‘ಚೌಕಟ್ಟಿನಾಚೆ’ಯ ಹುಡುಕಾಟಗಳು

ಎಂ ಎ ಶ್ರೀರಂಗ
ಇಂದು ಪತ್ರಿಕೆಗಳಲ್ಲಿ ಅಂಕಣ ಬರಹಗಳು ಒಂದು ಅವಿಭಾಜ್ಯ ಅಂಗಗಳಾಗಿವೆ. ಸುಮಾರು ಮೂವತ್ತು ಮೂವತ್ತೈದು ವರ್ಷಗಳ ಹಿಂದೆ ಸರ್ಕಾರಿ ಒಡೆತನದ ‘ದೂರದರ್ಶನ’ ಮಾತ್ರ ಇದ್ದಾಗ ಅದರಲ್ಲಿ ದಿನಕ್ಕೆ ಒಂದೆರೆಡು ಬಾರಿ ಬರುತ್ತಿದ್ದ ಸುದ್ದಿಗಳಿಗೂ ‘ಆಕಾಶವಾಣಿ’ಯ ಸುದ್ದಿಗಳಿಗೂ ಇದ್ದ ಒಂದೇ ವ್ಯತ್ಯಾಸವೆಂದರೆ ಟಿವಿಯಲ್ಲಿ ವಾರ್ತೆ ಓದುವವರ ಮುಖ ಮತ್ತು ಹದಿನೈದು ನಿಮಿಷಗಳ ಸುದ್ದಿಯಲ್ಲಿ ಹೆಚ್ಚೆಂದರೆ ಆರೇಳು ದೃಶ್ಯಗಳ (ಅವುಗಳಲ್ಲಿ ಸ್ಥಿರ ಚಿತ್ರಗಳೇ ಜಾಸ್ತಿ) ದರ್ಶನ ಭಾಗ್ಯ ಅಷ್ಟೇ.
ಯಾವಾಗ ಖಾಸಗಿ ವಾಹಿನಿಗಳು ಪ್ರಾರಂಭವಾದವೋ ಆಗ ಸಹಜವಾಗಿ ಜನಗಳಿಗೆ ಅದೊಂದು ಕುತೂಹಲ. ಸರ್ಕಾರಿ ಒಡೆತನದ ದೂರದರ್ಶನದ ಸುದ್ದಿ ದೂರವೇ ಉಳಿಯಿತು. ಖಾಸಗಿ ಸುದ್ದಿ ವಾಹಿನಿಗಳು ಅದರ ಲಾಭ ಪಡೆದವು. ಸುದ್ದಿಗಳು ಅದರ ಜತೆ ಜಾಹೀರಾತುಗಳು ವ್ಯಾಪಾರದ, ಲಾಭದ ಸರಕಾಯಿತು. ದಿನದ ಇಪ್ಪತ್ತನಾಲ್ಕು ಗಂಟೆಗಳೂ ಸುದ್ದಿಗಳು ಬರಲು ಪ್ರಾರಂಭವಾದಾಗ ಪತ್ರಿಕೆಗಳ ಭವಿಷ್ಯ ಏನು ಎಂಬ ಪ್ರಶ್ನೆ, ಚರ್ಚೆ ಶುರುವಾದವು. ಒಬ್ಬ ಶ್ರೀಸಾಮಾನ್ಯ ರಾತ್ರಿ ಹತ್ತು ಹನ್ನೊಂದು ಗಂಟೆಗಳ ತನಕ ಕೈಯಲ್ಲಿ ರಿಮೋಟ್ ಹಿಡಿದು ನಾಲ್ಕೈದು ಸುದ್ದಿವಾಹಿನಿಗಳನ್ನು ಜಾಲಾಡಿ ಮಲಗಿದರೆ ಬೆಳಗ್ಗೆ ವರ್ತಮಾನ ಪತ್ರಿಕೆಗಳಲ್ಲಿ ಬರುವ ಸುದ್ದಿಗಳನ್ನು ಓದುವ ಅವಶ್ಯಕತೆ ಬಹುಶಃ ಇರಲಾರದು.
ಈ ಹಂತದಲ್ಲಿ ಪತ್ರಿಕೆಗಳೂ ಹೊಸ ಸವಾಲನ್ನು ಎದುರಿಸಲು ಸಿದ್ದವಾದವು. ಈ ಮುಂಚೆ ಭಾನುವಾರ ಮಾತ್ರ ಆರು ಪುಟಗಳಷ್ಟು ಒಂದು ಪುರವಣಿ ಇತ್ತು. ಅದರಲ್ಲಿ ಸಾಹಿತ್ಯಕ್ಕೆ ಅಗ್ರ ಸ್ಥಾನ. ಒಂದರ್ಧ ಪುಟದಲ್ಲಿ ಸಿನಿಮಾ ವಿಷಯ, ನಟ ನಟಿಯರನ್ನು ಕುರಿತ ಗಾಸಿಪ್ ಗಳು. ನಂತರ ಒಂದು ಪತ್ರಿಕೆ ಸಿನಿಮಾಗಳು ಸಾಮಾನ್ಯವಾಗಿ ಬಿಡುಗಡೆ ಆಗುವ ಶುಕ್ರವಾರದಂದು ಸಿನಿಮಾ ಪುರವಣಿ ಪ್ರಾರಂಭಮಾಡಿತು.ಪುನಃ survival of the fittestನ ಪ್ರಶ್ನೆ ಎದುರಾಯಿತು. ಆಗ ಎಲ್ಲ ಪತ್ರಿಕೆಗಳು ಸಿನಿಮಾ ಪುರವಣಿ ಶುರು ಮಾಡಿದವು.
ಯಾವಾಗ ಖಾಸಗಿ ವಾಹಿನಿಗಳು ದೇವರು, ಜ್ಯೋತಿಷ್ಯ, ವಾಸ್ತು, ಯುವಕರು, ಗೃಹಿಣಿಯರು, ಮನರಂಜನೆ, ಆಧ್ಯಾತ್ಮ, ಆರೋಗ್ಯ ಜತೆಗೆ ಮಧ್ಯಾನ್ಹ, ಸಂಜೆ, ರಾತ್ರಿ ಮನರಂಜನೆಗೆಂದು ಮೆಗಾ ಧಾರಾವಾಹಿಗಳು (ಸೀರಿಯಲ್), ಸಿನಿಮಾ ಹೀಗೆ ಬೆಳಗ್ಗೆ ಎದ್ದಾಗಲಿಂದ ರಾತ್ರಿ ಮಲಗುವ ತನಕ ಬೆಂಬಿಡದೆ ನಮ್ಮನ್ನು ಹಿಂಬಾಲಿಸ ತೊಡಗಿದವೋ ಪುನಃ ಪತ್ರಿಕೆಗಳಿಗೆ ‘ಮಾಡು ಇಲ್ಲವೇ ಮಡಿ’ ಎಂಬ ಪರಿಸ್ಥಿತಿ. ಬೇರೆ ದಾರಿಯಿಲ್ಲ. ಈಗ ವಾರದ ಏಳೂ ದಿನಗಳು ಆಯಾ ಆಸಕ್ತಿಯವರಿಗೆ ತಕ್ಕಂತೆ ಪುರವಣಿಗಳು.
ಇಂತಹ ಪರಿಸ್ಥಿತಿಯಲ್ಲಿ ಪತ್ರಿಕೆಗಳಲ್ಲಿ ಓದುಗರಿಗೆ ಓದಲು ಇರುವ ಒಂದೇ ಒಂದು ಮುಖ್ಯ ಭಾಗ ಅಂಕಣ ಬರಹಗಳು,ವಿಶ್ಲೇಷಣೆಗಳು ಮತ್ತು ಯಾವುದಾದರೊಂದು ವಿಷಯ ಕುರಿತಂತೆ ವಾರಗಟ್ಟಲೆ ತಿಂಗಳುಗಟ್ಟಲೆ ನಡೆಯುವ ಸಂವಾದ ಮತ್ತು ಚರ್ಚೆಗಳು. ಟಿವಿಗಳೂ ಇವನ್ನು ದಿನಾ ಮಾಡುತ್ತವೆ; ಇಲ್ಲವೆಂದಲ್ಲ. . ಆದರೆ ಅವುಗಳದ್ದು ಒಂದೆರೆಡು ಗಂಟೆಗಳಷ್ಟು ಅಲ್ಪಾಯಸ್ಸು.
ಮುಖ್ಯವಾಗಿ ಒಂದು ಪತ್ರಿಕೆಯ ರಾಜಕೀಯ ಧ್ಯೇಯ ಧೋರಣೆಗಳನ್ನು ಮತ್ತು ಅಲ್ಪ ಸ್ವಲ್ಪವಾದರೂ ಸಾಹಿತ್ಯ-ಸಾಂಸ್ಕೃತಿಕ-ಸಾಮಾಜಿಕ ನಿಲುವುಗಳನ್ನು ಸಾಮಾನ್ಯವಾಗಿ ಇಂತಹ ಅಂಕಣ ಬರಹಗಳಲ್ಲಿ ಕಾಣಬಹುದು. ಒಂದೆರೆಡು ತಿಂಗಳು ಒಂದು ಪತ್ರಿಕೆಯ ಅಂಕಣಗಳನ್ನು ಗಮನವಿಟ್ಟು ಅಭ್ಯಾಸ ಮಾಡಿದರೆ ಸಾಕು. ಯಾರ ಒಲವು ಯಾವ ಕಡೆ ಎಂದು ಹೇಳಿಬಿಡಬಹುದು. ಆ ಚೌಕಟ್ಟುಗಳನ್ನು ಮೀರಿಯೂ ನಿಲ್ಲಬಲ್ಲ ಅಂಕಣ ಬರಹಗಳು ಹಾಗು ಅಂತಹ ಅಂಕಣಕಾರರು ಕಾಲದ ಸತ್ವ ಪರೀಕ್ಷೆಯಲ್ಲಿ ಮತ್ತು ಮುಖ್ಯವಾಗಿ ಓದುಗರ ಮನದಲ್ಲಿ ನಿಲ್ಲುತ್ತಾರೆ. ಅಂತಹ ಅಂಕಣಕಾರರು ‘ಪ್ರಜಾವಾಣಿ’ಯ ಕಾರ್ಯ ನಿರ್ವಾಹಕ ಸಂಪಾದಕರಾಗಿರುವ ಪದ್ಮರಾಜ ದಂಡಾವತಿಯವರು.
ರಾಜಕೀಯ ವಿಷಯಗಳು,ದಿನ ನಿತ್ಯದ ಘಟನೆಗಳು,ನಮ್ಮನ್ನಾಳುವ ಪ್ರಭುತ್ವ ಅದರ ರೀತಿ ನೀತಿಗಳನ್ನು ಕುರಿತಂತೆ ಯಾವ ಕಡೆಯೂ,ಯಾರ ಕಡೆಯೂ ವಾಲದಂತೆ ಬರೆಯುವುದು ಸುಲಭದ ಮಾತಲ್ಲ. ಅದೊಂದು ಅಗ್ನಿದಿವ್ಯ. ಸಾಮಾನ್ಯವಾಗಿ ಪ್ರಜಾವಾಣಿ ಪತ್ರಿಕೆಯಲ್ಲಿ ಭಾನುವಾರಗಳಂದು ದಂಡಾವತಿ ಅವರು ಬರೆಯುವ ಅಂಕಣ ಬರಹಗಳ ಒಂದು ಆಯ್ದ ಸಂಕಲನವನ್ನು “ಚೌಕಟ್ಟಿನಾಚೆ” ಎಂಬ ಹೆಸರಿನಲ್ಲಿ ಹೆಗ್ಗೋಡಿನ ಅಕ್ಷರ ಪ್ರಕಾಶನದವರು ೨೦೧೫ರಲ್ಲಿ ಪ್ರಕಟಿಸಿದ್ದಾರೆ. (ಪದ್ಮರಾಜ ದಂಡಾವತಿ ಅವರು ಕಳೆದ ಆರು ವರ್ಷಗಳಿಂದ ಪ್ರತಿ ಭಾನುವಾರ ಪ್ರಜಾವಾಣಿ ಪತ್ರಿಕೆಯಲ್ಲಿ ‘ನಾಲ್ಕನೇ ಆಯಾಮ’ ಎಂಬ ಶೀರ್ಷಿಕೆಯಲ್ಲಿ ಬರೆಯುತ್ತಿರವ ಅಂಕಣ ಬರಹಗಳ ಸಂಕಲನದ ಆರು ಸಂಪುಟಗಳು ಅದೇ ಹೆಸರಿನಲ್ಲಿ ಪ್ರಕಟವಾಗಿದೆ).
‘ಚೌಕಟ್ಟಿನಾಚೆ’ ಸಂಕಲನದಲ್ಲಿನ ಒಟ್ಟು ೪೯ ಅಂಕಣ ಬರಹಗಳನ್ನು ‘ವರ್ತಮಾನ’ ‘,ಭಾಷೆ-ಮಾಧ್ಯಮ ಮುಂತಾಗಿ’, ‘ಬೇಕಿರುವುದು ……’ ಮತ್ತು ‘ಹುಡುಕಾಟ’ ಎಂಬ ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಇದರಿಂದ ಓದುಗರಿಗೆ ಆಯಾ ವಿಷಯಕ್ಕೆ ಸಂಬಂಧಿಸಿದ ಮಾಹಿತಿಗಳು,ವಿಶ್ಲೇಷಣೆಗಳು ಒಂದೇ ಕಡೆ ದೊರಕುತ್ತವೆ. ಪದ್ಮರಾಜರು ಮೂವತ್ತೈದು ವರ್ಷಗಳಷ್ಟು ಹಿಂದೆಯೇ ಕನ್ನಡ ಸಾಹಿತ್ಯದಲ್ಲಿ ಎಂ ಎ ಮಾಡಿದವರು. ಕನ್ನಡ ಅಧ್ಯಾಪಕನಾಗಬೇಕು ಎಂಬುದು ಅವರ ಆಸೆಯಾಗಿತ್ತು. ‘ಜಾಗತೀಕರಣ’, ‘ಖಾಸಗಿ ಇಂಗ್ಲಿಷ್ ಶಾಲೆಗಳ ಆಕ್ರಮಣ ‘ ಇತ್ಯಾದಿ ಯಾವ ಹೊರಗಿನ ಶತ್ರುಗಳ ‘ಭಾಷಾ ಭಯೋತ್ಪಾದನೆ’ ಅಷ್ಟಾಗಿ ಇಲ್ಲದೇ ಇದ್ದ ೭೦-೮೦ರ ದಶಕದಲ್ಲಿ ಸಹ ಅವರಿಗೆ ಅಧ್ಯಾಪಕನ ಕೆಲಸ ಸಿಗದೇ ಹೋಯಿತು. ಅಲ್ಲಿಗಾದ ನಷ್ಟ ಪತ್ರಿಕಾ ಕ್ಷೇತ್ರಕ್ಕೆ ಲಾಭವಾಯಿತು.
ಸಾಹಿತ್ಯದ ಓದಿನ ಹಿನ್ನೆಲೆಯಿಂದ ಬಂದ ಭಾಷೆ ಈ ಸಂಕಲನದಲ್ಲಿನ ಅಂಕಣ ಬರಹಗಳ ಒಂದು ಪ್ಲಸ್ ಪಾಯಿಂಟ್. ಇಲ್ಲಿಯ ಲೇಖನಗಳ ಹಿಂದಿನ ಕಳಕಳಿ, ವಿಶ್ಲೇಷಣೆಯ ರೀತಿ, ಒಂದು ಸಮಸ್ಯೆಯ ಸಾಧ್ಯವಾದಷ್ಟು ಎಲ್ಲಾ ಮುಖಗಳನ್ನು ನೋಡುವ ಪದ್ಮರಾಜ ದಂಡಾವತಿ ಅವರ ಬರವಣಿಗೆಯ ರೀತಿಯನ್ನು ಆಯ್ದ ನಾಲ್ಕೈದು ಲೇಖನಗಳ ಮೂಲಕ ‘ಅವಧಿ’ಯ ಓದುಗರಿಗೆ ಪರಿಚಯಿಸುವುದು ನನ್ನ ಈ ಬರಹದ ಉದ್ದೇಶ.
ವರ್ತಮಾನ: ಈ ಭಾಗದ ಹೆಸರೇ ಸೂಚಿಸುವಂತೆ ನಮ್ಮ ರಾಜಕೀಯ, ಸಾಮಾಜಿಕ, ಚುನಾವಣೆ ನಂತರ ಸಿಕ್ಕ ಅಧಿಕಾರವನ್ನು ಉಳಿಸಿಕೊಳ್ಳಲು ರಾಜಕೀಯ ನಾಯಕರು ಆಡುವ ಚದುರಂಗದ ಆಟಗಳು,ಆ ಆಟದಲ್ಲಿ ಕಾಯಿಗಳಂತೆ ಬಳಸುವ ಮತ್ತು ಆಟದ ನಂತರ ಮೂಲೆಗುಂಪಾಗುವ ಸಾಮಾನ್ಯ ಪ್ರಜೆಗಳು ಇತ್ಯಾದಿಗಳ ಚಿತ್ರಣವಿದೆ. ‘ಅರಸು ಆಗ ಹೊರಟ ನಾಯಕನ ಕಷ್ಟಗಳು ……….. ‘(೧೭-೯-೨೦೧೩) ಲೇಖನ ಹಿಂದಿನ ನಮ್ಮ ಮುಖ್ಯ ಮಂತ್ರಿಯಾಗಿದ್ದ ದೇವರಾಜ ಅರಸು ಅವರ ಏಳು ಬೀಳುಗಳು ಮತ್ತು ಈಗಿನ ನಮ್ಮ ಸಿದ್ಧರಾಮಯ್ಯ ಅವರು ಮುಖ್ಯ ಮಂತ್ರಿಯಾಗಿ ಆರು ತಿಂಗಳು ಕಳೆದ ನಂತರ ಅವರ ನಡೆಗಳನ್ನು ವಿಮರ್ಶಿಸುವ ಜತೆಗೆ ರಾಜಕೀಯದಲ್ಲಿ ಉದ್ದೇಶ-ಪ್ರಾಮಾಣಿಕತೆ-ಅನುಷ್ಠಾನ-ಪರಿಣಾಮದ ಕಡೆ ಇರಬೇಕಾದ ಗಮನ ಎಷ್ಟು ಮುಖ್ಯವಾದವು ಎಂಬುದನ್ನೂ ಉದಾಹರಣೆ ಸಮೇತ ವಿವರಿಸುತ್ತದೆ. ಕೇವಲ ಆರು ತಿಂಗಳಿನಲ್ಲಿ ಒಂದು ರಾಜ್ಯದ ಮುಖ್ಯಮಂತ್ರಿಯೊಬ್ಬರ progress card ಕೊಡುವುದು ಸರಿಯಲ್ಲ ಎಂದು ಹೇಳಿ ಅಳತೆ ಮಾಡುವುದನ್ನು ತಪ್ಪಿಸಬಹುದು. ಆದರೆ ಅಧಿಕಾರ ಬಿಟ್ಟಾಗ ತಾನು ಏನು ಮಾಡಿದೆ, ಮಾಡಬಯಸಿದ್ದೆ ಎಂದು ಹೇಳಬೇಕಾಗುತ್ತದೆ ಅಲ್ಲವೇ? ಎಂದು ದಂಡಾವತಿ ಅವರು ಸಕಾರಣವಾಗಿ ಪ್ರಶ್ನಿಸುತ್ತಾರೆ.
ದೇವರಾಜ ಅರಸು ಅವರ ಹಿಂದೆ ಇಂದಿರಾಗಾಂಧಿ ಅವರಂತಹ ಪ್ರಶ್ನಾತೀತಾ ನಾಯಕಿ ಇದ್ದರು. ಅವರಿಗೆ ಅಖಂಡ ಜನಬೆಂಬಲವಿತ್ತು. ಯಾವಾಗ ಇಂದಿರಾ ಅವರ ಬೆಂಬಲ ಇಲ್ಲವಾಯಿತೋ ಆಗ ಅರಸು ಅಂತಹವರೂ ಅಧಿಕಾರ ಕಳೆದುಕೊಳ್ಳಬೇಕಾಯಿತು. ಸಿದ್ಧರಾಮಯ್ಯನವರ ಸರ್ಕಾರ ತರಲು ಹೊರಟಿದ್ದ ‘ಮೂಢ ನಂಬಿಕೆ ನಿಷೇಧ ಮಸೂದೆ’, ‘ಬಿದಾಯಿ’, ‘ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮಕ್ಕಳ ಪ್ರವಾಸ’ ಯೋಜನೆಗಳಲ್ಲಿನ ಉದ್ದೇಶ, ಪರಿಣಾಮಗಳು ಹೇಗೆ ಅವರಿಗೇ ವಿರುದ್ಧವಾದವು ಎಂಬುದು ಎಲ್ಲರಿಗೂ ತಿಳಿದೇಯಿದೆ. ಕಾರಣ ಏನು? ಮುಖ್ಯಮಂತ್ರಿ ಆದವರು ‘ಪಕ್ಷವನ್ನು,ಸಚಿವರನ್ನು ಮತ್ತು ಶಾಸಕರನ್ನು ಜತೆಗೆ ತೆಗೆದುಕೊಂಡು ಹೋಗಬೇಕಾಗುತ್ತದೆ. .. ‘ದೇವರಾಜ ಅರಸು’ ಆಗ ಹೋರಾಟ ಸದ್ಯದ ನಾಯಕನ ಪರವಾಗಿ ಯಾರು ಮಾತಾಡುತ್ತಿದ್ದಾರೆ?’ ಎಂದು ಪದ್ಮರಾಜರು ಸುಮಾರು ಎರಡು ವರ್ಷಗಳ ಹಿಂದೆಯೇ ಮಾಡಿರುವ ಈ ವಿಶ್ಲೇಷಣೆಯಲ್ಲಿರುವ ದೂರದರ್ಶಿತ್ವವನ್ನು ಗಮನಿಸಬೇಕು.
ಇಂದು ಲೋಕಸಭೆ,ವಿಧಾನಸಭೆಯ ಎರಡು ಮೂರು ಸ್ಥಾನಗಳ ಉಪಚುನಾವಣೆ (ಬೈ ಎಲೆಕ್ಷನ್ ) , ತಾಲೂಕು-ಜಿಲ್ಲಾ ಪಂಚಾಯಿತಿಯ ಚುನಾವಣೆಯ ಫಲಿತಾಂಶವೇ ಬರಲಿ ಅಷ್ಟೇ ಸಾಕೆಂದು ‘ಅತೃಪ್ತ’ ಪಕ್ಷದವರ ನಿಯೋಗ ಹೈಕಮಾಂಡ್ ಗೆ ಹೋಗಿ ಮುಖ್ಯಮಂತ್ರಿಗಳ ಬದಲಾವಣೆಗೆ ಒತ್ತಾಯಿಸುವುದು; ಅಲ್ಲಿಂದ ವೀಕ್ಷಕರು ಇಲ್ಲಿಗೆ ಬಂದು ಸಮಾಧಾನ ಮಾಡುವುದು ಮಾಮೂಲಾಗಿದೆ. ಇದು ಏನನ್ನು ಸೂಚಿಸುತ್ತಿದೆ? ಸಿದ್ಧರಾಮಯ್ಯನವರು ಪಕ್ಷವನ್ನು, ಶಾಸಕರನ್ನು, ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ; ದಿನೇದಿನೇ ಪಕ್ಷದ ಒಳಗೇ ‘ಅತೃಪ್ತರು’ ಹೆಚ್ಚಾಗುತ್ತಿದ್ದಾರೆ ಅಲ್ಲವೇ?.
ಭಾಷೆ-ಮಾಧ್ಯಮ ಮುಂತಾಗಿ:- (೧)ಇಂದಿನ ನಮ್ಮ ಪತ್ರಿಕಾ ಮತ್ತು ಟಿವಿ ಮಾಧ್ಯಮಗಳ ರೀತಿ ನೀತಿಗೆ ಕನ್ನಡಿ ಹಿಡಿಯುವ ‘ನೀವೆಲ್ಲ ಸರ್ವಜ್ಞರೇ ಎಂದ ಆ ಹೆಣ್ಣು ಮಗಳಿಗೆ ಏನು ಉತ್ತರ ಕೊಡಲಿ?’ ಲೇಖನ ಪೀತ ಪತ್ರಿಕ್ಯೋದ್ಯಮದಿಂದ ನೊಂದ ಹೆಣ್ಣುಮಗಳೊಬ್ಬಳ ಸತ್ಯ ಕಥೆ.ಸರ್ಕಾರಿ ಹೈಸ್ಕೂಲೊಂದರಲ್ಲಿ ಮುಖ್ಯಪೋಧ್ಯಾಯಿನಿ ಆಗಿದ್ದ ಆಕೆಯನ್ನು ನೋಯಿಸಲು ಒಬ್ಬ ಪುಡಿ ಪತ್ರಕರ್ತ, R T I ಅರ್ಜಿ,ರಾಜ್ಯ ಮಟ್ಟದ ಟಿವಿ ವಾಹಿನಿಯ ವರದಿಗಾರ ಎಲ್ಲರೂ ಒಂದಾಗಿ ದಂಡೆತ್ತಿ ಬಂದ ನೋವಿನ ಕಥನ. ಆಕೆ ದಂಡಾವತಿಯವರಿಗೆ ತನ್ನ ಕಥೆಯನ್ನು ಫೋನ್ ಮೂಲಕ ಹೇಳಿದ ನಂತರ .’ಸರ್ಕಾರಿ ನೌಕರರು ಭ್ರಷ್ಟಾಚಾರ ಮಾಡಿ ಸಿಕ್ಕಿಬಿದ್ದರೆ ದೊಡ್ಡದಾಗಿ ಫೋಟೋ ಹಾಕಿ ಸುದ್ದಿ ಮಾಡುತ್ತೀರಿ. ಪತ್ರಕರ್ತರು ಭ್ರಷ್ಟಾಚಾರ ಮಾಡಿದರೆ?ನಾವು ಎಲ್ಲಿ ಬರೆಯೋಣ?’ ಎಂದು ಕೇಳುವ ಪ್ರಶ್ನೆ ಸರಿಯಾದದ್ದೇ. ಅದು ತಪ್ಪು ಎನ್ನುವಂತಿಲ್ಲ. ಆದರೆ ಹೇಗೆ ಸರ್ಕಾರಿ ನೌಕರರೆಲ್ಲರೂ ಸತ್ಯಹರಿಶ್ಚಂದ್ರ,ಧರ್ಮರಾಯರಲ್ಲವೋ ಅದೇ ರೀತಿ ಇಡೀ ಪತ್ರಿಕ್ಯೋದ್ಯಮವೇ ಕಾಮಾಲೆ ಕಣ್ಣಿನದು, ಸತ್ಯಾಸತ್ಯತೆ ತಿಳಿಯದೆ ಜನರಿಗೆ ತೊಂದರೆ ಕೊಡುವುದೇ ಅದರ ಉದ್ದೇಶ ಎಂದು ಹೇಳುವ ಹಾಗೂ ಇಲ್ಲವಲ್ಲ. ಪದ್ಮರಾಜರು ಯಾವ ತೀರ್ಪು ಕೊಡಲು ಹೋಗುವುದಿಲ್ಲ. ‘ಪತ್ರಕರ್ತರಾದ ನಾವು ಅಷ್ಟು ಪ್ರಶ್ನಾತೀತರೆ? ನನಗಂತೂ ಅರ್ಥ ಆಗುತ್ತಿಲ್ಲ’ ಎಂದಷ್ಟೇ ಹೇಳಿ ಲೇಖನ ಮುಗಿಸುತ್ತಾರೆ.
(೨) ನೊಂದ ಆ ಮುಖ್ಯೋಪಧ್ಯಾಯಿನಿಯ ಪ್ರಶ್ನೆಗೆ ಒಂದು ರೀತಿಯಲ್ಲಿ ಉತ್ತರವೇನೋ ಎಂದು ಎಂಬಂತೆ ಇದೆ ‘ಪತ್ರಿಕೋದ್ಯಮಕ್ಕೆ ಇದು ಕೊನೆಯ ಅವಕಾಶವೇ?’ ಎಂಬ ಲೇಖನ. ವಿನೋದ್ ಮೆಹ್ತಾ ಅವರ ‘ಎಡಿಟರ್ ಅನ್ ಪ್ಲಗ್ಡ್ ‘ ಪುಸ್ತಕದ ಬಗ್ಗೆ ಬರೆಯುತ್ತಾ ಪದ್ಮರಾಜ ದಂಡಾವತಿ ಅವರು ಪತ್ರಿಕೋದ್ಯಮದ ಸುವರ್ಣ ಕಾಲ ಅರವತ್ತು ಎಪ್ಪತರ ದಶಕದಲ್ಲಿಯೇ ಮುಗಿದು ಹೋಯಿತೇ? ಆಗ ಎಂಥೆಂಥ ಪತ್ರಕರ್ತರಿದ್ದರು ಎಂದು ಹಿರಿಯರನ್ನು ನೆನೆಸಿಕೊಳ್ಳುತ್ತಾರೆ. ‘ಎಪ್ಪತ್ತರ ದಶಕದ ಸಂಪಾದಕ ತನ್ನನ್ನೇ ತಾನು ವೃತ್ತಿಗೆ ಸಮರ್ಪಿಸಿಕೊಂಡಿದ್ದ. ಆತ ತುಂಬ ಓದಿಕೊಂಡವನಾಗಿದ್ದ.
ಆದರೆ ಈಗಿನ ಕಾಲದ ಸಂಪಾದಕನ ಹಾಗೆ ‘ಆಲ್ ರೌಂಡರ್’ ಆಗಿರಲಿಲ್ಲ. ಈಗಿನ ಸಂಪಾದಕ ಬ್ಯಾಟಿಂಗ್, ಬೌಲಿಂಗ್,ಫೀಲ್ಡಿಂಗು ತಿಳಿದವನು ಮಾತ್ರ ಆಗಿದ್ದರೆ ಸಾಲದು. ಅಗತ್ಯ ಬಿದ್ದರೆ ಹನ್ನೆರಡನೆಯ ಆಟಗಾರನಾಗಿ “ಡ್ರಿಂಕ್ಸ್” ಅನ್ನೂ ತಂದು ಕೊಡಬೇಕು’. ‘ಔಟ್ ಲುಕ್’ ಹತ್ತು ವರ್ಷಗಳ ಹಿಂದೆ ನಡೆಸಿದ ಸಮೀಕ್ಷೆಯೊಂದರಲ್ಲಿ ಎಂದಿನಂತೆ ರಾಜಕಾರಣಿಗಳು ಭ್ರಷ್ಟರ ಪಟ್ಟಿಯಲ್ಲಿ ಮೊದಲಿನ ಸ್ಥಾನದಲ್ಲಿದ್ದರಂತೆ. ಈಚೆಗೆ ‘ಇಂಡಿಯಾ ಟುಡೆ’ ನಡೆಸಿದ ಸಮೀಕ್ಷೆಯೊಂದರಲ್ಲಿ ಪತ್ರಕರ್ತರೂ ಭ್ರಷ್ಟರ ಪಟ್ಟಿಯಲ್ಲಿ ಮೂರು ನಾಲ್ಕು ಸ್ಥಾನಗಳಲ್ಲಿಯೇ ಇದ್ದಾರಂತೆ. …….ಏಕೆ ಹೀಗಾಯಿತು? ………. ಸಮಸ್ಯೆ ಏನಾಗಿದೆ ಎಂದರೆ ನಮ್ಮ ವರ್ತನೆಗಳು ಸಾರ್ವಜನಿಕ ಬದುಕಿನಲ್ಲಿ ವಿಮರ್ಶೆಗೆ ಒಳಪಡಬೇಕು ಎಂದು ನಾವು (=ಪತ್ರಕರ್ತರು) ಬಯಸಿಲ್ಲ ಎಂದು ವಿಷಾದಿಸಿದ್ದಾರೆ.
ಬೇಕಿರುವುದು:- ‘ಉತ್ತರ ಕರ್ನಾಟಕ ಎಂಬ ಅಳುವ ಕೂಸು’ (೨೦-೦೯-೨೦೧೪) ಕರ್ನಾಟಕವನ್ನು ಎರಡು ಭಾಗಗಳಾಗಿ ಒಡೆಯಬೇಕು. ಇಲ್ಲವಾದರೆ ಯಾವ ಪಕ್ಷದ ಸರ್ಕಾರ ಬರಲಿ ನಮ್ಮ ಉದ್ಧಾರ ಆಗುವುದಿಲ್ಲ ಎಂದು ಆಗಾಗ ಆ ಕಡೆಯ ಕೆಲವು ಶಾಸಕರ ಮಾತಿನ ಹಿಂದಿರುವ ದುಗುಡ, ಅವರನ್ನು ಅವಮಾನಿಸುವ ಮಾಧ್ಯಮಗಳಲ್ಲಿನ ಬಾಯಿಬಡಕರು ಮತ್ತು ಚಳುವಳಿ ಹೆಸರಿನ ಪಡ್ಡೆ ಹುಡುಗರ ತೀವ್ರ ಭಾವಾವೇಶವನ್ನು ಎಳೆಎಳೆಯಾಗಿ ಬಿಡಿಸಿಡುವ ಲೇಖನ. ಡಾ. ಡಿ ಎಂ ನಂಜುಡಪ್ಪ ಸಮಿತಿಯ ಸುಧೀರ್ಘ ವರದಿಯಲ್ಲಿ ಆಗಿನ ಒಟ್ಟು ೧೭೫ ತಾಲ್ಲೂಕುಗಳ ಪೈಕಿ ೧೧೪ ತಾಲ್ಲೂಕುಗಳು ಹಿಂದುಳಿದಿವೆ ಎಂದು ಗುರುತಿಸಲಾಗಿತ್ತು. ಆ ವರದಿಯ ಪ್ರಕಾರವೇ ಆ ೧೧೪ ಹಿಂದುಳಿದ ತಾಲ್ಲೂಕುಗಳ ಪೈಕಿ ೫೯ ತಾಲ್ಲೂಕುಗಳು ಉತ್ತರ ಕರ್ನಾಟಕದಲ್ಲಿಯೇ ಇವೆ. ಅದರಲ್ಲಿ ೩೯ ಅತಿ ಹೆಚ್ಚು ಹಿಂದುಳಿದ ತಾಲ್ಲೂಕುಗಳು..
ಆಗಿನ ಮೈಸೂರು(ಈಗಿನ ಕರ್ನಾಟಕ) ರಾಜ್ಯ ಏಕೀಕರಣವಾದ ಮೇಲೆ ಉತ್ತರ ಭಾಗಕ್ಕೆ ರಾಜ್ಯ ಸರ್ಕಾರದ ರಚನೆಯಲ್ಲಿ ದೊಡ್ಡ ಪಾಲು ಸಿಕ್ಕಿತು. ಆ ಭಾಗದವರೆ ಮುಖ್ಯ ಮಂತ್ರಿಗಳೂ ಆದರು. ಆದರೂ ಉತ್ತರ ಕರ್ನಾಟಕ ಹಿಂದೆಯೇ ಉಳಿಯಿತು. ಒಳ್ಳೆಯ ರಸ್ತೆಗಳು, ಒಳ್ಳೆಯ ಶಾಲೆಗಳು, ಒಳ್ಳೆಯ ಆಸ್ಪತ್ರೆಗಳು ಈಗಲೂ ಉತ್ತರ ಕರ್ನಾಟಕದ ಅನೇಕ ಊರುಗಳಿಗೆ ನಡುರಾತ್ರಿ ಬೀಳುವ ಕನಸುಗಳು.. ಹಳ್ಳಿಯಲ್ಲಿ ಕೆಲಸವಿಲ್ಲವೆಂದು ಗಂಟು ಮೂಟೆ ಕಟ್ಟಿಕೊಂಡು ಮನೆಗೆ ಬೀಗ ಹಾಕಿ ಪಕ್ಕದ ರಾಜ್ಯಕ್ಕೆ ಕಲ್ಲು,ಮಣ್ಣು ಹೊರುವ,ಮನೆ ಕಟ್ಟುವ ಕೂಲಿ ಕೆಲಸಕ್ಕೆ ಇಡೀ ಊರಿಗೆ ಊರೇ ವಲಸೆ ಹೋಗುತ್ತಾರೆ. ಇನ್ನು ಆ ಭಾಗದಲ್ಲಿರುವ ವಿ ವಿ ಗಳ ಕುಲಪತಿಗಳಲ್ಲೂ ದಕ್ಷಿಣದವರದ್ದೇ ಪಾರುಪತ್ಯ. ಈ ತರಹದ ಇನ್ನೂ ಹಲವು ವಿದ್ಯಮಾನಗಳು ಆ ಲೇಖನದಲ್ಲಿವೆ. ಉತ್ತರ ಕರ್ನಾಟಕದವರ ಬೇಡಿಕೆಯನ್ನು ‘ಎಂದೆಂದಿಗೂ ಕರ್ನಾಟಕ ಒಂದೇ. ಅದನ್ನು ಎರಡಾಗಲು ಬಿಡೆವು’ ಎಂಬ ಭಾವಾವೇಶದಿಂದ ತಳ್ಳಿಹಾಕುವುದು ಸುಲಭ.ಆದರೆ ಸತ್ಯವನ್ನು ಅರ್ಥಮಾಡಿಕೊಳ್ಳುವುದಾದರೂ ಬೇಡವೇ? ಎಂಬ ಪ್ರಶ್ನೆಯೊಂದಿಗೆ ಲೇಖನ ಮುಗಿಯುತ್ತದೆ.
ಹುಡುಕಾಟ:- ‘ನಾಶವಾಗುವ ದಾರಿ ನಿಕಟದಲ್ಲಿಯೇ ಇರುತ್ತದೆ ..! (೧-೧೨-೨೦೧೩) ‘ತೆಹಲ್ಕಾ ಪತ್ರಿಕೆಯ ಪ್ರಧಾನ ಸಂಪಾದಕ ತರುಣ್ ತೇಜಪಾಲ್ ಅವರು ಏರಿದ ಅತಿ ಎತ್ತರಿಂದ ಕೆಳಗೆ ಬಿದ್ದದ್ದನ್ನು ವಿಶ್ಲೇಸಿಸುವ ಲೇಖನ. ತೇಜಪಾಲ್ ಹೆಣ್ಣು ಮಕ್ಕಳ ಪರವಾಗಿ ಬರೆದ, ಬರೆಸದ ಸಂಗತಿಗಳೇ ಇರಲಿಲ್ಲ. ಅವರ ಹಕ್ಕುಗಳ ಬಗ್ಗೆ ಬರೆದಿದ್ದರು. ಕೆಲಸದ ಸ್ಥಳದಲ್ಲಿ ಆಗುವ ಲೈಗಿಕ ಕಿರುಕುಳದ ಬಗ್ಗೆ ಬರೆದಿದ್ದರು .. ಈಗ ತರುಣ್ ವಿರುದ್ಧವೇ ಈ ಎಲ್ಲ ಆರೋಪಗಳೂ ಇವೆ. ಪುರುಷ ಏಕೆ ಹೀಗೆ ನಡೆದುಕೊಳ್ಳುತ್ತಾನೆ? ಆತನ ಒಳಗೆ ಯಾವಾಗಲೂ ಒಬ್ಬ ಕೀಚಕ ಜಾಗೃತನಾಗಿರುತ್ತಾನೆಯೇ? .. ತಂದೆಯ ವಯಸ್ಸು, ತಾತನ ವಯಸ್ಸು ಎಂಬುದೆಲ್ಲಾ ಹುಸಿಯೇ? ಪುರುಷರಾದ ನಾವು ಮುಖ ಮುಚ್ಚಿಕೊಳ್ಳಲು ಇನ್ನೂ ಏನೇನು ಆಗಬೇಕು?
ದಂಡಾವತಿ ಅವರ ಲೇಖನಗಳಲ್ಲಿನ ಒಂದು ವಿಶೇಷತೆ ಎಂದರೆ ಅವರು ಓದುಗರಿಗೆ ‘ನಾನು ನಿಮ್ಮೊಳಗೊಬ್ಬ’ ಎಂದು ಬರೆಯುವ ರೀತಿ. ಅವರು ತೀರ್ಪು ಕೊಡಲು ಹೋಗುವುದಿಲ್ಲ. ಅವರ ಲೇಖಗಳಲ್ಲಿನ ಸಂಗತಿಗಳನ್ನು,ಅಲ್ಲಿ ಬರುವ ವ್ಯಕ್ತಿಗಳನ್ನು ಇದು ಕಪ್ಪು ಅದು ಬಿಳಿ ಎಂದು ಪ್ರತ್ಯೇಕ ಭಾಗ ಮಾಡಿ ನನ್ನ ಕೆಲಸ ಆಯಿತು ಎಂದು ಕೈ ತೊಳೆದು ಕೊಳ್ಳುವುದಿಲ್ಲ.




0 Comments