ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ‘ಸತ್ಯ’ ಸಿನೆಮಾ ಮಾಡಿದ್ದು ಹೀಗೆ..

ಖ್ಯಾತ ಹಾಲಿವುಡ್ ನಿರ್ದೇಶಕ ಡ್ಯಾನಿ ಬಾಯ್ಲ್ ತಮಗೆ ಆಸ್ಕರ್ ಪ್ರಶಸ್ತಿಬರಲು ಪ್ರೇರಣೆ

ರಾಮ್ ಗೋಪಾಲ್ ವರ್ಮ ‘ಸತ್ಯ’ ಸಿನಿಮಾ ಎಂದು ಹೇಳುತ್ತಾರೆ.
**

 

ಮುಂಬೈ ಭೂಗತ ಜಗತ್ತನ್ನು ರಾಮ್ ಗೋಪಾಲ್ ವರ್ಮ ಅನಾವರಣಗೊಳಿಸಿದಂತೆ ಬಹುಶಃ ಯಾವ ಭಾರತೀಯ ನಿರ್ದೇಶಕನೂ ಅನಾವರಣಗೊಳಿಸಿಲ್ಲ. ಗ್ಯಾಂಗ್ ಸ್ಟರ್ ಗಳ ಬದುಕನ್ನು, ಅವರ ಸವಾಲುಗಳನ್ನು, ಜೀವನ ಶೈಲಿಯನ್ನು, ಚಟುವಟಿಕೆಗಳನ್ನು ‘ಸತ್ಯ’ ಸಿನಿಮಾದಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.
‘ಸತ್ಯ’ ಸಿನಿಮಾ ಬಿಡುಗಡೆಯಾಗಿ ಮೊನ್ನೆ ಜುಲೈ 3ಕ್ಕೆ ಇಪ್ಪತ್ತು ವರ್ಷಗಳು. ಈ ಸಿನಿಮಾ ಕುರಿತು ರಾಮ್ ಗೋಪಾಲ್ ವರ್ಮ ಸ್ವಗತದ ಝಲಕ್.

 

‘ಸತ್ಯ’ ಸಿನಿಮಾ ಮತ್ತು ಭೂಗತ ಲೋಕದೊಂದಿಗೆ ನನ್ನ ನಂಟು.                                                                 

-ರಾಮ್ ಗೋಪಾಲ್ ವರ್ಮ

ನಾನು ಮೊತ್ತಮೊದಲ ಬಾರಿಗೆ ಹೈದರಾಬಾದ್ ನಿಂದ ಮುಂಬೈಗೆ ಹೋದಾಗ ರೈಲು ಧಾರಾವಿ ಸ್ಲಂ ಮೇಲಿಂದ ಹೋಗುವಾಗ ಅದನ್ನೇ ತದೇಕಚಿತ್ತನಾಗಿ ನೋಡುತ್ತಾ ನಿಂತೆ.

ಅಲ್ಲಿ ಸಾವಿರಾರು ಮನೆಗಳು ಇದ್ದರೂ ಅವೆಲ್ಲಾ ಒಂದೇ ಸೂರಿನಡಿ ಇದ್ದಂತೆ ಭಾಸವಾಗುತ್ತಿದ್ದವು. ಅಲ್ಲಿನ ಜನ ಒಳಗೆ ಹೇಗೆ ಹೋಗುತ್ತಾರೋ ಹೊರಗೆ ಹೇಗೆ ಬರುತ್ತಾರೊ ಅರ್ಥವಾಗುತ್ತಿರಲಿಲ್ಲ. ರೈಲು ಹಳಿಗಳಿಂದ ಕೇವಲ ಮೂರೇ ಅಡಿ ದೂರದಲ್ಲಿ ಎರಡು ವರ್ಷದ ಮಗುವೊಂದು ಪುಟ್ಟ ಹೆಜ್ಜೆ ಇಟ್ಟು ನಿರ್ಭಯವಾಗಿ ನಡೆದು ಹೋಗುತ್ತಿದ್ದಳು. ಮುಂಬೈನಲ್ಲಿ ಅವರ ಪಾಡಿಗೆ ಅವರು. ಅವರವರ ಸಮಸ್ಯೆಗಳು ಅವರಿಗೆ. ಪಕ್ಕದಲ್ಲಿ ಏನು ನಡೆದರೂ ನಿರ್ಭಾವುಕರಾಗಿ ನಡೆದು ಹೋಗುವ ಜನ. ಅಲ್ಲಿ ಅವರ ಬದುಕು ಮತ್ತು ಮುಂಬೈ ನನಗೆ ಗೋಚರಿಸಿದ್ದೇ ಹಾಗೆ.

ಇದೇ ಕಾರಣದಿಂದ ಇಂದಿಗೂ ಮುಂಬೈ ನನ್ನನ್ನು ಕಾಡುತ್ತಿರುವುದು ಮತ್ತು ಮುಂಬೈ ಬಗ್ಗೆ ವಿಪರೀತ ವ್ಯಾಮೋಹಿಯಾಗಿರುವುದು. ‘ರಂಗೀಲಾ’ ಸಿನಿಮಾ ನಿರ್ಮಾಣ ಪ್ರಾರಂಭವಾದಾಗಿನಿಂದ ನಾನು ಈ ಪರಿಸರಕ್ಕೆ ಹೆಚ್ಚು ಹೆಚ್ಚು ಆಕರ್ಷಿತನಾದೆ.

ಒಂದುದಿನ ನಾನು ನಿರ್ಮಾಪಕರೊಬ್ಬರ ಕಛೇರಿಯಲ್ಲಿ ಕೂತಿದ್ದಾಗ ಅವನಿಗೆ ಫೋನ್ ಬಂತು. ತಕ್ಷಣ ಆತ ವಿಪರೀತ ಭಯಭೀತನಾದ. ಆಡಿಯೋ ಕಿಂಗ್ ಗುಲ್ಷನ್ ಕುಮಾರ್ ನನ್ನು ಹಂತಕರ ಗುಂಪೊಂದು ಶೂಟ್ ಮಾಡಿತ್ತು. ಅವನ ಬಗ್ಗೆ ನಿರ್ಮಾಪಕ ವಿಪರೀತ ಟೆನ್ಸ್ ಆಗಿ ಈ ರೀತಿ ಹೇಳತೊಡಗಿದ. ‘ಅವನು ನನಗೆ ಬೆಳಗ್ಗೆ ಏಳುಗಂಟೆಗೆ ಫೋನ್ ಮಾಡಿದ್ದ. 8 ಗಂಟೆಗೆ ಎಲ್ಲೋ ಹೋಗಬೇಕಿದೆ ಎಂದು ಕೂಡ ಹೇಳಿದ್ದ. ಸರಿಯಾಗಿ 1.30ಕ್ಕೆ ಯಾರನ್ನೊ ಭೇಟಿಯಾಗಬೇಕಿತ್ತು ಅಂತಲೂ ಹೇಳಿದ್ದ….ಆದರೆ ವಿಧಿ ನೋಡಿ..’ ಮಾತು ನಿಲ್ಲಿಸಿ ಗದ್ಗದಿತನಾದ.

ತುಂಬಾ ಪರಿಚಿತರು,ಹತ್ತಿರದವರು ಅಕಸ್ಮಾತ್ ತೀರಿಹೋದರೆ…… ಹೀಗೆ ಸ್ವಲ್ಪದಿನಗಳ ಮುಂಚೆ ಅಥವಾ ಸ್ವಲ್ಪ ಹೊತ್ತಿನ ಮುಂಚೆ ನಡೆದ ಘಟನೆಗಳನ್ನು ನೆನಪಿಗೆ ತಂದುಕೊಳ್ಳುತ್ತಾರೆ. ಅವೆಲ್ಲವನ್ನೂ ಸಿನಿಮ್ಯಾಟಿಕ್ ಆಗಿ ಯೋಚಿಸಿ ನಾನು ಬೇರೆಯದೇ ರೀತಿಯಲ್ಲಿ ತಲೆ ಓಡಿಸುತ್ತಿದ್ದೆ.

ಗುಲ್ಷನ್ ಕುಮಾರ್ ನನ್ನು ಕೊಲೆ ಮಾಡಿದ ಹಂತಕ ಬೆಳಿಗ್ಗೆ ಎಷ್ಟುಹೊತ್ತಿಗೆ ಎದ್ದಿರಬಹುದು? ತಾನು ಕೊಲೆಮಾಡಲು ಹೊರಡಲಿದ್ದೇನೆಂದು ಬೇಗನೇ ಎಬ್ಬಿಸಲು ಅವನ ತಾಯಿಗೆ ಹೇಳಿರಬಹುದೇ? ಹತ್ಯೆಗೆ ಬ್ರೇಕ್ ಫಾಸ್ಟ್ ಮಾಡಿದ್ದನೇ ಅಥವಾ ಕೆಲಸವಾದ ನಂತರ ತಿಂಡಿ ತಿಂದನೇ? ಈ ರೀತಿ ಹಂತಕನ ಟೈಮ್ ಟೇಬಲ್ ಕುರಿತು ಯೋಚಿಸತೊಡಗಿದೆ. ಈ ಗ್ಯಾಂಗ್ ಸ್ಟರ್ ಗಳ ಬಗ್ಗೆ,ಅವರು ಯಾರನ್ನಾದರೂ ಕೊಂದಾಗ ಅಥವಾ ಅವರು ಸತ್ತುಹೋದಾಗ ಮಾತ್ರ ನಾವು ಅವರ ಬಗ್ಗೆ ಯೋಚಿಸುತ್ತೇವೆ. ಉಳಿದ ಸಮಯದಲ್ಲಿ ಅವರು ಎಲ್ಲಿರುತ್ತಾರೆ? ಅವರ ದೈನಂದಿನ ಕಾರ್ಯಕಲಾಪಗಳೇನು? ಅವರ ಜೀವನ ಶೈಲಿ ಹೇಗಿರುತ್ತದೆ. ಇಂಥ ಪ್ರಶ್ನೆಗಳಿಂದ ಹುಟ್ಟಿದ್ದೇ ‘ಸತ್ಯ’ ಸಿನಿಮಾ.

ಉದಾಹರಣೆಗೆ ನಿಮ್ಮ ಪಕ್ಕದ ಮನೆಯವನು ಒಬ್ಬ ಗ್ಯಾಂಗ್ ಸ್ಟರ್ ಆಗಿರಬಹುದು. ಅಚ್ಚರಿಯೆಂದರೆ ಇವರು ಯಾವತ್ತೂ ವಿಶೇಷವಾಗಿ ಕಾಣಿಸುವುದಿಲ್ಲ. ತುಂಬಾ ಸಾಧಾರಣವಾಗಿರುತ್ತಾರೆ. ತಮ್ಮ ಕೆಲಸ ಮುಗಿಯುತ್ತಿದ್ದಂತೆಯೇ ಜನಗಳಲ್ಲಿ ಬೆರೆತು ಹೋಗುತ್ತಾರೆ.

ನನ್ನ ಸ್ನೇಹಿತನೊಬ್ಬ ಮುಂಬೈನ ಓಶಿವಾರದ ಹದಿನಾಲ್ಕನೆಯ ಫ್ಲೋರಿನ ಫ್ಲಾಟೊಂದರಲ್ಲಿ ವಾಸಿಸುತ್ತಿದ್ದ. ಅವನು ಸಿನಿಮಾದವನಲ್ಲ. ಅವನು ಪ್ರತಿಸಲ ತನ್ನ ಫ್ಲಾಟಿಗೆ ಲಿಫ್ಟಿನಲ್ಲಿ ಹೋಗುವಾಗ ಆ ವ್ಯಕ್ತಿ ಕಾಣಿಸುತ್ತಿದ್ದ. ಇಬ್ಬರೂ ಹಲೋ ಹೇಳುತ್ತಿದ್ದರು. ಹೇಗಿದ್ದೀರಿ? ಎಂಬ ಮುಗುಳ್ನಗೆ ಮತ್ತು ‘ಹ್ಯಾಪಿ ದೀಪಾವಳಿ’ ಎಂದು ಹಬ್ಬಗಳಿಗೆ ವಿಷ್ ಮಾಡಿಕೊಳ್ಳುವಷ್ಟು ಪರಿಚಯವಾಗಿತ್ತು.
ಒಂದು ದಿನ ನನ್ನ ಗೆಳೆಯನಿಗೆ ಅವನ ಹೆಂಡತಿಯಿಂದ ಫೋನ್ ಬಂತು. ಆ ವ್ಯಕ್ತಿಯನ್ನು ಅರೆಸ್ಟ್ ಮಾಡಿದ್ದಾರೆಂದು.. ಆತ ಕೊಲೆಮಾಡಿ ತಪ್ಪಿಸಿಕೊಂಡು ಬಂದು ಅನೇಕ ದಿನಗಳಿಂದ ನನ್ನ ಸ್ನೇಹಿತನಿರುವ ಅಪಾರ್ಟ್ ಮೆಂಟ್‍ನಲ್ಲಿ ವಾಸವಾಗಿದ್ದ.

ಈ ವಿಷಯವನ್ನು ಗೆಳೆಯ ನನಗೆ ಹೇಳುತ್ತಾ ‘ನೀನು ಮುಂಬೈನಲ್ಲಿ ಹತ್ತು ವರ್ಷಗಳಿಂದ ಇದ್ದರೂ ನಿನಗೆ ಆ ವ್ಯಕ್ತಿ ಬಗ್ಗೆ ಗೊತ್ತಿಲ್ವಾ?’ ಎಂದ. ಆಗಲೇ ನನ್ನ ಮನಸ್ಸಿನಲ್ಲಿ ‘ಸತ್ಯ’ ಪಾತ್ರ ರೂಪುಗೊಂಡಿತು. ಸಿನಿಮಾದಲ್ಲಿ ಊರ್ಮಿಳ ವಾಸಿಸುವ ಫ್ಲಾಟ್ ಎದುರಿಗೆ ‘ಸತ್ಯ’ ಇರುತ್ತಾನೆ. ಆದರೆ ಅವನು ಮಾಡುವ ‘ವರ್ಕ್’ ಯಾರಿಗೂ ಗೊತ್ತಿರುವುದಿಲ್ಲ.

ಹೀಗಿದ್ದಾಗ ಒಮ್ಮೆ ನಾನು ಅಜಿತ್ ದಿವಾನಿ ಎಂಬ ವ್ಯಕ್ತಿಯನ್ನು ಭೇಟಿ ಮಾಡುವ ಪ್ರಸಂಗ ಬಂತು. ಅವನು ನಟಿ ಮಂದಾಕಿನಿಗೆ ದಾವೂದ್ ಇಬ್ರಾಹಿಂ ಜೊತೆ ಅಫೇರ್ ಇದ್ದಾಗ ಆಕೆಗೆ ಸೆಕ್ರೆಟರಿಯಾಗಿ ಕೆಲಸ ನಿರ್ವಹಿಸಿದ್ದ. ಈ ವಿಷಯ ನನಗೆ ಬೇರೆ ಯಾರಿಂದಲೋ ಆಮೇಲೆ ಗೊತ್ತಾಯ್ತು. ಅಜಿತ್‍ನೊಂದಿಗೆ ಮಾತಾಡುವಾಗ ಆತ ಒಬ್ಬ ಗ್ಯಾಂಗ್ ಸ್ಟರ್ ಕುರಿತು ಹೇಳುತ್ತಿದ್ದ.ಅವನ ಸೋದರನನ್ನು ಪೊಲೀಸರು ಕೊಂದಿದ್ದರು. ವಿಷಯ ತಿಳಿದು ಅವನನ್ನು ಸಮಾಧಾನ ಪಡಿಸಲು ಅಜಿತ್ ಶವವಿರುವ ಜಾಗಕ್ಕೆ ಹೋಗಿದ್ದ.

ಅಲ್ಲಿ ಅವನ ಗೆಳೆಯ ತನ್ನ ತಮ್ಮನ ಶವದ ಕಡೆ ನೋಡುತ್ತಾ ಬಾಯಿಗೆ ಬಂದಂತೆ ಬೈಯುತ್ತಿದ್ದ. ತನ್ನ ಮಾತು ಕೇಳದ್ದಕ್ಕೆ ಈ ಗತಿ ಬಂತೆಂದು ಕಂಟ್ರೋಲ್ ತಪ್ಪಿ ವಾಚಾಮಗೋಚರ ಬೈಗುಳ ಸುರಿಮಳೆಗೈಯುತ್ತಿದ್ದ. ಬೆಚ್ಚಿಬಿದ್ದ ಅಜಿತ್ ಪಕ್ಕದವನನ್ನು ‘ಸತ್ತವನನ್ನು ಯಾರಾದರೂ ಈ ರೀತಿ ಬೈಯುತ್ತಾರ?’ ಎಂದು ಪ್ರಶ್ನಿಸಿದನಂತೆ. ಅವನು ಉತ್ತರಿಸಲಿಲ್ಲ. ಇಲ್ಲಿ ನನಗೆ ಅನಿಸಿದ್ದು ತನ್ನ ಮೇಲಿನ ವಿಪರೀತ ಆತ್ಮವಿಶ್ವಾಸದಿಂದ ಬದುಕುತ್ತಿದ್ದ ಆ ಗ್ಯಾಂಗ್ ಸ್ಟರ್ ಅವನ ಸೊದರ ಹೇಳಿದ್ದ ಸೂಕ್ಷ್ಮಗಳನ್ನು ಪಾಲಿಸಿರಲಿಲ್ಲ. ಬಹುಶಃ ಇದೇ ಅವನನ್ನು ವಿಪರೀತ ಸಿಟ್ಟಿಗೆಎಡೆಮಾಡಿತ್ತು. ಅವನ ದುಃಖ ಬೈಗುಳ ರೂಪದಲ್ಲಿ ಹೊರಬಿದ್ದಿತ್ತು.

ನಾವೆಲ್ಲಾ ಸಮಾಜದ ಶಾಲೆಗಳಿಂದ, ಪೋಷಕರಿಂದ ಕಲಿತ ಶಿಸ್ತು,…ಜ್ಞಾನ, ಶಿಕ್ಷಣಗಳಿಂದ ನಾಗರೀಕರಾಗುತ್ತೇವೆ. ಆದರೆ ಸಮಾಜಘಾತುಕ ವ್ಯಕ್ತಿಗಳ ನಡತೆ, ಅವರ ಜೀವನ ಶೈಲಿ, ಮನೋಭಾವ ಇವೆಲ್ಲಾ ಭಿನ್ನವಾಗಿರುತ್ತವೆ. ಕಾಡಬೆಕ್ಕಿಗೂ ನಾಡಬೆಕ್ಕಿಗೂ ಇರುವ ವ್ಯತ್ಯಾಸವನ್ನು ಅವರ ಕಣ್ಣುಗಳಲ್ಲಿ ಕಾಣಬಹುದು. ಈ ರೀತಿ ಬೇರೆ ಬೇರೆ ವಿಶ್ಲೇಷಣೆಗಳಿಂದ ಹೊಸ ಹೊಸ ಪಾತ್ರಗಳಿಂದ ನನಗಿಷ್ಟವಾದ ‘ಸತ್ಯ’ ಸಿನಿಮಾ ಮಾಡಿದ್ದು.

‍ಲೇಖಕರು Avadhi

13 July, 2018

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading