ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಲ್ಮೆಯಿಂದ ನಟರಾಜು : ಸೊಪ್ಪಮ್ಮಾ, ಸೊಪ್ಪು!!

ಸೊಪ್ಪು ತರಕಾರಿ ಗೆಂಡೆಗಳು..

ಆಯುಧ ಪೂಜೆ ಬಂತು ಅಂದ್ರೆ …. ಹಾರೆ, ಗುದ್ದಲಿ, ಸನಿಕೆ, ಪಿಕಾಸಿ, ಕಳೆ ಕುಯ್ಯೋ ಕುಡ್ಲು, ಬೆಟ್ ಕುಡ್ಲು, ಚೂರಿ, ಸುತ್ತಿಗೆ, ಗೂಡಾ, ಉಳಿ, ಗರಗಸ, ಕೊಡ್ಲಿ, ಹೀಗೆ ತರಾವರಿ ಐಟಮ್ ಗಳ ಜೊತೆ ತನ್ನ ಸೈಕಲನ್ನು ತೊಳೆದು ನಮ್ಮಪ್ಪ ರೆಡಿ ಮಾಡಿದರೆ ನಮ್ಮವ್ವ ಅರಿಸಿನ, ಕುಂಕುಮ, ವಿಭೂತಿಯನ್ನು ಆ ವಸ್ತುಗಳಿಗೆಲ್ಲಾ ಬಳಿಯುತ್ತಿತ್ತು. ಈ ಎಲ್ಲಾ ಆಯುಧಗಳ ಜೊತೆಗೆ ನನ್ನ ಮತ್ತು ನನ್ನ ತಂಗಿಯ ಪುಸ್ತಕಗಳು, ನೋಟ್ ಬುಕ್ ಗಳು ಸಹ ಜಾಗ ಪಡೆಯುತ್ತಿದ್ದವು. ನಮ್ ಭಾಷೇಲಿ ಬುಕ್ಸ್ ಗಳು ಪುಸ್ತ್ ಕ. ನೋಟ್ ಬುಕ್ ಗಳು ಎಂದರೆ ಎಕ್ಷಸೈಜು. ನಮ್ಮ ಪಾಲಿನ ಮತ್ತೊಂದು ಮಹಾ ಆಯುಧಗಳ ಪೆಟ್ಟಿಗೆ ಎಂದರೆ ಜ್ಯಾಮಿಟ್ರಿ ಬಾಕ್ಸ್.. ಕ್ಯಾಮೆಲ್ ಕಂಪನಿ ಅನ್ನೋ ಮತ್ತೊಂದು ಜ್ಯಾಮಿಟ್ರಿ ಬಾಕ್ಸ್ ಮಾರುಕಟ್ಟೆಗೆ ಬರೋವರೆಗೂ ಪೆನ್ನು, ಪೆನ್ಸಿಲ್, ರಬ್ಬರ್, ಕೈವಾರ, ಸ್ಕೇಲು, ಕೋನಮಾಪಕ, ಪೆನ್ಸಿಲ್ ಒರೆಯೋ ಮೆಂಡರ್, ಡಿವೈಡರ್, ಮತ್ತೆ ಇನ್ನೊಂದು ತರಹದ ಕೋನಮಾಪಕ ಇವಿಷ್ಟೂ ಇರುವ ಒಂದು ಜ್ಯಾಮಿಟ್ರಿ ಬಾಕ್ಸ್ ಮಾರುಕಟ್ಟೆಯಲ್ಲಿ ಸಿಗುತ್ತಿತ್ತು. ಇಪ್ಪತ್ತು ವರ್ಷದ ಹಿಂದೆ ಬಹುಶಃ ಬೆಲೆ ಆ ಜ್ಯಾಮಿಟ್ರಿ ಬಾಕ್ಸಿನ ಬೆಲೆ 15 ರೂಪಾಯಿ.. ಅಂದ ಹಾಗೆ ಆ ಜ್ಯಾಮಿಟ್ರಿ ಬಾಕ್ಸ್ ನ ಹೆಸರು ಹೇಳುವ ಅಗತ್ಯವಿಲ್ಲ ಅಂದುಕೊಳ್ಳುತ್ತೇನೆ. ಆದರೂ ಹೇಳಿಬಿಡುವೆ. ಅದರ ಹೆಸರು ನಟರಾಜ ಜ್ಯಾಮಿಟ್ರಿ ಬಾಕ್ಸ್.. ಆ ಜ್ಯಾಮಿಟ್ರಿಯನ್ನೂ ಎಂದಿಗೂ ಮರೆಯದವರಂತೆ ನನ್ನ ಹೆಸರು ಕೇಳಿದ ತಕ್ಷಣ “ನಟರಾಜ ಪೆನ್ಸಿಲ್, ನಟರಾಜ ಜ್ಯಾಮಿಟ್ರಿ” ಅಂತ ಗೆಳೆಯರು ರೇಗಿಸಿದ ಉದಾಹರಣೆಗಳು ಸಿಕ್ಕಾಪಟ್ಟೆ ಇವೆ..

ಇವತ್ತು ಬೈಕ್ ಗಳು ಎಂತಹ ಹಳ್ಳಿಯಲ್ಲೂ ಸಹ ಇವೆ. ಆ ಕಾಲಕ್ಕೆ ನಮ್ಮ ಪಾಲಿಗೆ ಸೈಕಲ್ಲೇ ಬೈಕು ಏರೋಪ್ಲೇನ್ ಎಲ್ಲಾ. ಇವತ್ತಿನ ಸೈಕಲ್ ಗಳಲ್ಲಿ ಬಹುಶಃ ಕಾಣ ಸಿಗದ ವಸ್ತು ಎಂದರೆ ಹಿಂದಿನ ಚಕ್ರದಲ್ಲಿ ಹಾಕಿರುತ್ತಿದ್ದ ಡೈನಮೋ.. ಆ ಡೈನಮೋದಿಂದ ವೈರ್ ಒಂದು ಸೀಟಿನ ಬಳಿ ಇರುವ ಸೈಕಲ್ಲಿನ ಬಾರ್ ಮೂಲಕ ಹಾದು ಹ್ಯಾಂಡಲ್ ಬಳಿ ಇರುವ ಲೈಟಿಗೆ ಕನೆಕ್ಟ್ ಆಗಿರುತ್ತಿತ್ತು. ಒಮ್ಮೊಮ್ಮೆ ರಾತ್ರಿಯಲ್ಲಿ, ನಿಂತ ಸೈಕಲ್ಲಿನ ಚಕ್ರಕ್ಕೆ ಡೈನಮೋದ ಚಕ್ರ ಟಚ್ ಆಗುವಂತೆ ಮಾಡಿ ಜೋರಾಗಿ ಪೆಡಲ್ ತಿರುಗಿಸಿದರೆ ಚಕ್ರ ತಿರುಗುತ್ತಿದ್ದಂತೆ ಲೈಟ್ ಸಹ ಹತ್ತಿಕೊಳ್ಳುತ್ತಿತ್ತು. ಆಕಸ್ಮಾತ್ ಲೈಟ್ ಸರಿಯಾಗಿ ಹತ್ತುತ್ತಿಲ್ಲ ಎಂದರೆ ಲೈಟ್ ಬಿಚ್ಚಿ ನುರಿತ ಮೆಕ್ಯಾನಿಕ್ ಗಳಂತೆ ರಿಪೇರಿ ಮಾಡಿಬಿಡುತ್ತಿದ್ದ ದಿನಗಳು ಚಂದವಿದ್ದವು. ಅಂತಹ ಚಂದದ ಸೈಕಲ್ ನ ಹ್ಯಾಂಡಲ್ ಗೆ ಚಿಕ್ಕ ಬಾಳೆ ಗೊಳೆ ಕಟ್ಟಿ, ಹೂ ಮುಡಿಸಿ ಪೇಟೆಯಲ್ಲಿ ಸಿಗುತ್ತಿದ್ದ ಬಣ್ಣದ ಪೇಪರ್ ಗಳನ್ನು ತಂದು ಅಂಟಿಸಿದ ಆಯುಧ ಪೂಜೆಯ ದಿನಗಳೂ ಇವೆ. ಎರಡು ಕಡ್ಡಿಗಳ ಮಧ್ಯೆ ಮಡಿಚಿಟ್ಟಂತೆ ಇರುವ ಪೇಪರಿನ ಹೂವು ಸಹ ಸೈಕಲ್ ನ ಶೃಂಗಾರಕ್ಕೆ ಮೆರುಗು ತರುತ್ತಿತ್ತು. ಖುಷನ್ ಇರುವ ಸೀಟು, ತುಂಬಾ ಸಲೀಸಾಗಿ ಹೊಡೆಯಬಹುದಾದ ಬೆಲ್ಲು ಏನೆಲ್ಲಾ ಇಂದಿನ ದಿನಗಳಲ್ಲಿ ಇದ್ದರೂ ಹಳೆಯ ಕಾಲದ ಒರಟು ಒರಟಾಗಿದ್ದ ಹೀರೋ ಸೈಕಲ್ ಗಳಿಗೆ ಒಂತರಾ ಶಕ್ತಿ ಇರುತ್ತಿತ್ತು ಅನ್ನಬಹುದು. ಅದರ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಲೆಂದೇ ಪೂಜೆ ಮಾಡಿ ಎರಡೂ ಚಕ್ರಗಳ ಕೆಳಗೂ ನಿಂಬೆ ಹಣ್ಣು ಇಟ್ಟು ನಿಂಬೆ ಹಣ್ಣುಗಳ ಮೇಲೆ ಸೈಕಲ್ ಹತ್ತಿಸಿಯಾದ ಮೇಲೆ ಅಲ್ಲಿ ಬಂದಿರುವ ಚಿಕ್ಕ ಹುಡುಗರಿಗೆ ಕಡ್ಲೆ ಪುರಿ ಹಂಚಿದರೆ ಆಯುಧ ಪೂಜೆ ಮುಗಿಯಿತ್ತಿತ್ತು. ಕೆಲವು ಸಲ ಬಲಿಗೆಂದು ಫಾರಂ ಕೋಳಿ ಕುಯ್ಯುತ್ತಿದ್ದ ನೆನಪು.. 🙂

ನಮ್ಮಪ್ಪ ದೊಡ್ಡ ರೈತರೇನಲ್ಲ. ತುಂಡು ಭೂಮಿ ಎಲ್ಲೋ ಊರಿನಿಂದ ದೂರದಲ್ಲಿ ಇದ್ದರೂ ವ್ಯವಸಾಯ ಮಾಡಿದ್ದು ಕಮ್ಮೀನೆ. ಆದರೆ ಆಯುಧ ಪೂಜೆಯಲ್ಲಿ ಪೂಜೆಗಿಡುತ್ತಿದ್ದ ಗುದ್ದಲಿ, ಸನಿಕೆಗಳಿಗೆಲ್ಲಾ ಕೆಲಸ ಆಗಾಗ ಇರುತ್ತಲೇ ಇತ್ತು. ಬಹುಶಃ ನಮ್ಮ ಕೇರಿಯಲ್ಲಿ ಯಾರಿಗೂ ಇಲ್ಲದಷ್ಟು ದೊಡ್ಡ ಹಿತ್ತಲು ನಮಗಿದೆ. ಆ ಹಿತ್ತಲು ನಮ್ಮಪ್ಪನ ಕೈದೋಟ. ತಾನು ಯುವಕನಿದ್ದಾಗ ನಮ್ಮಪ್ಪ ನಾಲ್ಕು ತೆಂಗಿನ ಮರಗಳ ತಂದು ನಮ್ಮ ಹಿತ್ತಲಲ್ಲಿ ನೆಟ್ಟಿತ್ತು. ಅವು ನಾವು ಬೆಳೆಯುತ್ತಿದ್ದಂತೆ ಹೊಂಬಾಳೆ ಬಿಟ್ಟು ಕಾಯಿ ಬಿಡಲು ಶುರು ಮಾಡಿದ್ದವು. ತೆಂಗಿನ ಮರಗಳ ಬಿಟ್ಟರೆ ನಮ್ಮ ಮನೆಯ ಹಿಂದಿನ ಒಂದು ಮೂಲೆಗೆ ಚೀಪೆ ಮರ ಇತ್ತು. ಹಿತ್ತಲಿನಲ್ಲಿ ಉಳಿದ ಗಿಡಗಳೆಲ್ಲಾ ಸೊಪ್ಪು, ತರಕಾರಿ, ಹೂವಿನ ಗಿಡಗಳೇ.. ಹಳ್ಳಿಯ ಹಿತ್ತಲುಗಳಲ್ಲಿ ಹೆಚ್ಚು ಕಾಣುತ್ತಿದ್ದ ಮಡಿಗಳೆಂದರೆ ಕೀರೇ ಮಡಿ, ಮಡಿ ಅಂದರೆ ಕೀರೆ ಸೊಪ್ಪಿನ ಸಣ್ಣ ಸಣ್ಣ ಪಾತಿಗಳು, ಕೀರೆ ಬೀಜಗಳಲ್ಲಿ ದಂಟಿನ ಬೀಜಗಳು ಮಿಶ್ರಣವಾಗಿದ್ದರೆ ಕೀರೆ ಮಡಿಗಳ ಮಧ್ಯೆ ಒಂದೊಂದು ದಂಟಿನ ಗಿಡಗಳು ದೊಡ್ಡದಾಗಿ ಬೆಳೆದಿರುತ್ತಿದ್ದವು. ಆ ದಂಟಿನ ಗಿಡಗಳ ಬೀಜಗಳೇ ಮುಂದೊಂದು ದಿನ ದಂಟಿನ ಸೊಪ್ಪಿನ ಮಡಿಗಳಾಗುತ್ತಿದ್ದವು. ಕೀರೆ ಮಡಿಗಳ ದಾಟಿದರೆ ಬೀನ್ಸ್, ಬದನೆ ಗಿಡಗಳು ನಮ್ಮ ಇತ್ತಲಿನಲ್ಲಿ ಜಾಗ ಪಡೆದಿದ್ದವು. ಬದನೆ ಕಾಯಿಗಳಲ್ಲಿ ಎಷ್ಟೊಂದು ವಿಧಗಳಿದ್ದರೂ ನಮಗೆ ಫನ್ನಿ ತರಹ ಕೇಳಿಸುತ್ತಿದ್ದ ಹೆಸರೆಂದರೆ ರೌಂಡ್ ಆಗಿ ದೊಡ್ಡದಾಗಿರುತ್ತಿದ್ದ ಮುಳ್ಳು ಬದನೆಕಾಯಿ ಅಥವಾ ಕೊತ್ತಿ ಬದನೆಕಾಯಿ. ಹಿತ್ತಲ ಕೊನೆಗೆ ಕನಕಾಂಬರ, ಕಾಕಡ ಹೂವುಗಳ ಗಿಡಗಳು ಇದ್ದವು.

ಇತ್ತಲಿನ ಇನ್ನೊಂದು ಭಾಗದಲ್ಲಿ ಬೆಂಡೆಕಾಯಿಗಿಡ, ಸಪ್ ಸೀಗೆ ಸೊಪ್ಪಿನ ಮಡಿಗಳು ಇದ್ದವು. ಆ ಕಾಲದಲ್ಲಿ ಸಪ್ ಸೀಗೆ ಸೊಪ್ಪು ಊರಿನಲ್ಲಿ ಸಿಗುತ್ತಿದ್ದುದು ಅಪರೂಪ. ಸಪ್ ಸೀಗೆ ಮಡಿಗಳ ಪಕ್ಕದಲ್ಲೇ ಕೊತ್ತಂಬರಿ ಗಿಡ, ಪುದಿನ ಗಿಡಗಳೂ ಇದ್ದವು. ಈ ಮೂರೂ ಗಿಡಗಳ ವಿಶೇಷ ಎಂದರೆ ಅವುಗಳ ವಾಸನೆ. ಅವುಗಳದೇ ಆದ ವಿಶೇಷ ವಾಸನೆ ಇರುವುದು ಈ ಗಿಡಗಳ ವಿಶೇಷ. ಕೈತೋಟದಲ್ಲಿ ಮೆಣಸಿನಕಾಯಿ, ಮೂಲಂಗಿ, ಟೊಮ್ಯಾಟೋ ಗಿಡಗಳು ಸಹ ಇದ್ದವು. ಮೆಣಸಿನ ಸಸಿಗಳು ಸೊರಗುವ ಲಕ್ಷಣ ಕಂಡರೆ ನಮ್ಮಪ್ಪ ಆ ಗಿಡಗಳ ಬೇರಿನ ಬಳಿ ಕಡ್ಡಿಯಿಂದ ಕೆದಕಿ ಒಂದು ಹುಳವನ್ನು ಹೊರ ತೆಗೆಯುತ್ತಿತ್ತು. ಅದರ ಹೆಸರು ಗೊಣ್ಣೆ ಹುಳ ಎಂದು ಕೇಳಿದ ನೆನಪು. ಈ ಹುಳ ಗಿಡವನ್ನು ಹಾಳು ಮಾಡುತ್ತೆ ಅಂತ ನಮ್ಮಪ್ಪ ಹೇಳುತ್ತಿತ್ತು. ಹಳ್ಳೀಲಿ ಇದೆನ್ನೆಲ್ಲಾ ಬೆಳೆಯೋಕೆ ನೀರು ಎಲ್ಲಿಂದ ಬರುತ್ತೆ ಅಂದ್ ಕೊಂಡ್ರಿ.. ನಮ್ಮೂರಿನ ಕೆರೆಯಿಂದ ಅಡ್ಡೆ ಉಪಯೋಗಿಸಿ ನೀರು ಹೊತ್ತು ತಂದು ನಮ್ಮಪ್ಪ ತನ್ನ ಕೈದೋಟವನ್ನು ಚೆನ್ನಾಗಿ ನೋಡಿಕೊಳ್ಳುತ್ತಿತ್ತು. ಹಿತ್ತಲಿನಲ್ಲಿ ಬಹುಶಃ ತರಕಾರಿ ಬೆಳೆಯುವುದರಲ್ಲಿ ನಮ್ಮೂರಿನಲ್ಲಿ ಯಾರಿಗೂ ಇಲ್ಲದ ಆಸಕ್ತಿ ನಮ್ಮಪ್ಪನಲ್ಲಿತ್ತು. ನೀರಿನ ಅಡ್ಡೆಗಳು ಎಂದರೆ ಬಿದುರಿನ ಚಬ್ಬೆಗಳ ಎರಡೂ ತುದಿಗೂ ಹಗ್ಗಗಳಿಂದ ತೊಟ್ಟಿಲು ತರಹದ ಜಾಗ ಮಾಡಿ ಅಲ್ಲಿ ಬಿಂದಿಗೆಗಳನ್ನಿಟ್ಟು ಬಿದುರಿನ ಚಬ್ಬೆಗಳನ್ನು ಹೆಗಲ ಮೇಲೆ ಹೊತ್ತು ನೀರು ತರುವುದು. ಆ ತರಹ ಅಡ್ಡೆ ಹೊರಲು ಹೋಗಿ ನನ್ನ ಎತ್ತರ ಚಿಕ್ಕದಾಗಿದ್ದ ಕಾರಣ ಪ್ಲಾಸ್ಟಿಕ್ ಬಿಂದಿಗೆ ನೆಲಕ್ಕೋ ಕಲ್ಲಿಗೋ ತಾಕಿ ತೂತಾಗಿ ಒಡೆದು ಹೋಗಿ ನೀರು ಚೆಲ್ಲಿ ಹೋದ ದಿನಗಳೂ ಇವೆ.

ಹೀಗೆ ನಮ್ಮ ಹಿತ್ತಲಿನ ತರಕಾರಿಗಳು ನಮ್ಮ ಮನೆಗೆ ಉಪಯೋಗಕ್ಕೆ ಬರುತ್ತಿದ್ದವು. ಜೊತೆಗೆ ಬೇಕು ಎಂದವರಿಗೆ ಒಂದು ರೂಪಾಯಿಗೆ ಎರಡು ರೂಪಾಯಿಗೆ ತರಕಾರಿಗಳನ್ನು ಸೊಪ್ಪನ್ನು ನಾವು ಮಾರಿದ ದಿನಗಳೂ ಇವೆ. ಹಳ್ಳಿಗಳಲ್ಲಿ ತರಕಾರಿ ಸಿಗುವುದು ಕಷ್ಟ. ಆದರೆ ಆಗಾಗ ನಮ್ಮೂರಿಗೆ ಸೊಪ್ಪು ಮಾರಲು ನಮ್ಮೂರಿನಿಂದ ಮೂರ್ನಾಲ್ಕು ಕಿಲೋ ಮೀಟರ್ ದೂರದ ಹೊರಳಗಲ್ಲಿನಿಂದ ಹೆಂಗಸೊಬ್ಬಳು ಬರುತ್ತಿದ್ದಳು. ಆಗಿನ ಕಾಲದಲ್ಲಿ ಕಾಸಿನ ಬದಲು ರಾಗಿ ನೀಡಿ ಸೊಪ್ಪು ಕೊಳ್ಳುತ್ತಿದ್ದ ಜನರೇ ಹೆಚ್ಚು. ಅವಳು ಮಾರುತ್ತಿದ್ದುದು ಕೀರೆ ಸೊಪ್ಪು ಮತ್ತು ದಂಟಿನ ಸೊಪ್ಪು. ಸೊಪ್ಪು ಮಾರುವ ಈ ಹೆಂಗಸು ಆಗಾಗ ನಮ್ಮೂರಿಗೆ ಬರುತ್ತಿದ್ದಳಾದರೂ ಹಬ್ಬಗಳಾದ ಮಾರನೆಯ ದಿನ ತಪ್ಪದೇ ಬರುತ್ತಿದ್ದಳು. ಸೊಪ್ಪಿನ ಜೊತೆ ಹುರುಳಿ ಕಾಳು, ಅವರೆ ಕಾಳು, ತರಗುಣಿ ಕಾಳು (ಅಲಸಂದೆ), ಬೇಳೆ ಕಾಳು, ಹಾಕಿ ಉಪ್ಪು ಸಾರು ಮಾಡಿದರೆ ಅದರ ರುಚಿಯೇ ಬೇರೆ. ಚಿಕ್ಕ ಹುಡುಗರಾಗಿದ್ದಾಗ ಬಾಯಿಗೆ ರುಚಿಯಾದ ಅಡುಗೆ ಬೇಕು ಎಂದು ಆಸೆ ಪಡುತ್ತಿದ್ದ ನಾವು ಹುರುಳಿ ಕಾಳು ಉಪ್ ಸಾರು ಎಂದರೆ ಉಪ್ ಸಾರ್ ಬೇಡ ನಂಗೆ ಸಾಂಬಾರ್ ಬೇಕು ಎಂದು ಹಠ ಮಾಡಿದ ದಿನಗಳೂ ಇವೆ.

ಕೀರೆಸೊಪ್ಪು, ದಂಟಿನ ಸೊಪ್ಪು ಹಳ್ಳಿಯಲ್ಲಿ ಸಿಗುತ್ತಿದ್ದ ಸೊಪ್ಪುಗಳೇ ಆದರೂ ಅವುಗಳಿಗಿಂತ ಹೆಚ್ಚು ರುಚಿ ಇರುವ ಸೊಪ್ಪುಗಳೆಂದರೆ ಹೊಲದಲ್ಲಿ, ಬೇಲಿಯಲ್ಲಿ, ಕಾಡಿನಲ್ಲಿ, ಕೆರೆಯ ಬಯಲಿನಲ್ಲಿ ಸಿಗುವ ಸೊಪ್ಪುಗಳು. ನಮ್ಮ ಹಳ್ಳಿಗಳಲ್ಲಿ ಆಯುಧ ಪೂಜೆಗಿಟ್ಟಿರುತ್ತಿದ್ದ ಅದೇ ಕಳೇ ಕುಯ್ಯುವ ಕುಡ್ಲುಗಳನ್ನು ಎತ್ತಿಕೊಂಡು ಮೂರ್ನಾಲ್ಕು ಜನ ಹೆಂಗಸರು “ಅಕ್ಕೋ ಬಾರಕ್ಕ ಒಂಚೂರು ಸೊಪ್ಪು ಕುಯ್ ಕೊಂಡು ಹಂಗೆ ಸೌದೆ ಗೀದೆ ಸಿಕ್ಕುದ್ರೆ ತಕೊಂಡ್ ಬರುವಾ” ಅಂತ ಹೊರಟುತ್ತಿದ್ದುದು ಸಾಮಾನ್ಯ. ಹೊಲಗಳಲ್ಲಿ ಸಾಮಾನ್ಯವಾಗಿ ಸಿಗುವ ಅಣ್ಣೇ ಸೊಪ್ಪು ನನ್ನ ಪ್ರಕಾರ ಉಪ್ ಸಾರಿಗೆ ಅಷ್ಟು ರುಚಿಯಾದ ಸೊಪ್ಪಲ್ಲದಿದ್ದರೂ ಮೊಸೊಪ್ಪಿಗೆ ಓಕೆ. ಉಪ್ ಸಾರು ಮತ್ತು ಮೊಸೊಪ್ಪಿನ ನಡುವಿನ ವ್ಯತ್ಯಾಸ ನಿಮಗೆ ಗೊತ್ತು ಎಂದುಕೊಳ್ಳುವೆ. ಆದರೂ ವ್ಯತ್ಯಾಸ ಹೇಳಿ ಬಿಡುವೆ ಕೇಳಿ. ಉಪ್ಪು ಹಾಕಿ ಸೊಪ್ಪು ಬೇಯಿಸಿದ ನೀರನ್ನು ಸೊಪ್ಪಿನಿಂದ ಬೇರ್ಪಡಿಸಿದರೆ ಅದು ಉಪ್ ಸಾರು. ಬೇಯಿಸಿದ ಸೊಪ್ಪನ್ನು ನೀರಿನಿಂದ ಬೇರ್ಪಡಿಸಿ ಒರಳುಕಲ್ಲಿನಲ್ಲಿ ಹಾಕಿ ರುಬ್ಬಿ ನುಣ್ಣಗೆ ಮಾಡಿ ಮೊದಲು ಬೇರ್ಪಡಿಸಿದ್ದ ನೀರನ್ನು ಮತ್ತೆ ರುಬ್ಬಿದ ಸೊಪ್ಪಿಗೆ ಮಿಶ್ರಣ ಮಾಡಿ ಮತ್ತೆ ಬೇಯಿಸಿ ವಗ್ಗರಣೆ ಹಾಕಿದರೆ ಅದು ಮೊಸೊಪ್ಪು. 🙂 ಬಸ್ಸಾರು ಅನ್ನೋ ಇನ್ನೂ ಒಂದು ವೆರೈಟಿ ಇದೆ. ಕೋಲಾರ ಕಡೆಯಲ್ಲಿ ಬಸ್ಸಾರು ಎಂದರೆ ನಮ್ಮ ಕನಕಪುರ ಕಡೆಯ ಉಪ್ ಸಾರಿನ ತರಹದ ಒಂದು ಸಾರು. ಆದರೆ ಅವರು ಸೊಪ್ಪಿನಿಂದ ಬೇರ್ಪಡಿಸಿದ ನೀರಿಗೆ ಮೆಣಸಿನ ಕಾಯಿ ಖಾರ ಮಿಶ್ರಣ ಮಾಡಿ ಒಗ್ಗರಣೆ ನೀಡಿರುತ್ತಾರೆ. ನಮ್ಮೂರುಗಳಲ್ಲಿ ಬಸ್ಸಾರು ಎಂದರೆ ಬೇಯಿಸಿದ ಸೊಪ್ಪನ್ನು ನೀರಿನಿಂದ ಬೇರ್ಪಡಿಸಿ ನೀರಿಗೆ ಖಾರದ ಪುಡಿ ಮಿಶ್ರಣ ಮಾಡಿ ಅದನ್ನು ಕುದಿಯುವಂತೆ ಮಾಡಿ ಆಮೇಲೆ ಒಗ್ಗರಣೆ ನೀಡುತ್ತಾರೆ. ನುಗ್ಗೇ ಸೊಪ್ಪಿನಲ್ಲಿ ಮೊಸೊಪ್ಪು ಸಾಧ್ಯವಿಲ್ಲ ಉಪ್ ಸಾರು, ಬಸ್ಸಾರು ಸಾಧ್ಯ.

ಉಪ್ ಸಾರು ಕುರಿತು ಮಾತನಾಡಲು ತೊಡಗಿದರೆ ಒಂದು ದೊಡ್ಡ ಲೇಖನವನ್ನೇ ಬರೆಯಬಹುದು. ಸದ್ಯಕ್ಕೆ ಸೊಪ್ಪುಗಳ ಪುರಾಣವನ್ನು ತಿಳಿಸಿಬಿಡುವೆ. “ಬಾರಕ್ಕ ಸೊಪ್ಪು ಕುಯ್ಯಕೊಂಡ ಬರೋಣ” ಅಂತ ಹೋದ ಹೆಂಗಸರು ಕಡಿಮೆ ಅಂದ್ರೂ ಇಪ್ಪತ್ತು ತರಹದ ಸೊಪ್ಪುಗಳನ್ನು ತರಬಲ್ಲರು ಎಂದರೆ ಅಚ್ಚರಿಪಡಬೇಡಿ. ನುಗ್ಗಲು ಸೊಪ್ಪು, ಕಾರೇ ಸೊಪ್ಪು. ಕೋಳೀ ಕಾಲಿನ ಸೊಪ್ಪು, ಬೇಳೇ ಕಾಳಿನ ಸೊಪ್ಪು, ಅಕ್ಕೊರಗಿ ಸೊಪ್ಪು, ಗಣಿಕೆ ಸೊಪ್ಪು, ತೊಂಡೆ ಸೊಪ್ಪು, ಕುಂಬಳ ಸೊಪ್ಪು, ಕೊಂಬ್ರಿ ಸೊಪ್ಪು, ಹೊನಗೊನೆ ಸೊಪ್ಪು, ಇವು ಕೆಲವು ಉದಾಹರಣೆಗಳಷ್ಟೇ. ನುಗ್ಗಲು, ಕಾರೇ ಇವೆಲ್ಲಾ ಮುಳ್ಳುಗಿಡಗಳು. ಆದರೆ ಅವು ಚಿಗುರುವಾಗ ಚಿಗುರಿದ ಎಲೆಗಳನ್ನು ಸೊಪ್ಪಾಗಿ ಉಪಯೋಗಿಸಬಹುದು. ಗಣಿಕೆ ಸೊಪ್ಪು ಅಲ್ಸರ್ ನ ವಾಸಿ ಮಾಡುತ್ತೆ ಅಂತ ಎಲ್ಲೋ ಕೇಳಿದ್ದ ನೆನಪು. ಹೊನಗೊನೆ ಸೊಪ್ಪು ಕೆರೆಯ ಬಯಲುಗಳಲ್ಲಿ ಸಿಗುತ್ತದೆ. ಬಹುಶಃ ನುಗ್ಗೇ ಸೊಪ್ಪಿನಲ್ಲಿರುವಂತೆ ಕಬ್ಬಿಣದ ಅಂಶ ಸಿಕ್ಕಾಪಟ್ಟೆ ಇರುತ್ತದೆ ಅನಿಸುತ್ತೆ. ಕೊಂಬ್ರಿ ಸೊಪ್ಪು ಅನ್ನೋ ಒಂದು ಸೊಪ್ಪಿನ ಮೊಸೊಪ್ಪು ನನ್ನ ಲೈಫ್ ನಲ್ಲಿ ತಿಂದಿರೋ ಅತಿ ರುಚಿಯಾದ ಮೊಸೊಪ್ಪು ಅನ್ನಬಹುದು. ಸೀಗೆ ಸೊಪ್ಪು ಅಂತ ಮತ್ತೊಂದು ವಿಶೇಷವಾದ ಸೊಪ್ಪು ಕಾಡುಗಳಲ್ಲಿ ಸಿಗುತ್ತದೆ. ತಿನ್ನೋಕೆ ತುಂಬಾ ಚೆನ್ನಾಗಿರುತ್ತದೆ. ಜಾಸ್ತಿ ತಿಂದರೆ ಹಿಂಗಾಳಿ ಸ್ಮೆಲ್ ಡಿಫರೆಂಟ್ ಆಗಿರುತ್ತೆ. 🙂

ಹಸಿರು ಕಾಲದಲ್ಲಿ ಅಂದರೆ ಸೆಪ್ಟೆಂಬರ್ ಅಕ್ಟೋಬರ್ ನಲ್ಲಿ ಹೀಗೆ ನಾನಾ ವಿವಿಧ ಸೊಪ್ಪುಗಳು ಹಳ್ಳಿಗಳಲ್ಲಿ ದೊರೆತರೆ ದೀಪಾವಳಿ ಸೀಜನ್ ನಲ್ಲಿ ನಮ್ಮೂರಿನ ಬಳಿ ಇದ್ದ ಗೌಡ್ನೋರ ಕೆರೆ ಅನ್ನೋ ಕೆರೆಯ ಬಳಿ ವಿಶೇಷವಾದ ಗೆಂಡೆಗಳು ಸಿಗ್ತಾ ಇದ್ದವು. ಹೆಬ್ಬೆರಳು ಗಾತ್ರದ ಒಂದಿಂಚಿನ ಗೆಂಡೆಗಳು ಭೂಮಿಯ ಒಳಗೆ ಇರುತ್ತಿದ್ದವು. ಅವುಗಳು ಬಿಡುತ್ತಿದ್ದ ಕಾಂಡದ ತುದಿಗೆ ಬಿಳಿ ಬಿಳಿಯಾದ ಸಣ್ಣ ಸಣ್ಣ ಹೂವುಗಳಿರುತ್ತಿದ್ದವು. ನೀರಿನ ತಡಿಯಲ್ಲಿ ಆ ಗಿಡಗಳ ಬೇರಿಗೆ ಬೆರಳು ಹಾಕಿ ಊಟಿದರೆ ಗೆಂಡೆಗಳು ಸಿಗುತ್ತಿದ್ದವು. ಹಾಗೆ ಗೆಂಡೆ ಕೀಳುವಾಗಲೇ ಕೆರೆಯ ನೀರಿನಲ್ಲಿ ಗೆಂಡೆಗಳು ಶುದ್ದವಾಗುತ್ತಿದ್ದವು. ಮನೆಗೆ ಆ ಗೆಂಡೆಗಳನ್ನು ತಂದು ಕಲ್ಲಿನ ಮೇಲೆ ಉಜ್ಜಿ ಉಜ್ಜಿ ಬೆಳ್ಳಗೆ ಮಾಡಿ ತೊಳೆದು ನಂತರ ಸಾಂಬಾರ್ ಮಾಡಿದರೆ ಅದರ ರುಚಿಯೇ ಬೇರೆ ಇರುತ್ತಿತ್ತು. ಅಣಬೆಗಳಿಗೆ ಹೇಗೆ ತಮ್ಮದೇ ಆದ ರುಚಿ ಇದೆಯೋ ಹಾಗೆ ಗೆಂಡೆಗಳಿಗೂ ವಿಶೇಷ ರುಚಿಯಿದೆ. ಬಹುಶಃ ಇವತ್ತಿನ ದಿನಗಳಲ್ಲಿ ಗೆಂಡೆಗಳು ಹುಡುಕಿದರೂ ಸಿಗುವುದಿಲ್ಲ.

ಹಳ್ಳಿ ಬಿಟ್ಟು ಬಂದು ಎಷ್ಟೋ ವರ್ಷಗಳೇ ಆಗಿದೆ. ಸಣ್ಣ ಸಣ್ಣ ಫುಟ್ ಪಾತ್ ಹೋಟೆಲ್ ಗಳಿಂದ ಹಿಡಿದು ಪಂಚ ತಾರಾ ಹೋಟೆಲ್ ಗಳಲ್ಲಿಯೂ ಊಟ ಮಾಡಿ ಬಂದಿದ್ದರೂ ಯಾಕೋ ನಮ್ಮ ಹಳ್ಳಿಗಳಲ್ಲಿ ಸಿಗುತ್ತಿದ್ದ ಆ ಸೊಪ್ಪುಗಳ ರುಚಿ ನನ್ನನ್ನು ಆಗಾಗ ಸಿಕ್ಕಾಪಟ್ಟೆ ಕಾಡಿಬಿಡುತ್ತದೆ. ನಮ್ಮಪ್ಪ ಹಳ್ಳಿ ಬಿಟ್ಟು ಕನಕಪುರಕ್ಕೆ ಬಂದ ಮೇಲೆ ನಮ್ಮ ಮನೆಯ ಕಾಂಪೌಂಡಿನ ಒಳಗೆ ಹೊರಗೆ ಪುಟ್ಟ ಕೈದೋಟವನ್ನೇ ಮಾಡಿ ಬಿಟ್ಟಿತ್ತು. ಕಾಂಪೌಂಡಿನಲ್ಲಿ ಜಾಗ ಸಾಲದೆ ಇದ್ದಾಗ ಪೇಟೆಗಳಲ್ಲಿ ಹೂವಿನ ಕುಂಡಗಳನ್ನು ತಂದು ಅದರಲ್ಲೂ ತರಕಾರಿ ಗಿಡಗಳನ್ನು ನೆಟ್ಟುಬಿಟ್ಟಿತ್ತು. 🙂 ನಮ್ಮ ಕಾಂಪೌಂಡಿನಲ್ಲಿ ಏನಿತ್ತು ಏನಿರಲಿಲ್ಲ.. ಕಾಂಪೌಂಡಿನ ಒಂದು ಮೂಲೆಗೆ ಕಬ್ಬಿನ ಗಿಡ ಇದ್ದರೆ, ಮತ್ತೊಂದು ಮೂಲೆಗೆ ಬಾಳೆ ಗಿಡ ಹಾಕಿತ್ತು. ಹಳ್ಳಿಯಲ್ಲಿ ಬೆಳೆಯುತ್ತಿದ್ದ ತರಕಾರಿಗಳಿಗಿಂತ ಹೆಚ್ಚು ವಿಧ ವಿಧದ ತರಕಾರಿಗಳನ್ನು ಪೇಟೆಯ ಕಾಂಪೌಂಡಿನಲ್ಲಿ ಬೆಳೆಯುತ್ತಿತ್ತು. ಬದನೆ ಟೋಮ್ಯಟೋಗಳ ಜೊತೆ ಕುಂಬಳ ಕಾಯಿ, ಹೀರೆಕಾಯಿ, ಬೀನ್ಸ್, ಮೂಲಂಗಿ, ಪುದಿನ ಕೊತ್ತಂಬರಿ ಸೊಪ್ಪುಗಳು ನಮ್ಮ ಕಾಪೌಂಡಿನ ಒಳಗೆ ತುಂಬಿದ್ದವು. ಚಂಡೂವು, ಗುಲಾಬಿಗಳ ಜೊತೆ ಅದೇನೋ ಎಂಟು ಗಂಟೆ ಹೂವ ಅನ್ನೋ ಒಂದು ಹೂವಿನ ಗಿಡ ಸಹ ಇತ್ತು. ಎಂಟು ಗಂಟೆ ಗಿಡ ಎಂದರೆ ಅದು ಬೆಳಿಗ್ಗೆ ಎಂಟು ಗಂಟೆಗೆ ಅರಳುತ್ತೆ. ಒಂದು ಬಾರಿ ಬೆಳಿಗ್ಗೆ ಎದ್ದು ಜಾಗಿಂಗ್ ಮಾಡಿ ಬಂದು ಶೂ ಸಹ ಬಿಚ್ಚದೆ ಆ ಎಂಟು ಗಂಟೆ ಹೂವಿನ ಮುಂದೆ ಅದು ಹೇಗೆ ಅರಳುತ್ತದೆ ನೋಡೋಣ ಎಂದು ಕುಳಿತುಬಿಟ್ಟಿದ್ದೆ. ಹೂವು ಅರಳೋದನ್ನು ನೋಡೋದರಲ್ಲಿ ಇರುವ ಸುಖವೇ ಬೇರೆ ಬಿಡಿ.. ಮನೆಯ ಮುಂದೆ ಕಾಂಪೌಂಡಿನ ಒಳಗೆ ಚಂದ್ರನ ಬೆಳಕಿನಲ್ಲಿ, ಮನೆಯವರೆಲ್ಲಾ ಕುಳಿತು ಊಟ ಮಾಡಿ ಹರಟುತ್ತಿದ್ದ ದಿನಗಳನ್ನೆಲ್ಲಾ ನೆನೆಸಿಕೊಂಡರೆ ಎಲ್ಲಿ ಹೊರಟು ಹೋದವು ಆ ದಿನಗಳು ಅನಿಸುತ್ತೆ.

ಯಾಕೋ ಆಯುಧ ಪೂಜೆ ಅನ್ನುತ್ತಿದ್ದಂತೆ ಗುದ್ದಲಿ, ಸನಿಕೆಗಳು ನೆನಪಾಗಿ ನಮ್ಮಪ್ಪನ ಕೈದೋಟ, ತರಕಾರಿಗಳು, ನಮ್ಮೂರಿನ ಸೊಪ್ಪುಗಳು, ಗೆಂಡೆಗಳು ಏನೇನೋ ನೆನಪಾಗಿಬಿಟ್ಟವು. ನಮ್ಮ ಊರು ಬಿಟ್ಟು ಎಷ್ಟೋ ವರ್ಷಗಳೇ ಆಗಿದೆ, ಕನಕಪುರದ ಆ ಕಾಂಪೌಂಡ್ ಇದ್ದ ಮನೆ ಬಿಟ್ಟು ಬೆಂಗಳೂರಿಗೆ ಬಂದು ನೆಲೆಸಿ ಮೂರ್ನಾಲ್ಕು ವರ್ಷಗಳಾಗಿ ಹೋಯಿತು. ನಮ್ಮಪ್ಪನ ಕೈದೋಟದ ಕುರುಹು ಎಂಬಂತೆ ಹೂವಿನ ಕುಂಡಗಳಲ್ಲಿ ಒಂದಷ್ಟು ಹೂವಿನ ಗಿಡಗಳು, ಪುದಿನ, ಕೊತ್ತಂಬರಿ ಸೊಪ್ಪಿನ ಗಿಡಗಳಿವೆ. ನಮ್ಮಪ್ಪನ ಕೈದೋಟದ ಸಂಸ್ಕೃತಿಯನ್ನು ಯಾವತ್ತಾದರು ನಾನು ಮುಂದುವರೆಸುವ ಆಸೆ.. ನೋಡೋಣ ಆ ಆಸೆ ಯಾವತ್ತಿಗೆ ನೆರವೇರುತ್ತೆ ಅಂತ..

ಕೊನೆಯ ಪಂಚ್:

ಸಹೃದಯಿಗಳೇ, ನಗರಗಳಲ್ಲಿ ಇವತ್ತಿನ ದಿನಗಳಲ್ಲಿ ಪಲಾಕ್ ಸೊಪ್ಪು, ಮೆಂತ್ಯೆ ಸೊಪ್ಪುಗಳನ್ನಷ್ಟೇ ನೋಡಿ ಅಭ್ಯಾಸವಿರುವ ನಿಮಗೆ ಮುಂದಿನ ಸಾರಿ ಊರಿಗೆ ಹೋದಾಗ ಸೊಪ್ಪು ಕುಯ್ಯಲು ಹೋಗಿ.. ಇಲ್ಲವಾದರೆ ಯಾರಿಗಾದರು ಸೊಪ್ಪು ಕುಯ್ದು ತಂದು ಕೊಡಲು ಹೇಳಿ.. ಅದರಲ್ಲೂ ಈ ಸಮಯದಲ್ಲಿ ಅಂದರೆ ನಮ್ಮ ಹಳ್ಳಿಯ ಭಾಷೇಲಿ ಹೇಳಬೇಕು ಅಂದ್ರೆ ಹಸಿರು ಕಾಲದಲ್ಲಿ ಸೊಪ್ಪುಗಳು ಯತ್ತೇಚ್ಚವಾಗಿ ಸಿಗುತ್ತವೆ. ಸೊಪ್ಪು ತಿಂದು ಅವುಗಳ ರುಚಿಯನ್ನು ಯಾವತ್ತಾದರೂ ಎದುರಿಗೆ ಸಿಕ್ಕಾಗ ತಿಳಿಸಿ..

ಎಲ್ಲರಿಗೂ ಆಯುಧ ಪೂಜೆ (ತಡವಾಗಿ) ಹಾಗು ವಿಜಯದಶಮಿಯ ಹಾರ್ದಿಕ ಶುಭಾಶಯಗಳು..

‍ಲೇಖಕರು G

24 October, 2012

12 Comments

  1. sumathi hegde

    ನಟರಾಜ ಜ್ಯಾಮಿಟ್ರಿ ಬಾಕ್ಸ್ ನೆನಪಿಸಿದ್ದಕ್ಕೆ ಧನ್ಯವಾದಗಳು ನಟರಾಜ್…ಲೇಖನ ತುಂಬಾ ಇಷ್ಟಆಯ್ತು… :))

  2. ಈಶ್ವರ ಕಿರಣ

    ಲೇಖನ ಚೆನ್ನಾಗಿದೆ. ನಮ್ ಕಡೇನೂ ಹೀಗೆಯೇ.. ಮುದ್ದೆಯೊಂದು ಇಲ್ಲ. ಆದರೆ ತಂಬುಳಿಗಳನ್ನು ಮಾಡುವುದಕ್ಕೆ ನಮ್ಮವರು ಯಾವುದೆಲ್ಲಾ ಮರದ/ಗಿಡದ ಎಲೆಗಳನ್ನು ಚಿವುಟುತ್ತಾರೋ.

    ಹಬ್ಬದ ಶುಭಾಶಯಗಳು.

  3. samyuktha

    “ನಗರಗಳಲ್ಲಿ ಇವತ್ತಿನ ದಿನಗಳಲ್ಲಿ ಪಲಾಕ್ ಸೊಪ್ಪು, ಮೆಂತ್ಯೆ ಸೊಪ್ಪುಗಳನ್ನಷ್ಟೇ ನೋಡಿ ಅಭ್ಯಾಸವಿರುವ ನಿಮಗೆ…” anta en helidiri idu khandita satya Nataraju! Saakashtu kele iradantaha soppugala hesaru parichayisiddakke dhanyavadagalu. Nimma tandeya kaitotavannu nodabekembase! 🙂

  4. Swarna

    ಎಚ್.ಎಸ್.ವಿ ಯವರ ಕಥನದಲ್ಲಿ ಸೊಪ್ಪಿನ ಬಗ್ಗೆ ಭಾಳ ಬರೆದಿದ್ದರು.
    ಈಗ ನೀವು.. ನಾವು ಓದಿ ಖುಷ್
    ಕೆಂಪಿನ ಮೇಲೆ ಕಪ್ಪು ಗೆರೆಗಳು ಬಹುಶಃ ನಟರಾಜ ಬ್ರಾಂಡ್ನ ಟ್ರೇಡ್ ಮಾರ್ಕ್
    ಸ್ವರ್ಣಾ

  5. srinivas deshpande

    priya nataraj vandanegalu,

    Lekhana thumba sogasaagide.petege banda naavu super market na american soppugalige bali biddiddeve. appa holadinda tharutthidda hakkaraki, anne soppu goli soppu itthyadigalella mana pataladinda kaaneyagive. marali hallige yaavaga hogutthevo…… athava nireeksheyalle kala saveyuttho yaarige gotthu?

    srinivas deshpande mangalore

  6. D.RaviVarma

    chennagide guruve… namma jana readymade foodge jotu biddagininda ii soppu vivarave gottilla.. ondu adyanada prakaara hechu hechhu soppu undavara aroogya manasika stiti uttamavaagirutte… vandanegalu geleyaa….

    ravi varma hosapete

  7. ಇಂದುಶೇಖರ

    ಸೊಪ್ಪಿನ ವಿಷಯಕ್ಕೆ ಬಂದಾಗ ನನಗೆ ನೆನಪಾಗುವದು ನಮ್ಮ ಕಡೆಯ ಹೊಲಗಳಲ್ಲಿ ಬೆಳೆಯುತ್ತಿದ್ದ ಹಕ್ಕರಿಕಿ ಸೊಪ್ಪು. ರೊಟ್ಟಿಯೊಡನೆ
    ತಿನ್ನುವದು ಬಹಳ ಆರೋಗ್ಯಕರ ಎಂದು ಹೇಳುತ್ತಾರೆ. ಹಾಗೆಯೇ ಪುಂಡೀ ಸೊಪ್ಪಿನ ಪುಂಡೀ ಪಲ್ಯೆ ಹಾಗೂ ಸಬ್ಬಸಗಿ ಸೊಪ್ಪಿನ ಜೊತೆಯ
    ಹೆಸರುಕಾಳು/ತೊಗರೀಬೇಳೆಯ ಪಲ್ಯೆ ನೆನಸಿಕೊಂಡರೆ ಇವತ್ತಿಗೂ ಬಾಯೂರುತ್ತದೆ.

  8. Hridaya shiva

    Matte kanakapurakke karedoyda nimee lekhana ishtavaytu…
    gende nenapisidiri…..!

  9. Badarinath Palavalli

    ಈ ಜಾಮಿತಿ ಪೆಟ್ಟಿಗೆ ನನಗೆ ಅಂದು ಸೋಜಿಗದು ವಸ್ತು. ಅದನ್ನು ಹೋಮ್ದಿರುವುದೇ ಶಾಲೆಯಲ್ಲಿ ಗೌರವದ ಚಿಹ್ನೆ.

    ಉಪ್ ಸಾರು ಮತ್ತು ಮುದ್ದೆ ಕರ್ನಾಟಕದ ಗಿರಿಮೆ.

    ಒಟ್ಟಾರೆ ಹಸಿರು ಸೊಪ್ಪಿನ ಬಳಕೆಯ ಉತ್ತೇಜನ ನೀಡುವ ಬರಹ.

  10. amardeep.p.s.

    ಶ್ರೀ. ನಟ್ಟು (ನೆಟ್) ರಾಜ ರವರೆ, ನಮ್ಮ ಹಳೇ ಶಾಲಾ ದಿನಗಳನ್ನು , ಆಯುಧ ಪೂಜೆಯನ್ನೂ ಜ್ಞಾಪಕಕ್ಕೆ ತಂದುದಲ್ಲದೆ, ಸೈಕಲ್ ಮೇಲಿನ ವ್ಯಾಮೋಹವನ್ನ ಕುಲುಕಿದಂತಾಯಿತು.

  11. Nataraju S M

    ಲೇಖನ ಮೆಚ್ಚಿದ ಸಹೃದಯಿಗಳಿಗೆಲ್ಲಾ ವಂದನೆಗಳು..

  12. Santhu

    ರಾಗಿಮುದ್ದೆ, ಬಸ್ಸಾರು, ಮೊಸ್ಸೊಪ್ಪು,ಕಾಲುಪಲ್ಯ, ಸೀಗೆಸೊಪ್ಪು. ಎಲ್ಲವೂ ನೆನಪಿಗೆ ಬಂದು ಬಾಯಲ್ಲಿ ನೀರೂರಿ ಬಂತು:)
    ಹಾಪ್‌ಕಾಮ್ ಗಳಲ್ಲಿ ದುಡ್ಡುಕೊಟ್ಟು ಏನು ತಂದು ತಿಂದರೂ, ಅಮ್ಮ ಆಯ್ದು ಮಾಡಿದ ಬರೀ ಮುದ್ದೆ-ಅನ್ನ-ಸಾರು ಕಾಂಬಿನೇಷನ್ ರುಚಿಗೆ ಸರಿಸಮನಾಗುವುದಿಲ್ಲ.
    ಇನ್ನೊಂದು ಮರೆತುಬಿಟ್ಟೆ, ಹಳ್ಳಿಯ ಸೊಪ್ಪುಗಳ ರುಚಿಯಷ್ಟೇ ಅಲ್ಲ, ಅವುಗಳಿಂದ ನಮಗಿರುವ ಆರೋಗ್ಯ, ನಗರ ಜೀವನದ ಊಟಗಳಿಂದ ಸಿಗುವುದಿಲ್ಲ.
    ಯಾವುದೇ ಗೊಬ್ಬರ ಹಾಕಿ ಬೆಳೆಸದಿದ್ದರೂ ಹಳ್ಳಿಗಳ ಸೊಪ್ಪಿನ ರುಚಿ ಸ್ವರ್ಗಕ್ಕೆ ಸಮ!!

    ಸಂತು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading