ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಲ್ಮೆಯಿಂದ ನಟರಾಜು : ಶಶಿ, ಸ್ವಾಮಿ ಮತ್ತು ಜೇನು ಹುಳಗಳು

ಶಶಿ, ಸ್ವಾಮಿ ಮತ್ತು ಜೇನು ಹುಳಗಳು

ಶ್ರೀ ಎಸ್ ಕರಿಯಪ್ಪ ರಸ್ತೆ ಅಂತ ಬೆಂಗಳೂರಿನಲ್ಲಿರುವ ರಸ್ತೆ ಕುರಿತು ನೀವು ಕೇಳಿರಬಹುದು. ಕರಿಯಪ್ಪನವರು ನಮ್ಮ ಕನಕಪುರದವರು. ಹಳೆ ಕಾಲದವರ ಬಾಯಲ್ಲಿ ಅವರು ಹಾಸ್ಟೆಲ್ ಕರಿಯಪ್ಪ. ಗಾಂಧೀಜಿಯವರಿಂದ ಪ್ರೇರೀಪಿತರಾಗಿ ಕನಕಪುರದಲ್ಲಿ ದಶಕಗಳ ಹಿಂದೆ ಪುಟ್ಟ ಹಾಸ್ಟೆಲ್ ಒಂದನು ಶುರು ಮಾಡಿದ್ದರು. ಮುಂದೆ ಅದೇ ಹಾಸ್ಟೆಲ್ ರೂರಲ್ ಎಜ್ಯುಕೇಷನ್ ಸೊಸೈಟಿ ಎಂಬ ಹೆಸರಿನಲಿ ಕನಕಪುರದ ಅತಿ ದೊಡ್ಡ ಶಿಕ್ಷಣ ಸಂಸ್ಥೆಯಾಗಿ ರೂಪುಗೊಂಡಿದ್ದು ಈಗ ಇತಿಹಾಸ. ಕನಕಪುರದ ಹೃದಯ ಭಾಗದಲ್ಲಿರುವ ಈ ಸಂಸ್ಥೆ ಎಷ್ಟು ದೊಡ್ಡದು ಎಂದರೆ ಒಬ್ಬ ಪುಟ್ಟ ಹುಡುಗ ಈ ಸಂಸ್ಥೆಯ ಕಾಂಪೌಂಡ್ ನ ಒಳ ಹೊಕ್ಕರೆ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಸ್ನಾತಕ್ಕೋಸ್ಕರ ಪದವಿಯವರೆಗೂ ವಿದ್ಯಾಭ್ಯಾಸ ಮುಗಿಸಿಬಿಡಬಹುದು ಅಷ್ಟು ದೊಡ್ಡದು.

ಒಂದು ಕಾಲದಲ್ಲಿ ಕರಿಯಪ್ಪನವರ ಹೈಸ್ಕೂಲಿನಲ್ಲಿ ನಾನು 8 ನೇ ಇ ವಿಭಾಗದ ವಿದ್ಯಾರ್ಥಿ. ಎ ವಿಭಾಗ ಇಂಗ್ಲೀಷ್ ಮೀಡಿಯಂ ಆಗಿತ್ತು ಎಂಬ ನೆನಪು. ಉಳಿದ ಬಿ ಸಿ ಡಿ ಮತ್ತು ಇ ವಿಭಾಗಗಳು ಕನ್ನಡ ಮೀಡಿಯಂ. ಏಳನೆ ತರಗತಿಯನ್ನು ಕನ್ನಡ ಮಾಧ್ಯಮದಲ್ಲಿ ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ಮೇಲೆ ನಮ್ಮೂರಿನ ಕೆಲವರು “ಲೋ ಮಗ ಚೆನ್ನಾಗಿ ಓದ್ತೀಯ 8 ನೇ ಕ್ಲಾಸ್ ನಿಂದ ಇಂಗ್ಲೀಷ್ ಮೀಡಿಯಂ ಸೇರಿಕೋ.. ಮುಂದೆ ಒಳ್ಳೇದಾಯ್ತದೆ” ಎಂದು ಸಲಹೆ ನೀಡಿದ್ದರು. ನಮ್ಮಪ್ಪ ಸಹ “ಅತ್ತಾಗ್ ಇಂಗ್ಲೀಷ್ ಮೀಡಿಯಂಗೆ ಸೇರ್ಕೋ ಮಗ” ಅಂತ ಹೇಳಿದ್ದರು. “ಇಲ್ಲ ಇಲ್ಲ ನಾನು ಕನ್ನಡ ಮೀಡಿಯಂನಲ್ಲೇ ಓದಬೇಕು” ಎಂದು ಪಟ್ಟು ಹಿಡಿದಿದ್ದರಿಂದ ನಮ್ಮ ಕನಕಪುರದಲ್ಲಿದ್ದ ಒಳ್ಳೆ ಸ್ಕೂಲು ಕರಿಯಪ್ಪನವರ ಹೈಸ್ಕೂಲು (ಆರ್ ಎಂ ಪಿ ಎಚ್ ಎಸ್) ಆಗಿದ್ದರಿಂದ ಅಲ್ಲಿಗೆ ಸೇರಿಕೊಂಡಿದ್ದೆ. ಕಪ್ಪು ಪ್ಯಾಂಟ್ ಬಿಳಿ ಅಂಗಿ ನಮಗೆ ಯೂನಿಫಾರ್ಮ್ ಆಗಿತ್ತು. ಶ್ರೀ ಕುವೆಂಪು ರವರು ಬರೆದಿರುವ “ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ” ಎಂಬ ಪ್ರಾರ್ಥನೆಯ ಜೊತೆಗೆ ನಮ್ಮ ಶಾಲೆಯಲ್ಲಿ “ನೆನೆಯುವ ನಾವಿಂದು ಸ್ಮರಿಸುವ ನಾವಿಂದು ನಮ್ಮನಗಲಿದ ಪರಮ ಪೂಜ್ಯ ಶ್ರೀ ಕರಿಯಪ್ಪನವರನು ನೆನೆಯುವ ನಾವಿಂದು ಸ್ಮರಿಸುವ ನಾವಿಂದು” ಎಂಬ ಮತ್ತೊಂದು ಪ್ರಾರ್ಥನೆಯನ್ನು ಹೇಳಬೇಕಿತ್ತು.

ಹೊಸ ಪ್ರಾರ್ಥನೆ, ಹೊಸ ಶಾಲೆ, ಹೊಸ ಮೇಷ್ಟು, ಹೊಸ ಗೆಳೆಯರು ಆ ಶಾಲೆಯಲ್ಲಿ ನನಗೆ ಎಲ್ಲವೂ ಹೊಸದು. ತರಗತಿಯಲ್ಲಿ ಯಾರು ಅತಿ ಹೆಚ್ಚು ಅಂಕ ತೆಗೆದಿದ್ದಾರೋ ಅವರೇ ಆ ತರಗತಿಯ ಮಾನಿಟರ್ ಆಗುತ್ತಿದ್ದ ಕಾಲವದು. ಆಗ ನಾನು ಫರ್ಸ್ಟ್ ಮಾನಿಟರ್.. ಮತ್ತೊಬ್ಬ ಹುಡುಗ ಸೆಕೆಂಡ್ ಮಾನಿಟರ್. ಕನಕಪುರದಿಂದ ದೂರದಲ್ಲಿರುವ ಒಂದು ಪುಟ್ಟ ಹಳ್ಳಿಯಿಂದ ಆ ಗೆಳೆಯ ಬರುತ್ತಿದ್ದ. ನಾವಿಬ್ಬರು ಮಾನಿಟರ್ ಗಳಾಗಿದ್ದ ಕಾರಣಕ್ಕೋ ಏನೋ ಸಿಕ್ಕಾಪಟ್ಟೆ ಕ್ಲೋಸ್ ಆಗಿಬಿಟ್ಟಿದ್ದೆವು. ಕ್ಲೋಸ್ ಆದ ಹೊಸತರಲ್ಲಿ ಒಂದು ದಿನ ನಮ್ಮ ಶಾಲೆಯಲ್ಲಿ ಸ್ಪೋರ್ಟ್ಸ್ ಇದ್ದ ಕಾರಣ ಸಿನಿಮಾಗೆ ಹೋಗೋಣ ಎಂದು ಆ ಗೆಳೆಯ ಕರೆದಿದ್ದ. ಅವನ ಜೊತೆ ಟೆಂಟಿನ ಕಡೆ ನಡೆಯುವಾಗ ಮೈಕ್ ನಲ್ಲಿ ಸಿನಿಮಾ ಶುರುವಾಗುವ ಮುಂಚೆ ಬರುತ್ತಿದ್ದ “ನಮೋ ವೆಂಟಕೇಶ ನಮೋ ತಿರುಮಲೇಶ” ಎಂಬ ಹಾಡು ದೂರದಿಂದಲೇ ನಮಗೆ ಕೇಳಿಸುತ್ತಿತ್ತು. “ಅಯ್ಯೋ! ಫಿಲಂ ಶುರು ಆಗಿಬಿಡುತ್ತೆ ಓಡೋ ಓಡೋ” ಎಂದು ನನ್ನನ್ನು ಓಡಿವಂತೆ ಮಾಡಿದ್ದ ಗೆಳೆಯನ ಜೊತೆ ಓಡಿ ಟಿಕೆಟ್ ಪಡೆಯುವ ಆತುರದಲ್ಲಿ ಸಿನಿಮಾದ ಪೋಸ್ಟರ್ ಸಹ ಸರಿಯಾಗಿ ನೋಡಲಾಗಿರಲಿಲ್ಲ. ಒಳ ಹೊಕ್ಕ ಮೇಲೆ ತಿಳಿಯಿತು ಅದು ಯಾವ ಸಿನಿಮಾ ಅಂತ. ನಮ್ಮೂರಿನ ಟೆಂಟ್ ಗಳಲ್ಲಿ ವಾರದ ಕೊನೆಯಲ್ಲಿ ಹಾಕುತ್ತಿದ್ದ ವಿಶೇಷವಾದ ಸಿನಿಮಾಗಳಲ್ಲಿ ಒಂದು ಸಿನಿಮಾ ಅದಾಗಿತ್ತು. ಯಾವ ಸಿನಿಮಾ ಅಂತ ನಾನು ಬರೆದರೆ ನೀವು ನನ್ನನ್ನು ಸಿಕ್ಕಾಪಟ್ಟೆ ಬಯ್ದುಬಿಡುತ್ತೀರ. 🙂 ಅಂತಹ ಸಿನಿಮಾ ನೋಡಿದ್ದು ಅದೇ ಮೊದಲು. ನಾವು ಆ ಶಾಲೆಯಲ್ಲಿ ಇದ್ದಷ್ಟು ದಿನ ಯಾಕೋ ಮತ್ತೆ ಆ ತರಹದ ಸಿನಿಮಾ ನೋಡುವ ಸಾಹಸಕ್ಕೆ ಕೈ ಹಾಕಿರಲಿಲ್ಲ. ಆದರೆ ಸಮಯ ಸಿಕ್ಕಾಗ ಒಳ್ಳೆಯ ಕನ್ನಡ ಸಿನಿಮಾಗಳನ್ನು ನೋಡುತ್ತಿದ್ದೆವು.

ನಮ್ಮ ಕನಕಪುರದ ಮುನ್ಸಿಪಾಲ್ ಹೈಸ್ಕೂಲ್ ಫೀಲ್ಡ್ ಸಭೆ ಸಮಾರಂಭಗಳ ನಡೆಸಲು ಒಳ್ಳೆಯ ಜಾಗ. ಆ ಮೈದಾನದಲ್ಲಿ ಒಮ್ಮೆ ಸರ್ಕಸ್ ನಡೆಯುತ್ತಿತ್ತು. ನನ್ನ ಗೆಳೆಯ, ಅವನ ತಮ್ಮ ಮತ್ತು ತಂದೆ ತಾಯಿಗಳು ಒಮ್ಮೆ ಸರ್ಕಸ್ ನೋಡಲು ಬಂದಿದ್ದರು. ನನ್ನ ಗೆಳೆಯನ ಜೊತೆ ನಾನಿದ್ದ ಕಾರಣ ಅವನ ತಂದೆ ತಾಯಿಗಳು ನನ್ನನ್ನೂ ಸಹ ಖುಷಿಯಿಂದ ಸರ್ಕಸ್ ಗೆ ಕರೆದೊಯ್ದಿದ್ದರು. ಅಲ್ಲಿ ಸರ್ಕಸ್ ನ ಜೊತೆ ಮಕ್ಕಳಿಗಾಗಿಯೇ ಎಷ್ಟೊಂದು ಆಟಗಳೂ ಸಹ ಇದ್ದವು. ಟ್ಯೂಬ್ ಲೈಟ್ ಗಳಿಂದ ಅಲಂಕೃತವಾದ ತೊಟ್ಟಿಲಿನಲ್ಲಿ ಕುಳಿತು ಅದೇನೋ ಜಾಯಿಂಟ್ ವ್ಹೀಲ್ ಅಂತಾರಲ್ಲ ಅದರಲ್ಲಿ ಎತ್ತರಕ್ಕೆ ಏರುತ್ತಾ ಕೆಳಗಿಳಿಯುವಾಗ ಒಂತರಾ ಖುಷಿಯಾಗ್ತಾ ಇತ್ತು. ಎತ್ತರಕ್ಕೆ ಹೋದಾಗ ಇಡೀ ಕನಕಪುರವೇ ಕಂಡಂತೆ ಭಾಸವಾಗುತ್ತಿತ್ತು. ಹಾಗೆ ಎಷ್ಟೊಂದು ಆಟಗಳನ್ನು ನಾನು, ನನ್ನ ಗೆಳೆಯ ಮತ್ತು ಅವನ ತಮ್ಮ ಆಡಿ ಖುಷಿ ಪಡುವಾಗ ಸಮಯ ಹೋದದ್ದೇ ಗೊತ್ತಾಗಿರಲಿಲ್ಲ. ನನ್ನ ಗೆಳೆಯನ ಊರಿನ ಕೊನೆಯ ಬಸ್ಸಿನ ಸಮಯ ಸಮೀಪಿಸಿದ ಕಾರಣ ಅವನ ತಂದೆ ತಾಯಿಗಳು ಸರ್ಕಸ್ ಕ್ಯಾನ್ಸಲ್ ಮಾಡಿ ನಾವು ಮೂರು ಜನ ಹುಡುಗರಿಗೂ ಐಸ್ ಕ್ರೀಂ ಮತ್ತು ಬೇಲ್ ಪುರಿ ಕೊಡಿಸಿದ್ದರು. ನನ್ನ ಗೆಳೆಯನ ತಮ್ಮ ಮತ್ತು ತಂದೆ ತಾಯಿಯರ ಜೊತೆಗಿನ ಮೊದಲ ಭೇಟಿ ನನ್ನದು. ಆ ದಿನವನ್ನು ಕಳೆದು ಬರೋಬ್ಬರಿ ಹದಿನೆಂಟು ವರ್ಷಗಳೇ ಕಳೆದಿದ್ದರೂ ಅವರ ಒಳ್ಳೆಯ ಗುಣ ಯಾಕೋ ನನ್ನ ಮನಃಪಟಲದಲ್ಲಿ ಹಾಗೆ ಉಳಿದುಬಿಟ್ಟಿದೆ.

ಎಂಟನೇ ತರಗತಿಯನ್ನು ಕನಕಪುರದಲ್ಲಿ ಓದಿ 9 ಮತ್ತು 10 ನೇ ತರಗತಿಗೆ ಮೈಸೂರಿಗೆ ಹೋದ ಕಾರಣ ಯಾಕೋ ಆ ಗೆಳೆಯನ ಜೊತೆ ಮತ್ತೆ ಮುಖಾಮುಖಿಯಾಗುವ ಸಮಯವೇ ಒದಗಿ ಬಂದಿರಲಿಲ್ಲ. ಆದರೆ ಪಿಯುಸಿಯ ಸಮಯದಲ್ಲಿ ನಮ್ಮ ಕಾಲೇಜಿನಲ್ಲೇ ಓದುತ್ತಿದ್ದ ಅವನ ತಮ್ಮನ ಜೊತೆ ಮತ್ತೆ ಮುಖಾಮುಖಿಯಾಗಿತ್ತು. ಪಿಯುಸಿ ದಿನಗಳಲ್ಲಿ ಒಂದೆರಡು ಬಾರಿ ಭೇಟಿಯಾಗಿದ್ದುದ ಬಿಟ್ಟರೆ ಫೇಸ್ ಬುಕ್ ಎಂಬ ಮಾಯಾ ಲೋಕದಲ್ಲಿ ಆ ಇಬ್ಬರು ಗೆಳೆಯರು ಮೊನ್ನೆ ಮೊನ್ನೆ ಮತ್ತೆ ಕಾಣಲು ಸಿಕ್ಕಿದ್ದು ಅವರ ಚಿಕ್ಕಪ್ಪನ ಮಗನೊಬ್ಬನ ಸಹಾಯದಿಂದ. ಎಷ್ಟೋ ವರ್ಷಗಳ ನಂತರ ಸಿಕ್ಕ ಈ ಇಬ್ಬರು ಗೆಳೆಯರ ಫೋನ್ ನಂಬರ್ ಪಡೆದು ಮಾತನಾಡಿಸಿದಾಗ ಯಾಕೋ ಬಾಲ್ಯದ ದಿನಗಳೆಲ್ಲಾ ನೆನಪಿಗೆ ಬಂದುಬಿಟ್ಟವು. ಇಂದು ನನ್ನ ಗೆಳೆಯ ಬೆಂಗಳೂರಿನಲ್ಲಿ ದಂತವೈದ್ಯನಾಗಿದ್ದಾನೆ. ಅವನ ತಮ್ಮ ಜೇನು ಹುಳಗಳ ಕುರಿತು ಒಂದು ಆಸಕ್ತಿದಾಯಕವಾದ ಸಂಶೋಧನೆ ಮಾಡಿದ್ದಾನೆ.

ಜೇನು ಎಂದರೆ ನನಗೆ ತಕ್ಷಣ ನೆನಪಾಗುವುದು ದೊಡ್ಡ ದೊಡ್ಡ ಮರಗಳಲ್ಲಿ, ಎತ್ತರದ ನೀರಿನ ಟ್ಯಾಂಕ್ ಗಳ ಗೋಡೆಗಳಲ್ಲಿ, ಮುಗಿಲೆತ್ತರದ ಬಿಲ್ಡಿಂಗ್ ಗಳಲ್ಲಿ ಕಾಣ ಸಿಗುವ ಹೆಜ್ಜೇನು. ಅದ ಬಿಟ್ಟರೆ ಸಣ್ಣ ಪುಟ್ಟ ಮರಗಳಲ್ಲಿ ಕಲ್ಲಿನ ಪೊಟರೆಗಳಲ್ಲಿ ಕಾಣ ಸಿಗುತ್ತಿದ್ದ ಕಿರು ಜೇನು ಮತ್ತು ಮನೆಗಳ ತಳಹದಿ ಬಗೆಯುವಾಗ ಕಾಣ ಸಿಗುವ ನೆಲಜೇನು (ಬೇರೆ ಹೆಸರಿರಬಹುದು). ಬೆಂಕಿ ಹಾಕಿ ಜೇನು ಹುಳಗಳ ಓಡಿಸಿ ಜೇನು ಕಿತ್ತು ತಿಂದಷ್ಟೇ ನಮಗೆ ಗೊತ್ತಿದೆಯಾ ಹೊರತು ಜೇನು ಹುಳಗಳಿಗೆ ಖಾಯಿಲೆಗಳು ಬರುತ್ತವೆ ಎಂದು ನನಗೆ ಖಂಡಿತಾ ಗೊತ್ತಿರಲಿಲ್ಲ. ಅಣಬೆ ಬೇಸಾಯ, ಮೊಲ ಸಾಕಾಣಿಕೆಯ ಜೊತೆ ಜೊತೆಗೆ ಜೇನು ಸಾಕಾಣಿಕೆಯೂ ಸಹ ಕೆಲವು ಕಡೆ ತುಂಬಾ ಪ್ರಸಿದ್ದ. ಹಸು, ಎಮ್ಮೆ, ಶ್ವಾನಗಳ ರಕ್ತ ಹೀರಿ ಕಾಯಿಲೆಗಳ ಹರಡುವ ಆ ಪ್ರಾಣಿಗಳನ್ನು ನಿಶ್ಯಕ್ತರನ್ನಾಗಿ ಮಾಡಿಬಿಡುವ ಉಣ್ಣೆ, ಹೇನು, ಚಿಗಟೆಗಳೆಂಬ ನಾನಾ ಬಗೆಯ ಪರಾವಲಂಬಿ ಜೀವಿಗಳನ್ನು ನಾನು ನೋಡಿರುತ್ತೇವೆ. ಆದರೆ ಜೇನು ಹುಳಗಳ ಬಿಳಿ ರಕ್ತ ಹೀರಿ ಅವುಗಳನ್ನು ನಿಶ್ಯಕ್ತಿಗೊಳಿಸಿ ಇಡೀ ಜೇಡಿನ ಗೂಡಿನ ಸಾಮರ್ಥ್ಯವನ್ನೇ ದ್ವಂಸ ಮಾಡಿಬಿಡುವ ವರೋಅ ಮೈಟ್ (Varroa Mite)ಎಂದು ಕರೆಯಲ್ಪಡುವ ಸಣ್ಣ ಹುಳಗಳ ಕುರಿತು ನನ್ನ ಗೆಳೆಯನ ಸಹೋದರ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಸಂಶೋಧನೆ ನಡೆಸಿದ್ದಾನೆ. ಅವುಗಳ ಇರುವಿಕೆಯನ್ನು ಕಂಡುಹಿಡಿದಿದ್ದೇ ಅಲ್ಲದೆ ಫಾರ್ಮಿಕ್ ಆಸಿಡ್ ಎಂಬ ದ್ರಾವಣವನ್ನು ಉಪಯೋಗಿಸಿ ಅವುಗಳ ಹತೋಟಿ ಮಾಡುವ ಕ್ರಮವನ್ನು ಕುರಿತು ಆತ ಅಧ್ಯಯನ ನಡೆಸಿದ್ದಾನಂತೆ. ವಿಶೇಷವಾಗಿ ಯುರೋಪಿಯನ್ ತಳಿಯ ಜೇನು ಹುಳಗಳ ಭಾದಿಸುವ ವರೋಅ ಮೈಟ್ ಗಳ ಕುರಿತ ತನ್ನ ಸಂಶೋಧನ ಪ್ರಬಂಧವನ್ನು ಈತ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಮಂಡಿಸಿರುವ ಕೇಳಿ ಸಿಕ್ಕಾಪಟ್ಟೆ ಖುಷಿಯಾಯಿತು..

ಗಾಂಧೀ ಜಯಂತಿಯ ಸಮಯದಲ್ಲಿ ಅವರ ಅನುಯಾಯಿಯಾಗಿದ್ದ ಶ್ರೀ ಎಸ್ ಕರಿಯಪ್ಪ ನವರನ್ನು, ಅವರ ಶಿಕ್ಷಣ ಸಂಸ್ಥೆಯನ್ನು ನೆನೆಯುತ್ತಿದ್ದಾಗ ನನ್ನ ಈ ಇಬ್ಬರು ಗೆಳೆಯರು ಯಾಕೋ ತುಂಬಾ ನೆನಪಾದರು.. ಇಂತಹ ಸಹೃದಯಿ ಗೆಳೆಯರು ಇನ್ನೂ ತುಂಬಾ ಇದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಅವರನ್ನು ನೆನೆಸಿಕೊಳ್ಳಬೇಕು.. ಅಂದ ಹಾಗೆ ನನ್ನ ಗೆಳೆಯನ ಹೆಸರು ಡಾ. ಶಶಿಧರ್ ಮತ್ತು ಅವನ ತಮ್ಮನ ಹೆಸರು ಪುಟ್ಟಸ್ವಾಮಯ್ಯ.. ಚಿಕ್ಕದಾಗಿ ಹೇಳಬೇಕೆಂದರೆ ಸ್ವಾಮಿ.. :))

ತಡವಾಗಿ ಎಲ್ಲರಿಗೂ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯ ಶುಭಾಶಯಗಳು

‍ಲೇಖಕರು G

3 October, 2012

3 Comments

  1. ಪ್ರಶಾಂತ್

    ತುಂಬಾ ಚೆನ್ನಾಗಿತ್ತು

  2. Raghunandan K

    ಎಂದಿನ ಸರಳ ಶೈಲಿಯ ಸುಂದರ ಬರಹ ಇಷ್ಟವಾಯಿತು.
    ಬಾಲ್ಯದ ನೆನಪುಗಳೇ ಹಾಗೆ – ನಿರಂತರ ಒಸರುವ ಜೀವ ಚಿಲುಮೆ – ಬಾಲ್ಯದ ಪ್ರತಿ ದಿನಗಳ ಬಗೆಗೂ ಒಂದೊಂದು ಬರಹಕ್ಕಾಗುವಷ್ಟು ವಿಷಯ ಗುಚ್ಛವೇ ಇರುತ್ತದಲ್ಲವಾ?
    ನಿಮ್ಮದೆನಿಸುವ ಬಾಲ್ಯ ನಮ್ಮದಾಗುವ ಬಗೆ ಅಕ್ಷರದ ಸೋಜಿಗ…

    ಒಳಿತಾಗಲಿ…
    ನೆನಪುಗಳಿಗೂ, ನೆನಪಿನ ಕ್ಷಣಗಳ ಜೊತೆಗಾರ ಮಿತ್ರರೆಲ್ಲರಿಗೂ, ಭವಿಷ್ಯತ್ ನೆನಪುಗಳ ಪರಿಮಳಕ್ಕೂ…

  3. Nataraju S M

    ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ ಸಹೃದಯಿಗಳೇ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading