ಪಂ ರಾಜಶೇಖರ ಮನ್ಸೂರ್ ಸಂದರ್ಶನ
ಡಾ ರಾಜಶೇಖರ ಹಳೇಮನೆ

ಭಾರತೀಯ ಹಿಂದುಸ್ಥಾನಿ ಸಂಗೀತದಲ್ಲಿ ಬಹು ದೊಡ್ಡ ಪರಂಪರೆಯನ್ನು ಸೃಷ್ಟಿಸಿದವರು ಪಂ. ಮಲ್ಲಿಕಾರ್ಜುನ ಮನ್ಸೂರರು. ಆ ಪರಂಪರೆಯನ್ನು ಅವರಷ್ಟೇ ಸಮರ್ಥವಾಗಿ ಮುಂದುವರಿಸುತ್ತಿರುವವರು ಅವರ ಮಗ ಪಂ. ರಾಜಶೇಖರ ಮನ್ಸೂರ್ ಇವರು. ಘರಾನದ ಮೂಲಕ್ಕೆ ಚ್ಯುತಿ ಬಾರದಂತೆ ಕಾಪಾಡಿಕೊಂಡು ಅದರ ವೈಶಿಷ್ಟ್ಯತೆಯೊಂದಿಗೆ ಹಾಡುತ್ತಿರುವವರು. ಈ ಇಬ್ಬರು ಮಹನೀಯರಿಗೆ ಭಾರತ ಸರ್ಕಾರದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ದೊರಕಿರುವುದು ವಿಶೇಷ. ಭಾರತದಲ್ಲಿ ಈ ರೀತಿ ತಂದೆ-ಮಗ ಒಂದೇ ಪ್ರಶಸ್ತಿ ಪಡೆದಿರುವುದು ಅಪರೂಪ. 2012ನೇ ಸಾಲಿನ ಭಾರತ ಸರ್ಕಾರದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಂ. ರಾಜಶೇಖರ ಮನ್ಸೂರ್ ಇವರಿಗೆ ದಿನಾಂಕ 28 ಮೇ 2013 ರಂದು ನೀಡಿ ರಾಷ್ಟ್ರಪತಿಯವರು ಗೌರವಿಸಿದರು.
1. ತಾವು ಸಂಗೀತದ ಮನೆತನದಲ್ಲಿ ಬೆಳೆದವರು, ತಾವು ಬಾಲ್ಯದಿಂದ ತಮ್ಮ ತಂದೆಯವರೊಂದಿಗೆ ಹೇಗೆ ಮುಖಾಮುಖಿಯಾದಿರಿ?
ನನ್ನ ತಂದೆಯವರಿಗೆ ನನ್ನನ್ನು ದೊಡ್ಡ ಸಂಗೀತಗಾರನನ್ನಾಗಿ ಮಾಡಬೇಕೆಂಬ ಇಚ್ಚೆ ಇರಲಿಲ್ಲ. ಯಾಕಂದ್ರೆ ಅವರು ಬಹಳ ಕಷ್ಟ ಪಟ್ಟು ಸಂಗೀತ ಕಲಿತಿದ್ದರು. ಅದರಿಂದ ಉತ್ತಮ ಸಂಸಾರ ನಡೆಸೋದು ಸಾಧ್ಯ ಇಲ್ಲ ಅಂತ ಅನುಭವದಿಂದ ತಿಳಿದಿದ್ದರು. ನಾನು ಹುಟ್ಟಿದಾಗಿನಿಂದ ಮನೆಯಲ್ಲಿ ಸಂಗೀತವೇ ತುಂಬಿತ್ತು. ಅಪ್ಪನೋರ ಸಂಗೀತ ಕೇಳಿ ಕೇಳಿ ನನ್ನ ಮನಸ್ಸಿಗೆ ಇಳಿಯಿತು. ಮನೆಯಲ್ಲಿ 24 ಘಂಟೆ ಸಂಗೀತದ ನಾದವೇ ಕೇಳುತ್ತಿತ್ತು. ಅವಾಗ ನಮ್ಮ ಮನಸ್ಸು ಸೆಳೆಯುವ ಬೇರೆ ಮಾಧ್ಯಮ ಇರಲಿಲ್ಲ. ಇದರಿಂದ ನನಗೆ ಸಂಗೀತವೇ ಎಲ್ಲ ಆಗಿತ್ತು. ಇದೊಂದು ನನ್ನ ಸೌಭಾಗ್ಯ. ಎಲ್ಲರಿಗೂ ಈ ಭಾಗ್ಯ ಸಿಗುವುದಿಲ್ಲ. ದೇವರು ಇಂಥ ದೊಡ್ಡ ಪುಣ್ಯ ನನಗೆ ಕರುಣಿಸಿದ. ಹಾಂಗ ನಾನು ಮನೆಯಲ್ಲಿ ತಂದೆಯವರು ಹಾಡುವುದನ್ನು ಕೇಳಿ ಕೇಳಿಯೇ ಸಂಗೀತವನ್ನು ಮೈಗೂಡಿಸಿಕೊಂಡೆ. ನಮ್ಮ ತಂದೆಯವರಿಗೆ ತನ್ನ ಮಗ ಹಾಡ್ತಾನಂತ ಗೊತ್ತಿರಲಿಲ್ಲ. ನನಗಾಗ 16 ವಯಸ್ಸು. ಕೆ. ಸಿ. ಡಿ ಕಾಲೇಜಿನಲ್ಲಿ ಕಾಲೇಜ್ ಡೇ ಇತ್ತು. ಗೆಳೆಯರೆಲ್ಲ ಒತ್ತಾಯ ಮಾಡಿ ನೀನು ಹಾಡಬೇಕು ಎಂದು ಸ್ಟೇಜಿಗೆ ನೂಕಿದರು. ನಾನು ಯಾವಾಗಲೋ ಕೇಳಿ ಕಲಿತ ಮಾಲಕಂಸ ರಾಗ ಹಾಡಿದೆ. ನನಗೆ ತಬಲಾ ಸಾಥಿ ನೀಡಿದ ಬಸವರಾಜ ಬೆಂಡಿಗೇರಿಯವರು ಮನಿಗೆ ಬಂದು ತಂದೆಯವರಿಗೆ “ನಿಮ್ಮ ಮಗ ಬಹಳ ಚೆಂದ ಹಾಡ್ತಾನ” ಅಂತ ಹೇಳಿದರು . ತಂದೆಯವರು “ಹೇ… ಅವನೇನು ಹಾಡ್ತಾನ” ಅಂತ ನಿರ್ಲಕ್ಷ ಮಾಡಿದರು. ಅವರು ಬಿಡಲಿಲ್ಲ “ಹಾಡಿಸ್ಯಾರ ನೋಡ್ರಿ” ಅಂದರು. ಹಾಡಿದೆ, ತಂದೆಯವರಿಗೆ ಏನನಿಸಿತೋ ಮರು ದಿವಸ ತಂಬೂರಿ ತಗೋ ಅಂದು ಪ್ರಾಕ್ಟಿಸ್ಗೆ ಕೂಡಿಸಿದರು. 16ನೇ ವಯಸ್ಸಿನಿಂದ ಶಾಸ್ತ್ರೋಕ್ತ ಸಂಗೀತ ಶುರು ಮಾಡಿದೆ.
2 ಹಿಂದುಸ್ಥಾನಿ ಸಂಗೀತ ದೈವದತ್ತ ಪ್ರತಿಭೆ ಅಂತಾರ..
ಹಂಗೇನಿಲ್ಲ. ಪ್ರಯತ್ನದಿಂದ ಎಲ್ಲಾ ಸಾದ್ಯ ಅದ. ಸಂಗೀತ ಅಂತರಂಗದ ಸಂವಾದ. ಅಂತರಂಗಕ್ಕ ಬದ್ಧ ಆಗಿರಬೇಕಾಗ್ತದ. ಹೃದಯದಿಂದ ಪ್ರಯತ್ನ ಮಾಡಿದರ ಯಾರಿಗೂ ಸಂಗೀತ ಬರ್ತದ. ನಮಪ್ಪ ನನ್ನೊಂದಿಗೆ ಎಂದೂ ಸಂಗೀತದ ಬಗ್ಗೆ ಚರ್ಚಾ ಮಾಡಿಲ್ಲ. ಚರ್ಚೆಯಿಂದ ಸಂಗೀತ ಬರೋದಿಲ್ಲ. ನಿರಂತರ ಕಲೀತಿರಬೇಕು. ಇವತ್ತ ನಾನು ಇಷ್ಟು ಕಲಿತಿನೀ ಅಂದರೂ ನನಗೆ ಇನ್ನು ಏನೂ ಕಲಿತಿಲ್ಲ ಅನಿಸ್ತದ. ಅಂದ್ರ, ಎಲ್ಲದರ ಸಾಧನೆಗೆ ಅವಿರತ ಪ್ರಯತ್ನವೇ ಮೂಲ.
3. ನಮ್ಮ ಕನ್ನಡದ ಹಿಂದೂಸ್ಥಾನಿ ಗಾಯಕರು ಹೆಚ್ಚು ಹೊರ ರಾಜ್ಯಗಳಲ್ಲೇ ಬೆಳಗಿದರು ಯಾಕೆ?
ನಮ್ಮಲ್ಲಿ ಕೇಳೋರು ಇರಲಿಲ್ಲ. ಹಿಂದೂಸ್ಥಾನಿ ಸಂಗೀತದ ಮಹತ್ವವೂ ಗೊತ್ತಿರಲಿಲ್ಲ. ಮಹಾರಾಷ್ಟ್ರದಲ್ಲಿ ಕೇಳೋರು ಇದ್ದರು. ಆದರಿಂದ ಅಲ್ಲಿ ಅವರಿಗೆ ರೆಕೋಗ್ನಿಶನ್ ಸಿಕ್ಕಿತು. ಇವತ್ತಿಗೂ ಇಲ್ಲಿಗಿಂತ ಅಲ್ಲಿಯೇ ಕೇಳೋರ ಸಂಖ್ಯಾ ಜಾಸ್ತಿ ಐತಿ.
4 ಎಲ್ಲಾರು ಹೊರಗಡೆ ಹೋದರೂ, ಪಂ. ಮಲ್ಲಿಕಾರ್ಜುನ ಮನ್ಸೂರರು ಧಾರವಾಡದಲ್ಲೇ ಇದ್ದರು, ಯಾಕೆ?
ನಮ್ಮ ಮುರುಘಾ ಮಠದ ಮೃತ್ಯುಂಜಯ ಸ್ವಾಮಿಗಳು, ಮಹಾಂತ ಅಪ್ಪಾಗೋಳು ನಮ್ಮ ಅಪ್ಪಗ ಭಾಳ ಹತ್ತಿರ. ಅವರು ಮಹಾತಪಸ್ವಿಗಳು. ಅವರ ಆಶೀರ್ವಾದ ನಮ್ಮನ್ನ ಬೆಳೆಸ್ಯಾದ. ಇವರ ಬಳೀನೇ ಇರಬೇಕಂತ ನಮ್ಮಪ್ಪ ಸದಾ ಬಯಸುತ್ತಿದ್ದರು. ಮತ್ತಾ, ಅವರಿಗೆ ಹೊರಗೆ ಹೋಗಿ ಕೀರ್ತಿ, ಹಣ ಗಳಿಸಬೇಕೆಂಬ ಹುಚ್ಚು ಇರಲಿಲ್ಲ. ಜ್ಯೋತ್ಸ್ನಾ ಭೋಳೇ, ಬರೋಡ ಮತ್ತು ಗಾಯಕವಾಡ ಸರ್ಕಾರದವರು ಅವರನ್ನು ಬರಲಿಕ್ಕೆ ಬಹಳಷ್ಟು ಒತ್ತಾಯ ಮಾಡಿದರೂ ನಮ್ಮಪ್ಪ “ನನಗೆ ನನ್ನ ಜನಗಳು ಬೇಕು, ನನ್ನ ನೆಲ, ಬಾಷಾ, ಸ್ವಾಮೀಗಳು ಬೇಕಪಾ” ಅಂತಾ ಹೋಗಲಿಲ್ಲ.
5 ಅವರು ಹೊರಗೆ ಹೋಗದಿದ್ದಕ್ಕೆ ಅವರ ಸಂಗೀತಕ್ಕೆ ಅನುಕೂಲ ಆಯ್ತೋ, ಇಲ್ಲ ತೊಡಕಾಯ್ತೋ?
ತೊಡಕೇನು ಆಗಲಿಲ್ಲ. ಭಾಳ ಒಳ್ಳೇದೇ ಆಯಿತು. ಅವರು ಇಲ್ಲೇ ಇದ್ದದ್ದರಿಂದ ಅವರಿಗೆ ವಿಶೇಷವಾದ ದೇಶಿ ಶೈಲಿಯ ಸೊಗಡು ಸಿಕ್ಕಿತು. ಇದರಿಂದ ಅವರ ಸಂಗೀತಕ್ಕೆ ಅನನ್ಯ ಶಕ್ತಿ ಬಂತು. ಹೊರಗೆ ಹೋದರ ಪ್ರೇಕ್ಷಕರ ಸಲುವಾಗಿ ಅವರಿಗೆ ಬೇಕಾದಂಗ ಹಾಡಬೇಕಿತು. ಸಂಗೀತ ಅಂದ್ರ ಅದು ಯಾರನ್ನೋ ಮೆಚ್ಚಿಸಾಕ ಹಾಡೋದಲ್ಲ, ನಮ್ಮ ಆತ್ಮಶುದ್ಧ ಮಾಡಿಕೊಳ್ಳಾಕ ಹಾಡೋದು.
6 ತಾವು ಇಂಗ್ಲೀಷ್ ಪ್ರಾಧ್ಯಾಪಕರಾಗಿ ಸುಮಾರು 40 ದಶಕಗಳ ಕಾಲ ಸೇವೆ ಸಲ್ಲಿಸಿದವರು. ಸಂಗೀತ ವೃತ್ತಿ ತಮ್ಮ ಗಾಯನಕ್ಕೆ ತೊಂದರೆ ಆಯಿತಾ?
ನನಗೇನು ತೊಂದರೆ ಆಗಲಿಲ್ಲ. ನಾನು ಸದಾ ಸಂಗೀತದ ಧ್ಯಾನದಾಗ ಇರತಿದ್ದೆ. ಸಂಗೀತಕ್ಕಿಂತಲೂ, ನಾನು ಸಾಹಿತ್ಯವನ್ನು ಬಹಳ ಕಷ್ಟಪಟ್ಟು ಅಭ್ಯಾಸ ಮಾಡಿದೆ.
7 ರಾಗಗಳನ್ನು ಬೆಸೆದು ಹಾಡೋದು ತಮ್ಮ ವೈಶಿಷ್ಟ್ಯ. ಇದು ಎಲ್ಲರಿಗೂ ಸಾಧ್ಯವಿಲ್ಲ. ಇದನ್ನು ಹೇಗೆ ಶೋಧಿಸಿದಿರಿ?
ಇದು ನಮ್ಮ ಘರನಾದ ವೈಶಿಷ್ಟ್ಯ. ಸಂಗೀತದಲ್ಲಿ ಘರಾನ ಅಂತ ಒಂದು ಸಿಸ್ಟಮ್ ಇದೆ. ಸಿಸ್ಟಮ್ ಬೇರೆ, ಶೈಲಿ ಬೇರೆ. ನಮ್ಮ ಘರಾನ ಶೈಲಿಯಲ್ಲಿ ಎರಡು-ಮೂರು ರಾಗಗಳನ್ನು ಬೆಸಿತೇವಿ. ಹಾಗ ಬೆಸೆದಾಗ ಇನ್ನೊಂದು ರಾಗ ಸೃಷ್ಟಿಯಾಗ್ತದ. ಇದಾ ಘರಾನದ ಶಕ್ತಿ. ಈಗಿನವರು ಬಹಳಷ್ಟು ಜನ ಘರಾನಾದಾಗ ಕಲೀತಾರ, ಆಮೇಲೆ “ಥೂ, ಉಸ್ಮೆ ಕ್ಯಾ ರಖಾ ಹೇ” ಅಂತಾರ.. ಘರಾನ ಸಿಸ್ಟಮ್ ಬಿಟ್ಟು ಹೋದರ ಅಡ್ಡದಾರಿ ಹಿಡಿತೀವಿ. ಇನ್ನೊಂದು ಸೃಷ್ಟಿ ಮಾಡೋಕೆ ಅಗೋದಿಲ್ಲ. ಎಲ್ಲ ಧರ್ಮಗಳು ದೇವರ ದರ್ಶನಕೆ ಹೋದಂತೆ. ಘರಾನಗಳು ಕೂಡಿ ರಾಗ ದರ್ಶನಕ್ಕೆ ಹೋಗ್ತವಾ. ಸಂಗೀತಗಾರರ ದೇವರ ಅಂದ್ರ ರಾಗಗಳೇ.
8 ಘರಾನ ಬಂದಿಶಗಳನ್ನು ಕಲಿಯೋದು ಬಹಳ ಕಷ್ಟ ಅಂತಾರ?
ಘರಾನ ಅನ್ನೋದು ಹಿಂದೂಸ್ತಾನಿ ಸಂಗೀತಕ್ಕ ತಾಯಿ ಇದ್ದಂಗ. ನಾವು ಎಷ್ಟೇ ಮುಂದು ಹೋದರೂ, ತಾಯಿ ಕರಳು ಕತ್ತರಿಸಿಗೋಬಾರದು. ಈ ಸಂಬಂಧ ಉಳಿಸಿಕೊಂಡ್ರ, ತಾನಾ ಬರ್ತಾದ. ಆದರ, ಪ್ರಚಾರಕ್ಕ ಬಿದ್ದರ ಬರೋದಿಲ್ಲ. ಅದಕ್ಕ ಉತ್ತಮ ಶ್ರಮ, ಶದ್ಧೆ, ಸಮಯ ಬೇಕು. ಮೂಲ ಬಿಟ್ಟರ ಎಲ್ಲವೂ ಒಂದೇ ರೀತಿ ಆಗ್ತಾವ. ಘರಾನದ ವೈವಿಧ್ಯ ಅರಿತುಕೊಂಡು ಅದರಲ್ಲಿ ಮುಳಗಬೇಕಾ, ಅಂದ್ರ ಕಲಿಯೋದು ಸುಲಭ.
9. ತಾವು ಇಂಗ್ಲೀಷ್ ಸಾಹಿತ್ಯವನ್ನು ಪಾಠಮಾಡಿದವರು. ಸಾಹಿತ್ಯ ಮತ್ತು ಹಿಂದೂಸ್ಥಾನಿ ಸಂಗೀತಕ್ಕೆ ಯಾವ ರೀತಿಯ ಸಂಬಂಧ ಇದೆ?
ಎರಡರ ಧ್ವನಿಗಳು ಒಂದೇ. ಸಾಹಿತ್ಯಕ್ಕೆ ಭಾಷೆ ಮಖ್ಯ ಅಷ್ಟೆ. ಸಂಗೀತಕ್ಕ ಸ್ವರ ಮುಖ್ಯ. ಎರಡೂ ಭಾವನೆಗಳನ್ನು ಶೋಧಿಸುವ ಕ್ರಿಯೆಗಳೇ. ನಮಪ್ಪಗ ತುಂಬಾ ಸಾಹಿತ್ಯದಲ್ಲಿ ಆಸಕ್ತಿ ಇತ್ತು. ಬೇಂದ್ರೆ, ತ.ರಾ.ಸು, ಕಾರಂತರಂತ ದಿಗ್ಗಜರು ಅಪ್ಪನಲ್ಲಿಗೆ ಬರುತ್ತಿದ್ದರು. ಒಂದು ಘಟನಾ ಹೇಳ್ತೀನಿ ನಿಮಗ. ಒಮ್ಮೆ ಅ.ನ.ಕೃ ನಮ್ಮನಿಗೆ ಬಂದು ಅಪ್ಪೋರಿಗೆ “ನೀವು ವಚನ ಹಾಡಬೇಕು” ಅಂತಾ ಒತ್ತಾಯ ಮಾಡಿದರು. “ಅವು ಗದ್ಯ, ಹಾಡಾಕ ಬರೋದಿಲ್ಲ” ಅಂತ ಅಪ್ಪ ಅಂತಿದ್ದರು. ಹಿಂಗಾ ವಾದ ಮಾಡುತ್ತಿದ್ದರು. ಆಗ ನಾ ಸಣ್ಣವನಿದೆ. ಏನನಿಸಿತೋ ಅ.ನ.ಕೃ ಚಪ್ಪಲಿ ಓಯ್ದು ಬಾವ್ಯಾಗ ಹಾಕಿದ್ದೆ. ಯಾಕ ಹಾಕಿದೆನೋ, ಇಂದಿಗೂ ನನಗೆ ಗೊತ್ತಿಲ್ಲ. ಧಾರವಾಡದ “ಗೆಳೆಯರ ಬಳಗ” ದಲ್ಲಿ ನಮ್ಮ ತಂದೆಯವರೂ ಇದ್ದರೂ. ಸಂಗೀತಗಾರರಿಗೆ ಸಾಹಿತ್ಯದಲ್ಲಿ ಆಸಕ್ತಿ ಇದ್ದರ, ರಾಗಗಳು ಮತ್ತಷ್ಟು ಗಟ್ಟಿಯಾಗ್ತಾವ.
10. ನಿಮ್ಮ ತಂದೆಯವರು ಹಳ್ಳಿಯಿಂದ ಬಂದವರು. ಕೊನೆತನಕ ಹಳ್ಳಿತನ ಉಳಿಸಿಕೊಂಡಿದ್ದರು. ತಾವು ನಗರದಲ್ಲಿ ಬೆಳೆದವರು. ಇಂಗ್ಲೆಂಡದಲ್ಲಿ ವಿಧ್ಯಾಭ್ಯಾಸ ಮಾಡಿದವರು. ನಿಮ್ಮ ತಂದೆಯವರ ಜೊತೆಗೆ ಯಾವ ರೀತಿ ಸಂಗೀತದ ಅನುಸಂಧಾನ ಮಾಡಿದಿರಿ?
ಅಂತರಿಕವಾಗಿ ನಾ ಬೇರೆನೇ ಇದ್ದೀನಿ. ಪಬ್ಲಿಕ್ನಲ್ಲಿ ನಾನು ಇಮೇಜ್ ಕ್ರೀಯೆಟ್ ಮಾಡಿ ಕೊಂಡಿಲ್ಲ. ನಮ್ಮ ತಂದೆಯವರ ದೇಸೀ ಧ್ವನಿ ಇತ್ತಲ್ಲ, ಅದರ ಜೊತೆಗೆನೇ ಇದ್ದವನು ನಾನು. ಅಪ್ಪ ಅವರು ಮ್ಯಾನರಿಝಮ್ಗ ಮಹತ್ವ ಕೊಡಲಿಲ್ಲ. “ನೀನು ನೀನಾಗಿ ಹಾಡು, ನಾನಾಗಿ ಹಾಡಬೇಡ” ಅನ್ನೋರು. ನಾನು ನಾನಾಗಿ ಹಾಡಿದೆ, ಕಲಿಸಿದ ಗುರುಗಳಾಂಗ ಹಾಡಲಿಲ್ಲ. “ಅಂದರ, ಗುರುಗಳು ಕಲಿಸಿದ್ದು ನೆನಪಿರಬೇಕು, ಆದರ ಅವರ ಪ್ರಬಾವದಿಂದ ಬಿಡಿಸಿಕೊಂಡು ಬರಬೇಕು. ಆಗ ಒಬ್ಬೊಬ್ಬರ ಸಂಗೀತ ಬೇರೆ ಬೇರೆ ಆಗ್ತಾದ” ಅಂತಿದ್ದರು. ತಂದೆಯವರಿಂದ ಬಿಡಿಸಿಕೊಂಡು ಸ್ವಂತದ್ದು ಕಂಡುಕೊಳೂದು ನನಗ ಸುಲಭವಿರಲಿಲ್ಲ. ಅದಕ್ಕ ಬಹಳ ಶ್ರಮ ಪಟ್ಟೀನಿ. ಸದಾ ರಾಗಗಳ ಧ್ಯಾನದಾಗ ಮುಳುಗಿರುತಿದ್ನಿ. ಕಲಿಸಿದೋರ ರೀತಿನೇ ಹಾಡಿದ್ರ, ಅದು ಮಿಮಿಕ್ರಿ ಆಗ್ತದ. ಇದಕ್ಕೆ ಎಷ್ಟೋ ಮಂದಿ ನನ್ನ ತಪ್ಪು ತಿಳಕೊಂಡಾರ. ಇವ ಸೊಕ್ಕಿನವ, ಮಖ ನೋಡಿದರ ಸಿಟ್ಟಿನವರತರ ಕಾಣ್ತಾನ. ನನ್ನ ವಿಧ್ಯಾರ್ಥಿಗಳೂ ಕೂಡ. ನಾನು ಹೊರಗಿನ ಜೀವನಕ್ಕಿಂತ ಅಂತರಿಕ ಜೀವನದಾಗ ಬದುಕುತ್ತಿದ್ದೆ. ಅಲ್ಲಿ ಎಲ್ಲವೂ ಸಂಗೀತನೇ. ಹಿಂಗಾಗಿ ನಾನು ಅಪ್ಪನಂತೆ ದೇಸಿಗನೇ. ಅದಕ್ಕೆ ಭಾಳ ಸ್ಟ್ರೆಂತ್ ಬೇಕಾಗ್ತದ.

11. ಗುರು ಶಿಷ್ಯರ ಸಂಬಂಧಕ್ಕೆ ಹಿಂದೂಸ್ಥಾನಿ ಸಂಗೀತದಲ್ಲಿ ಬಹಳ ಮಹತ್ವ ಇದೆ. ಸಂಬಂಧದ ಬಗ್ಗೆ ತಮ್ಮ ಅಭಿಪ್ರಾಯ?
ಸಂಗೀತಾದಾಗ ಗುರುವಿನ ಅನುಗ್ರಹ ಇಲ್ಲದ ಏನೂ ಒಲಿಯುವುದಿಲ್ಲ. ಗುರು ಶಿಷ್ಯರ ಸಂಬಂಧ ವರ್ಣನಾತೀತ. ಲೇಬಲ್ ಕೊಡಾಕ ಬರೋದಿಲ್ಲ. ಅದಕ್ಕ ನನ್ನ ಶಿಷ್ಯರಿಗೆ ಹೇಳ್ತಿನಿ, ನನ್ನ ತಾಕ ಬರುವಾಗ ನೀವು ಹ್ಯಾಂಗ ಹೊರಗ ಬಿಟ್ಟು ಬರ್ತೀರೋ, ಹಾಂಗ ಲೌಕಿಕ ಜೀವನ ಹೊರಗೆ ಇಟ್ಟು ಬರ್ರೀ. ಫೀಸ್ ಕೊಟ್ಟು ಕಲಿಯೋದು ಸಂಗೀತ ಅಲ್ಲ. ಅದೊಂದು ಅನುಭವ. ಆ ಅನುಭವ ಗುರುವಿಂದು ಮತ್ತು ಶಿಷ್ಯನದು. ದುರಂತ ಅಂದ್ರ, ಸಂಗೀತ ಕಲೀಯೋದು ಕಲೀಸೋದು ಅದೊಂದು ಅಲೌಕಿಕ ಅನುಭವ ಅನ್ನೋದನ್ನೇ ಅರ್ಥಮಾಡಿಕೊಂಡಿಲ್ಲ.
12. ನಿಮ್ಮ ತಂದೆಯವರು ಮೊದಲು ಗ್ವಾಲಿಯರ್ ಘರಾನದಲ್ಲಿ ಕಲಿತು ಉನ್ನತ ಸ್ಥಿತಿಯನ್ನು ತಲುಪಿದ್ದರು. ಆಮೇಲೆ `ಜೈಪುರ ಅತ್ರೌಲಿ` ಘರಾನಕ್ಕ ಪ್ರವೇಶ ಮಾಡಿದರು. ಅದು ತುಂಬಾ ಕಠಿಣ, ಸಂಕೀರ್ಣವಾದದು ಅಂತಾರ. ಅದು ಹೇಗೆ ಅವರು ಪ್ರವೇಶ ಮಾಡಿದರು? ಅದು ನಿಮ್ಮ ಮೇಲೆ ಯಾವ ಪ್ರಭಾವ ಬೀರಿತು?
ನಮ್ಮ ತಂದೆಯವರು ಆಲೂರ್ಮಠ್ ಮಿರಜಕರ್ ಹತ್ತಿರ ಗ್ವಾಲಿಯರ್ ಪದ್ಧತಿಯಲ್ಲಿ 12 ವರ್ಷ ಕಲಿತರು. ಆಲೂರ್ಮಠ್ ಮಿರಜಕರ್ ಅವರನ್ನ ಹಾನಗಲ್ ಕುಮಾರಸ್ವಾಮಿಗಳು ಅಪ್ಪನವರಿಗೆ ಪರಿಚಯಿಸಿದ್ರು. ಆಲೂರ್ಮಠ್ರಿಗೆ ವಯಸ್ಸಾಯಿತು. ಇವರನ್ನ ಬಿಟ್ರು. ತಂದೆಯವರು, ಉಸ್ತಾದ್ ಅಲ್ಲಾ ದಿಯಾ ಖಾನ್ ಅವರ ಮಗ ಮಂಜೀ ಖಾನ್ ಸಾಹೇಬರ ಸಂಗೀತ ಕೇಳಿದ್ದರು. `ನಾ ಕಲಿತದ್ದು ಬೇರೆ ಅದ, ಇವರ ಜಗತ್ತೇ ಬೇರೆ ಅದ. ನಾನು ಕಲಿತರ ಇಲ್ಲೇ ಕಲಿಯಬೇಕು` ಅಂತಾ ಮನಸ್ಸು ಮಾಡಿದರು. ಬಹಳಷ್ಟು ಜನರ ಹತ್ತಿರ ಮಂಜೀ ಖಾನ್ ಸಾಹೇಬರಿಗೆ ಹೇಳಿಸಿದರು. ಅವರು ಕಿವಿಕೊಡಲಿಲ್ಲ. ಬಾರಿ ಶಿಸ್ತು, ಕಠಿಣ ಫಾರೆಸ್ಟ್ ಅಪೀಸರ್ ಆಗಿದ್ದರು. ಕೊಲ್ಲಪುರದೊಳಗ ಅವರ ಹತ್ತಿರ ಯಾರೂ ಸುಳಿಯುತ್ತಿದ್ದಿಲ್ಲ. ಒಂದು ದಿವಸ ಯಾವುದೋ ಒಂದು ಪತ್ತಾರರ ಅಂಗಡೀಲಿ ಮಾಲಕರು ಹೇಳಿದರು. `ಹಿಂಗ್ರಿ, ಒಬ್ಬ ಸಣ್ಣ ಹುಡುಗ ಅದಾನ. 20-25 ವರ್ಷದವ. ನಿಮ್ಮ ಕಡೆ ಕಲಿಯಬೇಕಾಂತ ಆಶಾ ಮಾಡ್ಯಾನ`. “ಅಚ್ಚಾ.. ಉನಕಾ ಕುಛ್ ರೆಕಾರ್ಡ್ ಹೈ ಕ್ಯಾ” ಅಂತ ಕೇಳಿದರು. ಇವರು ಹಚ್ಚಿದರು. ಕೇಳಿ `ವ್ಹಾ….’ ಅಂದು `ಉಸಕೋ ಬುಲಾವೋ’ ಅಂದು ಶಿಷ್ಯನ್ನ ಮಾಡಿ ಕೊಂಡರು. ಅದೊಂದು ಯೋಗಾಯೋಗ, ಎಲ್ಲರಿಗೂ ಒಳ್ಳೇ ಗುರು ಸಿಗ್ತಾನಂತ ಗ್ಯಾರಂಟಿ ಇಲ್ಲ. ಎಲ್ಲಾರು ಒಳ್ಳೇ ಗುರು ಆಗ್ತಾರಂತನೂ ಇಲ್ಲ. ನಮ್ಮಪ್ಪನ ಪುಣ್ಯ. ಪುಣ್ಯಾತ್ಮರಂತ ಗುರುಗಳು ಸಿಕ್ಕರು. ಅವರ ಪ್ರತಿಭೆಗೆ ಅದೇನು ಕಠಿಣವಾಗಿರಲಿಲ್ಲ. 25 ವರ್ಷದ ಹೊತ್ತಿಗೆ ನಮ್ಮಪ್ಪ ಒಂದು ಉತ್ತುಂಗ ಸ್ಥಿತಿಗೆ ತಲುಪಿದ್ದರು. ಅವರ ಅವಾಗಿನ ರೆಕಾರ್ಡ್ ಕೇಳಿದರ, ಇನ್ನು ಸಂಗೀತ ಕಲಿಯೋ ಅಗತ್ಯನೇ ಇದ್ದಿಲ್ಲ ಅನ್ನಿಸ್ತಾದ. ಅದರ ನಮ್ಮ ಅಪ್ಪ ಇರೋ ತನಕ ಇನ್ನು ಕಲಿಯಬೇಕು ಅಂತಿದ್ದರು. ಕಲಿಯೊರಿಗೆ ಈ ತರಹ ಸಂಗೀತದ ಹುಚ್ಚು ಇರಬೇಕು.
13. ಜೈಪುರ- ಅತ್ರೌಲಿ ಸಂಗೀತಾ ಭಾಳ ಸಂಕೀರ್ಣ ಅಂತಾರ….
ನನಗೇನು ಅದ ಸಂಕೀರ್ಣ ಅನ್ನಿಸಿಲ್ಲ. ಕಷ್ಟನೂ ಅನಿಸಿಲ್ಲ. ಅದು ಭಾಳ ಸರಳ ಅದ. ಅತಿಶಯೋಕ್ತಿ ಮಾಡೋದಲ್ಲ. ಈಗೇನು ಅಗ್ಯಾದ ಅಂದರ ಬರೇ 2-3 ಘರಾನ ಸಂಗೀತಾ ಕೇಳಿ ಕೇಳಿ ಜನರ ಕಿವಿಗಳು ಹಂಗ ತಯಾರಾಗಿ ಬಿಟ್ಟಾವ. ಅದೇ ಸಂಗೀತ, ಬ್ಯಾರೆದು ಸಂಗೀತಾ ಅಲ್ಲಂತ ಮೈಂಡ್ ಸೆಟ್ ಆಗ್ಯಾದ. ಇದು ತಪ್ಪು. ಎಲ್ಲ ಘರಾನ ದೇವರ ಕಡೆ ಹೋಗ್ತವ. ಘರಾನ ಅಂದರ ರಿಲಿಜಿಯನ್, ಒಂದು ಸರಳ, ಇನ್ನೊಂದು ಕಷ್ಟ ಅಂತಾ ಇರೋದಿಲ್ಲ.
14. ಅಲ್ಲಾ ದಿಯಾ ಖಾನರ ಸಂಗೀತಾ ಬಳುವಳಿಯನ್ನು ಮೋಗು ಬಾಯಿ ಕುರ್ಡೇಕರ್ ಮತ್ತು ಮಗಳು ಕಿಶೋರಿ ಆಮೋಣ್ಕರ್ ಒಂದು ತರಹ ತಗೊಂಡು ಹೋದರು. ನಿಮ್ಮ ತಂದೆಯವರು ಮತ್ತು ನೀವು ಇನ್ನೊಂದು ರೀತಿಯಲ್ಲಿ ಹೋದಿರಿ. ಇದರ ನಡುವೆ ಏನಾದರೂ ವ್ಯತ್ಯಾಸ ಇದೆಯಾ?
ವ್ಯತ್ಯಾಸ ಅದ. ಮಾರ್ಕೆಟ್ಕ ಬೇಸ್ಡ್ ಮಾಡಿದವರು ದಾರಿ ಬಿಟ್ಟು ಹೊಂಟಾರ. ನಾವು ಸರಿದಾರಿಯಲ್ಲಿ ಇದ್ದೀವಿ. ಖಾನ್ ಸಾಹೇಬರು ಒಂದ್ ಸಿಸ್ಟಮ್ ಮಾಡಿದ್ರು. ಅದನ್ನು ಬಿಟ್ಟು ಹೋಗಬಾರದು. ಅದನ್ನ ಯಾವಾಗ ಬಿಟ್ಟೀವಿ ಅಂದ್ರ ಮಾರ್ಕೆಟ್ ಕೇಳಿದನ್ನ ಕೊಟ್ಟುಕಂತ ಹೋದಾಂಗ. ಅದಕ್ಕ ಗುರು ಕೊಟ್ಟ ದಾರಿಯಾಗ ಹೋಗಬೇಕು.
15. ಗುರುಗಳ ಸಿಸ್ಟಮ್ ಬದಲಾಗಲೇಬಾರದು ಅಂತೀರಾ…?
ಅಲ್ಲ, ಮಿನಿಮಮ್ ಸಿಸ್ಟಮ್ ಇಟ್ಟುಕೊಬೇಕು, ಅಂದರ ಮೂಲ ಸ್ವರೂಪನೇ ನಾಶ ಮಾಡಿ, ಬೇರೊಂದು ಆಕ್ರಮಣ ಮಾಡಿ, ಯಾರದು ಸ್ವತ್ತಲ್ಲ ಅನ್ನಾಂಗ ಆಗ್ತದ. ಸಿಸ್ಟಮ್ ಬೇಕೆ ಬೇಕು. ಅದರ ಮೂಲದಿಂದಲೇ ಇನ್ನೊಂದು ಸೃಷ್ಟಿಸಬೇಕು. ಅದಕ್ಕ ದೊಡ್ಡ ತಪಸ್ಸ ಬೇಕು. ಒಂದು ಸಿಸ್ಟಮ್ ತಿಳಿಯಾಕ ನಮಗ ಒಂದು ಜನ್ಮ ಬೇಕು.
16. ಘರಾನಗಳ ವ್ಯತ್ಯಾಸ ಅಳಿಸಿ ಹೋಗಿ, ಒಂದು ನಡೆ ಸಂಗೀತದಲ್ಲಿ ಇಂದು ಸುರುವಾಗಿದ, ಅದನ್ನು ಹೇಗೆ ಉಳಿಸಿಕೊಳ್ಳಬೇಕು..?
ಹೌದು, ಇದು ಭಾಳ ದುರಂತ. ನೆನೆಸಿಕೊಂಡ್ರ ದುಃಖ ಆಗ್ತಾದ. ಆದರೂ ಭರವಸೆ ಐತೆ. ನಮ್ಮ ಸರ್ಕಾರಗಳು ಭಾಳ ಕಾಳಜಿ ವಹಿಸಿವೆ. ಕಲೆ ಸಂಗೀತದ ಬಗ್ಗೆ ವಿಶ್ವವಿದ್ಯಾಲಯ, ಅಕಾಡೆಮಿ ಮಾಡಿವೆ. ಕರ್ನಾಟಕ ಖರ್ಚು ಮಾಡುವಷ್ಟು ಹಣ ಬೇರೆ ಯಾವ ರಾಜ್ಯನೂ ಮಾಡಿಲ್ಲ. ಸರ್ಕಾರದ ಉದ್ಧೇಶ ಚಲೋ ಐತಿ. ಆದರ, ಕಲೆಗೂ ಭೃಷ್ಟಚಾರದ ಸೋಂಕು ತಗಲೈತಿ. ಪ್ರತಿಬಾವಂತರಿಗೆ ಇಲ್ಲೆಲ್ಲ ಅವಕಾಶ ನೀಡಿ ಪ್ರೋತ್ಸಾಹಿಸುವ ಕೆಲಸ ಆಗಬೇಕು. ಕಲಾಕಾರರದು ಒಂದೇ ಜಾತಿ ಅಂತಾ ತೀಳಿಬೇಕು. ಶಾಲೆಗಳಲ್ಲಿ ಕಡ್ಡಾಯ ಸಂಗೀತ ಕಲಿಸಬೇಕು. ಆಸಕ್ತಿ ಇರೋರು ಕಲೀತರಾ. ನಾವು ಕಲಿಸದೆ ಇದ್ರೆ ಹೆಂಗ? ಸಂಗೀತ ಮೇಷ್ಟ್ರ ಆಯ್ಕೆ ಅಂಕ ಪಟ್ಟಿಯಿಂದ ಆಗಬಾರದು. ಅವರ ಗಾಯನದಿಂದ ಆಗಬೇಕು.
17. ಹಿಂದೂಸ್ಥಾನಿ ಸಂಗೀತದಲ್ಲಿ ಏನಾದರೂ ಹೊಸ ಶೋಧಗಳು ಆಗುತ್ತಿವೆಯಾ?
ನೋಡಿ, ಹೊಸ ಸೃಷ್ಟಿ ಅಷ್ಟು ಸುಲಭವಲ್ಲ. ಒಂದು ಸಿಸ್ಟಮ್ನ ಮೂರು ನಾಲ್ಕು ಜನರೇಶನ್ ನಡೆಸಿಕೊಂಡು ಬರಬೇಕು. ಸಾಹಿತ್ಯದಲ್ಲಿ 10-20 ವರ್ಷಕ್ಕೆ ಬದಲಾಗತ್ತೆ, ಆದರೆ ಸಂಗೀತದಲ್ಲಿ ಹಾಗಲ್ಲ.
18. ತಮಗೆ ಮನಸ್ಸಿನಲ್ಲಿ ಉಳಿವ ಮತ್ತೆ ಮತ್ತೆ ಕಾಡುವ ಸಂಗೀತಗಾರರು ಯಾರು?
ನಮ್ಮ ತಂದೆಯೇ. ಅವರ ಸಂಗೀತನೇ ನನಗೆ ಎಲ್ಲ. ಇನ್ನೂ ಕಲಿಬೇಕು ಅನ್ನಿಸ್ತದ.
19.ನಿಮ್ಮ ತಂದೆಯವರ ಜೊತೆಗೆ ನಿಮಗೆ ಮರೆಯಲಾರದ ಅನುಭವ ..
ಬಹಳಷ್ಟು ಇವೆ. ಒಂದು ಸಲ ಮುಂಬೈ ಪ್ರೋಗ್ರಾಂಗೆ ಹೋಗಿದ್ದಿವಿ. ಟ್ಯಾಕ್ಸಿಯೊಳಗ ಹೋಗತಿದ್ದಿವಿ. ಅದೇನು ನೆನಪಾಗಿ ಬಿಡ್ತೋ, `ಏ ತಮ್ಮಾ, ಇಲ್ಲಿ ಕೇಳು, ಇದು ಕಲ್ಕೋ’ ಅಂದು ಟ್ಯಾಕ್ಸಿಯಲ್ಲೇ ರಾಗ ಕಲಿಸಿದರು. ಅವರೆಂದೂ ಆ ರಾಗನ ಹೊರಗ ಹಾಡಲಿಲ್ಲ. ಅಂದ ಹಿಡಕೊಂಡ ಆ ರಾಗನ ನಾನು ಮನ್ಯಾಗ ಸತತ ಅಭ್ಯಾಸ ಮಾಡಿ ಈಗ ಕಛೇರಿಯಲ್ಲಿ ಹಾಡ್ತೀನಿ.
20. ಕರ್ನಾಟಕ ಸಂಗೀತಕ್ಕೆ ಹೊರಗಡೆ ಅಷ್ಟೊಂದು ಸ್ಥಾನ ಇಲ್ಲ. ಹಿಂದೂಸ್ಥಾನಿ ಸಂಗೀತ ಸದಾ ಹರಿಯುತ್ತಿರುತ್ತದೆ ಯಾಕೆ?
ಎರಡು ದೊಡ್ಡ ನದಿಗಳೇ. ನನ್ನ ದೃಷ್ಟಿಯಲ್ಲಿ ಹಿಂದೂಸ್ಥಾನಿ ಸಂಗೀತದಲ್ಲಿ ಮನೋಧರ್ಮವನ್ನು ಮೀರಿದ ಇಮೇಜಿನೇಶನ್ ಇದೆ. ಇದಕ್ಕೆ ಖವಾಲಿ, ಪರ್ಷಿಯನ್ ಮ್ಯೂಜಿಕ್ ಹಾಗೂ ಫೋಕ್ನ ಪ್ರಭಾವಗಳಿವೆ. ಕರ್ನಾಟಕಿಗೆ ಹಾಗಿಲ್ಲ. ಅದು ಶಾಸ್ತ್ರ. ಮಡಿವಂತಿಕೆ ಜಾಸ್ತಿ. ಅದು ಮಡಿವಂತರ ನಾಡಲ್ಲಿ ಹೆಚ್ಚು ಬಾಳುತ್ತಿದೆ ಅಂದರೆ ತಪ್ಪಲ್ಲ.
21. ಸಂಗೀತಕ್ಕೂ ಆದ್ಯಾತ್ಮಕ್ಕೂ ಸಂಬಂಧ ಯಾಕ ಬೆಳೆಸ್ತಾರ….
ಸಂಗೀತಾ.. ಶುದ್ಧ ಆದ್ಯಾತ್ಮಿಕ ದಾರಿನೇ. ಅದು ಮನೋರಂಜನೆ ಅಲ್ಲ. ಮನೋರಂಜನೆಗೆ ಬೇಕಾದಷ್ಟು ದಾರಿಗಳಿವೆ. ಹಾಡುಗಾರನಾದ ನನಗೆ ಅದೊಂದು ಸ್ವರ, ಲಯ, ತಾಳ, ಧ್ವನಿಯ ಧ್ಯಾನವೇ. ನಮ್ಮ ತಂದೆಯವರು ಎಂದೂ ನಿರೀಕ್ಷೆ ಮಾಡಿ ಹಾಡತಿರಲಿಲ್ಲ. `ಶಿವನ ಇಚ್ಛೆಯಂತೇ ಹಾಡ್ತೀನಿ’ ಅಂತಿದ್ದರು. ಅದು ಮನುಷ್ಯನನ್ನು ಸಮಾಧಿ ಸ್ಥಿತಿಗೆ ಒಯ್ತದ. ಲೌಕಿಕದ ಎಲ್ಲಾ ಕೊಂಡಿಗಳನ್ನ ಕಳಚತದ. ಲೌಕಿಕದ ಇಚ್ಛೆ ಇದ್ದರೆ ಸಂಗೀತ ಬರುವುದಿಲ್ಲ ಬಿರುದು- ಬಾವಲಿಗಳ ಬೆನ್ನು ಬಿದ್ದರ ಅಹಂ ಬರ್ತದ. `ನನಗ ಸಂಗೀತ ಬಂತಪ’ ಅಂತಾ ಭಾವಿಸಿದರ ಸಂಗೀತಾ ಸತ್ತೋತದ. ಸದಾ ರಾಗದ ಕನಸು ಬೀಳಬೇಕು. ನಾನು ಒಂದು ಪ್ರೋಗ್ರಾಂ ಮುಗಿಸಿದ ಮೇಲೆ ನಿದ್ದೆ ಮಾಡುವುದಿಲ್ಲ. ಅಲ್ಲಿ ಹಾಡುವಾಗ ಏನಾದರೂ ತಪ್ಪಿದೆನೋ ಅಂತಾ ಯೋಚಿಸ್ತಿನಿ. ಅದಕ್ಕೆ `ಕ್ರೀಯೆಟಿವ್ ರೆಸ್ಟಲೆಸ್ನೆಸ್’ ಅಂತಾರ. ಅದಕ, ಈ ದೇಹ ಸಂಗೀತಕ್ಕ ಒಂದು ಮಾಧ್ಯಮಾ ಅಷ್ಟೇ.
22. ನಿಮ್ಮ ಪ್ರಕಾರ ರಾಗಗಳ ಪ್ರಸ್ತುತ್ತಿ ಹೇಗಿರಬೇಕು ?
ರಾಗಗಳು ಸುಮ್ಮನೆ ಹುಟ್ಟಿಲ್ಲ. ಬಾಳ ಕಲ್ಪನೆ ಮಾಡಿ, ಒರೆಗೆ ಹಚ್ಚಿ, ಮನಸ್ಸಿಗಿಳಿಸಿಕೊಂಡು ಹಿರಿಯರು ಸೃಷ್ಟಿ ಮಾಡ್ಯಾರ. ಅವುಗಳ ಸಿಸ್ಟಂಗೆ ದಕ್ಕೆ ಆಗದಂಗ ಪ್ರಸ್ತುತ್ತಿ ಮಾಡಬೇಕು. `ಖಟ್’ ಅಂತಾ ಒಂದ್ ರಾಗ ಐತಿ. ಅದರಾಗ 6 ರಾಗ ಇದಾವ. `ಖಟ್ ತೋಡಿ’ ಅಂತಾ ಅದ. ಅದರಾಗ 7 ರಾಗ ಅವ. ಹಾಡೋರು ಇವುಗಳಲ್ಲಿ ವ್ಯತ್ಯಾಸ ಮಾಡಬಾರದು. ಅದೊಂದು ಹೋಲ್ ರಾಗ. ರಾಗನ್ನ ಎನಲೈಸ್ ಮಾಡದಾಂಗ ಹಾಡಬೇಕು. ಎನಲೈಸ್ ಮಾಡೋದ್ ಸಂಗೀತಗಾರರ ಕೆಲಸ ಅಲ್ಲ. ವಿಮರ್ಶಕರು ಮಾಡ್ತಾರ. ಮಹಾರಾಷ್ಟ್ರದಾಗ ಉತ್ತಮ ಸಂಗೀತ ವಿಮರ್ಶಕರು ಅದಾರ. ಮೋಹನ ನಾಡಕರ್ಣಿ, ಪು.ಲ.ದೇಶಪಾಂಡೆ ಒಳ್ಳೆಯ ವಿಮರ್ಶಕರು. ನಮ್ಮಲ್ಲಿ ಇಂತೋರು ಕಡಿಮೆ.
23.ತಮಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹಾಡೋದು ಇಷ್ಟನಾ, ಅಥವಾ ಖಾಸಗಿ ಬೈಠಕ್ನಲ್ಲಿ ಹಾಡೋದು ಇಷ್ಟನಾ?
ಖಾಸಗಿ ಬೈಠಕ್ನೇ ಇಷ್ಟ. ಅಲ್ಲಿ ಖರೇ ಕೇಳೋರೊ ಇರ್ತಾರ.
24. ಸಾಥಿದಾರರು ಎಷ್ಟು ಮುಖ್ಯ? ಕೆಲವರಿಗೆ ಬೇಕಾದ ಸಾಥಿದಾರರು ಇಲ್ಲಂದರ ಧ್ವನಿಯೇ ಹೊರಡೋದಿಲ್ಲ..
ಹಾಗೇನಿಲ್ಲ, ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಎಲ್ಲರ ಜೊತೆ ಹಾಡಬೇಕು. ಸಾಥಿದಾರರಿಗೆ ಹಾಡೋದು ಅರ್ಥವಾಗಬೇಕು, ಅದು ಮುಖ್ಯ.
24. ಕಲೆಗಳು ಬೆಳೆಯಲು ಸರ್ಕಾರಗಳು ಯಾವ ರೀತಿ ಯೋಜನೆ ರೂಪಿಸಬಹುದು?
ಸರ್ಕಾರದಿಂದ ಎಲ್ಲವೂ ಸಾಧ್ಯವಿಲ್ಲ. ದೊಡ್ಡ ದೊಡ್ಡ ಹಣವಂತರು ಸಹಾಯ ಮಾಡಬೇಕು. ಐ.ಪಿ.ಎಲ್ ಅಂತದ್ದಕ್ಕೆ ಹಣ ಸುರಿಯುವುದಕ್ಕಿಂತ ಅದರಲ್ಲಿ 10% ಹಣ ಕಲೆಗಳಿಗಾಗಿ ಕೊಟ್ಟರೆ ಸಾಕು, ಕಲೆಗಳ ಪರಂಪರೆ ಬೆಳೆಯುತ್ತೆ.






ಪ್ರಕಟಿಸಿ ಒಳ್ಳೆಯ ಕೆಲಸ ಮಾಡಿದಿರಿ
ಈ ಕೆಳಗಿನ ಲಿಂಕ್ ಕೇಳುವವರಿಗೆ ಸಂತೋಷ ಕೊಡಬಹುದು
ಒಳ್ಳೆಯ ಸಂದರ್ಶನ ಪ್ರಕಟಿಸಿದ್ದೀರಿ. ಸಂದರ್ಶನ ಮಾಡಿದ ಡಾ. ರಾಜಶೇಖರ ಹಳೇಮನೆ ಹಾಗೂ ಪ್ರಕಟಿಸಿದ ‘ಅವಧಿ’ ಬಳಗಕ್ಕೆ ಧನ್ಯವಾದಗಳು.
ಒಂದು ಉತ್ತಮವಾದ ಸಂದರ್ಶನ. ಸಂಗೀತದ ಬಗ್ಗೆ ಇತ್ತೀಚೆಗೆ ಬರೆಯುವುದೇ ಕಡಿಮೆಯಾಗಿರುವ ಸಮಯದಲ್ಲಿ ಅನೇಕ ವಿಷಯ ತಿಳಿಸಿಕೊಟ್ಟ ಬರಹ. ಕಿರಿ ಮನ್ಸೂರರಿಗೆ ರಸಾನುಭವಿ ಕೇಳುಗರು ಸಹಸ್ರಾರು ಸಂಖ್ಯೆಯಲ್ಲಿ ಹೆಚ್ಚಲಿ.
ಸಂದರ್ಶನ ಚೆನ್ನಾಗಿದೆ. ಮನ್ಸೂರ್ ಅವರ `ಖಾಸಗಿ ಬೈಠಕ್ನೇ ಇಷ್ಟ. ಅಲ್ಲಿ ಖರೇ ಕೇಳೋರೊ ಇರ್ತಾರ’ `ಸರ್ಕಾರದಿಂದ ಎಲ್ಲವೂ ಸಾಧ್ಯವಿಲ್ಲ. ದೊಡ್ಡ ದೊಡ್ಡ ಹಣವಂತರು ಸಹಾಯ ಮಾಡಬೇಕು. ಐ.ಪಿ.ಎಲ್ ಅಂತದ್ದಕ್ಕೆ ಹಣ ಸುರಿಯುವುದಕ್ಕಿಂತ ಅದರಲ್ಲಿ 10% ಹಣ ಕಲೆಗಳಿಗಾಗಿ ಕೊಟ್ಟರೆ ಸಾಕು, ಕಲೆಗಳ ಪರಂಪರೆ ಬೆಳೆಯುತ್ತೆ.’ ಎನ್ನುವ ಕೊನೆಯ ಮಾತುಗಳು`ಕಲೆಗಳು ಕಾರ್ಪೋರೇಟ್ ಜಗತ್ತನ್ನು ಸಂತೋಷಗೊಳಿಸುವ ಮಾಧ್ಯಮವಾಗಿರುವುದನ್ನು, ಅದನ್ನು ಸ್ವತಃ ಸಂಗೀತಗಾರರೇ ಬಯಸುತ್ತಿರುವುದು ಕಾಣುತ್ತಿದೆ. ಇದು ನಿಧಾನಕ್ಕೆ ಎಲ್ಲಾ ಕಲಾಮಾಧ್ಯಮಗಳನ್ನೂ ಆವರಿಸುವ ಸೂಚನೆಯೆಂದು ಅನ್ನಿಸುತ್ತೆ. ಸಂದರ್ಶನ ಮಾಡಿದ ರಾಜಶೇಖರ್ ಅವರಿಗೆ ಧನ್ಯವಾದಗಳು.
-ಅರುಣ್ ಜೋಳದಕೂಡ್ಲಿಗಿ
Bahala dinagala nantara avadhiyalli sangeetada bagge adbhuta lekhana bandide.dhanyavada.
Thank you ‘Avadhi’ for publishing this interview about one great maestro seen through his own son who is equally praiseworthy. As a growing up child with passionate interst in listening to music, listened to everything that came on radio. One vachana ‘ akka kelavva nanonda kanasa kande….’ Rendered by late Panditji had attracted me so much, it was just,’ One blissful experience’! Remember getting up early in the morning, hoping to listen to it in the programme called ‘ vandana’.
Spent my schooling days in Sadhankeri, where we used to get to see Pt. Rajshekharji, used to feel proud just to get a glimpse of him walking in the neiboughborhood.
I don’t know whether that one extra ordinary,rare rendition is available for us in any form in this hightec time. If Dharwad AIR owns it, is there any way they can make it available for the public? If anybody has more information about it, I will be happy to know.
It was very nice to know that Indian and especially Karnataka Govt. is spending lot of money towards classical music.
As panditji said, music should be included in schools, I always felt that need as a child in the elementary and high school. I believe it will bring best in children in everyway.
Thanks again,
Vidya
olleeya aparoopada sandarshana prakatisiddakke avadhi-ge abhinandanegalu !!