ನಂದಿ ಬೆಟ್ಟವೂ, ಇನ್ಶ್ಯೂರೆನ್ಸೂ
ಪುರೂರವ ಕುಂ ವೀ
ಸ್ವಲ್ಪ ದಿನಗಳ ಹಿಂದೆ ಏನೋ ಕೆಲಸದ ಮೇಲೆ ದೇವನಹಳ್ಳಿಗೆ ಹೋಗಿದ್ದೆ. ಸ್ವಲ್ಪ ಸಮಯ ಉಳಿದಿದ್ದರಿಂದ ಅಲ್ಲೇ ಹತ್ತಿರದ ನಂದಿ ಬೆಟ್ಟ ನೋಡೋಣ ಅಂತ ಅಂದ್ಕೊಂಡು ಹೊರಟೆ. ಬೆಟ್ಟದ ತುದಿ ತಲುಪಿದಾಗ ಮಟ ಮಟ ಮದ್ಯಾಹ್ನ ಹನ್ನೆರಡಾಗಿತ್ತು. ಟಿಕೆಟ್ ಕೌಂಟರಿಗೆ ಹೋಗಿ ಒಂದು ಟಿಕೆಟ್ ಕೊಡಿ ಅಂತ ಕೇಳಿದೆ. ಟಿಕೆಟ್ ಕೊಡೋನು ನಖಶಿಖಾಂತ ಮೇಲಿಂದ ಕೆಳಗೆ ನೋಡಿ ’ಏನ್ ಪ್ರಾಬ್ಲಮ್ಮು ಸ್ವಾಮಿ ಸಂಬಳ ಸಾಲ್ತಾ ಇಲ್ವ’ ಅಂತ ಕೊಂಕು ನಗೆ ಬೀರಿ ಕೇಳಿದ. ಅವನು ಯಾಕೆ ಆ ರೀತಿ ಕೇಳಿದ್ದು ಅಂತ ಅರ್ಥ ಆಗದೆ ’ಏನೋ ಪರ್ವಾಗಿಲ್ಲ ಕಣ್ರೀ ಬರೋ ಸಂಬಳದಲ್ಲಿ ಡೀಸೆಂಟ್ ಆಗಿ ಜೀವನ ಮಾಡಬಹುದು’ ಅಂತ ಹೇಳಿ ಟಿಕೆಟ್ ಇಸ್ಕೊಂಡು ಗೇಟ್ ಹತ್ರ ಹೋದೆ. ಟಿಕೆಟ್ ಕೇಳಿದ ಸೆಕ್ಯುರಿಟಿಗೆ ತಗೊಂಡಿದ್ದ ಟಿಕೆಟ್ ತೋರಿಸಿ ಒಳಗೆ ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಏನು ಒಬ್ರೇನಾ? ಅಂತ ನಾನೇನೋ ದೊಡ್ಡ ತಪ್ಪು ಮಾಡಿರೋ ಥರ ಕೇಳ್ದ. ಹೌದು ಸ್ವಾಮಿ ನಾನು ಒಬ್ಬನೇ ಬಂದಿರೋದು ಅಂತ ಪ್ರಶ್ನಾರ್ಥಕವಾಗಿ ಅವನ ಕಡೆ ನೋಡಿದೆ. ಅದಕ್ಕೆ ಅವನು ’ಹಾಗಾದ್ರೆ ವಾಪಸ್ಸು ಹೋಗಿ, ಒಳಗೆ ಬಿಡೋದಿಲ್ಲ’ ಅಂದ. ಅವರ ವಿಚಿತ್ರ ನಡವಳಿಕೆಯನ್ನು ಅದುವರೆಗೂ ನೋಡಿದ ನಾನು ’ಯಾಕ್ರಿ ಬಿಡೋದಿಲ್ಲ, ನಾನೇನು ಟಿಕೆಟ್ ತಗೊಂಡಿಲ್ವ’ ಅಂತ ಟಿಕೆಟ್ ಅನ್ನು ಅವನ ಮುಖಕ್ಕೆ ಹಿಡಿದೆ. ಅದಕ್ಕೆ ಅವನು ’ನೋಡ್ರಿ ಇಲ್ಲಿ ಟಿಕೆಟ್ಟಿನ ಪ್ರಶ್ನೆ ಅಲ್ಲ ಇರೋದು, ನಾವು ಆತ್ಮಹತ್ಯೆ ಮಾಡಿಕೊಳ್ಳೋಕೆ ಬಂದವರನ್ನು ಒಳಗೆ ಬಿಡೋದಿಲ್ಲ’ ಅಂತ ಗಬ್ಬರ್ ಸಿಂಗ್ ಸ್ಟೈಲಿನಲ್ಲಿ ಹೇಳಿದ. ಅವನ ಮಾತನ್ನು ಕೇಳಿದ ನಾನು ಕ್ಷಣ ಕಾಲ ದಂಗಾದೆ. ’ಏನು ಆತ್ಮಹತ್ಯೆ ಮಾಡಿಕೊಳ್ಳೋದ ನಾನು’ ಅಂತ ಗಾಬರಿಯಿಂದ ಹೇಳಿದೆ. ಅದಕ್ಕೆ ಅವನು ’ಹೌದ್ರಿ ಇಲ್ಲಿಗೆ ಒಬ್ಬೊಬ್ಬರೆ ಬರೋದೇ ಆತ್ಮಹತ್ಯೆ ಮಾಡಿಕೊಳ್ಳೋಕೆ’ ಅಂತ ಅಷ್ಟೇ ದೃಢವಾಗಿ ಹೇಳಿದ. ’ನನ್ನನ್ನು ನೋಡಿದ್ರೆ ನಿಮಗೆ ಸೂಸೈಡ್ ಮಾಡಿಕೊಳ್ಳೋಕೆ ಬಂದವರ ಥರ ಕಾಣ್ತೀನೇನ್ರಿ’ ಅಂದದ್ದಕ್ಕೆ. ’ಹತ್ತು ದಿವಸದ ಹಿಂದೆ ನಿಮಗಿಂತ ಟಿಪ್ ಟಾಪ್ ಆಗಿ ಡ್ರೆಸ್ ಮಾಡಿಕೊಂಡಿದ್ದವನು ಬಂದಿದ್ದ ಸ್ವಾಮಿ, ಸಾಫ್ಟ್ ವೇರ್ ಎಂಜಿನೀಯರಂತೆ. ಅರವತ್ತು ಸಾವಿರ ಸಂಬಳ ತಗೋತೀನಿ ನಾನು ನಾನ್ಯಾಕೆ ಸಾಯಲಿ ಅಂತ ವಾದಿ ಮಾಡಿ ಒಳಗೆ ಹೋದೋನು ಟಿಪ್ಪು ಡ್ರಾಪಿನಿಂದ ಬಿದ್ದು ಸತ್ತಿದಾನೆ, ಇದಕ್ಕೆ ಏನ್ಹೇಳ್ತೀರಿ’ ಅನ್ನುತ್ತಾ ಸತ್ತವನು ನಿಲ್ಲಿಸಿದ್ದ ಅನಾಥ ಬೈಕನ್ನು ತೋರಿಸುತ್ತ ಹೇಳಿದ. ’ರೀ ಸ್ವಾಮಿ ಸಾಯೋಕೆ ಇಲ್ಲಿಗೇ ಬರಬೇಕೇನ್ರಿ, ಸಾಯೋರು ಎಲ್ಲಾದ್ರು ಸಾಯ್ತಾರೆ….. ನಾನು ಕೆಳ ತಿಂಗಳಿನ ಹಿಂದೆ ಅಷ್ಟೆ ಮದುವೆ ಆಗಿರೋದು ಜೀವನದಲ್ಲಿ ಇನ್ನು ಮಾಡಬೇಕಾಗಿರೋದು ಬೇಕಾದಷ್ಟು ಇದೆ’ ಅವನನ್ನು ಖಂಡಿಸುತ್ತಾ ಹೇಳಿದೆ. ಅದಕ್ಕೆ ಅವನು ’ಏನು ರೀಸೆಂಟಾಗಿ ಮದುವೆ ಆಗಿದೀರಾ? ಹಾಗಾದ್ರೆ ಇದಕ್ಕಿಂತ ಬೇರೆ ಕಾರಣ ಬೇಕಾ ಸಾಯೋಕೆ’ ಅಂತ ಹೇಳಬೇಕೆ?. ಇನ್ನು ಇವನ ಹತ್ರ ಮಾತಾಡೋದು ವೇಷ್ಟು ಅನ್ನಿಸಿದ್ರು ಕೂಡ ಕೊನೆಯ ಅಸ್ತ್ರವಾಗಿ ’ನೀವು ಕೂಡ ಮದುವೆ ಆಗಿರೋರೆ ಅಲ್ವ ಹಾಗಂತ ನೀವು ಸೂಸೈಡ್ ಮಾಡಿಕೊಂಡಿದೀರಾ’ ಅಂತ ಕೇಳ್ದೆ. ’ಹೋಗಿ, ಹೋಗಿ ಸ್ವಾಮಿ ನಿಮ್ಮ ಕೆಲ್ಸ ನೋಡ್ಕೊಳ್ಳಿ ನಾನು ನನ್ನ ಹೆಂಡ್ತಿ ಹತ್ರ ಪ್ರತಿ ದಿನ ಸತ್ತು ಬದುಕ್ತಾ ಇದೀನಿ ನನ್ನ ಕಷ್ಟ ಯಾರಿಗೆ ಹೇಳಲಿ’ ಅಂದ. ನನ್ನ ಹೆಂಡತಿ ನನ್ನ ಜೊತೆ ಆ ಕ್ಷಣ ಇರದಿದ್ದಕ್ಕೆ ಬೇಜಾರು ಆದ್ರು ಕೂಡ ಹಿಂತಿರುಗಿಸಿದ ಟಿಕೆಟ್ಟಿನ ದುಡ್ಡು ಪಡೆದುಕೊಂಡು ಹೋದ ದಾರಿಯಲ್ಲೇ ಬೆಂಗಳೂರಿಗೆ ವಾಪಸ್ಸು ಬಂದಿದ್ದೆ.

ನಾನು ನಂದಿಬೆಟ್ಟಕ್ಕೆ ಹೋಗಿದ್ದ ಗಳಿಗೆ ಸರಿ ಇರಲಿಲ್ಲವೇನೋ ಅಂತ ಅನ್ಸುತ್ತೆ. ಯಾಕಪ್ಪ ಅಂದ್ರೆ ಮೊನ್ನೆ ನನ್ನ ಸ್ನೇಹಿತ ಒಬ್ಬ ಕಾಲ್ ಮಾಡಿದ್ದ. ಎಂಬಿಎ ಮುಗಿದ ಮೇಲೆ ಎಲ್ಲರೂ ಒಂದಲ್ಲ ಒಂದು ರೀತಿ ಟಚ್ಚಿನಲ್ಲಿ ಇದ್ರೂ ಈ ಆಸಾಮಿ ಮಾತ್ರ ಪತ್ತೆನೇ ಇರ್ಲಿಲ್ಲ. ಹೀಗೆ ಫ್ರೆಂಡ್ಸ್ ಜೊತೆ ಮಾತಾಡ್ತಾ ಇದ್ದಾಗ ಇವನು ಯಾವ್ದೋ ಇನ್ಶ್ಯೂರೆನ್ಸ್ ಕಂಪನಿಯಲ್ಲಿ ಕೆಲಸ ಮಾಡ್ತಿದಾನೆ ಅಂತ ಹೇಳಿದ್ರು. ಅವನ ಹೆಸರಿನಲ್ಲೇ ಮೂರ್ನಾಲ್ಕು ನಂಬರುಗಳು ಸೇವ್ ಆಗಿದ್ರು ಒಂದು ನಂಬರ್ ಕೂಡ ವರ್ಕ್ ಆಗ್ತಾ ಇರ್ಲಿಲ್ಲ ಕೊನೆಗೆ ಅವನ ಅಸ್ತಿತ್ವವನ್ನೇ ಮರೆತುಬಿಟ್ಟಿದ್ದೆ. ಇಂತಹ ಆಸಾಮಿ ಮೂರು ವರ್ಷಗಳ ಬಳಿಕ ಕಾಲ್ ಮಾಡಿದ್ದರಿಂದ ಆಶ್ಚರ್ಯದ ಜೊತೆ ಗಾಬರಿಯೂ ಆಗಿತ್ತು ಯಾಕಂದ್ರೆ ಏನೂ ವಿಷಯ ಇಲ್ಲ ಅಂದ್ರೆ ಕಾಲ್ ಮಾಡೋ ಮನುಷ್ಯ ಅಲ್ವೇ ಅಲ್ಲ ಅವನು. ಅವನ ಧ್ವನಿ ಮಾತ್ರ ಮೂರು ವರ್ಷಗಳ ಬಳಿಕವೂ ಇನ್ನೂ ಹಾಗೇ ಇದ್ದಿದ್ರಿಂದ ನಾನು ಕೂಡಲೇ ಪತ್ತೆ ಹಚ್ಚಿ “ಏನೋ ಮಗಾ ಇಷ್ಟು ವರ್ಷ ಆದ ಮೇಲೆ ಕಾಲ್ ಮಾಡಿದೀಯ ಎಲ್ಲಿದೀಯ, ಹೇಗಿದೀಯ” ಅಂತ ಕುಶಲೋಪರಿ ಪ್ರಶ್ನೆ ಬಿಸಾಕಿ ಉತ್ತರಕ್ಕಾಗಿ ಕಾದು ನಿಂತೆ. “ನಂದು ಬಿಟ್ಟಾಕು ಸಿಸ್ಯಾ ಏನೋ ವಿಚಾರ ಕೇಳ್ದೆ ನಿಜಾನ?” ಅಂತ ಕೇಳ್ದ. ನಾನು ಮದುವೆ ಆಗಿರೋ ವಿಚಾರ ಇರಬಹುದು ಅಂತ “ಸಾರಿ ಮಗಾ ನಿನ್ನ ಮೊಬೈಲ್ ನಂಬರ್ ಇರ್ಲಿಲ್ಲ ಅದಕ್ಕೆ ನನ್ನ ಮದುವೆಗೆ ಕರಿಯೋಕೆ ಅಗಿರ್ಲಿಲ್ಲ” ಅಂದೆ. “ಹಳೇ ವಿಚಾರ ಹೇಳ್ಬೇಡ ನಂಗೆ, ನೀನು ಸೂಸೈಡ್ ಮಾಡ್ಕೊಳ್ಳೋಕೆ ನಂದಿಬೆಟ್ಟಕ್ಕೆ ಹೋಗಿದ್ಯಂತೆ ಹೌದಾ? ಕೇಳಿ ಶಾಕ್ ಆಯ್ತು ಅದಕ್ಕೆ ಕಾಲ್ ಮಾಡಿದ್ದು” ಅಂತ ಹೇಳ್ದ. ನನಗೋ ಇದ್ಯಾವ ಹೊಸ ಸಮಸ್ಯೆ ಸಿವನೇ ಅಂದ್ಕೊಂಡೆ ಆದ್ರೆ ಇನ್ನೂ ದೊಡ್ಡ ಪೀಕಲಾಟ ಶುರು ಆಗಿದ್ದು ಆಮೇಲೆ. “ಇಲ್ಲ ಕಣಪ್ಪಾ ನಾನೊಬ್ನೇ ನೋಡೋಣ ಅಂತಾ ಹೋಗಿದ್ದೆ, ಏನೋ ಮಿಸ್ ಅಂಡರ್ಸ್ಟಾಂಡಿಂಗು ಒಳಗೆ ಬಿಡಲಿಲ್ಲ” ಅಂತ ಕೂಲಾಗೇ ಹೇಳಿದೆ. “ಇಷ್ಟು ದೊಡ್ಡ ವಿಶ್ಯಾ ಎಷ್ಟು ನಾರ್ಮಲ್ಲಾಗಿ ಹೇಳ್ತಾ ಇದೀಯಾ, ಮಗಾ ನಾನು ಅರ್ಜೆಂಟಾಗಿ ನಿನ್ನ ಮೀಟ್ ಮಾಡ್ಬೇಕು ಎಲ್ಲಿಗೆ ಬರ್ಲಿ ಹೇಳು ನಾನು ನಿನ್ನ ಅಷ್ಟು ಈಜಿಯಾಗಿ ಸಾಯೋಕೆ ಬಿಡೊಲ್ಲ” ಅಂದ. ನಾನು “ಥೂ ನಿನ್ನ ತುಂಬಾ ದಿವಸದ ಮೇಲೆ ಕಾಲ್ ಮಾಡಿ ಬರೀ ಅಪಶಕುನದ ಮಾತಾಡ್ತಿಯಲ್ಲೋ ಶುನಕ ಮುಂಡೇದೆ” ಅಂತ ಥೇಟ್ ಬ್ರಾಹ್ಮಣರ ಸ್ಟೈಲಿನಲ್ಲಿ ಬೈದು ಬಂದು ತಲೆ ತಿನ್ನೋದೇನು ಬೇಡ ಮಾರಾಯ ಅಂದ್ರೂ ಕೇಳದೆ ಬಂದು ನೋಡಲೇ ಬೇಕು ಅಂತ ಹಠ ಹಿಡಿದ. ಸ್ನೇಹಿತನಾದ ನನ್ನ ಮೇಲೆ ಎಷ್ಟು ಪ್ರೀತಿ ಇಟ್ಕೊಂಡಿದಾನಲ್ಲ ಇವನಂತಹ ಹಿತೈಶಿಯನ್ನು ಪಡೆದ ನಾನೇ ಧನ್ಯ ಅಂತ ಒಳಗೊಳಗೇ ಹೆಮ್ಮೆ ಪಟ್ಟು “ನಾಳೆ ಹನ್ನೆರಡರೊಳಗೆ ಆಫೀಸಿಗೆ ಬಾ ಮಾರಾಯ” ಅಂತ ಆಫೀಸಿನ ಅಡ್ರೆಸ್ಸು ಕೊಟ್ಟೆ.
ಮರುದಿನ ಹತ್ತಕ್ಕೆ “ನಿಮ್ಮನ್ನು ನೋಡಲು ಯಾರೋ ಬಂದಿದಾರೆ” ಅಂತ ಆಫೀಸ್ ಬಾಯ್ ಹೇಳಿದ್ದಕ್ಕೆ ನೋಡಲಾಗಿ ಆ ನನ್ನ ಸ್ನೇಹಿತನ ರೂಪದ ನಕ್ಷತ್ರಿಕ ಆಸೀನನಾಗಿದ್ದ. ಮೊದಲು ಬೆಂಗಳೂರು, ಟ್ರಾಫಿಕ್ಕು, ಹುಡುಗೀರು, ಕ್ಲಾಸ್ ಮೇಟ್ಸು ಅಂತ ಏನೇನೋ ಮಾತಾಡಿ ಕೊನೆಗೆ ಹೇಗಿದೆ ನಿನ್ನ ಲೈಫು ಅಂತ ಅವನು ನನ್ನನ್ನು ಕೇಳಿದ ಮೇಲೆ ಏನೋ ವಿಷಯಕ್ಕೆ ಪೀಠಿಕೆ ಹಾಕ್ತಾ ಇದಾನೆ ಇವನು ಅಂತ ನನಗೆ ಅನ್ನಿಸಿ “ಲೈಫು ಮದುವೆ ಆದ ಮೇಲೆ ಸೋಪರ್ರಾಗಿ, ಕಲರ್ ಫುಲ್ಲಾಗಿ ಇದೆ ಮಗಾ, ಐ ಯಾಮ್ ಜಷ್ಟ್ ಎಂಜಾಯಿಂಗ್ ಮೈ ಲೈಫ್ “ಅಂತ ಹೇಳಿದೆ. ಅದಕ್ಕೆ ಅವನು ಇಲ್ಲ ಕಣೋ ಸಮ್ ಥಿಂಗ್ ಈಸ್ ನಾಟ್ ಅಟ್ ಆಲ್ ರೈಟ್, ಇಲ್ಲ ಅಂದ್ರೆ ಸೂಸೈಡ್ ಮಾಡ್ಕೊಳ್ಳೋಕೆ ಹೋಗ್ತಾ ಇರ್ಲಿಲ್ಲ ನೀನು, ಅದು ಸರಿ ಯಾವುದಾದ್ರು ಇನ್ಶೂರೆನ್ಸ್ ಮಾಡಿಸಿದೀಯ ನೀನು” ಅಂದ. ಅಲ್ಲಿಗೆ ಇವನ ಉದ್ಧೇಶ ಏನು ಅನ್ನೋದು ನನಗೆ ಸ್ಪಷ್ಠವಾಗಿತ್ತು. “ಲೇ, ಸುತ್ತಿ ಬಳಸಿ ಮಾತಾಡ್ಬೇಡ, ಇನ್ಶ್ಯೂರೆನ್ಸ್ ಮಾಡ್ಸು ಅಂತ ಡೈರೆಕ್ಟಾಗಿ ಕೇಳು ಮಾರ್ಕೆಟಿಂಗ್ ಮಾಡೋವ್ರ ಹತ್ರನೇ ಇವೆಲ್ಲಾ ಟ್ರಿಕ್ಸ್ ಬ್ಯಾಡೋ ಸಿಸ್ಯಾ” ಅಂದೆ. “ಪುರು ನೀನು ತುಂಬಾ ಶಾರ್ಪ್ ಕಣೋ ನನ್ನ ಕಂಪ್ನಿದು ಒಂದು ಒಳ್ಳೆ ಇನ್ಶ್ಯೂರೆನ್ಸ್ ಪಾಲಿಸಿ ಪ್ಲಾನ್ ಇದೆ, ಒಂದು ಪಾಲಿಸಿ ಮಾಡ್ಸು ಮಗಾ ಅಟ್ ಲೀಸ್ಟ್ ಐದು ಲಕ್ಷದ್ದು ಆಮೇಲೆ ನೀನು ಹೇಗೆ ಬೇಕಾದ್ರು ಸಾಯಿ ಮಗಾ ನಿನ್ನ ನಂಬಿಕೊಂಡವ್ರಿಗೆ ತೊಂದ್ರೆ ಇರೊಲ್ಲ” ಅಂದ. ಅದೇನು ಹೇಳಪಾ ಪಾಲಿಸಿ ಪ್ಲಾನು, ನಾನು ಒಂದು ಪಾಲಿಸಿ ಮಾಡಿಸಬೇಕು ಅಂತ ಇದ್ದೆ” ಅಂದೆ. ಆಮೇಲೆ ಅವನು ಹೇಳಿದ್ದನ್ನು ಇದ್ದ ಹಾಗೆ ನಿಮ್ಮ ಮುಂದೆ ಇಡ್ತಾ ಇದೀನಿ, “ನೋಡು ಮಗಾ ನಿನಗೆ ಈಗೆ ೨೮ ವಯಸ್ಸು, ವರ್ಷಕ್ಕೆ ೨೪ ಸಾವಿರ ಕಟ್ಟುತ್ತಾ ಹೋಗು, ೨೦ ವರ್ಷದವರೆಗೂ ಕಟ್ಟಿದರೆ ಒಟ್ಟು ಮೊತ್ತದ ಜೊತೆಗೆ ೧೦% ಬಡ್ಡಿನೂ ಸಿಗುತ್ತೆ, ಇನ್ನೂ ಒಂದು ಬೆನಿಫಿಟ್ ಇದೆ ಕಣೋ, ನೀ ಮೊದಲನೇ ಕಂತು ಕಟ್ಟಿ ಮರುದಿನವೇ ಸಾಯಿ ಪರ್ವಾಗಿಲ್ಲ ಇಪ್ಪತ್ತು ವರ್ಷದ ಫುಲ್ ಅಮೌಂಟ್ ಒಟ್ಟಿಗೆ ಸಿಗುತ್ತೆ” ಅಂದ. “ಥೂ ನಿನ್ನ, ಬರೀ ಸಾಯೋದೇ ಮಾತಾಡ್ತೀಯಲ್ಲೋ, ಒಳ್ಳೇ ಮಾತು ಬರಲ್ವಾ ನಿನ್ನ ಬಾಯಲ್ಲಿ” ಅಂದೆ. ಅದಕ್ಕೆ ಅವನು “ಸಾರಿ ಕಣೋ ನಿನ್ನ ಮನಸ್ಸಿಗೆ ಬೇಜಾರಾಯ್ತು ಅನ್ಸುತ್ತೆ, ನೀನು ಸಾಯ್ಲಿಲ್ಲ ಅಂತನೇ ತಿಳ್ಕೋ, ಬರೀ ಕೈ ಅಥವಾ ಕಾಲು ಮುರೀತು ಅಂತ ತಿಳ್ಕೋ ನಿನಗೆ ಟೋಟಲ್ ದುಡ್ಡಿನಲ್ಲಿ ೪೦% ಸಿಗುತ್ತೆ ಮಗಾ, ಈ ಆಫರ್ ನಮ್ಮ ಕಂಪನೀಲಿ ಮಾತ್ರ ಇರೋದು” ಅಂತ ಏನೋ ದೊಡ್ಡ ಫೇವರ್ ಮಾಡ್ತಾ ಇರೋರ ಥರ ಪೋಸು ಕೊಡ್ತಾ ಹೇಳಿದ. ಆ ಕ್ಷಣದಲ್ಲಿ ಅವನು ನನ್ನ ಕಣ್ಣಿಗೆ ಕೈಗೆ ಇಷ್ಟು, ಕಾಲಿಗೆ ಇಷ್ಟು ಅಂತ ಮಾತಾಡೋ ಸುಪಾರಿ ಕಿಲ್ಲರ್ ಥರ ಕಂಡಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ.
ಕೊನೆಗೆ ಅವನು ಹೇಳಿದ ಒಂದು ಮಾತು ಕೇಳಿ ತುಂಬಾ ಉರಿದು ಹೋಯ್ತು, ಅದೇನು ಅಂದ್ರೆ “ಮಗಾ ಪಾಲಿಸಿ ಮಾಡಿಸಿದ ಮೇಲೆ ಬೆಟ್ಟದ ಮೇಲಿಂದ ಬಿದ್ದು, ವಿಷ ಕುಡಿದು, ನೇಣು ಹಾಕ್ಕೊಂಡು ಸಾಯೋಕೆ ಹೋಗ್ಬೇಡ ಅದ್ರಿಂದ ಜಸ್ತಿ ಹಣದ ರಿಟರ್ನ್ಸ್ ಸಿಗೊಲ್ಲ ಅದರ ಬದಲು ಅಕಸ್ಮಾತ್ತಾಗಿ ಸತ್ತ ರೀತಿ ಯವುದಾದ್ರು ಲಾರಿ ಕೆಳಗೆ ಬಿದ್ದು ಸಾಯಿ ಅದ್ರಿಂದ ಫುಲ್ ಅಮೌಂಟ್ ಸಿಗುತ್ತೆ” ಅನ್ನಬೇಕೆ? ಅಲ್ಲಿವರೆಗೂ ಸಮಾಧಾನದಿಂದ ಕೇಳ್ತಾ ಇದ್ದ ನನ್ನ ತಾಳ್ಮೆಯ ಕಟ್ಟೆ ಒಡೆದುಹೋಯ್ತು, ಆಫೀಸಿನ ಕಾಫಿಯನ್ನೂ ಅವನಿಗೆ ಕುಡಿಸದೆ “ನೀನೇ ಸಾಯಿ ಮಗ್ನೇ ನಿನ್ನ ಮನೆಯೋರಿಗೇ ಲಕ್ಷಗಟ್ಟಲೆ ದುಡ್ಡು ಸಿಗಲಿ, ನಿನ್ನ ಕಂಪನಿ ಇನ್ಶ್ಯೂರೆನ್ಸ್ ದುಡ್ಡಿಗೋಸ್ಕರ ನಾನು ಸಾಯ್ಬೇಕಾ” ಅಂತ ಬಯ್ದು ಸಿಟ್ಟಿನಿಂದ ಎದ್ದು ನಾನು ಒಳಗೆ ಹೋದುದನ್ನು ಆಫೀಸಿನ ಕೊಲೀಗ್ಸ್ ನೋಡ್ತಾ ನಿಂತಿದ್ರು. ಅವರಿಗೆ ಏನು ಗೊತ್ತಾಗುತ್ತೆ ನನ್ನ ಕಷ್ಟ, ಅವರಿಗೇ ಆಗಲಿ ನೀನು ಸತ್ರೆ, ನಿನ್ನ ಕೈ ಕಾಲು ಮುರಿದ್ರೆ ಅಂತ ಎದುರಿಗೆ ಹೇಳ್ತಾ ಇದ್ರೆ ಮನಸ್ಸಿಗೆ ಎಷ್ಟು ಬೇಜಾರು ಆಗುತ್ತೆ ಅಂತ. ನನ್ನ ಉಗ್ರ ರೂಪವನ್ನು ಮೊದಲ ಬಾರಿ ನೋಡಿದ ನನ್ನ ಸ್ನೇಹಿತ ಯಾವಾಗ ಅಲ್ಲಿಂದ ಕಾಲು ಕಿತ್ತನೋ ಗೊತ್ತಾಗಲಿಲ್ಲ.






ha ha ha…
Sooperagide.
ನಂದಿ ಬೆಟ್ಟದ ಪುರಾಣ ಚೆನ್ನಾಗಿದೆ ಸ್ವಾಮಿ, LIC ಏಜೆಂಟ್ ಟಿಪ್ಪು ಡ್ರಾಪ್ ಹತ್ರನೇ ಇದ್ರೆ ಕಸ್ಟಮರ್ಸ್ ಸಿಕ್ರು ಸಿಗಬಹುದು….
puru.
ondu vichitravendare halavu nooru sala bengaloorige hogiddaroo nanninda alle hattiradalliruva nandibettakke hogalaagilla. ninna anubhavavannu parikshisuva saluvaagiyaadaroo allige hogi baruttene, ottaare ninna lekhana chennagide.
kumvee
hosa anubhava chennagide
Adella irlee
neevu famous author KUMVEE avara magana??
Houdu.
ನಂದಿ ಬೆಟ್ಟದ ಮಹಿಮೆ………….
nice story
super maga imagination chennagide but insurance covers only finacial loss and death is painful truth le ellru saytare yaru chiranjivigalalla but sayokkoskara insurance tagollodo antalla. we wil take insurance for protection and for long term savings k… well try get some tips with uncle
ನಮ್ಮ ಹೊಸಕೋಟೆಗೆ ಹತ್ತಿರ ಇರೋದು ಅಂದ್ರೆ ಇದೊಂದೇ ಅನ್ಸತ್ತೆ ‘
ಆದರೂ ಒಮ್ಮೆಯೂ ಹೋಗಿಲ್ಲ ಸಾರ್…
ನನ್ನೂ ಹಂಗೆ ಕೇಳಿದ್ರೆ??
good one
Nice…One..)))
ತುಂಬಾ ಹಿಂದೆ ಪ್ರಜಾವಾಣಿಯಲ್ಲಿ ನಿಮ್ಮ ಕಥೆಯೋದಿದ ನೆನಪು, ಬರಹ ನಮ್ಮನ್ನು ಗೊತ್ತಿಲ್ಲದಂತೆ ನಗಿಸುತ್ತಾ ಓದಿಸಿಕೊಂಡು ಹೋಗುತ್ತದೆ, ಮತ್ತೆ ಮತ್ತೆ ಬರೆಯುತ್ತಿರಿ….
erade dari sunil ondo yara joteyalladaru hogi illa andre nivu sucide madkolloke bandilla anta nimmannu nivu prove madkolli. Moorane darinu ide adu vapassu bandu mane serkollodu.
puru, gothaithu bidu, aa mba friend yaaru antha.business mathu friendship mix maadi konege maryaade kalkonda
ನಂದೀ ಬೆಟ್ಟಕ್ಕೆ ಹೋಗುವವರೆಲ್ಲಾ ಸಾಯುವುದಕ್ಕೆ ಎಂಬ ಅಲ್ಲಿನವರ ಮನಸ್ಥಿತಿ ಬದಲಾಗುವ ಹೊತ್ತಿಗೆ ನಾವುಗಳೇ ಸತ್ತಿರುತ್ತೇವೆ ಎನ್ನಿಸುತ್ತದೆ.