ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನನ್ನ ಸ್ನೇಹಿತನಂತಹ ಗಣೇಶ’ – ಶ್ರೀದೇವಿ ಕೆರೆಮನೆ

ಅವರವರ ಭಾವಕ್ಕೆ

-ಶ್ರೀದೇವಿ ಕೆರೆಮನೆ

ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಮುಗಿಸಿದ್ದೇವೆ. ನಾನು ಚತುರ್ಥಿಯಂದು ಕನಿಷ್ಟ ಐದು ಗಣಪತಿಯನ್ನಾದರೂ ನೋಡಿದ ಮೇಲೆಯೇ ಊಟ ಮಾಡುವುದು ಎನ್ನುವ ಆಸ್ತಿಕರಿಂದ ಹಿಡಿದು ಒಂದೂ ಗಣಪತಿಯನ್ನೇ ನೋಡದ ನಾಸ್ತಿಕ ಎನ್ನಲಾಗದಿದ್ದರೂ ಆಸಕ್ತಿ ತೋರದವರನ್ನೂ ನೋಡಿದ್ದೇನೆ. ಗಣಪತಿಯನ್ನು ನೋಡುವುದು ಚಿಕ್ಕವಳಿರುವಾಗ ನನ್ನ ಆಸಕ್ತಿಗಳಲ್ಲೊಂದು. ಯಾವ ಗಣಪತಿ ದೊಡ್ಡದಾಗಿದೆ, ಯಾವ ಗಣಪತಿ ಚಂದವಾಗಿದೆ, ಯಾವ ಗಣಪನಿಗೆ ಚಂದದ ಪೇಂಟ್ ಮಾಡಿದ್ದಾರೆ, ಮತ್ಯಾವ ಗಣಪನ ಇಲಿ ದೊಡ್ಡದಿದೆ ಎಂಬುದನ್ನೆಲ್ಲ ಲೆಕ್ಕ ಹಾಕುತ್ತ ನಾವು ನಾವೇ ಮಕ್ಕಳು ಸ್ಪರ್ಧಿಯೇನೋ ಎಂಬಂತೆ ಪ್ರತಿ ಮನೆಯ ಗಣಪನಿಗೂ ಒಂದೊಂದು ಅಂಕ ಕೊಟ್ಟು, ವಿಜೇತರನ್ನು ಘೋಷಿಸಿಕೊಳ್ಳುತ್ತಿದ್ದೆವು. ಅದ್ಯಾವುದೂ ಅರಿವಿರದ ಗಣಪತಿ ಕುಳ್ಳಿರಿಸಿದ್ದ ಮನೆಯವರು ನಾವು ಮಕ್ಕಳ ಸಾಮ್ರಾಜ್ಯ ಅಲ್ಲಿ ಹೊದಾಗ ಪ್ರೀತಿಯಿಂದ ಆದರಿಸಿ ಚಕ್ಕುಲಿ ಕಜ್ಜಾಯ ನೀಡುತ್ತಿದ್ದರು. (ತಮ್ಮ ಮನೆಯ ಗಣಪನಿಗೆ ಹೆಚ್ಚು ಅಂಕ ಕೊಡಲಿಲ್ಲ ಎಂದು ಕಜ್ಜಾಯ ಕೊಡದಿದ್ದರೆ ಎನ್ನುವ ಅಂಜಿಕೆಗೆ ನಮ್ಮ ರಿಸಲ್ಟಗಳನ್ನು ಅವರಿಗೆ ತಿಳಿಸುವ ಧೈರ್ಯ ಮಾಡುತ್ತಿರಲಿಲ್ಲ!!)
ಚಿಕ್ಕಂದಿನಿಂದಲೂ ತುಂಬಾ ಆಸಕ್ತಿ ಕೆರಳಿಸಿದಾತ ಗಣಪ. ಆತನ ಹುಟ್ಟಿನ ಕಥೆಯನ್ನಂತೂ ಅಪ್ಪ ಅಮ್ಮನಿಂದ ಪದೇ ಪದೇ ಕೇಳಿ ಕೇಳಿ ಪಾರ್ವತಿ ಎಲ್ಲೋ ನನ್ನ ಪಕ್ಕದ ಮನೆಯ ಭವಾನಿಯೋ, ಕಲ್ಪನಾಳೋ ಎನ್ನಿಸಿ ಬಿಟ್ಟಿತ್ತು. ಅದು ಹೇಗೆ ಬೆವರು ಮತ್ತು ಸುಗಂಧ ದೃವ್ಯದಿಂದ ಒಂದು ಗೊಂಬೆ ಮಾಡಬಹುದು ಎನ್ನುವುದು ನನ್ನ ಮೊದಲ ಪ್ರಶ್ನೆ. ಅಮ್ಮ ಅದಕ್ಕೊಂದು ಸಮಜಾಯಿಶಿ ನೀಡುತ್ತಿದ್ದರು. ಮೈಗೆ ಹಚ್ಚಿಕೊಂಡ ಅರಿಶಿಣ, ಶ್ರೀಗಂಧ, ಕಸ್ತೂರಿ ಮುಂತಾದವುಗಳಿಂದ ಚಿಕ್ಕ ಗೊಂಬೆಯ ಆಕಾರ ಮಾಡಿರಬಹುದು ಎನ್ನುತ್ತಿದ್ದರು. ದೇವರು ತಾನೆ? ಶಿವ ತನ್ನ ಕೋಪದಿಂದಲೇ ರುದ್ರನನ್ನು, ಭೈರವನನ್ನು ಸೃಷ್ಟಿಸಿರುವಾಗ, ತನ್ನ ತಪಸ್ಸಿನ ಪ್ರಸನ್ನತೆಯಿಂದಲೇ ನರ್ಮದಾಳನ್ನು ಹುಟ್ಟಿಸಿರುವಾಗ ಪಾರ್ವತಿ ಮನೋಬಲದಿಂದಲೇ ಒಂದು ಬಾಲಕನನ್ನು ಸೃಷ್ಟಿಸುವ ಬದಲು ಕೊಳೆಯಿಂದ ಗೊಂಬೆ ಮಾಡಿದ್ದಾದರೂ ಯಾಕೆ ಎನ್ನುವ ಸಂದೇಹ. ಎಲ್ಲವನ್ನೂ ಕ್ಷಣ ಮಾತ್ರದಲ್ಲೆ ಅರಿಯುವ ಸಾಮಥ್ರ್ಯವಿರುವ ಶಿವ ಬಾಗಿಲಲ್ಲಿ ನಿಂತಿರುವ ಪುಟ್ಟ ಬಾಲಕನನ್ನು ಪಾರ್ವತಿಯೇ ನಿಲ್ಲಿಸಿದ್ದು ಎಂದು ತಿಳಿಯದೇ ಹೋದದ್ದಾದರೂ ಹೇಗೆ? ತಿಳಿಯದಿದ್ದರೂ ಹೋಗಲಿ ಬಿಡಿ, ಕೊನೆಯ ಪಕ್ಷ ಯಾವುದೋ ಚಿಕ್ಕ ಬಾಲಕ ನಿಂತಿದ್ದಾನೆ, ಹುಡುಗಾಟಕ್ಕೆ ತನ್ನನ್ನು ತಡೆದಿರಬಹುದು ಎಂದಾದರು ಒಂದಿಷ್ಟು ಯೋಚಿಸಬಹುದಿತ್ತಲ್ಲ? ಒಬ್ಬ ಬಾಲಕ ಒಳ ಹೋಗಲು ತಡೆದನಂತೆ ಅದಕ್ಕೆ ಸರ್ವಶಕ್ತ ಶಿವ ಆತನ ತಲೆ ಕಡಿದನಂತೆ. ಯಾಕೋ ಬೇಸರವೆನ್ನಿಸುತ್ತಿತ್ತು. ಆದರೂ ಆನೆಯ ತಲೆಯ, ದೊಡ್ಡ ಹೊಟ್ಟೆಯ ಗಣಪ ಬಹುವಾಗಿ ಆಕರ್ಷಿಸುತ್ತಿದ್ದ. (ನನ್ನಂತೆ ತಿಂಡಿಪೊತ ಎನ್ನುವ ಕಾರಣಕ್ಕಾದರೂ ಇದ್ದೀತು!)
ಹೋಗಲಿ ಬಿಡಿ. ಹಳೆಯ ಕಥೆ ಎಲ್ಲರಿಗೂ ಗೊತ್ತಿದ್ದದ್ದೇ. ಆದರೂ ಇತ್ತೀಚೆಗೆ ನಮ್ಮ ಗಡಿಬಿಡಿಯ ಬದುಕಿನಲ್ಲಿ ಗಣಪನನ್ನು ನೋಡುವದಕ್ಕೂ ಪುರುಸೊತ್ತಿಲ್ಲದಂತಾಗಿದೆ. ಗಣಪತಿಯನ್ನು ನೋಡೋದೇನಿದೆ? ಅದೇ ಸೊಂಡಿಲು, ಅದೇ ದೊಡ್ಡ ಕಿವಿ ,ಅದೇ ಡೊಳ್ಳು ಹೊಟ್ಟೆಯನ್ನು ಎಷ್ಟು ಅಂತಾ ನೋಡೊದು? ಎಲ್ಲಿ ಹೋದರೂ ಅದೇ ತಾನೆ? ಹಾಗಂದುಕೊಂಡು ಸುಮ್ಮನಾದಿರೋ ಅಲ್ಲೇ ಇದೆ ಮಜ. ಯಾವ ಗಣೇಶನೂ ಈಗ ಗಣೇಶನ ರೂಪದಲ್ಲಿ ಇರೋದಿಲ್ಲ. ಶಿವರೂಪಿ ಗಣೇಶ, ಆಂಜನೇಯರೂಪಿ ಗಣೇಶ, ಲಿಂಗ ಸ್ವರೂಪಿ ಗಣೇಶ, ಕೃಷ್ಣರೂಪಿ ಗಣೇಶ, ವಿಷ್ಣು ರೂಪಿ ಗಣೇಶ ಹೀಗೆ ವಿವಿಧ ರೂಪದಲ್ಲಿ ಗಣೇಶನನ್ನು ಕಾಣಬಹುದು. ರಾಘವೇಂದ್ರ ಸ್ವಾಮಿ ರೂಪದಲ್ಲಿ, ಬಾಲಗಣೇಶನ ರೂಪದಲ್ಲಿ, ಸನ್ಯಾಸಿಯ ರೂಪದಲ್ಲಿ ಹೀಗೆ ವಿವಿಧ ರೂಪದಲ್ಲಿ ಗಣೇಶನನ್ನು ಕಾಣುವ ಯೋಗ ಸಿಗಬಹುದು. ಆದರೆ ಗಣೇಶನ ದೌಬರ್ಾಗ್ಯ ನೋಡಿ. ಆತ ತನ್ನ ಮೂಲ ರೂಪ ಕಳೆದು ಕೊಂಡು ಇನ್ಯಾರದ್ದೋ ರೂಪ ಕಟ್ಟಿಕೊಂಡು ಪೂಜಿಸಿಕೊಳ್ಳಬೇಕಾದ ಅನಿವಾರ್ಯತೆ. ಬೇರೆ ಬೇರೆ ದೇವರುಗಳ ರೂಪವನ್ನಾದರೂ ಆದರೆ ಸಹಿಸಿಕೊಳ್ಳುತ್ತಿದ್ದನೇನೋ, ಆದರೆ ಅಣ್ಣಾ ಹಜಾರೆಯಾಗಿ, ಪ್ರದಾನಿ ಮೋದಿಯಾಗಿ, ಬೇರೆ ಬೇರೆ ಸಿನೇಮಾ ನಟನಾಗಿ, ಕ್ರಿಕೆಟ್ ಆಟಗಾರನಾಗಿ ಪೂಜಿಸಿಕೊಳ್ಳುವುದು ಬಹುಶಃ ಗಣೇಶನಿಗೂ ಕಿರಿಕಿರಿ ಎನ್ನಿಸುತ್ತದೇನೋ…ದೇವರಾದ ತಾನು ಹುಲು ಮಾನವರ ವೇಷ ಹಾಕಿಕೊಳ್ಳಬೇಕಾಗಿದ್ದಕ್ಕೆ ಮುಂದಿನ ವರ್ಷ ತನ್ನ ವೇಷ ಬದಲಿಸಿದರೆ ತಾನು ಭೂಮಿಗೆ ಬರೋದೇ ಇಲ್ಲ ಎಂದು ಗಣೇಶ ಶಿವ -ಪಾರ್ವತಿಯರ ಬಳಿ ಕಂಪ್ಲೇಂಟ್ ಮಾಡಿದ್ದಾಗಿ ವರದಿ ಬಂದಿದೆ!!

ಹಾಗಾದರೆ ನಾವ್ಯಾಕೆ ಗಣಪನನ್ನು ಬೇರೆ ಬೇರೆ ರೂಪದಲ್ಲಿ ನೋಡಲು ಬಯಸುತ್ತೇವೆ? ಅದು ಮನುಷ್ಯನ ಸಹಜ ಗುಣ. ನಾವು ಯಾರನ್ನೂ ನೇರವಾಗಿ ನೋಡಲು ಇಷ್ಟಪಡುವುದಿಲ್ಲ. ಪ್ರತಿ ವ್ಯಕ್ತಿಯನ್ನು ನಾವು ನಮ್ಮದೇ ದೃಷ್ಟಿಕೋನದಲ್ಲಿ, ನಮ್ಮದೇ ಅಭಿಪ್ರಾಯದಲ್ಲಿ ಕಾಣುವುದೇ ಹೆಚ್ಚು. ಪ್ರತಿಯೊಂದು ವ್ಯಕ್ತಿಯನ್ನು ನಾವು ನೋಡುವ ರೀತಿಯೂ ಇದೇ. ಅವರ ವ್ಯಕ್ತಿತ್ವವನ್ನು ಗುರುತಿಸುವುದಕ್ಕಿಂತ ಅವರು ನಮಗೆ ಯಾವ ರೂಪದಲ್ಲಿ ಬೇಕು ಎಂದೇ ಮೊದಲು ತೀಮರ್ಾನ ಕೈಗೊಳ್ಳುತ್ತೇವೆ. ಆ ವ್ಯಕ್ತಿಯ ಇಷ್ಟಾನಿಷ್ಟಗಳನ್ನು ಗಮನಿಸದೇ ನಾವು ಹೇಗೆ ಬಯಸುತ್ತೇವೋ ಹಾಗೆಯೇ ಆ ವ್ಯಕ್ತಿ ಇರಲಿ ಎಂದು ಒತ್ತಡ ಹಾಕುತ್ತೇವೆ. ಗಣಪನನ್ನು ಬೇರೆ ಬೇರೆ ರೂಪದಲ್ಲಿ ರೂಪಿಸುವುದಕ್ಕೂ ಮನುಷ್ಯನ ಈ ಗುಣವೇ ಮುಖ್ಯ ಕಾರಣ. ಗಣೇಶ ಗಣೇಶನ ರೂಪದಲ್ಲಿರೋದಕ್ಕಿಂತ ಶಿವನಾಗಿ ಕಾಣುತ್ತಾನೆ, ಅಣ್ಣಾ ಹಜಾರೆಯಾಗಿ ಕಾಣುತ್ತಾನೆ, ನಮ್ಮಿಷ್ಟದ ಸಿನೇಮಾ ನಟನ, ಅಥವ ಕ್ರಿಕೆಟ್ ಆಟಗಾರನ ರೂಪದಲ್ಲಿ ಭ್ರಮಿಸುತ್ತೇವೆ. ನಮಗೆ ಇರುವ ವಾಸ್ತವಕ್ಕಿಂತ ನಮ್ಮಿಷ್ಟದ ಭ್ರಮೆಯೇ ಹೆಚ್ಚು ಅಪ್ಯಾಯಮಾನ ಎನ್ನಿಸಿಬಿಡುವುದರಿಂದಲೇ ಗಣೇಶ ಗಣೇಶನಾಗಿಯೇ ಇರದೇ ಹತ್ತಾರು ರೂಪಗಳನ್ನು ಹೊರಬೇಕಾಗುತ್ತದೆ. ಒಮ್ಮೆ ಯೊಚಿಸಿ, ನಾವು ಯಾವ ಮಗುವನ್ನು ಆ ಮಗುವಿನ ಮನಸ್ಸಿಗೆ ಅನುಗುಣವಾಗಿ ಇರಲು ಬಿಟ್ಟಿದ್ದೇವೆ? ನನಗಂತೂ ಸಾದಿಸಲು ಆಗಲಿಲ್ಲ, ನನ್ನ ಮಗ/ಮಗಳಾದರೂ ಆ ಕೆಲಸ ಮಾಡಲಿ ಎಂದು ನಮ್ಮ ಆಸೆ ಆಕಾಂಕ್ಷೆಗಳನ್ನು ಬಲವಂತಾಗಿ ಮಗುವಿನ ಮೇಲೆ ಹೇರುತ್ತೇವೆ, ಯಾವ ಮಗುವನ್ನು ಸಂತೋಷದಿಂದ ಹಾರಾಡಿಕೊಂಡು, ಓಡಾಡಿಕೊಂಡು ಸ್ವಚ್ಛಂದ ಬಾಲ್ಯವನ್ನು ಅನುಭವಿಸಲು ಅನುವು ಮಾಡಿಕೊಟ್ಟಿದ್ದೇವೆ? ಆಚೆ ಈಚೆ ಇರುವವರು, ನಮ್ಮದೇ ಅಂತಸ್ತಿನವರು ನಮ್ಮನ್ನು ಏನೆಂದುಕೊಂಡಾರು ಎಂದೇ ಯೋಚಿಸುತ್ತ ಮಗು ಮಣ್ಣಿನಲ್ಲಿ ಅಥವಾ ಅಂಗಳದಲ್ಲಿ ಕೇಕೇ ಹಾಕಿಕೊಂಡು ಆಡುವುದಕ್ಕೆ ತಡೆಯೊಡ್ಡುತ್ತೇವೆ. ನಮ್ಮ ಭಾವನೆಗೆ ಅನುಗುಣವಾಗಿಯೇ ನಮ್ಮದೇ ಚಿಕ್ಕ ಮಗು ವತರ್ಿಸಬೇಕು ಎಂದು ಬಯಸುವ ನಾವು ಆ ಮಣ್ಣಿನಲ್ಲಿ ಮಾಡಿದ ಗಣಪನನ್ನು ಸುಮ್ಮನೆ ಬಿಟ್ಟೇವೆಯೇ? ಹೀಗಾಗಿ ಗಣಪ ಕೂಡ ಗಣಪನಾಗಷ್ಟೇ ಇರದೇ ನಮಗೆ ಬೇಕಾದ ಆಕಾರ ತಳೆಯುತ್ತಾನೆ.
ಯಾವುದೇ ವ್ಯಕ್ತಿಯನ್ನು ಭೇಟಿಯಾಗಲಿ, ಭೇಟಿ ಆಗುವ ಮೊದಲೇ ಆ ವ್ಯಕಿಯ ಬಗ್ಗೆ ನಮ್ಮದೇ ಆದ ಒಂದು ಅಭಿಪ್ರಾಯವನ್ನು ರೂಪಿಸಿಕೊಂಡು ಬಿಟ್ಟಿರುತ್ತೇವೆ. ಅಥವಾ ನೊಡಿದ ತಕ್ಷಣ ಮುಖ ಚಹರೆಯನ್ನು ಆಧರಿಸಿ ಈತ ಇಂಥವನು ಎಂದು ಒಂದು ಛಾಪು ಮೂಡಿಸಿಕೊಳ್ಳುತ್ತೇವೆ. ಅದು ಮೊದಲ ಹಂತ. ನಂತರ ನಾವು ಆ ವ್ಯಕ್ತಿಯನ್ನು ತಿಳಿದುಕೊಂಡು ಮತ್ತೊಂದು ಅಭಿಪ್ರಾಯ ರೂಪಿಸಿಕೊಳ್ಳುವುದು ಎರಡನೆ ಹಂತ. ಆದರೆ ನಮ್ಮ ಮೊದಲ ಅಭಿಪ್ರಾಯ ಮನದಾಳದಲ್ಲಿ ಹಾಗೆಯೇ ಉಳಿದಿರುತ್ತದೆ. ನಾವು ಆ ವ್ಯಕ್ತಿಯನ್ನು ನೆನಪಿಸಿಕೊಂಡಾಗಲೆಲ್ಲ ನಮ್ಮ ಮನದಲ್ಲಿ ಮೂಡುವುದು ನಮ್ಮ ಮೊದಲ ಹಂತದ ಅಭಿಪ್ರಾಯವೇ. ಒಬ್ಬ ವ್ಯಕ್ತಿಯನ್ನು ನಾವು ನೋಡಿದ ಕೂಡಲೇ ‘ಅರೋಗಂಟ್’ ಎಂದು ಅಂದುಕೊಂಡು ಬಿಟ್ಟರೆ ಆತ ಮಾಡುವ ಎಲ್ಲಾ ಕೆಲಸಗಳೂ ಸೊಕ್ಕಿನಿಂದ ಕೂಡಿರುವಂತೆಯೇ ಕಾಣುತ್ತದೆ. ನಂತರದ ದಿನಗಳಲ್ಲಿ ಆತ ಎಷ್ಟೇ ಸ್ನೇಹಮಯಿಯಾಗಿರಬಹುದು ಅಥವಾ ಪ್ರೀತಿ ತೋರಿಸಿರಬಹುದು. ಆದರೆ ಆತನ ಒಂದೇ ಒಂದು ತಪ್ಪು ಹೆಜ್ಜೆಯನ್ನೂ ನಾವು ‘ನಾನು ಮೊದಲು ಅಂದುಕೊಂಡಿದ್ದೇ ನಿಜ.’ ಎಂದು ಸಾರಾಸಗಟಾಗಿ ತೀರ್ಮಾನಿಸಿ ಬಿಡುತ್ತೇವೆ.
ಮತ್ತು ಪ್ರತಿ ವ್ಯಕ್ತಿಯೂ ನಮಗೆ ಗೋಚರವಾಗುವುದು ನಮ್ಮ ಮಿತಿಯಲ್ಲಿಯೇ ಎಂಬುದನ್ನು ಮೊದಲು ನಾವು ಗಮನಿಸ ಬೇಕು. ಯಾವ ವ್ಯಕ್ತಿಯನ್ನೂ ನಾವು ನಮ್ಮ ಮಿತಿಗಿಂತ ಹೆಚ್ಚಾಗಿ ಕಾಣಲು ಸಾಧ್ಯವಿಲ್ಲ ಎನ್ನುವುದು ಒಂದು ವೈಜ್ಞಾನಿಕ ಸತ್ಯ. ಹೀಗೆಂದೇ ದೇವರೂ ಕೂಡ ನಮ್ಮದೇ ಮಿತಿಗೆ ಒಳಪಟ್ಟು ಮನುಷ್ಯನ ಆಕಾರ ಪಡೆದಿದ್ದಾನೆ. ನಮ್ಮ ಮಿತಿಯನ್ನು ಒಂದಿಷ್ಟು ಹೆಚ್ಚಿಸಿ ಆತನಿಗೆ ನಾಲ್ಕು ಕೈ ಕೊಟ್ಟಿದ್ದೇವೆ, ಬ್ರಹ್ಮನಿಗೆ ದೇವತೆಗಳ ಹಿರಿಯ ಎಂಬ ಕಾರಣಕ್ಕಾಗಿ ಮಾತ್ರ ಆತನಿಗೆ ಮೂರು ಮುಖ ನೀಡಿದ್ದೇವೆ. ಅದಕ್ಕಿಂತ ಹೆಚ್ಚಿನ ಕಲ್ಪನೆ ನಮ್ಮಿಂದ ಸಾಧ್ಯವಿಲ್ಲ ಎನ್ನುವುದು ನಮ್ಮ ಮಿತಿ. ಅದಕ್ಕೆಂದೇ ನಾವು ಯಾವುದೇ ವ್ಯಕ್ತಿಯನ್ನೂ ಕೂಡ ನಮ್ಮದೇ ಮಿತಿಯೊಳಗೆ ತೀಮರ್ಾನಿಸಿ ‘ಇದಂ ಮಿತ್ತಂ’ ಎಂದು ಫಾರ್ಮಾನು ಹೊರಡಿಸಿ ಬಿಡುತ್ತೇವೆ. ಹಾಗಾಗಿಯೇ ನಮ್ಮ ಮಿತಿಗೆ ಹೊರತಾದ, ನಮ್ಮ ಜ್ಞಾನಕ್ಕಿಂತಲೂ ಮಿಗಿಲಾದ, ನಮ್ಮ ಸೀಮಿತತೆಯನ್ನು ಮೀರಿದ ಯಾವುದನ್ನೇ ಆದರೂ ನಾವು ಒಪ್ಪಿಕೊಳ್ಳದೇ ಅದನ್ನು ಕೆಟ್ಟದ್ದು ಎಂದು ತೀರ್ಮಾನಿಸಿ ಬಹಿಷ್ಕರಿಸಿ ಬಿಡುತ್ತೇವೆ. ಆನೆಯ ಮುಖ, ಉದ್ದದ ಸೊಂಡಿಲು, ಮೊರದಗಲ ಕಿವಿ, ಡೊಳ್ಳು ಹೊಟ್ಟೆ, ಅದಕ್ಕೆ ಸುತ್ತಿದ ಹಾವು ಎಲ್ಲವನ್ನೂ ಗಣಪನಿಗೆ ನೀಡಿದ ನಾವೀಗ ಆತನಿಗೆ ಮತ್ತೆ ಮತ್ತೆ ಬೇರೆ ಬೇರೆಯವರ ರೂಪವನ್ನು ನಮ್ಮ ಮಿತಿಗೆ ತಕ್ಕಂತೆ ಹೇರಿ ಸಂತಸ ಪಡುತ್ತಿದ್ದೇವೆ. ಏನೇ ಆಗಲಿ, ಇದಕ್ಕೆಲ್ಲ ಹೆದರಿ ಆ ಗಣಪ ಮುಂದಿನ ವರ್ಷ ಬರಲಾರೆ ಎಂದು ಸ್ಟ್ರೈಕ್ ಮಾಡದಿರಲಿ. ನಮ್ಮ ತಿಂಡಿ-ಕಜ್ಜಾಯಕ್ಕೆ ಯಾವುದೇ ಧಕ್ಕೆ ಬರದಿರಲಿ ಎನ್ನುವುದಷ್ಟೇ ನನ್ನ ಮಿತಿ.
 

‍ಲೇಖಕರು G

11 September, 2014

2 Comments

  1. Bharavi

    ಲೇಖನ ತುಂಬಾ ಇಷ್ಟವಾಯಿತು. ನಮ್ಮ ಮಕ್ಕಳನ್ನೇ ನಮ್ಮ ಬಲವಂತದ ಹೇರಿಕೆಗೊಳಪಡಿಸುವಾಗ ಇನ್ನು ಗಣಪನದ್ಯಾವ ಲೆಕ್ಕ..!? ಆದರೆ ಗಣಪನ ಹುಟ್ಟಿನ ಬಗ್ಗೆ ಏನೇ ಜಿಜ್ಞಾಸೆಯಿದ್ದರೂ ಗಣಪ ತುಂಬಾ ಆಪ್ತನಾಗುತ್ತಾನೆ. I LOVE U GANAPA….

  2. SHIVARAJU NK

    Akka ಅದ್ಬುತ …..ಗಣಪನನ್ನು……. ವಿವಿದ ರೀತಿಯಲ್ಲಿ ಕಳುಹಿಸಿದ್ದಾರೆ ಅವನ ಹಾಗೂ ನಿಮ್ಮ ಇಷ್ಟಾರ್ಥಗಳನ್ನು ಈಡೆೇರಿಸಲಿ……….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading