ಪ್ರಜಾಸತ್ತೆಗೆ ಅವಮಾನ – ಪ್ರಶಸ್ತಿ, ಸಮ್ಮಾನ
ಜಿ ಎನ್ ಅಶೋಕವರ್ಧನ
‘ಅವಧಿ’ಯ ಹಿತೈಷಿಗಳೂ, ನಮ್ಮೊಳಗಿನ ಸಾಕ್ಷೀಪ್ರಜ್ಞೆಯೂ ಆದ ಅತ್ರಿ ಬುಕ್ ಸೆಂಟರ್ ನ ಜಿ ಎನ್ ಅಶೋಕ ವರ್ಧನರನ್ನು ಹುಡುಕಿಕೊಂಡು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂತು.
ರಾಜ್ಯೋತ್ಸವ ಪ್ರಶಸ್ತಿ ಇರಲಿ, ಯಾವುದೇ ಪ್ರಶಸ್ತಿಯೂ ಇಂದು ವಿವಾದರಹಿತವಾಗಿಲ್ಲ. ಹಾಗಿರುವಾಗ ಅಶೋಕವರ್ಧನರು ಮುಲಾಜಿಲ್ಲದೆ ಆ ಪ್ರಶಸ್ತಿಯನ್ನು ಬಂದ ದಿಕ್ಕಿಗೆ ಭರ್ಜರಿಯಾಗಿ ಒದ್ದಿದ್ದಾರೆ.
ಅದು ಏಕೆ ? ಇಲ್ಲಿದೆ. ಓದಿ…
“ವಾಷಿಂಗ್ಟನ್ನಿನಲ್ಲಿರುವ ಮಹಾಪ್ರಭುಗಳು ನಮ್ಮ ನೆಲವನ್ನು ಕೊಳ್ಳುವ ತಮ್ಮ ಆಶಯದೊಡನೆ ಸ್ನೇಹ ಮತ್ತು ಸದ್ಭಾವನೆಯ ಮಾತುಗಳನ್ನು ನಮಗೆ ಕಳಿಸಿರುವರು. ಇದು ಅವರ ದಯವಂತಿಕೆಯ ದ್ಯೋತಕ. ಏಕೆಂದರೆ ನಾವು ಮರುಸಲ್ಲಿಸಬಹುದಾದ ಸ್ನೇಹ ಅವರಿಗೆ ಅಗತ್ಯವಿಲ್ಲ. . . .” ನಾನು ಇಂದು (೩೧-೧೦-೧೨) ಸಂಜೆ ನಾಲ್ಕೂವರೆ ಗಂಟೆಯ ಸುಮಾರಿಗೆ ಗಣಕದಲ್ಲಿ ಹೀಗೊಂದು ಲೇಖನ ನಕಲು ತೆಗೆಯುತ್ತಾ ಇದ್ದೆ. (ವಿವರಗಳಿಗೆ ನನ್ನ ಜಾಲತಾಣ www.athreebook.comದಲ್ಲಿ ಲೇಖನ `ಸವಾಲು ಎಸೆದಿದ್ದೇನೆ, ಜವಾಬ್ ಕೊಡೀ’ಯನ್ನೂ ಅದರ ಪ್ರತಿಕ್ರಿಯಾ ಅಂಕಣದಲ್ಲಿ ನನ್ನ ಪತ್ರವನ್ನೂ ನೋಡಿ) ಗೆಳೆಯ ವೇಣು ವಿನೋದ್ ಪಕ್ಕದ ಸಂಭಾಷಣಾ ಅಂಕಣದಲ್ಲಿ ಅಗೋಚರವಾಗಿದ್ದವರು ಒಮ್ಮೆಗೆ ಸಂದೇಶ ಕಳಿಸಿದರು – ಶುಭಾಶಯಗಳು, ದಕ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗಳಿಸಿದ್ದಕ್ಕೆ!
ವನ್ಯಜೀವಿಗಳ ಮುಕ್ತಿಗೆ ಹೋರಾಡುವವನಿಗೆ ವಿದ್ಯುತ್ ಬೇಲಿ ಮುಟ್ಟಿದಂತಾಯ್ತು. “ಅಯ್ಯೋ, ನನಗಿದೇ ಪ್ರಥಮ ಸುದ್ದಿ. ಮತ್ತೆ ಕೆಲವು ವರ್ಷಗಳ ಹಿಂದೆ ನಾನು ಯಾಕೆ ಪ್ರಶಸ್ತಿ ಸಮ್ಮಾನಗಳನ್ನು ತಿರಸ್ಕರಿಸುತ್ತೇನೆ ಎಂದು ಲೇಖನವನ್ನೇ ಬರೆದು ಖಂಡಿಸಿದವನು ಇದನ್ನು ತೆಗೆದುಕೊಳ್ಳುವ ಮಾತೇ ಇಲ್ಲ. ನನ್ನ ಅರ್ಜಿ ಅಥವಾ ನಾಮ ಸೂಚನೆಯನ್ನು ತಳ್ಳಿದವರಿಗೆ, ಇದನ್ನು ಅನುಮೋದಿಸುವಲ್ಲಿನ ಉತ್ಸಾಹಿಗಳಿಗೆ (ಯಾರೆಂದು ತಿಳಿದರೆ) ಅವಮಾನವಾಗದಂತೆ ಖಂಡಿತವಾಗಿಯೂ ತಿರಸ್ಕರಿಸುತ್ತೇನೆ” ಎಂದೇ ಉತ್ತರಿಸಿದೆ.
ಸಂಜೆ ಐದೂವರೆಯ ಸುಮಾರಿಗೆ ಪ್ರದೀಪ ಕುಮಾರ ಕಲ್ಕೂರರು ಚರವಾಣಿ ಸಂಪರ್ಕ ಮಾಡಿ “ನಾಳೆ ರಾಜ್ಯೋತ್ಸವ ಸಂದರ್ಭದಲ್ಲಿ ನೀವು ನಮ್ಮೊಂದಿಗೆ ಇರಬೇಕು. . . ” ಎನ್ನತೊಡಗಿದರು. ನಾನು “ಇಲ್ಲ, ನಾನು ನಾಳೆ ಕಾಡಿಗೆ ಹೋಗುತ್ತಿದ್ದೇನೆ. . .” ಎನ್ನುವುದರೊಳಗೆ ಸಂಪರ್ಕ ತಪ್ಪಿತು. ಮತ್ತೆ ರಾತ್ರಿ ಒಂಬತ್ತು ಗಂಟೆಯ ಸುಮಾರಿಗೆ ಪುನಃ ಸಂಪರ್ಕಿಸಿದರು. ನಾನು ಸ್ಪಷ್ಟವಾಗಿ ಪ್ರಶಸ್ತಿ, ಸಮ್ಮಾನಗಳಿಗೆ ನಾನು ವಿರೋಧಿ, ಸ್ವೀಕರಿಸುವುದಿಲ್ಲ ಎಂದೆ. ಸಾಲದ್ದಕ್ಕೆ ಕಾಡಿಗೆ ಹೋಗುತ್ತಿರುವುದಾಗಿಯೂ ಅವರ ಸಭೆ, ಮೆರವಣಿಗೆಯ ಭಾಗವೂ ಆಗುವುದಿಲ್ಲವೆಂದೂ ತಿಳಿಸಿದೆ. ಏತನ್ಮಧ್ಯೆ ಕರುಣಾಕರ ಬಳ್ಕೂರು, ಮುರಳೀ ಕಡೇಕಾರ್ ಎಲ್ಲೆಲ್ಲಿಂದಲೋ ಸುದ್ದಿ ಸಿಕ್ಕಿ, ನನಗೆ ಅಭಿನಂದನಾ ಕರೆ ಮಾಡಿದರು. ಅವರು ನನ್ನ ತಿರಸ್ಕಾರ ತಿಳಿದು, ವಿಚಾರಿಸಿದ್ದರಿಂದ ಸ್ವಲ್ಪ ವಿವರವಾಗಿ ಹೇಳಿದ್ದನ್ನೇ ಕೆಳಗೆ ವಿಸ್ತರಿಸುತ್ತೇನೆ.
ರಾಜಸತ್ತೆಯ ಅವಲಕ್ಷಣವಾಗಿ ಮುಂದುವರಿಯುತ್ತಿರುವ ಪ್ರಶಸ್ತಿ, ಸಮ್ಮಾನಗಳು ರದ್ದಾಗಬೇಕು. ಸಾಮಾಜಿಕ ಆಡಳಿತಕ್ಕೆ ಜನಮತ ಪಡೆದು ಬರುವವರು ಸಮಷ್ಟಿಯ ಹಣವನ್ನು ಹೊರಕೈ ಮಾಡಿ ಕೆಲವರಿಗೆ ವಿತರಿಸಿ ಪ್ರಚಾರಗಿಟ್ಟಿಸುತ್ತಿರುವುದು ಅಬದ್ಧ.
ನನ್ನದೇ ಉದಾಹರಣೆಯಲ್ಲಿ ಹೇಳುವುದಾದರೆ
೧. ನವೆಂಬರ್ ಒಂದರ ಸನ್ನಿವೇಶ ಎಲ್ಲರಿಗೂ ಗೊತ್ತಿರುವಂತದ್ದೇ. ಹಾಗಿರುವಾಗ ಸಾಕಷ್ಟು ಮೊದಲೇ ಪಾರದರ್ಶಕವಾಗಿ ಆಯ್ಕೆ ಮಾಡಿ, ನನಗೆ ಸೂಚನೆ ನೀಡಿ, ಒಪ್ಪಿಗೆ ಪಡೆದು ಮುಂದುವರಿಯಬೇಡವೇ?
೨. ಮಾಧ್ಯಮಗಳಿಗೆ ಎಲ್ಲಾ ತಿಳಿಸಿಯಾದ ಮೇಲೆ ನನ್ನ ಅನುಕೂಲ ಕೇಳುವುದೇ? ಅದೂ ಸ್ಪಷ್ಟ ಕಾರ್ಯ, ಕಾರಣಗಳ ವಿವರಣೆ ಇಲ್ಲದೇ `ನಾವು ಕೊಡುತ್ತಿದ್ದೇವೆ, ನೀವು ತೆಗೆದುಕೊಳ್ಳಬೇಕು’ ಎಂಬ ಧೋರಣೆ ಸಾಧುವೇ?
೩. ಇದು ಜಿಲ್ಲಾಡಳಿತದ್ದೇ? ಜಿಲ್ಲಾ ಕಸಾಪ ವ್ಯವಸ್ಥೆಯೇ? ವೈಯಕ್ತಿಕವೇ? ಹಣಕಾಸಿನ ವ್ಯವಸ್ಥೆ ಎಂಥದ್ದು? ಇತ್ಯಾದಿ ನೂರು ಪ್ರಶ್ನೆಗಳು ಕೊರೆಯುತ್ತಿರುವಾಗ ಒಂದು ಶಾಲು, ಹೂಹಣ್ಣಿನ ಬುಟ್ಟಿ ಹಿಡಿದು ಮಾಧ್ಯಮಗಳಲ್ಲಿ ಮೆರೆಯುವುದು ಸಮ್ಮಾನವೇ?
೪. ಈಚೆಗೆ ಇಡಗುಂಜಿ ಮೇಳದ ಪ್ರದರ್ಶನಾವಧಿಯಲ್ಲಿ ಮತ್ತೆ ಪ್ರಭಾಕರ ಜೋಶಿಯವರ ಸಮ್ಮಾನಗಳ ಕುರಿತು ಸಾಕಷ್ಟು ಟೀಕೆ ಸಹಿತ ನಾನು ನನ್ನ ಜಾಲತಾಣದಲ್ಲಿಛಿom)ಅ> ಬರೆದದ್ದೇ ಇದೆ. ಅವೆಲ್ಲವನ್ನು ಮರೆತು ಸಮ್ಮಾನ ನಾನೊಪ್ಪಿಕೊಂಡರೆ ಮೇಲೆ ಹೇಳಿದ ಬರಹಗಳೆಲ್ಲವೂ `ನನಗೆ ದಕ್ಕಲಿಲ್ಲ’ ಎನ್ನುವ ಸ್ವಾರ್ಥದ ಕೊರಗಿನಂತೆ ಕೇಳುವುದಿಲ್ಲವೇ?
೫. ಪುಸ್ತಕೋದ್ಯಮದ ಸರಕಾರೀಕರಣವನ್ನು (ಮೂಲಭೂತ ಆವಶ್ಯಕತೆಯಾದ ಪರಿಸರ, ವಿದ್ಯೆ ಮುಂತಾದ ಜವಾಬ್ದಾರಿಯಿಂದಲೂ ಸರಕಾರ ನುಣುಚಿಕೊಳ್ಳುತ್ತಿರುವ ಕ್ರಮದ ಬಗ್ಗೆ) ನಾನು ಉಗ್ರವಾಗಿ ಖಂಡಿಸುತ್ತಲೇ ಬಂದವ. ಸೀಮಿತ ಅವಧಿಯಲ್ಲಿ ಸ್ಪಷ್ಟ ಚೌಕಟ್ಟಿನೊಳಗೆ ಆಡಳಿತಕ್ಕೆ ಮಾತ್ರ ಅಧಿಕಾರ ಪಡೆದು ಬರುವವರು ಭೂಮಿಯ ಮೇಲಿನ ಎಲ್ಲಕ್ಕೂ ಒಡೆಯರಂತೆ ವ್ಯವಹರಿಸುವ ಅಜ್ಞಾನ, ಯಾವ ಮುಚ್ಚುಮರೆಯಿಲ್ಲದೆ ಸ್ವಾರ್ಥವೊಂದನ್ನೇ ಬೆಳೆಸುತ್ತಿರುವ ಕ್ರಮ ನೋಡುವಾಗ ಸರಕಾರ ಕೊಡುವ ಸಮ್ಮಾನ, ಪ್ರಶಸ್ತಿಯನ್ನು ನಾನು (ಅಥವಾ ಯಾರೂ) ಸ್ವೀಕರಿಸಿದ್ದೇ ಆದರೆ ಅವೆಲ್ಲಕ್ಕೂ ನಿಸ್ಸಂದೇಹವಾಗಿ ಪಾಲುದಾರರಾಗುತ್ತೇವೆ.
ನಾನು ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ ಮತ್ತು ಈ ಕ್ರಮವನ್ನೇ ಖಂಡಿಸುತ್ತೇನೆ. ಇನ್ನೂ ಹೆಚ್ಚಿನ ವಿವರಗಳಿಗೆ ವಿಜಯ ಕರ್ನಾಟಕದ ೨೩-೧೨-೨೦೦೭ರ ಸಾಪ್ತಾಹಿಕ ಸಂಚಿಕೆಯಲ್ಲಿ ಪ್ರಕಟವಾದ ನನ್ನದೇ ಲೇಖನ ಪ್ರಶಸ್ತಿ, ಸಮ್ಮಾನ ಅಪರಾಧದ ಸಲಕರಣೆಗಳು ನೋಡಬಹುದು.
ಇಂತು ವಿಶ್ವಾಸಿ
ಅಶೋಕವರ್ಧನ







ನಿಮ್ಮ ನಿಲುವನ್ನು ನಾನು ಮನಸಾರೆ ಮೆಚ್ಚುತ್ತೇನೆ. ನಿಮ್ಮಂಥವರ ಸಂಖ್ಯೆ ಹೆಚ್ಚಲಿ ಎಂದು ಆಶಿಸುತ್ತೇನೆ.
ವಿ.ಎನ್.ಲಕ್ಷ್ಮೀನಾರಾಯಣ
ಪ್ರಿಯ ಅಶೋಕ’ವರ್ಧ’ನ
ನಿಮ್ಮ ಸಂಖ್ಯೆ ’ವರ್ಧಿ’ಸಲಿ. ಶಿವರಾಜ ಬೆಟ್ಟದೂರ ಬೇಂದ್ರೆ ಟ್ರಸ್ಟಿನ ಪ್ರಶಸ್ತಿ ನಿರಾಕರಿಸಿ ಸ್ಪಷ್ಟತೆ ಮೆರೆದರೆ ನೀವು ಜಿಲ್ಲಾಧಿಕಾರ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿ ನಿರಾಕರಿಸಿ ಪ್ರಶಸ್ತಿಗಾಗಿ ಹಲುಬುವ ಮತ್ತು ಯಾವ ರೀತಿಯ adjustmentಗಳಿಗೂ ತಲೆಯಲ್ಲಾಡಿಸುವ ಪ್ರಭೃತಿಗಳಿಗೆ ಸೂಜಿ ಮದ್ದು ನೀಡಿದ್ದೀರ, ಸರಿ. ಆದರೆ ನಿಜವಾಗಲೂ ಅರ್ಹರಾದವರು ಪ್ರಶಸ್ತಿ ಸಮ್ಮಾನಗಳನ್ನು ಒಲ್ಲೆನೆಂದರೆ ಅದಕ್ಕಾಗೇ ಜೀವ ಹಿಡಿದುಕೊಂಡವರಿಗೆ ಸುಗ್ಗಿಯಲ್ಲವೇ? ಅಲ್ಲದೇ ಪ್ರಶಸ್ತಿಗಳನ್ನು ಕೊಡುವ ಮೂಲಕವೇ ಉಪಜೀವನಕ್ಕೊಂದು ದಾರಿ ಕಂಡುಕೊಂಡವರಿಗೆ ಪಾಪ ನಿಮ್ಮ ಸಂದೇಶವೇನು?
ಒಳ್ಳೆಯ ಮಾತುಗಳಿಗೆ ಕೃತಜ್ಞ.
ಪ್ರಜಾಸತ್ತೆಯಲ್ಲಿ ಚುನಾವಣೆಯ ವಿಜೇತ ಎಂದರೆ ಕೇವಲ ಒಂದು ಅವಧಿಯ ಸೇವಾ ಸನದಿನ ಹಕ್ಕುದಾರ. ಆದರಿಂದು ಆರಿಸಿ ಬರುವವರು `ಸನ್ಮಾನ್ಯರೋ,’ `ಅತಿ ವಂದನೀಯರೋ’ ಆಗಿ ರಾಜಸತ್ತೆಯ ಅವಗುಣಗಳನ್ನೆಲ್ಲ ಆರೋಪಿಸಿಕೊಳ್ಳುತ್ತಿದ್ದಾರೆ. ವಿಜಯೋತ್ಸವದಿಂದ ತೊಡಗುವ ಇವರ ಹುಚ್ಚು, ನಿಂತ ಮೆಟ್ಟಿನಲ್ಲಿ ಪ್ರಶಸ್ತಿ, ಪುರಸ್ಕಾರ ಪ್ರದಾನಿಸುವವರೆಗೂ ಹಬ್ಬಿದೆ! (ಟ್ವೆಂಟಿ ಟ್ವೆಂಟಿ ಉತ್ತಪ್ಪನಿಗೆ ಡಬ್ಬಲ್ ಧಮಾಕಾ – ಕೇರಳದಿಂದಲೂ ಕರ್ನಾಟಕದಿಂದಲೂ ಧನವರ್ಷ.) ಸಮಾಜಪರ ವಿನಿಯೋಗ ಆಗಬೇಕಾದ್ದೆಲ್ಲ ಕೇವಲ ಉತ್ಸವದ ಬೂಟಾಟಿಕೆಗಳಲ್ಲಿ ಕರಗಿಹೋಗುತ್ತಿದೆ. ಪ್ರತಿಭಾ ಪುರಸ್ಕಾರ ಎನ್ನುವ ಸುಳ್ಳೇ ಮುಖವಾಡದಲ್ಲಿ ಒಮ್ಮೆ ಇದು ವ್ಯಕ್ತಿಪರ ಎಂದು ತೋರುವುದು ಆಕಸ್ಮಿಕ. ವ್ಯಕ್ತಿ ಇಲ್ಲಿ ನೆಪಮಾತ್ರ. ಇಲ್ಲವಾದರೆ `ವರ್ಷದ ವ್ಯಕ್ತಿ’ಯಾಗುವ ನನ್ನನ್ನು ಹಿಂದಿನ ರಾತ್ರಿ ಕರೆದು, ಅಷ್ಟೇ ನಿರುಮ್ಮಳವಾಗಿ ಬಿಟ್ಟು, ಮಾರಣೇ ದಿನ ನನ್ನ ಉಲ್ಲೇಖವೂ ಇಲ್ಲದೆ ದಿನಾಚರಣೆ ನಡೆಯಲಿಲ್ಲವೇ? ವರ್ಷ ೨೦೧೦ ಮತ್ತು ೨೦೧೧ರ ಪಂಪ ಪ್ರಶಸ್ತಿಗೆ ಹೆಸರು `ಘೋಷಿತ’ರಾದ ವ್ಯಕ್ತಿಗಳನ್ನು ಇನ್ನೂ ಸರಕಾರ `ಪ್ರಾಪ್ತ’ರನ್ನಾಗಿಸಿಲ್ಲ; ೨೦೧೨ ಇನ್ನೇನು ಮುಗಿಯುವುದರಲ್ಲಿದೆ! ಅಂಥವರನ್ನು ಸಗಟು ಸಮಾರಂಭಗಳಲ್ಲಿ `ಪಾತ್ರ’ರಾದಂತೆ ಕಾಣಿಸಿಯೂ ಚೆಕ್ಕೋ ಪದಕವೋ ಸವಲತ್ತೋ ಮುಟ್ಟಿಸದ ಉದಾಹರಣೆಗಳ ಬಗ್ಗೆ ಕೆದಕಿದರೆ ಬಹುಶಃ ಪುಸ್ತಕವನ್ನೇ ಬರೆಯಬಹುದು. ಇವೆಲ್ಲಾ ರದ್ದಾದರೆ (ಉಪಜೀವಿಗಳು) ತಲೆಹಿಡುಕರು ಕೆರೆಯೋ ಬಾವಿಯೋ ನೋಡಿಕೊಳ್ಳಲಿ ಬಿಡಿ.
ಅಶೋಕವರ್ಧನ