ರಘುನಂದನ್ ಅವರಿಂದ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ತಿರಸ್ಕಾರ

ಖ್ಯಾತ ರಂಗ ನಿರ್ದೇಶಕ ಎಸ್ ರಘುನಂದನ್ ಅವರು ತಮಗೆ ಘೋಷಿಸಲಾದ ಕೇಂದ್ರ ಸಂಗೀತ ನಾಟಕ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು ಕೇಂದ್ರ ಸರ್ಕಾರ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ನಾಶಗೊಳಿಸುತ್ತಿರುವ ಕ್ರಮವನ್ನು ವಿರೋಧಿಸಿ ಪ್ರಶಸ್ತಿ ಸ್ವೀಕರಿಸದಿರಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ

ನಾನು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸ್ವೀಕರಿಸುವುದಿಲ್ಲ, ಏಕೆಂದರೆ?

“ಸಂಗೀತ ನಾಟಕ ಅಕಾಡೆಮಿ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು ತಾನು ಶುರುವಾದಂದಿನಿಂದಲೂ ತನ್ನ ಸ್ವಾಯತ್ತತೆಯನ್ನು ಬಹಳಮಟ್ಟಿಗೆ ಕಾಪಾಡಿಕೊಂಡು ಬಂದಿದೆ. ಅಂಥ ಅಕಾಡೆಮಿಯು 2018ರ ಇಸವಿಯ ತನ್ನ ಪ್ರಶಸ್ತಿಯನ್ನು, ಬೇರೆ ಹಲವರಿಗೆ ನೀಡುವುದರೊಂದಿಗೆ, ನನಗೂ ನೀಡಿದ್ದಕ್ಕಾಗಿ ಅಕಾಡೆಮಿಗೆ ಕೃತಜ್ಞನಾಗಿದ್ದೇನೆ.

ಆದರೆ, ಈವತ್ತು ದೇಶದ ಹಲವು ಕಡೆ, ಮತ ಧರ್ಮದ ಹೆಸರಿನಲ್ಲಿ, ಪೊರೆಯುವ ದೇವರ ಹೆಸರಿನಲ್ಲಿ, ತಿನ್ನುವ ಆಹಾರದ ಹೆಸರಿನಲ್ಲಿ ಗುಂಪುಹಲ್ಲೆಗಳು, ಕಗ್ಗೊಲೆಗಳು ನಡೆಯುತ್ತಿವೆ. ಅಧಿಕಾರದಲ್ಲಿರುವವರು ಇಂಥ ಭೀಕರ ಹಿಂಸಾಚಾರ ಮತ್ತು ಕಗ್ಗೊಲೆಗಳಿಗೆ ಕಾರಣವಾದ ದ್ವೇಷವನ್ನು ಅಂತರಜಾಲ ತಂತ್ರಜ್ಞಾನದ ಎಲ್ಲ ಪಟ್ಟುಗಳನ್ನು ಬಳಸಿ ಜನರ ಮನಸ್ಸಿನಲ್ಲಿ ತುಂಬುತ್ತಿದ್ದಾರೆ. ಶಿಕ್ಷಣದ ಅತ್ಯುನ್ನತ ಸಂಸ್ಥೆಗಳಿಂದ ಮೊದಲುಗೊಂಡು ಕೆಳಮಟ್ಟದ ಶಾಲಾ ಕಾಲೇಜುಗಳವರೆಗೆ, ಎಲ್ಲೆಡೆಯೂ, ಮತಾಂಧತೆಯಿಂದ ಕೂಡಿದ ಪಾಠಗಳನ್ನು, ವಿಚಾರಗಳನ್ನು ವಿದ್ಯಾರ್ಥಿಗಳ ತಲೆಗಳಲ್ಲಿ ತುಂಬುವ ಪ್ರಯತ್ನಗಳು ನಡೆಯುತ್ತಿದೆ. ಭಾರತೀಯತೆಯ, ವಸುಧೈವ ಕುಟುಂಬಮ್ ಅನ್ನುವುದರ ಅರ್ಥವನ್ನೇ ತಿರುಚಲಾಗುತ್ತಿದೆ. ಆದರೆ, ಸಂಕರವೇ ಶಿವವಲ್ಲವೇ? ‘ಅಯ್ಯೋ, ನನ್ನ ದೇಶವೇ’ ಎಂದು ನನ್ನಂಥ ಕೋಟ್ಯಂತರ ಜನರು ಹಲುಬುವಂತಾಗಿದೆ.

ಭಾರತ ಮತ್ತು ವಿಶಾಲ ಜಗತ್ತುಗಳ ಭವಿಷ್ಯವನ್ನು ರೂಪಿಸಬೇಕಾಗಿರುವ ಕನ್ಹಯ್ಯಾಕುಮಾರ್ ಅಂಥ ಯುವಕರು ಹಲವರ ಮೇಲೆ, ಅವರು ವಿಶ್ವವಿದ್ಯಾಲಯಗಳಲ್ಲಿ ಓದುತ್ತಿದ್ದಾಗಲೇ, ದೇಶದ್ರೋಹದ ಆರೋಪವನ್ನು ಹೊರಿಸಲಾಗಿದ್ದು, ಅವರು ನ್ಯಾಯಾಲಯಗಳಲ್ಲಿ ಆ ಪ್ರಕರಣವನ್ನು ಇನ್ನೂ ಎದುರಿಸುತ್ತಲೇ ಇದ್ದಾರೆ. ದೇಶದ ಅತ್ಯಂತ ಶೋಷಿತರು ಮತ್ತು ದಲಿತ ಜನರ ಪರವಾಗಿ ಕೋರ್ಟು-ಕಚೇರಿಗಳಲ್ಲಿ ವಾದಿಸುತ್ತ, ಅವರ ಅಪಾರ ಕಷ್ಟಗಳನ್ನು ಕುರಿತು ಲೇಖನ ಮತ್ತು ಪುಸ್ತಕಗಳನ್ನು ಬರೆಯುತ್ತ, ಅವರ ಹೋರಾಟವು ಅಹಿಂಸಾ ಮಾರ್ಗದಲ್ಲಿ ನಡೆಯುವಂತೆ ಸಲಹೆ-ಸಹಕಾರ ನೀಡುತ್ತ, ಭಾರತದ ಸಂವಿಧಾನದ ಎಲ್ಲ ವಿಧಿವಿಧಾನಗಳನ್ನು ಪಾಲಿಸುತ್ತ, ಆ ನಮ್ಮ ಸಂವಿಧಾನದ ಜೀವಾಳವನ್ನು ಎತ್ತಿಹಿಡಿಯುತ್ತ, ನಿಸ್ಪೃಹೆಯಿಂದ, ತಮ್ಮತಮ್ಮದೇ ರೀತಿಯಲ್ಲಿ ಹೋರಾಡುತ್ತ ಬಂದಿರುವ ಹಲವರ ವಿರುದ್ಧ ಯುಎಪಿಎ ಕಾಯಿದೆಯಡಿ ವಿಚಾರಣೆ ನಡೆಯುತ್ತಿದ್ದು, ಅವರಲ್ಲಿ ಹೆಚ್ಚಿನವರು ಜಾಮೀನು ಕೂಡ ಸಿಕ್ಕದೆ ಸೆರೆಮನೆಯಲ್ಲಿದ್ದಾರೆ. ದೇಶದ ಅತ್ಯಂತ ದಮನಿತರ ದನಿಯಾಗಿರುವವರು ಈ ಧೀಮಂತರು, ಧೀಮಂತೆಯರು. ಇಂಥವರನ್ನು ನಿರ್ವೀರ್ಯಗೊಳಿಸಿ, ಇವರ ಬಾಯಿಮುಚ್ಚಿಸಿದರೆ ಆ ದಮನಿತರ ದನಿಯನ್ನು ಅಷ್ಟರಮಟ್ಟಿಗೆ ಅಡಗಿಸಬಹುದು ಎಂದು ಪ್ರಭುತ್ವವು ನಿರ್ಧರಿಸಿದಂತಿದೆ. ಇದೆಲ್ಲ ಹೊಸದಲ್ಲ; ಈಹಿಂದೆ ಅಧಿಕಾರದಲ್ಲಿದ್ದವರು ಕೂಡ ಹೀಗೆಯೇ ಪ್ರಭುತ್ವದ ಶಕ್ತಿಯ ದುರ್ವಿನಿಯೋಗ ಮಾಡಿದ್ದಾರೆ.

ನಿಜವಾದ ದೇಶಪ್ರೇಮಿಗಳು, ಲೋಕೋಪಕಾರಿಗಳು, ಧರ್ಮ ಮಾರ್ಗಿಗಳು ಆಗಿರುವ, ಮತ್ತು ಸಕಲ ಚರಾಚರಕ್ಕೆ ಲೇಸನ್ನೇ ಬಯಸುತ್ತ, ಲೇಸನ್ನೇ ಉಂಟುಮಾಡಲು ಬದುಕುತ್ತಿರುವ ಇಂಥವರಿಗೆ ನನ್ನ ದೇಶದಲ್ಲಿ ಹೀಗೆ ಅನ್ಯಾಯವಾಗುತ್ತಿರುವಾಗ, ರಂಗಭೂಮಿಯ ಕಲಾವಿದನಾಗಿ, ಕವಿ-ನಾಟಕಕಾರನಾಗಿ, ಈ ದೇಶ ಮತ್ತು ಲೋಕದ ಪ್ರಜೆಯಾಗಿ ನಾನು ಈ ಪ್ರಶಸ್ತಿಯನ್ನು ಸ್ವೀಕರಿಸಲಾರೆ. ಇದನ್ನು ಸ್ವೀಕರಿಸಲು ನನ್ನ ಆತ್ಮಸಾಕ್ಷಿ, ಅಂತರ್ಯಾಮಿ ಒಪ್ಪದು.

ಇದು ಪ್ರತಿಭಟನೆಯಲ್ಲ; ವ್ಯಥೆ; ಪ್ರಶಸ್ತಿಯನ್ನು ಸ್ವೀಕರಿಸಲು ಬಿಡದಿರುವ ಅಸಹಾಯಕತೆ. ಅಕಾಡೆಮಿಯ ಬಗ್ಗೆ ನನಗೆ ಗೌರವವಿದೆ; ಮತ್ತು, ಈಗ ಮತ್ತು ಈಹಿಂದೆ ಇಂಥ ಪ್ರಶಸ್ತಿ ಪಡೆದ ನನ್ನೆಲ್ಲ ಸಹೋದ್ಯೋಗಿಗಳ ಬಗ್ಗೆ ಗೌರವವಿದೆ. ಅಕಾಡೆಮಿಯ ಸದಸ್ಯರಿಗೆ, ಮತ್ತೊಮ್ಮೆ, ಕೃತಜ್ಞತೆಗಳು. ಅವರ ಕ್ಷಮೆ ಬೇಡುತ್ತಿದ್ದೇನೆ.”

ಶಿವಕಾರುಣ್ಯವಿರಲಿ.
ಎಸ್. ರಘುನಂದನ
17 ಜುಲೈ 2019

‍ಲೇಖಕರು avadhi

July 17, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಚಂದ್ರಪ್ರಭ ಕಠಾರಿ

    ಪ್ರಶಸ್ತಿ ಬಂದಾಗ ಸಂಭ್ರಮಿಸದೆ ವ್ಯಥೆ ಪಡುವುದು ತೀರಾ ವಿಷಾದದ ಸಂಗತಿ. ಕಳೆದ ವರುಷಗಳಲ್ಲಿ ಕೂಡ ಸಾಹಿತಿಗಳ, ವಿಚಾರವಂತರ ಹತ್ಯೆಗಳನ್ನು ಖಂಡಿಸಿ ದೇಶಾದ್ಯಂತ ತಮಗೆ ಸಂದ ಪ್ರಶಸ್ತಿಗಳನ್ನು ಹಿಂತಿರುಗಿಸಿದ್ದು ನಡೆದಿತ್ತು. ಅದಕ್ಕೆ ಆಳುವ ಸರ್ಕಾರ ಕ್ಯಾರೇ ಅಂದಿರಲಿಲ್ಲ. ಬದಲಿಗೆ ಅವರನ್ನು ಅವಾರ್ಡ್ ವಾಪ್ಸಿ ಗ್ಯಾಂಗ್ ಎಂದು ಅಪಹಾಸ್ಯ ಮಾಡಲಾಯಿತು. ಈಗ ಒಬ್ಬ ಸೃಜನಶೀಲ ವ್ಯಕ್ತಿ ಪ್ರಶಸ್ತಿಗಾಗಿ ಸಂಭ್ರಮಿಸದೆ ತನ್ನ ಇತರ ದೇಶವಾಸಿಗಳಿಗೆ ಆಗುತ್ತಿರುವ ನೋವಿಗೆ ಸ್ಪಂದಿಸುತ್ತ, ಇನ್ನೂ ಒಂದು ಹೆಜ್ಜೆ ಮುಂದಿರಿಸಿ ( ಅಥವಾ ಹಿಂದಿರಿಸಿ ) ‘ಇದು ಪ್ರತಿಭಟನೆಯಲ್ಲ, ವ್ಯಥೆ’ ಎಂದಿದ್ದಾರೆ. ಯಾವುದೇ ಪ್ರತಿಭಟನೆಗಳಿಗೆ ಸೊಪ್ಪು ಹಾಕದ ಮಿಗಿಲಾಗಿ ಅದನ್ನು ಹೊಸಕಿ ಹಾಕುವ ಸಂವೇದನೆಯೇ ಇಲ್ಲದ ಕೇಂದ್ರ ಸರ್ಕಾರಕ್ಕೆ ಈ ಪ್ರತಿಭಟನೆಯ ವ್ಯಥೆ ತಿಳಿಯುವುದೇ? ಹಾಡುಹಕ್ಕಿಯ ಗೋಳು ಕೇಳುವರಾರು!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: