ್ನು ಕರೆದುಕೊಂಡು ಬಂದು ಮಕ್ಕಳಿಗೆ ಹೊಲಿಸಿ ಕೊಟ್ಟರು. ನನಗೆ ಕತ್ತೆ ಮಾಸ್ಕ್ ಬೇಕಿತ್ತು. ಮಲೆನಾಡಿನವಳಾದ ನಾನು ಚಿತ್ರದಲ್ಲಿ ಬಿಟ್ಟರೆ ನಿಜವಾದ ಕತ್ತೆಯನ್ನು ಹತ್ತಿರದಿಂದ ನೋಡಿರಲಿಲ್ಲ. ತಾವರಗೇರಿಯವರ ಬಳಿ ಕತ್ತೆಯನ್ನು ನೋಡಬೇಕೆಂದೆ. ಸುನಂದ ಮಾಸ್ಕ್ ಮಾಡಬೇಕಾದ್ದರಿಂದ ಅವಳೂ ನೋಡಬೇಕೆಂದಳು.
ರಿಹರ್ಸಲ್ ಮುಗಿದ ಮೇಲೆ ಪ್ರತಿದಿನ ಸರಿರಾತ್ರಿಯವರೆಗೆ ಅವರೊಡನೆ ತಿರುಗುತ್ತಿದ್ದ ನಾವು ಅಂದು ಕತ್ತೆಯನ್ನು ಹುಡುಕಿಕೊಂಡು ಹೋದೆವು. ಒಂದುಬಯಲಲ್ಲಿ ಅನೇಕ ಕತ್ತೆಗಳು ಮೇಯುತ್ತಿದ್ದವು. ನಾನು ಅವುಗಳನ್ನು ನೋಡುತ್ತ ಯಾವುದಾದರೂ ಕತ್ತೆ ಕೂಗುತ್ತದೇನೊ ಎಂದು ಕಾಯುತ್ತ ನಿಂತೆ. ಸುನಂದ ಅವುಗಳ ಸ್ಕೆಚ್ ಮಾಡುತ್ತಿದ್ದಳು. ತಾವರಗೇರಿಯವರು ಒಂದು ಕಲ್ಲಿನ ಮೇಲೆ ಕೂತು ಬಿಡುವಿಲ್ಲದಂತೆ ಸಿಗರೇಟ್ ಸೇದುತ್ತಿದ್ದರು. ಅಲ್ಲಿರುವವರೆಗೂ ಅವರ ಹಳೆಯ ಕಥೆಗಳನ್ನು ಕೇಳುತ್ತ ಉಗಿಬಂಡಿಯಂತೆ ಹೊಗೆಯುಗುಳುತ್ತ ಸಾಗುತ್ತಿದ್ದ ಅವರ ಜೊತೆ ನಾವು ವಿಜಯಪುರವನ್ನು ಸುತ್ತಾಡುತ್ತಿದ್ದೆವು.
ನಮ್ಮ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗೊಮ್ಮೆ ಧಾರವಾಡಕ್ಕೆ ಕರೆದಿದ್ದೆವು. ಅಲ್ಲದೆ ಹಲವಾರು ಬಾರಿ ನಮ್ಮ ಮನೆಗೆ ಬಂದಿದ್ದರು. ಬರುವಾಗೆಲ್ಲ
ತಮ್ಮ ಮನೆಯಲ್ಲಿದ್ದ ನಾಟಕದ ಪುಸ್ತಕವನ್ನು ಹೊತ್ತು ತರುತ್ತಿದ್ದರು. ಇನ್ನೊಮ್ಮೆ ವಿಜಯಪುರಕ್ಕೆ ನಾನು ಹೋದಾಗ ತಮ್ಮ ಮನೆಗೆ ಕರೆದುಕೊಂಡು ಹೋದರು. ಚಾಂದ್ಬಾವಡಿಯಲ್ಲಿದ್ದ ಹಳೆಯ ಮನೆಯನ್ನು ಸಾಲ ತೀರಿಸಲು ಮಾರಿಯಾಗಿತ್ತು. ಎರಡನೆಯ ಮಗನ ಮನೆಯಲ್ಲಿದ್ದರು. ಅವರ ಹೆಂಡತಿಯೂ ಇದ್ದರು. ಯಾರಿಗೂ ಈ ಪುಸ್ತಕಗಳು ಬೇಕಾಗಿಲ್ಲವೆಂದು ಆಗಲೂ ಸಾಕಷ್ಟು ಪುಸ್ತಕಗಳನ್ನು ಕೊಟ್ಟುಕಳಿಸಿದರು. ನನ್ನ ನಾಟಕಕ್ಕೆ ಮಕ್ಕಳಿಗೆ ಹೊಲಿಸಿದ ಕಾಶ್ಟ್ಯೂಮ್ಸ್ ದುಡ್ಡನ್ನು ಸಂಘಟಕರು ಅಂಗಡಿಯವರಿಗೆ ಕೊಟ್ಟಿರಲಿಲ್ಲ. ಅದನ್ನು ತಾವರಗೇರಿಯವರೇ ತೀರಿಸಿದರು ಎಂದು ಕೇಳಿ ಬೇಸರವಾಯಿತು. ಇಂತಹ ಕಾರಣಕ್ಕೇ ಅವರ ಸಾಲ ಬೆಳೆದಿತ್ತು. ಸುಳ್ಳು-ಮೋಸಗಳನ್ನು ನೋಡಿ ನೋಡಿ ಖಿನ್ನರಾಗಿ ಮೌನಿಯಾಗಿದ್ದರು. ಕೊನೆಗಾಲದಲ್ಲಿ ಎಲ್ಲರಿಂದ ದೂರವಿದ್ದರು. ಅವರು ತೀರಿಕೊಂಡ 3-4 ತಿಂಗಳ ನಂತರ ನನಗೆ ತಿಳಿಯಿತು. ಅವರ ಸಾವೂ ಸುದ್ದಿಯಾಗಲಿಲ್ಲ. “ನೀನು ನನ್ನ ಕೊನೆಯ ದಿನದಲ್ಲಿ ಪರಿಚಯವಾದೆ, ಮೊದಲಾಗಿದ್ದರೆ ನಿನ್ನ ಭವಿಷ್ಯ ಬೇರೆಯದೇ ಆಗಿರುತ್ತಿತ್ತು” ಎಂದು ಕೊನೆಯದಾಗಿ ಅವರು ಹೇಳಿದ ಮಾತು ಇನ್ನೂ ಹಾಗೇ ಕಿವಿಯಲ್ಲಿ ರಿಂಗಣಿಸುತ್ತಿದೆ. ರಂಗಭೂಮಿಯ ಸುತ್ತಲೂ ಇಂದು ಹಾಯಾಗಿ ಮೆಂದುಕೊಂಡಿರುವವರ ನಡುವೆ ಎಲ್ಲವನ್ನೂ ಕಳೆದುಕೊಂಡು ಮೌನವಾಗಿದ್ದು ಹಲವರ ಅನ್ನಕ್ಕೆ ದಾರಿ ಮಾಡಿಕೊಟ್ಟ ತಾವರಗೇರಿಯವರ ನೆನಪು ಇನ್ನೂ ಹಸಿರಾಗಿದೆ.





”ರಂಗಭೂಮಿಯ ಸುತ್ತಲೂ ಇಂದು ಹಾಯಾಗಿ ಮೆಂದುಕೊಂಡಿರುವವರ ನಡುವೆ ಎಲ್ಲವನ್ನೂ ಕಳೆದುಕೊಂಡು ಮೌನವಾಗಿದ್ದು ಹಲವರ ಅನ್ನಕ್ಕೆ ದಾರಿ ಮಾಡಿಕೊಟ್ಟ ತಾವರಗೇರಿಯವರ ನೆನಪು ಇನ್ನೂ ಹಸಿರಾಗಿದೆ…” ಎಂಬ ನಿಮ್ಮ ಮಾತು ನೂರಕ್ಕೆ ನೂರು ನಿಜ. ಶೀನಣ್ಣ (ನಾವು ಹಾಗಂತಲೇ ಕರೆಯುತ್ತಿದ್ದದ್ದು) ನಮ್ಮಂಥ ಬಣ್ಣದ ಹುಚ್ಚರನ್ನು ಬಹಳ ಹಚ್ಚಿಕೊಂಡಿದ್ದರು. ಆದರೆ, ಬಣ್ಣದ ಮಾತುಗಳನ್ನಾಡುವವರಿಂದ ಮಾರು ದೂರ ಆಚೆಯೇ ಇದ್ದುಬಿಡುತ್ತಿದ್ದರು. ಅನುಭವಗಳು ಅವರನ್ನು ‘ಕಠಿಣನಭಾಷಿ’ಯನ್ನಾಗಿ ಮಾಡಿದ್ದವು. ನಾನು ಅಕಾಡೆಮಿ ಸದಸ್ಯನಾಗಿದ್ದ ಕಾಲದಲ್ಲಿ (1987-90) ಅವರಿಗೆ ಅಕಾಡೆಮಿ ಪ್ರಶಸ್ತಿ ಸಿಕ್ಕಿತು ಎಂಬುದೇ ನಮಗೆ ಸಮಾಧಾನ. ನಿಮ್ಮ ಹಾಗೆಯೇ ಅವರ ನಿಧಾನವಾರ್ತೆ ಹೈದರಾಬಾದಿನಲ್ಲಿದ್ದ ನನಗೆ ತಲಪಿದ್ದು ಬಲು ನಿಧಾನವಾಗಿ.