ನಾನು ರಚಿಸಿದ ಪಾತ್ರಗಳೆಲ್ಲ ನನ್ನೊಡನೆಯೇ ಮಾತಿಗಿಳಿದವು…

ಅಪರೂಪದ ನಾಟಕಕಾರ್ತಿ ಸುಧಾ ಆಡುಕಳ

ಸುಧಾ ಚಿದಾನಂದಗೌಡ / ಹಗರಿಬೊಮ್ಮನಹಳ್ಳಿ

ಬರವಣಿಗೆಯನ್ನು ನೆಚ್ಚಿಕೊಂಡ ಮಹಿಳೆ ನಾಟಕ ಬರೆಯುವ ಸಾಹಸಕ್ಕೆ ಕೈಹಾಕುವುದೇ ಒಂದು ಅಪರೂಪದ ಸಂದರ್ಭ. ಜಗತಿನ ಪ್ರಸಿದ್ಧರೆಲ್ಲರೂ ಮಹಿಳೆಯನ್ನು ಅದ್ಭುತವಾಗಿ, ಏಕಮೇವಾದ್ವಿತೀಯವಾಗಿ ಪುನರ್ ಸೃಷ್ಟಿಸಿದ್ದಾರೆ. ಬಹುತೇಕ ಪ್ರಸಿದ್ಧ ನಾಟಕಗಳಲ್ಲಿ ವಿಜೃಂಬಿಸಿರುವುದು ಸ್ತ್ರೀ ಪಾತ್ರಗಳೇ. ಇವೆಲ್ಲಾ ಪರಕಾಯ ಪ್ರವೇಶದ ಮಾತಾಯಿತು. ತನ್ನ ಕಾಯದ ಕುರಿತು ಹೆಣ್ಣು ಚಿಂತಿಸಿದ್ದು, ಚಿತ್ರಿಸಿದ್ದು ಯಾವಾಗ? ಏಕಾಗಿ? ಇಂಥ ಪ್ರಶ್ನೆಗಳು ಮನಸಿನಲ್ಲಿ ಹುಟ್ಟಿಕೊಂಡಾಗ ಬುದ್ಧಿಯು ನಾಟಕಗಳನ್ನು ಬರೆದ ಲೇಖಕಿಯರನ್ನು ಹುಡುಕುತ್ತದೆ. ಸಂಖ್ಯೆಯಲ್ಲಿ ತುಂಬಾ ಕಡಿಮೆಯಿರುವ ನಾಟಕಕಾರ್ತಿಯರು ಬರೆದಷ್ಟನ್ನೇ ಪ್ರೇಕ್ಷಕರು, ಓದುಗರು ಒಮ್ಮೆ ತಿರುಗಿ ನೋಡಿ, ನಿಂತು ಮತ್ತೊಮ್ಮೆ ಯೋಚಿಸುವಂತೆ ಬರೆದಿದ್ದಾರೆ. ಅಂಥಾ ಬೆರಳೆಣಿಕೆಯ ನಾಟಕಕಾರ್ತಿಯರಲ್ಲಿ ಸುಧಾ ಆಡುಕಳ ಒಬ್ಬರು.

ಸದಭಿರುಚಿಯ ತುಡಿತ ಜೊತೆಗೆ ಸಮಾನಾಸಕ್ತರ ಸಹವಾಸ ತಮಗೆ ಲಭ್ಯವಾದ ಬಗೆಯನ್ನು ಹೇಳಿಕೊಳ್ಳುವಾಗ ಸುಧಾ ದನಿಯಲ್ಲಿ ಹೊಸಹುರುಪು. ಡಿಗ್ರಿಯಲ್ಲಿದ್ದಾಗ ನಾಟಕಗಳನ್ನು ನೋಡುವುದು ಹವ್ಯಾಸವಾಗಿತ್ತು. ಅನಂತರ ಕೆಲದಿನ ನಾನು ಸುಳ್ಯದಲ್ಲಿದ್ದಾಗ ಜೀವನರಾಮ್ ರಂಗಚಟುವಟಿಕೆಗಳನ್ನು ಹತ್ತಿರದಿಂದ ನೋಡುತ್ತಿದ್ದೆ. ಹಾಗಾಗಿ ನಾಟಕಗಳ ಪ್ರಭಾವ ನನ್ನ ಮೇಲೆ ಬಾಲ್ಯದಿಂದಲೈ ಇತ್ತು. ಆದರೆ ಏನು ಬರೆಯಬೇಕು, ಎಷ್ಟು, ಹೇಗೆ ಬರೆಯಬೇಕು ಇತ್ಯಾದಿ ಸುಮ್ಮನೆ ಯೋಚಿಸುತ್ತಿದ್ದೆ ಅಷ್ಟೇ” ಎಂದು ಆರಂಭದ ದಿನಗಳನ್ನು ನೆನಪಿಸಿಕೊಂಡರು ಸುಧಾ ಆಡುಕಳ.

ಗಣಿತದ ಉಪನ್ಯಾಸಕಿಯಾದ ಸುಧಾ ಆಡುಕಳ ಬರೆಯುವ ತುಡಿತದಲ್ಲಿ ಬೇಯುತ್ತಿದ್ದವರು. ಓದಿದ್ದು ಶುದ್ಧ ವಿಜ್ಞಾನ. ಸೆಳೆಯುತ್ತಿದ್ದು ಸಾಹಿತ್ಯ. ಗಣಿತವನ್ನೂ, ಈ ಬರೆಯುವ ಅಭಿಲಾಷೆಯನ್ನೂ ಒಟ್ಟಿಗೆ ಕಟ್ಟಿಕೊಂಡು ಅವರು ಬಹಳ ಏಗಿದವರು. ಏಕೆಂದರೆ ನೌಕರಿಯ ಜಂಜಾಟದಲ್ಲಿ ಒಂದು ಬರವಣಿಗೆಯ ರೂಪವೇ ಅವರ ಕೈಗೆ ಹತ್ತದೇ ಜಾರಿಜಾರಿ ಹೋಗುತ್ತಿತ್ತು. ಅವರ ಮಾತಿನಲ್ಲೇ ಹೇಳುವುದಾದರೆ “ಕವನ ಬರೆಯಲು ಯತ್ನಿಸಿದೆ. ಕಥೆಯನ್ನೂ ಪ್ರಯತ್ನಿಸಿದೆ. ಯಾವುದಕ್ಕೂ ಫಾರ್ಮ್ ಎಂಬುದೇ ಲಭಿಸಲಿಲ್ಲ. ಜಾಳುಜಾಳು, ವಾಚ್ಯ ಎಂದೆಲ್ಲಾ ಎನಿಸಿ ನಿಲ್ಲಿಸಿಬಿಡುತ್ತಿದ್ದೆ” ಹೀಗೆ ಮಾನಸಿಕವಾಗಿ, ಬೌದ್ಧಿಕವಾಗಿ ಸಾಕಷ್ಟು ಒದ್ದಾಡಿದ ಸುಧಾ ಆಡುಕಳ ಬರೆಯುವ ಯಾವ ಅವಸರಕ್ಕೂ ಬೀಳದೇ ಹೋದದ್ದೇ ಹೊಸದಾರಿಗೆ ಕಾರಣವಾಯ್ತು.

“ಚಿಂತನ ಉತ್ತರಕನ್ನಡ ದ ಪ್ರಭಾವಕ್ಕೆ ಬಂದಿದ್ದೇ ಅವರಿಗೊಂದು ಸರಿಯಾದ, ಸ್ಪಷ್ಟವಾದ ಹೊಳಹು ದೊರೆಯಲು ಸಾಧ್ಯವಾಯಿತು. ಜೊತೆಗೆ ಶ್ರೀಪಾದ ಭಟ್ ಮಕ್ಕಳಿಗಾಗಿ ನಡೆಸುತ್ತಿದ್ದ ತರಬೇತಿ ಶಿಬಿರಗಳು ಒಂದು ರೀತಿಯಲ್ಲಿ ಹೊಸ ಪ್ರತಿಭೆಗಳ, ಹೊಸಪ್ರಯೋಗಗಳ ವಿಫುಲ ತಯಾರಿಕೆಯ ಕಾರ್ಖಾನೆಯಂತಿತ್ತು. ಅಲ್ಲಿ ಸುಧಾ ಮಕ್ಕಳಿಗಾಗಿಯೇ ಸುಮಾರು ಇಪ್ಪತ್ತಕ್ಕೂ ಹೆಚ್ಚು ಪ್ರೇರಣೆಗಳನ್ನಿಟ್ಟುಕೊಂಡು ಚಿಕ್ಕಚಿಕ್ಕ ನಾಟಕಗಳನ್ನು ಯಶಸ್ವಿಯಾಗಿ ಹೆಣೆದರು.

ಒಮ್ಮೆ ೨೫೦ ಮಕ್ಕಳಿಗೆ ಒಮ್ಮೆಲೇ ಐದಾರು ಖ್ಯಾತ ನಿರ್ದೇಶಕರುಗಳು ಗುಂಪುಗುಂಪಾಗಿ ತರಬೇತಿ ಕೊಟ್ಟು, ಕೊನೆಯದಿನ ಮೂರೂವರೆ ತಾಸುಗಳ ಒಂದು ಶೋ ಕೊಡಲು ನಿರ್ಧಾರವಾದಾಗ ಅದನ್ನು ರಚಿಸಿಕೊಟ್ಟದ್ದು ಸುಧಾ ಆಡುಕಳ ಅವರೇ. ಮತ್ತು ಅದಕ್ಕಾಗಿ ಅವರು ಮೊರೆಹೋಗಿದ್ದು ರಾಮಾಯಣವನ್ನು. ಆದರೆ ಅವರು ಚಿತ್ರಿಸಿದ್ದು ವಿಭಿನ್ನ ರಾಮನನ್ನು. ಶಿವಧನಸ್ಸನ್ನು ಮುರಿಯುವಾಗ ವೀರಗಾಸೆಯ ಶೈಲಿಯಲ್ಲಿ ನೃತ್ಯರೂಪಕದಂತೆ ಅದು ಚಿತ್ರಿತವಾದಾಗ ನೋಡುತ್ತಿದ್ದವರು ಅರಮನೆಯನ್ನೇ ಮರೆತರು. ಕಾಡು, ನೈಸರ್ಗಿಕ ಪರಿಸರದಲ್ಲಿ ಈ ರಾಮ ಸೃಷ್ಟಿಗೊಂಡು, ಪ್ರೇಕ್ಷಕರ ಮನಸೂರೆಗೊಂಡಿದ್ದ.

ಮತ್ತೊಂದು ಇಂಥಹದ್ದೇ  ಮಕ್ಕಳ ತರಬೇತಿ ಶಿಬಿರಕ್ಕೆ ಬರೆದದ್ದು ನಂದಗೋಕುಲ. ಶ್ರೀಕೃಷ್ಣನನ್ನು ಕೇಂದ್ರವಾಗಿಟ್ಟುಕೊಂಡು ಸೃಷ್ಟಿಸಿದ ಹೊಸಬಗೆಯ ಒಳನೋಟಗಳನ್ನುಳ್ಳ ನಾಟಕ. ಸುಧಾ ಮೊದಲು ಬರೆದದ್ದು ರವೀಂದ್ರನಾಥ ಟ್ಯಾಗೋರ್ ಅವರ ಕಥೆಯನ್ನಾಧರಿಸಿದ ಚಿಕ್ಕ ಮಕ್ಕಳ ನಾಟಕ. ಚಿಂತನ, ಮಕ್ಕಳ ತರಬೇತಿ ಶಿಬಿರಗಳು, ಹೊಸ ಪ್ರಯೋಗಗಳ ಕುರಿತು ತುಡಿಯುವ ನಿರ್ದೇಶಕರು, ಅಷ್ಟೇ ಆಸಕ್ತರಾದ ಮಕ್ಕಳು – ಹೀಗೆ ಒಂದು ಒಂದು ಸದಭಿರುಚಿಯ, ಆಸಕ್ತ ವಾತಾವರಣ ಹೇಗೆ ಒಬ್ಬ ಮಹಿಳೆಯನ್ನು ಹೊಸನಿಟ್ಟಿನಲ್ಲಿ ಬೆಳೆಸಬಹುದು ಎಂಬುದಕ್ಕೆ ಸುಧಾ ಅವರೇ ಸಾಕ್ಷಿ.

ಸುಧಾ ನಿಜಕ್ಕೂ ಹೊಸದಾಗಿ ಸೃಷ್ಟಿಸಿದ ಅದ್ಭುತ ಪಾತ್ರ ರಾಧಾ. ಇವಳೊಬ್ಬಳು ಹೊಸರೀತಿಯ ರಾಧೇ. ವಿಪ್ರಲಂಬ ಶೃಂಗಾರದ ರಾಧೆಯ ಬದುಕು ಕೃಷ್ಣನ ನಿರ್ಗಮನದ ನಂತರ ನಿಂತೇಹೋಯಿತೇ? ಅಥವಾ ಮುಂದುವರಿಯಿತೇ? ಮುಂದುವರಿದಿದ್ದೇ ಆದರೆ ಹೇಗೆ? ಯಾವ ರೀತಿಯಲ್ಲಿ? ಈ ಐಡಿಯಾ ಸುಧಾ ಅವರಿಗೆ ಹೊಳೆದದ್ದು ಆಧುನಿಕ ಮಹಿಳೆಯ ಪ್ರೇರಣೆಯಿಂದಲೇ. ಇಂದು ಅನೇಕ ಮಹಿಳೆಯರು ಒಂಟಿಯಾಗಿ, ಸ್ವತಂತ್ರವಾಗಿ, ಅರಾಮವಾಗಿ ಬದುಕುತ್ತಿದ್ದಾರೆ. ಇಂಥ ಜೀವನ ನಡೆಸುವ ನಿರ್ಧಾರ ಪ್ರತಿಬಾರಿಯೂ ಅನಿವಾರ್ಯವೇ ಆಗಿರಬೇಕಿಲ್ಲ. ಅದು ಅವರ ಆಯ್ಕೆಯೂ ಆಗಿರಬಹುದು. ಹೊಸ ಜೀವನಶೈಲಿ ಮಹಿಳೆಯನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಿದೆ. ಸ್ವತಃ ಆಕೆ ಕುಟುಂಬಕ್ಕೆ ಆಸರೆಯಾಗಿ ಒದಗಬಲ್ಲಳು ಮತ್ತು ದಾಂಪತ್ಯಜೀವನದಿಂದ ದೂರ ಉಳಿಯುವ ನಿರ್ಧಾರವನ್ನು ತೆಗೆದುಕೊಂಡರೂ ಅದರಲ್ಲಿ ತಪ್ಪೇನಿದೆ? ಹೊಸ ಸಮಾಜದ ಹೊಸತಲೆಮಾರಿನ ಈ ಮನೋಭಾವದ ಮಹಿಳೆಯರ ಆಲೋಚನೆಗಳ ಬೀಜ ರಾಧೆಯ ಬದುಕಿನಲ್ಲೇ ಇದೆ ಎಂಬ ಆಲೋಚನೆ ಸುಧಾ ಅವರಿಗೆ ಹೊಳೆದಾಗ ಹುಟ್ಟಿದವಳು ಹೊಸ “ರಾಧೆ”

ಮಂಜುಳಾ ಸುಬ್ರಮಣ್ಯ ಈ ಏಕವ್ಯಕ್ತಿ ಪ್ರದರ್ಶನವನ್ನು ಅತ್ಯಂತ ಯಶಸ್ವಿಯಾಗಿ ಅಭಿನಯಿಸಿದರು. ಅದರೊಟ್ಟಿಗೆ ಸೊಗಸಾದ ರಂಗಸಜ್ಜಿಕೆ, ಮಧುರವಾದ ಸಂಗೀತ, ಶ್ರೀಪಾದ ಭಟ್ಟರ ನಿರ್ದೇಶನದಿಂದಾ ರಾಧೆ ಈ ಹೊತ್ತಿನ ಯಶಸ್ವಿ ಏಕಪ್ರಯೋಗಗಳಲ್ಲಿ ಒಂದು.
“ಚಿತ್ರಾ” ಹುಟ್ಟಿದ್ದು ಪುನಃ ರವೀಂದ್ರರ ಕೃತಿಯನ್ನು ಬುನಾದಿಯನ್ನಾಗಿಸಿಕೊಂಡೇ. ಚಿತ್ರಂಗದೆಯ ವ್ಯಕ್ತಿತ್ವ ಈ ನಾಟಕದಲ್ಲಿ ಹೊಸದೇ ಆಯಾಮವನ್ನು ಪಡೆದುಕೊಂಡಿದೆ. ನಾಟಕ ರೂಪುಗೊಳ್ಳುತ್ತಾ ಹೋದಂತೆಲ್ಲಾ ಇಲ್ಲೊಂದು ಹಾಡು, ಅಲ್ಲೊಂದಿಷ್ಟು ಪುಟ್ಟಪುಟ್ಟ ನಗೆಚಾಟಿಕೆಯ ಮಾತು ಹೀಗೆ ಬರೆಯುತ್ತಾ ಹೋದ ಆಡುಕಳ “ನಾಟಕದೊಂದಿಗೆ ನಾನು ಬೆಳೆದೆ” ಎಂದು ಭಾವುಕವಾಗಿ ಹೇಳುತ್ತಾರೆ.

“ನೃತ್ಯಗಾಥಾ”ದಲ್ಲಿ ಮಾಡಿದ ಪ್ರಯೋಗವೆಂದರೆ ಅನೇಕ ಹೆಣ್ಣಮಕ್ಕಳು ನೃತ್ಯವನ್ನು ಶೃದ್ಧೆಯಿಂದಲೇ ಕಲಿಯುತ್ತಾರೆ. ಅನಂತರ ವಿವಾಹವಾದ ಬಳಿಕ ಬೇರೊಂದು ಹೊಸಲೋಕಕ್ಕೆ ತೆರೆದುಕೊಂಡು ನೃತ್ಯವನ್ನು ಅಲ್ಲಿಗೇ ಸಮಾಪ್ತಗೊಳಿಸುತ್ತಾರೆ. ಹಾಗಾದರೆ ಇವರೆಲ್ಲರ ಬದುಕಿನಲ್ಲಿ ನೃತ್ಯವೆಂದರೆ ಏನು? ಈ ಕಥಾವಸ್ತುವನ್ನು ಕೇಂದ್ರವಾಗಿಟ್ಟುಕೊಂಡು ನಾಟಕ ಹೆಣೆಯುವಾಗ ಸುಧಾ ಮೂವರು ಪ್ರಸಿದ್ಧ ನೃತ್ಯಗಾತಿಯರನ್ನೇ ಪಾತ್ರವಾಗಿಸಿಕೊಂಡರು. ನೀಲಾಂಜನೆ, ಶಾಂತಲೆ ಮತ್ತು ಉಮ್ರಾವ್ ಜಾನ್. ಇವರೊಟ್ಟಿಗೆ ಮತ್ತೊಬ್ಬಳು ಹೊಸ ನೃತ್ಯಗಾತಿ ತನ್ನ ನೃತ್ಯದ ಭಾಷೆಯಲ್ಲಿಯೇ ಹೊಸಲೋಕವೊಂದನ್ನು ತೆರೆದಿಡುತ್ತಾಳೆ.

ಕೆಂಪು ಕಣಗಿಲೆ ಮತ್ತೊಂದು ವಿಭಿನ್ನಪ್ರಯೋಗ. ಯುದ್ಧದ ಬದಲಿಗೆ ಗೆಜ್ಜೆಯನ್ನೂ, ಕ್ರೋಧದ ಬದಲಿಗೆ ಸಂಗೀತವನ್ನೂ ಕೈಗೆತ್ತಿಕೊಳ್ಳುವ ನಾಯಕಿ ಯುದ್ಧಾಸಕ್ತನಾದ ರಾಜನನ್ನು ಸಾಂಸ್ಕೃತಿಕವಾಗಿ ಮುಖಾಮುಖಿಯಾಗುತ್ತಾಳೆ. ಈ ಪ್ರಯೋಗವನ್ನು ಮಂಡ್ಯ ರಮೇಶ್ ನೇತೃತ್ವದ ಮೈಸೂರಿನ ನಟನ ರಂಗತಂಡ ಅನೇಕ ಬಾರಿ ಪ್ರಯೋಗಿಸಿದೆ ಮತ್ತು ಪ್ರಯೋಗಗಳು ಮುಂದುವರಿದಿವೆ.

ಇವೆಲ್ಲಾ ಪಾತ್ರಗಳೊಂದಿಗೆ ಸುಧಾ ಮತ್ತೊಮ್ಮೆ ಮುಖಾಮುಖಿಯಾದದ್ದು, ಪಾತ್ರಗಳನ್ನು ಹೊಸ ಸಾಧ್ಯತೆಯೊಂದಿಗೆ ವಿಸ್ತರಿಸಿಕೊಂಡದ್ದು “ಬಕುಲದ ಬಾಗಿಲಿನಿಂದ” ಅಂಕಣ ಬರಹದಲ್ಲಿ. ‘ಅವಧಿ’ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟಗೊಂಡು, ಇದೀಗ ಪುಸ್ತಕರೂಪದಲ್ಲಿಯೂ ಓದುಗರ ಕೈಸೇರಿರುವ ಬಕುಲದ ಹೂಗಳ ಪರಿಮಳ ಅವರಲ್ಲಿ ಮತ್ತೆ ಹೊಸ ಪಾತ್ರಸೃಷ್ಟಿಗಳ ಹೊಸಿಲಲ್ಲಿ ನಿಲ್ಲಿಸಿದಂತಿದೆ.

“ಒಂದೆಡೆ ನಾನು ರಚಿಸಿದ ಪಾತ್ರಗಳೆಲ್ಲ ಕುಳಿತು ನನ್ನೊಡನೆಯೇ ಚರ್ಚಿಸಿದಂತೆ ಈ ಲೇಖನಗಳನ್ನು ಬರೆಯುವಾಗ ಅನಿಸುತ್ತಿತ್ತು. ಒಮ್ಮೆ ಓದಿ ಪುಸ್ತಕವನ್ನು” ಎಂದು ನಮ್ರವಾಗಿ, ಆಪ್ತವಾಗಿ, ಮುಗ್ಧವಾಗಿಯೂ ಹೇಳಿಕೊಳ್ಳುವ ಸುಧಾ ರಂಗದ ಮೇಲಿನ ವ್ಯಕ್ತಿತ್ವಗಳನ್ನು ಈ ಅಂಕಣದ ಮೂಲಕ ಬರಹಕ್ಕೂ ಯಶಸ್ವಿಯಾಗಿ ಇಳಿಸಿದ್ದಾರೆ.

“ನಾನು ಹಳ್ಳಿಯವಳು. ನಾನು ಸೃಷ್ಟಿಸುವುದೂ ನೆಲಮೂಲದ ಯೋಚನೆಗಳನ್ನೇ” ಎಂಬ ಅವರ ಮಾತು ಅಪ್ಪಟ ಪ್ರತಿಭೆಗಳು ಹೊರಹೊಮ್ಮುವುದು ಗ್ರಾಮೀಣ ಪ್ರದೇಶಗಳಿಂದಲೇ ಎಂಬುದಕ್ಕೆ ಉದಾಹರಣೆ. “ಕಥೆ ಕವಿತೆಯಲ್ಲಿ ಮುಳುಗಿಹೋಗಿರುವ ಯುವಕಯುವತಿಯರು ರಣಗಕೃತಿಗಳನ್ನು ಬರೆಯಲು ಯತ್ನಿಸಲಿ. ಅದು ಅವರ ವ್ಯಕ್ತಿತ್ವದಲ್ಲಿಯೂ, ಆಲೋಚನಾ ಧಾಟಿಯಲ್ಲಿಯೂ ಖಂಡಿತಾ ಬದಲಾವಣೆಯನ್ನೂ ತರುತ್ತೆ” ಎನ್ನುತ್ತಾರೆ ಅವರು.

“ಮತ್ತೆ ಮುಂದೆ..? ಹೊಸಪ್ರಯೋಗಗಳು..?” ಎಂದು ಪ್ರಶ್ನಿಸಿದಾಗ ಸುಧಾ ಮತ್ತೆ ಭಾವುಕತೆಯಲ್ಲಿ ಮುಳುಗುತ್ತಾರೆ. “ಪಾತ್ರಗಳನ್ನು ನಾನು ಬರೆದೆನೋ, ಅವರೇ ನನ್ನ ಮೂಲಕ ಹುಟ್ಟಿದರೋ ಹೇಳಲಿಕ್ಕಾಗದು. ಪ್ರತಿಬಾರಿ ಹೊಸತೊಂದನ್ನು ಸೇರಿಸುವಾಗ ನನ್ನಲ್ಲೊಂದು ಹೊಸತನ ಮೂಡಿದಂತೆನಿಸುತದೆ” ಎಂದು ವಿವರಿಸುತ್ತಾ ಹೋದ ಸಹೃದಯಿ ನಾಟಕಕಾರ್ತಿ ಸುಧಾ ಇನ್ನಷ್ಟು ಮತ್ತಷ್ಟು ಹೊಸ ಸೃಷ್ಟಿಗಳನ್ನು ಕನ್ನಡ ರಂಗಭೂಮಿಗೆ ನೀಡುವುದರಲ್ಲಿ ಸಂಶಯವಿಲ್ಲ.

ಈ ಕೃತಿಯನ್ನು ಕೊಳ್ಳಲು-

Home

‍ಲೇಖಕರು avadhi

July 17, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: