
ಶಾಂತಾ ನಾಗರಾಜ್
ಬಹಳ ದಿನಗಳಿಂದ ಹೀಗೊಂದು ಬರಹವನ್ನು ಬರೆಯಬೇಕೆಂದು ಅಂದುಕೊಳ್ಳುತ್ತಿದ್ದರೂ ದ್ವಂದ್ವ ಉಂಟಾಗಿ ಕಾಲತಳ್ಳಿದೆ. ಮೊನ್ನೆ ವಿಜಯವಾಣಿ ಪತ್ರಿಕೆಯ ಪ್ರೊ. ಕೃಷ್ಣೇಗೌಡರ ಲೇಖನವನ್ನು ಓದಿದಮೇಲೆ ಬರೆಯಲೇ ಬೇಕೆಂದು ಈಗ ಕುಳಿತಿದ್ದೇನೆ.
ಮೈಸೂರಿಗೆ ಭಾರತದ ಅತ್ಯಂತ ಸ್ವಚ್ಛನಗರ ಎನ್ನುವ ಅಭಿದಾನ ಬಂದಿರುವುದನ್ನು ಪ್ರಸ್ಥಾಪಿಸುತ್ತಾ ಗೌಡರು ’ ಬೆಂಗಳೂರಿಗೆ ಬರುವವರು ಹಣ ಮಾಡಲು ಬರುತ್ತಾರೆ’ ಎನ್ನುವ ಅಭಿಪ್ರಾಯ ಪಡುತ್ತಾರೆ. ಉದ್ಯೋಗದ ಅನಂತ ಅವಕಾಶಗಳಿರುವ ಊರಿನಲ್ಲಿ ಇದು ಸಾಧ್ಯವೂ ಹೌದು. ಅವರ ಅಭಿಪ್ರಾಯವನ್ನು ತಪ್ಪೆಂದು ಹೇಳುವುದಿಲ್ಲ. ಆದರೆ ನನ್ನ ಕಣ್ಣಲ್ಲಿ ಬೆಂಗಳೂರು ಬೇರೆಯೇ ಆಗಿದೆ.
೧೯೫೬ರಲ್ಲಿ ೧೨ವರ್ಷದ ನಾನು, ಅಪ್ಪ ಅಮ್ಮನ ಕೈಹಿಡಿದು ಬೆಂಗಳೂರಿಗೆ ಪುಟ್ಟ ತಮ್ಮನೊಡನೆ ಕಾಲಿಟ್ಟವಳು . ಆಗಿನ ಬೆಂಗಳೂರನ್ನು ಈಗಿನ ಸ್ಥಿತಿಯೊಡನೆ ಹೋಲಿಸುವ ಮೂರ್ಖ ಕೆಲಸ ನನ್ನದಲ್ಲ. ವೇಗವಾಗಿ ಬೆಳೆಯುವ ಯಾವುದೇ ಊರಾದರೂ ಇದೇ ಸ್ಥಿತಿಯನ್ನೇ ತಲುಪುತ್ತದೆ. ಬೆಂಗಳೂರು ನನಗೆ ಏನೆಲ್ಲಾ ಕೊಟ್ಟಿತು ಮತ್ತು ನಾನು ಅದನ್ನು ಬಿಟ್ಟು ಬರುವಾಗ ಎಂಥಾ ಹೃದಯಂಗಮ ಬೀಳ್ಕೊಡುಗೆಯನ್ನು ನೀಡಿತು ಎಂದು ಹೇಳುವುದಷ್ಟೇ ಈ ಬರಹದ ಉದ್ದೇಶ.
ವಿದ್ಯೆ ಮುಗಿಸಿ ನರ್ಸರಿ ಶಾಲೆಯಲ್ಲಿ ಉಪಾಧ್ಯಾಯಳಾಗಿ ಸಾಮಾಜಿಕ ಜೀವನಕ್ಕೆ ಕಾಲಿಟ್ಟೆ ೧೯೬೦ರಲ್ಲಿ. ಅಂದು ನನ್ನೊಡನೆ ಸಹೋದ್ಯೋಗಿಗಳಾಗಿದ್ದ ಗೆಳತಿಯರು ಇಂದಿಗೂ ಒಡನಾಟದಲ್ಲಿದ್ದಾರೆಂದರೆ ಅಚ್ಚರಿ ತಾನೆ? ನಂತರ ಎಂ.ಎ ಮುಗಿಸಿ ಕಾಲೇಜಿನಲ್ಲಿ ಉಪನ್ಯಾಸಕಳಾದೆ. ಅಲ್ಲಿಯ ಸಹೋದ್ಯೋಗಿಗಳು ಇಂದಿಗೂ ಜೀವದ ಗೆಳತಿಯರಾಗಿದ್ದಾರೆ! ಅದು ನನ್ನ ಸೌಭಾಗ್ಯ.
ನನ್ನದೊಂದು ವಿಚಿತ್ರ ಜೀವ, ನೇರ ನಡಿಗೆ ಗೊತ್ತೇ ಇಲ್ಲ. ಸುತ್ತ ಮುತ್ತ ತಿರುಗುವುದೇ ಬಯಕೆ. ಹೀಗೆ ತಿರುಗುತ್ತಿದ್ದಾಗಲೇ ನಾಟಕರಂಗದ ಪರಿಚಯವಾಯಿತು. ನಟನೆಯಲ್ಲಿ ತೊಡಗಿಕೊಂಡೆ. ಅಲ್ಲಿಯೂ ಗೆಳೆಯ ಗೆಳತಿಯರು ಸಿಕ್ಕವರು ಇಂದಿಗೂ ಸನಿಹದಲ್ಲೇ ಇದ್ದಾರೆ! ಅದ್ಯಾವ ಭಾಗ್ಯವೋ ಪತ್ರಿಕಾರಂಗಕ್ಕೆ ಬಂದೆ. ಅಲ್ಲಂತೂ ಹಿರಿಯ ಕಿರಿಯ ಗೆಳತಿಯರು ಆತ್ಮೀಯರಾಗಿ ಇಂದಿಗೂ ನನ್ನಿಂದ ಬರೆಸುತ್ತಿದ್ದಾರೆ. ಅಷ್ಟಕ್ಕೇ ನಿಂತೆನೇ? ಇಲ್ಲವಲ್ಲ? ಕೌನ್ಸಿಲಿಂಗ್ ಕ್ಷೇತ್ರಕ್ಕೆ ಬಂದೆ. ಈ ಕ್ಷೇತ್ರವಂತೂ ಆರ್ದ್ರಹೃದಯಿಗಳ ಸಮಾಗಮವನ್ನೇ ಮಾಡಿಸಿಬಿಟ್ಟಿತು!! ಇದಕ್ಕೂ ಮೊದಲೇ ಲೇಖಕಿಯರ ಸಂಘಕ್ಕೆ ಕೈ ಜೋಡಿಸಿದೆ. ನನ್ನ ಸ್ನೇಹವಲಯ ’ಡೆಲ್ಲಿಹಪ್ಪಳ’ದಂತೆ ಕರ್ನಾಟಕದಾದ್ಯಂತ ವಿಸ್ತಾರವಾಯಿತು. ಬೆಂಗಳೂರಿನ ಅನೇಕ ಹಿರಿಯ ಕಿರಿಯ ಲೇಖಕಿಯರು ಲೇಖಕರೂ ಇಂದಿಗೂ ನನ್ನ ವಿಶ್ವಾಸಿಗಳೇ!

ಇಷ್ಟೆಲ್ಲಾ ಕೊಟ್ಟ ಬೆಂಗಳೂರು ಈಗ್ಗೆ ೨೫ವರ್ಷಗಳಿಂದ ’ಆಸ್ತಮಾ’ಎನ್ನುವ ಖಾಯಿಲೆಯನ್ನೂ ಕೊಟ್ಟುಬಿಟ್ಟಿತು! ಅದಕ್ಕೆಈ ಊರನ್ನು ಯಾಕೆ ಹೆಸರಿಸಬೇಕು? ಇಂಥಾ ಖಾಯಿಲೆ ಎಲ್ಲಿದ್ದರೂ ಬರುತ್ತದೆ. ಆದರೆ ಬೆಂಗಳೂರಿಗೆ ಈ ಖಾಯಿಲೆಯನ್ನು ಜಾಸ್ತಿ ಮಾಡುವ ತಾಕತ್ತು ಇತ್ತೀಚೆಗೆ ಬಲವಾಗುತ್ತಿದೆ. ರಾಜಾಜಿನಗರದ ನಮ್ಮ ಪುಟ್ಟ ಮನೆ, ಸುಮಾರು ನಲವತ್ತು ವರ್ಷಗಳ ಕೆಳಗೆ ಕಟ್ಟಿದ್ದು, ಇಂದು ಪಲ್ಯೂಷನ್‍ನಲ್ಲಿ ಮುಳುಗೇಳುತ್ತಿದೆ. ಮನೆಯ ಮುಂದೆ ದಿನಕ್ಕೆ ಸುಮಾರು ಏಳೆಂಟು ಸಾವಿರ ವಾಹನಗಳು ಹರಿದು ಹೋಗುತ್ತವೆ. ವಾಯು ಮಾಲಿನ್ಯವೇ ಅಲ್ಲದೇ ನಮ್ಮಂಥಾ ವಯಸ್ಸಾದವರಿಗೆ ಸಹಿಸಲಸಾಧ್ಯವಾದ ಶಬ್ದಮಾಲಿನ್ಯವೂ ಸೇರಿ ಕಿರಿಕಿರಿಯನ್ನುಂಟು ಮಾಡುತ್ತದೆ. ಹೀಗಾಗಿಯೇ ನಾನೀಗ ಮೈಸೂರಿಗೆ ಓಡಿ ಬಂದಿದ್ದೇನೆ!!!
ಬೆಂಗಳೂರು ಬಿಟ್ಟಾಗ ಮಾತ್ರ ನನ್ನ ಅಷ್ಟೂ ಸ್ನೇಹಬಂಧುಗಳು ತೋರಿಸಿದ ಆದರ, ಸುರಿಸಿದ ಅಶ್ರುಧಾರೆ ಮತ್ತು ಬಂಗಾರದಿಂದ ಹಿಡಿದು ಸೀರೆ, ವಿವಿಧವಸ್ತುಗಳ ಧಾರೆ ನನ್ನನ್ನು ಮೂಕವಿಸ್ಮಿತಳನಾಗಿಸಿದೆ!! ” ಮೇಡಂ ದಿ ಹೋಲ್ ಬ್ಯಾಂಗಲೋರ್ ವಿಲ್ ಮಿಸ್ ಯು” ಎಂದ ಕಾಲೇಜಿನ ಪ್ರಾಂಶುಪಾಲೆ ಗೆಳತಿ, ” ಪುರದ ಪುಣ್ಯಂ ಸ್ತ್ರೀ ರೂಪಿಂದೆ ಪೋಗುತಿದೆ” ಎಂದು ರಾಘವಾಂಕನ ಮಾತುಗಳನ್ನು ತಿರುಚಿ ಹೇಳಿದ ಲೇಖಕಿ ಗೆಳತಿ, ” ಇಡೀ ಬೆಂಗಳೂರು ಭಣಭಣ ಶಾಂತ” ಎಂದ ಕೌನ್ಸಿಲೆಂಗ್ ಗೆಳತಿಯರು!! ನೀವಿಲ್ಲದ ರಸ್ತೆಯಲ್ಲಿ ಇನ್ನು ಹೇಗಿರುವುದು? ಎಂದ ನೆರೆಹೊರೆ!! ಇವೆಲ್ಲವೂ ಅವರ ಒಳ್ಳೆತನವೇ ನುಡಿಯುತ್ತಿರುವುದು, ಇದರಲ್ಲಿ ನನ್ನ
ಯೋಗ್ಯತೆಯೇನಿಲ್ಲವೆಂದು ಗೊತ್ತಿದ್ದರೂ ಆ ಕ್ಷಣಕ್ಕೆ ಹನಿಗಣ್ಣಾಗಿದ್ದು ಸುಳ್ಳಲ್ಲ.
ಈಗ ಹೇಳಿ ಬೆಂಗಳೂರು ಬರೀ ಹಣ ಮಾಡುವವರ ಊರೇ? ಇಲ್ಲಿ ಸಾಮಾಜಿಕ ಮತ್ತು ಸಂಸ್ಕೃತಿಯ ಕಳಕಳಿ ಇಲ್ಲವೇ ಇಲ್ಲವೇ?
ನನಗಂತೂ ಹಾಗೆನಿಸುವುದಿಲ್ಲ.





0 Comments