ಈ ಅಭಿಪ್ರಾಯವನ್ನು ಫೇಸ್ ಬುಕ್ ನಿಂದ ತೆಗೆದುಕೊಳ್ಳಲಾಗಿದೆ.
ನಾಗೇಶ್ ಕಾಳೇನಹಳ್ಳಿ
ಸುಧೀರ್ಘವಾದ ಕೋರ್ಟ್ ಆದೇಶದ ಸಾರಾಂಶ ಇಲ್ಲಿದೆ
ಅಗ್ರಹಾರ ಕೃಷ್ಣಮೂರ್ತಿ, ನಿವೃತ್ತ ಕಾರ್ಯದರ್ಶಿ, ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ ಇವರು ಕೇಂದ್ರ ಸಾಹಿತ್ಯ ಅಕಾಡೆಮಿ ತಮ್ಮ ಮೇಲೆ ಹೊರಿಸಿದ್ದ ಕೆಲವು ಆರೋಪಗಳನ್ನು ಪ್ರಶ್ನಿಸಿ, ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಸದರಿ ಅರ್ಜಿಯು ಇತ್ಯರ್ಥಗೊಂಡಿದೆ. ಅಗ್ರಹಾರ ಕೃಷ್ಣಮೂರ್ತಿಯವರು ೧೯೮೬ರಲ್ಲಿ ಉಪ ಕಾರ್ಯದರ್ಶಿಯಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಬೆಂಗಳೂರಿನ ಪ್ರಾದೇಶಿಕ ಕಚೇರಿಗೆ ನೇಮಕಗೊಂಡಿದ್ದರು. ೨೦೦೬ರಲ್ಲಿ ಸೇವಾನುಭವ ಮತ್ತು ಹಿರಿತನವನ್ನು ಆಧರಿಸಿ ಅವರಿಗೆ ನವದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಲಾಗಿತ್ತು. ಸದರಿ ನೇಮಕಾತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಪರಿನಿಯಮಗಳ ಅನುಸಾರವಾಗಿಯೇ ಇತ್ತು.
ಅವರು ನಿವೃತ್ತರಾಗುವುದಕ್ಕೆ ಕೆಲವೇ ದಿನಗಳಿರುವಾಗ, ಅವರ ಮೇಲೆ ಕೆಲವು ಆಪಾದನೆಗಳನ್ನು ಹೊರಿಸಲಾಗಿತ್ತು. ಈ ಸಂಬಂಧದಲ್ಲಿ ಇಲಾಖೆ ವಿಚಾರಣೆ ನಡೆದು, ಅವರಿಗೆ ದಂಡ ವಿಧಿಸಿ ಆದೇಶ ಹೊರಡಿಸಲಾಗಿತ್ತು. ೨೦೧೩ರಲ್ಲಿ ಅವರ ಸೇವೆಯು ಮುಗಿದ ಕಾರಣ ವಯೋನಿವೃತ್ತಿ ಹೊಂದಿದರು. ಆ ಸಂದರ್ಭದಲ್ಲಿ ತಮ್ಮ ಮೇಲಿನ ಆಪಾದನೆಗಳನ್ನು ಹಾಗೂ ದಂಡ ವಿಧಿಸಿರುವುದನ್ನು ಪ್ರಶ್ನಿಸಿ, ನ್ಯಾಯಾಲಯದ ಮೊರೆ ಹೋಗಿದ್ದರು.
ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅವರು ಸಲ್ಲಿಸಿದ್ದ ರಿಟ್ ಅರ್ಜಿಯು ನ್ಯಾಯಾಲಯದ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲವೆಂದು ಪ್ರತ್ಯರ್ಜಿದಾರ ಅಕಾಡೆಮಿಯು ಮಂಡಿಸಿದ್ದ ವಾದವನ್ನು ತಳ್ಳಿಹಾಕಿದ ಉಚ್ಚ ನ್ಯಾಯಾಲಯವು, ಶ್ರಿ ಅಗ್ರಹಾರ ಕೃಷ್ಣಮೂರ್ತಿಯವರು ಮೂಲತಃ ಬೆಂಗಳೂರಿನ ಪ್ರಾದೇಶಿಕ ಕಚೇರಿಗೆ ನೇಮಕಗೊಂಡಿದ್ದರಿಂದ ಹಾಗೂ ಅವರು ನಿವೃತ್ತಿ ನಂತರವೂ ಬೆಂಗಳೂರಿನಲ್ಲಿಯೇ ವಾಸಿಸುತ್ತಿರುವುದರಿಂದ, ಸಂವಿಧಾನದ ೧೨ನೇ ಅನುಚ್ಛೇದದ ಅನುಸಾರ ಹಾಗೂ ಸರ್ವೋಚ್ಚ ನ್ಯಾಯಾಲಯದ ಕೆಲವು ತೀರ್ಪುಗಳ ಆಧಾರದ ಮೇಲೆ ಇವರ ವಾದವನ್ನು ಎತ್ತಿ ಹಿಡಿದಿದೆ.
ಅವರು ಕೇಂದ್ರ ಸಾಹಿತ್ಯ ಆಕಾಡೆಮಿಯ ಕಾರ್ಯ ನಿರ್ವಾಹಕ ಮಂಡಳಿಯಿಂದ ನಿಯಮಾನುಸಾರವಾಗಿ ಕಾರ್ಯದರ್ಶಿ ಹುದ್ದೆಯನ್ನು ಪಡೆದುಕೊಂಡಿರುತ್ತಾರೆ ಎಂದು ಅಭಿಪ್ರಾಯ ಪಟ್ಟಿರುವ ಉಚ್ಚ ನ್ಯಾಯಾಲಯವು, ಅವರ ನೇಮಕಾತಿ ಗುತ್ತಿಗೆ ಸ್ವರೂಪದ್ದು ಎಂಬ ಪ್ರತಿವಾದಿಗಳ ವಾದವನ್ನು ವಜಾಗೊಳಿಸಿದೆ.
ನಿವೃತ್ತಿಗೊಂಡ ನೌಕರರ ಮೇಲೆ ಯಾವುದೇ ದಂಡವನ್ನು ವಿಧಿಸುವ ನಿಯಮವು ಅಕಾಡೆಮಿಯ ಪರಿನಿಯಮಗಳಲ್ಲಿ ಇಲ್ಲದ ಕಾರಣದಿಂದ ಅವರ ಮೇಲೆ ವಿಧಿಸಿದ್ದ ದಂಡದ ಆದೇಶವನ್ನು ರದ್ದುಪಡಿಸಿರುವ ಉಚ್ಚ ನ್ಯಾಯಾಲಯವು ಅಗ್ರಹಾರ ಕೃಷ್ಣಮೂರ್ತಿಯವರ ಅರ್ಜಿಯನ್ನು ಅಂಗೀಕರಿಸಿದೆ.
0 ಪ್ರತಿಕ್ರಿಯೆಗಳು