ನಾ ದಿವಾಕರ
ಯುಗಾದಿ ಎಂದರೆ ಯುಗದ ಆದಿ. ಒಂದು ನವ ಯುಗದ ಆರಂಭ. ಅಧಿಕಾರ ಪೀಠವನ್ನು ಸಾಂಕೇತಿಕವಾಗಿ ಸೂಚಿಸುವ ಗಾದಿ ಎಂಬ ಪದವೂ ಯುಗಾದಿಯಲ್ಲಿ ಅಂತರ್ಗತವಾಗಿರುವುದರಿಂದ ಸಮಾಜವನ್ನು ತಮ್ಮ ಮುಷ್ಟಿಯಲ್ಲಿರಿಸಿಕೊಂಡು ಅಧಿಪತ್ಯ ಸಾಧಿಸುವ ಗಾದಿಯನ್ನೇರಿರುವ ಪ್ರಬಲ ವರ್ಗಗಳಿಗೆ ಯುಗಾದಿ ಒಂದು ಯುಗವನ್ನು ಅಂತ್ಯಗೊಳಿಸಿ ನವ ಯುಗವನ್ನು ಆರಂಭಿಸುವ ವೇದಿಕೆಯಾಗಿಯೂ ಪರಿಣಮಿಸಬಹುದು, ಇಚ್ಚಾಶಕ್ತಿ ಇದ್ದಲ್ಲಿ. ಪಾರಂಪರಿಕ ಗ್ರಹಿಕೆಯ ಪ್ರಕಾರ, ಪೌರಾಣಿಕ ಕಥೆಗಳ ನೆಲೆಯಲ್ಲಿ ನಾಲ್ಕು ಯುಗಗಳನ್ನು ಗುರುತಿಸಿರುವ ಭಾರತೀಯ ಸಮಾಜ ಪ್ರತಿಯೊಂದು ಯುಗವೂ ಒಂದು ಕಾಲಘಟ್ಟದಲ್ಲಿ ಅಂತ್ಯಗೊಳ್ಳುತ್ತದೆ ನಂತರ ಹೊಸ ಯುಗದ ಆರಂಭವಾಗುತ್ತದೆ ಎಂದು ನಂಬಿದೆ. ಈ ನಂಬಿಕೆಯ ಸತ್ಯಾಸತ್ಯತೆಗಳನ್ನು ಪ್ರಮಾಣೀಕರಿಸುವ ಅವಶ್ಯಕತೆ ಇಲ್ಲ. ಸತ್ಯಯುಗ, ತ್ರೇತಾಯುಗ, ಕೃತಯುಗ ಮತ್ತು ಕಲಿಯುಗಗಳ ಚೌಕಟ್ಟಿನಲ್ಲಿ ಮಾನವ ಸಮಾಜದ ಅಭ್ಯುದಯದ ಹಾದಿಯನ್ನು ಕಾಣುಬ ಭಾರತೀಯ ಸಮಾಜ ಪ್ರತಿಯೊಂದು ಯುಗಕ್ಕೂ ಆದಿ ಅಂತ್ಯಗಳಿವೆ ಎಂಬ ನಂಬಿಕೆಯಲ್ಲೇ ಮುನ್ನಡೆದಿದ್ದು ಧರ್ಮದ ನೆಲೆಯಲ್ಲಿ, ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳ ಚೌಕಟ್ಟಿನಲ್ಲಿ ನವ ಯುಗದ ಆದಿಯನ್ನು ಸ್ವಾಗತಿಸುತ್ತದೆ.

ಪ್ರಸ್ತುತ ಮಾನವ ಸಮಾಜ ಬಾಳುತ್ತಿರುವ ಕಲಿ ಯುಗವೂ ಕ್ರಿಶ 2025ಕ್ಕೆ ಅಂತ್ಯವಾಗುತ್ತದೆ ಎಂಬ ಪ್ರತೀತಿ ಇದೆ. ಭೌತಿಕ ಪ್ರಪಂಚ ಅಂತ್ಯವಾಗುವುದೋ ಇಲ್ಲವೋ ಭೌದ್ಧಿಕವಾಗಿ ಮಾನವ ಪ್ರಪಂಚ ಒಂದೆಡೆ ಅಂತ್ಯದ ಪರದೆಯನ್ನು ಕಾಣಲೇಬೇಕು ಎನ್ನುವಂತಹ ಪರಿಸ್ಥಿತಿಯನ್ನು ಭಾರತೀಯ ಸಮಾಜವೇ ನಿಮರ್ಿಸಿದೆ. ಹಿಂದೂ ಸಮಾಜದಲ್ಲಿ ಪ್ರತಿ ವರ್ಷದ ಆರಂಭವನ್ನೂ ಹೊಸ ಯುಗದ ಆರಂಭ ಎಂದೇ ಪರಿಗಣಿಸಿ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ. ವಾಸ್ತವವಾಗಿ ಆರಂಭವಾಗಬೇಕಿರುವುದು ಭೌತಿಕ ಯುಗವಲ್ಲ. ಭೌದ್ಧಿಕ ಯುಗ. ತನ್ನೊಡಲಿನ ಸೌಂದರ್ಯವನ್ನು ಕಾಲದಿಂದ ಕಾಲಕ್ಕೆ ತನ್ನದೇ ಆದ ರೀತಿ ರಿವಾಜುಗಳ ಮೂಲಕ ನವೀಕರಿಸುವ ನಿಸರ್ಗ ಮಾನವ ಸಮಾಜಕ್ಕೆ ಚಿಂತನ ಮಂಥನ ಪ್ರಕ್ರಿಯೆಯ ಒಂದು ನಿದರ್ಶನವನ್ನು ನೀಡುತ್ತಲೇ ಬಂದಿದೆ. ಭೌತಿಕ ಜಗತ್ತಿನಲ್ಲಿ ತಮ್ಮ ಅಸ್ತಿತ್ವ ಕಂಡುಕೊಳ್ಳುವ ಪ್ರತಿಯೊಂದು ಚರಾಚರ ವಸ್ತು ತನ್ನ ಆದಿ ಅಂತ್ಯಗಳನ್ನು ಸಮಾನವಾಗಿ ಸ್ವೀಕರಿಸಿ ಹಳೆಯ ಬೇರುಗಳನ್ನು ಕಳೆದುಕೊಳ್ಳದೆಯೇ ಹೊಸ ಚಿಗುರು ಮೂಡಿಸಲು ಯತ್ನಿಸಬೇಕು ಎಂಬ ಸಂದೇಶವನ್ನು ನಿಸರ್ಗ ಮೌನವಾಗಿ ಪ್ರತಿಧ್ವನಿಸುತ್ತದೆ. ನಳನಳಿಸುವ ಹಸಿರು ಹೊದಿಕೆಯೊಳಗೆ ಅಂತರ್ಗತವಾಗಿರುವ ಅಂತರಂಗದ ಚಿಂತನೆಗಳನ್ನು ಗ್ರಹಿಸಲು ಮಾನವ ಸಮಾಜ ವಿಫಲವಾಗುತ್ತಲೇ ಇದೆ.
ಹಸಿರನ್ನೇ ತನ್ನ ಉಸಿರನ್ನಾಗಿ ಸ್ವೀಕರಿಸಿ ಮಾನವ ಸಮಾಜದ ದುಷ್ಟ ಕೈಂಕರ್ಯಗಳನ್ನು ಲೆಕ್ಕಿಸದೆ ಮನುಕುಲದ ಉಸಿರು ಉಳಿಯಲು ಹಸಿರನ್ನು ನವೀಕರಿಸುತ್ತಲೇ ಬಂದಿರುವ ನಳನಳಿಸುವ ನಿಸರ್ಗವನ್ನು ಸ್ವಾಗತಿಸುತ್ತಲೇ ಬಾಳಿನಲ್ಲಿ ಸಿಹಿ ಮತ್ತು ಕಹಿಯನ್ನು ಸಮನಾಗಿ ಸ್ವೀಕರಿಸುವ ಶಪಥ ಮಾಡುತ್ತಾ ಬೇವು ಬೆಲ್ಲವನ್ನು ಸವಿದು ಹಬ್ಬವನ್ನು ಆಚರಿಸುವ ನಾವು ಜೀವನವಿಡೀ ಸಿಹಿ ಉಣ್ಣುತ್ತಲೇ ಅನ್ಯರಿಗೆ ಕಹಿ ಉಣಬಡಿಸುವ ದುಷ್ಟ ಪರಂಪರೆಗೆ ಬಲಿಯಾಗಿರುವುದು ಮನುಕುಲದ ದುರಂತ. ಅಭಿವೃದ್ಧಿ, ಪ್ರಗತಿ ಮತ್ತು ಆಧುನಿಕತೆಯ ಪೋಷಾಕು ಧರಿಸಿ ಭೂಮಂಡಲದಾಚೆ ಸಾಗಿರುವ ಮಾನವ ಸಮಾಜ ತನ್ನ ಉಸಿರಿಗೆ ಉಸಿರಾಗಿರುವ ನಿಸರ್ಗದ ಬಸಿರು ಬರಡಾಗುತ್ತಿದ್ದರೂ ಲೆಕ್ಕಿಸದೆ ಮುನ್ನಡೆಯುತ್ತಿರುವುದು ದುರಂತ ಪರ್ವದ ಸಂಕೇತ.
ಮಾನವ ಸಮಾಜ ಅಭ್ಯುದಯದ ಹಾದಿಯಲ್ಲಿ ಎಷ್ಟೇ ಪ್ರಗತಿ ಸಾಧಿಸಿ ಉನ್ನತ ಹಂತ ತಲುಪಿದ್ದರೂ ನಾಗರೀಕತೆಯನ್ನು ಮೈಗೂಡಿಸಿಕೊಂಡಿಲ್ಲ ಎನ್ನುವುದು ನಮ್ಮ ಸುತ್ತಲಿನ ವಿದ್ಯಮಾನಗಳು ನಿರೂಪಿಸುತ್ತವೆ. ಲಕ್ಷಾಂತರ ವರ್ಷಗಳ ಕಾಲ ದಿಟ್ಟ ಹೆಜ್ಜೆಗಳನ್ನು ಕ್ರಮಿಸಿ ಭೂಮಂಡಲದಾಚೆಯ ಗ್ರಹಗಳಿಗೂ ಲಗ್ಗೆ ಇಡಲು ಸಿದ್ಧತೆ ನಡೆಸಿರುವ ಮಾನವ ತನ್ನ ಸುತ್ತಲಿನ ಸಮಾಜದಲ್ಲೇ ಬಾಳಲಾರದ ಹಂತ ತಲುಪಿರುವುದು ಸಾರ್ವತ್ರಿಕ ಸತ್ಯ ಮತ್ತು ಜಾಗತಿಕ ವಾಸ್ತವ. ಭಾರತದ ಸಂದರ್ಭದಲ್ಲಿ ಹೇಳುವುದಾದರೆ ಇದು ಇನ್ನೂ ಗಂಭೀರವಾದ ವಿಚಾರ. ಧರ್ಮ, ಆಧ್ಯಾತ್ಮ ಮತ್ತು ಭೌದ್ಧಿಕ ಜಗತ್ತಿನ ಒಡಲಾಳದಲ್ಲಿರುವ ಉನ್ನತ ಮಾನವೀಯ ಮೌಲ್ಯಗಳನ್ನು ಜೀವಂತ ಸಮಾಧಿ ಮಾಡಿ ಈ ಸಮಾಧಿಯ ಮೇಲೆಯೇ ದಂತದರಮನೆಗಳನ್ನು ನಿಮರ್ಿಸಿ ಬಾಳಲಿಚ್ಚಿಸುತ್ತಿರುವ ಭಾರತದ ನಾಗರೀಕ ಸಮಾಜ ಯುಗಾದಿಯ ಸಂದೇಶವನ್ನು ಗ್ರಹಿಸಿಯೇ ಇಲ್ಲ ಎಂದು ವಿಷಾದದಿಂದ ಹೇಳಬೇಕಿದೆ.
ಮಾನವ ಸಮಾಜಕ್ಕೆ ಹೊಸ ವರ್ಷ ಎನ್ನುವುದಿಲ್ಲ, ಹೊಸ ಯುಗ ಎನ್ನುವುದೂ ಇಲ್ಲ. ಇಂದಿನ ಘಾತುಕ ಯುಗದಲ್ಲಿ ಪ್ರತಿ ಮುಂಜಾನೆಯೂ ಹೊಸ ಯುಗದಂತೆಯೇ ಕಾಣುತ್ತದೆ. ಭಾರತ ಎಂಬ ಮಾರುಕಟ್ಟೆಯಲ್ಲಿ ಎಲ್ಲವೂ ಬಿಕರಿಗಿವೆ. ಮಾನವೀಯತೆ, ಧರ್ಮ, ಆಧ್ಯಾತ್ಮ, ಪ್ರಜ್ಞೆ, ನಂಬಿಕೆ, ವಿಶ್ವಾಸ, ಪ್ರಾಮಾಣಿಕತೆ ಹೀಗೆ ಜೀವನದ ಎಲ್ಲ ಮೌಲ್ಯಗಳೂ ಇಲ್ಲಿ ಬಿಕರಿಗಿವೆ. ಕೊಳ್ಳುವವರೂ ಇದ್ದಾರೆ, ಮಾರುವವರೂ ಇದ್ದಾರೆ. ಮಾರುವೇಷದ ಘಾತುಕರು ಈ ಮಾರುಕಟ್ಟೆಯನ್ನು ಸೂತ್ರಧಾರರಂತೆ ನಿಯಂತ್ರಿಸುತ್ತಿದ್ದಾರೆ. ಇದಾವುದರ ಪರಿವೆಯೂ ಇಲ್ಲದಂತೆ ಯುಗಾದಿಯ ಸಂದರ್ಭದಲ್ಲಿ ನಿಸರ್ಗ ತನ್ನಷ್ಟಕ್ಕೆ ತಾನು ನವ ಸಂತಸವನ್ನು ವ್ಯಕ್ತಪಡಿಸುತ್ತಾ ಪಲ್ಲವಿಸುತ್ತದೆ. ನಿಸರ್ಗದ ಸವಿಯನ್ನು ನಮ್ಮ ಬಾಳಿನ ಒಂದು ಆಂಶಿಕ ಭಾಗವಾಗಿ ಸವಿಯಲು ಇಚ್ಚಿಸುವ ನಾವು ನಿಸರ್ಗದ ಒಡಲಿಗೇ ಕೈಹಾಕಿ ಧ್ವಂಸ ಮಾಡುತ್ತಿದ್ದೇವೆ. ಆದರೂ ಯಾವುದೇ ಬಿಗುಮಾನವಿಲ್ಲದೆ, ಅಪರಾಧಿ ಪ್ರಜ್ಞೆ ಇಲ್ಲದೆ ನಿಸರ್ಗ ಸೌಂದರ್ಯವನ್ನು ಆರಾಧಿಸುತ್ತಾ ಮುನ್ನಡೆದಿದ್ದೇವೆ. ಹೊಸ ಯುಗವನ್ನು ಸ್ವಾಗತಿಸುವ ಯುಗಾದಿಯ ಸಂದರ್ಭದಲ್ಲಿ ಹೊಸ ಮಾನವೀಯ ಚಿಂತನೆಗಳನ್ನು ಸ್ವಾಗತಿಸೋಣ.






Arthapooornavagide – very nice
ಪ್ರಚಲಿತ ಹೊಸ ಯುಗವನ್ನು ಸ್ವಾಗತಿಸುವ ಯುಗಾದಿಯ ಸಂದರ್ಭದಲ್ಲಿ ಹೊಸ ಮಾನವೀಯ ಚಿಂತನೆಗಳನ್ನು ಸ್ವಾಗತಿಸೋಣ. ಗಮನಿಸುವಾಗ ನಿಜಕ್ಕೂ ಭಯ ಮತ್ತು ಅಭದ್ರತೆ ಕಾಡಲಾರಂಭಿಸುತ್ತದೆ.. ಪ್ರಸ್ತುತಕ್ಕೆ ತಕ್ಕುದಾದ ಬರಹ. ಧನ್ಯವಾದಗಳು ಸರ್..
ಹೌದು, ಹೊಸ ಯುಗವನ್ನು ಸ್ವಾಗತಿಸುವ ಯುಗಾದಿಯ ಸಂದರ್ಭದಲ್ಲಿ ಹೊಸ ಮಾನಯ ಚಿಂತನೆಗಳನ್ನು ಸ್ವಾಗತಿಸೋಣ.
ಪ್ರಚಲಿತ ವಿಧ್ಯಮಾನಗಳನ್ನು ಗಮನಿಸುವಾಗ ನಿಜಕ್ಕೂ ಭಯ ಮತ್ತು ಅಭದ್ರತೆ ಕಾಡಲಾರಂಭಿಸುತ್ತದೆ.. ಪ್ರಸ್ತುತಕ್ಕೆ ತಕ್ಕುದಾದ ಬರಹ. ಧನ್ಯವಾದಗಳು ಸರ್..
ಹೌದು, ಹೊಸ ಯುಗವನ್ನು ಸ್ವಾಗತಿಸುವ ಯುಗಾದಿಯ ಸಂದರ್ಭದಲ್ಲಿ ಹೊಸ ಮಾನಯ ಚಿಂತನೆಗಳನ್ನು ಸ್ವಾಗತಿಸೋಣ.