ಶಿವಯೋಗಿ ಕಳ್ಳಿಮಠ
ಕುದುರೆ ಏರಿ ಬರುವ
ರಾಜಕುಮಾರನೇಕೆ
ಬರಲಿಲ್ಲ….
ಬಂದಿದ್ದ ಕಣೇ.. ಅಕ್ಕ
ಬರುವಾಗ
ಕುದುರೆಯನ್ನ ಮನೆ ಹಿಂದಿನ
ಕೊಟ್ಟಿಗೆಯಲ್ಲಿ ಕಟ್ಟಿದ್ದ..
ನಗಾಡುತ್ತಾಳೆ ತಂಗಿ.
ಒಡವೆಯಲ್ಲೇ ಎದೆ
ಮುಚ್ಚಿಕೊಂಡೊನಿಗೇನು
ಕಾಲು ಉಳುಕಿತೇ?
ಬಂದು ನಿಂತನಲ್ಲ
ತೂತಾದ
ಬನಿಯನ್ ನಲ್ಲಿ
ಬೊಜ್ಜು ಹೊತ್ತ
ಸರದಾರ.
ಚುಕ್ಕಿ ಚಂದ್ರಮರ
ಲೋಕದಿಂದ ದೂಡಲ್ಪಟ್ಟು,
ಮಕ್ಕಳ ಕುಂಡೆ ತೊಳೆಯುತ್ತಾ,
ದೋಸೆಗೆ ಅಕ್ಕಿ ನೆನೆಸುತ್ತಾ,
ದುಬಾರಿ ಸೀರೆಗೆ ಚೌಕಾಸಿ ಮಾಡುತ್ತಾ,
ಅತ್ತೆಯೊಂದಿಗೆ ಮುನಿಸಿಕೊಳ್ಳುತ್ತಾ,
ಹೈರ್ ಡೈ ಮಾಡಿಕೊಳ್ಳದ
ಗಂಡನ ಬೈಯುತ್ತಾ,
ನಾಚಿಕೊಳ್ಳುವುದನ್ನೇ
ಮರೆತ್ತಿದ್ದೇನೆ.
ಅವ್ವ ನೆನಪಿಸಿದಳು
ಕತೆ ಹೇಳಿದ ಅಜ್ಜಿಗೆ
ಕೂಡ
ರಾಜಕುಮಾರ
ಎಂಟು ಮೈಲಿ ಕೊಡೆ ಇಲ್ಲದ
ನೆಡದು ಬಂದವನು
ಮಳೆಯಲ್ಲಿ ಅಂತ…
ಹೆಂಗಸರ ದುಃಖ
ಮತ್ತು
ಗಂಡಸರ ಚಟಗಳಿಗೆ
ಕಾರಣಗಳು ಇರಬೇಕಂತಿಲ್ಲ.
ಅದಕೆ ಹೆಂಗಸಿರಿಗೆ
ಮುಂದಿನ ಜನ್ಮ
ತೆಳ್ಳಗಾದಾಗ ಹಾಕಿಕೊಳ್ಳೊಣವೆಂದು
ಎತ್ತಿಟ್ಟ
ಇಷ್ಟದ ಉಡುಪು..
0 ಪ್ರತಿಕ್ರಿಯೆಗಳು