ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ನಾದಾ’ ಲೀಲೆ: ಪ್ರವಾಸವನ್ನು ಹೀಗೆ ನೋಡಿದರೆ….

ಇವರ ಹೆಸರು ‘ದಾ’. ಇದೇನಪ್ಪ ಇಂತ ವಿಚಿತ್ರ ಹೆಸರು. ಅದೂ ಒಂಟಿ ಅಕ್ಷರದ್ದು.. ಅಂತ ಮೂಗೇರಿಸಬೇಡಿ. ‘ದಾ’ ವನ್ನ ನಾವು ಆಗೀಗ ‘ಡಾ. ದಾ’ ಅಂತಲೂ ಕರೆಯುತ್ತೇವೆ ಅಂದರೆ ಡಾಕ್ಟರ್ ದಾ ಅಂತ. ವೈಎನ್ಕೆ ಯಾವಾಗಲೂ ಬಳಸ್ತಿದ್ದರಲ್ಲ ‘ಘಾ ‘ಆ ತರಹದ ಯಾರೋ ಒಬ್ಬ ಅಂತ ಅಂದುಕೊಳ್ಳಲೆಬೇಡಿ ಇವರು ನಿಜಕ್ಕೂ ‘ದಾ’. ‘ದಾಸಜನ’ದ ‘ದಾ’ . ಮಂಗಳೂರು ಬಲ್ಲವರಿಗೆ ‘ದಾಸಜನ’ ಖಂಡಿತಾ ಗೊತ್ತು. ಮಂಗಳೂರಿನವರಲ್ಲವಾದರೆ ಒಂದು ಗುಟುಕು ಒಂದು ಪರಿಚಯ ಬೇಕು. ದಾಮೋದರ ಶೆಟ್ಟಿ, ಸತ್ಯನಾರಾಯಣ ಮಲ್ಲಿಪಟ್ಟಣ, ಜವಳಿ, ನರಸಿಂಹಮೂರ್ತಿ ಎನ್ನುವ ನಾಲ್ಕು ಹೆಸರುಗಳ ಮೊದಲ ಅಕ್ಷರ ಬೆರತ ಕಾರಣದಿಂದ ಹುಟ್ಟಿದ್ದೇ ‘ದಾಸಜನ’. ಈಗ ಅರ್ಥ ಆಯಿತಲ್ಲವಾ ‘ದಾ’ ಅಂದ್ರೆ ಏನು ಅಂತ. ಡಾ. ನಾ. ದಾಮೋದರ ಶೆಟ್ಟಿ.

ಸಾಹಿತ್ಯ, ಸಂಶೋಧನೆ, ಅಧ್ಯಾಪನ, ರಂಗಭೂಮಿ ಇನ್ನೂ ಹೀಗೆ ಏನೇನೋ ಕ್ಷೇತ್ರದ ಎಲ್ಲರಿಗೂ ಮಂಗಳೂರು ಅಂದರೆ ದಾಮೋದರ ಶೆಟ್ಟಿಯವರೇ. ಅಲ್ಲಿ ಒಂದು ನಾಟಕ ಆಗಬೇಕು ಎಂದು ನೀನಾಸಂನವರಿಗೆ ಅನಿಸಿದರೆ ಅದು ದಾಮೋದರ ಶೆಟ್ಟಿ ಅವರ ಮೂಲಕವೇ, ರಾಮಚಂದ್ರ ಶರ್ಮರಿಗೆ ೭೦ ತುಂಬಿತು ಎಂದು ಒಂದು ಸಂಕಿರಣ ಮಂಗಳೂರಿನಲ್ಲಿ ಎಂದರೆ ಸಂಶಯವೇ ಬೇಡ. ಅದು ದಾಮೋದರ ಶೆಟ್ಟಿಯವರಿದ್ದೆ    ಆಗಬೇಕು. ಯಾವುದೇ ಅಕಾಡೆಮಿಯ ಸಂಕಿರಣ ಮಂಗಳೂರಿನಲ್ಲಿ ಆಗಬೇಕಾದರೆ ಶೆಟ್ಟರು ಬೇಕೇ ಬೇಕು.

ಸದಾ ನಗುನಗುತ್ತಾ, ಉಲ್ಲಾಸ ಎನ್ನುವುದರ ಅನ್ವರ್ಥ ನಾಮವೇನೋ ಎನ್ನುವಂತೆ ಓಡಾಡುವ ನಾ ದಾ ‘ಪ್ರಜಾವಾಣಿ’ಗೆ ‘ತೆಂಕಣ ಸುಳಿಗಾಳಿ’ ಅಂಕಣ ಬರೆದವರು. ಈಗಿನ ನುಡಿಸಿರಿಯ ಹಿಂದೆ ಇರುವ ಮುಖ್ಯ ಹೆಸರುಗಳಲ್ಲೊಂದು. ಹೀಗೆ ನಾದಾ ಕಂಡವರಿಗೆ ಕಂಡಷ್ಟು. ಅದೆಲ್ಲಾ ಹೇಗಾದರೂ ಇರಲಿ ನಾ ದಾ ಅಂದರೆ ಒಬಾ ಗೆಳೆಯ, ಸಜ್ಜನ ಗೆಳೆಯ. ಅಂತಹ ಗೆಳೆಯರೊಬ್ಬರು ಕಂಡ ಲೋಕವೊಮ್ನ್ದು ಇಂದಿನಿಂದ ಪ್ರತೀ ಬುಧವಾರದಿಂದ ನಿಮ್ಮ ಮುಂದೆ ಬಿಚ್ಚಿಕೊಳ್ಳಲಿದೆ.

ಓದಿ, ನಿಮ್ಮ ಪ್ರತಿಕ್ರಿಯೆ ಮುಖ್ಯ. ನಮಗೂ, ನಾದಾರಿಗೂ

 

ದೇಶ ಸುತ್ತುವುದರ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಹಾಗೆ ಸುತ್ತಿ ಪಡೆದ ಅನುಭವವನ್ನು ಪ್ರವಾಸಕಥನವಾಗಿ ನಿರೂಪಿಸುವ ಉದ್ದೇಶವಾಗಲೀ ಅದಕ್ಕಾಗಿ ಪೆನ್ನು ಕಾಗದ ಹಿಡಿದು ಪರದಾಡುವ ಜಾಯಮಾನವಾಗಲೀ ನನ್ನದಲ್ಲ. ಆದರೆ ಒಮ್ಮೆ ನೋಡಿದ ಪ್ರದೇಶ ಬಹುಕಾಲ ಮನಸ್ಸಿನಲ್ಲಿ ಉಳಿದರೆ, ಅಲ್ಲಿನ ಯಾವುದಾದರೂ ವೈಶಿಷ್ಟ್ಯಗಳು ಮನದ ಮೂಲೆಯಲ್ಲಿ ಕುಳಿತು ಆಗೊಮ್ಮೆ ಈಗೊಮ್ಮೆ ಕಾಡಿದರೆ ಅವುಗಳನ್ನು ಅವಕಾಶಕ್ಕನುಸರಿಸಿ ದಾಖಲಿಸುವುದುಂಟು.

೧೯೮೮ರಲ್ಲಿ ಒಮ್ಮೆ, ೧೯೯೨ ಇನ್ನೊಮ್ಮೆ ಇಂಗ್ಲೆಂಡಿಗೆ ಹೋಗಿದ್ದೆ. ಆವಾಗ ಏನೂ ಬರೆಯದೆ ಕುಳಿತವ ೨೦೦೨ರಲ್ಲಿ ಇದ್ದಕ್ಕಿದ್ದಂತೆಯೆ ’ಇಂಗ್ಲೆಂಡ್ ಕವನಗಳು’ ಎಂಬ ಕವನ ಸಂಕಲನ ಪ್ರಕಟಿಸಿದೆ. ಒಮ್ಮೆ ಜರ್ಮನಿಗೆ ಹೋದುದು ನನ್ನ ’ಸರದಿ’ ಕಾದಂಬರಿಗೆ ಆಹಾರವಾಯಿತು..ಇದೀಗ ಯುರೋಪ್ ಪ್ರವಾಸ ಮುಗಿಸಿ ಊರಿಗೆ ಬಂದು ದೀರ್ಘ ನಿದ್ದೆ ತೆಗೆಯಲೆಂದು ಮಲಗಿದ್ದಲ್ಲಿಗೇ ’ಜಿನಮ’ರ (ಜಿ.ಎನ್.ಮೋಹನ್) ಫೋನು. ಪ್ರವಾಸ ಕಥನ ಬರೆಯಿರಿ ಎಂದು.

ನನ್ನ ಪಾಡಿಗೆ ನಾನು ಸಿಕ್ಕ ಅವಕಾಶ ಬಳಸಿ ದುಬಾಯಿ, ಅಬೂಧಾಬಿ, ಶಾರ್ಜಾ, ಸಿಂಗಾಪೂರ, ಇಂಗ್ಲಂಡ್, ಜರ್ಮನಿ, ಪ್ಯಾರಿಸಾದಿಗಳನ್ನು ನೋಡಿದ್ದಕ್ಕೂ ಇದೀಗ ಪ್ಯಾಕೇಜ್ ಟೂರಿನಲ್ಲಿ ಯರೋಪಿನ ಹತ್ತು ದೇಶ ನೋಡಿದ್ದಕ್ಕೂ ಬಹಳ ವ್ಯತ್ಯಾಸವಿದೆ. ಈಗಿನದು ಮಿಂಚಿನ ಓಟ,ನೋಟ.. ಜಿನಮ ಕೇಳಿದರೆಂದ ಮೇಲೆ ಮುಗಿಯಿತು. ನೋಡಿದ ಎಲ್ಲ ದೇಶಗಳ ಹಿಂದಿನ ಇಂದಿನ ಅನುಭವಗಳನ್ನು ಕಲಸು ಮೇಲೋಗರ ಮಾಡಿ ಬಡಿಸುವ ಪ್ರಯತ್ನವನ್ನಿಲ್ಲಿ ಮಾಡುವ ತೀರ್ಮನಕ್ಕೆ ಬಂದು ಅದಕ್ಕೀ ಒಗ್ಗರಣೆ ಹಾಕಿದೆ.

ಈಗಾಗಲೇ ಹೇಳಿದಂತೆ, ವಿಮಾನ ನಿಲ್ದಾಣಕ್ಕೆ ಹೊರಡುವ ಹೊತ್ತಿಗೆ ಆದ ಗಡಿಬಿಡಿಯಿಂದ ಮೊದಲುಮಾಡಿ, ವಿಮಾನವೇರಿದಾಗ ಗಗನಸಖಿ ನಕ್ಕು ಸ್ವಾಗತಿಸುವಲ್ಲಿಂದ ಮುಂದುವರಿದು ರೂಪಿತಗೊಂಡ ಕಥನ ಇದಲ್ಲ. ಮನಸ್ಸಿಗೆ ಗಾಢವಾಗಿ ನಾಟಿದ ವಿಷಯಗಳ ಚಿಕ್ಕ ಚಿಕ್ಕ ನಿರೂಪಣೆಯಿದು.

ಯುರೋಪಿನ ಹೋಟೆಲ್ಲುಗಳು: ಸಾಮಾನ್ಯವಾಗಿ ಹೋಟೆಲ್ಲುಗಳು ರಸ್ತೆಯ ಇಕ್ಕೆಲಗಳನ್ನು ಬಳಸಿ ಕೊಂಡಿರುತ್ತವೆ. ಬಹುಮುಖ್ಯವಾಗಿ ವಯಸ್ಕರು ದಾರಿಹೋಕರನ್ನು ನೋಡಿಯೂ ನೋಡದವರಂತೆ ಪರಸ್ಪರ ಮಾತನಾಡುತ್ತಾ ಆ ಇಕ್ಕೆಲಗಳ ಕುರ್ಚಿಗಳಲ್ಲಿ ಕುಳಿತು ಬಿಯರನ್ನೋ ಕೋಕನ್ನೋ ಹೀರುತ್ತಿರುತ್ತಾರೆ. ತಣ್ಣನೆಯ ವಾತಾವರಣ ಅವರನ್ನು ಆವರಿಸಿರುತ್ತದೆ. ನಾವು ಅಂಥ ಒಂದು ಹೋಟೆಲ್ಲಿಗೆ ಹೋಗಿ ಒಂದು ಟೀ ಕೇಳಿದೆವು. ಅವಳದು ಒಂದು ಪ್ರಶ್ನೆ: ’ಕುಳಿತುಕೊಳ್ತೀರಾ? ಕೊಂಡೊಯ್ತೀರಾ?’ ನಾವು ’ಕೊಂಡೊಯ್ತೇವೆ’ಎಂದೆವು. ಆದರೂ ’ಅವಳು ಯಾಕೆ ಹಾಗೆ ಕೇಳಿದಳು’ ಎಂಬ ಸಹಜ ಕುತೂಹಲಕ್ಕೆ ಕೇಳಿಬಿಟ್ಟೆ. ಅದಕ್ಕೆ ಆಕೆಯೆಂದಳು: ಕೊಂಡೊಯ್ದರೆ ಮೂರು ಯೂರೊ, ಕುಳಿತುಕೊಂಡರೆ ಇಪ್ಪತ್ಮೂರು ಯೂರೊ! ನಾವು ತಕ್ಷಣ ಅಲ್ಲಿಂದ ಕಾಲು ಕಿತ್ತೆವು.

ಇದು ನಡೆದದ್ದು ಇಟೆಲಿಯ ಜನನಿಬಿಡ ರಸ್ತೆ ಬದಿಯಲ್ಲಿ. ಆಮೇಲೆ ವಿಚಾರಿಸಿ ನೋಡಿದರೆ ತುಂಬ ವ್ಯಾಪಾರವಾಗುವ ಹೋಟೆಲುಗಳಲ್ಲಿ ಜನರು ಕುಳಿತರೆ ಏಳುವುದಿಲ್ಲವಂತೆ. ಕುಳಿತು ತಿಂದರೆ ಆ ನಾರೀಮಣಿ ನಿಮ್ಮನ್ನು ಪ್ರೀತಿಯಿಂದ ವಿಚಾರಿಸಿಕೊಂಡು ಉಪಚರಿಸುತ್ತಾಳೆ. ಇಪ್ಪತ್ತು ಯೂರೋ ಮಾತ್ರ ಹೆಚ್ಚು!

ಹೋಟೆಲ್ಲಾಗಲೀ ಅಂಗಡಿಯಾಗಲೀ ಸಾಮಾನ್ಯವಾಗಿ ಒಳಗಡೆ ಮೂತ್ರದೊಡ್ಡಿ (ಲೂ) ಇಟ್ಟಿರುತ್ತಾರೆ. ಅಲ್ಲಿಯ ಚಳಿಗೆ ನಮಗೆ ಆಗಾಗ ಮೂತ್ರ. ಎಲ್ಲಿ ಮಾಡುವುದು? ಆ ಅಂಗಡಿಗಳಿಂದ ಏನನ್ನಾದರೂ ಕೊಂಡುಕೊಂಡರೆ ಉಚಿತವಾಗಿ ಮೂತ್ರ ಮಾಡಬಹುದು, ಮೂತ್ರ ಮಾತ್ರವಾದರೆ ಮೂವತ್ತು ಸೆಂಟಿನಿಂದ ಒಂದು ಯೂರೋದಷ್ಟು ತೆರ ತೆರಬೇಕು.

ಏನಾದರೂ ಕೊಳ್ಳೋಣವೆಂದರೆ ಅಂಥ ಅಂಗಡಿಗಳಲ್ಲಿ ಎರಡು ಯೂರೋಕ್ಕಿಂತ ಕಡಿಮೆಯ ವಸ್ತುಗಳೇ ಇಲ್ಲ. ಒಂದು ಮೂತ್ರಕ್ಕೆ ನೂರನಲುವತ್ತು ರೂಪಾಯಿಗಳಂತೆ(ಎರಡು ಯೂರೋ) ಹದಿನೈದು ದಿನದ ನಮ್ಮ ಪ್ರವಾಸದಲ್ಲಿ ಎಷ್ಟು ಮೂತ್ರ ಮಾಡಬಹುದು? ಅನೇಕರಿಗೆ ಇದೇ ದೊಡ್ಡ ಸಮಸ್ಯೆಯಾಗಿ ನೀರು ಕುಡಿಯುವುದನ್ನೇ ಮೊಟಕುಗೊಳಿಸಿದರು. ಕೆಲವರು ಸಂಜೆ ಕೋಣೆಗೆ ಬಂದಮೇಲೆ ಬಾತ್ ರೂಮಿಗೆ ನುಗ್ಗಿ ಗಬಗಬನೆ ನೀರು ನುಂಗಿ ಮೂತ್ರಮಾಡಿ ದಣಿವಾರಿಸಿಕೊಳ್ಳುತ್ತಿದ್ದರು. ಹಾಗೆ ಮಾಡುವುದಕ್ಕೆ ಕಾರಣ ಮೂರು : ಒಂದು, ಹೊರಗಡೆ ಬಾಟ್ಲಿ ನೀರಿಗೆ ಮೂರು ಯೂರೋನಾದ್ರೂ ಕೊಡಬೇಕು. ಎರಡು, ಮೂತ್ರದ ಸ್ಟಾಕು ಹೆಚ್ಚಾದಷ್ಟೂ ಖರ್ಚು ಜಾಸ್ತಿ: ಅದಕ್ಕಾಗಿ ಹೊರಗಡೆ ನೀರು ಕುಡಿಯುತ್ತಿರಲಿಲ್ಲ.

ಮೂರು, ಕೆಲವು ಹೋಟೆಲ್ಲಿನಲ್ಲಿ ಒಂದು ಚಹಾದ ಜೊತೆಗೆ ಒಂದು ಲೋಟ ನೀರು ಕೇಳಿದರೆ ಅದಕ್ಕೂ ಎರಡು ಯೂರೋ! ಒಂದೆಂದರೆ ಯುರೋಪಿನ ಟಾಯ್ಲೆಟ್ಟಿನ ನೀರೂ ಕುಡಿಯುವ ನೀರೆ!ಇನ್ನೊಂದೆಂದರೆ ಅಲ್ಲಿನ ಟಾಯ್ಲೆಟ್ಟುಗಳು ನಮ್ಮಲ್ಲಿನ ಗಬ್ಬು ದೊಡ್ಡಿಗಳಂತಲ್ಲ. ಮುಟ್ಟಬೇಕಿದ್ದರೆ ಒಂದೊಂದನ್ನೂ ಕೈ ತೊಳೆದು ಮುಟ್ಟಬೇಕು. ಮೂತ್ರ ಸುರಿದು ಒಂದು ಹೆಜ್ಜೆ ಹಿಂದಿಡಬೇಕಿದ್ದರೆ ಅದಾಗಿಯೇ ಗುಂಡಿಗೆ ಜಲ ಸುರಿದು ತನ್ನ ತಾನು ಸ್ವಚ್ಛಗೊಳಿಸಿಕೊಳ್ಳುತ್ತದೆ.

ಅಲ್ಲಿ ಸಾರ್ವಜನಿಕ ಮೂತ್ರದೊಡ್ಡಿಗಳಿಲ್ಲವೆಂದಲ್ಲ; ಇವೆ, ಅದರಲ್ಲಿ ಉಚಿತ ಮೂತ್ರದೊಡ್ಡಿಗಳೂ ಇರುತ್ತವೆ. ಕೆಲವು ಸಾರ್ವಜನಿಕ ಮೂತ್ರದೊಡ್ಡಿಗಳು ಒಂದು ಯೂರೋ ತೂರಿಸಿದಾಗ ಮಾತ್ರ ತೆರೆದು ಕೊಳ್ಳುತ್ತವೆ.

ಹೆಚ್ಚಿನ ಮೇಲ್ಮಧ್ಯಮ ವರ್ಗದವರು ಉಳಿದುಕೊಳ್ಳುವ ಹೋಟೆಲ್ಲುಗಳಲ್ಲಿನ ಸ್ವಾಗತಕಾರ್ತಿಯನ್ನು ನೀವು ಅತಿ ಸುಲಭದಲ್ಲಿ ಭೇಟಿ ಆಗುವಂತಿಲ್ಲ.ಸ್ವಾಗತಕಾರರ ಕೌಂಟರಿಗಿಂತ ಸುಮಾರು ಆರು ಅಡಿ ದೂರದ ಇಕ್ಕೆಲಗಳಲ್ಲಿ ನಡುವೆ ದಾರಿಮಾತ್ರ ಬಿಟ್ಟು ಚೈನು ಹಾಕಿ ಇಟ್ಟಿರುತ್ತಾರೆ. ಆ ಕಿರು ದಾರಿಯಲ್ಲಿ ನಮ್ಮಲ್ಲಾದರೆ ನುಗ್ಗಿಬಿಟ್ಟು ನಮ್ಮ ಅತ್ಯಗತ್ಯತೆಯ ಕುರಿತು ಮಾತನಾಡತೊಡಗುತ್ತೇವೆ. ಅಲ್ಲಿ ಆ ಅವಕಾಶವೇ ಇಲ್ಲ. ಒಬ್ಬರ ಕೆಲಸ ಮುಗಿಯದೆ ಇನ್ನೊಬ್ಬರು ಆ ಚೈನು ದಾಟಿ ಮುನ್ನುಗ್ಗುವಂತೆಯೇ ಇಲ್ಲ. ಎಲ್ಲಾದರೂ ನುಗ್ಗಿದರೆ ತಕ್ಷಣ ಅಂಥವರನ್ನು ಹಿಂದಕ್ಕೆ ಕಳುಹಿಸಲು ಅವರಿಗೆ ಯಾವ ಮುಲಾಜೂ ಇಲ್ಲ.

ರೂಮುಗಳಲ್ಲಿ ಫ್ರಿಜ್ಜು, ಅದರೊಳಗೆ ಬೇಕೆಂದರೆ ದುಡ್ಡು ಕಟ್ಟಿ ಕುಡಿಯಬಹುದಾದ ಮದ್ಯ ಇರುವುದು ಸಾಮಾನ್ಯ. ’ಹೋ! ನಮಗಾಗಿ ಏನೆಲ್ಲಾ ಇಟ್ಟಿದ್ದಾರೆ ಎಂದು ತೆಗೆದು ಕುಡಿದರೆ ಅದು ನಮ್ಮ ಹಣೆಬರಹ! ಖುಷಿಕೊಡುವ ವಿಚಾರವೆಂದರೆ ಅಲ್ಲಿ ಒಂದು ಕೆಟಲ್, ಚಾ, ಕಾಫಿ ಹುಡಿ ಪ್ಯಾಕೆಟ್, ಹಾಲು ಎಲ್ಲ ಇಟ್ಟಿರುತ್ತಾರೆ. ಅದರ ಬೆಲೆ ನಾವು ಕೊಡುವ ಬಾಡಿಗೆಯಲ್ಲಿ ಸೇರಿದ್ದರೂ ಕೆಲವು ಪ್ರವಾಸಿಗರಿಗಂತೂ ಬೆಳಿಗ್ಗೆ, ಸಂಜೆ -ಒಟ್ಟು ಆರು ಯೂರೋ ಉಳಿಸಿದ ಖುಷಿ! ಇಲ್ಲವಾದರೆ ಎರಡು ಚಹಾಕ್ಕೆ ನಾನೂರ ಇಪ್ಪತ್ತು ರೂಪಾಯಿ ಕೊಡಬೇಕಿತ್ತಲ್ಲ!

 

ಬೆಳಗ್ಗೆ ಎಲ್ಲ ಹೋಟೆಲ್ ಗಳಲ್ಲಿ ಉಚಿತ ಬ್ರೇಕ್ ಫಾಸ್ಟ್. ಆಯಾ ಪ್ರದೇಶದ ತರಹಾವರಿ ತಿಂಡಿತಿನಸುಗಳ ಜೊತೆಗೆ ಬೇಕಾದಷ್ಟು ಹಣ್ಣುಹಂಪಲುಗಳು. ನಮ್ಮ ತಂಡದ ಅನೇಕರು ಉಂಡೂ ಹೋದರು,ಚೀಲದಲ್ಲಿ ಕೊಂಡೂ ಹೋದರು. ಮಧ್ಯಾಹ್ನದ ವರೆಗಿನ ಖರ್ಚಿಗೆ ಬೇಕಲ್ಲ, ಹನ್ನೊಂದು ಗಂಟೆಗೆ ಮತ್ತೆ ಹೊಟ್ಟೆ ಚುರುಚುರು ಆದರೆ? ಮೇಲಾಗಿ ಅಲ್ಲೊಂದಷ್ಟು ಯೂರೊ ಉಳಿಸಿದ ಖುಷಿ ಕೆಲವರಿಗೆ. ತಂಡದ ದೊಡ್ಡದೊಡ್ಡವರೆನಿಸಿಕೊಂಡ ಪುರುಷರು ಈ ಕೆಲಸವನ್ನು ಮಾಡುತ್ತಿದ್ದುದು ಅಷ್ಟಾಗಿ ಕಂಡುಬರುತ್ತಿರಲಿಲ್ಲ. ಮಡದಿಯರು ಮಾಡುತ್ತಿದ್ದ ಈ ಕೆಲಸಕ್ಕೆ ಅವರ ಮೌನ ಸಮ್ಮತಿಯಿತ್ತು. ಬಸ್ಸು ಹೋಗುತ್ತಿದ್ದಂತೆಯೇ ಹೆಂಗಸರ ಕೈಚೀಲದಿಂದ ಒಂದೊಂದಾಗಿ ಹೊರಬರುತ್ತಿದ್ದ ಹಣ್ಣು, ಬಿಸ್ಕತ್ತು,ಬ್ರೆಡ್-ಜಾಮುಗಳಿಗೆ ಗಂಡಸರೂ ಬಾಯಾಡಿಸುತ್ತಿದ್ದರು. ಅದರಲ್ಲಿ ನಾವಷ್ಟೇ ಪಾಪಿಗಳಲ್ಲ, ಯುರೋಪಿಯನ್ನರೂ ಹಾಗೆ ಮಾಡುತ್ತಿದ್ದರೆಂದ ಮೇಲೆ ಮತ್ತೆ ಕೇಳಬೇಕೆ? ಸಿಕ್ಕಿ ಬೀಳದಿದ್ದರಾಯಿತು, ಅಷ್ಟೆ.

ಮೇ ತಿಂಗಳು. ಯುರೋಪಿಗೆ ಇನ್ನೂ ಸೆಕೆಗಾಲ ಬಂದಿಲ್ಲವೆಂದು ಲೆಕ್ಕ. ಎಲ್ಲ ರೂಮುಗಳಲ್ಲೂ ಸೆಂಟ್ರಲ್ ಹೀಟಿಂಗ್ ಹಾಗೂ ಹವಾ ನಿಯಂತ್ರಣದ ವ್ಯವಸ್ಥೆಯಿದ್ದರೂ ಯಾವುದಕ್ಕೂ ಕೆಲಸ ಇಲ್ಲ. ಫ್ಯಾನ್ ಮಾತ್ರ ಯಾವ ರೂಮಿನಲ್ಲೂ ಇಲ್ಲ. ಹೊರಗಡೆಯ ತಂಪುಗಾಳಿಗೆ ಬಾಗಿಲು ತೆರೆದಿಡುವ ಧೈರ್ಯ ಇಲ್ಲದೆ ಏಸಿ ಹಾಕುವಂತೆ ವಿನಂತಿಸಿದರೆ ನಿರಾಕರಿಸಿ ಉತ್ತರ ಬಂತು. ಯಾಕೆ ಏಸಿ ಹಾಕುವುದಿಲ್ಲ? ನಾವು ಧಿಮಾಕಿನಲ್ಲೇ ಪ್ರಶ್ನಿಸಿದೆವು. ’ಸರಕಾರ ಹೇಳಲಿಲ್ಲ’ ಅವರೆಂದರು. ’ಅರೆ! ಏಸಿ ಹಾಕುವುದಕ್ಕೆ ಸರಕಾರ ಹೇಳಬೇಕೆ?’ ನಾವು ಹುಬ್ಬೇರಿಸಿದೆವು. ’ಹೌದು . ನಿರಂತರ ಐದು ದಿವಸ ಬಿಸಿಲು ಕಾದರೆ ಸರಕಾರ ಬೇಸಿಗೆ ಘೋಷಿಸುತ್ತದೆ. ಆಮೇಲಷ್ಟೆ ಏಸಿ ಹಾಕಬಹುದು. ಅದರ ನಡುವೆ ಒಂದು ದಿನ ಮಳೆ ಬಂದರೂ ಸೆಕೆಗಾಲ ಮುಂದಕ್ಕೆ ಹೋಗುತ್ತದೆ. ಸರಕಾರ ಸೆಕೆಗಾಲ ಡಿಕ್ಲೇರ್ ಮಾಡಿದ ಅನಂತರವೇ ಏಸಿ ಹಾಕಬಹುದು’ ಸ್ವಾಗತಕಾರನ ನಿರ್ಲಿಪ್ತ ಮಾತು.

ಆ ಮೇಲಷ್ಟೆ ನಮಗೆ ಮನವರಿಕೆ ಆಯಿತು, ಸೌಕರ್ಯ ಇದೆ ಎಂದು ಯಾವುದನ್ನೂ ಅನಗತ್ಯ ಬಳಸುವುದಲ್ಲ.ಯುರೋಪಿನ ಹೆಚ್ಚಿನ ದೇಶಗಳಲ್ಲೂ ಈ ನಿಯಮ ಜ್ಯಾರಿಯಲ್ಲಿದೆ. ನಮ್ಮಲ್ಲಿ ಹೀಗೆ ಮಾಡುವುದು ಸಾಧ್ಯವಿಲ್ಲ. ಇಲ್ಲಿ ಹೆಚ್ಚಿನ ಕಡೆ ಇರುವುದು ಸೆಕೆಗಾಲ ಮತ್ತು ಅತಿ ಹೆಚ್ಚು ಸೆಕೆಗಾಲ. ಒಂದು ವೇಳೆ ಇಂಥ ಕಾನೂನು ಜ್ಯಾರಿಗೆ ಬಂದರೂ ನಮ್ಮದು ಪ್ರಜಾಪ್ರಭುತ್ವವಲ್ಲವೆ?

ಹೆಚ್ಚಿನ ಹೋಟೆಲ್ಲುಗಳಲ್ಲಿ ಇಂಟರ್ನೆಲಟ್ ವ್ಯವಸ್ಥೆ ಇರುತ್ತದೆ. ಅರ್ಧ ಗಂಟೆ ಉಚಿತವಾಗಿ ಬಳಸಬಹುದು. ನೀವು ಲ್ಯಾಪ್ ಟಾಪ್ ತಂದಿದ್ದರೆ ರೂಮಿನಿಂದಲೇ ಇಂಟರ್ನೆಟ್ ಕನೆಕ್ಷನ್ ಪಡೆದುಕೊಳ್ಳಬಹುದು. ನಮ್ಮ ದೇಶದ ಸ್ಟಾರ್ ಹೋಟಲ್ಗಳಲ್ಲಿ ಈ ವ್ಯವಸ್ಥೆ ಪ್ರಾರಂಭಗೊಡಿದೆ. ಆದರೆ ಇಲ್ಲಿನಂತೆ ಅಲ್ಲಿ ಬೀದಿಬೀದಿಗಳಲ್ಲಿ ಟೆಲಿಫೋನ್ ಬೂತುಗಳಿಲ್ಲ. ಒಂದು ಫೋನ್ ಮಾಡಬೇಕಿದ್ದರೆ ಆ ಊರಿಡೀ ಸುತ್ತಬೇಕಾದ ಪ್ರಮೇಯ ಬಂದಿತ್ತು. ಅಂತೆಯೇ ಕಿವಿಗೆ ಫೋನು ಅಂಟಿಸಿ ನಡೆದಾಡುವವರು ಯುರೋಪಿನಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಷ್ಟೆ ಕಾಣಬಹುದು.

ಭಾರತೀಯ ಭೋಜನ ಪದ್ಧತಿ ಅನುಸರಿಸುವ ನಮಗೆ ವಿದೇಶೀ ಊಟ ರುಚಿಸುವುದು ಹೇಗೆ? ಈ ಮಂಡೆಬಿಸಿ ಎಲ್ಲರಿಗೂ ಇತ್ತು. ಕೆಲವರು ಮಾತ್ರ ಲೋಕಲ್ ಫುಡ್ಗೆ ಮಾನಸಿಕವಾಗಿ ಸಿದ್ಧರಾಗಿದ್ದರು. ವಿಶೇಷವೆಂದರೆ ನೀವು ಯುರೋಪಿನ ಎಲ್ಲೇ ಹೋಗಿ, ಅಲ್ಲೊಂದು ಭಾರತೀಯ ಹೋಟೆಲ್! ಎದುರಿಗೆ ದೊಡ್ಡದಾದ ಗಣಪತಿಯ ಶಿಲ್ಪಹೊತ್ತು ನಿಮನ್ನು ಕಾಯುತ್ತಿರುತ್ತದೆ. ಗೋಡೆಗಳಲ್ಲಿ ಭಾರತೀಯ ಚಿತ್ರಕಲೆಯ ಪ್ರಾತಿನಿಧಿಕ ರೂಪಗಳು. ಹೊರಗಿನಿಂದ ನೋಡಿದಾಗ ಚಿಕ್ಕ ದ್ವಾರವಷ್ಟೆ ಕಾಣಿಸಿದರೂ ಪ್ರತಿ ಭಾರತೀಯ ಹೋಟೆಲ್ಲೂ ಸಾಕಷ್ಟು ವಿಸ್ತಾರವಾಗಿಯೇ ಇರುತ್ತಿತ್ತು. ಆದರೂ ನಮ್ಮ ಖಾರ, ಹುಳಿ ಎಲ್ಲಿ ಸಿಗಬೇಕು? ಪಲ್ಯ, ಸಾಂಬಾರುಗಳು ಕೆಲವೊಮ್ಮೆ ಹಿಡಿಸದೇ ಹೋದರೂ ಬಾಸುಮತಿ ಅಕ್ಕಿಯ ಅನ್ನ, ದಪ್ಪ ಮೊಸರು, ಅಪ್ಪಟ ಭಾರತೀಯ ಉಪ್ಪಿನಕಾಯಿ. ಬೆಳ್ಳಗಿನ ಸಿಹಿಮಿಶ್ರಿತ ಈರುಳ್ಳಿ. ಇಷ್ಟಿದ್ದೇ ಇರುತ್ತಿತ್ತು. ಖುಷಿಯ ವಿಚಾರವೆಂದರೆ ನಿತ್ಯ ಕುಡಿಯುತ್ತಿದ್ದ ವಿದೇಶೀ ನೀರುಚಹಾದಿಂದ ಜಡ್ಡುಗಟ್ಟಿದ್ದ ಭಾರತೀಯ ನಾಲಗೆಗೆ ಅವರು ಕೊಡುತ್ತಿದ್ದ ಅಪ್ಪಟ ಭಾರತೀಯ ದಪ್ಪದ ಮಸಾಲ ಚಹಾ, ಅದೂ ಊಟವಾದ ಮೇಲೆ!

ಯುರೋಪಿನ ಹೆಚ್ಚಿನ ಕಡೆಗಳಲ್ಲಿ ಕೈತೊಳೆಯುವ ನೀರಿಗೆಂದು ಟ್ಯಾಪಿನ ಅಡಿಗೆ ಕೈ ಇಟ್ಟರೆ ಸಾಕು: ನೀರು ಅದಾಗಿಯೇ ಸುರಿಯುತ್ತದೆ. ಕೈತೆಗೆದರೆ ನಿಲ್ಲುತ್ತದೆ ಹೋಟೆಲ್ಲುಗಳಲ್ಲೂ ಅಷ್ಟೆ: ಆದರೆ ಇಟೆಲಿಯಲ್ಲಿ ನಮಗಾದ ಅನುಭವವೇ ಬೇರೆ.ಎಲ್ಲ ಕಡೆಗಳಂತೆ ಅಲ್ಲೂ ನೀರಿಗಾಗಿ ಕೈಯಿಟ್ಟು ಕಾದೆವು. ನೀರು ಬರಲೇಇಲ್ಲ. ಸಿಕ್ಕಿದ್ದನ್ನೆಲ್ಲ ಹಿಡಿದು ಒತ್ತಿ , ಎಳೆದು ನೋಡಿದೆವು. ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಅಷ್ಟರಲ್ಲಿ ಇನ್ನಷ್ಟು ಜನ ಅಲ್ಲಿ ಬಂದು ಸೇರಿದರು. ನಮಗೋ ಕೇಳುವುದಕ್ಕೆ ನಾಚಿಕೆ. ಒಬ್ಬ ಸರ್ವಜ್ಞ ನಮ್ಮನ್ನು ನೋಡಿ ’ಏಕ್ಸಿಲೇಟರ್, ಏಕ್ಸಿಲೇಟರ್’ಎಂದು ನಕ್ಕ. ಇದು ನಮಗಿನ್ನೂ ಪೇಚಿಗಿಟ್ಟುಕೊಂಡಿತು. ನಾವು ಮೇಲೆ ಕೆಳಗೆ ನೋಡುತ್ತಿರಬೇಕಾದರೆ ಆತನೇ ತನ್ನ ಕಾಲನ್ನು ಬೇಸಿನ್ನಿನ ಅಡಿಗೆ ಚಾಚಿ ಏನನ್ನೋ ಒತ್ತಿದ. ನೀರು ಬಂತು. ಅವನ ಏಕ್ಸಿಲೇಟರ್ನ ಅರ್ಥ ಆಗ ತಿಳಿಯಿತು!

ಹೊಸ ಹೋಟೆಲ್ಗಳ ಟಾಯ್ಲೆಟ್ಟಿನಲ್ಲಿ ಈಗ ಎರಡೆರಡು ಕಮೋಡುಗಳಿರುತ್ತವೆ. ವರ್ಷಗಳ ಹಿಂದೆ ಲಂಡನ್ಗೆ ಹೋಗಿದ್ದಾಗ ಹಾಗಿರಲಿಲ್ಲ. ನಾನದನ್ನು ಮೊದಲ ಬಾರಿಗೆ ನೋಡಿದವನೇ ಕಕ್ಕಾಬಿಕ್ಕಿಯಾದೆ. ಇಬ್ಬರಿಬ್ಬರು ಅಕ್ಕಪಕ್ಕದಲ್ಲಿ ಕುಳಿತು ಪಟ್ಟಾಂಗಿಸುತ್ತ ನಿತ್ಯವಿಧಿಗಳನ್ನು ಮುಗಿಸುವ ವಿದೇಶೀಯರ ಹೊಸ ಸೋಗೆ ಇದು? ಎಂದು ಆಶ್ಚರ್ಯಪಟ್ಟೆ. ಆಮೇಲೆ ಮನೆಯಾಕೆಯ ಮುಂದೆ ನನ್ನ ಕುತೂಹಲವನ್ನಿರಿಸಿದಾಗ ಆಕೆ ಅಂದದ್ದು ಇನ್ನೂ ಮಜವಾಗಿತ್ತು. ಒಂದು ಗಂಡು ಕಮೋಡು, ಇನ್ನೊಂದು ಹೆಣ್ಣು ಕಮೋಡು. ಹೀಗೂ ಉಂಟೆ? ಅಂತ ಆಶ್ಚರ್ಯವಾದರೂ ನದಿಮೂಲ ಹುಡುಕಹೋಗಲಿಲ್ಲ. ಬಾತ್ರೂಮಿನಲ್ಲಿ ಮೂರೋ ನಾಲ್ಕೋ ಬಗೆಯ ಚಿಕ್ಕಚಿಕ್ಕ ಶಾಂಪೂ ಬಾಟಲುಗಳಿರುತ್ತವೆ. ಷೇವ್ಗಿಂತ ಮೊದಲು ಒಂದು, ಶೇವಿನ ನಂತರ ಇನ್ನೊಂದು – ಹೀಗೆ ಬಳಸುವ ಲೋಷನ್ಗಳಿರುತ್ತವೆ. ಕಿವಿಗೆ ಹತ್ತಿ ,ಇಯರ್ ಬಡ್, ಬ್ರಷ್, ಚಿಕ್ಕ ಪೇಸ್ಟ್ಟ್ಯೂಬ್, ಸೋಪು, ಬಾಚಣಿಗೆ ಇತ್ಯಾದಿಗಳನ್ನೂ ಇಟ್ಟಿರುತ್ತಾರೆ. ಅವನ್ನೆಲ್ಲ ನೋಡುವಾಗ ನಿಮಗೆ ಅನ್ನಿಸುವುದೇನೆಂದರೆ ಇವೆಲ್ಲವೂ ನಾವು ಕೊಡುವ ದುಡ್ಡಿನ ಬಾಬತ್ತು ಬಂದವುಗಳು, ನಾವೇಕೆ ಇದನ್ನೆಲ್ಲ ಒಯ್ಯಬಾರದು? ರೂಮು ಬಿಟ್ಟು ಹೋಗುವಾಗ ಇಂಥವಕ್ಕೆಲ್ಲ ನಿಮ್ಮನ್ನು ರಿಸೆಪ್ಷನ್ಗೆ ವಾಪಾಸು ಕರೆಸುವುದಿಲ್ಲ. ಫ್ರಿಜ್ಜಿನೊಳಗಿರುವುದನ್ನು ಖಾಲಿಮಾಡಿದಾಗಲೇ ಸಮಸ್ಯೆ ಉದ್ಭವಿಸುವುದು.

ಹೋಟೆಲ್ ಕೋಣೆಗಳಲ್ಲಿ ಸುಂದರವಾದ ಟೀವಿ ಇರುತ್ತವೆ. ಯಾರಿಗೂ ಬೇಡದ ಛಾನಲ್ಗಳಷ್ಟೆ ಅದರಲ್ಲಿ ಉಚಿತವಾಗಿ ಸಿಗುತ್ತಿತ್ತು. ರಸವತ್ತಾದ ಛಾನಲ್ಗಳು ಬೇಕಾಗಿದ್ದರೆ ನೀವು ಅದನ್ನು ಪ್ರತ್ಯೇಕವಾಗಿ ಓಪನ್ ಮಾಡಿಸಿಕೊಳ್ಳಬೇಕು. ಬಿಲ್ಲು ಪ್ರತ್ಯೇಕ. ಅಂತೂ ಯುರೋಪಿನ ಹೋಟೆಲ್ಲುಗಳು ನಿಮಗೆ ಮರೆಯಲಾಗದ ಅನುಭವ ಕೊಡುತ್ತವೆ ಎಂಬುದು ನಾನು ಕಂಡುಕೊಂಡ ಸತ್ಯ.

 

‍ಲೇಖಕರು G

20 July, 2011

4 Comments

  1. Anitha Naresh

    ಕುತೂಹಲ ಮೂಡಿಸುತ್ತಿದೆ ..

  2. ಅಶೋಕವರ್ಧನ ಜಿ.ಎನ್

    ವಿದೇಶದಲ್ಲೇ ಪುಟ್ಟಪಥದ ಮೇಲೆ ಹೊಟೆಲುಗಳ ಅಕ್ರಮ-ಸಕ್ರಮ ಇದೆಯೆಂದು ತಿಳಿದರೆ ಮಂಗಳೂರು ಬೀದಿಬದಿ ವ್ಯಾಪಾರಿಗಳಿಗೆ ಹೊಸ ಬಲ ಬಂದೀತು.
    ಡಾ| ಪ್ರಭಾಕರ ಜೋಶಿ ಹೇಳುವುದಿತ್ತು “ಹೋಟೆಲಿನವ ಬಂದವರಿಗೆಲ್ಲಾ ಒಂದೊಂದು ಸ್ವಚ್ಛ ಲೋಟದಲ್ಲಿ ಪಾರದರ್ಶಕ ನೀರು ಇಡುವುದೇ ಎಷ್ಟು ದೊಡ್ಡ ಕೆಲಸ ಸ್ವಾಮೀ” ನೆನಪಿಗೆ ಬಂತು. ಉದರಂಭರಣದಿಂದಲೇ ಕಥನ ತೊಡಗಿದ್ದಕ್ಕೂ `ದಾಮೋದರ’ನಾಗಿರುವುದಕ್ಕೂ ಸಂಬಂಧವಿಲ್ಲವೆಂದೇ ಭಾವಿಸಿ ಮುಂದಿನ ಕಂತಿಗೆ ಕಾದಿದ್ದೇನೆ 🙂
    ಅಶೋಕವರ್ಧನ

  3. Laxminarasimha

    ನಾದಾ ರು ಹೇಳಿದ್ದರಲ್ಲಿ ಸಾಕಷ್ಟು ’ಸೌಲಭ್ಯಗಳು’ ಇಂಡಿಯಾದ ತಾರಾ ಹೋಟಲ್ ಗಳಲ್ಲಿ ಇವೆ. ಅದರೂ ಅಲ್ಲಿನ ವೈಭವವೇ ಬೇರೆಯಲ್ಲವೆ? ಮುಂದಿನ ಕಂತುಗಳಿಗಾಗಿ ಕಾಯುತ್ತಿರುವೆವು.

  4. srkanabur

    sir
    touba majaederi

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading