ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಮ್ಮನೆ ನಾಯಿ ಕೂಸುಗಳ ರೆಸ್ಕ್ಯೂ ಆಪರೇಷನ್!

ಡಾ. ಬಿ.ಆರ್. ಸತ್ಯನಾರಾಯಣ

ನಮ್ಮ ಏರಿಯಾದಲ್ಲಿ ಬೀದಿನಾಯಿಗಳ ಕಾಟ ತುಂಬಾ ಹೆಚ್ಚು. ಅಪರಾತ್ರಿಯಲ್ಲಿ ಒಂದು ಬೊಗಳಿದರೆ ಸಾಕು, ಕನಿಷ್ಠ ನೂರು ನಾಯಿಗಳಾದರೂ ಧ್ವನಿಗೂಡಿಸಿ ಒಂದು ಒಂದೂವರೆ ಗಂಟೆಯವರೆಗೂ ಊಳಿಡುತ್ತವೆ. ಬೀದಿಯಲ್ಲಿ ಮಕ್ಕಳಿರಲಿ ದೊಡ್ಡವರು ಹೋಗುತ್ತಿದ್ದರೂ ಗುರಾಯಿಸುತ್ತವೆ. ಕಾರ್ಪುರೇಷನ್ನಿನವರು ಹಲವಾರು ಸಾರಿ ಬಂದಿದ್ದರೂ ಒಂದೇ ಒಂದು ನಾಯಿಯೂ ಅವರಿಗೆ ಸಿಕ್ಕಿಹಾಕಿಕೊಂಡಿಲ್ಲ! ಇಂತಹ ನಾಯಿಗಳ ಕಾಟ ಒಮ್ಮೊಮ್ಮೆ ಮಿತಿಮೀರಿದಾಗ ಯಾರಾದರೂ ಇವನ್ನು ಕೊಂದು ಹಾಕಬಾರದೆ ಎಂದು ಜನ ಬೀದಿಯಲ್ಲಿ ನಿಂತು ಮಾತನಾಡಿಕೊಳ್ಳುತ್ತಿದ್ದರು.

ಹೀಗೆ ಇರುವಲ್ಲಿ, ನಮ್ಮ ಮನೆಯ ಗೇಟಿನ ಮುಂದೆ ಹಾಕಿರುವ ಕಲ್ಲುಚಪ್ಪಡಿಗಳ ಕೆಳಗೆ ಏಳೆಂಟು ದಿನಗಳ ಹಿಂದೆ ಬಲಿಷ್ಠವಾದ ನಾಯಿಯೊಂದು ಐದು ಮರಿಗಳಿಗೆ ಜನ್ಮ ನೀಡಿಬಿಟ್ಟಿತ್ತು (ನೆನ್ನೆ ರಾತ್ರಿಯವರೆಗೆ ನಾವು ನಾಲ್ಕೇ ಮರಿಗಳು ಎಂದು ಭಾವಿಸಿದ್ದೆವು). ಮನೆಯ ಕಟ್ಟಡದ ಕೆಲಸ ನಡೆಯುತ್ತಿರುವುದರಿಂದ ಮನೆಯ ಮುಂದೆ, ಮರಳು, ಚಿಪ್ಪಿ, ಮರಮುಟ್ಟುಗಳು ಸಾಕಷ್ಟು ಬಿದ್ದಿವೆ. ನೀರು ಪ್ರವೇಶಿಸುವ ದ್ವಾರ ಪೂರ್ತಿ ಬಂದಾಗಿದೆ. ಮುಂಭಾಗ ಮಾತ್ರ ತೆರೆದುಕೊಂಡಿದೆ. ಹಾಗೂ ಅದರ ಮುಂದೆ ಮರಳಿನ ರಾಶಿಯಿದೆ. ಆ ನಾಯಿಗೆ ಮರಿಹಾಕಲು ಬಹುಶಃ ಅದಕ್ಕಿಂತ ಒಳ್ಳೆಯದಾದ ಜಾಗ ಬೇರೆಲ್ಲೂ ಸಿಕ್ಕಿರಲೇ ಇಲ್ಲವೊ ಏನೊ? ಅಂತೂ ಬಂದು ಮರಿಗಳನ್ನು ಹಾಕಿ ಸಂಸಾರ ಹೂಡಿಬಿಟ್ಟಿತು.

ಇಂತಲ್ಲಿಯೇ ನಾಯಿಗಳು ಮರಿಹಾಕಿರುತ್ತವೆ ಎಂದು ಚಿಕ್ಕಮಕ್ಕಳಿಗೆ ಅದು ಹೇಗೆ ತಿಳಿಯುತ್ತದೊ ಏನೊ!? ಬೀದಿಯಲ್ಲಿ ಓಡಾಡುವ ಚಿಕ್ಕ ಚಿಕ್ಕ ಮಕ್ಕಳು ನಮ್ಮ ಮನೆಯ ಮುಂದೆ ನಿಂತು ಚರಂಡಿಯ ಒಳಗೆ ಬಗ್ಗಿ ನೋಡುವುದು, ಶಿಳ್ಳೆ ಹಾಕುವುದು ನಡೆಯುತ್ತಲೇ ಇತ್ತು. ಆಗಲೇ ನಮಗೆ ಗೊತ್ತಾಗಿದ್ದು ಅಲ್ಲಿ ನಾಯಿ ಮರಿ ಹಾಕಿರುವ ವಿಷಯ. ಬೀದಿ ನಾಯಿಗಳನ್ನು ದ್ವೇಷಿಸುವುದರಲ್ಲಿ ಒಂದು ಕೈ ಮುಂದೆಯೇ ಇರುವ ನನ್ನ ಹೆಂಡತಿಯೂ, ಇಲಿಯಷ್ಟೇ ದೊಡ್ಡದಿರುವ ಆ ಪುಟ್ಟ ಪುಟ್ಟ ನಾಯಿಮರಿಗಳನ್ನು ನೋಡಿ ಸಂತೋಷಗೊಂಡಿದ್ದಳು. ನನ್ನ ಮಗಳಂತೂ ಗಂಟೆಗೊಂದು ಸಲ ಹೋಗಿ, ನಾಯಿ ಇದೆಯೇ ಇಲ್ಲವೆ ಎಂದು ನೋಡುವುದು, ನಾಯಿ ಇಲ್ಲ ಎಂದಾದರೆ ಸ್ವಲ್ಪ ಹತ್ತಿರ ಹೋಗಿ ಮರಿಗಳನ್ನು ನೋಡುವುದು, ಅವುಗಳ ಬಣ್ಣದ ಬಗ್ಗೆ ವಿವರ ನೀಡುವುದು ಮಾಡುತ್ತಿದ್ದಳು. ಆದರೆ ನನಗೆ ಭಯ. ಯಾವ ಪ್ರಾಣಿಯೇ ಆಗಲಿ, ತನ್ನ ಮಕ್ಕಳನ್ನು ರಕ್ಷಿಸಿಕೊಳ್ಳುವ ವಿಷಯದಲ್ಲಿ ಸ್ವಲ್ಪ ಅಗ್ರೆಸ್ಸೀವ್ ಆಗಿ ವರ್ತಿಸುತ್ತಿರುತ್ತವೆ. ಮರಿಗಳಿರುವ ಎಡೆಗಳಲ್ಲಿ ಮನುಷ್ಯರು ಸುಳಿದಾಡಿದರೆ ಸಾಕು ದೂರದಿಂದಲೇ ಮೈಮೇಲೆ ಬೀಳುವಂತೆ ಅಬ್ಬರಿಸಿ ಬೊಬ್ಬಿರಿಯುತ್ತವೆ. ಕೋಳಿಗಳು ಸಹ ಅವುಗಳ ಪಿಳ್ಳೆಗಳನ್ನು ಮುಟ್ಟಲು ಹಿಡಿಯಲು ಹೋದರೆ ಹಾರಿ ನೆಗೆದು ಕಣ್ಣನ್ನೇ ಕುಕ್ಕಲು ಬರುತ್ತವೆ. ಆದ್ದರಿಂದ ನಾಯಿಮರಿಗಳ ತಂಟೆಗೆ ಹೋಗುವುದು ಬೇಡ ಎಂದು ಎಚ್ಚರಿಸುತ್ತಿದ್ದೆ.

ನನ್ನ ಮಗಳಿಗೆ ಒಂದೇ ಕುತೂಹಲ. ’ಅಪ್ಪ ಅವು ಏನು ತಿನ್ನುತ್ತವೆ? ಅವುಗಳ ಅಮ್ಮ ಆಹಾರ ತಂದು ಕೊಡುತ್ತದೆಯೆ?’ ಎಂದೆಲ್ಲಾ ಪ್ರಶ್ನಿಸಿದ್ದಳು. ನಾನು ’ಕನಿಷ್ಠ ಒಂದು ತಿಂಗಳಾದರೂ ಅವಕ್ಕೆ ಅಮ್ಮನ ಹಾಲೇ ಗತಿ’ ಎಂದು ಉತ್ತರಿಸಿದ್ದೆ. ಮತ್ತೆ ಅವಳು, ’ಐದು ಮರಿಗಳಿಗೆ ಅದೊಂದರ ಹಾಲು ಸಾಕಾಗುತ್ತಯೆ? ಅದಕ್ಕೆ ಪ್ರೊಟೀನ್ ಎಲ್ಲಿ ಸಿಗುತ್ತದೆ!?’ (ಪ್ರೊಟೀನ್ ಬಗ್ಗೆ ಅವಳ ಪಠ್ಯಪುಸ್ತಕದಲ್ಲಿ ಕಳೆದ ವರ್ಷ ಓದಿಕೊಂಡಿದ್ದಳು) ಇತ್ಯಾದಿ ಇತ್ಯಾದಿ ಕೇಳಿ ತಲೆ ಬಿಸಿ ಮಾಡುತ್ತಿದ್ದಳು. ಆ ಮರಿಗಳಿಗೆ ಅನುಕೂಲವಾಗಲಿ ಎಂದು ’ಹಳೆಯ ಬಟ್ಟೆ ಹಾಸೋಣ. ಹಾಲು ಹಾಕೋಣ’ ಎಂಬ ಸಲಹೆಗಳನ್ನೂ ನೀಡಿದಳು. ನಾನು ಮತ್ತೆ ಅವಳಿಗೆ ’ಪ್ರತಿಯೊಂದು ಪ್ರಾಣಿಯೂ ತನ್ನ ಸಂತತಿಯನ್ನು ಕಾಪಾಡಿಕೊಳ್ಳಲು ತನ್ನದೇ ಆದ ಮಾರ್ಗವನ್ನು ಹೊಂದಿರುತ್ತದೆ. ಅದರಲ್ಲಿ ಮನುಷ್ಯ ಕೈಯಾಡಿಸಬಾರದು. ಅಲ್ಲದೆ ಈಗ ಅವು ಏನನ್ನೂ ತಿನ್ನುವುದಿಲ್ಲ. ಹಾಕಿದರೆ ಅದರ ಅಮ್ಮನಿಗೆ ಒಂದೆರಡು ಬಿಸ್ಕೆಟ್ ಹಾಕು’ ಎಂದು ಸುಮ್ಮನಾಗಿಸಿದ್ದೆ.

ನಾಲ್ಕೈದು ದಿನಗಳ ನಂತರ ಮಕ್ಕಳ ಹಿಂಡು ಮರಿಗಳ ಸುತ್ತ ಠಳಾಯಿಸುವುದು ಹೆಚ್ಚಾಯಿತು. ಅದಕ್ಕೆ ತಕ್ಕಂತೆ ಆ ನಾಯಿ ಗುರ್ರ್ರ್ ಎನ್ನುವುದು ಬೊಗಳುವುದು ಜಾಸ್ತಿಯಾಗಿತ್ತು. ಆ ಹುಡುಗರನ್ನು ಗದರಿಸಿ ದೂರ ಕಳುಹಿಸುವುದು ನಮ್ಮ ದೈನಂದಿನ ಚಟುವಟಿಕೆಯಾಯಿತು. ಹೀಗಿರುವಾಗ ನೆನ್ನೆ ಬೆಳಿಗ್ಗೆ ಯಾರೊ ಒಬ್ಬ ಹುಡುಗ (ಅವನ ಹೆಸರು ವಿಕ್ಕಿ ಅಂತೆ) ಮರಿಗಳ ಹತ್ತಿರ ಹೋಗಿ ಅವುಗಳನ್ನು ಮುಟ್ಟುವ ಸಾಹಸಕ್ಕೆ ಕೈ ಹಾಕಿದ್ದಾನೆ. ಎಲ್ಲಿತ್ತೊ ಏನೊ ಆ ನಾಯಿ ಒಮ್ಮೆಲೆ ಅಬ್ಬರಿಸಿ ಓಡಿಸಿಕೊಂಡು ಬಂದಿದೆ. ವಿಕ್ಕಿಯ ಸುತ್ತ ಜಮಾಯಿಸಿದ್ದ ಮಕ್ಕಳ ಸೇನೆ ಕಣ್ಣೆವೆ ಮುಚ್ಚಿತೆರೆಯುವಷ್ಟರಲ್ಲಿ ದಿಕ್ಕಪಾಲಾಗಿ ಓಡಿದ್ದಾರೆ. ಸದ್ಯ ಅವರು ಹಾಗೇ ಓಡುವಾಗ ಜೋರಾಗಿ ಕಿರುಚಿ ಗಲಾಟೆ ಎಬ್ಬಿಸುತ್ತಲೇ ಓಡಿದ್ದಾರೆ. ನಾಯಿಗೂ ಗಾಬರಿಯಾಗಿತ್ತು ಅನ್ನಿಸುತ್ತೆ. ತನ್ನ ರಭಸವನ್ನು ಕಮ್ಮಿ ಮಾಡಿಕೊಂಡಿತ್ತು, ಅಷ್ರಲ್ಲಿ ಆ ವಿಕ್ಕಿ ಪಕ್ಕದ ಕಾಂಪೋಂಡು ನೆಗೆದು ಬಿದ್ದು ಓಡಿದ್ದಾನೆ. ಆದರೆ ಅಷ್ಟರಲ್ಲಿ ಅವನಿಗೆ ಒಂದ ಎರಡ ಎಲ್ಲಾ ಆಗಿ ಫಜೀತಿಯಾಗಿಬಿಟ್ಟಿತ್ತು. ಅಷ್ಟರಲ್ಲಿ ಆ ಹುಡುಗನ ಅಮ್ಮ ಬಂದು, ತನ್ನ ಮಗನ ಸಾಹಸವನ್ನು ಬೇರೆ ಹುಡುಗರಿಂದ ಕೇಳಿದ್ದೇ, ಪಿತ್ತ ನೆತ್ತಗೇರಿಸಿಕೊಂಡು ಆ ಹುಡುಗನಿಗೆ ಚೆನ್ನಾಗಿ ಭಾರಿಸಿದ್ದಾಳೆ.

ಮದ್ಯಾಹ್ನದ ವೇಳೆಗೆ ಆ ಹುಡುಗ ಶುಚೀರ್ಭೂತನಾಗಿ ಮತ್ತೆ ಬೀದಿಗೆ ಇಳಿದ್ದಾನೆ. ನಮ್ಮ ಮನೆಯಿಂದ ಒಂದರೆಡು ಬೀದಿಗಳ ನಂತರ ಆ ಹುಡುಗನ ಮನೆಯಿರುವುದು. ಅಲ್ಲಿ ಈ ನಾಯಿ ಆ ಹುಡುಗನನ್ನು ನೋಡಿ ಗುರಾಯಿಸುತ್ತಾ ಇತ್ತೆಂದು ಹುಯಿಲೆಬ್ಬಿಬಿಟ್ಟಿದೆ. ಅವರಮ್ಮ ಬಂದು ಆ ನಾಯಿಮರಿಗಳನ್ನು ದೂರ ಸಾಗಿಸುವ ಮಾತನಾಡುತ್ತಿದ್ದಳು. ನಮ್ಮ ಮನೆಯ ಮುಂದೆ ನಾಯಿ ಮರಿ ಹಾಕಿರುವುದರಿಂದ ಅದು ನಮ್ಮ ಕೆಲಸವೆಂಬಂತೆ ಮಾತನಾಡಿದಳು. ಯಾರೂ ಅದರ ತಂಟೆಗೆ ಹೋಗದಿದ್ದರೆ ಅದು ತೊಂದರೆ ಕೊಡುವುದಿಲ್ಲ. ಅಷ್ಟಕ್ಕೂ ಅದು ನಮ್ಮ ನಾಯಿಯೂ ಅಲ್ಲ. ಆದ್ದರಿಂದ ನಾನು ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ರಾತ್ರಿ ಸುಮಾರು ಹತ್ತು ಗಂಟೆಯಿರಬಹುದು. ನಾವು ಊಟ ಮಾಡುತ್ತಾ ಕುಳಿತಿದ್ದೆವು. ಅಷ್ಟರಲ್ಲಿ ಪಟಪಟ ಎಂದು ಮಳೆ ಬಿರುಸಾಗತೊಡಗಿತು. ನನ್ನ ಮಗಳು ’ಅಪ್ಪಾ ನಾಯಿ ಮರಿ ಏನು ಮಾಡುತ್ತವೆ. ಚರಂಡಿಯಲ್ಲಿ ನೀರು ನುಗ್ಗುತ್ತದೆ’ ಎಂದು ಚಡಪಡಿಸತೊಡಗಿದಳು. ನೀರು ಚರಂಡಿಗೆ ನುಗ್ಗುವ ಭಾಗ ಮುಚ್ಚಿ ಹೋಗಿದ್ದರಿಂದ ನೀರು ಅಲ್ಲಿಗೆ ಹೋಗುವುದೇ ಇಲ್ಲ ಎಂಬುದು ನನ್ನ ವಾದವಾಗಿತ್ತು. ಅವಳು ’ಹೌದು ಅಪ್ಪ. ಅದು ಹತ್ತಿರ ಹೋದರೆ ಕಚ್ಚಲು ಬೇರೆ ಬರುತ್ತದೆ. ನೀನು ಹೇಳಿದಂತೆ ತನ್ನ ಮರಿಗಳನ್ನು ತಾನು ಕಾಪಾಡಿಕೊಳ್ಳುತ್ತದೆ ಬಿಡು’ ಎಂದಳು.

ಊಟ ಮುಗಿಯುವಷ್ಟರಲ್ಲಿ ಮಳೆ ಬಿರುಸಾಗತೊಡಗಿತು. ಕುತೂಹಲ ತಡೆಯದೆ, ಟಾರ್ಚ್ ಹಿಡಿದು ಮರಿಗಳಿದ್ದೆಡೆಗೆ ನೋಡಲು ಹೋದರೆ, ನಾಯಿ ಗುರ್ರ್ ಎನ್ನುತ್ತಿದೆ. ಆಗಲೇ ಮಳೆನೀರು ಚರಂಡಿಯಲ್ಲಿ ಸಂಗ್ರಹಗೊಂಡು ಹಿಮ್ಮುಖವಾಗಿ ಚಲಿಸುತ್ತಾ ನಾಯಿಮರಿಗಳಿದ್ದೆಡೆಗೆ ಹರಿಯುತ್ತಿತ್ತು. ಮರಿಗಳು ಕೊಂಯಪಂಯ ಶಬ್ದ ಮಾಡುತ್ತಿದ್ದವು. ನಾಯಿ ಮಾತ್ರ ಗುರ್ ಎನ್ನುತ್ತಿತ್ತು. ನನಗೆ, ನಾಯಿಯನ್ನು ಓಡಿಸಿ, ಅದರ ಮರಿಗಳನ್ನು ಚರಂಡಿಯಿಂದ ತೆಗೆದು, ಕಾರಿನ ಕೆಳಗೆ ಹಾಕುವ ಯೋಚನೆ ಹೊಳೆಯಿತು. ಮಳೆಯ ರಭಸ ಕ್ಷಣಕ್ಷಣಕ್ಕೂ ಹೆಚ್ಚುತ್ತಿತ್ತು. ನೀರು ಮರಿಗಳಿದ್ದ ಜಾಗವನ್ನು ಆವರಿಸಿಬಿಟ್ಟಿತ್ತು. ಆಗ ಇದ್ದಕ್ಕಿದ್ದಂತೆ ನಾಯಿ ದಿಗ್ಗನೆ ನೆಗೆದು ಹೊರಗೆ ಬಂತು.

ನಾನು ಸುಧಾರಿಸಿಕೊಂಡು ನೋಡುತ್ತಿರುವಂತೆ, ಅದು ಒಂದು ಮರಿಯನ್ನು ತನ್ನ ಬಾಯಿಯಲ್ಲಿ ಕಚ್ಚಿಕೊಂಡು, ಖಾಲಿ ಸೈಟಿನಲ್ಲಿ ಬೆಳೆದಿದ್ದ ಎಕ್ಕದ ಗಿಡದ ಬುಡಕ್ಕೆ ಹೋಯಿತು. ನಾನು ನನ್ನ ಮಗಳಿಗೆ ’ನೋಡು. ಅದು ಹೇಗೆ ತನ್ನ ಮರಿಯನ್ನು ರಕ್ಷಿಸಿಕೊಳ್ಳುತ್ತಿದೆ. ಆದ್ದರಿಂದ ನಾವು ಅದಕ್ಕೆ ಯಾವುದೇ ರೀತಿಯ ಸಹಾಯ ಮಾಡುವ ಅಗತ್ಯವಿಲ್ಲ’ ಎಂದು ಹೇಳುತ್ತಿದ್ದೆ. ಆದರೆ, ಒಂದು ಮರಿಯನ್ನು ಕಚ್ಚಿಕೊಂಡು ಹೋದ ನಾಯಿ ಒಂದೆರಡು ನಿಮಿಷ ಕಳೆದರೂ ಇತ್ತ ಬರಲೇ ಇಲ್ಲ. ನಾನು ಅಲ್ಲಿಗೇ ಹೋಗಿ ಟಾರ್ಚ್ ಬಿಟ್ಟು ನೋಡಿದರೆ, ಅದು ಅದೊಂದೇ ಮರಿಯನ್ನು ಹೊಟ್ಟೆಯಲ್ಲಿ ಕವುಚಿಕೊಂಡು, ಹಾಲು ಕುಡಿಸುತ್ತಿತ್ತು!

ಇತ್ತ ನೀರು ಹೆಚ್ಚಿ, ಉಳಿದ ನಾಲ್ಕು ಮರಿಗಳ ಚೀರಾಟ ಹೆಚ್ಚಾಯಿತು. ಒಂದು ಮರಿಯಂತೂ, ನೀರಿನಲ್ಲಿ ಕತ್ತು ಮೇಲೆಕ್ಕೆತ್ತಿ ಹೊರ ಬರಲು ಸಹಾಸ ಪಡುತ್ತಿತ್ತು. ನೀರಿನ ಜೊತೆಯಲ್ಲಿ ಮರಳೂ ನುಗ್ಗುತ್ತಿದ್ದುದರಿಂದ, ಅದು ಮರಳಿನಲ್ಲಿ ಹೂತು ಹೋಗುವ ಸಾಧ್ಯತೆಯೂ ಇತ್ತು. ನಾನು ಆಗ ಸಂದಿಗ್ಧಕ್ಕೆ ಬಿದ್ದೆ. ಅದರ ಅಮ್ಮ ಬಂದು ಮರಿಗಳನ್ನು ರಕ್ಷಿಸಿಕೊಳ್ಳಲಿ ಎಂದು ಸುಮ್ಮನಿರುವುದೆ? ಅಥವಾ ಅವುಗಳನ್ನು ಎತ್ತಿ ಕೊನೆಯ ಪಕ್ಷ ಪಕ್ಕದಲ್ಲೇ ನಿಂತಿದ್ದ ಕಾರಿನ ಕೆಳಗೆ ಹಾಕಿದರೆ, ನೀರಿನಲ್ಲಿ ಮುಳುಗಿ ಸಾಯುವುದು ತಪ್ಪುತ್ತದೆ ಎಂದು ಯೋಚಿಸಿದೆ. ಅವು ಅಲ್ಲಿಯೇ ಸತ್ತು ಹೋದರೆ ವಾಸನೆ ಬರುತ್ತದೆ ಎಂಬುದು ನನ್ನ ಹೆಂಡತಿಯ ಚಿಂತೆಗೆ ಕಾರಣವಾಗಿತ್ತು.

ಜೊತೆಗೆ, ನಾನು ಒಂದೆರಡು ದಿನದಿಂದ, ಅತಿಯಾದ ಶೀತ ಮತ್ತು ಜ್ವರದಿಂದ ಬಳಲುತ್ತಿದ್ದೆ. ಈಗ ಮತ್ತೆ ನೆನೆದು ಇನ್ನೂ ಹೆಚ್ಚಾಗುತ್ತದೆ ಎಂಬ ಭಯ ಅವಳದ್ದು. ಮರಿಯನ್ನು ಹಿಡಿದಾಗ ನಾಯಿ ಬಂದು ಕಚ್ಚಿದರೆ ಎಂಬ ಭಯದಿಂದ ನನ್ನ ಮಗಳು ಬೇಡ ಬೇಡ ಅದರ ಮರಿಯನ್ನು ಅದೇ ಕಾಪಾಡಿಕೊಳ್ಳಲಿ ಎನ್ನುತ್ತಿದ್ದಳು. ನಾನು ಆದದ್ದಾಗಲಿ ಎಂದು ತಲೆಯ ಮೇಲೆ ಒಂದು ಟವೆಲ್ ಹಾಕಿಕೊಂಡು ಛತ್ರಿ ಕೂಡ ಹಿಡಿದು ಅಖಾಡಕ್ಕೆ ಇಳಿದೇ ಬಿಟ್ಟೆ.

ಟಾರ್ಚ್‌ನ್ನು ಆನ್ ಮಾಡಿ ಮರಿಗಳಿದ್ದೆಡೆಗೆ ಬೆಳಕು ಬೀಳುವಂತೆ ಮರಳಿನ ರಾಶಿಯಲ್ಲಿ ನಿಲ್ಲಿಸಿದೆ. ಮರಿಯನ್ನು ಎತ್ತಿಕೊಳ್ಳಲು ಚರಂಡಿಯಲ್ಲಿ ಕಾಲಿಟ್ಟರೆ, ಸುಮಾರು ಒಂದಡಿಯಷ್ಟು ಆಳಕ್ಕೆ ನನ್ನ ಕಾಲು ಮರಳು ನೀರಿನ ಮಿಶ್ರಣದಲ್ಲಿ ಹೂತುಹೋಯಿತು. ಆದರೂ ಕೈನೀಡಿ ಒಂದು ನಾಯಿಮರಿಯನ್ನು ಹಿಡಿದೆನೊ ಇಲ್ಲವೊ! ತಾಯಿ ನಾಯಿ ಆರ್ಭಟಿಸುತ್ತ ನನ್ನೆಡೆಗೆ ನುಗ್ಗಿತು. ನನ್ನ ಹೆಂಡತಿ ಮಕ್ಕಳು, ಕಂಪೌಂಡಿನ ಒಳಗೆ ನಿಂತಿದ್ದ ಇತರ ಮನೆಯವರು ಎಲ್ಲರೂ ಒಟ್ಟಿಗೇ ಕಿರುಚಿಕೊಂಡುಬಿಟ್ಟರು. ಹೂತು ಹೋಗಿದ್ದ ಕಾಲನ್ನು ಹಿಂದಕ್ಕೆ ಸರ್ರನೆ ಎಳೆದುಕೊಂಡು, ಛತ್ರಿಯನ್ನು ತಾಯಿ ನಾಯಿಯಡೆಗೆ ತೋರಿಸುತ್ತ ನಾನು ’ಹಚ್ಚ ಹಚ್ಚಾ’ ಎಂದು ಕೂಗಿದೆ. ಕಾಲಿನ ಚಪ್ಪಲಿ ಅಲ್ಲಿಯೇ ಉಳಿದುಹೋಯಿತು. ನಾಯಿ ಏನು ಮಾಡುವುದಕ್ಕೆ ತೋಚದೆ, ಗಲಾಟೆಯಿಂದ ಗಾಬರಿಯಾಗಿ ಒಂದು ಕ್ಷಣ ನಿಂತುಬಿಟ್ಟಿತು.

ತಕ್ಷಣ ನಾನು ಮರಿಯನ್ನು ಅದರ ಮುಂದಕ್ಕೆ ಸ್ವಲ್ಪ ರಭಸವಾಗಿಯೇ ಹಾಕಿ ’ಎಯ್ ತೆಗೊಂಡು ಹೋಗು, ಕಚ್ಚಿಕೊಂಡು ಹೋಗು. ಇಲ್ಲೇನು ನಿನ್ನ ಮರಿನ ಯಾರೂ ಹೊತ್ಕೊಂಡು ಹೋಗಲ್ಲ’ ಎಂದು ಅನೈಚ್ಛಿಕವಾಗಿ ಹೇಳುತ್ತಾ, ಕೈಬಾಯಿ ಸನ್ನೆ ಮಾಡುತ್ತಾ ನಾಯಿಯನ್ನು ನಿರ್ದೇಶಿಸತೊಡಗಿದೆ. ಒಂದು ಕ್ಷಣ ಆ ನಾಯಿಗೆ ಎನ್ನನಿಸಿತೊ. ಅದು ನನ್ನನ್ನು ನೋಡುತ್ತಿತ್ತು. ನಾನು ಅಲ್ಲಾಡದೆ ಅದರ ಕಣ್ಣುಗಳನ್ನೇ ನೋಡುತ್ತಾ ನಿಂತೇ ಇದ್ದೆ. ಇನ್ನು ಉಳಿದಿರುವ ನಾಯಿಗಳು ನೀರಿನಲ್ಲಿ ಮುಳುಗಿ ಏಳುತ್ತಿದ್ದವು. ನೋಡುನೋಡುತ್ತಿದ್ದಂತೆ ನಾಯಿಮರಿಯನ್ನ ಕಚ್ಚಿಕೊಂಡು ಹೊರಟಿತು.

ಮತ್ತೆ ಬಂದು ಉಳಿದ ಮರಿಗಳನ್ನು ಕಚ್ಚಿಕೊಂಡು ಹೋಗುತ್ತದೆ ಎಂದು ನಾನು ಒಂದೆರಡು ನಿಮಿಷ ನೋಡಿದೆ. ಅದು ಬರಲೇ ಇಲ್ಲ. ತಾನು ತೆಗೆದುಕೊಂಡು ಹೋಗಿದ್ದ ಎರಡೂ ಮರಿಗಳಿಗೆ ಹಾಲು ಕುಡಿಸುತ್ತಾ ಅವುಗಳನ್ನು ಅವುಚಿಕೊಂಡು ಮಲಗಿಬಿಟ್ಟಿದೆ! ಇದನ್ನು ನಂಬಿದರೆ ಉಳಿದ ಮರಿಗಳು ಸತ್ತೇ ಹೋಗುತ್ತವೆ ಎನ್ನಿಸಿ, ನಾನು ಮತ್ತೊಂದು ಮರಿಯನ್ನು ತೆಗೆದು ಹೊರಕ್ಕೆ ಹಾಕಿದೆ. ತಾಯಿ ನಾಯಿ ಈ ಭಾರಿ ಬರಲೇ ಇಲ್ಲ. ಇನ್ನೊಂದು ಮರಿಯನ್ನು ಹೊರಗೆ ತೆಗೆದು ನೀರು ಇಲ್ಲದೆಡೆಗ ಕಾರಿನ ಕೆಳಗೆ ಹಾಕಿ, ನಾಲ್ಕೂ ಮರಿಗಳು ಬದುಕಿದವಲ್ಲ ಎಂದು ನಿಟ್ಟುಸಿರು ಬಿಟ್ಟೆ. ಆದರೂ ಏನೋ ಅನುಮಾನ. ಟಾರ್ಚ್‌ನ ಬೆಳಕಿನಲ್ಲಿ ಚರಂಡಿಯ ನೀರಿನಲ್ಲಿ ಏನೋ ಇದ್ದಂತೆ ಕಂಡಿತು. ಮರದ ಎಲೆ ನೀರಿನ ನೊರೆ ಎಲ್ಲ ಸೇರಿರಬೇಕು ಅನ್ನಿಸಿದರೂ, ಇನ್ನೊಂದು ಮರಿ ಇದ್ದರೂ ಇರಬಹುದು ಎನ್ನಿಸಿತು. ಅದನ್ನು ಕೈಯಿಂದ ಎಟುಗಿಸಲು ಆಗದಷ್ಟು ಒಳಗೆ ಇತ್ತು.

ಆಗ ನನ್ನ ಮಗಳು ಅವಳ ಷಟಲ್ ಕಾಕ್ ಬ್ಯಾಟನ್ನು ತಂದುಕೊಟ್ಟಳು. ಆ ಬ್ಯಾಟಿನಿಂದ ಮರಳು ನೀರಿನ ಮಿಶ್ರಣದೊಳಗೆ ಹಾಕಿ ಎಳೆದುಕೊಂಡೆ. ನೋಡಿದರೆ ಇನ್ನೋಂದು ನಾಯಿ ಮರಿ! ಬಿಳಿಯಬಣ್ಣದ್ದು. ಕುಯಿಕುಯಿ ಎನ್ನುತ್ತ ನಡುಗುತ್ತಿತ್ತು. ಕೇವಲ ನಾಲ್ಕೇ ಮರಿಗಳು ಎಂದು ತಿಳಿದುಕೊಂಡಿದ್ದ ನಮಗೆ ಆಶ್ಚರ್ಯ ಕಾದಿತ್ತು. ಅದನ್ನು ಎತ್ತಿ ಉಳಿದೆರಡು ನಾಯಿ ಮರಿಗಳಿದ್ದೆಡೆಗೆ ಸೇರಿಸಿದ್ದಾಯಿತು. ಅಷ್ಟೊತ್ತಿಗೆ ನಾಯಿಗೆ ನಮ್ಮ ಮೇಲೆ ನಂಬಿಕೆ ಬಂದಿತ್ತೊ ಏನೊ? ನಿಧಾನವಾಗಿ ಬಂದು ಇನ್ನೊಂದು ಮರಿಯನ್ನು ಕಚ್ಚಿಕೊಂಡು ಹೋಯಿತು.

ಉಳಿದ ಮರಿಗಳನ್ನು ಹಾಗೆಯೇ ಬಂದು ತೆಗೆದುಕೊಂಡು ಹೋಗುತ್ತದೆ ಎಂದು ನೋಡುತ್ತಿದ್ದರೆ, ಮತ್ತೆ ಬರದೆ ತೆಗೆದುಕೊಂಡು ಹೋಗಿದ್ದ ಮೂರೇ ಮರಿಗಳಿಗೆ ಹಾಲು ಕುಡಿಸುತ್ತಾ ಮಲಗಿದೆ! ಇತ್ತ ಉಳಿದೆರಡು ಮರಿಗಳು ಚಳಿಯಿಂದ ಕುಯ್ಗುಡುತ್ತಾ ಮುಲು ಮುಲು ಶಬ್ದ ಮಾಡುತ್ತಲೇ ಇದ್ದವು. ಇನ್ನು ಅದು ಬರುವವರೆಗೆ ಇವು ಬದುಕಿರುತ್ತವೆಯೊ ಇಲ್ಲವೊ ಎನ್ನಿಸಿ, ಎರಡನ್ನು ಎತ್ತಿ, ನಾಯಿ ಮರಿಗಳೊಂದಿಗೆ ಮಲಗಿದ್ದ ಕಾಂಪೋಂಡಿನ ಒಳಬದಿಯಿಂದ ಅದು ಮಲಗಿದ್ದೆಡೆಗೆ ನಿಧಾನವಾಗಿ ಹಾಕಿದೆ. ಜೊತೆಗೆ ಒಂದಷ್ಟು ನ್ಯೂಸ್ ಪೇಪರನ್ನೂ ಹಾಕಿದ್ದೆ. ನಾಯಿ ಒಮ್ಮೆ ಗುರ್ ಎಂದಿತಾದರೂ, ಹೆಚ್ಚು ತಂಟೆ ಮಾಡದೆ ಐದೂ ಮರಿಗಳನ್ನು ತನ್ನ ಮಡಿಲಿನಲ್ಲಿ ಸೇರಿಸಿಕೊಂಡು ಸುರುಳಿಯಾಗಿ ಸುತ್ತಿದಂತೆ ಮಲಗಿ ಹಾಲು ಕುಡಿಸಲಾರಂಭಿಸಿತು.

ಎದ್ದು ನಿಲ್ಲಲೂ ಶಕ್ತಿ ಇಲ್ಲದೆ, ಇನ್ನೇನು ಸತ್ತೇ ಹೋಗುತ್ತವೆ ಎಂದುಕೊಂಡಿದ್ದ ಮರಿಗಳೂ ಮುಲುಮುಲು ಎನ್ನುತ್ತಾ ಹಾಲುಕುಡಿಯುವ ಶಬ್ದ ಕಿವಿಗೆ ಬಿತ್ತು. ಎಕ್ಕದ ಗಿಡ ದಟ್ಟವಾಗಿ ಇತ್ತಾದುದರಿಂದ, ಹಾಗೂ ಕಾಂಪೋಂಡಿನ ಆಸರೆ ಇದ್ದುದರಿಂದ ಅಲ್ಲಿ ನೀರು ಹೆಚ್ಚು ಬೀಳುತ್ತಿರಲಿಲ್ಲ. ಇನ್ನು ತೊಂದರೆಯಿಲ್ಲ ಎನ್ನಿಸಿ ನಿರುಮ್ಮಳನಾದೆ. ಇಷ್ಟೆಲ್ಲಾ ಮುಗಿಯುವಷ್ಟರಲ್ಲಿ ಹನ್ನೊಂದು ಗಂಟೆಯೇ ಆಗಿತ್ತು!

ಬೆಳಿಗ್ಗೆ, ಎದ್ದು ನೋಡಿದಾಗ ನಾಯಿ ತನ್ನ ಐದು ಮರಿಗಳೊಂದಿಗೆ ಜೀವಂತ ಇದ್ದುದನ್ನು ಕಂಡೆ. ಮನಸ್ಸಿಗೆ ಖುಷಿ ಎನ್ನಿಸಿತ್ತು. ಮಗಳು ಖುಷಿಯಾಗಿದ್ದಳು. ’ನಾವು ಹೆಲ್ಪ್ ಮಾಡದಿದ್ದರೆ ಎಲ್ಲ ಮರಿಗಳನ್ನೂ ಅದು ಉಳಿಸಿಕೊಳ್ಳುತ್ತಿತ್ತೆ?’ ಎಂಬುದು ಅವಳ ಪ್ರಶ್ನೆ. ಅದೇನೋ ನನಗೆ ಗೊತ್ತಿಲ್ಲ. ಪ್ರಾಣಿ ಪ್ರಪಂಚದ ನಿಗೂಢತೆಗಳು ಅರ್ಥವಾಗುವುದು ಕಷ್ಟ. ಒಂದೊಂದೆ ಮರಿಯನ್ನು ಕಚ್ಚಿಕೊಂಡು ಹೋಗಿ ಅವಕ್ಕೆ ಸ್ವಲ್ಪ ಹಾಲು ಕುಡಿಸಿ, ಉಳಿದ ಮರಿಗಳೆಡೆಗೆ ಗಮನ ಹರಿಸುವ ಆ ನಾಯಿಯ ಪ್ರವೃತ್ತಿ ಒಂದು ಸೋಜಿಗವೇ ಸರಿ. ಎಲ್ಲ ಮರಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಒಂದೆರಡನ್ನಾದರೂ ಉಳಿಸಿಕೊಳ್ಳಬೇಕೆನ್ನುವ ಮನೋವೃತ್ತಿಯೇ!? ಇದು ಚಿದಂಬರ ರಹಸ್ಯ.

ಈಗ, ಮರಳಿನ ಕೆಸರಿನಲ್ಲಿ ಉಳಿದುಹೋಗಿರುವ ನನ್ನ ಒಂದು ಚಪ್ಪಲಿಯನ್ನು ನಾನು ರೆಸ್ಕ್ಯೂ ಮಾಡಬೇಕಿದೆ, ಅಷ್ಟೆ!

‍ಲೇಖಕರು avadhi

11 May, 2013

1 Comment

  1. Indiresh

    ನಾಯಿಮರಿಗಳನ್ನು ರಕ್ಷಿಸುವ ಆಪರೇಶನ್ ಅನ್ನು ಸಮರ್ಥವಾಗಿ ಪೂರ್ಣಗೊಳಿಸಿದ ತಮಗೂ ತಮ್ಮ ಉತ್ಸಾಹಿ ಮಕ್ಕಳಿಗೂ hats off .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading