ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನವಿಲು ಕಲ್ಲು ಸೃಜಿಸುವ ಎಷ್ಟೊಂದು ಪ್ರಶ್ನೆಗಳು

ನೆಂಪೆ ದೇವರಾಜ್

ಕೆಳಗಿದ್ದ ಕಗ್ಗಾಡಿನ ಕಣಿವೆಗಳೊಳಗಿದ್ದ ಭೃಹದಾಕಾರದ ಮರಗಳು ಎತ್ತರೆತ್ತರಕೆ ಹೋಗಲು ಪೈಪೋಟಿಗಿಳಿದಿದ್ದವು. ಅಥವಾ ಸೂರ್ಯನ ಸನಿಹ ಹೋಗುವ ಧಾವಂತದವುಗಳು. ಮಳೆ ಗಾಳಿಯ ಹೊಡೆತಕ್ಕೆ ಲಕ್ಷಾಂತರ ವರುಷಗಳ ಹಿಂದೆ ರೂಪುಗೊಂಡಿದ್ದ ಕಲ್ಲಿನ ಆಕಾರ ಬೇರೆಯದೇ ರೋಚಕ ಕಥೆಗಳನ್ನು ಹೇಳುತ್ತದೆ.

ಹೋದ ಶತಮಾನದ ಆರಂಭದ ಹರೆಯದಲ್ಲಿ ಕುವೆಂಪುರವರು ಪುಷ್ಯ-ಪುನರ್ವಸು ಮಳೆಯಲ್ಲಿ ಇಲ್ಲಿಗೆ ಹೋದಾಗ ದಿನವೊಂದಕ್ಕೆ ಬೀಳುತ್ತಿದ್ದ ಆರೇಳು ಇಂಚಿನ ಕುಂಭದ್ರೋಣ ಮಳೆಯಲ್ಲಿ ಈ ಪ್ರದೇಶ ದಾರ್ಶನಿಕನಿಗೆ ಹೇಗೆ ಪ್ರದರ್ಶಿತವಾಗಿರಬಹುದು. ಬಂಡೆಗಲ್ಲಿನ ಮೇಲೆ ಚಿತ್ತಾರಗಳನ್ನು ಬಿಡಿಸಿಕೊಂಡು ಚಿಕ್ಕ ಪುಟ್ಟ ಓರೆಕೋರೆಯ ಕಾಲುವೆಗಳಲ್ಲಿ ಹರಿಯುತ್ತಿದ್ದ ನೀರು ಕವಿ ಧ್ರಾಷ್ಟಾರನ ತಲೆಯ ಕಲ್ಪನಾ ವಿಹಾರಧಾಮಗಳಲ್ಲಿ ಏನೆಲ್ಲ ಸೃಷ್ಟಿಸಿರಬಹುದು.

ಮೂರ್ನಾಲ್ಕು ಎಕರೆ ಪ್ರದೇಶದಲ್ಲಿ ಕೊಟರು ಕೊಟರಾಗಿ ವಿಸ್ತರಿಸಿರುವ ಬಂಡೆಯ ಕಲ್ಲೂ, ಅದರ ಮೇಲೆ ಬೋಂಜಾಯ್ಗಳಾಗಿ (ಕುಬ್ಜ )ಅದೆಷ್ಟೋ ವರ್ಷಗಳಿಂದ ಕಾಲ ನೂಕುತ್ತಿರುವ ಬುತ್ತಿ, ಕಾರೆ, ಗಂಗ, ಹಂಗುರಕ, ಬಸುರಿಯಂತಹ (ಕಾನನಕ್ಕೆ ಬೆಲೆ ಕಟ್ಟುವವರ ಮುಂದೆ ಅಲಕ್ಷ್ಯಕ್ಕೆ ಒಳಗಾಗುತ್ತಿದ್ದಂತವುಗಳು) ಮರಗಳೂ, ನೀಲಾಕಾಶ ದಿವ್ಯ ಮೌನದ ಗಾಂಭಿರ್ಯಕ್ಕೊಳಗಾಗಿ ಝರಿಗಳ ಜುಳು ಜುಳುವಿನಲ್ಲಿ ಬೆಣಚು ಕಲ್ಲಿನ ಹೊಳಪು ಪ್ರತಿದ್ವನಿಸುವ ನೀರು ಸೆಪ್ಟೆಂಬರ್ ಕೊನೆಯಲ್ಲಿ ಕವಿಯನ್ನು ಅದಾವ ಲೋಕಕ್ಕೆ ಈ ನವಿಲು ಕಲ್ಲು ಕೊಂಡೊಯ್ದಿರಬಹುದು?

ವಿರಳ ಎಲೆಗಳೂ, ಕುಬ್ಜಗೊಂಡ ದೇಹವೂ, ರಸ ತುಂಬಿಕೊಂಡಿಲ್ಲದ ಕಾಂಡ ಮತ್ತು ಎಲೆಗಳ ನಡುವೆ ನಿನ್ನೆಯ ಅರೆಗತ್ತಲಿನ ಬೆಳಗಿನ ಜಾವ ಪ್ರಜ್ವಲಿಸಿದ ಬೆಳಕಿನಂತಹ ಬೆಳಕನ್ನು ಸೃಷ್ಟಿಸಿದಂತೆ ಕಗ್ಗಲ್ಲ ಮೇಲೆ ಪೂರ್ಣ ಚಂದ್ರನಂತೆ ಹೊಳೆದ ಬುತ್ತಿ ಗಿಡದ ಹೂವಿನ ಮೋಹಕ ಸೆಳೆತದಿಂದ ತಪ್ಪಿಸಿ ಕೊಳ್ಳಲು ಸಾಧ್ಯವೆ? ಕರಿಕಲ್ಲ ಒಳಗೆ ಊರಿದ ತನ್ನ ಬೇರುಗಳಿಗೆ ಸಿಕ್ಕ ಅಷ್ಟೋ ಇಷ್ಟೋ ಪಸೆಯಲ್ಲೇ ಹೊತ್ತಾರೆಯ ಇಬ್ಬನಿಯಲ್ಲಿ ತಾನು ಸೃಜಿಸಿದ ತನ್ನೆರಡು ಹೂಗಳ ಮೂಲಕ ನಮ್ಮನ್ನೆಲ್ಲ ಸೆಳೆದ ಈ ಬುತ್ತಿ ಮರ ಮೇಲೇರಲು ಇನ್ನೆಷ್ಟು ವರ್ಷ ಬೇಕು.

ಒಡಲ ಕಣಕಣದಲ್ಲು ಹಾಲು ತುಂಬಿಕೊಂಡು ಪೂರಾ ಎಲೆಗಳನ್ನುದುರಿಸಿಕೊಂಡ ಗಂಗ ಹಂಗುರಕಗಳು ಸಾವೇ ಇಲ್ಲದ ಬಂಡೆಗಳಂತೆ ಕೆಳಗಿನ ಕಗ್ಗಸುರಿನ ಸಿರಿಯನ್ನು ಮನದುಂಬಿಸಿಸಿಕೊಳ್ಳುವ ಹಾಗೂ ಕಾಜಾಣ, ಕಾಮಳ್ಳಿಗಳ ಇಂಚರವನ್ನಾಲಿಸುವ ರಸಿಕ ಮನೋಭಿಲಾಶಿಗಳಾಗಿ ತುದಿಯಲ್ಲಿ ನಿಂತಂತೆ ಬಾಸವಾಗುತ್ತವೆ. ಹಾಗೆಯೇ ಮರ- ಮೊಟ್ಟು ಜಲನೆಲಗಳ ಮೇಲೆ ಮನುಜಕುಲದ ನಿರ್ದಯತೆಯ ಸವಾರಿಯನ್ನು ಅದೆಷ್ಟೋ ವರುಷಗಳಿಂದ ನೋಡುತ್ತಾ ಬರುತ್ತಿರುವ ಮೂಕ ಸಾಕ್ಷೀದಾರನಂತೆ ಕಾಣಿಸತೊಡಗುತ್ತವೆ.

‍ಲೇಖಕರು Avadhi

29 March, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading