ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಲ್ಮೆಯಿಂದ ನಟರಾಜು : ಬನ್ನಿ ಗೋಲಿ ಆಟ ಆಡೋಣ…

ಬನ್ನಿ ಗೋಲಿ ಆಟ ಆಡೋಣ… 🙂 ಕಾಲ ಕಾಲಕ್ಕೆ ಮಳೆ ಬರದಿದ್ದರೂ ಹಬ್ಬಗಳಂತೂ ಪ್ರತಿ ಬಾರಿ ನಮಗೆ ಬೇಕಾಗಲಿ ಬೇಡದೆ ಇರಲಿ ಬಂದು ನಮ್ಮ ಮುಂದೆ ನಿಲ್ಲುತ್ತವೆ. ಹಬ್ಬಗಳು ಎದುರು ಬಂದು ನಿಂತಾಗಲೆಲ್ಲಾ ಹಬ್ಬ ಎಂದರೆ ಮಳೆ ಇದ್ದ ಹಾಗೆ ಅನಿಸುತ್ತೆ. ಮಳೆ ಬಂತೆಂದರೆ ಮಣ್ಣಿನಿಂದೇಳುವ ಘಮದಂತೆ ಹಬ್ಬದ ದಿನದ ಕಂಪನು ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಅನುಭವಿಸುತ್ತಾರೆ. ಪ್ರಕೃತಿಯ ವೈಚಿತ್ರದಂತೆ ಒಂದು ಜಾಗದಲ್ಲಿ ಬೀಳುವ ಮಳೆ ಮತ್ತೊಂದು ಜಾಗದಲ್ಲಿ ಬೀಳೋದಿಲ್ಲ. ಅಂದರೆ ಒಂದು ಊರಿನಲ್ಲೋ ರಾಜ್ಯದಲ್ಲೋ ದೇಶದಲ್ಲೋ ಮಾಡುವ ಹಬ್ಬವನು ಜನ ಬೇರೆ ಊರಿನಲ್ಲಿ ರಾಜ್ಯದಲ್ಲಿ ದೇಶದಲ್ಲಿ ಮಾಡುವುದಿಲ್ಲ. ಎಲ್ಲಾ ಮಳೆಗಳಿಗೂ ಒಂದೊಂದು ವೈಶಿಷ್ಟತೆ ಇರುವಂತೆ ಹಬ್ಬಗಳಲ್ಲೂ ಎಷ್ಟೊಂದು ವೈಶಿಷ್ಟತೆ ಇರುತ್ತದೆ. ಎಷ್ಟೆಲ್ಲಾ ಜನ ಮಳೆ ಬರಲಿ ಎಂದು ಕಾದು ಕುಳಿತವರಂತೆ ಹಬ್ಬಕ್ಕಾಗಿ ಕಾದು ಕುಳಿತಿರುತ್ತಾರೆ. ಹಾಗೆ ಕಾದು ಕುಳಿತವರಂತೆ ಈ ಹಾಳಾದ್ ಮಳೆ ಬರದೆ ಇದ್ದರೆ ಸಾಕಪ್ಪ ಅನ್ನುವ ಹಬ್ಬಗಳನ್ನು ಸ್ವಾಗತಿಸದ ಜನರೂ ನಮ್ಮ ನಡುವೆ ಇರುತ್ತಾರೆ. ದೊಡ್ಡವರು ಮಳೆಯನ್ನು ಹಬ್ಬವನ್ನು ಇಷ್ಟಪಡುತ್ತಾರೋ ಇಲ್ಲವೋ ಚಿಕ್ಕ ಹುಡುಗರಂತೂ ಹಬ್ಬಗಳನ್ನು ಇನ್ನಿಲ್ಲದಂತೆ ಇಷ್ಟಪಡುತ್ತಾರೆ ಮತ್ತು ಸಂಭ್ರಮಿಸುತ್ತಾರೆ. ನಾನು ಚಿಕ್ಕವನಿದ್ದಾಗ ಹಬ್ಬದ ಸಮಯಗಳಲ್ಲಿ ನಮ್ಮೂರಿನಲ್ಲಿ ಕಾಸಿನ ಆಟ ತುಂಬಾ ಫೇಮಸ್. ಕಾಸಿನ ಆಟಗಳೆಂದರೆ ಆಗ ನಮಗೆ ಸಣ್ಣ ಪುಟ್ಟ ಜೂಜಾಟಗಳು. ನಾವು ದುಡ್ಡು ಕಟ್ಟಿಕೊಂಡು ಜೂಜಾಟಗಳನ್ನು ಕಲಿಯಲು ಶುರು ಮಾಡುವುದು ಬಹುಶಃ ಇಂಗ್ಲೀಷ್ ನಲ್ಲಿ ಹೆಡ್ ಅಂಡ್ ಟೇಲ್ ಎಂದು ಕರೆಯುವ ರಾಜ ರಾಣಿ ಎಂಬ ಎಲ್ಲರಿಗೂ ಗೊತ್ತಿರುವ ಆಟದಿಂದಲೇ ಅನಿಸುತ್ತೆ. ರಾಜ ರಾಣಿ ಆಟವನ್ನು ಹೇಗೆ ಆಡೋದು ಎಂದು ಎಲ್ಲರಿಗೂ ಗೊತ್ತಿರುವ ವಿಷಯವೇ. ನಾವು ಹುಡುಗರಿದ್ದಾಗ ರಾಜ ರಾಣಿ ಆಟ ಆಡಿ ಬೇಜಾರಾಗಿರೋರು. ರಾಜ ರಾಣಿ ಆಟದಲ್ಲಿ ಸೋತುಬಿಡುತ್ತೇವೆ ಅನ್ನೋ ಭಯ ಇರೋರು ಆಡುತ್ತಿದ್ದ ಆಟ ಎಂದರೆ ಕಾಸಿನಲ್ಲಿರುವ ಇಸವಿಗಳನ್ನು ಕಂಡು ಹಿಡಿಯುವ ಆಟ. ಕಾಸಿನ ಕೊನೆಯ ಅಂಕಿಯನ್ನು ಹೆಬ್ಬೆರಳಿನಿಂದ ಮುಚ್ಚಿ ಹಿಡಿದು ಕೊನೆಯ ಅಂಕಿಯ ಪಕ್ಕದ ಅಂಕೆಯನ್ನಷ್ಟೇ ಹೇಳಿ ಕೊನೆಯ ಸಂಖ್ಯೆಯನ್ನು ಊಹಿಸಿವಂತೆ ಮಾಡುವ ಆಟಕ್ಕೆ ಇಸವಿ ಹೇಳೋ ಆಟ ಎನ್ನುತ್ತಿದ್ದೆವು. ಉದಾಹರಣೆಗೆ ಇಸವಿ 1985 ಎಂದು ಕಾಸಿನ ಮೇಲೆ ಇತ್ತು ಎಂದಿಟ್ಟುಕೊಳ್ಳೋಣ. ಆಗ ಕೊನೆಯ ಅಂಕಿಯಾದ ಐದನ್ನು ಮುಚ್ಚಿ ಹಿಡಿದು “ಪಕ್ಕ 8” ಎಂದೇಳಬೇಕಿತ್ತು. ಎಂಟರ ಪಕ್ಕದ ಅಂಕಿ 5 ಎಂದು ಉತ್ತರ ನಮ್ಮ ಜೊತೆ ಆಟವಾಡುತ್ತಿರುವವರಿಂದ ಬಂದರೆ ಅದು ಸರಿ ಉತ್ತರವಾಗಿರುತ್ತಿತ್ತು. ಹೀಗೆ ರಾಜ ರಾಣಿ, ಪಕ್ಕ ಏಳು ಎಂಟು ಎಂದು ಇಸವಿಗಳ ಕಂಡು ಹಿಡಿಯುವ ಆಟಗಳಿಂದ ಶುರುವಾದ ನಮ್ಮ ಜೂಜಾಟಗಳು ಒಂಚೂರು ನಾವು ಬೆಳೆಯುತ್ತಿದ್ದಂತೆ ಗೋಲಿಯ ಆಟಗಳವರೆಗೆ ಹಬ್ಬಿದ್ದವು. ಗೋಲಿಯ ಆಟಗಳಲ್ಲಿ ಎಷ್ಟೊಂದು ಆಟಗಳಿದ್ದರೂ, ಮೀರಿ ಮತ್ತು ಅಂಡಾ ನಮ್ಮ ಕಡೆ ತುಂಬಾ ಫೇಮಸ್ ಆಗಿದ್ದವು.. ಹಿಂದಿಯಲ್ಲಿ ಅಂಡಾ ಎಂದರೆ ಕೋಳಿಮೊಟ್ಟೆ. ಕನ್ನಡದಲ್ಲಿ ಕೋಳಿಮೊಟ್ಟೆ ಎಂಬುದರ ಮತ್ತೊಂದು ಅರ್ಥ ಸೊನ್ನೆ. ಗೋಲಿ ಆಟದಲ್ಲಿ ಅಂಡಾ ಎಂದರೆ ವೃತ್ತ. ಈ ಆಟದಲ್ಲಿ ಒಂದು ದೊಡ್ಡ ವೃತ್ತವನ್ನು ಬರೆದು ಅದರ ಒಳಗೆ ಮೂರು ಕಡೆ ಗೆರೆ (ಜ್ಯಾ ರೇಖೆ)ಗಳನ್ನು ಎಳೆಯುತ್ತಿದ್ದೆವು. ವೃತ್ತದಿಂದ ಒಂದು ಒಂದು ಮೊಳ ದೂರದಲ್ಲಿ ಮತ್ತೊಂದು ಗೆರೆ ಎಳೆಯುತ್ತಿದ್ದೆವು. ಆ ವೃತ್ತದ ಮುಂದಿರುವ ಗೆರೆಯ ಒಂದತ್ತು ಹೆಜ್ಜೆ ದೂರದಿಂದ ಗೋಲಿಗಳನ್ನು ಆ ಗೆರೆಯ ಬಳಿ ಎಸೆದರೆ ಗೆರೆಯ ಅತಿ ಸಮೀಪ ಇರುವವರು ಮೊದಲು ಆಟ ಆಡಬೇಕಿತ್ತು. ಅದರ ನಂತರದವನು ಎರಡನೆಯವನು. ಗೆರೆಯಿಂದ ಹೊರಗೆ ಗೋಲಿ ಎಸೆದವರು ಕೊನೆಯಲ್ಲಿ ಆಡಬೇಕಿತ್ತು. ಗೆರೆಯಿಂದ ಹೊರಗೆ ತುಂಬಾ ಜನ ಹೋದರೆ ಅವರಲ್ಲೂ ರ್ಯಾಕಿಂಗ್ ಇರುತ್ತಿತ್ತು. ನಾನ್ ಪಸ್ಟು, ನಾನ್ ಸೆಕೆಂಡ್ ಇವನು ಲಾಸ್ಟು ಅನ್ನೋ ಮಾತುಗಳು ಆಗ ಕೇಳಿ ಬರುತ್ತಿದ್ದವು. ವೃತ್ತದ ಮುಂದೆ ಬರೆದ ಗೆರೆಯ ಹಿಂದೆ ಕುಳಿತು ಪ್ರತಿ ಆಟಗಾರರು ನೀಡುವ ಎರಡೋ ಮೂರೋ ಗೋಲಿಗಳನ್ನು ಒಟ್ಟು ಮಾಡಿ ವೃತ್ತದೊಳಗೆ ಎಸೆಯಬೇಕಿತ್ತು. ಹಾಗೆ ಎಸೆದಾಗ ವೃತ್ತದಿಂದ ಹೊರಗೆ ಹೋದ ಮತ್ತು ವೃತ್ತದ ಒಳಗಿರುವ ಗೆರೆಗಳ ಮೇಲೆ ಕುಳಿತ ಗೋಲಿಗಳನ್ನು ತಮಗಿಷ್ಟ ಬಂದ ಕಡೆ ಇತರ ಆಟಗಾರರು ಇಡುತ್ತಿದ್ದರು. ಅವರು ತೋರಿಸಿದ ಗೋಲಿಯ ಬಿಟ್ಟು ಅಂದರೆ “ಇದ ಬಿಟ್ಟು” ಎಂದು ಹೇಳಿದರೆ ಬೇರೆ ಗೋಲಿಗಳಿಗೆ ಟಚ್ ಆಗದ ಹಾಗೆ ತೋರಿಸಿದ ಗೋಲಿಯನ್ನು ಮತ್ತೊಂದು ಗೋಲಿಯಿಂದ ವೃತ್ತದಿಂದ ಹೊರಗೆ ಹೋಗುವಂತೆ ಮಾಡಿದರೆ ವೃತ್ತದೊಳಗಿರುವ ಗೋಲಿಗಳನ್ನು ಗೆದ್ದಂತೆ. ಆಕಸ್ಮಾತ್ ಹಾಗೆ ಹೊಡೆಯುವಾಗ ಒಂದಕ್ಕಿಂತ ಹೆಚ್ಚು ಗೋಲಿಗಳಿಗೆ ಹೊಡೆಯುವ ಗೋಲಿ ಸೋಕಿದರೆ ಒಂದು ಗೋಲಿಯನ್ನು ಫೈನ್ ತರಹ ಕಟ್ಟಬೇಕು. ಹೀಗೆ ಗೋಲಿಯ ಗೆಲ್ಲುವ ಆಟಕ್ಕೆ ಅಂಡಾ ಎನ್ನುತ್ತಿದ್ದೆವು.. ಇಲ್ಲಿ ಗೆಲ್ಲುತ್ತಿದ್ದುದು ಗೋಲಿಗಳನ್ನು ಮಾತ್ರ. ಕಾಸನ್ನಲ್ಲ. ಕಾಸು ಬೇಕಾದರೆ ಹೆಚ್ಚು ಗೋಲಿಗಳಿರುವವರು ಗೋಲಿಗಳ ಮಾರಿಕೊಳ್ಳಬಹುದಿತ್ತು. ಅಂಡಾ ದ ಹಾಗೆ ಮತ್ತೊಂದು ಆಟ ಮೀರಿ.. ಮೀರಿ ಎಂಬ ಪದದ ಅರ್ಥ ನನಗೆ ಗೊತ್ತಿಲ್ಲ. ಆ ಆಟವನ್ನು ಆಡುವುದು ಹೇಗೆಂದರೆ.. ಮನೆಯ ಹತ್ತಿರ ಕ್ರಿಕೆಟ್ ಆಡುವಾಗ ಮನೆಯ ಗೋಡೆಯನ್ನು ಚೆಂಡು ತಡೆಯಲು ಬಳಸುತ್ತಾರಲ್ಲ ಹಾಗೆ ಎಸೆದ ಗೋಲಿಗಳ ತಡೆಯಲು ನಮ್ಮೂರಿನ ಕೆಲವು ಮನೆಗಳ ಹಿತ್ತಲಿನ ಗೋಡೆಗಳನ್ನು ಮೀರಿ ಆಟ ಆಡಲು ಬಳಸುತ್ತಿದ್ದೆವು. ಮೀರಿ ಆಟದಲ್ಲಿ ಎಸೆಯಲು ಎರಡು ಗೋಲಿ ಮತ್ತು ಎಸೆದ ಗೋಲಿಗಳಲ್ಲಿ ಒಂದು ಗೋಲಿಯನ್ನು ಹೊಡೆಯಲು ಒಂದು ದಪ್ಪ ಗೋಲಿಯನ್ನು ಉಪಯೋಗಿಸುತ್ತಿದ್ದೆವು. ಮೀರಿಯ ಆಟಕ್ಕೆಂದು ಗೋಡೆಯ ಮಗ್ಗುಲಲ್ಲಿ ಒಂದು ಚೌಕಾಕಾರದ ಆಕೃತಿ ಬರೆದು ಅದರ ಒಳಗೆ ಮೂರು ಸಣ್ಣ ಗುಳಿಗಳನ್ನು ನಮ್ಮ ಕಡೆಯ ಭಾಷೆಯಲ್ಲಿ ಹೇಳುವಂತೆ ಬದ್ದುಗಳನ್ನು ತೋಡುತ್ತಿದ್ದೆವು. ಆ ಚೌಕಾಕೃತಿಯಿಂದ ಒಂದಷ್ಟು ದೂರದಲ್ಲಿ ನಿಂತು ಎರಡು ಗೋಲಿಗಳನ್ನು ಚೌಕಾಕೃತಿಯೊಳಗೆ ಎಸೆದಾಗ ಗೋಲಿ ಗುಳಿ ತುಂಬಿದರೆ ದುಡ್ಡು. ಎರಡು ಗುಳಿ ತುಂಬಿದರೆ ಡಬಲ್ ದುಡ್ಡು. ಒಂದು ಗುಳಿ ತುಂಬಿದ್ದಾಗ ಎದುರಾಳಿ ತೋರಿಸಿದ ಮತ್ತೊಂದು ಗೋಲಿಯನ್ನು ಹೊಡೆದರೆ ಡಬಲ್ ದುಡ್ಡು. ಗುಳಿ ತುಂಬದಿದ್ದರೂ ಎದುರಾಳಿ ತೋರಿಸಿದ ಗೋಲಿ ಹೊಡೆದರೆ ದುಡ್ಡು. ಎಸೆದ ಎರಡು ಗೋಲಿಗಳಲ್ಲಿ ಒಂದು ಗೋಲಿ ಚೌಕಾಕಾರದ ಆಕೃತಿಯ ಒಳಗೂ ಮತ್ತೊಂದು ಹೊರಗೂ ಉಳಿದರೆ ಎದುರಾಳಿ ಹೊರಗೆ ಉಳಿದ ಗೋಲಿಯನ್ನು ಚೌಕಾಕೃತಿಯ ಗೆರೆಯ ಮೇಲೆ ಇಟ್ಟುಬಿಡುತ್ತಿದ್ದ. ಗೆರೆಯ ಮೇಲೆ ಇಟ್ಟ ಗೋಲಿಯನ್ನು ಹೊಡೆಯಲು ಹೋಗಿ ಹೊಡೆಯುವ ಗೋಲಿ ಚೌಕಾಕಾರದ ಗೆರೆಯ ಹೊರಗೆ ಬಿದ್ದರೆ, ಅಥವಾ ಹೊಡೆಯುವ ಗೋಲಿ ಗೆರೆಯ ಮೇಲೆ ಹೋಗಿ ನಿಂತುಬಿಟ್ಟರೆ ಎದುರಾಳಿಗೆ ದುಡ್ಡು. ಎಸೆದ ಎರಡೂ ಗೋಲಿಗಳು ಚೌಕಾಕಾರದ ಹೊರಗೆ ಉಳಿದರೆ ಹೊಡೆಯುವ ಗೋಲಿಯಿಂದ ಗುಳಿ ತುಂಬಿಸದಿದ್ದರೆ ಎದುರಾಳಿಗೆ ದುಡ್ಡು. ಗೋಲಿ ಆಟದಲ್ಲಿ ಎಳೆಯುತ್ತಿದ್ದ ಗೆರೆಗಳಿಗೆ ಪಟ್ಟೆ ಎನ್ನುತ್ತಿದ್ದರು. ಗೋಲಿಗಳ ಒಳಗೆ ಸಾಮಾನ್ಯವಾಗಿ ಒಂದು ಹೂವಿನಂತಹ ಅರ್ಧ ಚಂದ್ರಾಕೃತಿ ಚಿತ್ರವಿರುತ್ತದೆ. ಗೋಲಿಗಳ ಒಳಗೆ ಆ ಹೂ ಇಲ್ಲದಿದ್ದರೆ ಆ ಗೋಲಿಗೇನೋ ಹೆಸರಿತ್ತು ಆ ಹೆಸರು ಮರೆತು ಹೋಗಿದೆ. ಮೀರಿಯಲ್ಲಿ ಹೊಡೆಯಲು ಬಳಸುತ್ತಿದ್ದ ದಪ್ಪ ಗೋಲಿಗೂ ಒಂದು ಹೆಸರಿತ್ತು. ಅದೂ ಮರೆತು ಹೋಗಿದೆ. ಹೀಗೆ ಗೋಲಿಯಾಟವಾಡುತ್ತಿದ್ದ ಸಮಯದಲ್ಲಿ ಬಳಸುತ್ತಿದ್ದ ಎಷ್ಟೋ ಪದಗಳು ಈಗ ಮರೆತು ಹೋಗಿವೆ. ಗೋಲಿ ಆಡುವಾಗ ಗಾಜಿನ ಗೋಲಿಗಳು ಕಲ್ಲು ತಗುಲಿ ಚಿಪ್ಪಾಗುತ್ತಿದ್ದವು. ಕೆಲವು ಗೋಲಿಗಳಂತೂ ಎಷ್ಟೋ ಹೋಳಾಗಿಬಿಡುತ್ತಿದ್ದವು. ಸಣ್ಣ ಸಣ್ಣ ಗೋಲಿಗಳಿಂದ ಶುರುವಾಗಿದ್ದ ಮೀರಿ ಆಟ ದಪ್ಪ ಗೋಲಿ ಉಪಯೋಗಿಸಿ ಇಲ್ಲವೆಂದರೆ ಸ್ಟೀಲ್ ಗೋಲಿಗಳನ್ನು ಉಪಯೋಗಿಸಿ ಆಡುವವರೆಗೆ ಮುಂದುವರೆದಿತ್ತು.. ಹುಡುಗರ ಹಾಗೆ ಹುಡುಗಿಯರು ಗೋಲಿ ಆಟವನ್ನು ಅಷ್ಟು ಆಡುತ್ತಿರಲಿಲ್ಲ. ಚಿಕ್ಕ ವಯಸ್ಸಿನಲ್ಲಿ ಹುಡುಗಿಯರು ಆಡುತ್ತಿದ್ದ ಆಟಗಳು ತುಂಬಾನೆ ಇವೆಯಾದರೂ ಅಚ್ಚರಿಯೆಂಬಂತೆ ಕೆಲವು ಹುಡುಗಿಯರು ಅಪ್ಪ ಅಮ್ಮ ಬೈದರೂ ಸರಿ ಹುಡುಗರ ಜೊತೆ ಕಾಸಿನಾಟವನ್ನು, ಗೋಲಿಯಾಟವನ್ನು ಆಡುತ್ತಿದ್ದರು. ಅಂತಹ ಹುಡುಗಿಯರು ಕಲಿಸಿದ ಒಂದು ಆಟವೆಂದರೆ ಚೂರಾದ ಬಣ್ಣದ ಬಣ್ಣದ ಬಳೆಗಳ ಉಪಯೋಗಿಸಿ ಆಡುವ ಸೆಟ್ ಆಟ. ಬಳೆಗಳ ಸೆಟ್ ಆಟ ಎಂದರೆ ಒಂದು ಬಣ್ಣದ ಬಳೆಯ ಚೂರನ್ನು ಒಬ್ಬರು ಮುಂದಿಟ್ಟಾಗ ಅದೇ ಬಣ್ಣದ ಬಳೆಯ ಚೂರನ್ನು ಎದುರಾಳಿ ಇಡಬೇಕು. ಎದುರಾಳಿ ಇಟ್ಟ ಬಣ್ಣಗಳು ಒಂದೇ ಆದಾಗ ಒಂದೇ ಬಣ್ಣದ ಎರಡು ಬಳೆಯ ಚೂರುಗಳು ಎದುರಾಳಿಗೆ ಸೇರುತ್ತಿದ್ದವು. ಹೀಗೆ ಚಿಕ್ಕವರಿದ್ದಾಗ ಬಣ್ಣದ ಬಳೆಗಳ ಚೂರುಗಳಿಂದ ಕಲಿತ ಸೆಟ್ ಆಟವನ್ನು ಮುಂದೆ ಇಸ್ಪೀಟ್ ಆಟದಲ್ಲಿ ಸೆಟ್ ಆಡುವುದಕ್ಕೆ ಉಪಯೋಗಿಸಿಕೊಂಡಿದ್ದೆವು. ದೊಡ್ಡವರು ಅಲ್ಲಿ ಇಲ್ಲಿ ಮುಚ್ಚಿಟ್ಟಿರುವ ಇಸ್ಪೀಟ್ ಎಲೆಗಳ ಕದ್ದು ತಂದು ಇಸ್ಪೀಟಿನಲ್ಲಿ ಸೆಟ್ ಆಡುವುದೇ ಒಂತರಾ ಮಜವಾಗಿರುತ್ತಿತ್ತು. ಆಗೆಲ್ಲಾ ಇಸ್ಪೀಟ್ ಆಟದಲ್ಲಿ ನಾವು ಕಟ್ಟಿಕೊಳ್ಳುತ್ತಿದ್ದ ಜೂಜಿನ ಹಣ ತುಂಬಾ ಕಮ್ಮಿ ಇರುತ್ತಿತ್ತು. ಅಂದರೆ ಹತ್ತು ಪೈಸವೋ, ಇಪ್ಪತ್ತು ಪೈಸವೋ, ನಾಲ್ಕಾಣೆಯೋ ಇರುತ್ತಿತ್ತು. ಆ ಸಣ್ಣ ಮೊತ್ತವನ್ನು ಗೆಲ್ಲುವುದರಲ್ಲಿ ಒಂತರಾ ಖುಷಿ ಇರುತ್ತಿತ್ತು. ನಾನು ಒಂದಿಷ್ಟು ದೊಡ್ಡವನಾಗುತ್ತಿದ್ದಂತೆ ನಾನು ನೋಡಿದ ಸೆಟ್ ಆಟದ ಮುಂದಿನ ಹಂತ ಎಂದರೆ ಅಂದರ್ ಬಾಹರ್ ಆಟ ಎನ್ನಬಹುದು. ಅಂದರ್ ಬಾಹರ್ ಹೇಗೆ ಆಡೋದು ಎಂದು ಹೆಚ್ಚು ಜನಕ್ಕೆ ಗೊತ್ತಿರುತ್ತದೆ. ಕನಕಪುರದಂತಹ ಪಟ್ಟಣಗಳಲ್ಲಿ ಒಂದು ಕಾಲಕ್ಕೆ ಸಾವಿರ ಸಾವಿರ ರೂಪಾಯಿಗಳನ್ನು ಹಬ್ಬದ ದಿನಗಳಲ್ಲಿ ಜೂಜಿನಲ್ಲಿಟ್ಟು ಜನ ಅಂದರ್ ಬಾಹರ್ ಆಡಿ ದುಡ್ಡು ಕಳೆದುಕೊಂಡು ವಾಚು ಉಂಗುರ ಸರ ಕೊನೆಗೆ ಹಾಕಿಕೊಂಡಿರೋ ಬಟ್ಟೆಯನ್ನು ಸಹ ಅಡವಿಟ್ಟು ಆ ಆಟ ಆಡುತ್ತಿದ್ದ ಕತೆಗಳನ್ನು ಕೇಳಿದಾಗ ಅಂದರ್ ಬಾಹರ್ ನಂತಹ ಡೇಂಜರ್ ಆಟ ಈ ಪ್ರಪಂಚದಲ್ಲಿ ಇಲ್ಲ ಅಂತ ಅನಿಸುತ್ತಿತ್ತು. ನಾವು ಹುಡುಗರಾಗಿದ್ದಾಗ ಸುಮ್ಮನೆ ಟೈಮ್ ಪಾಸ್ ಗೆ ಅಂದರ್ ಬಾಹರ್ ಆಡಿದ್ದೇವಾ ಹೊರತು ಆ ಆಟವನ್ನು ಜೂಜಿನಂತೆ ಆಡಿದವರಲ್ಲ.. ನಮ್ಮೂರಿನಲ್ಲಿ ದೊಡ್ಡವರು ಆಡುತ್ತಿದ್ದ ಮತ್ತೊಂದು ಫೇಮಸ್ ಜೂಜಾಟ ಎಂದರೆ ಮೂರು ಎಲೆಗಳ ಪರಲ್ ಆಟ. ಅದನ್ನೂ ಚಿಕ್ಕ ವಯಸ್ಸಿನಲ್ಲಿ ಕಲಿತು. ಹಬ್ಬದ ದಿನಗಳಲ್ಲಿ ಪರಲ್ ನಿಂದ ಒಂದಷ್ಟು ದುಡ್ಡು ಗೆದ್ದ ಕ್ಷಣಗಳು ಇನ್ನೂ ನೆನಪಿವೆ. ದೊಡ್ಡವರಾದ ಮೇಲೆ ಆಡಿದ ಇಸ್ಪೀಟ್ ಆಟ ಅದರಲ್ಲೂ ರಮ್ಮಿಯ ಕುರಿತು ಏನೇನೋ ಬರೆಯಬಹುದು. ಹೀಗೆ ಕಾಸಿನಾಟಗಳಿಂದ ಶುರುವಾದ ನಮ್ಮ ಬಾಲ್ಯಗಳು ಗೋಲಿ ಆಟದಲ್ಲಿ ಮುಂದುವರೆದು ಇಸ್ಪೀಟ್ ಆಟವನ್ನು ಸಹ ತಲುಪಿದ ನೆನಪುಗಳು ಎಷ್ಟೊಂದು ಇವೆ. ನಮ್ಮ ಹಬ್ಬದ ದಿನಗಳಲ್ಲಿ ನಮ್ಮೂರುಗಳಲ್ಲಿ ನಾವು ಹುಡುಗರು ಹೀಗೆಲ್ಲಾ ಆಟಗಳನ್ನು ಆಡಿ ಬೆಳೆದು ಬಂದಿದ್ದೇವೆ. ಹಬ್ಬಗಳು ಬರುತ್ತವೆ ಹೋಗುತ್ತವೆ ಆದರೆ ಯಾಕೋ ಅವುಗಳ ನೆನಪು ಎಂದಿಗೂ ಮಾಸುವುದಿಲ್ಲ. ನನಗೆ ಹಬ್ಬಗಳೆಂದರೆ ಈ ಸಣ್ಣ ಪುಟ್ಟ ಜೂಜಾಟಗಳು ಸಹ ನೆನಪಾಗುತ್ತವೆ.. ಒಮ್ಮೊಮ್ಮೆ ಯೋಚಿಸಿದರೆ ನಮ್ಮ ಹಬ್ಬಗಳು ಬಹುಶಃ ಕಳೆ ಕಳೆದುಕೊಳ್ಳುತ್ತಿರುವುದು ಇಂತಹ ಟೈಮ್ ಪಾಸ್ ಆಟಗಳು ಹೀಗಿನ ಕಾಲದಲ್ಲಿ ಹೆಚ್ಚು ಕಾಣಸಿಗದಿರುವುದು ಒಂದು ಕಾರಣ ಆಗಿರಬಹುದು ಎನಿಸುತ್ತದೆ.. ಕೊನೆಯ ಪಂಚ್: ಇಬ್ಬರು ತುಂಬಾ ಆತ್ಮೀಯ ಗೆಳೆಯರು ಉಳಿದ ಗೆಳೆಯರ ಜೊತೆ ಸೇರಿ ಇಸ್ಪೀಟ್ ಆಡುತ್ತಿದ್ದಾರೆ ಎಂದುಕೊಳ್ಳಿ. ಇಸ್ಪೀಟ್ ಆಟಕ್ಕೆಂದು ಕಟ್ಟಿರುವ ಹಣ ಒಟ್ಟಾಗಿ ಹೆಚ್ಚೆಂದರೆ ಐವತ್ತು ರೂಪಾಯಿಯೇ ಆಗಿರಬಹುದು. ಆದರೆ ಅಲ್ಲಿರುವ ಆ ಐವತ್ತು ರೂಪಾಯಿಯನ್ನು ನೋಡುತ್ತಲೇ ಯಾಕೋ ಏನೋ ಕೆಲವರಿಗೆ ಆತ್ಮೀಯ ಗೆಳೆಯನೂ ಕೂಡ ಇಸ್ಪೀಟ್ ಆಡುವಾಗ ಪಕ್ಕಾ ಎದುರಾಳಿಯಂತೆ ಕಂಡುಬಿಡುತ್ತಾನೆ. ಆಟದ ಮಧ್ಯೆ ಒಂಚೂರು ಚೀಟಿಂಗ್ ಆದರೆ ಆ ಐವತ್ತು ರೂಪಾಯಿಗೋಸ್ಕರ ಗೆಳೆಯನೊಡನೆ ಎಂತಹ ಜಗಳಕ್ಕೆ ಬೇಕಾದರೂ ಇಳಿಸಿಬಿಡಬಲ್ಲ ಕೆಟ್ಟ ಆಟ ಎಂದರೆ ಇಸ್ಪೀಟಿನ ಆಟ..

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು..

]]>

‍ಲೇಖಕರು G

19 September, 2012

3 Comments

  1. Shrivatsa Kanchimane

    ಹಬ್ಬವೆಂದರೆ ಮಳೆಯ ಹಾಗೆ…ಹೌದಲ್ವಾ…
    ಚಂದ ಬರಹ…
    ಬಾಲ್ಯವ ಮತ್ತು ಹಳ್ಳಿ ಜೀವನಾನ ನೆನಪಿಸಿಬಿಟ್ರಿ…

  2. ಕಿಶೋರ್

    ಥ್ಯಾಂಕ್ಸ್ ನಟರಾಜು ಅವರೆ… ನನ್ನ ಬಾಲ್ಯದ ದಿನಗಳನ್ನು ಒಮ್ಮೆ ನೆನಪಿಗೆ ತಂದಿರಿ.. ಆ ಮಣ್ಣಿನ ವಾಸನೆ, ಗುರಿ ಇಟ್ಟು ಹೊಡೆಯುವ ನೋಟ, ಸ್ನೇಹಿತರೊಡನೆ ಆಡಿದ ಜಗಳ, ಅಪ್ಪ-ಅಮ್ಮನ ಬೈಗುಳ, ಗೋಲಿಗಾಗಿ ಕದ್ದ ಕಾಸು ಎಲ್ಲಾ ಒಮ್ಮೆಲೆ ನೆನಪಿಗೆ ಬಂತು.

  3. Nataraju S M

    ಫೇಸ್ ಬುಕ್ ನಲ್ಲಿ 50 ರ ಹತ್ತಿರ ಲೈಕುಗಳು.. ಧನ್ಯವಾದಗಳು ಫ್ರೆಂಡ್ಸ್.. ನಿಮ್ಮ ಪ್ರೀತಿ ಹೀಗೆಯೇ ಇರಲಿ.. :))

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading