ಈ ಹಾಡು ನಮ್ಮದು,ಈ ಜವಾಬ್ದಾರಿಯೂ ನಮ್ಮದು!
ಡಾ.ನಾಗಮಣಿ
ಆ ಹಾಡನ್ನು ಮೊದಲ ಬಾರಿ ಆಕಾಶವಾಣಿಯಲ್ಲಿ ಕೇಳಿದ್ದು ಶಾಲೆಗೆ ಹೋಗುವ ವಯಸ್ಸಿನಲ್ಲಿ. ತತ್‌ಕ್ಷಣಕ್ಕೆ ಅದು ‘ಇಷ್ಟವಾಯ್ತು’ ಎಂದೆನಿಸದಿದ್ದರೂ ‘ಹೊಸ ರೀತಿಯದಾಗಿದೆ’ ಎಂದು ಮನ ಸೆಳೆದಿತ್ತು. ‘ಈ ಮಣ್ಣು ನಮ್ಮದು,ಈ ಗಾಳಿ ನಮ್ಮದು……’ ಎಂದು ಆರಂಭವಾಗುವ ಆರ್.ಎನ್.ಜಯಗೋಪಾಲ್ ಬರೆದಿರುವ ಅಪರೂಪದ ದೇಶಭಕ್ತಿ ಗೀತೆ ಒಂದೆರಡು ಸಲ ಕೇಳುವಷ್ಟರಲ್ಲಿ ನನ್ನನ್ನು ಪೂರ್ತಿಯಾಗಿ ಆವರಿಸಿಕೊಂಡುಬಿಟ್ಟಿತ್ತು. ಅದರ ವಿಶಿಷ್ಟ ಶೈಲಿಗೆ ಮನಸೋತಿದ್ದೆ. ಅದರ ಸಾಹಿತ್ಯ, ಸಂಗೀತ, ಗಾಯನ ಎಲ್ಲವೂ ಸೇರಿ ಅದೇನೋ ಮೋಡಿ ಮಾಡಿತ್ತು.
ಆದರೆ ನಮ್ಮಮ್ಮ ಮಾತ್ರ ಅದೇಕೋ ಬೇರೆಯದೇ ರಾಗ ಹಾಡುತ್ತಿದ್ದರು. ಈ ಹಾಡು ಬಿತ್ತರಗೊಳ್ಳುತ್ತಿದ್ದಂತೆಯೇ, “ಅದೇನು ನಮ್ಮದು ನಮ್ಮದು ಅಂತ ಜಗಳ ಆಡ್ತೀರೋ! ನಿಮ್ಮದಾದ್ರೆ ನೀವೇ ಇಟ್ಟುಕೊಳ್ಳಿ, ನಮ್ಮ ತಲೆ ಯಾಕೆ ತಿಂತೀರಿ?” ಎಂದು ಗೊಣಗುಟ್ಟುತ್ತಿದ್ದರು.ನನಗೋ ಗೊಂದಲ. ಸಂಗೀತ, ಕತೆ, ಕಾದಂಬರಿ, ತಿರುಗಾಟ ಇನ್ನೂ ಹಲವಾರು ವಿಷಯಗಳಿಗೆ ಸಾಧಾರಣವಾಗಿ ಎಲ್ಲ ಮಕ್ಕಳಿಗಿರುವಂತೆ ನನಗೂ ಅಮ್ಮನೇ ಗುರು.ಯಾವ ಹಾಡೇ ಇರಲಿ, ಯಾವ ಕತೆಯೇ ಆಗಲಿ, ಅಮ್ಮನೊಂದಿಗೆ ವಿಮರ್ಶಿಸಿದ ಮೇಲೆಯೇ ನಾನದನ್ನು ಒಪ್ಪುತ್ತಿದ್ದದ್ದು! ಇಷ್ಟು ಚೆನ್ನಾಗಿರುವ ಹಾಡು ಅಮ್ಮನಿಗೆ ಇಷ್ಟವಾಗಿಲ್ಲವೆಂದರೆ ನಾನೆಲ್ಲಿ ತಪ್ಪಿದ್ದೇನೆ? ಅದರ ರಾಗ ಚೆನ್ನಾಗಿಲ್ಲವಾ? ಅದನ್ನೀಗ ಒಪ್ಪುವುದೋ ಬೇಡವೋ? ಛೆ!ಸಂದಿಗ್ಧ ಪರಿಸ್ಥಿತಿ! ಇಷ್ಟರ ಮಧ್ಯೆ ಆಗಾಗ ರೇಡಿಯೋದಲ್ಲಿ ಕೇಳಿ ಅದು ನನಗೆ ಕಂಠಪಾಠವೂ ಆಯಿತು.
ಹೀಗಿರುವಾಗ ಒಂದು ಸಂಜೆ ಆಟ ಮುಗಿಸಿ ಅದೇ ಹಾಡನ್ನು ಗುಣುಗುಣಿಸುತ್ತಾ ಅಡಿಗೆ ಮನೆಗೆ ಹೋದರೆ ಏನಾಶ್ಚರ್ಯ?!! ಅಮ್ಮನ ಬಾಯಲ್ಲೂ ಅದೇ ‘ನಮ್ಮದು,ನಮ್ಮದು’ !! “ಅಮ್ಮ,,ನೀನೇನಾ…… ?”ಎಂದು ಕೇಳಿದರೆ ಅಮ್ಮ ,”ನನಗೂ ಅದು ಇಷ್ಟವೇ,ಅದು ಒಳ್ಳೆಯ ಹಾಡೇ, ನೀನು ಏನು ಹೇಳ್ತೀ ನೋಡೋಣ ಅಂತ ಸ್ವಲ್ಪ ಆಟವಾಡಿಸಿದ್ದು,” ಎಂದು ಕಿಲಾಡಿ ನಗು ಬೀರಬೇಕಾ?! ನಾನೂ ,’ನಂಗೊತ್ತಿಲ್ವಾ ನಮ್ಮ ದೇವರ ಸತ್ಯ?ಎಷ್ಟಾದರೂ ನೀನು ನನ್ನಮ್ಮ ‘, ನೋಟವನ್ನು ಬೀರಿ ನಡೆದಿದ್ದೆ. ಸರಿ, ಅಲ್ಲಿಂದ ಆರಂಭ ಆ ಹಾಡು ಪ್ರಸಾರವಾದಾಗಲೆಲ್ಲ ನಮ್ಮ ದ್ವಂದ್ವಗಾಯನ!
ಅದೆಷ್ಟು ಸರಳ ಸಾಹಿತ್ಯ! ಅದಕ್ಕೆ ತಕ್ಕ ರಾಗಸಂಯೋಜನೆ, ಹಿತಮಿತವಾದ ವಾದ್ಯಸಂಗೀತ, ಸುಶ್ರಾವ್ಯ ಗಾಯನ. ‘ತಂಗಾಳಿಗೆ ತಲೆಯ ತೂಗೊ ಪೈರಿನ ಹಾಡು’ ಸಾಲನ್ನು ಆಲಿಸಿದವರು ಅದರ ನಡೆಗೆ ತಕ್ಕಂತೆ ಓಲಾಡಿ ತಲೆದೂಗದಿದ್ದರೆ ಕೇಳಿ! ‘ಮಹಾ ……ಸಾಗರ’ ಎಂದಾಗ ಭಾಸವಾಗುವ ವಿಸ್ತಾರ, ಮೊರೆತ, ‘ನಡೆದುಹೋದ ಚರಿತೆಯೋ’ ಎಂದಾಗ ಅಪ್ರಯತ್ನವಾಗಿ ಹೊರಹೊಮ್ಮುವ ನಿಟ್ಟುಸಿರು , ‘ಯಂತ್ರದ ಜಾಡು’ ಎಂದಾಗ ಅನುಭವಕ್ಕೆ ಬಂದೊದಗುವ ಯಾಂತ್ರಿಕ ಚಲನೆಯ ಧಾಟಿ ….ಓಹ್ !ಇದನ್ನೆಲ್ಲಾ ಅನುಭವಿಸಿಯೇ ಆನಂದಿಸಬೇಕು. ಯಾವುದೇ ಅಬ್ಬರ, ಆರ್ಭಟವಿಲ್ಲದೆ ಹೇಳಬೇಕಾದುದನ್ನು ಮೆಲುವಾಗಿ ಆದರೆ ನೇರವಾಗಿ ಮನಸ್ಸಿಗೆ ನಾಟುವಂತೆ, ಒಂದೇ ಮಾತಿನಲ್ಲಿ ಹೇಳುವುದಾದರೆ ಪ್ರಾಥಮಿಕ ತರಗತಿಯ ಪಾಠದಂತೆ ಹೇಳಿ ಮುಗಿಸಿದೆ ಈ ಗೀತೆ.
ಇದೆಲ್ಲ ನೆನಪಾದದ್ದು ಇತ್ತೀಚೆಗೆ ‘ಚಂದನ’ ವಾಹಿನಿಯ ‘ ಸ್ಮರಣಾಂಜಲಿ’ ಕಾರ್ಯಕ್ರಮದಲ್ಲಿ ಈ ಹಾಡನ್ನು ಕೇಳಿದಾಗ. ವೀರಯೋಧರಿಗೆ ನಮನ ಸಲ್ಲಿಸುವ ಈ ಕಾರ್ಯಕ್ರಮದಲ್ಲಿ ಈ ಹಾಡಿಗೆ ಚೆಂದದ ನೃತ್ಯವನ್ನೂ ಅಳವಡಿಸಿದ್ದರು. ಈ ಹಿಂದೆಯೂ ಒಂದೆರಡು ಬಾರಿ ಇದು ಪ್ರಸಾರವಾಗಿತ್ತು. ಈಗ ಈ ಹಾಡಿಗೆ ಮನಸೋಲುವ ಸರದಿ ಹದಿವಯಸ್ಸಿಗೆ ಕಾಲಿಡುತ್ತಿರುವ ನನ್ನ ಮಗಳದು.’ಚೆನ್ನಾಗಿದೆ ಅಲ್ವಾ ಅಮ್ಮ?’,ಎಂದು ಕೇಳಿದಾಗ ಹ್ಞೂಗುಟ್ಟಿದೆ . ಹಿಂದೆ ಪ್ರಸಾರವಾದಾಗಲೇ ಕೇಳಿ ಇಷ್ಟಪಟ್ಟಿದ್ದಳು. ಹಾಗೆ ಅವಳು ಅದನ್ನು ಮೆಚ್ಚುವಲ್ಲಿ ಆ ಸದಭಿರುಚಿಯ ನೃತ್ಯದ ಪಾತ್ರವೂ ಇದ್ದಿರಬಹುದು.ಏನೇ ಇರಲಿ,ಈ ಸಲ ತಾನೇ ಅದನ್ನು ಧ್ವನಿಮುದ್ರಿಸಿಕೊಂಡು ಪದೇ ಪದೇ ಕೇಳಿ, ಬರೆದುಕೊಂಡು ಪೂರ್ತಿ ಕಲಿತಾಗ ನನಗಾದ ಪುಳಕವನ್ನು ಹೇಗೆ ಹೇಳಲಿ? ಅಂದಿನಿಂದ ಇಂದಿನವರೆಗೂ ಈ ಹಾಡು ಸಲ್ಲುತ್ತಿರುವ ಪರಿಯನ್ನು ಕಂಡು ಮೂಕಳಾದೆ. ‘………ಸೋ ದರಸಮಾನ……. …….ಸನ್ನಿಧಾನ’ ಎಂದು ಅವಳು ಹಾಡುತ್ತಿದ್ದರೆ ನನಗದೇನೋ ಸಮಾಧಾನ. ಕೊನೆಯಲ್ಲಿ ‘ನಮ್ಮದು,ನಮ್ಮದು’ ಎಂದು ಹೆಮ್ಮೆಯಿಂದೆಂಬಂತೆ ಏರುಧ್ವನಿಯಲ್ಲಿ ಹಾಡುತ್ತಿದ್ದಾಗ ಅದೇಕೋ ಎದೆ ತುಂಬಿ ಬಂದು ಇದ್ದಕ್ಕಿದ್ದಂತೆ ನನಗೆನಿಸಿದ್ದು ,’ಈ ಹಾಡು ನಮ್ಮದು,’ಎಂದು.
ಮತ್ತೆ ಇದು ಪುಷ್ಟೀಕರಿಸಿದ್ದು ನನ್ನಲ್ಲಿ ದೃಢವಾಗಿರುವ ಒಂದು ನಂಬಿಕೆಯನ್ನು. ಏನೆಂದರೆ, ಕಲಿಯುವ ವಯಸ್ಸಿನಲ್ಲಿ ‘ಒಳ್ಳೆಯದು’ ಅವರ ಸಂಪರ್ಕಕ್ಕೆ,ಅನುಭವಕ್ಕೆ ಬಂದರೆ ಮಕ್ಕಳು ಅದನ್ನು ಖಂಡಿತವಾಗಿಯೂ ಯಾರದೇ ಒತ್ತಾಯದ ಆವಶ್ಯಕತೆಯಿಲ್ಲದೆ ಸ್ವೀಕರಿಸಿ, ತಮ್ಮದಾಗಿಸಿಕೊಳ್ಳುತ್ತಾರೆ. ಮತ್ತು ಹಾಗೆ ತಾವೇ ಕಲಿತದ್ದು ಹೆಚ್ಚು ಪರಿಣಾಮಕಾರಿಯಾಗಿಯೂ ಇರುತ್ತದೆ. ಈ ‘ಒಳ್ಳೆಯದ’ನ್ನು ಅವರ ಮುಂದಿಟ್ಟು,ಅದನ್ನು ಗುರುತಿಸುವಲ್ಲಿ ಅವರೊಂದಿಗೆ ಸಹಕರಿಸಬೇಕಾದ ಗುರುತರವಾದ ಜವಾಬ್ದಾರಿ ದೊಡ್ದವರೆನಿಸಿಕೊಂಡ ನಮ್ಮದು.
ಅಂದಹಾಗೆ ಈ ಹಾಡು ಯೂಟ್ಯೂಬ್‌ನಲ್ಲೆಲ್ಲಾದರೂ ಸಿಗುತ್ತದಾ ಎಂದು ಹುಡುಕುತ್ತಿದ್ದಾಗ ಸಿಹಿ ಅಚ್ಚರಿಯ ಖುಷಿಯೊಂದಿಗೆ ಸಿಕ್ಕಿತು ಈ ಕೊಂಡಿ- ಮಂಗಳೂರಿನ ಚಿದಂಬರ್ ಕಾಕತ್ಕರ್ ಅವರು ಹಾಡಿನ ಸಾಹಿತ್ಯವೂ ತೆರೆಯ ಮೇಲೆ ಮೂಡುವಂತೆ ರಚಿಸಿರುವ ಈ ವಿಡಿಯೋವನ್ನು ನೀವೂ ಆನಂದಿಸಿ






ನನಗೂ ತುಂಬಾ ಇಷ್ಟ ಈ ಹಾಡು!
Very nice writeup Mani. Tumba channagi barediddeeri. SaraLa, Sundara annistu
Oh Howdu Nagmani. E hadu nammellaradu saha. Namagu saha e hadu bahala ishtavadaddu.Hadu hadina bagegina lekhana eradu sogasagidhe. Jothege hadina link kalsi navella hadannu matte matte gugunisuvanthe madiddiri Thanks.
‘ಮತ್ತೆ ಇದು ಪುಷ್ಟೀಕರಿಸಿದ್ದು ನನ್ನಲ್ಲಿ ದೃಢವಾಗಿರುವ ಒಂದು ನಂಬಿಕೆಯನ್ನು. ಏನೆಂದರೆ, ಕಲಿಯುವ ವಯಸ್ಸಿನಲ್ಲಿ ‘ಒಳ್ಳೆಯದು’ ಅವರ ಸಂಪರ್ಕಕ್ಕೆ,ಅನುಭವಕ್ಕೆ ಬಂದರೆ ಮಕ್ಕಳು ಅದನ್ನು ಖಂಡಿತವಾಗಿಯೂ ಯಾರದೇ ಒತ್ತಾಯದ ಆವಶ್ಯಕತೆಯಿಲ್ಲದೆ ಸ್ವೀಕರಿಸಿ, ತಮ್ಮದಾಗಿಸಿಕೊಳ್ಳುತ್ತಾರೆ.’
……..ಬಂಗಾರದಂಥ ಮಾತು ಮಣಿ.
ಬೆಳಿಗ್ಗೆ ಬೆಳಿಗ್ಗೆ ಚಂದದ ಬರಹ ಓದುವ ಸೌಭಗ್ಯ ನನ್ನದು. ಹೀಗೆ ಬರೆಯುತ್ತ ಇರಿ, ಮಣಿ
🙂
ಮಾಲತಿ ಎಸ್
ತುಂಬಾ ದಿನದಿಂದ ಫೋನ್ ಮಾಡ್ದೇ ಇದ್ದದ್ದು ನೋಡಿ ಹೀಗೇ ಏನೋ ಷುರು ಮಾಡ್ತಾ ಇದೀಯ ಅಂತ ಅಂದುಕೊಳ್ತಾ ಇದ್ದೆ. ALL THE BEST. ಚೆನ್ನಾಗಿದೆ.
‘ಕುಲದಲ್ಲಿ ಮೇಲ್ಯಾವುದೋ’ ಕೇಳಿದರೆ ನಿಮಗೆ ಏನು ಅನಿಸುತ್ತದೆ?
ನಮ್ಮಪ್ಪ, ನಾನು ಮತ್ತು ನನ್ಮಗಳ ಫೇವರಿಟ್ ಅದು !!
‘ಅವಧಿ’ಗೂ ಓದುಗರಿಗೂ ವಂದನೆಗಳು.
Endinante sogasaagi barediddiri Mani. Muttinantha Chandada maatugalu.
ದೂರದ ನಾಡಿನಲ್ಲಿರುವಾಗ, ನಮ್ಮ ನಾಡಿನ ಬಗ್ಗೆ, ನಮ್ಮ ದೇಶದ ಬಗ್ಗೆ, ಸಹಜವಾಗಿ ಒಲವು ಜಾಸ್ತಿ. ನಮ್ಮ ನಡೆ ನುಡಿ ಸಂಸ್ಕೃತಿ ಬಗ್ಗೆ ಒಂದು ಸ್ವಲ್ಪ ಅವಕಾಶ ಸಿಕ್ಕಿದ್ರೂ ಅದನ್ನು ನಮ್ಮದಾಗಿಸಿಕೊಳ್ಳುವ ಕಾತುರ ಕೂಡ. ಅಂಥ ಸಂದರ್ಭದಲ್ಲಿ “ನಮ್ಮದು” ಹಾಡಿನ ಬಗ್ಗೆ ಲೇಖಕರು ತಮ್ಮ ಒಲವನ್ನು ಅದ್ಭುತವಾಗಿ ಬಿಂಬಿಸಿದ್ದಾರೆ. ‘ನಮ್ಮ’ದರ ಬಗ್ಗೆ ನಮ್ಮತನವನ್ನು ಬಡಿದೆಬ್ಬಿಸಲು ಪ್ರಯತ್ನಿಸಿದ್ದಾರೆ. ಜೊತೆಯಲ್ಲೇ ಪ್ರತಿಯೊಂದು ಮನೆಯ ಹಿರಿಯರ ಜವಾಬ್ದಾರಿಯ ಕದ ತಟ್ಟಿದ್ದಾರೆ.
ಹೀಗೇ ಬರೆಯುತ್ತಿರಿ.