’ನಾಜೂಕಯ್ಯ ಯಾವಾಗ ಪ್ರವೇಶ ಪಡೆಯುತ್ತಾನೋ ಗೊತ್ತಿಲ್ಲ..’ ಜೋಗಿ ಬರೀತಾರೆ

ಜೋಗಿ

ಸುಮ್ಮನೆ ಕುಳಿತರೆ ಕಾಡುವ ಜಗತ್ತು.

ವಿಸ್ಮಯದ ಜಗತ್ತು. ಕ್ರಮೇಣ ನಮ್ಮ ಕೈಯಿಂದ ಜಾರಿಹೋಗುವ ಜಗತ್ತು. ನಾವು ಕಟ್ಟಿಕೊಂಡ ಭಾವಜಗತ್ತನ್ನು ಆವರಿಸಿಕೊಳ್ಳುವ ಹೊರಜಗತ್ತು. ನಮ್ಮೊಳಗೇ ಎರಡು ಲೋಕ ಸೃಷ್ಟಿಯಾಗಿ, ಬದುಕಲು ಕಲಿಸುವ ಒಂದು ಲೋಕ, ಬಾಳಲು ಕಲಿಸುವ ಮತ್ತೊಂದು ಲೋಕ. ಎರಡರಲ್ಲಿ ನಾವೆಲ್ಲಿರಬೇಕೆಂದು ತಿಳಿಯದಂಥ ಅವಸ್ಥೆ.

ಡಿವಿಜಿ ಹೇಳುತ್ತಾರೆ. ಮನಸ್ಸಿನೊಳಗೆ ಎರಡು ಕೋಣೆಗಳನ್ನು ಮಾಡು. ಹೊರಕೋಣೆಯಲ್ಲಿ ಜಗತ್ತಿನ ಆಟಗಳನ್ನು ಆಡು. ಒಳಕೋಣೆಯಲ್ಲಿ ಯೋಗಿಯಂತಿರು. ಹಾಗೆ ಮಾಡುವುದಕ್ಕೆ ಸಾಧ್ಯವಾಗಬೇಕು ಎಂಬ ಆಸೆ. ಆದರೆ ತೊಟ್ಟ ಶರಟಿನ ಬಣ್ಣ ಚರ್ಮಕ್ಕೂ ಆತ್ಮಕ್ಕೂ ಮೆತ್ತಿಕೊಳ್ಳುತ್ತಾ ಹೋಗುತ್ತೇವೆ. ಕ್ರಮೇಣ ನಾನು ಎಂಬುದು ನನ್ನ ವೃತ್ತಿ, ನನ್ನ ಪ್ರವೃತ್ತಿ, ನನ್ನ ಅಂತಸ್ತು, ನನ್ನ ಜಾಣತನ, ನನ್ನ ಕುಯುಕ್ತಿ, ನನ್ನ ಡಿಪ್ಲೊಮಸಿ ಆಗಿಬಿಡುತ್ತದಾ?

ನಾಜೂಕಯ್ಯ ನಮ್ಮೊಳಗೆ ಯಾವಾಗ ಪ್ರವೇಶ ಪಡೆಯುತ್ತಾನೋ ಗೊತ್ತಿಲ್ಲ. ಅರ್ಥವಿಲ್ಲದ ಅನಿವಾರ್ಯ ಮಾತುಗಳಿಗೆ ನಾವು ತುತ್ತಾಗುತ್ತೇವೆ. ಅದು ಕಾಯಿಲೆಯೆಂಬುದು ಗೊತ್ತಾಗುವುದೇ ಇಲ್ಲ. ತುಂಬ ಹೊಗಳುವುದು ಕೂಡ ಒಂದು ಕಾಯಿಲೆ, ಹೊಗಳಿಸಿಕೊಳ್ಳುವುದು ಅದಕ್ಕಿಂತ ದೊಡ್ಡ ಕಾಯಿಲೆ, ಹೊಗಳುವವನಿಗೆ ಅದು ಸುಳ್ಳೆಂದು ಗೊತ್ತಿರುತ್ತದೆ. ಹೊಗಳಿಸಿಕೊಳ್ಳುವವನಿಗೂ ಆ ಹೊಗಳಿಕೆ ಪೊಳ್ಳೆಂದು ಗೊತ್ತಾಗಿರುತ್ತದೆ. ಆದರೂ ಅದನ್ನೇ ಚಪ್ಪರಿಸುವ ಆಸೆ.

ಇಪ್ಪತ್ತು ವರುಷಗಳ ನಂತರ ಮತ್ತೆ ನಮ್ಮೊಳಗೊಬ್ಬ ನಾಜೂಕಯ್ಯ ನೋಡಿದೆ. ಬದಲಾಗದ ಜಗತ್ತು. ಕನ್ನಡ ಹೋರಾಟಗಾರರು ಇಂಗ್ಲಿಷ್ ಬೋರ್ಡುಗಳಿಗೆ ಬಣ್ಣ ಬಳೆಯುವ ಕಾರ್ಯಕ್ರಮ ಇಟ್ಟುಕೊಂಡಿದ್ದರು ಅಂತ ಮೊನ್ನೆ ಮೊನ್ನೆ ಓದಿದಾಗ, ಬಿಜಿಎಲ್ ಸ್ವಾಮಿಯವರ ಪ್ರಾಧ್ಯಾಪಕನ ಪೀಠದಲ್ಲಿ ಪುಸ್ತಕ ನೆನಪಾಯಿತು. ಐವತ್ತು ವರುಷಗಳ ಹಿಂದೆಯೂ ಮೈಸೂರಿನಲ್ಲಿ ವಿದ್ಯಾರ್ಥಿಗಳು ಅದನ್ನೇ ಮಾಡುತ್ತಿದ್ದರು. ರಾಮಸ್ವಾಮಿ ಸರ್ಕಲ್ಲಿನಿಂದ ಉದ್ದಕ್ಕೆ ಸಾಗುವ ನೂರಡಿ ರಸ್ತೆಯ ಎರಡೂ ಬದಿಯಲ್ಲಿರುವ ಇಂಗ್ಲಿಷ್ ಬೋರ್ಡುಗಳಿಗೆ ಬಣ್ಣ ಬಳಿಯುತ್ತಿದ್ದರಂತೆ. ಈ ಹೋರಾಟಗಾರರನ್ನು ಜೀವಂತವಾಗಿರಿಸಲು ವ್ಯಾಪಾರಿಗಳು ಕೂಡ ಇಂಗ್ಲಿಷ್ ಬೋರ್ಡು ಬರೆಸಿ ಹಾಕುತ್ತಲೇ ಬಂದಿದ್ದಾರೆ. ಒಂದು ಹೋರಾಟ ಹೀಗೆ ದಶಕಗಳ ನಂತರವೂ ಕ್ರಿಯಾಶೀಲವಾಗಿದೆ.

ಯಾವುದೂ ಬದಲಾಗುವುದಿಲ್ಲ, ನಾವು ಪಾಠ ಕಲಿಯುತ್ತಾ ಹೋಗುತ್ತೇವೆ. ಪಾಠ ಕಲಿಯುವುದು ಎಂದರೆ ಮಾಗುತ್ತಾ ಹೋಗುವುದಲ್ಲ, ಜಾಣರಾಗುತ್ತಾ ಹೋಗುವುದು. ಜಾಣರಾಗುವುದು ಎಂದರೆ ಜಗತ್ತನ್ನು ಅರ್ಥಮಾಡಿಕೊಳ್ಳುವುದು. ಜಗತ್ತನ್ನು ಅರ್ಥಮಾಡಿಕೊಳ್ಳುವುದು ಎಂದರೆ, ಈ ಲೋಕದಲ್ಲಿ ಕಳ್ಳರೂ ಸುಳ್ಳರೂ ಭ್ರಷ್ಟರೂ ಇರುತ್ತಾರೆ. ಅವರನ್ನು ಪೋಷಿಸಲಿಕ್ಕೆಂದೇ ಕಾನೂನುಗಳೂ ವ್ಯವಸ್ಥೆಯೂ ಇರುತ್ತದೆ. ಆ ವ್ಯವಸ್ಥೆ ಮತ್ತು ಕಾನೂನಿನ ನಡುವೆ ನಾವು ನಿಂತಿರುತ್ತೇವೆ. ಅದನ್ನು ನಾವು ಮೀರುವಂತಿಲ್ಲ. ಪಾಲಿಸದೆಯೂ ಇರುವಂತಿಲ್ಲ.

ಸೀತಾರಾಮ್ ನಾಟಕದಲ್ಲೊಂದು ಮಾತು: ಇಲ್ಲಿ ನ್ಯಾಯಯುತವಾಗಿ ನಡಕೊಳ್ಳದೇ ಹೋದರೆ ಶಿಕ್ಷೆಯಿಲ್ಲ. ಕಾನೂನುಬದ್ಧವಾಗಿ ನಡಕೊಳ್ಳದೇ ಹೋದರೆ ಶಿಕ್ಷೆ ತಪ್ಪಿದ್ದಲ್ಲ.  ನ್ಯಾಯವೆಂಬುದು ಆತ್ಮಸಾಕ್ಷಿ, ಕಾನೂನು ಹೊರಗಿನ ಸಾಕ್ಷಿಗಳನ್ನು ನೆಚ್ಚಿಕೊಂಡದ್ದು. ನ್ಯಾಯಬದ್ಧವಾಗಿರಲೆಂದೇ ರೂಪಿಸಲ್ಪಟ್ಟ ಕಾನೂನು ನ್ಯಾಯವಂತಿಕೆಯನ್ನು ನಿರೀಕ್ಷಿಸುವುದಿಲ್ಲ ಅನ್ನುವುದೇ ವಿಪರ್ಯಾಸ.

ಇದನ್ನು ನಮ್ಮೊಳಗೊಬ್ಬ ನಾಜೂಕಯ್ಯ ನಮ್ಮ ಮುಂದಿಡುತ್ತಾ ಹೋಗುತ್ತದೆ. ನನ್ನ ತಲೆಮಾರಿನ ಮಂದಿಗಿದು ಹಳೆಯ ನಾಟಕ. ಹೊಸತಲೆಮಾರಿಗೆ ಹಳೆಯದಾಗಿದ್ದೂ ಹೊಸತಾಗಿರುವ ನಾಟಕ. ಮಾತಿನ ಮೂಲಕವೇ ಸಾಗುವ ನಾಜೂಕಯ್ಯನನ್ನು ಮಾತಿನಿಂದ ಬಿಡುಗಡೆ ಮಾಡುವುದು, ಸೀತಾರಾಮ್ ಆರಿಸಿಕೊಂಡಿರುವ ಜಗತ್ತು. ನೀವು ಕಿವಿತುಂಬ ಮಾತು ತುಂಬಿಸಿಕೊಂಡು ಹೊರಬರುತ್ತಿದ್ದಂತೆ  ನಿಮ್ಮನ್ನು ನಾಟಕ ಕಾಡಲು ಶುರು ಮಾಡುತ್ತದೆ. ಭ್ರಷ್ಟತೆಯನ್ನು ಮಾತು ಸಮರ್ಥಿಸಿಕೊಳ್ಳಬಲ್ಲದು, ಮೌನವಲ್ಲ.

ಇಡೀ ನಾಟಕದ ರಂಗವಿನ್ಯಾಸವನ್ನು ಗಮನಿಸುತ್ತಿದ್ದೆ. ಇವತ್ತಿನ ಕಾಲಕ್ಕೆ ಕೊಂಚ ಹಳೆಯದೆನ್ನಿಸುವ ಕಟ್ಟುವ ಕ್ರಮ. ಮೂವತ್ತು ಮೂವತ್ತೈದರ ಬಿಸಿರಕ್ತದ ಯುವನಟ ಮಾಡಬೇಕಾಗಿದ್ದ ಪಾತ್ರ.  ಅತೀವ ವ್ಯಂಗ್ಯದಲ್ಲಿ ರೂಪು ತಳೆಯಬೇಕಾದ ವಿಷಾದ. ಪರಿಕರಗಳನ್ನು ತೀವ್ರ ಚಟುವಟಿಕೆಯನ್ನೂ ಇವತ್ತಿನ ನಾಟಕ ನಿರೀಕ್ಷಿಸುತ್ತದೆ ಎಂದು ಭಾವಿಸಿಕೊಳ್ಳುವ ಹೊತ್ತಿಗೇ,  ನಮ್ಮೊಳಗೊಬ್ಬ ನಾಜೂಕಯ್ಯ, ನಮ್ಮನ್ನು ವಿಹ್ವಲಗೊಳಿಸುತ್ತಾ ಹೋಗುತ್ತದೆ. ಹಾಗೆ ನೋಡಿದರೆ, ತೊಂಬತ್ತರ ದಶಕದಲ್ಲಿದ್ದ ಮೌಲ್ಯಗಳಾಗಲೀ, ಬದ್ಧತೆಯಾಗಲಿ ಇವತ್ತು ಇಲ್ಲ. ಅದು ಎಲ್ಲರಿಗೂ ಗೊತ್ತಿದೆ. ಭ್ರಷ್ಟತೆಯನ್ನು ನಾವು ಕಾನೂನುಬದ್ಧವಾಗಿಸಿದ್ದೇವೆ, ನ್ಯಾಯಬದ್ಧವಾಗಿಸಿದ್ದೇವೆ. ನಮ್ಮ ಆತ್ಮಸಾಕ್ಷಿಯನ್ನು ಬಡಿದು ಮಲಗಿಸಿದ್ದೇವೆ. ಅರೆಬೆತ್ತಲೆ ಮೈಯ, ಅರೆಹೊಟ್ಟೆಯ, ಕಾಯಿಲೆ ಬಿದ್ದು ಮೂಳೆಚಕ್ಕಳವಾದ ಜನ ತುಂಬಿರುವ ನಿಬಿಡ ರಸ್ತೆಯ ನಡುವೆ ನಮ್ಮ ಐವತ್ತು ಲಕ್ಷದ ಕಾರನ್ನು ಯಾವ ಪಾಪಪ್ರಜ್ಞೆಯೂ ಇಲ್ಲದೇ ಓಡಿಸಿಕೊಂಡು ಹೋಗುವಷ್ಟರ ಮಟ್ಟಿಗೆ ನಾವು ಪ್ರಜ್ಞಾವಂತರೂ ಆಗಿದ್ದೇವೆ. ಹಿಂದೆಲ್ಲಕ್ಕಿಂತ ಹೆಚ್ಚಾಗಿ ಕರ್ಮಸಿದ್ಧಾಂತವನ್ನು ನಂಬುತ್ತಿದ್ದೇವೆ. ಬಡವರು ಆ ಸ್ಥಿತಿಯಲ್ಲಿರುವುದಕ್ಕೆ ಅವರ ಪೂರ್ವಜನ್ಮದ ಕರ್ಮವೇ ಕಾರಣ ಎಂದು ನಂಬಿಬಿಟ್ಟರೆ ನಾವು ಮುಕ್ತ ಮುಕ್ತ ಮುಕ್ತ. ಶ್ರೀಮಂತಿಕೆ ಹಿಂದಿನ ಜನ್ಮದಲ್ಲಿ ಮಾಡಿದ ಪುಣ್ಯದ ಫಲ ಎಂದುಕೊಂಡರೆ ಎಲ್ಲ ಭ್ರಷ್ಟತೆಯೂ ಸರಾಗ. ಒಂದು ವೇಳೆ ನಾವು ತಪ್ಪುಗಳನ್ನು ಮಾಡಿದರೂ ಕೂಡ ಹೇಗೂ ಮುಂದಿನ ಜನ್ಮದಲ್ಲಿ ಕಷ್ಟ ಅನುಭವಿಸಿಯೇ ಅನುಭವಿಸುತ್ತೇವಲ್ಲ!

ಇಂಥ ವಿಪರ್ಯಾಸವನ್ನೆಲ್ಲ ನಾಟಕ ಬಗೆಯುತ್ತಾ ಹೋಗುತ್ತದೆ. ಕಥಾನಾಯಕ ತನ್ನ ನಿಷ್ಠುರ ಪ್ರಾಮಾಣಿಕತೆಯಿಂದ ಅವನತಿಯತ್ತ ಸಾಗುತ್ತಿದ್ದಂತೆಯೇ ನಾವು ಒಳಗೊಳಗೇ ನಿರಾಳರಾಗುತ್ತಾ ಹೋಗುತ್ತೇವೆ. ಅಂತೂ ಬದುಕಲು ಕಲಿತ, ಸಾಲದಿಂದ ಪಾರಾದ, ತಂಗಿಯ ಮದುವೆ ಮಾಡಿದ, ಮನೆ ಕಟ್ಟಿದ, ಹೆಂಡತಿಯನ್ನು ಸುಖವಾಗಿಟ್ಟ ಎಂಬ ಐಹಿಕದ ಬೆಳವಣಿಗೆಗಳನ್ನೇ ಗಮನಿಸುತ್ತಾ, ಆ ದಾರಿಯಲ್ಲಿ ಆತ ಆತ್ಮಹೀನನಾಗುತ್ತಾನೆ, ಕ್ರಿಯಾಹೀನನಾಗುತ್ತಾನೆ.

ಹೀಗೆ ತನ್ನ ಅಂತರಂಗದ ಸತ್ಯತೆಯನ್ನು ಕಳಕೊಳ್ಳುವುದಕ್ಕೆ ಬೇಕಾದ ವಾತಾವರಣವನ್ನು ನಮ್ಮ ಅಕ್ಷರಸ್ತ ಜಗತ್ತು ನಿರ್ಮಾಣ ಮಾಡಿಯೇಬಿಟ್ಟಿದೆ. ಮೊನ್ನೆ ಮೊನ್ನೆ ರವಿಚಂದ್ರನ್ ಮಾತನಾಡುತ್ತಾ ಪತ್ರಕರ್ತರು ಎದುರು ಸಿಕ್ಕಾಗ ಸಿನಿಮಾ ಚೆನ್ನಾಗಿದೆ ಅನ್ನುತ್ತಾರೆ. ಬರೆಯುವ ಹೊತ್ತಿಗೆ ಅಂಥ ಮಾತುಗಳನ್ನು ಬರೆಯುವುದಿಲ್ಲ ಅಂದರು. ವಿಮರ್ಶೆ ಎಂಬುದು ಒಂದು ಶಾಸ್ತ್ರ ಎಂದು ಗೊತ್ತಿಲ್ಲದ, ಅದೂ ಕೂಡ ಜಾಹೀರಾತು ಎಂದು ಭಾವಿಸಿಕೊಂಡಾಗ ಮಾತ್ರ ಇಂಥ ಮಾತುಗಳನ್ನು ಆಡಲು ಸಾಧ್ಯ. ಪುಸ್ತಕ ಬಿಡುಗಡೆಗೆ ಬಂದ ಅತಿಥಿ, ಕೃತಿಯ ಒಳ್ಳೆಯ ಅಂಶಗಳ ಬಗ್ಗೆ ಮಾತಾಡುತ್ತಾನೆಯೇ ಹೊರತು ಅದರ ವಿಮರ್ಶೆ ಮಾಡುವುದಕ್ಕೆ ಹೋಗುವುದಿಲ್ಲ. ಎದುರೆದುರೇ ಸಿಕ್ಕಿ ಹೇಗಿದೆ ಸಿನಿಮಾ ಅಂದಾಗ ಪರವಾಗಿಲ್ಲ. ಚೆನ್ನಾಗಿದೆ ಅಂತ ಹೇಳುವುದು ಸೌಜನ್ಯ ಮತ್ತು ಸಜ್ಜನಿಕೆ. ಒಬ್ಬ ವಿಮರ್ಶಕನಾಗಿ ಬರೆಯಲು ಕೂತಾಗ ಸಜ್ಜನಿಕೆಯ ಜಾಗವನ್ನು ಜವಾಬ್ದಾರಿ ಆವರಿಸಿಕೊಳ್ಳುತ್ತದೆ. ಒಬ್ಬ ವಿಮರ್ಶಕ ಒಂದು ಓದುಗ ಸಮೂಹಕ್ಕೆ ಉತ್ತರದಾಯಿಯಾಗಿರುತ್ತಾನೆ ಎಂಬುದನ್ನು ಸಿನಿಮಾ ಮಾಡುವವರು ಅರ್ಥ ಮಾಡಿಕೊಳ್ಳುವುದಿಲ್ಲ.

ನಾಜೂಕಯ್ಯ ನಾಟಕದಲ್ಲಿ ಮೂರನೇ ದರ್ಜೆಯ ಕೊಳಕು ಕೃತಿ ಎಂದು ತಾನೇ ಹೇಳಿದ ಕಾದಂಬರಿಯೊಂದನ್ನು ಅದರ ಲೇಖಕರ ಮುಂದೆ ಹೊಗಳಬೇಕಾದ ಪರಿಸ್ಥಿತಿ ಬರುತ್ತದೆ. ಆ ಹೊಗಳಿಕೆ ಹೇಗಿರುತ್ತದೆ ಅಂದರೆ ಅದರಲ್ಲಿರುವ ಕಪಟವನ್ನು ಆ ಲೇಖಕ ಕೂಡ ಆರ್ಥಮಾಡಿಕೊಳ್ಳುತ್ತಾನೆ. ಹಾಗೆ ಅರ್ಥ ಮಾಡಿಕೊಂಡ ನಂತರವೂ ಅದನ್ನು ಸ್ವೀಕರಿಸುತ್ತಾನೆ. ಸುತ್ತಲಿನ ಮಂದಿ ಕೂಡ ಅದು ಸತ್ಯವಾಕ್ಯ ಎಂದು ಭಾವಿಸಿದಂತೆ ನಟಿಸುತ್ತಾರೆ. ಹೀಗೆ ಒಂದು ಸಮೂಹವೇ ಅಪ್ರಾಮಾಣಿಕವಾಗುತ್ತಾ, ನಾಜೂಕಯ್ಯರಾಗುತ್ತಾ ಹೋಗುತ್ತಾರೆ. ಹಲವು ಸತ್ಯಗಳನ್ನು ಧ್ವನಿಸುವ  ನಮ್ಮೊಳಗೊಬ್ಬ ನಾಜೂಕಯ್ಯ ನಾಟಕವನ್ನು ನಾವು ಅಪ್ರಾಮಾಣಿಕರೆಂದು ನಮ್ಮನ್ನು ನಾವೇ ಮೆಚ್ಚಿಕೊಂಡಾಡಲಿಕ್ಕಾದರೂ ನೋಡಬೇಕು.

-2-

ನಾನು ನೋಡಿದ ಪ್ರದರ್ಶನವನ್ನು ಏರ್ಪಡಿಸಿದ್ದು ನಟರಂಗ. ನಾಟಕವನ್ನು ಸಿ ಆರ್ ಸಿಂಹ ಅವರಿಗೆ ಅರ್ಪಿಸಲಾಗಿತ್ತು. ಸಿ ಆರ್ ಸಿಂಹ ಅವರನ್ನು ಬರೀ ನಟರೆಂದು ನೋಡುವುದು ಅವರನ್ನು ಸಮೀಪದಿಂದ ಬಲ್ಲವರಿಗೆ ಕಷ್ಟ. ಅವರೊಬ್ಬ ಸ್ಪೂರ್ತಿ ತುಂಬುವ ಮಿತ್ರರಂತಿದ್ದವರು. ಅಪಾರ ಆಸಕ್ತಿಗಳ ಸಂಗಮಸ್ಥಾನವಾಗಿತ್ತು ಅವರ ಮನೆ. ನಾಟಕದ ಓದು, ಬರಹ, ಕತೆ, ತಮಾಷೆ, ಹರಟೆ, ಸ್ಮರಣೀಯ ಸಂಜೆಗಳಲ್ಲಿ ಸಿಂಹ ಸೃಜನಶೀಲರಾಗುತ್ತಿದ್ದರು. ತುಂಬ ಓದುತ್ತಿದ್ದರು. ಓದಿ ಪ್ರತಿಕ್ರಿಯಿಸುತ್ತಿದ್ದರು. ಬಾಲ್ಯ, ತಾರುಣ್ಯಗಳನ್ನು ನೆನಪಿಸಿಕೊಳ್ಳುತ್ತಿದ್ದರು. ಸಿಂಹ ಅವರಿಗೆ ಆತ್ಮಚರಿತ್ರೆ ಬರೆಯಿರಿ ಎಂದು ಅನೇಕ ಸಲ ಒತ್ತಾಯಿಸಿದ್ದೆ. ಅದಕ್ಕೆ ತಮಾಷೆಯಾಗಿ ಸಿಂಹ ಸ್ವಪ್ನ ಅಂತ ಹೆಸರಿಡೋಣ ಅಂತಲೂ ಮಾತಾಡಿಕೊಂಡಿದ್ದೆವು.

ಬೆಂಗಳೂರು ದಕ್ಷಿಣ ಬರಿದಾಗುತ್ತಾ ಬರುತ್ತಿದೆ. ರಾಜಕಾರಣಿಗಳಿಂದ ತುಂಬಿಹೋಗುತ್ತಿದೆ. ಅದೇ ರಸ್ತೆಯಲ್ಲಿ ಕೆ ಎಸ್ ನ ಇದ್ದರು. ಲೋಕೇಶ್ ಇದ್ದರು. ಅಲ್ಲಿಂದ ಅನತಿ ದೂರದಲ್ಲಿ ಲಂಕೇಶರಿದ್ದರು. ಸಿಂಹ ಇದ್ದರು.

ಆ ರಸ್ತೆ ಈಗ ಬಿಜಿಯಾಗಿದೆ ಮತ್ತು ಅನಾಥವಾಗಿದೆ.

‍ಲೇಖಕರು avadhi

March 11, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

 1. malini guruprasanna

  chennagide. nammolagobba naajookaiah alla, prapanchave indu naajookaiah galinda tumbi hogide. haagillavaadare badukalu assadhyavemba paristiti nirmanavaaguttide. naajookaiah aagalebekaada anivaryateyannu huttuhaakuttide. idakkella karanakartaru naavugale irabahuda..?

  ಪ್ರತಿಕ್ರಿಯೆ
 2. GORURSHIVESH

  ಒಬ್ಬ ವಿಮರ್ಶಕ ಒಂದು ಓದುಗ ಸಮೂಹಕ್ಕೆ ಉತ್ತರದಾಯಿಯಾಗಿರುತ್ತಾನೆ nice quote.

  ಪ್ರತಿಕ್ರಿಯೆ
 3. Lokesh Raj Mayya

  ಬದುಕಲು ಕಲಿತ, ಸಾಲದಿಂದ ಪಾರಾದ, ತಂಗಿಯ ಮದುವೆ ಮಾಡಿದ, ಮನೆ ಕಟ್ಟಿದ, ಹೆಂಡತಿಯನ್ನು ಸುಖವಾಗಿಟ್ಟ ಎಂಬ ಐಹಿಕದ ಬೆಳವಣಿಗೆಗಳನ್ನೇ ಗಮನಿಸುತ್ತಾ, ಆ ದಾರಿಯಲ್ಲಿ ಆತ ಆತ್ಮಹೀನನಾಗುತ್ತಾನೆ, ಕ್ರಿಯಾಹೀನನಾಗುತ್ತಾನೆ.
  ಅತೀವ ವ್ಯಂಗ್ಯದಲ್ಲಿ ರೂಪು ತಳೆಯಬೇಕಾದ ವಿಷಾದ.
  ಮೇಲ್ಕಂಡ ಮಾತುಗಳು ಲಹರಿಗಳು ಇಷ್ಟವಾದವು ಸರ್..‍ಸತ್ಯವೂ ಸಹ ಅವು.

  ಪ್ರತಿಕ್ರಿಯೆ
 4. Harsha

  ಬೆಂಗಳೂರು ದಕ್ಷಿಣ ಬರಿದಾಗುತ್ತಾ ಬರುತ್ತಿದೆ. ರಾಜಕಾರಣಿಗಳಿಂದ ತುಂಬಿಹೋಗುತ್ತಿದೆ. ಅದೇ ರಸ್ತೆಯಲ್ಲಿ ಕೆ ಎಸ್ ನ ಇದ್ದರು. ಲೋಕೇಶ್ ಇದ್ದರು. ಅಲ್ಲಿಂದ ಅನತಿ ದೂರದಲ್ಲಿ ಲಂಕೇಶರಿದ್ದರು. ಸಿಂಹ ಇದ್ದರು.
  ಆ ರಸ್ತೆ ಈಗ ಬಿಜಿಯಾಗಿದೆ ಮತ್ತು ಅನಾಥವಾಗಿದೆ.- Sigh
  Your review is making me to watch the play, Mr. Jogi

  ಪ್ರತಿಕ್ರಿಯೆ
 5. ganagadhar kolgi

  nammolagobba najookayya- lankesh ptfrikeyalli adannu odidaga ada anubhava eegaloo masade ulidide. adannu nimma bareha mattastu vistariside. ondu besara, eevaregu nataka pradashrana nodalu agilladiruvadu.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: