ನಮಸ್ಕಾರ, ನಿಮ್ಮೊಂದಿಗೆ ಮಾತನಾಡುವ, ಭೇಟಿಯಾಗುವ, ನಿಮ್ಮ ಮಾತುಗಳನ್ನು ಕೇಳಿಸಿಕೊಳ್ಳುವ ಒಂದು ಒಳ್ಳೆಯ ಅವಕಾಶ ನನಗೆ ಸಿಕ್ಕಿದೆ. ಇದಕ್ಕಾಗಿ ಅವಧಿಗೆ ನನ್ನ ವಂದನೆಗಳು. ಇದು ಒಂದು ಆಕಸ್ಮಿಕ, ಆದರೆ ನನಗೆ ತುಂಬಾ ಸಂತೋಷ ತಂದ ಅವಕಾಶ.
ನಮಗೆ ಮನಶ್ಯಾಸ್ತ್ರಜ್ಞರು ಯಾಕೆ ಬೇಕು?
ಕಾಲ ಬದಲಾಗಿದೆ. ಮೊದಲು ನಾವು ಒಂದಿಷ್ಟು ಸಂಕಟವಾದರೂ ಓಡಿ ಹೋಗಿ ಅಮ್ಮನ ಮಡಿಲಲ್ಲಿ ತಲೆ ಇಟ್ಟು ಬಿಕ್ಕುತ್ತಿದ್ದೆವು. ಸಂತೋಷವಾದರೂ ಅಷ್ಟೇ ಅಮ್ಮ ಬೇಕು. ಕಾಲೇಜಿನ ಓದು ಮುಗಿಸಿ, ಕೆಲಸ ಹಿಡಿದು, ಸಂಬಳ ಎಣಿಸಿಕೊಳ್ಳುತ್ತಾ ಇದ್ದರೂ ನಾವು ಮನೆ ಎಂಬ ಭದ್ರತೆ ಅಥವಾ ಇಂದಿನ ಕಂಪ್ಯೂಟರ್ ಭಾಷೆಯಲ್ಲಿ ಹೇಳುವುದಾದರೆ ‘ಫೈರ್ ವಾಲ್’ ಹೊಂದಿರುತ್ತಿದ್ದೆವು. ಖುಷಿ, ನೋವು ಎಲ್ಲಾ ಹಂಚಿಕೊಳ್ಳಲು ಎಷ್ಟೊಂದು ಮಡಿಲುಗಳಿತ್ತು ಒರಗಲು ಎಷ್ಟೊಂದು ಭುಜಗಳಿರುತ್ತಿತ್ತು. ಆದರೆ ಈಗ ಪ್ರಾಥಮಿಕ ಶಿಕ್ಷಣ ಪಡೆಯುವ ವೇಳೆಗೇ ಮನೆಯಿಂದ ಹೊರಬೀಳುವ ಪರಿಸ್ಥಿತಿ ಇದೆ. ಅಲ್ಲಿಂದ ಶುರುವಾಗಿ ಬದುಕಿನಲ್ಲಿ ನಾವು ಎಷ್ಟೋ ಬಾರಿ ‘ನಿನಗೆ ನೀನೇ ಮಿತ್ರ’ ಎನ್ನುವ ರೀತಿಯಲ್ಲಿ ಬದುಕುತ್ತಿರುತ್ತೇವೆ. ನಮ್ಮ ಕಷ್ಟಕ್ಕೂ ನಾವೇ ಗೆಳೆಯರು, ನಮ್ಮ ಖುಶಿಗೂ..
ಹೌದಲ್ಲಾ ಕಾಲ ಬದಲಾಗಿದೆ. ಆ ಕಾರಣಕ್ಕಾಗಿಯೇ ಇದನ್ನು ನಿರ್ವಹಿಸುವ ಸವಾಲುಗಳೂ ಹೆಚ್ಚಾಗಿವೆ. ನಮ್ಮ ಮನಸ್ಸಿನ ಮೇಲೆ ಬೀಳುತ್ತಿರುವ ಹೊರೆಯೂ ಹೆಚ್ಚುತ್ತಿದೆ. ಆ ಕಾರಣಕ್ಕಾಗಿಯೇ ಮನಸ್ಸನ್ನು ಅರಿಯುವ ಮನಸ್ಸಿನೊಡನೆ ಮಾತನಾಡುವ ತಜ್ಞರೂ ಬೇಕಾಗಿದ್ದಾರೆ.
ಇವತ್ತಿನ ದಿನಗಳಲ್ಲಿ ಮೆಡಿಕಲ್ ಸ್ಟೋರ್ ಗೆ ಹೋಗಿ ಯಾವುದೇ ಮುಜುಗರವಿಲ್ಲದೆ ನಮಗೆ ಬೇಕಿದ್ದನ್ನು ಕೊಂಡು ತರುತ್ತೇವೆ. ಡಾಕ್ಟರ್ ಬಳಿ ಬೇಕಾದದ್ದನ್ನು ಚರ್ಚಿಸುತ್ತೇವೆ. ಗೆಳೆಯರ ಜೊತೆ ಡೇಟಿಂಗ್ ಬಗ್ಗೆಯೂ ಭಿಡೆ ಇಲ್ಲದೆ ಮಾತಾಡುತ್ತೇವೆ. ‘ಲಿವ್- ಇನ್’ ಬದುಕೂ ನಮಗೆ ಗೊತ್ತು. ಆದರೆ ಈ ದಿನಗಳಲ್ಲೂ ನಾವು ಮನಶ್ಯಾಸ್ತ್ರಜ್ಞರನ್ನು ನೋಡಲು ಹೋಗಿದ್ದೆವು ಎಂದು ಹೇಳಲು ಮಾತ್ರ ಹಿಂದೆ ಮುಂದೆ ನೋಡುತ್ತೇವೆ. ಅಷ್ಟೇ ಏಕೆ, ನಮಗೆ ಅವರ ಬಳಿ ಹೋಗುವ ಅಗತ್ಯ ಇದೆ ಎಂಬುದನ್ನು ನಾವು ಒಪ್ಪಿಕೊಳ್ಳಲೂ ಹಿಂಜರಿಯುತ್ತೇವೆ. ಏಕೆ ಹೀಗೆ?
ವೈದ್ಯ ವಿಜ್ಞಾನ ಅಷ್ಟು ಮುಂದುವರೆಯದ ಆ ದಿನಗಳಲ್ಲಂತೂ ಕೇಳಲೇ ಬೇಡಿ. ಮಾನಸಿಕವಾಗಿ ಅಸ್ವಸ್ಥರಾದವರನ್ನು ದೆವ್ವ ಮೆಟ್ಟಿದವರೆಂದು ಭಾವಿಸಿ ಹುಣಿಸೆ ಬರಲಿನಿಂದ ಹಿಗ್ಗಾ ಮುಗ್ಗ ಬಾರಿಸುವುದು, ಕೈ ಕಾಲಿಗೆ ಬರೆ ಹಾಕುವುದು ಸಾಮಾನ್ಯವಾಗಿತ್ತು. ಆದರೆ ಆಮೇಲೆ ಕಾಲ ಕಳೆದಂತೆ ದೇಹಕ್ಕಾದಂತೆ, ಮನಸ್ಸಿಗೂ ಅಸ್ವಸ್ಥತೆ ಆಗುತ್ತದೆ ಅನ್ನುವುದು ಜನರಿಗೆ ಅರಿವಾಯಿತು. ಆದರೆ ಅದರ ನಿವಾರಣೆಗೆ ವೈದ್ಯರ ಅಗತ್ಯ ಇದೆ ಎನ್ನುವುದನ್ನೂ ನಾವು ಅಷ್ಟೇ ಮುಕ್ತವಾಗಿ ಒಪ್ಪಿಕೊಳ್ಳುತ್ತಿದ್ದೇವಾ ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಕೂತಾಗ ಸಿಗುವ ಪ್ರಶ್ನೆ ’ಇಲ್ಲ’.
ಹುಬ್ಬು ಸಣ್ಣದಾಗಿ ಮೇಲೇರುತ್ತದೆ
ಇಂದಿಗೂ ಸಹ ಯಾರಾದರೂ ಮಾನಸಿಕ ತಜ್ಞರ ಬಳಿ ಹೋಗುತ್ತಿದ್ದಾರೆ ಎಂದು ತಿಳಿದಾಗ ಹುಬ್ಬು ಸಣ್ಣದಾಗಿ ಮೇಲೇರುತ್ತದೆ. ಯಾಕೆ ಈ ಮನೋಭಾವ? ನಿಮ್ಮ ಕೈಗೆ, ಕಾಲಿಗೆ, ದೇಹದ ಯಾವುದೇ ಭಾಗಕ್ಕೆ ಗಾಯವಾಗುವುದು ಎಷ್ಟು ಸಹಜವೋ ಅಷ್ಟೇ ಸಹಜ ಮನಸ್ಸಿಗೆ ಆಗುವ ಗಾಯ. ಆ ಗಾಯಗಳಿಗೆ ಚಿಕಿತ್ಸೆ ಎಷ್ಟು ಅಗತ್ಯವೋ ಅಷ್ಟೇ ಅಗತ್ಯ ಮನಸ್ಸಿನ ಗಾಯಗಳಿಗೆ ಚಿಕಿತ್ಸೆ ನೀಡುವುದು.
ಒಬ್ಬ ವ್ಯಕ್ತಿ ಮನಶ್ಯಾಸ್ತ್ರಜ್ಞರ ಬಳಿ ಸಲಹೆಗೆ-ಚಿಕಿತ್ಸೆಗೆ ಹೋಗುತ್ತಿದ್ದಾನೆ ಎಂದರೆ ಆತ ಅಥವಾ ಆಕೆ ಹುಚ್ಚರು ಎಂದು ಅರ್ಥವಲ್ಲ. ಯಾವುದೇ ಕಾರಣದಿಂದ ಆಘಾತಗೊಂಡ ಮನಸ್ಸಿಗೆ ಸರಿ ತಪ್ಪುಗಳ ವಿಶ್ಲೇಷಣೆ ಸುಲಭದ ಕೆಲಸವಲ್ಲ. ಮಾನಸಿಕ ಒತ್ತಡದ ಸಮಯದಲ್ಲಿ ತೆಗೆದುಕೊಂಡ ನಿರ್ಧಾರಗಳು ಅನೇಕ ಸಲ ತಪ್ಪಾಗಿದ್ದು, ಮನಸ್ಸು ಇನ್ನಷ್ಟು ಮುದುಡುವಂತಾದರೂ ಹೆಚ್ಚಲ್ಲ. ಇಂತಹ ಸಂದರ್ಭದಲ್ಲಿ ಮನಶ್ಯಾಸ್ತ್ರಜ್ಞರ ಬಳಿ ಹೋದರೆ ಅವರು ತಮ್ಮನ್ನು ತಾವು ಅರಿಯಲು ಸಹಾಯವಾಗುತ್ತದೆ.
ಭಾರತೀಯ ಸಮಾಜ ವ್ಯವಸ್ಥೆ ಬೆಳೆದು ಬಂದ ಬಗೆಯನ್ನು ಗಮನಿಸಿದಾಗ ನಮಗೆ ಕಾಣುವುದು ಒಂದು ಅತ್ಯಂತ ಸದೃಢವಾದ ಕೌಟಂಬಿಕ ವ್ಯವಸ್ಥೆ. ಎಲ್ಲಿಯವರೆಗು ಕೂಡು ಕುಟುಂಬಗಳಿದ್ದವೋ ಅಲ್ಲಿಯವರೆಗೆ ವ್ಯಕ್ತಿಗೆ ಏಕಾಂಗಿತನ ಕಾಡುತ್ತಿದ್ದದ್ದು ತುಂಬಾ ಕಡಿಮೆ. ಕಷ್ಟ, ಸುಖ, ನೋವು, ದುಗುಡ ಎಲ್ಲವನ್ನೂ ಹಂಚಿಕೊಳ್ಳಲು ಮನೆಯ ತುಂಬಾ ಜನ ಇರುತ್ತಿದ್ದರು. ಆದರೆ ಕೂಡು ಕುಟುಂಬ ಈಗ ವಿಘಟನೆಗೊಂಡು ಯಾವ ಹಂತ ತಲುಪಿದೆ ಎಂದರೆ, ಮೊದಲು ಒಂಟಿ ಕುಟುಂಬ ಎಂದರೆ ಅಪ್ಪ-ಅಮ್ಮ-ಮಕ್ಕಳು ಎನ್ನುವ ಅರ್ಥ ಇತ್ತು. ಇಂದಿನ ಕಾಲಮಾನದಲ್ಲಿ ಕುಟುಂಬ ಎಂದರೆ ಅವನು ಮತ್ತು ಅವಳು, ಅಥವಾ ಎಷ್ಟೋ ಸಂದರ್ಭದಲ್ಲಿ ಕೇವಲ ಅವನು ಅಥವ ಅವಳು ಎನ್ನುವ ಪರಿಸ್ಥಿತಿ ಇದೆ.
ಜೊತೆಗೆ ಜಾಗತೀಕರಣದ ಪ್ರಭಾವದಿಂದ ಸೃಷ್ಟಿಯಾದ ಸಮಯಾ ಸಮಯವಿಲ್ಲದ ಉದ್ಯೋಗಗಳು, ಅಲ್ಲಿನ ಅಭದ್ರತೆ, ಒತ್ತಡ, ಮೇಲೇರುವುದಂತಿರಲಿ, ಇದ್ದ ಜಾಗದಲ್ಲಿ ಇರಲೇ ಬೇಕು ಎಂದರೂ ಪ್ರತಿ ನಿಮಿಷ ಹೋರಾಡಬೇಕಾದಂತಹ ಸ್ಥಿತಿ, ದೇಹಕ್ಕಿಂತ ಮನಸ್ಸಿಗೆ ಅತ್ಯಂತ ಹೆಚ್ಚಿನ ಒತ್ತಡ ಬಿದ್ದು ಆ ಮೂಲಕ ದೇಹ ಮತ್ತು ಮನಸ್ಸು ಎರಡೂ ಕಂಗಾಲಾಗುವ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ. ಆ ಒತ್ತಡದ ಕ್ಷಣಗಳನ್ನು ಕಡಿಮೆ ಮಾಡುವ ಸಾಂಗತ್ಯದ ಕೊರತೆ, ನಗರದ ಕಾಡುವ ಏಕಾಕಿತನ, ಎಲ್ಲೂ ಒಳಗೊಳ್ಳದ ಸ್ಥಿತಿ ಮಾನಸಿಕ ನೆಮ್ಮದಿಗೆ ಇನ್ನಷ್ಟು ಮಾರಕ.
ಗೆಳೆಯರ ಬಳಿಯೇ ಹೇಳಿಕೊಳ್ಳಬಹುದಲ್ಲಾ? 
ಅರೆ ಹಾಗಾದರೆ ನಾವು ನಮ್ಮ ಸಮಸ್ಯೆಗಳನ್ನು, ದುಗುಡಗಳನ್ನು ನಮ್ಮ ನಮ್ಮ ಸ್ನೇಹಿತರ, ಸಹೋದ್ಯೋಗಿಗಳ ಜೊತೆಯೇ ಹೇಳಿಕೊಂಡು ಹಗುರಾಗಬಹುದಲ್ಲ ಎಂದು ನೀವು ಕೇಳಬಹುದು. ನಿಜ, ಹಾಗೆ ಹೇಳಿಕೊಳ್ಳುವುದರಿಂದ ತಾತ್ಕಾಲಿಕವಾಗಿ ನಿಮ್ಮ ಮನಸ್ಸು ಹಗುರಾಗಬಹುದು, ನಿಮಗೆ ಅನುಕಂಪ, ಸಹಾನುಭೂತಿ ಸಹ ಸಿಗಬಹುದು. ಆದರೆ ಅದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಕ್ಕುವುದಿಲ್ಲ. ನಿಮ್ಮ ಸಮಸ್ಯೆಗಳನ್ನು ನಿಮ್ಮಿಂದ ಪ್ರತ್ಯೇಕಿಸಿ ನೋಡಬಲ್ಲ, ನಿಮ್ಮ ಬಗ್ಗೆ, ನಿಮ್ಮ ಸಮಸ್ಯೆಗಳ ಬಗ್ಗೆ ಯಾವುದೇ ಪೂರ್ವಾಗ್ರಹ ಧೋರಣೆ ಇಲ್ಲದೆ, ’ಇದು ಸರಿ’, ’ಇದು ತಪ್ಪು’ ಎಂದು ನಿಮ್ಮ ಸಮಸ್ಯೆಗಳನ್ನು ಕಪ್ಪು – ಬಿಳುಪಾಗಿ ಪ್ರತ್ಯೇಕಿಸದೆ, ಅವನ್ನು ಕೇವಲ ವಸ್ತು ನಿಷ್ಠವಾಗಿ ನೋಡಿ, ವಿಶ್ಲೇಷಿಸಿ, ನಿಮ್ಮ ಸುಪ್ತ ಮನಸ್ಸನ್ನು ಮಾತು ಕಥೆಗೆಳೆದು, ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ಒಂದು ದಿಕ್ಕು ತೋರಿಸಲೆಂದೇ ತರಬೇತುಗೊಂಡಿರುವ ವೈದ್ಯರ ಅಗತ್ಯ ನಿಮಗೆ ಇದೆ.
ನಿಮ್ಮ ಗೆಳೆಯರು ಅಥವಾ ಸಹೋದ್ಯೋಗಿಗಳ ಹತ್ತಿರ ಬರುವ ಒಂದು ತೊಡಕೆಂದರೆ ಅವರಿಗೆ ನಿಮ್ಮ ಸಮಸ್ಯೆಗಳಿಗಿಂತ ನೀವು ಹತ್ತಿರದವರು, ಹಾಗಾಗಿ ನಿಮಗೆ ಪ್ರಿಯವಾಗುವಂತೆ ಮಾತನಾಡಬಲ್ಲರೇ ಹೊರತು ಬಹಳಷ್ಟು ಜನ ವಸ್ತು ನಿಷ್ಠವಾಗಿ ನಿಮ್ಮ ಸಮಸ್ಯೆಯನ್ನು ನೋಡಲಾರರು. ಮತ್ತೊಂದು ಸಮಸ್ಯೆಯೆಂದರೆ ಅವರಲ್ಲಿರುವ ನೈತಿಕ ಪ್ರಜ್ಞೆ ಅವರನ್ನು ಅವರಿಗೇ ಅರಿವಿಲ್ಲದಂತೆ ನ್ಯಾಯಾಧೀಶರ ಪೀಠದಲ್ಲಿ ಕೂರಿಸಿಬಿಡುತ್ತದೆ. ಅವರು ಯಾವುದೇ ರೀತಿಯಲ್ಲಿ ನಿಮ್ಮ ಬದುಕಿಗ ಸಂಬಂಧಿಸಿದವರಾದರೆ ಆ ಸಂಬಂಧ ಸಹ ಅವರ ಪ್ರತಿಕ್ರಿಯೆಯನ್ನು ನಿರ್ದೇಶಿಸುತ್ತಿರುತ್ತದೆ. ಹಾಗಾಗಿ ಇವೇನು ಅಲ್ಲದ, ಮೂರನೇ ವ್ಯಕ್ತಿಯ ಅಗತ್ಯ ಇಲ್ಲಿ ಹೆಚ್ಚು. ಆ ಮೂರನೆಯ ವ್ಯಕ್ತಿ ನಿಮ್ಮ ಸಮಸ್ಯೆ ಪರಿಹರಿಸಲು ತರಬೇತು ಪಡೆದವರಾಗಿರಬೇಕು ಎಂಬುದರಿಂದ ನಿಮಗೆ ಮನಶ್ಯಾಸ್ತ್ರಜ್ಞರ ಅಗತ್ಯ ಬೀಳುತ್ತದೆ.
ಮನಸ್ಸಿನ ಒತ್ತಡಕ್ಕೆ ಕಾರಣವಾದ, ಎಷ್ಟೋ ಸಲ ನಮಗೇ ಗೊತ್ತಿಲ್ಲದ ನಮ್ಮ ಸುಪ್ತ ಮನಸ್ಸಿನಾಳದಲ್ಲಿ ಹೂತುಹೋದ ನೋವಿನ ಕಾರಣವನ್ನು ಯಾವುದೇ ಪೂರ್ವಾಗ್ರಹವಿಲ್ಲದೆ, ಮನಶ್ಯಾಸ್ತ್ರಜ್ಞರ ಬಳಿ ಬಿಚ್ಚಿಡುತ್ತಾ ಹೋದಂತೆ ನಾವು ಆ ಸಮಸ್ಯೆಯನ್ನು ಎದುರಿಗಿಟ್ಟುಕೊಂಡು ನೋಡುವುದು, ವಿಶ್ಲೇಷಿಸುವುದು ಸಾಧ್ಯವಾಗುತ್ತದೆ. ಕಡೆಗೆ ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾದವರು ನೀವೇ, ಆದರೆ ಹಾಗೆ ನಿರ್ಧಾರ ತೆಗೆದುಕೊಳ್ಳಲು ನಿಮ್ಮ ಮನಸ್ಸನ್ನು ಅಣಿಗೊಳಿಸುವುದರಲ್ಲಿ ನಿಮಗೆ ಮನಶ್ಯಾಸ್ತ್ರಜ್ಞರ ನೆರವು ಬೇಕಾಗುತ್ತದೆ.
ನಮ್ಮ ದೈನಂದಿನ ವ್ಯವಹಾರಗಳನ್ನು ಸಹಾ ಸಮಸ್ಯೆ ಇಲ್ಲದೆ ನಿರಾತಂಕವಾಗಿ ನಡೆಸಲಾಗುತ್ತಿಲ್ಲ ಎಂದರೆ ಅದು ಮನಸ್ಸು ಅರೋಗ್ಯವಾಗಿಲ್ಲ ಎನ್ನುವುದರ ಲಕ್ಷಣವೇ. ಪದೇ ಪದೇ ಒಂದೇ ಯೋಚನೆ ಮನಸ್ಸನ್ನು ಕಾಡುವುದು, ಹಲವಾರು ಸಲ ಪದೇ ಪದೇ ಮಾಡಿದ್ದನ್ನೇ ಮಾಡುತ್ತಾ ಇರುವುದು, ನಮ್ಮ ಬಗೆಗಿನ ಒಂದು ಸಣ್ಣ ಟೀಕೆಯನ್ನೂ ಸಹಿಸಲಾಗದಷ್ಟು ಮನಸ್ಸು ಸೂಕ್ಷ್ಮವಾಗುವುದು, ಅದನ್ನೇ ಹಚ್ಚಿಕೊಂಡು ಕೊರಗುವುದು, ನಿದ್ರೆ ಇಲ್ಲದೆ ಹೊರಳಾಡುವುದು, ಅಥವಾ ಎಷ್ಟೇ ಮಲಗಿದರೂ ಫ್ರೆಷ್ ಆಗದ ಮನಸ್ಸು, ಆಯಾಸ, ದೈಹಿಕವಾಗಿ ಯಾವುದೇ ಖಾಯಿಲೆ ಇಲ್ಲದಿದ್ದರೂ ಪದೇ ಪದೇ ಹುಷಾರು ತಪ್ಪುವುದು, ಯಾವುದೇ ಸಂಬಂಧವನ್ನೂ ಧೀರ್ಘಕಾಲದವರೆಗೂ ಸಂಭಾಳಿಸಲು ಅಸಮರ್ಥರಾಗುವುದು, ಯಾವುದಕ್ಕೂ ಉತ್ಸಾಹವೇ ಇಲ್ಲದಿರುವುದು, ಬದುಕು ಏಕತಾನ ಅನ್ನಿಸುವುದು, ಸದಾ ಕೆಟ್ಟಯೋಚನೆಗಳೇ ಮನಸ್ಸನ್ನು ಆಳುವುದು, ಮನೆಯವರೊಡನೆ, ಸ್ನೇಹಿತರೊಡನೆ ಅಸಹನೆ, ಸಣ್ಣ ಸಣ್ಣ ವಿಷಯಕ್ಕೂ ರೇಗುವುದು, ಕಾರಣವೇ ಇಲ್ಲದೆ ಅಳುವುದು ಅಥವಾ ಅಳಬೇಕು ಅನ್ನಿಸುವುದು…. ಇವೆಲ್ಲಾ ಖಿನ್ನತೆಯ ಲಕ್ಷಣಗಳೇ.
ಅನೇಕ ಸಲ ಇವು ಸುಪ್ತವಾಗಿದ್ದು, ಅದರ ಇರುವಿಕೆ ನಮ್ಮ ಗಮನಕ್ಕೆ ಬಾರದೆ ಹೋಗಬಹುದು, ಅಥವಾ ಯಾರಾದರು ಅವುಗಳನ್ನು ಗುರ್ತಿಸಿದರೂ ನೀವು ಅದನ್ನು ಒಪ್ಪಿಕೊಳ್ಳದೇ ಹೋಗನಹುದು. ಆದರೆ ದಯವಿಟ್ಟು ಗಮನಿಸಿ, ಇವೆಲ್ಲಾ ನಮಗೆ ಮನಸ್ಸು ನೀಡುವ ಎಚ್ಚರಿಕೆಯ ಗಂಟೆಗಳು. ನೆರವಿನ ಅಗತ್ಯ ಇದೆ ಎನ್ನುವುದರ ಸೂಚನೆಗಳು. ಅವುಗಳನ್ನು ನಿರ್ಲಕ್ಷಿಸಬೇಡಿ.
ಮೊದಲಿನ ಭೇಟಿಯಲ್ಲೇ ಪವಾಡಗಳನ್ನು ನಿರೀಕ್ಷಿಸಬೇಡಿ
ಮೊದಲ ಹೆಜ್ಜೆ ಎಂದರೆ ಸಮಸ್ಯೆ ಇದೆ ಎಂದು ನೀವು ಒಪ್ಪಿಕೊಳ್ಳುವುದು, ಮುಂದಿನ ಹೆಜ್ಜೆ ಅವುಗಳ ನಿವಾರಣೆಗೆ ಪ್ರಯತ್ನಿಸುವುದು. ನಿಮ್ಮ ಕುಟುಂಬ ವೈದ್ಯರು ಅಥವಾ ಗೆಳೆಯರ ಅಥವಾ ಹಿತೈಷಿಗಳ ಹತ್ತಿರ ಚರ್ಚಿಸಿ, ಇಲ್ಲಿ ಇಂಟರ್ನೆಟ್ ಸಹ ನಿಮಗೆ ಸಹಾಯ ಮಾಡುತ್ತದೆ. ಒಬ್ಬ ಒಳ್ಳೆಯ ಮನಶ್ಯಾಸ್ತ್ರಜ್ಞರ ಹತ್ತಿರ ಹೋಗಿ. ಇಲ್ಲಿ ನಾನು ಇನ್ನೊಂದು ಮಾತು ಸೇರಿಸಬೇಕು. ಮೊದಲಿನ ಒಂದು ಅಥವಾ ಎರಡನೆಯ ಭೇಟಿಯಲ್ಲಿ ಯಾವುದೇ ಪವಾಡಗಳನ್ನು ನಿರೀಕ್ಷಿಸಬೇಡಿ. ಏಕೆಂದರೆ, ನಿಮ್ಮ ಮನಸ್ಸನ್ನು ನಂಬಿಕೆಗೆ ಅಣಿಗೊಳಿಸಿ, ನೀವು ಮುಕ್ತವಾಗಿ ಮಾತನಾಡುವಂತೆ ಮಾಡಲು ಮನಶ್ಯಾಸ್ತ್ರಜ್ಞರಿಗೆ ಸ್ವಲ್ಪ ಸಮಯ ಬೇಕಾಗುತ್ತದೆ. ನೀವು ವೈದ್ಯರ ಬಗ್ಗೆ ವಿಶ್ವಾಸ ಬೆಳೆಸಿಕೊಂಡು ನಿಮ್ಮ ಸಮಸ್ಯೆಯನ್ನು ಪೂರ್ಣವಾಗಿ, ಮುಕ್ತವಾಗಿ ಹೇಳಿಕೊಳ್ಳುವುದು ಸಹ ಇಲ್ಲಿ ಅಗತ್ಯ. ಗಮನಿಸಿ ನೀವು ಅರ್ದಂಬರ್ಧ ಹೇಳಿಕೊಂಡರೆ, ಅವರು ಕೊಡುವ ಚಿಕಿತ್ಸೆ ಸಹ ಪೂರ್ಣವಾಗಿರುವುದಿಲ್ಲ, ಅದು ಪರಿಣಾಮಕಾರಿಯೂ ಅಲ್ಲ.
ಎಲ್ಲವನ್ನೂ ಹೇಳಿಕೊಳ್ಳಿ
ಮತ್ತೊಂದು ವಿಷಯ ಅಂದರೆ ಮನಶ್ಯಾಸ್ತ್ರಜ್ಞರನ್ನು ಕೇವಲ ಒಬ್ಬ ವೈದ್ಯರನ್ನಾಗಿ ಮಾತ್ರ ನೋಡಿ, ಅವರು ಗಂಡು ಅಥವಾ ಹೆಣ್ಣು ಅನ್ನುವುದು ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ತೊಡಕಾಗಬಾರದು. ಅವರು ಕೇವಲ ವೈದ್ಯರು ಅಷ್ಟೆ. ಮತ್ತೂ ಕೆಲವರು ತಮ್ಮ ವೈಯಕ್ತಿಕ ವಿಷಯಗಳನ್ನು ಹೇಳಿಕೊಂಡರೆ ಆವರು ನಮ್ಮ ಬಗ್ಗೆ ಏನು ತಿಳಿದುಕೊಳ್ಳಬಹುದು ಅಂದು ಹಿಂಜರಿಯುತ್ತಾ ಪೂರ್ಣವಾಗಿ ಸಮಸ್ಯೆಯನ್ನೇ ಹೇಳಿಕೊಳ್ಳುವುದಿಲ್ಲ. ಆದರೆ ವಸ್ತುಸ್ಥಿತಿ ಏನೆಂದರೆ ಸಮಾಜ ಒಪ್ಪಿಕೊಂಡ, ರೂಢಿಸಿಕೊಂಡ ’ಸರಿ – ತಪ್ಪಿನ’ ವ್ಯಾಖ್ಯಾನ ನಮ್ಮ ಚಿಕಿತ್ಸೆಗೆ ಬೇಕಾಗಿರುವುದಿಲ್ಲ. ನಾವು ವೈದ್ಯರು, ನ್ಯಾಯಾಧೀಶರಲ್ಲ. ನಿಮ್ಮ ಸಮಸ್ಯೆಗಳು, ಮನದಾಳದ ಮಾತುಗಳು ಏನೇ ಇದ್ದರು ಅವುಗಳನ್ನು ಕೇವಲ ಕ್ಲಿನಿಕಲ್ ಆಗಿ ನೋಡಿ, ವಿಶ್ಲೇಶಿಸಿ, ಅವಕ್ಕೆ ಪರಿಹಾರ ಹುಡುಕುವುದಷ್ಟೇ ನಮ್ಮ ಕೆಲಸ, ನಮ್ಮ ವೃತ್ತಿಧರ್ಮ. ಅದು ನಮ್ಮ ಮೊದಲ ಮತ್ತು ಏಕೈಕ ಆದ್ಯತೆ.ಅದನ್ನು ಹೊರತುಪಡಿಸಿ ಮಿಕ್ಕೆಲ್ಲಾ ನಮಗೆ ಅಪ್ರಸ್ತುತ.
ಮನಸ್ಸನ್ನು ಕಾಡುವ ಖಿನ್ನತೆ, ಅಭದ್ರತೆ, ನಿದ್ದೆ ಬಾರದಿರುವಿಕೆ, ಹತಾಶೆ, ಅಸಹಾಯಕತೆ, ವಿವರಿಸಲಾಗದ ಭಯ, ಆತಂಕ, ಹೆದರಿಕೆ ಇವೆಲ್ಲಾ ಮನಸ್ಸಿನ ಅಸ್ವಸ್ಥತೆಯ ಲಕ್ಷಣಗಳು. ಇವುಗಳಲ್ಲಿ ಕೆಲವು ತಾತ್ಕಾಲಿಕವಾಗಿದ್ದು ಒಂದೆರಡು ದಿನಗಳಲ್ಲಿ ಕೆಲವರಿಗೆ ಅವುಗಳ ಕಾಟ ತಗ್ಗಿಹೋಗಬಹುದು. ಆದರೆ ಈ ಸ್ಥಿತಿ ತೀವ್ರವಾಗಿದ್ದರೆ ಅಥವಾ ಧೀರ್ಘ ಕಾಲದವರೆಗೂ ಇದ್ದರೆ ಅವನ್ನು ನಿರ್ಲಕ್ಷಿಸುವುದು ಅಪಾಯಕಾರಿ. ಅದಕ್ಕಾಗಿ ನಿಮಗೆ ಮನಶ್ಯಾಸ್ತ್ರಜ್ಞರ ನೆರವು ಬೇಕಾಗುತ್ತದೆ. ಇನ್ನೂ ಕೆಲವರಲ್ಲಿ ಇದು ಅಪಾಯಕಾರಿ ಮಟ್ಟದಲ್ಲಿದ್ದು, ಕೇವಲ ಮನಶ್ಯಾಸ್ತ್ರಜ್ಞರ ಸಹಾಯ ಸಾಕಾಗುವುದಿಲ್ಲ, ಅವರು ಮನೋವೈದ್ಯರನ್ನೂ ಸಹ ಸಂಪರ್ಕಿಸಬೇಕಾಗುತ್ತದೆ. ಆಗ ಅವರು ಕೊಡುವ ಔಷಧಿ ಮತ್ತು ಮನಶ್ಯಾಸ್ತ್ರಜ್ಞರು ನೀಡುವ ಥೆರಪಿ ಎರಡರ ಅಗತ್ಯವೂ ಬೀಳುತ್ತದೆ. ಸ್ಕಿಜೋಫ್ರೀನಿಯಾ ಇದಕ್ಕೊಂದು ಉದಾಹರಣೆ.
ಮನಸ್ಸಿನ ಗಾಯ ಮೇಲೆ ಕಾಣುವುದಿಲ್ಲ
ಇಲ್ಲಿ ನಾನು ಥೆರಪಿ ಬಗ್ಗೆ ಮಾತನಾಡಿದೆ. ಹಾಗಾದರೆ ಥೆರಪಿ ಅಂದರೇನು? ಮನಶ್ಯಾಸ್ತ್ರಜ್ಞರು ಬಳಸುವ ಥೆರಪಿ ಅಥವಾ ಚಿಕಿತ್ಸಾ ವಿಧಾನಗಳು ಹಲವಾರು. ನಿಮ್ಮ ಎಚ್ಚರದ ಮನಸ್ಸು ಮತ್ತು ಹಲವಾರು ಸಲ ನಿಮ್ಮ ಸುಪ್ತ ಮನಸ್ಸು ಹಲವಾರು ಪದರಗಳಿಂದ ಕೂಡಿರುತ್ತದೆ. ಮೇಲ್ಪದರದಲ್ಲಿರುವ ಗಾಯಗಳು ನೋಡಲು ಕಾಣುತ್ತದೆ, ಹಾಗಾಗಿ ಅವುಗಳ ಚಿಕಿತ್ಸೆಯೂ ಸುಲಭ. ಆದರೆ ಸುಪ್ತ ಮನಸ್ಸಿನಲ್ಲಿ ಹುದುಗಿರುವ ಗಾಯಗಳನ್ನು ಮೇಲೆ ತರಲು, ವಿಶ್ಲೇಷಿಸಲು, ಅರಿಯಲು, ಅವುಗಳನ್ನು ನಿವಾರಿಸಲು ಮನಶ್ಯಾಸ್ತ್ರಜ್ಞರು ಥೆರಪಿಯ ಸಹಾಯ ತೆಗೆದುಕೊಳ್ಳುತ್ತಾರೆ.
ನನ್ನ ಮುಂದಿನ ಅಂಕಣದಲ್ಲಿ ನಾನು ಕೆಲವು ಕೇಸ್ ಹಿಸ್ಟರಿಗಳ ಕಥೆಯನ್ನು ಹೇಳುತ್ತೇನೆ..






ಮೇಡಂ, ಬಹಳ ದಿನಗಳಿಂದ ಕಾಯುತ್ತಿರುವ ಈ ಅಂಕಣ ಆರಂಭವಾದದ್ದು ಸಂತೋಷ! ಅವಧಿಗಾಗಿ, ಓದುಗರಿಗಾಗಿ ಮನೋವಿಜ್ಞಾನದ ಕುರಿತು ಬರೆಯುತ್ತಿರುವ ನಿಮಗೆ ಧನ್ಯವಾದಗಳು.
ಆಹಾ!ಭೇಷ್,ಅವಧಿ!
ಡಾ.ಪದ್ಮಾವತಿಯವರಿಗೆ ಧನ್ಯವಾದಗಳು….
ಮನುಷ್ಯರ ವರ್ತನೆಯನ್ನು, ಪ್ರಜ್ಞಾಪ್ರವಾಹವನ್ನು ಅರ್ಥಮಾಡಿಕೊಳ್ಳಲು ನೆರವಾಗುವ ಯಾವುದೇ ಶಾಸ್ತ್ರವೂ ಸ್ವಾಗತಾರ್ಹವೇ.
Thanks Madam.
Nemmenda Tumba teledukonde.
Thanks Madam,
Manashashtrada bagge tilisikottidakkagi jotege AVADHI gu kooda thanks….
ಪ್ರಿಯ ಡಾ. ಪದ್ಮಾವತಿ, ಮನಶ್ಶಾಸ್ತ್ರ ವೈಜಾನಿಕವೇ?
This column is very timely. Looking forward eagerly for the weekly column. Thanks to Avadhi.
urgentaagi bekaagiro column idu
ತುಂಬಾ ಉಪಯುಕ್ತವಾದ ಬರಹ. ನಿಮ್ಮ ಮುಂದಿನ ಬರಹಕ್ಕಾಗಿ ಕಾಯುತ್ತಿದ್ದೇವೆ.
ಉತ್ತಮ ಆರಂಭ.. ಮುಂದಿನ ಅಂಕಣಕ್ಕಾಗಿ ಕಾಯುತ್ತಿರುವೆ..
ಮಾನ್ಯರೇ, ಅವಧಿಗೆ ಧನ್ಯವಾದಗಳು. ಮನೋ ವೈದ್ಯರಾದ, ಡಾ:ಪದ್ಮಾವತಿಯವರಿಗೂ ವಂದನೆಗಳು. ನಿಮ್ಮ ಲೇಖನದಲ್ಲಿ ತಿಳಿಸಿರುವಂತೆ ನಮ್ಮ ಹತ್ತಿರದ ಸಂಬಂಧಿಯೊಬ್ಬರಿಗೆ ಮಾನಸಿಕ ಸಮಸ್ಯೆ ಇದೆ. ಸಣ್ಣ ವಿಷಯಕ್ಕೂ ವಿಪರೀತ ಕೋಪ ಬರುತ್ತದೆ. ಹಿರಿಯರು ಮಕ್ಕಳೆನ್ನದೆ ಅವಚ್ಯ ಶಬ್ದಗಳನ್ನು ಬಳಸುವುದು. ತನ್ನ ಮಗುವಿಗೂ ಹಿಂಸೆ ನೀಡುವುದು ಮಾಡುತ್ತಾರೆ. ಎಲ್ಲೆಂದರಲ್ಲಿ ಏಕವಚನದಲ್ಲಿ ಮಾತನ್ನಾಡುವುದು.ಮನೆಗೆ ಬಂದು ನನ್ನದು ತಪ್ಪಾಯಿತೆನ್ನುವುದು. ಯಾವುದೇ ಶುಭ ಸಮಾರಂಭಗಳಿಗೆ ಹೋದರೆ ಹತ್ತಿರದ ಸಂಬಂಧಿಗಳನ್ನು ಮುಖ ಕೊಟ್ಟು ಮಾತನಾಡಿಸುವುದಿಲ್ಲ. ಮನೆಯಲ್ಲಿ ಯಾರೊಂದಿಗೂ ಆತ್ಮೀಯತೆ ಇರುವುದಿಲ್ಲ. ಸಿಗಲಾರದ ವಸ್ತುವಿಗೆ ಆಸೆ ಪಡುವುದು ಮಾಡುತ್ತಾರೆ. ಹಿರಿಯರು ಅವರಿಗೆ ನಯವಾಗಿ ಮತ್ತು ಅತ್ಮೀಯವಾಗಿಯೇ, ನಿನಗೆ ಮಾನಸಿಕ ಸಮಸ್ಯೆ ಇದೆ. ವೈದ್ಯರಲ್ಲಿ ತೋರಿಸೋಣವೆಂದರೆ, ನಾನು ಹುಚ್ಚಿ ಅಲ್ಲ. ನನಗೇನು ಆಗಿಲ್ಲ. ನಾನು ವೈದ್ಯರಿಗೆ ತೋರಿಸಿದ್ದೇನೆ. ನಿನಗೇನು ಕಾಯಿಲೆ ಇಲ್ಲ ಎಂದಿದ್ದಾರೆ. ಎನ್ನುತ್ತಾರೆ. ಇದು ಸುಳ್ಳು ಎಂಬುದು ಗೊತ್ತು. ಇವರನ್ನು ಚಿಕಿತ್ಸೆಗೆ ಒಪ್ಪಿಸುವುದಾದರೂ ಹೇಗೆ?
uttama aarambha. AVADHIYA uttama praytna. annapoorna avara prashnege DR .uttarisidare olitu. ABHINANDANE.
ನನಗೆ ಅತ್ಯಂತ ಆಸಕ್ತಿಉಳ್ಳ ವಿಷಯ ಮನೋವಿಜ್ನಾನ.ನಾವು ನಮ್ಮ ಹಲವಾರು ಮಾನಸಿಕ ನ್ಯೂನ್ಯತೆಗಳನ್ನು ಈ ಕಾಲಂ ಮೂಲಕ ತಿಳಿಯಬಹುದು. ಇಂತಹ ಅತ್ಯಂತ ಉಪಯುಕ್ತ ಕಾಲಂ ಪ್ರಾರಂಭಿಸಿದ ಅವಧಿಗೆ ನಮಸ್ಕಾರ ಮತ್ತು ಧನ್ಯವಾದಗಳು. ಡಾ ಪದ್ಮಾವತಿಯವರ ಶೈಲಿ ತುಂಬಾ ಆಕರ್ಷಕವಾಗಿದೆ. ಕುತೂಹಲದಿಂದ ಮುಂದಿನ ಸಂಚಿಕೆಗೆ ಕಾಯುವೆ.
Already I have taken appointment !!!!
VERY VERY NICE PLEASE WRITE SOME MORE DETAIL’S LIKE THIS