ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಲ್ಮೆಯಿಂದ ನಟರಾಜು : ವಿಶ್ವಕರ್ಮನ ಪೂಜೆಯೂ, ಅರ್ಧ ಲೀಟರ್ ಮಿನರಲ್ ವಾಟರೂ..!

ಆತುರದ ಗಳಿಗೆಯ ಸವಿ ಕ್ಷಣಗಳು..

ಪ್ರತಿ ವರ್ಷ ಸೆಪ್ಟೆಂಬರ್ ಹದಿನೇಳನೇ ತಾರೀಖು ಕೋಲ್ಕತ್ತಾದಲ್ಲಿ ವಿಶ್ವ ಕರ್ಮ ಪೂಜೆ ಇರುತ್ತದೆ. ಎಷ್ಟೋ ವರ್ಷಗಳ ನಂತರ ವಿಶ್ವ ಕರ್ಮ ಪೂಜೆಯ ದಿನ ಒಂದಿನ ಆಚೆ ಈಚೆ ಆದರೂ ಬೆಂಗಾಳಿಗಳಿಗೆ ಸೆಪ್ಟೆಂಬರ್ ಸತರೋ ಅಂದ್ರೆ ಬಿಶ್ವೋ ಕರ್ಮೋ ಪೂಜೋ ದಿನ. ನಮ್ಮ ಕಡೆಯ ಆಯುಧಪೂಜೆಯನ್ನು ಇಲ್ಲಿನ ವಿಶ್ವ ಕರ್ಮ ಪೂಜೆ ಎನ್ನಬಹುದು. ಅವತ್ತು ವಿಶ್ವಕರ್ಮ ಮೂರ್ತಿಯನ್ನು ತಮ್ಮ ಕಛೇರಿಗಳಲ್ಲಿ, ಕಾರ್ಖಾನೆಗಳಲ್ಲಿ ಕುಳ್ಳರಿಸುವುದರ ಮೂಲಕ ಬೆಂಗಾಳಿಯನ್ನು ಆ ಪೂಜೆಯನ್ನು ಆಚರಿಸುತ್ತಾರೆ. ಆ ದಿನ ಆಫೀಸಿನ ವತಿಯಿಂದ ಕಾರ್ಖಾನೆಯ ವತಿಯಿಂದ ನೌಕರರಿಗೆ ಒಳ್ಳೆಯ ಬೆಂಗಾಳಿ ಊಟವಿರುತ್ತದೆ. ಪ್ರತಿ ವರ್ಷ ನಮ್ಮ ಸಂಸ್ಥೆಯಲ್ಲಿಯೂ ವಿಶ್ವ ಕರ್ಮ ಪೂಜೆ ಮಾಡುತ್ತರಾದರೂ ವಿದ್ಯಾರ್ಥಿಗಳ ಮತ್ತು ನೌಕರರ ನಡುವೆ ಒಂಚೂರು ಮನಸ್ತಾಪಗಳಿರುವ ಕಾರಣ ನೌಕರರೇ ಆಯೋಜಿಸುವ ಈ ಪೂಜೆಗೆ ನಾವು ವಿರ್ದಾರ್ಥಿಗಳು ಕಳೆದ ಮೂರು ವರ್ಷಗಳಿಂದ ಹಾಜರಾಗುತ್ತಿಲ್ಲ. ಕೋಲ್ಕತ್ತಾದಲ್ಲಿ ಯಾವುದೇ ಸಭೆ ಸಮಾರಂಭಗಳಿಗೆ ಮದುವೆಗಳಿಗೆ ಹಬ್ಬಗಳಿಗೆ ಆಮಂತ್ರಣವನ್ನು ಹೆಚ್ಚು ಜನರಿಗೆ ಯಾರೂ ನೀಡುವುದಿಲ್ಲ. ಅದರಲ್ಲೂ ಊಟ ತಿಂಡಿ ವ್ಯವಸ್ಥೆ ಮಾಡಬೇಕಾದ ಕಡೆ ತುಂಬಾ ಆತ್ಮೀಯರೆನಿಸಿಕೊಂಡವರಿಗೆ ಮಾತ್ರ ಆಹ್ವಾನ ನೀಡುತ್ತಾರೆ. ಬೆಂಗಾಳಿಯಲ್ಲಿ ಹಾಗೆ ಕಾರ್ಯಕ್ರಮಕ್ಕೆ ಕರೆಯುವುದಕ್ಕೇ ಅದರಲ್ಲೂ ಊಟಕ್ಕೆ ಕರೆಯುವುದನ್ನು ನಿಮೊಂತ್ರೊಣ್ ಎನ್ನುತ್ತಾರೆ.

ವಿಶ್ವ ಕರ್ಮ ಪೂಜೆಗೆ ನನಗೆ ಅಂತಹ ಒಂದು ನಿಮಂತ್ರಣ ಗೆಳೆಯನೊಬ್ಬನಿಂದ ಸಿಕ್ಕತ್ತು. ತುಂಬಾ ಆತ್ಮೀಯರೆನಿಸಿಕೊಂಡವರು ತುಂಬಾ ಒತ್ತಾಯ ಮಾಡಿದರೆ ಯಾವುದಾದರು ಕಾರ್ಯಕ್ರಮಕ್ಕೆ ಹೋಗುವ ಪರಿಪಾಠ ಬೆಳೆಸಿಕೊಂಡಿರುವ ನಾನು ಆ ಗೆಳೆಯ ನನ್ನನ್ನು ತಮ್ಮ ಪ್ಯಾಕ್ಟರಿಯಲ್ಲಿ ನಡೆಯುವ ವಿಶ್ವ ಕರ್ಮ ಪೂಜೆಗೆ ಆಹ್ವಾನಿಸಿದಾಗ ಸರಿ ನೋಡೋಣ ಎಂದಿದ್ದೆ. ಸರಿ ನೋಡೋಣ, ಆಯ್ತು ಬರ್ತೀನಿ, ಅಂತ ಹೇಳೋ ಮಾತಿಗಿಂತ ನಾನು ಖಂಡಿತಾ ಬಂದೇ ಬರ್ತೇನೆ ಅಂತ ಹೇಳಿ ತಪ್ಪಿಸಿಕೊಂಡ ಗೆಳೆಯರ ಮದುವೆಗಳ ಪಟ್ಟಿ ದೊಡ್ಡದಿದೆ. ನನ್ನ ಚೆಡ್ಡಿ ದೋಸ್ತ್ ಗಳು ಇಂದಿಗೂ ನನ್ನನ್ನು ತಮ್ಮ ಮದುವೆಗೆ ಬರದಿದ್ದುದ್ದಕ್ಕಾಗಿ ಬಯ್ದುಕೊಳ್ಳುತ್ತಾರೆ. ಒಬ್ಬ ಗೆಳೆಯನಂತೂ “ನಿನ್ನ ಮದುವೆಗೆ ನನ್ನ ಮಗನನ್ನು ಕಳಿಸ್ತೀನ ಹೊರತು ನಾನು ಮಾತ್ರ ಬರಲ್ಲ” ಎಂದು ಎಂದು ಮೂರ್ನಾಲ್ಕು ವರ್ಷಗಳ ಹಿಂದೆ ಹೇಳುತ್ತಿದ್ದ. ಈಗ ಅವನ ಮೊದಲ ಮಗನ ವಯಸ್ಸು ಏಳು ವರ್ಷ ಎರಡನೇ ಮಗನಿಗೆ ನಾಲ್ಕು ವರ್ಷ ಇರಬಹುದು.

ಕೋಲ್ಕತ್ತಾಗೆ ಬಂದ ಮೇಲೆ ಯಾಕೋ ಯಾರಾದರು ಬೆಂಗಾಳಿಗಳು ಮದುವೆಗೆ ಕರೆದರೆ ಆ ನನ್ನ ಚೆಡ್ಡಿ ದೋಸ್ತ್ ಬಯ್ತುತ್ತಿದ್ದ ಮಾತುಗಳು ಜ್ಞಾಪಕಕ್ಕೆ ಬಂದು ಮದುವೆ ಮನೆ ನನ್ನ ರೂಮಿನಿಂದ ಹತ್ತಿರದಲ್ಲಿದ್ದರೆ ಮದುವೆಗಳಿಗೆ ಖಂಡಿತಾ ಹೋಗಿ ಬರುತ್ತಿದ್ದೆ. ಅಚ್ಚರಿಯೆಂದರೆ ನನ್ನ ಗೆಳೆಯರಿಗಿಂತ ನಮ್ಮ ಲ್ಯಾಬಿನಲ್ಲಿ ಕೆಲಸ ಮಾಡೋ ಹುಡುಗರ ಮದುವೆಗಳು ನನಗೆ ಎಷ್ಟೋ ಖುಷಿ ಕೊಟ್ಟಿವೆ. ಯಾಕೆಂದರೆ ನಮಗಿಂತ ಹುದ್ದೆಯಲ್ಲಿ ಕೆಳಗಿರುವ ಜನಗಳಿಗೆ ನಮ್ಮ ಬರುವಿಕೆ ಒಂತರಾ ಖುಷಿ ಕೊಡುತ್ತದೆ. ಜೊತೆಗೆ ಅಂತಹವರ ಆತಿಥ್ಯವೂ ಅಧ್ಬುತವಾಗಿರುತ್ತದೆ. ತುಂಬಾ ಆತ್ಮೀಯ ಗೆಳೆಯರ ಮದುವೆಗಳಾಗಿದ್ದರೆ ಆ ಮಾತು ಬೇರೆ ಬಿಡಿ. ಅದೂ ಒಂತರಾ ಖುಷಿ ಕೊಡುತ್ತದೆ. ಹೀಗೆ ಸಭೆ ಸಮಾರಂಭಗಳಿಂದ ದೂರ ಉಳಿದುಬಿಡುತ್ತಿದ್ದ ನಾನು ನಮ್ಮ ಲ್ಯಾಬಿನ ಗೆಳೆಯರ ಒಂದೆರಡು ಮದುವೆಗಳ ಬಿಟ್ಟು ಉಳಿದೆಲ್ಲಾ ಮದುವೆಗಳನ್ನು ಕೋಲ್ಕತ್ತಾದಲ್ಲಿ ಅಟೆಂಡ್ ಮಾಡಿದ್ದೇನೆ. ಕೆಲವರ ಮದುವೆಗಳಲ್ಲಿನ ತಿಂಡಿ ತಿನಿಸುಗಳು ಊಟ ಉಪಚಾರಗಳು ನನ್ನನ್ನು ಭೋಜನ ಪ್ರಿಯನನ್ನಾಗಿ ಬದಲಾಯಿಸಿವೆ ಎಂದರೆ ತಪ್ಪಾಗಲಾರದು.

ಯಾವುದಾದರೂ ವಿಶೇಷ ದಿನ ಅನಿಸಿದಾಗ ಯಾವುದಾದರು ಕಾರ್ಯಕ್ರಮವಿದೆ ಎಂದೆನಿಸಿದ ದಿನ ಇರೋ ಬಟ್ಟೆಗಳಲ್ಲಿ ಯಾವುದಾದರೂ ಚಂದವಾದ ಪ್ಯಾಟನ್ನು ಮತ್ತು ಶರ್ಟನ್ನು ಒಗೆದು ರಾತ್ರಿ ರೂಮಿನಲ್ಲೇ ಒಣಗಿ ಹಾಕಿಕೊಂಡು ಮಲಗುವ ಅಭ್ಯಾಸ ನನ್ನದು. ರಾತ್ರಿ ಒಗೆದು ಒಣ ಹಾಕಿದ್ದ ಬಟ್ಟೆಗಳು ಫ್ಯಾನಿನ ಗಾಳಿಗೆ ಬೆಳಿಗ್ಗೆ ಎದ್ದಾಗ ಸಾಮಾನ್ಯವಾಗಿ ಒಣಗಿರುತ್ತವೆ. ಆಕಸ್ಮಾತ್ ನಾನು ಹೋಗಬೇಕಾದ ಕಾರ್ಯಕ್ರಮಗಳು ಸಂಜೆಯ ಸಮಯವಿದ್ದರೆ ಬೆಳಿಗ್ಗೆ ಬಟ್ಟೆಗಳ ಒಗೆದರಾಯಿತು ಎಂದು ಮಲಗಿದ ಸೋಮಾರಿತನದ ದಿನಗಳ ಉದಾಹರಣೆಗಳು ಬೇಕಾದಷ್ಟಿವೆ. ಅಂತಹ ದಿನಗಳಲ್ಲಿ ಕೆಲವು ಬಾರಿ ಬೆಳಿಗ್ಗೆ ಬಟ್ಟೆ ಒಗೆದು ಮನೆಯ ಹೊರಗೆ ಒಣ ಹಾಕಿದರೆ ನನ್ನ ಅದೃಷ್ಟಕ್ಕೆ ಆ ದಿನ ಮಳೆ ಬರದಿದ್ದರೆ ಸಂಜೆಯ ವೇಳೆಗೆ ಬಟ್ಟೆಗಳು ಒಣಗಿರುತ್ತಿದ್ದವು. ಬಟ್ಟೆಗಳೇನೋ ಒಣಗಿದ್ದರೂ ಒಳ ಉಡುಪುಗಳ ಒಣಗಿಸುವುದು ತುಂಬಾ ಕಷ್ಟದ ಕೆಲಸ. ಆಗ ಇಸ್ತ್ರಿಯಿಂದ ಬಟ್ಟೆಗಳನ್ನು ಒಣಗುವಂತೆ ಮಾಡಿ ಬಟ್ಟೆ ತೊಟ್ಟರೆ ಮೈ ಬಿಸಿಗೆ ಬಟ್ಟೆಗಳು ಒಣಗುತ್ತಿದ್ದವು.

ವಿಶ್ವ ಕರ್ಮ ಪೂಜೆಗೆ ಹೋಗಲು ಅಷ್ಟು ಮನಸ್ಸಿಲ್ಲದ ಕಾರಣ ನನ್ನ ಬಟ್ಟೆಗಳನ್ನು ರಾತ್ರಿ ಒಗೆಯದೇ ಮಧ್ಯರಾತ್ರಿಯವರೆಗೆ ಸಿನಿಮಾ ಒಂದನು ನೋಡುತ್ತಾ ನಂತರ ಹಾಯಾಗಿ ಮಲಗಿಬಿಟ್ಟಿದ್ದೆ. ಮಾರನೆಯ ದಿನ ಬೆಳಿಗ್ಗೆ ಎದ್ದಾಗ ಅವತ್ತು ಸೆಪ್ಟೆಂಬರ್ ಹದಿನೇಳನೇ ತಾರೀಖು ವಿಶ್ವ ಕರ್ಮ ಪೂಜೆಯ ದಿನ, ನನಗೆ ರಜಾ ದಿನ ಮಜಾ ದಿನ ಎಂದು ಒಳಗೊಳಗೆ ಖುಷಿಪಡುತ್ತಾ ರೂಮಿನಲ್ಲಿ ಕನ್ನಡ ಹಾಡುಗಳನ್ನು ಕೇಳ್ತಾ ಆರಾಮಾಗಿ ರೂಮಿನಲ್ಲಿ ಮಲಗಿದ್ದೆ. ಇನ್ನೂ ತಿಂಡಿ ಸಹ ತಿಂದಿರಲಿಲ್ಲ. ಬೆಳಿಗ್ಗೆ ಹತ್ತು ಗಂಟೆಗೆ ಗೆಳೆಯನಿಂದ ಕರೆ ಬಂತು. ನನಗಾಗಿ ಆತ ಕಾಯುತ್ತಿದ್ದೇನೆ ಅಂತ ತಿಳಿಸಿದ್ದ. ಆತ ತುಂಬಾ ಒಳ್ಳೆಯ ಮನುಷ್ಯ. ನಾನು ಅವನ ಜೊತೆ ಹೋಗದಿದ್ದರೆ ಬಹುಶಃ ಆತನೂ ಆ ಪೂಜೆಗೆ ಹೋಗುವುದಿಲ್ಲ ಎಂದು ಅವನ ಮಾತಿನಿಂದ ತಿಳಿದಿತ್ತು. ಆಗಲೇ ಒಂದು ಜೊತೆ ಬಟ್ಟೆಯನ್ನಷ್ಟೇ ತೊಡಲು ಇಟ್ಟುಕೊಂಡು ಇರೋ ಬರೋ ಬಟ್ಟೆಗಳನ್ನು ಒಗೆಯಲು ನೀರಿನಲ್ಲಿ ನೆನೆ ಹಾಕಿದ್ದ ಕಾರಣ ಗೆಳೆಯನಿಗೆ ಏನು ಹೇಳಬೇಕು ಎಂದು ತಿಳಿಯಲಿಲ್ಲ. ಅತ್ತ ನನ್ನ ಉತ್ತರಕ್ಕಾಗಿ ಕಾಯುತ್ತಿದ್ದ ಗೆಳೆಯನಿಗೆ ನಮ್ಮ ಮನೆಯ ಹತ್ತಿರದಲ್ಲೇ ಶಾಪಿಂಗ್ ಸೆಂಟರ್ ಒಂದು ಇದ್ದ ಕಾರಣ ಮನದಲ್ಲಿ ಏನೋ ಎಣಿಸಿದವನೇ “ಆಯಿತು ಒಂದು ಗಂಟೆಯ ಒಳಗೆ ನಾನು ಬರುತ್ತೇನೆ” ಎಂದು ಹೇಳಿ ಫೋನಿಟ್ಟಿದ್ದೆ.

ಪೂಜೆಯ ಸಮಯಕ್ಕೆ ಹೋಗದೆ ಊಟದ ಸಮಯಕ್ಕೆ ಹೋದರೆ ಏನಂದುಕೊಂಡಾರೋ ಎಂದು ತಿಳಿದು ಆತುರಾತುರವಾಗಿ ಇರೋ ಬಟ್ಟೆಗಳಲ್ಲಿ ಹೆಚ್ಚು ಕೊಳೆಯಲ್ಲದ ಬಟ್ಟೆಯನ್ನು ತೊಟ್ಟು ಆ ಶಾಫಿಂಗ್ ಮಾಲ್ ನ ಕಡೆ ನಡೆದಿದ್ದೆ. ನನ್ನ ರೂಮಿನಿಂದ ಆಟೋದಲ್ಲಿ ಹೋದರೆ ಹತ್ತು ನಿಮಿಷದ ದೂರದಲ್ಲಿ ಆ ಶಾಪಿಂಗ್ ಮಾಲ್ ಇದೆ. ನಾಲ್ಕು ರೂಪಾಯಿ ಚಾರ್ಜಿನ ಶೇರಿಂಗ್ ಆಟೋ ಹತ್ತಿ ಆ ಶಾಫಿಂಗ್ ಮಾಲ್ ನ ಕಡೆ ನಡೆದು ಹೋದಾಗ ಶಾಫಿಂಗ್ ಮಾಲ್ ನ ಕೋಲಾಪ್ಸಿಂಗ್ ಡೋರ್ ಗಳು ಅರ್ಧ ತೆರೆದಂತೆ ಕಂಡಿದ್ದವು. ಅಲ್ಲೇ ಇದ್ದ ಸೆಕ್ಯುರಿಟಿ “ಗ್ಯಾರೋಟತೆ ಖುಲೇ (ಹನ್ನೊಂದಕ್ಕೆ ತೆರೆಯುತ್ತೆ)” ಎಂದಿದ್ದ. ಮೊಬೈಲ್ ನಲ್ಲಿ ಟೈಮ್ ನೋಡಿಕೊಂಡೆ 10.48 ಆಗಿತ್ತು. ಅಲ್ಲಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಮತ್ತೊಂದು ಬಿಗ್ ಬಜಾರ್ ಇದ್ದ ಕಾರಣ ಯಾಕೆ ಟೈಮ್ ವೇಸ್ಟ್ ಮಾಡೋದು ಅಲ್ಲಿಗೇ ಹೋಗೋಣ ಎಂದು ಮತ್ತೊಂದು ಶೇರಿಂಗ್ ಆಟೋದಲ್ಲಿ ಹೋಗಿ ಕುಳಿತ್ತಿದ್ದೆ. ಸೂಪರ್ ಆಗಿರೋ ಹುಡುಗಿಯೊಬ್ಬಳು ಪಕ್ಕ ಬಂದು ಕುಳಿತಳು. ನನ್ನ ತೋಳಿನಿಂದ ನನ್ನ ಮೂತಿ ಒರೆಸುವ ನಾಟಕ ಮಾಡಿ ನನ್ನ ಬಟ್ಟೆಯ ವಾಸನೆ ನೋಡಿಕೊಂಡೆ. ನಾಟ್ ಬ್ಯಾಡ್ ಅನಿಸಿತು. 🙂 ಫರ್ ಫ್ಯೂಮ್ ಅವು ಇವು ಅಂತ ಜೀವನದಲ್ಲೇ ಉಪಯೋಗಿಸಿ ಅಭ್ಯಾಸವಿಲ್ಲದ ನಾನು, ನಮ್ಮ ದೇಹಕ್ಕೆ ಅದರದ್ದೇ ಆದ ಒಂದು ಗಂಧವಿರುತ್ತದೆ. ಅದರಲ್ಲೂ ಹೆಚ್ಚು ದಿನ ಸ್ನಾನ ಮಾಡದೇ ಇದ್ದಾಗ ನಮ್ಮ ಮೈಯಿಂದ ಬರುವ ಗಂಡಸುತನದ ವಾಸನೆಯೇ ಬೇರೆ ಎಂದು ಬಲವಾಗಿ ನಂಬಿದವನು ನಾನು..

ಅದೇನೋ ಚಿತ್ರಗಳಿರುವ ಬಿಳಿ ಟೀ ಶರ್ಟ್ ತೊಟ್ಟಿದ್ದ ಕೆಂಚು ಕೆಂಚಾಗಿದ್ದ ಕೂಲಿಂಗ್ ಗ್ಲಾಸಿನಲ್ಲಿ ಇಡೀ ಪ್ರಪಂಚವನ್ನು ಕೂಲ್ ಆಗಿ ನೋಡುತ್ತಾ ಕಿವಿಗೆ ಹಾಕಿದ ಹೀಯರ್ ಫೋನಿನಲ್ಲಿ ಯಾರೊಂದಿಗೋ ಪಿಸುಗುಟ್ಟುತ್ತಿದ್ದಳು ಆ ಹುಡುಗಿ. ಅಷ್ಟೊಂದು ಮೆತ್ತಗೆ ಪಿಸುಗುಟ್ಟುವ ವಿದ್ಯೆಯನ್ನು ಹುಡುಗಿಯರಾದರು ಹೇಗೆ ಕಲಿಯುತ್ತಾರೆ ದೇವರೇ ಬಲ್ಲ ಎಂದುಕೊಂಡು ಮನದೊಳಗೆ ಏನೇನೋ ಲೆಕ್ಕ ಹಾಕ್ತಾ ಗೆಳತಿಯೊಬ್ಬಳಿಗೆ ಕರೆ ಮಾಡಿದ್ದೆ. “ಲೋ ಮಗ ನನ್ನ ಪಕ್ಕ ಒಂದು ಹುಡುಗಿ ಕುಳಿತವ್ಳೆ ಏನ್ ಸೂಪರ್ ಆಗಿ ಅವ್ಳೆ ಗೊತ್ತಾ? ಕಣ್ಣೆಲ್ಲಾ ಕಿರ್ ಗಾಯ್ತಾ ಅವೆ ಮಗ” ಅಂದಿದ್ದೆ. ಅತ್ತಲಿನ ನನ್ನ ಗೆಳತಿ ಬಿದ್ದು ಬಿದ್ದು ನಗ್ತಾ ಇದ್ದಳು. ಆ ನಗು ಕೇಳ್ತಾ ಇರೋದರ ಒಳಗೆ ಬಿಗ್ ಬಜಾರ್ ಅಂದಿದ್ದ ಆಟೋ ಡ್ರೈವರ್.. ಆಯ್ತು ಆಮೇಲೆ ಫೋನ್ ಮಾಡ್ತೀನಿ ಅಂತ ಫೋನಿಟ್ಟವನೇ ಬಿಗ್ ಬಜಾರ್ ನ ಒಳಗೆ ನುಗ್ಗಿ ಒಂದು ಅಂಗಿ (ಶರ್ಟು), ಎರಡು ಜೊತೆ ಕಾಲು ಚೀಲ (ಸಾಕ್ಸ್), ಎರಡು ಬನಿಯನ್, ಒಂದು ಇನ್ನರ್ ವೇರ್, ಒಂದು ಪಾಕೆಟ್ ಕೈ ಚೌಕ (ಕರ್ಚೀಪು 🙂 ) ವನ್ನು ಎತ್ತಿ ಮಕ್ಕರಿಯಂತ ಒಂದು ಪ್ಲಾಸ್ಟಿಕ್ ಬ್ಯಾಗಿನಲ್ಲಿ ಹಾಕಿಕೊಂಡವನೇ ಕ್ಯಾಸ್ ಕೌಂಟರ್ ಬಳಿ ಹೋಗಿದ್ದೆ.

ಅರ್ಧ ಲೀಟರ್ ನೀರಿನ ಬಾಟಲ್ ತೆಗೆದುಕೊಂಡು ಅದನ್ನು ಅರ್ಧ ಕುಡಿದು ಬಿಲ್ ಮಾಡಿಸಬೇಕು ಒಂದೇ ಐಟಮ್ ಇರೋದು ಅಂತ ಹುಡುಗಿಯೊಬ್ಬಳು ನನ್ನ ಹಿಂದೆ ಇದ್ದವಳು ನನ್ನ ಪರ್ಮಿಷನ್ ಇಲ್ಲದೆಯೇ ನನ್ನ ಮುಂದೆ ಬಂದು ನಿಂತಳು.. ಅವಳ ಮುಂದೆ ಮತ್ತೊಂದು ಹುಡುಗಿ ಲಿಪ್ ಸ್ಟಿಕ್ ಮತ್ತು ಐ ಲೈನರ್ ಗಳನ್ನು ಬಿಲ್ ಮಾಡಿಸಲು ಅವುಗಳನ್ನು ಕೈಯಲ್ಲಿ ಹಿಡಿದು ನಿಂತಿದ್ದಳು. ಅವಳ ಬಿಲ್ ಕಟ್ಟಲು ಕ್ಯಾಶ್ ಕೌಂಟರ್ ಎದುರು ಹುಡುಗನೊಬ್ಬ ತನ್ನ ಎಸ್ ಬಿ ಐ ಡೆಬಿಟ್ ಕಾರ್ಡ್ ಹಿಡಿದು ನಿಂತಿದ್ದ. ಅರ್ಧ ಲೀಟರ್ ನೀರಿನ ಬಾಟಲ್ ಅನ್ನು ಹೊರಗಡೆ ಯಾವುದಾದರು ಪುಟ್ಟ ಪೆಟ್ಟಿ ಅಂಗಡಿಯಲ್ಲಿ ತೆಗೆದುಕೊಂಡರೆ ಆಗ್ತಾ ಇರಲಿಲ್ವಾ ಈ ಹುಡುಗಿಗೆ. ಬಿಗ್ ಬಜಾರ್ ನ ಉದ್ದಾರ ಮಾಡಬೇಕು ಅಂದುಕೊಂಡು ಯಾಕೆ ಬಂದಳು ಅಂತ ನಾನು ಒಳಗೊಳಗೆ ಬಯ್ದುಕೊಳ್ಳುತ್ತಿರುವಾಗಲೇ ತನ್ನ ಸರದಿ ಬಂದಾಗ ಅರ್ಧ ಲೀಟರ್ ನೀರಿನ ಬಾಟಲ್ ನ ದುಡ್ಡು ತೆತ್ತು ಕ್ಯಾಶಿಯರ್ ಗೆ ಅದ್ಯಾವುದೋ ಕಾರ್ಡ್ ತೋರಿಸಿ “ನನ್ನದು ಗ್ರೀನ್ ಕಾರ್ಡಿದೆ” ಅಂತ ಹೇಳಿ ಬಿಲ್ ಜೊತೆ ಡಿಸ್ಕೌಂಟ್ ಪಡೀತ ಇದ್ದಳು. ಈಗಿನ ಜನರೇಷನ್ ಹುಡುಗಿಯರ ಪ್ರತೀಕದಂತಿದ್ದ ಅವಳ ಕಂಡು ನಾನು ಸುಸ್ತಾಗಿದ್ದೆ. ಶಾಪಿಂಗ್ ಮಾಲ್ ಗಳಲ್ಲಿ ಬಟ್ಟೆ ಬರೆ ತೆಗೆದುಕೊಳ್ಳಲು ಹಿಂದು ಮುಂದು ನೋಡೋ ನಾನು ವಿಧಿಯಿಲ್ಲದೇ ಆವತ್ತು ಆತುರಾತುರವಾಗಿ ಬಿಗ್ ಬಜಾರ್ ಗೆ ಬಂದವನೇ ಯಾಕೋ ಹುಡುಗಿಯರನ್ನು ಮತ್ತು ಈ ದೃಶ್ಯಗಳನ್ನೆಲ್ಲಾ ನೋಡಿ ಕೂಲ್ ಆಗಿದ್ದೆ.

ಖರೀದಿಸಿದ ವಸ್ತುಗಳಿಗೆ ತೆಗೆದುಕೊಂಡಿದ್ದಲ್ಲದೇ ಅವುಗಳನ್ನು ಪ್ಯಾಕ್ ಮಾಡಿದ್ದ ಪ್ಲಾಸ್ಟಿಕ್ ಕವರ್ ಗೂ ಸಹ ಐದು ರೂಪಾಯಿ ತೆತ್ತು ಹವಾ ನಿಯಂತ್ರಿತ ಬಿಗ್ ಬಜಾರ್ ನಿಂದ ಹೊರಬಿದ್ದಾಗ ಅಲ್ಲೇ ಪಕ್ಕದಲ್ಲೇ ಇದ್ದ ಅದೇನೋ ಮಲ್ಟಿಪ್ಲೆಕ್ಸ್ ಅಂತಾರಲ್ಲ ಅಲ್ಲಿ ಫಿಲಂ ನೋಡಲು ಹುಡುಗ ಹುಡುಗಿಯರ ದಂಡು ನಿಂತಿತ್ತು. ಅವರಲ್ಲಿ ಯಾರೋ ಐಸ್ ಕ್ರೀಂ ತಿನ್ತಾ ಇದ್ರೆ ಇನ್ಯಾರೋ ಚಾಕೋಲೇಟ್ ಕೈಯಲ್ಲಿ ಹಿಡಿದಿದ್ದರು. ಮತ್ಯಾರೋ ಹುಡುಗಿ ಫೋನಿನಲ್ಲಿ ಯಾರಿಗೋ ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಳ್ತಾ ಇದ್ದಳು. ಅಲ್ಲೇ ಕ್ವಾಲಿಟಿ ಐಸ್ ಕ್ರೀಂ ನ ತಳ್ಳು ಗಾಡಿಯ ಎದುರಿಗೆ ಬರುವ ಅಪ್ಸರೆಯಂತಹ ಹುಡುಗಿಯ ನೋಡ್ತಾ ನಾನು ಮೈ ಮರೆತು ನಡೆಯುತ್ತಿರುವಾಗಲೇ ನನ್ನ ಫೋನ್ ರಿಂಗ್ ಆಗಿತ್ತು. ಫೋನ್ ಅಟೆಂಡ್ ಮಾಡಿ ಗೆಳೆಯನಿಗೆ “ಇನ್ನೊಂದ್ ಅರ್ಧ ಗಂಟೇಲಿ ಬಂದೆ ಇರಿ” ಎಂದು ಹೇಳಿ ಫೋನಿಟ್ಟು ಆಟೋ ಹತ್ತಿ ಮನೆ ಕಡೆಗೆ ಹೊರಟಿದ್ದೆ. ಆಟೋದಲ್ಲಿ ಮನೆಗೆ ಹೋಗುವ ದಾರಿಯಲ್ಲಿ “ಮನೆಯಿಂದ ಬರುವಾಗಲೇ ಶೂ ಹಾಕಿಕೊಂಡು ಬಂದಿದ್ದರೆ ಅಲ್ಲೇ ಬಿಗ್ ಬಜಾರ್ ನ ಟ್ರೈಯಲ್ ರೂಮ್ ಒಳಗೆ ಬಟ್ಟೆ ಬದಲಿಸಿಕೊಂಡು ರೆಡಿಯಾಗಿ ಸೀದಾ ಅಲ್ಲಿಂದಲೇ ವಿಶ್ವ ಕರ್ಮ ಪೂಜೆಗೆ ಹೋಗಬಹುದಿತ್ತಲ್ಲಾ” ಎನಿಸಿದರೂ, ಆ ಅರ್ಧ ಲೀಟರ್ ನೀರಿನ ಮೇಲೆ ಐವತ್ತು ಪೈಸೆ ಉಳಿಸೋ ಆ ಹುಡುಗಿಗೆ ಇರೋ ಮೆದುಳು ನನಗಿದ್ದಿದ್ದರೆ ಅಂತ ಯೋಚಿಸುತ್ತಾ ಇರುವಾಗ ಆಟೋ ಡ್ರೈವರ್ “ನಂಬೂನ್ ಲಾಸ್ಟ್ ಸ್ಟಾಪ್ (ಇಳಿಯಿರಿ ಕೊನೆಯ ಸ್ಟಾಪ್)” ಎಂದಿದ್ದ.. 😀

ಸಹೃದಯಿ ಓದುಗ ಗೆಳೆಯರಿಗೆಲ್ಲಾ ಮುಂಚಿತವಾಗಿ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.. ಜೈ ಕನ್ನಡಾಂಬೆ..

‍ಲೇಖಕರು G

31 October, 2012

2 Comments

  1. amardeep.p.s.

    ನಟ್ಟು ರವರೆ, ನಿಮಗೂ ಮುಂಗಡವಾಗಿ ಕನ್ನಡ ರಾಜ್ಯೋತ್ಸವ ಶುಭಾಶಯಗಳು.

  2. Raghunandan K

    ನಿಮ್ಮ ಮದುವೆಗೆ ಮಕ್ಕಳ ಸಂಖ್ಯೆನೆ ಜಾಸ್ತಿ ಅಂತೀರಾ, ಬಾಲ್ಯದ ಕನವರಿಕೆಗಳಿಂದ ಆಚೆ ಬಂದು ವರ್ತಮಾನದ ಸೊಗಸುಗಾರಿಕೆಯನ್ನ ವರ್ಣಿಸಿದ್ದೀರಿ, ಚೆನ್ನಾಗೇ ಇದೆ ಆತುರದ ಕ್ಷಣಗಳ ಸವಿ,

    ಕನ್ನಡ ರಾಜ್ಯೋತ್ಸವದ ಶುಭಾಷಯ ನಿಮಗೂ, ನಿಮ್ಮ ಬಂಗಾಳಿ ಹುಡುಗಿಯರಿಗೂ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading